Monday, September 7, 2020

ಬಯಲು ಸೀಮೆಗೆ ನೀರು ಹರಿಸುವ ಯೋಜನೆಗೆ ರೈತ ಸಂಘದ ವಿರೋಧವಿಲ್ಲ : ಎಚ್. ಆರ್ ಬಸವರಾಜಪ್ಪ

ಈ ಬಾರಿ ಸಹ ಭದ್ರಾ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದ ಹಿನ್ನಲೆಯಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ಜಲಾಶಯಕ್ಕೆ ಬಾಗಿನ ಸಮರ್ಪಿಸಲಾಯಿತು.
ಭದ್ರಾವತಿ, ಸೆ. ೭: ಭದ್ರಾ ಜಲಾಶಯದಿಂದ  ಬಯಲು ಸೀಮೆಗೆ ನೀರು ಹರಿಸಲು ರೈತ ಸಂಘ ಸಹ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದು, ಈ ಯೋಜನೆಗೆ ರೈತ ಸಂಘದ ವಿರೋಧವಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್ ಬಸವರಾಜಪ್ಪ ಸ್ಪಷ್ಟಪಡಿಸಿದರು.
      ಈ ಬಾರಿ ಸಹ ಭದ್ರಾ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದ ಹಿನ್ನಲೆಯಲ್ಲಿ ಅವರು ಸೋಮವಾರ ರೈತ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಲಾಶಯಕ್ಕೆ ಬಾಗಿನ ಸಮರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
     ಭದ್ರಾ ಮೇಲ್ದಂಡೆ ಯೋಜನೆ ಇದೀಗ ಬಹುತೇಕ ಪೂರ್ಣಗೊಂಡಿದ್ದು, ಸೆ.೫ರಿಂದ ಮೇಲ್ದಂಡೆ ಕಾಲುವೆಗಳಿಗೆ ಜಲಾಶಯದಿಂದ ನೀರು ಹರಿಸಲಾಗುತ್ತಿದೆ.  ಒಟ್ಟು ೪ ಪಂಪ್  ಹಾಗು ೧ ಹೆಚ್ಚುವರಿ ಪಂಪ್ ಬಳಸಲಾಗುತ್ತಿದ್ದು, ೪ ಪಂಪ್‌ಗಳಿಂದ ದಿನಕ್ಕೆ ೨೮೦೦ ಕ್ಯೂಸೆಕ್ಸ್ ನೀರು ಹರಿಸಬಹುದಾಗಿದೆ. ಪ್ರಸ್ತುತ ೭೦೦ ಕ್ಯೂಸೆಕ್ಸ್ ನೀರು ಮಾತ್ರ ಹರಿಸಲಾಗುತ್ತಿದೆ. ತುಂಗಾ ಜಲಾಶಯದಿಂದಲೂ ಭದ್ರಾ ಮೇಲ್ದಂಡೆ ಕಾಲುವೆಗಳಿಗೆ ನೀರು ಹರಿಸುವ ಕಾಮಗಾರಿ ಶೀಘ್ರವಾಗಿ ಮುಕ್ತಾಯಗೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕೆಂದರು.
    ಕಳೆದ ಕೆಲವು ವರ್ಷಗಳಿಂದ ಈ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಜಲಾಶಯ ಪೂರ್ಣಪ್ರಮಾಣದಲ್ಲಿ ಭರ್ತಿಯಾಗುತ್ತಿರುವ ಹಿನ್ನಲೆಯಲ್ಲಿ ನೀರಿನ ಅಭಾವ ಕಂಡು ಬರುತ್ತಿಲ್ಲ. ರೈತರು ನೀರನ್ನು ಸದ್ಬಳಕೆ ಮಾಡಿಕೊಂಡು ಬೆಳೆ ಬೆಳೆಯ ಬೇಕು. ವಿನಾಕಾರಣ ನೀರು ಪೋಲಾಗುವುದನ್ನು ತಡೆಬೇಕೆಂದು ಮನವಿ ಮಾಡಿದರು.
     ಸಂಘದ ಜಿಲ್ಲಾಧ್ಯಕ್ಷ ಎಸ್. ಶಿವಮೂರ್ತಿ, ರೈತ ಮುಖಂಡರಾದ ಹಿಟ್ಟೂರು ರಾಜು, ಟಿ.ಎಂ ಚಂದ್ರಪ್ಪ, ಈಶಣ್ಣ ಅರಬಿಳಚಿ, ಡಿ.ಎಚ್ ರಾಮಚಂದ್ರಪ್ಪ, ಜಿ.ಎನ್ ಪಂಚಾಕ್ಷರಿ, ಹಾಲಪ್ಪ, ಶೇಖರಪ್ಪ ಯಡೇಹಳ್ಳಿ, ಪರಮಶಿವಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


No comments:

Post a Comment