ಅ.೨೦ರ ಸಂಜೆ ೬ ಗಂಟೆಗೆ ವಿಶೇಷ ಪೂಜೆಯೊಂದಿಗೆ ಪ್ರದರ್ಶನ ಉದ್ಘಾಟನೆ
ಎಂ.ಆರ್ ರೇವಣಪ್ಪ
ಭದ್ರಾವತಿ: ಕರ್ನಾಟಕ ಜಾನಪದ ಪರಿಷತ್ತು ಹಾಗು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕದಿಂದ ಮಲೆನಾಡಿನ ವಿಶಿಷ್ಟ ಜಾನಪದ ಕಲೆಯಾದ ಅಂಟಿಗೆ ಪಂಟಿಗೆ ಕಲಾ ತಂಡಗಳನ್ನು ಆಹ್ವಾನಿಸಲಾಗಿದೆ. ದೀಪಾವಳಿ ಸಂಭ್ರಮಕ್ಕೆ ಸಡಗರ ತರುವ ಈ ವಿಶೇಷ ಜಾನಪದ ಕಲೆಯ ಕಲಾ ಪ್ರದರ್ಶನ ಇಡೀ ರಾತ್ರಿ ನಡೆಯಲಿದೆ. ಅ.೨೦ರ ಸೋಮವಾರ ಸಂಜೆ ೬ ರಿಂದ ಬೆಳಿಗ್ಗೆವರೆಗೆ ಅಪೇಕ್ಷಿತರ ಮನೆಗಳಿಗೆ ಜ್ಯೋತಿಯೊಂದಿಗೆ ಆಗಮಿಸಲಿದೆ ಎಂದು ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ, ಜಾನಪದ ಕಲಾವಿದ ಎಂ.ಆರ್ ರೇವಣಪ್ಪ ತಿಳಿಸಿದ್ದಾರೆ.
ಅಂಟಿಗೆ ಪಂಟಿಗೆ ಈ ವಿಶಿಷ್ಟ ಜಾನಪದ ಕಲೆ ಪ್ರಸ್ತುತ ನಶಿಸಿ ಹೋಗುವ ಹಂತದಲ್ಲಿದ್ದು, ಇದನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಉದ್ದೇಶದೊಂದಿಗೆ ಈ ಕಲಾ ತಂಡಗಳನ್ನು ಆಹ್ವಾನಿಸಲಾಗುತ್ತಿದೆ. ಅಲ್ಲದೆ ಕರ್ನಾಟಕ ಜಾನಪದ ಪರಿಷತ್ತು ಅಂಟಿಗೆ ಪಂಟಿಗೆ ಕಲಾವಿದರಿಗೂ ರಾಜ್ಯಮಟ್ಟದ ಪುರಸ್ಕಾರ ಲಭಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಈಗಾಗಲೇ ರಾಮನಗರದ ಜಾನಪದ ಲೋಕದಲ್ಲಿ ಅಂಟಿಗೆ ಪಂಟಿಗೆ ತಂಡವನ್ನು ಕಳುಹಿಸಿ ಕಲಾ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಿಕೊಡುವ ಮೂಲಕ ಆಕಾಡೆಮಿ ಪ್ರಶಸ್ತಿ ಈ ಕಲಾವಿದರಿಗೆ ದೊರಕಿಸುವ ಪ್ರಯತ್ನ ಮಾಡಲಾಗಿದೆ ಎಂದರು.
ಈ ಬಾರಿ ಸಹ ಅಂಟಿಗೆ ಪಂಟಿಗೆ ಕಲಾ ತಂಡಗಳು ತಾಲೂಕಿನಾದ್ಯಂತ ಪ್ರದರ್ಶನ ನೀಡಲು ಎಲ್ಲಾ ರೀತಿಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಅ.೨೦ರ ಸೋಮವಾರ ಸಂಜೆ ೬ ಗಂಟೆಗೆ ನಗರದ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ (ಎಸ್‌ಎವಿ) ಕನ್ನಡ ಶಾಲೆ ಸಮೀಪದಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರದರ್ಶನ ಉದ್ಘಾಟನೆಗೊಳ್ಳಲಿದೆ ಎಂದರು.
ಈ ಬಾರಿ ವಿಶೇಷತೆ ಎಂದರೆ .ತೀರ್ಥಹಳ್ಳಿ ತಾಲೂಕಿನ ಶಕುಂತಲಮ್ಮ ಮತ್ತು ಸಂಗಡಿಗರ ಅಂಟಿಗೆ ಪಂಟಿಗೆ ಮಹಿಳಾ ತಂಡ ಆಹ್ವಾನಿಸಲಾಗಿದೆ. ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಶಾಖೆ ಉಪಾಧ್ಯಕ್ಷೆ ಹೇಮಾವತಿ ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಬಿ.ಎಲ್ ಮೋಹನ್ ಕುಮಾರ್, ಸಂಘಟನಾ ಕಾರ್ಯದರ್ಶಿ ದಿವಾಕರ್, ಅನ್ನಪೂರ್ಣ ಸತೀಶ್ ಸೇರಿದಂತೆ ಇನ್ನಿತರರು ಮಹಿಳಾ ತಂಡವನ್ನು ಸ್ವಾಗತಿಸಲಿದ್ದಾರೆ. ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಶಾಖೆ ಮಾಜಿ ಅಧ್ಯಕ್ಷ ಕೋಡ್ಲುಯಜ್ಞಯ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ತಮ್ಮ ಮನೆಗೆ ಅಂಟಿಗೆ ಪಂಟಿಗೆ ಮಹಿಳಾ ತಂಡ ಆಗಮಿಸಲಿ ಎಂದು ಅಪೇಕ್ಷೆ ಪಡುವವರು ಮೊ: ೯೪೪೮೯೪೩೭೮೩, ೯೦೩೬೬೮೧೦೯೨, ೯೯೪೫೯೧೮೦೧೪, ೯೪೪೯೭೭೮೧೬೬ ಮತ್ತು ೯೯೮೬೨೪೧೨೩೨ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಎಂ.ಆರ್ ರೇವಣಪ್ಪ ತಿಳಿಸಿದ್ದಾರೆ.