Thursday, June 30, 2022

ತುರ್ತುಪರಿಸ್ಥಿತಿ ನಿಜಕ್ಕೂ ಭಾರತದ ಇತಿಹಾಸದಲ್ಲಿ ಒಂದು ಕರಾಳಕಾಲಮಾನ : ಆರ್.ಕೆ ಸಿದ್ರಾಮಣ್ಣ

ಭದ್ರಾವತಿ ಹಳೇನಗರದ ಬಿಜೆಪಿ ಪಕ್ಷದ ಕಛೇರಿಯಲ್ಲಿ ಗುರುವಾರ ತುರ್ತು ಪರಿಸ್ಥಿತಿ ಕರಾಳ ನೆನಪಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜೂ. ೩೦: ಸಂವಿಧಾನಕ್ಕೆ ವಿರೋಧವಾಗಿ ಇಂದಿರಾಗಾಂಧಿಯವರು ೧೯೭೦ರಲ್ಲಿ  ಜಾರಿಗೆ ತಂದ ತುರ್ತುಪರಿಸ್ಥಿತಿ ನಿಜಕ್ಕೂ ಭಾರತದ ಇತಿಹಾಸದಲ್ಲಿ ಒಂದು ಕರಾಳಕಾಲಮಾನ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ ಸಿದ್ರಾಮಣ್ಣ ಹೇಳಿದರು.
      ಅವರು ಗುರುವಾರ ಸಂಜೆ ಹಳೇನಗರದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ತುರ್ತು ಪರಿಸ್ಥಿತಿ ಕರಾಳ ನೆನಪಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಧಿಕಾರ ದಾಹದಿಂದ ಕಾಂಗ್ರೆಸ್ ಪಕ್ಷದ ನಾಯಕಿ, ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಜಾರಿಗೆ ತಂದ ತುರ್ತುಪರಿಸ್ಥಿತಿಯಿಂದಾಗಿ ದೇಶದ ಸಾಮಾನ್ಯ ನಾಗರೀಕರ ಸ್ವಾತಂತ್ರ್ಯ ಹಾಗು ಪತ್ರಿಕಾ ಸ್ವಾತಂತ್ರ್ಯದ ಹರಣವಾಗಿ ಸಂವಿಧಾನದತ್ತವಾದ ಎಲ್ಲಾ ಹಕ್ಕುಗಳನ್ನು ಕಳೆದುಕೊಂಡು ಇಡೀ ದೇಶ ತೊಂದರೆ ಅನುಭವಿಸುವಂತಾಯಿತು. ಇದರ ವಿರುದ್ಧವಾಗಿ ಅಂದು ಜಯಪ್ರಕಾಶ್ ನಾರಾಯಣ್, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಅನೇಕ ರಾಷ್ಟ್ರೀಯ ಹಾಗು ರಾಜ್ಯನಾಯಕರು ಹೋರಾಟ ನಡೆಸಿ ಸೆರೆವಾಸ ಅನುಭವಿಸಿದರು. ನಿರಂತರ ಹೋರಾಟದ ಪರಿಣಾಮ ನಂತರದ ದಿನಗಳಲ್ಲಿ ತುರ್ತುಪರಿಸ್ಥಿತಿಯನ್ನು ಹಿಂಪಡೆಯಲಾಯಿತು ಎಂದರು.
      ಪಕ್ಷದ ಹಿರಿಯರಾದ ಮಧುಕಾನಿಟ್ಕರ್ ಮಾತನಾಡಿ, ತುರ್ತುಪರಿಸ್ಥಿತಿ ವಿರೋಧಿಸಿ  ಸ್ಥಳೀಯವಾಗಿ ನಡೆದ ಹೋರಾಟ ಹಾಗೂ ಅದಕ್ಕಾಗಿ ಹೋರಾಟನಡೆಸಿದವರ ಸ್ಮರಣೆ ಹಾಗೂ ಅಂದಿನ ದಿನಗಳ ಅನುಭವವನ್ನು ಮೆಲಕುಹಾಕಿದರು.  
      ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ತಾಲೂಕು ಮಂಡಲ ಕಾರ್ಯದರ್ಶಿ ಚನ್ನೇಶ್, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಾಟೀಲ್, ಯುವ ಘಟಕದ ಅಧ್ಯಕ್ಷ ವಿಜಯ್ ಸಿದ್ದಾರ್ಥ್, ಪ್ರಮುಖರಾದ ಟಿ. ವೆಂಕಟೇಶ್, ರುದ್ರಪ್ಪ, ಎಸ್.ಎನ್ ಬಾಲಕೃಷ್ಣ, ವಿಶ್ವನಾಥ್ ಕೋಠಿ, ವಿಶ್ವನಾಥರಾವ್, ರಾಮಲಿಂಗಯ್ಯ, ನರಸಿಂಹಾಚಾರ್, ವಿ. ಕದಿರೇಶ್, ಬಿ.ಎಸ್ ನಾರಾಯಣಪ್ಪ, ಬಸವರಾಜ್, ಶಕುಂತಲ, ಅನ್ನಪೂರ್ಣ, ಮಂಜುಳಾ, ರೇಖಾ ಪದ್ಮಾವತಿ, ಜೆ. ಮೂರ್ತಿ, ರವಿಚಂದ್ರ, ಮಂಜುನಾಥ್, ರಾಮನಾಥ್ ಬರ್ಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಸಂಗೀತ, ಸಾಹಿತ್ಯ, ಕಲೆಗೆ ವಿಶಿಷ್ಟವಾದ ಶಕ್ತಿ : ಡಾ. ಅನುರಾಧ ಪಟೇಲ್

ಭದ್ರಾವತಿಯಲ್ಲಿ ಚುಂಚಾದ್ರಿ ಮಹಿಳಾ ವೇದಿಕೆವತಿಯಿಂದ ವಿಶ್ವ ಸಂಗೀತ ದಿನದ ಅಂಗವಾಗಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಹಾಗು ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಹಿರಿಯ ಸುಗಮ ಸಂಗೀತ ಕಲಾವಿದ ಎಸ್.ಬಿ ಶಿವಲಿಂಗಪ್ಪ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಜೂ. ೩೦: ಸಂಗೀತ, ಸಾಹಿತ್ಯ, ಕಲೆ ಇವುಗಳು ಮನುಷ್ಯನ ಅವಿಭಾಜ್ಯ ಅಂಗವಾಗಿದ್ದು, ವಿಶಿಷ್ಟವಾದ ಶಕ್ತಿ ಹೊಂದಿವೆ ಎಂದು ಚುಂಚಾದ್ರಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಡಾ. ಅನುರಾಧ ಪಟೇಲ್ ಹೇಳಿದರು.
      ಅವರು ಗುರುವಾರ ವೇದಿಕೆವತಿಯಿಂದ ವಿಶ್ವ ಸಂಗೀತ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಹಾಗು ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
      ಸಂಗೀತ, ಸಾಹಿತ್ಯ, ಕಲೆ ಇವುಗಳು ಮನಸ್ಸಿಗೆ ನೆಮ್ಮದಿ ನೀಡುವ ಜೊತೆಗೆ ಮನಸ್ಸುಗಳನ್ನು ಒಂದುಗೂಡಿಸುವ ಶಕ್ತಿ ಹೊಂದಿವೆ. ಇವು ಮನಷ್ಯರಲ್ಲಿ ಮಾತ್ರವಲ್ಲ ಪ್ರಾಣಿ, ಪಕ್ಷಿಗಳಲ್ಲೂ ಅಡಗಿವೆ. ಇವುಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಸಂಸ್ಕಾರಯುತವಾದ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದರು.
      ಸಂಗೀತ ಶಿಕ್ಷಕಿ ವಿದ್ವಾನ್ ಪುಷ್ಪ ಕೃಷ್ಣಮೂರ್ತಿ ಮಾತನಾಡಿ, ಕೈಗಾರಿಕೆ ನಗರ ಸಂಗೀತ, ಸಾಹಿತ್ಯ, ಕಲೆಗಳ ತವರೂರಾಗಿದೆ. ಇಲ್ಲಿನ ಕಲಾವಿದರು ರಾಜ್ಯ ಹಾಗು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿ ಅಭಿನಂದಿಸುವ ಕಾರ್ಯ ಶ್ಲಾಘನೀಯ ಎಂದರು.
      ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ಸಂಗೀತ ಶಿಕ್ಷಕಿ ವಿದೂಷಿ ಗಾಯತ್ರಿ, ನಗರಸಭೆ ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ, ಸೇರಿದಂತೆ ಇನ್ನಿತರರು ಮಾತನಾಡಿದರು. ಹಿರಿಯ ಸುಗಮ ಸಂಗೀತ ಕಲಾವಿದ ಎಸ್.ಬಿ ಶಿವಲಿಂಗಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು.
      ನಗರಸಭಾ ಸದಸ್ಯ ಮಣಿ ಎಎನ್‌ಎಸ್, ಪತಂಜಲಿ ಯೋಗ ಶಿಕ್ಷಕ ಮಂಜುನಾಥ್, ಪುಷ್ಪಾ ಕೇಶವಮೂರ್ತಿ, ವೇದಿಕೆ ಖಜಾಂಚಿ ಭಾರತಿ ಕುಮಾರ್ ಹಾಗು ನಿರ್ದೇಶಕಿಯರು  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ವೇದಿಕೆ ಕಾರ್ಯದರ್ಶಿ ಲತಾ ಪ್ರಭಾಕರ್ ಸ್ವಾಗತಿಸಿದರು. ನೂತನ್ ನಿರೂಪಿಸಿದರು. ಸಹಕಾರ್ಯದರ್ಶಿ ಶೀಲಾ ರವಿ ವಂದಿಸಿದರು.    


ಪರಿಶುದ್ಧ ಕುಡಿಯುವ ನೀರಿನ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

ವಿಧಾನಪರಿಷತ್ ಸದಸ್ಯ ಡಿ.ಎಸ್ ಅರುಣ್‌ಗೆ ಮನವಿ

ಭದ್ರಾವತಿ ಕ್ಷೇತ್ರದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ  ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ ದೇವರಾಜ ಅರಸು ಜನಸ್ಪಂದನ ವೇದಿಕೆ ಹಾಗು ಸುವರ್ಣ ಮಹಿಳಾ ವೇದಿಕೆ ವತಿಯಿಂದ ವಿಧಾನಪರಿಷತ್ ಸದಸ್ಯ ಡಿ.ಎಸ್ ಅರುಣ್ ಅವರಿಗೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜೂ. ೩೦ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ ದೇವರಾಜ ಅರಸು ಜನಸ್ಪಂದನ ವೇದಿಕೆ ಹಾಗು ಸುವರ್ಣ ಮಹಿಳಾ ವೇದಿಕೆ ವತಿಯಿಂದ ವಿಧಾನಪರಿಷತ್ ಸದಸ್ಯ ಡಿ.ಎಸ್ ಅರುಣ್ ಅವರಿಗೆ ಮನವಿ ಸಲ್ಲಿಸಲಾಯಿತು.
    ಉಂಬ್ಳೆಬೈಲು ಹಾಗು ತಾಲೂಕಿನ ಕಲ್ಲಹಳ್ಳಿ ಮತ್ತು ೨೮ ಗ್ರಾಮಗಳನ್ನೊಳಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಈ ಹಿನ್ನಲೆಯಲ್ಲಿ ಸಮರ್ಪಕವಾದ, ಪರಿಶುದ್ಧವಾದ ಕುಡಿಯುವ ನೀರನ್ನು ಪೂರೈಸಲು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾತಿ ಮಾಡಿಸುವುದು. ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯಾನವನ, ರಸ್ತೆ, ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕರ ವಿಶೇಷ ಅನುದಾನವನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಲಾಗಿದೆ.
    ದೊಣಬಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಸಮರ್ಪಕವಾದ, ಪರಿಶುದ್ಧವಾದ ಕುಡಿಯುವ ನೀರಿನ ಪೂರೈಕೆ ಮಾಡಲು ಕ್ರಮ ಕೈಗೊಳ್ಳುವುದು. ದೊಣಬಘಟ್ಟ, ತಡಸ, ಬಿಳಿಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಹಿಳೆಯರ ಅನುಕೂಲಕ್ಕಾಗಿ ದೊಣಬಘಟ್ಟದಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನು ೨೫ ಹಾಸಿಗೆಯುಳ್ಳ ತಾಯಿ ಮತ್ತು ಮಗುವಿನ ಆಸ್ಪತ್ರೆಯನ್ನಾಗಿ ಪರಿವರ್ತಿಸುವುದು. ಕೇಂದ್ರ ಸರ್ಕಾರದ ಮಾದರಿಯಂತೆ ಅಮೃತ್ ೨.೦ ಯೋಜನೆಯನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನುಷ್ಠಾನಕ್ಕೆ ತರುವುದು ಹಾಗು ನಗರಸಭೆ ವ್ಯಾಪ್ತಿ ಜನ್ನಾಪುರ ಸರ್ವೆ ನಂ.೭೦ರ ಸುಮಾರು ೪೫ ಎಕರೆ ೨೦ ಗುಂಟೆ ವಿಸ್ತೀರ್ಣವುಳ್ಳ ಜನ್ನಾಪುರ ಕೆರೆ ಬದಿಯಲ್ಲಿ ರಾಜಕಾಲುವೆ ನಿರ್ಮಿಸಲು ೩ ಕೋ. ರು. ಅನುದಾನ ಬಿಡುಗಡೆಗೊಳಿಸುವಂತೆ ಆಗ್ರಹಿಸಲಾಗಿದೆ.
    ಟ್ರಸ್ಟ್ ಛೇರ್‍ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್, ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ. ಆನಂದ್, ಸದಸ್ಯರಾದ ಉಮೇಶ್, ಧರ್ಮಪ್ಪ, ಪುನೀತ್, ಗ್ರಾಮಸ್ಥರಾದ ಬೋಟ್ಯಾನಾಯ್ಕ್, ಕುಮಾರ್, ಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, June 29, 2022

ಏಕಾಏಕಿ ಸರ್ಕಾರಿ ಜಮೀನಿನಲ್ಲಿ ಅಕ್ರಮ ನಿವೇಶನ, ಮನೆ

ತಹಸೀಲ್ದಾರ್ ನೇತೃತ್ವದ ತಂಡದಿಂದ ತೆರವು ಕಾರ್ಯಾಚರಣೆ

ಭದ್ರಾವತಿ ತಾಲೂಕಿನ ತಾವರೆಘಟ್ಟ ಗ್ರಾಮದ ಸರ್ವೆ ನಂ.೧೪ರ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿಕೊಳ್ಳಲಾಗಿದ್ದ ನಿವೇಶನ ಹಾಗು ಮನೆ ತೆರವುಗೊಳಿಸುವಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದ ತಂಡ ಬುಧವಾರ ಯಶಸ್ವಿಯಾಗಿದೆ.
    ಭದ್ರಾವತಿ, ಜೂ. ೨೯: ತಾಲೂಕಿನ ತಾವರೆಘಟ್ಟ ಗ್ರಾಮದ ಸರ್ವೆ ನಂ.೧೪ರ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿಕೊಳ್ಳಲಾಗಿದ್ದ ನಿವೇಶನ ಹಾಗು ಮನೆ ತೆರವುಗೊಳಿಸುವಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದ ತಂಡ ಬುಧವಾರ ಯಶಸ್ವಿಯಾಗಿದೆ.
    ಕಳೆದ ಕೆಲವು ದಿನಗಳ ಹಿಂದೆ ಸರ್ಕಾರಿ ಜಮೀನಿನಲ್ಲಿ ಏಕಾಕಿ ನಿವೇಶನ ಹಾಗು ಮನೆ ನಿರ್ಮಿಸಿಕೊಂಡಿದ್ದು, ಈ ಮಾಹಿತಿ ತಿಳಿದ ತಕ್ಷಣ ಸೂಕ್ತ ದಾಖಲೆ ಪತ್ರಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಆರ್. ಪ್ರದೀಪ್ ನೇತೃತ್ವದ ತಂಡ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ಕೈಗೊಂಡು ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಯಿತು.


    ಕಾರ್ಯಾಚರಣೆಯಲ್ಲಿ ತಾವರಘಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕರು, ಕಂದಾಯ ನಿರೀಕ್ಷಕ ಸತೀಶ್, ರಘು ಹಾಗು ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಕನ್ನಯ್ಯಾ ಲಾಲ್ ಟೈಲರ್ ಕಗ್ಗೊಲೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

ರಾಜಸ್ತಾನದ ಉದಯಪುರದಲ್ಲಿ ನಡೆದ ಕನ್ನಯ್ಯಾ ಲಾಲ್ ಟೈಲರ್ ಕಗ್ಗೊಲೆ ಖಂಡಿಸಿ ಬುಧವಾರ ಭದ್ರಾವತಿ ಮಾಧವಚಾರ್ ವೃತ್ತದಲ್ಲಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಜೂ. ೨೯ : ರಾಜಸ್ತಾನದ ಉದಯಪುರದಲ್ಲಿ ನಡೆದ ಕನ್ನಯ್ಯಾ ಲಾಲ್ ಟೈಲರ್ ಕಗ್ಗೊಲೆ ಖಂಡಿಸಿ ಬುಧವಾರ ನಗರದ ಮಾಧವಚಾರ್ ವೃತ್ತದಲ್ಲಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.
    ಪಕ್ಷದ ಪ್ರಮುಖರು ಮಾತನಾಡಿ, ರಾಜಸ್ತಾನದ ಉದಯಪುರದಲ್ಲಿ ನೂಪುರ್ ಶರ್ಮಾ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬೆಂಬಲಿಸಿ ಪೋಸ್ಟ್ ಮಾಡಿದ ಕಾರಣಕ್ಕೆ ಕನ್ನಯ್ಯಾ ಲಾಲ್ ಅವರನ್ನು ಹತ್ಯೆ ಮಾಡಿರುವುದು ಖಂಡನೀಯ, ದೇಶದಲ್ಲಿ ಹಿಂದುಗಳು ನೆಮ್ಮದಿಯಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ತಕ್ಷಣ ಕೊಲೆ ಆರೋಪಿಗಳನ್ನು ಬಂಧಿಸಿ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಪ್ರಮುಖರಾದ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ತಾಲೂಕು ಪ್ರಧಾನ ಕಾರ್ಯದರ್ಶಿ ಚನ್ನೇಶ್, ಯುವ ಘಟಕದ ಅಧ್ಯಕ್ಷ ವಿಜಯ್ ಸಿದ್ದಾಥ್, ಎಸ್.ಸಿ ಮೋರ್ಚಾ ಅಧ್ಯಕ್ಷ ಪಿ. ಗಣೇಶ್‌ರಾವ್, ವಿ. ಕದಿರೇಶ್, ಎಸ್. ಕುಮಾರ್, ಎಂ. ಮಂಜುನಾಥ್, ಎಂ.ಎಸ್ ಸುರೇಶಪ್ಪ, ನಕುಲ್, ಗೋಕುಲ್ ಕೃಷ್ಣ, ಧನುಷ್ ಬೋಸ್ಲೆ, ಮಹಿಳಾ ಪ್ರಮುಖರಾದ ಶೋಭಾ ಪಾಟೀಲ್, ಗೌರಮ್ಮ, ಮಂಜುಳಾ, ಶಕುಂತಲಾ, ಅನುಷಾ, ಕವಿತಾ ಸುರೇಶ್, ರೇಖಾ ಪದ್ಮಾವತಿ, ಅನ್ನಪೂರ್ಣ, ಹೇಮಾವತಿ ವಿಶ್ವನಾಥ್, ಕವಿತಾರಾವ್, ಲೋಲಾಕ್ಷಿ, ಭಾಗಿರತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹಿರಿಯೂರು ಗ್ರಾಮ ಪಂಚಾಯಿತಿ ಪಿಡಿಓ ವಿರುದ್ಧ ಪ್ರತಿಭಟನೆ

ಕರ್ತವ್ಯ ಲೋಪ, ಅಕ್ರಮವಾಗಿ ಎನ್‌ಓಸಿ ನೀಡಿದ ಆರೋಪ

ಭದ್ರಾವತಿ ಹಿರಿಯೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸರಿಯಾಗಿ ಕರ್ತವ್ಯ ನಿರ್ವಹಿಸದೆ, ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಬುಧವಾರ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಜೂ. ೨೯ : ಹಿರಿಯೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸರಿಯಾಗಿ ಕರ್ತವ್ಯ ನಿರ್ವಹಿಸದೆ, ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಬುಧವಾರ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಳೆದ ಸುಮಾರು ೧೦ ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿರುವ ಪರಮೇಶ್ವರಪ್ಪ, ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಜೊತೆಗೆ  ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಪಂಚಾಯಿತಿ ಕೆಲಸ ಮಾಡಿಕೊಡಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಅಲ್ಲದೆ ಹಳೇ ಹಿರಿಯೂರು ಭಾಗದ ಗ್ರಾಮ ಠಾಣಾ ಜಾಗದ ಒಂದೇ ನಿವೇಶನಕ್ಕೆ ಅಕ್ರಮವಾಗಿ ಪುನಃ ವಿದ್ಯುತ್ ಸಂಪರ್ಕ ಪಡೆಯಲು ಆಕ್ಷೇಪಣ ರಹಿತ ಪತ್ರ (ಎನ್‌ಓಸಿ) ನೀಡುವ ಮೂಲಕ ಅಕ್ರಮವೆಸಗಿದ್ದಾರೆಂದು ಆರೋಪಿಸಲಾಯಿತು.
    ತಕ್ಷಣ ಅಭಿವೃದ್ಧಿ ಅಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್‌ರವರು ಈ ಸಂಬಂಧ ಸೂಕ್ತ ತನಿಖೆ ಕೈಗೊಂಡು ನ್ಯಾಯ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
    ಪ್ರಮುಖರಾದ ಕೆ.ಟಿ ಪ್ರಸನ್ನ, ರವಿ, ಸತ್ಯನಾರಾಯಣರಾವ್, ಎಚ್.ವೈ ಕುಮಾರ್, ಸಂತೋಷ್ ಹಾಗು ಅಂಬೇಡ್ಕರ್ ಕಾಲೋನಿ ನಿವಾಸಿಗಳು ಪಾಲ್ಗೊಂಡಿದ್ದರು.

ಯುವ ಮೋರ್ಚಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎನ್ ಪ್ರಜ್ವಲ್ ನೇಮಕ


ಬಿ.ಎನ್ ಪ್ರಜ್ವಲ್
    ಭದ್ರಾವತಿ, ಜೂ. ೨೯ : ಬಿಜೆಪಿ ಯುವ ಮೋರ್ಚಾ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎನ್ ಪ್ರಜ್ವಲ್ ನೇಮಕಗೊಂಡಿದ್ದಾರೆ.
    ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಪ್ರಜ್ವಲ್ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ಯುವ ಮುಖಂಡ ನಕುಲ್ ಅವರಿಂದ ತೆರವಾದ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಯುವ ಮೋರ್ಚಾ ಅಧ್ಯಕ್ಷ ವಿಜಯ್ ಸಿದ್ದಾರ್ಥ್ ಹಾಗು ಇನ್ನಿತರ ಮುಖಂಡರು ಪ್ರಜ್ವಲ್ ಅವರನ್ನು ಅಭಿನಂದಿಸಿದ್ದಾರೆ.

Tuesday, June 28, 2022

ಜು.೧ರಿಂದ ಉದ್ಯೋಗ ಕಾಯಂಗೊಳಿಸಲು ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ

    ಭದ್ರಾವತಿ, ಜೂ. ೨೯: ಉದ್ಯೋಗ ಕಾಯಂಗೊಳಿಸುವಂತೆ ಆಗ್ರಹಿಸಿ ಶಿವಮೊಗ್ಗ ಮಹಾನಗರ ಪಾಲಿಕೆ ನೇರಪಾವತಿ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಜು.೧ರಂದು ನಗರಸಭೆ ಮುಂಭಾಗ ಅನಿರ್ಧಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ.
    ಈ ಹಿಂದೆ ಹಲವು ಬಾರಿ ಸರ್ಕಾರಕ್ಕೆ ಉದ್ಯೋಗ ಕಾಯಂಗೊಳಿಸುವಂತೆ ಮನವಿ ಮಾಡಿದ್ದು, ಆದರೆ ಇದಕ್ಕೆ ಸರ್ಕಾರ ಇದುವರೆಗೂ ಯಾವುದೇ ರೀತಿ ಕ್ರಮ ಕೈಗೊಂಡಿಲ್ಲ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಪ್ರಸ್ತುತ ನೀಡಲಾಗುತ್ತಿರುವ ವೇತನದಲ್ಲಿ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಉದ್ಯೋಗದ ಭದ್ರತೆ ಜೊತೆಗೆ ಜೀವನದ ಭದ್ರತೆ ಸಹ ಇಲ್ಲದಂತಾಗಿದೆ. ಈ ಹಿನ್ನಲೆಯಲ್ಲಿ ಕಾಯಂಗೊಳಿಸುವುದು ಅನಿರ್ವಾಯವಾಗಿದ್ದು, ನ್ಯಾಯ ಸಿಗುವ ವರೆಗೂ ಮುಷ್ಕರ ನಡೆಸಲಾಗುವುದು.
    ನಗರಸಭೆ ನೇರಪಾವತಿ ಪೌರ ಕಾರ್ಮಿಕರು, ಲೋಡರ್‍ಸ್, ಕಸದ ವಾಹನ ಚಾಲಕರು ಹಾಗು ಹೆಲ್ಪರ್‍ಸ್, ಶೌಚಾಲಯ ನೌಕರರು ಹಾಗು ನೇರಪಾವತಿ ಹೊರಗುತ್ತಿಗೆಯಲ್ಲಿರುವ ಎಲ್ಲಾ ವಿಭಾಗದ ನೌಕರರು ಸಹ ಮುಷ್ಕರದಲ್ಲಿ ಪಾಲ್ಗೊಳ್ಳುವ ಯಶಸ್ವಿಗೊಳಿಸುವಂತೆ ಸಂಘದ ಖಜಾಂಮಚಿ ನರಸಿಂಹಮೂರ್ತಿ ಮನವಿ ಮಾಡಿದ್ದಾರೆ.  

ಕೆರೆ ಸಂರಕ್ಷಣೆ ಎಲ್ಲರ ಕರ್ತವ್ಯ : ಬಿ.ಕೆ ಸಂಗಮೇಶ್ವರ್


ಭದ್ರಾವತಿ ತಾಲೂಕಿನ ಅಂತರಗಂಗೆ ವಲಯದ ಕಾರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಪೇಗೌಡ ನಗರದ ಕಾರೇಹಳ್ಳಿ ಕೆರೆಗೆ ಬಾಗಿನ ಅರ್ಪಣೆ, ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪಾಲ್ಗೊಂಡಿದ್ದರು.

    ಭದ್ರಾವತಿ, ಜೂ. ೨೮: ಕೆರೆಗಳನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೈಗೊಂಡಿರುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದರು.
    ಅವರು ತಾಲೂಕಿನ ಅಂತರಗಂಗೆ ವಲಯದ ಕಾರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಪೇಗೌಡ ನಗರದ ಕಾರೇಹಳ್ಳಿ ಕೆರೆಗೆ ಬಾಗಿನ ಅರ್ಪಣೆ, ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಯೋಜನೆ ವತಿಯಿಂದ ೭.೫೦ ಲಕ್ಷ ರು. ವೆಚ್ಚದಲ್ಲಿ ಕೈಗೊಂಡಿರುವ ಕೆರೆ ಹೂಳೆತ್ತುವ ಕಾರ್ಯ ಮಾದರಿಯಾಗಿದ್ದು, ಎಲ್ಲರೂ ಸೇರಿ ಕೆರೆಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.  
    ಯೋಜನೆಯ ಜಿಲ್ಲಾ ನಿರ್ದೇಶಕ ಚಂದ್ರಶೇಖರ್ ಮಾತನಾಡಿ,  ಜಿಲ್ಲೆಯಲ್ಲಿ ೨ ಕೋ. ರು. ವೆಚ್ಚದಲ್ಲಿ ೨೪ ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕಾರೇಹಳ್ಳಿ ಕೆರೆ ಅಭಿವೃದ್ಧಿಪಡಿಸಲು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕೆರೆ ಸಮಿತಿ ಸದಸ್ಯರು ಹೆಚ್ಚಿನ ಸಹಕಾರ ನೀಡಿದ್ದು, ಇದರಿಂದಾಗಿ ಕೆರೆಯನ್ನು ಸುಂದರವಾಗಿ ನಿರ್ಮಾಣ ಮಾಡಲು ಸಾಧ್ಯವಾಗಿದೆ ಎಂದರು.
  ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಸಹಾಯಕ ನಿರ್ದೇಶಕರಾದ ಉಪೇಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ, ಉಪಾಧ್ಯಕ್ಷೆ ಅಂಬಿಕಾ, ಕೆರೆ ಸಮಿತಿ ಅಧ್ಯಕ್ಷ ಯೋಗೀಶ್, ಕೆರೆ ಇಂಜಿನೀಯರ್ ಗಣಪತಿ, ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ವೈ. ಪ್ರಕಾಶ್, ಕಾರೇಹಳ್ಳಿ ಗ್ರಾಮ ಪಂಚಾಯಿತಿ ಎಲ್ಲಾ ಸದಸ್ಯರು, ಕೃಷಿ ಮೇಲ್ವಿಚಾರಕ ಗೋವಿಂದಪ್ಪ, ವಲಯದ ಮೇಲ್ವಿಚಾರಕ ಕುಮಾರ್, ಸ್ಥಳೀಯ ಸೇವಾಪ್ರತಿನಿಧಿಗಳು, ಸಂಘದ ಸದಸ್ಯರು, ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಊರಿನ ಮುಖಂಡರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಅಪೇಕ್ಷ ಮಂಜುನಾಥ್‌ಗೆ ಕಲಾಭೂಷಣ ರಾಜ್ಯಮಟ್ಟದ ಪ್ರಶಸ್ತಿ

ದಾವಣಗೆರೆ ಗಾನಸುಧೆ ಕಲಾ ಬಳಗ ವತಿಯಿಂದ ಭದ್ರಾವತಿ ಜ್ಯೂನಿಯರ್ ವಿಷ್ಣುವರ್ಧನ್, ದೈಹಿಕ ಶಿಕ್ಷಕ ಅಪೇಕ್ಷ ಮಂಜುನಾಥ್ ಅವರಿಗೆ ಕಲಾಭೂಷಣ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 
    ಭದ್ರಾವತಿ, ಜೂ. ೨೮: ದಾವಣಗೆರೆ ಗಾನಸುಧೆ ಕಲಾ ಬಳಗ ವತಿಯಿಂದ ನಗರದ ಜ್ಯೂನಿಯರ್ ವಿಷ್ಣುವರ್ಧನ್, ದೈಹಿಕ ಶಿಕ್ಷಕ ಅಪೇಕ್ಷ ಮಂಜುನಾಥ್ ಅವರಿಗೆ ಕಲಾಭೂಷಣ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
    ಅಪೇಕ್ಷ ಮಂಜುನಾಥ್ ಅವರು ಕಲಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಬಳಗದ ವತಿಯಿಂದ ಡಾ. ಪುನೀತ್ ರಾಜ್‌ಕುಮಾರ್‌ರವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಗೀತಾ ನುಡಿನಮನ ಮತ್ತು ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
    ಅಪೇಕ್ಷ ಮಂಜುನಾಥ್ ಅವರು ಹಲವಾರು ವರ್ಷಗಳಿಂದ ದೈಹಿಕ ಶಿಕ್ಷಕ ವೃತ್ತಿಯೊಂದಿಗೆ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಹಲವಾರು ಬಿರುದು, ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇವರನ್ನು ಕಲಾಭಿಮಾನಿಗಳು ಅಭಿನಂದಿಸಿದ್ದಾರೆ.

ಭದ್ರಾ ಎಡೆದಂತೆ ಕಾಲುವೆಯಲ್ಲಿ ಕಳಪೆ ಕಾಮಗಾರಿ : ಗುಣಮಟ್ಟದ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ

ಭದ್ರಾವತಿ ತಾಲೂಕಿನ ಬಿಳಿಕಿ ಕೆರೆಗೆ ಹೊಂದಿಕೊಂಡಿರುವ ನವಿಲೆ ಬಸಾಪುರಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಭದ್ರಾ ಎಡದಂತೆ ಕಾಲುವೆಯ ಸೇತುವೆ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದು, ಮಂಗಳವಾರ ಗ್ರಾಮಸ್ಥರು ತಕ್ಷಣ ಕಳಪೆ ಕಾಮಗಾರಿ ತೆರವುಗೊಳಿಸಿ ಗುಣಮಟ್ಟದ ಕಾಮಗಾರಿ ನಡೆಸುವಂತೆ ಆಗ್ರಹಿಸಿದರು.
    ಭದ್ರಾವತಿ, ಜೂ. ೨೮: ತಾಲೂಕಿನ ಬಿಳಿಕಿ ಕೆರೆಗೆ ಹೊಂದಿಕೊಂಡಿರುವ ನವಿಲೆ ಬಸಾಪುರಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಭದ್ರಾ ಎಡದಂತೆ ಕಾಲುವೆಯ ಸೇತುವೆ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದ್ದು, ಗ್ರಾಮಸ್ಥರು ತಕ್ಷಣ ಕಳಪೆ ಕಾಮಗಾರಿ ತೆರವುಗೊಳಿಸಿ ಗುಣಮಟ್ಟದ ಕಾಮಗಾರಿ ನಡೆಸುವಂತೆ ಆಗ್ರಹಿಸಿದ್ದಾರೆ.
    ಕಾಲುವೆಗೆ ಅಡ್ಡಲಾಗಿ ಬಿಳಿಕಿ ಗ್ರಾಮಕ್ಕೆ ಸಂಪರ್ಕಗೊಂಡಿರುವ ಸೇತುವೆ ಶಿಥಿಲಗೊಂಡಿದ್ದು, ಈ ಹಿನ್ನಲೆಯಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಒತ್ತಾಯಿಸಿದ ಹಿನ್ನಲೆಯಲ್ಲಿ ಶಾಸಕರು ನೀರಾವರಿ ನಿಗಮಕ್ಕೆ ಸೇತುವೆ ನಿರ್ಮಿಸುವಂತೆ ಮನವಿ ಸಲ್ಲಿಸಿದ್ದು, ಕರ್ನಾಟಕ ನೀರಾವರಿ ನಿಗಮ ಭದ್ರಾ ಪ್ರಾಜೆಕ್ಟ್ ವತಿಯಿಂದ ಸುಮಾರು ೩೪.೫೦ ಲಕ್ಷ ರು. ವೆಚ್ಚದಲ್ಲಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಸುಮಾರು ಒಂದು ವಾರದ ಹಿಂದೆ ಕಾಮಗಾರಿ ಆರಂಭಗೊಂಡಿದ್ದು, ಆದರೆ ಗುತ್ತಿಗೆದಾರರು ಕಾಮಗಾರಿಯನ್ನು ಕಳಪೆಯಿಂದ ನಿರ್ವಹಿಸುತ್ತಿದ್ದು, ಸೇತುವೆ ತಳಪಾಯಕ್ಕೆ ಕಡಿಮೆ ಸಾಮರ್ಥ್ಯದ ಕಬ್ಬಿಣದ ರಾಡ್ ಬಳಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಆದರೂ ಸಹ ಕಾಮಗಾರಿ ಸ್ಥಗಿತಗೊಳಿಸದೆ ಮುಂದುವರೆಸಲಾಗುತ್ತಿದೆ. ಇದರಿಂದಾಗಿ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.
    ಮಂಗಳವಾರ ಕಾಮಗಾರಿ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಪತ್ರಿಕೆಯೊಂದಿಗೆ ಮಾತನಾಡಿ, ಸೇತುವೆ ಕಾಮಗಾರಿ ಕಳಪೆಯಿಂದ ಕೂಡಿದೆ. ಹಲವಾರು ಬಾರಿ ಗುತ್ತಿಗೆದಾರನಿಗೆ ಗುಣಮಟ್ಟದ ಕಾಮಗಾರಿ ನಡೆಸುವಂತೆ ಮನವಿ ಮಾಡಿದರೂ ಸಹ ನಿರ್ಲಕ್ಷ್ಯತನ ವಹಿಸಲಾಗುತ್ತಿದೆ ಎಂದು ಆರೋಪಿಸಿದರು.
    ಕಾಮಗಾರಿ ಆರಂಭಿಸುವ ಕುರಿತು ಯಾವುದೇ ಮುನ್ಸೂಚನೆ ಸಹ ನೀಡಿಲ್ಲ. ಅಲ್ಲದೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಸಹ ಕೈಗೊಂಡಿಲ್ಲ. ಸೇತುವೆ ಎರಡು ಬದಿಯಲ್ಲಿ ಕಾಮಗಾರಿ ನಡೆಯುತ್ತಿರುವ ಬಗ್ಗೆ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ಕಾಮಗಾರಿ ಕುರಿತು ಸಂಪೂರ್ಣ ವಿವರ ಪ್ರಕಟಿಸಬೇಕು. ಆದರೆ ಯಾವುದನ್ನು ಸಹ ಮಾಡಿಲ್ಲ. ಈಗಾಗಲೇ ಈ ಸ್ಥಳದಲ್ಲಿ ಅಪಘಾತ ಸಂಭವಿಸಿದ್ದು, ಆದರೂ ಸಹ ಎಚ್ಚೆತ್ತುಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಕಾಮಗಾರಿ ನಿರ್ವಹಿಸುತ್ತಿದ್ದ ಪ್ರಕಾಶ್ ವಠಾರೆ ಎಂಬುವರು ಮಾತನಾಡಿ, ಟೆಂಡರ್‌ನಲ್ಲಿ ನಮೂದಿಸಿರುವಂತೆ ಕಾಮಗಾರಿ ನಡೆಸಲಾಗುತ್ತಿದೆ ಎಂದರು. ಆದರೆ ಕಳಪೆ ಕಾಮಗಾರಿ ಕುರಿತು ಯಾವುದೇ ಸ್ಪಷ್ಟನೆ ನೀಡಲಿಲ್ಲ. ಈ ನಡುವೆ ಗ್ರಾಮಸ್ಥರು ಆಕ್ರೋಶಗೊಂಡ ಹಿನ್ನಲೆಯಲ್ಲಿ ಸ್ಥಳದಿಂದ ಕಾಲ್ಕಿತ್ತರು.

ಕಾರ್ಮಿಕರು ಸಹ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲಿ : ಸಚಿವ ಶಿವರಾಂ ಹೆಬ್ಬಾರ್

ಭದ್ರಾವತಿ ಬೈಪಾಸ್ ರಸ್ತೆ ಉಜ್ಜನಿಪುರ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಸಮೀಪದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೂತನ ಕಾರ್ಮಿಕರ ಭವನ ನಿರ್ಮಾಣಕ್ಕೆ ಮಂಗಳವಾರ ಸಚಿವರಾದ ಶಿವರಾಂ ಹೆಬ್ಬಾರ್, ಡಾ. ಕೆ.ಸಿ ನಾರಾಯಣಗೌಡ, ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ಇನ್ನಿತರರು ಭೂಮಿ ಪೂಜೆ ನೆರವೇರಿಸಿದರು.
    ಭದ್ರಾವತಿ, ಜೂ. ೨೮: ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಮಿಕರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರುವ ಕ್ಷೇತ್ರ ಭದ್ರಾವತಿಯಾಗಿದ್ದು, ವಿಶೇಷವಾಗಿ ಕಾರ್ಮಿಕರು ಸಹ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕೆಂಬ ಆಶಯ ನನ್ನದಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಹೇಳಿದರು.
    ಅವರು ಮಂಗಳವಾರ ನಗರದ ಬೈಪಾಸ್ ರಸ್ತೆ ಉಜ್ಜನಿಪುರ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಸಮೀಪದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೂತನ ಕಾರ್ಮಿಕರ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
    ಕಾರ್ಮಿಕ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಬಹುಮುಖ್ಯವಾಗಿ ಕಾರ್ಮಿಕರ ಮಕ್ಕಳು ಸಹ ಶಿಕ್ಷಣವಂತರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಉನ್ನತ ಶಿಕ್ಷಣಕ್ಕೆ ಅಗತ್ಯವಿರುವ ಆರ್ಥಿಕ ನೆರವನ್ನು ಸಂಪೂರ್ಣವಾಗಿ ಇಲಾಖೆ ವತಿಯಿಂದ ಭರಿಸಲಾಗುತ್ತಿದೆ ಎಂದರು.
    ಕಾರ್ಮಿಕರ ಆರೋಗ್ಯಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಅಲ್ಲದೆ ಎಲ್ಲಾ ರೀತಿಯ ಅಸಂಘಟಿತ ಕಾರ್ಮಿಕರ ನೆರವಿಗೆ ಮುಂದಾಗುವ ಉದ್ದೇಶದಿಂದ ಇ-ಶ್ರಮ್ ಕಾರ್ಡ್ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಅಸಂಘಟಿತ ಕಾರ್ಮಿಕರು ಉಚಿತವಾಗಿ ನೋಂದಾಣಿ ಮಾಡಿಕೊಂಡು ಕಾರ್ಡ್ ಪಡೆಯುವ ಮೂಲಕ ಸರ್ಕಾರದ ಸೌಲರ್ಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
    ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸಿ ನಾರಾಯಣಗೌಡ ಮಾತನಾಡಿ, ಒಬ್ಬ ಕಾರ್ಮಿಕನಾಗಿ ಕಾರ್ಮಿಕರ ನೋವು-ನಲಿವುಗಳನ್ನು ಅರಿತುಕೊಂಡಿರುವ ಸಚಿವ ಶಿವರಾಂ ಹೆಬ್ಬಾರ್‌ರವರು ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅದರಲ್ಲೂ ಶಿವಮೊಗ್ಗ ಜಿಲ್ಲೆಗೆ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ ಎಂದರು.
    ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಕಾರ್ಮಿಕ ಸಚಿವರು ಕಾರ್ಮಿಕರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಜಿಲ್ಲೆಯಲ್ಲಿರುವ ಕಾರ್ಮಿಕರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಬದ್ಧರಾಗಿದ್ದಾರೆ. ಅವರು ಕಾರ್ಮಿಕರ ಬಗ್ಗೆ ಹೊಂದಿರುವ ಕಾಳಜಿಗೆ ಶಿವಮೊಗ್ಗ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಮಿಕ ಭವನ ನಿರ್ಮಾಣಕ್ಕೆ ಸಚಿವರು ಇನ್ನೂ ಹೆಚ್ಚಿನ ೧೫ ಕೋ. ರು. ಅನುದಾನ ನೀಡಬೇಕು. ಕ್ಷೇತ್ರದಲ್ಲಿ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ತೆರೆಯುವ ಮೂಲಕ ಕಾರ್ಮಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.
     ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿ, ಕಾರ್ಮಿಕ ಇಲಾಖೆ ಆಯುಕ್ತ ಅಕ್ರಮ ಪಾಷ, ಕಾರ್ಯನಿರ್ವಹಣಾಧಿಕಾರಿ ಎಂ.ಪಿ ಗುರುಪ್ರಸಾದ್, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಎಸ್. ದತ್ತಾತ್ರಿ, ಬಿ.ಕೆ ಶ್ರೀನಾಥ್, ಎಂ. ಪ್ರಭಾಕರ್, ಎಸ್. ಕುಮಾರ್, ಕೆ. ಮಂಜುನಾಥ್, ಮಂಗೋಟೆರುದ್ರೇಶ್, ಜಿ. ಆನಂದಕುಮಾರ್, ಮಣಿ ಎಎನ್‌ಎಸ್, ಲತಾ ಚಂದ್ರಶೇಖರ್, ಅನುಪಮ ಚನ್ನೇಶ್, ಅನ್ನಪೂರ್ಣ, ರವಿಕುಮಾರ್, ಮಂಜುನಾಥ್, ಕರೀಗೌಡ, ವಿವಿಧ ಕಾರ್ಮಿಕ ಸಂಘಟನೆಗಳ ಪ್ರಮುಖರಾದ ಚಂದ್ರಶೇಖರ್, ವಿ.ವಿನೋದ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Monday, June 27, 2022

ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಮೊದಲ ದಿನ ೧೨ ವಿದ್ಯಾರ್ಥಿಗಳು ಗೈರು

    ಭದ್ರಾವತಿ, ಜೂ. ೨೭: ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಮೊದಲ ದಿನ ೧೨೪ ವಿದ್ಯಾರ್ಥಿಗಳ ಪೈಕಿ ೧೧೨ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿದ್ದಾರೆ.
    ಈ ಕುರಿತು ಮಾಹಿತಿ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮೊದಲ ದಿನ ವಿಜ್ಞಾನ ವಿಷಯ ಪರೀಕ್ಷೆ ನಡೆದಿದ್ದು, ನ್ಯೂಟೌನ್ ಸಿಲ್ವರ್ ಜ್ಯೂಬಿಲಿ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ೫೬ ವಿದ್ಯಾರ್ಥಿಗಳ ಪೈಕಿ ೫೨ ಹಾಗು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ೬೮ ವಿದ್ಯಾರ್ಥಿಗಳ ಪೈಕಿ ೬೦ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟು ೧೨ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ. 

ಸ್ನೇಹ ಜೀವಿ ಬಳಗದಿಂದ ಕೆಂಪೇಗೌಡ ಜಯಂತಿ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

 ಭದ್ರಾವತಿ ಸ್ನೇಹ ಜೀವಿ ಬಳಗದ ವತಿಯಿಂದ ಪೊಲೀಸ್ ಉಮೇಶ್ ನೇತೃತ್ವದಲ್ಲಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಆಟೋ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಜೂ. ೨೭ : ಸ್ನೇಹ ಜೀವಿ ಬಳಗದ ವತಿಯಿಂದ ಪೊಲೀಸ್ ಉಮೇಶ್ ನೇತೃತ್ವದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಸೋಮವಾರ ಅದ್ದೂರಿಯಾಗಿ ಆಚರಿಸಲಾಯಿತು.
    ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಆಟೋ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸಿಹಿ ಹಂಚಿಕೆ ಹಾಗು ಅನ್ನಸಂತರ್ಪಣೆ ನಡೆಸಲಾಯಿತು. ಅಲ್ಲದೆ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಮಹಿಳೆಯರಿಗೆ ಉಚಿತವಾಗಿ ಸೀರೆ ವಿತರಿಸಲಾಯಿತು.
    ಪೊಲೀಸ್ ಉಮೇಶ್ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸುವ ಮೂಲಕ ಅವರಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯ ಕೈಗೊಳ್ಳಲಾಗುವುದು ಎಂದರು.
    ಕೆಂಪೇಗೌಡರ ಜಯಂತಿಯಂದು ಮಹಿಳೆಯರನ್ನು ವಿಶೇಷವಾಗಿ ಗೌರವಿಸುವ ಮೂಲಕ ಉಚಿತವಾಗಿ ಸೀರೆ ವಿತರಿಸಲಾಗುತ್ತಿದೆ. ಪ್ರತಿಯೊಂದು ಕಾರ್ಯದ ಹಿಂದೆ ಮಹಿಳೆಯರು ಇದ್ದಾರೆ. ಅವರನ್ನು ಸಮಾಜದಲ್ಲಿ ಪ್ರತಿಯೊಬ್ಬರು ಗೌರವಿಸುವ ಜೊತೆಗೆ ಅವರನ್ನು ಸಮಾನವಾಗಿ ಕಾಣಬೇಕೆಂಬ ಆಶಯ ಇದಾಗಿದೆ ಎಂದರು.
    ತಾಲೂಕು ಆಟೋ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಲಕ್ಷ್ಮಣ ಮಾತನಾಡಿ, ಸ್ನೇಹ ಜೀವಿ ಬಳಗದ ವತಿಯಿಂದ ಉತ್ತಮ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ತಾಲೂಕು ಒಕ್ಕಲಿಗರ ಸಂಘದ ಮಹಿಳಾ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ಸತೀಶ್, ಕಸಾಪ ಮಾಜಿ ಅಧ್ಯಕ್ಷ ಅಪೇಕ್ಷ ಮಂಜುನಾಥ್, ಸಂದೇಶ್‌ಗೌಡ, ಸುಹಾಸ್‌ಗೌಡ ಸೇರಿದಂತೆ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.

ನಾಡಪ್ರಭು ಕೆಂಪೇಗೌಡರು ಜಾತ್ಯಾತೀತ ಮನೋಭಾವದ ವ್ಯಕ್ತಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗು ವಿವಿಧ ಸಂಘಟನೆಗಳ ವತಿಯಿಂದ ಸೋಮವಾರ ಸಿದ್ದರೂಢ ನಗರದ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಶಾಸಕ ಬಿ.ಕೆ ಸಂಗಮೇಶ್ವರ ಉದ್ಘಾಟಿಸಿದರು.
    ಭದ್ರಾವತಿ, ಜೂ. ೨೭ : ನಾಡಪ್ರಭು ಕೆಂಪೇಗೌಡರು ಜಾತ್ಯಾತೀತ ಮನೋಭಾವದವರಾಗಿದ್ದು, ಕೇವಲ ಒಂದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಕೆಂಪೇಗೌಡರ ದಾರಿಯಲ್ಲಿ ನಾವೆಲ್ಲರೂ ಸಾಗಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗು ವಿವಿಧ ಸಂಘಟನೆಗಳ ವತಿಯಿಂದ ಸೋಮವಾರ ಸಿದ್ದರೂಢ ನಗರದ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಪ್ರಸ್ತುತ ಬೆಂಗಳೂರು ಮಹಾನಗರವನ್ನು ವಿಶ್ವವೇ ಎದುರು ನೋಡುವಂತಾಗಿದೆ. ಇಂತಹ ನಗರ ನಿರ್ಮಾಣಕ್ಕೆ ಕೆಂಪೇಗೌಡರ ಜಾತ್ಯಾತೀತ ಮನೋಭಾವ ಕಾರಣವಾಗಿದೆ. ಎಲ್ಲರನ್ನು ಒಗ್ಗೂಡಿಸಿ ಆಧುನಿಕ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದಾರೆ. ಇಂತಹ ಆದರ್ಶ ವ್ಯಕ್ತಿಯನ್ನು ನಾವೆಲ್ಲರೂ ಸ್ಮರಿಸುವ ಮೂಲಕ ಅವರ ದಾರಿಯಲ್ಲಿ ಸಾಗಬೇಕಾಗಿದೆ ಎಂದರು.
    ಕ್ಷೇತ್ರದಲ್ಲಿರುವ ಒಕ್ಕಲಿಗರ ಸಮುದಾಯದ ಏಳಿಗೆಗೆ ಬದ್ಧನಾಗಿದ್ದು, ಈ ಹಿಂದೆ ಸಮುದಾಯ ಭವನ ನಿರ್ಮಾಣಕ್ಕೆ ೧ ಕೋ. ರು. ಬಿಡುಗಡೆ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಸಮುದಾಯವರು ಯಾರು ಸಹ ಮುಂದೆ ಬಂದಿಲ್ಲ. ಈಗಲೂ ಸಹ ಅನುದಾನ ಬಿಡುಗಡೆ ಮಾಡಿಸಿಕೊಡಲು ಸಿದ್ದವಿದ್ದೇನೆ ಎಂದರು.
    ಉಪನ್ಯಾಸ ನೀಡಿದ ಕುವೆಂಪು ವಿಶ್ವ ವಿದ್ಯಾನಿಲಯದ ಪ್ರೊ. ಇ. ಚಂದ್ರಶೇಖರ್, ಕೆಂಪೇಗೌಡರು ಒಬ್ಬ ರಾಜನಾಗಿ, ಸಾಮಾಜಿಕ ಸುಧಾರಕನಾಗಿ ಸ್ವಾಮಿ ನಿಷ್ಠೆಯನ್ನು ಪ್ರಾಮಾಣಿಕವಾಗಿ ಪಾಲಿಸಿಕೊಂಡು ಬಂದವರು. ಇವರ ನಡೆ ವಿಭಿನ್ನ ರೀತಿಯಿಂದ ಕೂಡಿದ್ದು, ವೈಶಿಷ್ಟ್ಯ ಪೂರ್ಣವಾಗಿದೆ. ಇವರು ಹೊಂದಿದ್ದ ಜನರ ಬಗೆಗಿನ ಕಾಳಜಿ, ದೂರದೃಷ್ಟಿ, ಆಡಳಿತ ವೈಖರಿಗಳು ಎಲ್ಲರನ್ನು ಬೆರಗುಗೊಳಿಸುತ್ತವೆ ಎಂದರು.
    ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ ಮಾತನಾಡಿ, ಕೆಂಪೇಗೌಡ ಜಯಂತಿ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಸರ್ಕಾರದ ನೀತಿ ನಿರೂಪಣೆಯಂತೆ ಕಾರ್ಯಕ್ರಮ ಆಯೋಜನೆ ಮಾಡಿರುವುದು ಸರಿಯಷ್ಟೆ, ಇದರಿಂದಾಗಿ ಈ ಬಾರಿ ಕೆಲವು ಗೊಂದಲಗಳು ಉಂಟಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನು ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್. ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಲತಾ ಚಂದ್ರಶೇಖರ್, ಶೃತಿ ವಸಂತ್, ಪಲ್ಲವಿ ದಿಲೀಪ್, ಅನುಪಮಾ ಚನ್ನೇಶ್, ಅನುಸುಧಾ, ಅನಿತಾ ಮಲ್ಲೇಶ್, ಬಿ.ಪಿ ಸ್ವರ್ಣಮಂಗಳ ಭೈರಪ್ಪ, ಕೋಟೇಶ್ವರ ರಾವ್, ಮಣಿ ಎಎನ್‌ಎಸ್, ಕಾಂತರಾಜ್, ಜಯಶೀಲ ಸುರೇಶ್, ಸವಿತಾ ಉಮೇಶ್, ಕೋಟೇಶ್ವರರಾವ್, ಉದಯಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಮತಿ ಕಾರಂತ್ ತಂಡವರು ಪ್ರಾರ್ಥಿಸಿದರು. ಶಿರಸ್ತೇದಾರ್ ರಾಧಾಕೃಷ್ಣಭಟ್ ಸ್ವಾಗತಿಸಿದರು. ಉಪ ತಹಸೀಲ್ದಾರ್ ಮಂಜ್ಯಾನಾಯ್ಕ ನಿರೂಪಿಸಿದರು.


ಕೆಂಪೇಗೌಡ ಜಯಂತಿ ಬೃಹತ್ ಮೆರವಣಿಗೆಗೆ ಬಿ.ಕೆ ಸಂಗಮೇಶ್ವರ್ ಚಾಲನೆ



ಭದ್ರಾವತಿ, ಜೂ. ೨೭: ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗು ವಿವಿಧ ಸಂಘಟನೆಗಳ ವತಿಯಿಂದ ಸೋಮವಾರ ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಮೆರವಣಿಗೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಚಾಲನೆ ನೀಡಿದರು.
ಬಿ.ಎಚ್ ರಸ್ತೆ ಅಪ್ಪರ್ ಹುತ್ತಾದಿಂದ ಸಭಾ ವೇದಿಕೆವರೆಗೂ ನಾಡಪ್ರಭು ಕೆಂಪೇಗೌಡ ಹಾಗೂ ಶ್ರೀ ಕ್ಷೇತ್ರ ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಭಾವಚಿತ್ರ ಹಾಗು ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಬೃಹತ್ ಮೆರವಣಿಗೆ ಬಿ.ಎಚ್ ರಸ್ತೆ ಮೂಲಕ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ, ತಾಲೂಕು ಕಛೇರಿ ರಸ್ತೆಯಲ್ಲಿ ಸಾಗಿ ಕೆಎಸ್‌ಆರ್‌ಟಿಸಿ ಡಿಪೋ ವೃತ್ತ ಮೂಲಕ ಸಿದ್ದಾರೂಢನಗರದ ಬಸವೇಶ್ವರ ಸಭಾ ಭವನದ ವರೆಗೂ ಸಾಗಿತು.
ಪುರುಷ ಮತ್ತು ಮಹಿಳೆಯರ ಡೊಳ್ಳು ಕುಣಿತ, ಗೊಂಬೆ ನೃತ್ಯ ಸೇರಿದಂತೆ ಇನ್ನಿತರ ಕಲಾತಂಡಗಳು ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿದವು. ಕೆಂಪೇಗೌಡ ವೇಷದಾರಿ ಎಲ್ಲರ ಗಮನ ಸೆಳೆದರು.
ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಜಿಲ್ಲಾಧ್ಯಕ್ಷ ಎಂ ಶ್ರೀಕಾಂತ್, ಎಂಎಸ್ಎಂಇ ಘಟಕದ ರಾಜ್ಯಾಧ್ಯಕ್ಷ ಎಚ್.ಸಿ ರಮೇಶ್, ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಬಾಲಕೃಷ್ಣ, ತಿಮ್ಮೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ ಯೋಗೇಶ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ ಹಾಗೂ ಪದಾಧಿಕಾರಿಗಳು, ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷ ಎಂ.ಎಸ್ ಸುಧಾಮಣಿ ಹಾಗೂ ಪದಾಧಿಕಾರಿಗಳು, ಕೆಂಪೇಗೌಡ ಯುವ ಪಡೆ ಅಧ್ಯಕ್ಷ ಆರ್. ಮೋಹನ್ ಕುಮಾರ್ ಪದಾಧಿಕಾರಿಗಳು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್. ರಮೇಶ್, ನಗರಸಭೆ ಅಧ್ಯಕ್ಷೆ ಗೀತ ರಾಜಕುಮಾರ್,  ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಮನು ಕುಮಾರ್ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು, ನಗರಸಭೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಒಕ್ಕಲಿಗ ಸಮಾಜದ ಮುಖಂಡರು ಗಣ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.



ಅನಸೂಯಾ ನಿಧನ

ಅನಸೂಯಾ
ಭದ್ರಾವತಿ, ಜೂ. ೨೭ : ಹಳೇನಗರದ ಭೂತನಗುಡಿ ನಿವಾಸಿ, ಅನಿಲ್ ಸ್ಟೋರ್‍ಸ್‌ನ ಟಿ.ಎಚ್ ಶ್ರೀನಿವಾಸ್ ಶೆಟ್ಟಿ ಅವರ ಪತ್ನಿ ಅನಸೂಯಾ(೭೩) ಭಾನುವಾರ ರಾತ್ರಿ ನಿಧನ ಹೊಂದಿದರು.
  ಪತಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿದ್ದರು. ಮೃತರ ಅಂತ್ಯಕ್ರಿಯೆ ಸೋಮವಾರ ಹೊಳೆಹೊನ್ನೂರು ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಮೃತರ ನಿಧನಕ್ಕೆ ಆರ್ಯವೈಶ್ಯ ಸಮಾಜ ಸಂತಾಪ ಸೂಚಿಸಿದೆ.


Sunday, June 26, 2022

ಮಾದಕ ವಸ್ತುಗಳ ಕಳ್ಳಸಾಗಣೆ : ದೇಶದ ಯುವ ಶಕ್ತಿಗೆ ಮಾರಕ

ಭದ್ರಾವತಿ ಕಾಗದನಗರದ ಆಂಗ್ಲ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾದಕ ವ್ಯಸನ ಮತ್ತು ಕಳ್ಳ ಸಾಗಣೆ ವಿರುದ್ಧ ಜಾಗೃತಿ ಮಾಸಾಚರಣೆ ಕಾರ್ಯಕ್ರಮವನ್ನು ಪೇಪರ್‌ಟೌನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಇ.ಓ ಮಂಜುನಾಥ್  ಉದ್ಘಾಟಿಸಿ ಮಾತನಾಡಿದರು.
    ಭದ್ರಾವತಿ, ಜೂ. ೨೬: ಮಾದಕ ವಸ್ತುಗಳ ಸೇವನೆಯಿಂದಾಗಿ ಸಮಾಜದಲ್ಲಿ ಕಾನೂನು ಬಾಹಿರ ಕೃತ್ಯಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಯುವ ಸಮೂಹ ದಾರಿ ತಪ್ಪುವಂತಾಗಿದೆ ಎಂದು ಪೇಪರ್‌ಟೌನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಇ.ಓ ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.
    ಅವರು ಕಾಗದನಗರದ ಆಂಗ್ಲ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾದಕ ವ್ಯಸನ ಮತ್ತು ಕಳ್ಳ ಸಾಗಣೆ ವಿರುದ್ಧ ಜಾಗೃತಿ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಮಾದಕ ವಸ್ತುಗಳ ಸೇವನೆ ಚಟಕ್ಕೆ ಒಳಗಾದವರನ್ನು ಗುರಿಯಾಗಿಸಿಕೊಂಡು ಕಳ್ಳ ಸಾಗಣೆದಾರರು ಅಕ್ರಮವಾಗಿ ಮಾದಕ ವಸ್ತುಗಳನ್ನು ದೇಶಕ್ಕೆ ಸಾಗಾಣೆ ಮಾಡಿಕೊಳ್ಳುವ ಮೂಲಕ ದೇಶದ ಯುವ ಶಕ್ತಿಗೆ ಮಾರಕವಾಗುತ್ತಿದ್ದಾರೆ. ಮಾದಕ ವಸ್ತುಗಳ ಬಳಕೆ ಮತ್ತು ಅವುಗಳ ಕಳ್ಳ ಸಾಗಣೆ ಜಾಗತಿಕ ಸಮಸ್ಯೆಯಾಗಿದ್ದು, ಯುವಕರು ಜಾಗೃತರಾಗಿ ಇದರ ವಿರುದ್ಧ  ಹೋರಾಟ ನಡೆಸಬೇಕೆಂದು ಕರೆ ನೀಡಿದರು.
    ಎಂಪಿಎಂ ಶಿಕ್ಷಣ ಸಂಸ್ಥೆ ಖಜಾಂಚಿ ರವಿಕುಮಾರ್ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದಾಗಿ ಯುವ ಸಮುದಾಯ ಹಲವು ಕಾಯಿಲೆಗಳಿಗೆ ತುತ್ತಾಗುವ ಜೊತೆಗೆ ಸಮಾಜದಲ್ಲಿ ದಾರಿ ತಪ್ಪುವಂತಾಗುತ್ತದೆ. ಈ ಹಿನ್ನಲೆಯಲ್ಲಿ ಎಚ್ಚರ ವಹಿಸುವ ಮೂಲಕ ಮಾದಕ ವಸ್ತುಗಳಿಂದ ದೂರವಿರಬೇಕೆಂದರು.
    ಪ್ರಾಂಶುಪಾಲ ಆರ್. ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಡಿ. ನಾಗರಾಜ್ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗು ಚಿತ್ರಕಲಾ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಿಕ್ಷಕರಾದ ಹೆನ್ರಿ, ಅನುರಾಧ, ದಿವ್ಯ, ವರಲಕ್ಷ್ಮಿ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸ್ನೇಹಜೀವಿ ಬಳಗದಿಂದ ನಾಡಪ್ರಭು ಕೆಂಪೇಗೌಡರ ಜಯಂತಿ

ಪೊಲೀಸ್ ಉಮೇಶ್
    ಭದ್ರಾವತಿ, ಜೂ. ೨೬ : ಸ್ನೇಹ ಜೀವಿ ಬಳಗದ ವತಿಯಿಂದ ಪೊಲೀಸ್ ಉಮೇಶ್ ನೇತೃತ್ವದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಜೂ. ೨೭ರಂದು ಬೆಳಿಗ್ಗೆ ೯ ಗಂಟೆಗೆ ನಗರದ ಬಿ.ಎಚ್ ರಸ್ತೆ  ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಆಟೋ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದೆ.
    ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಸಿಹಿ ಹಂಚಿಕೆ, ಅನ್ನಸಂತರ್ಪಣೆ ಸಹ ಏರ್ಪಡಿಸಲಾಗಿದೆ. ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರು, ಸಮಾಜದ ಗಣ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪೊಲೀಸ್ ಉಮೇಶ್ ಕೋರಿದ್ದಾರೆ.

ಜೂ.೨೭ರಂದು ನಾಡಪ್ರಭು ಕೆಂಪೇಗೌಡರ ಜಯಂತಿ

    ಭದ್ರಾವತಿ, ಜೂ. ೨೬: ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗು ವಿವಿಧ ಸಂಘಟನೆಗಳ ವತಿಯಿಂದ ಜೂ.೨೭ರಂದು ಬೆಳಿಗ್ಗೆ ೧೧ ಗಂಟೆಗೆ ನಾಡಪ್ರಭು ಕೆಂಪೇಗೌಡ ಜಯಂತಿ ಬಸವೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಬಿ ಅಶೋಕ್‌ನಾಯ್ಕ್ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ ನಾರಾಯಣಗೌಡ, ಗೃಹ ಸಚಿವ ಅರಗ ಜ್ಞಾನೇಂದ್ರ, ಸಂಸದ ಬಿ.ವೈ ರಾಘವೇಂದ್ರ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್.ಎಲ್ ಭೋಜೇಗೌಡ, ಎಸ್. ರುದ್ರೇಗೌಡ, ಭಾರತಿ ಶೆಟ್ಟಿ, ಡಿ.ಎಸ್ ಅರುಣ್, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ತಹಸೀಲ್ದಾರ್ ಆರ್. ಪ್ರದೀಪ್, ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ಕುಮಾರ್ ದಯಾಮ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್. ರಮೇಶ್, ನಗರಸಭೆ ಪೌರಾಯುಕ್ತ ಮನುಕುಮಾರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
    ಕುವೆಂಪು ವಿಶ್ವ ವಿದ್ಯಾನಿಲಯದ ಪ್ರೊ. ಈ ಚಂದ್ರಶೇಖರ್ ಉಪನ್ಯಾಸ ನೀಡಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ತಹಸೀಲ್ದಾರ್ ಆರ್. ಪ್ರದೀಪ್ ಕೋರಿದ್ದಾರೆ.  
    ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಮೆರವಣಿಗೆ :
    ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ, ತಾಲೂಕು ಒಕ್ಕಲಿಗರ ಸಂಘ, ಕೆಂಪೇಗೌಡ ಯುವಪಡೆ ಹಾಗು ಇನ್ನಿತರ ಸಂಘಟನೆಗಳ ನೇತೃತ್ವದಲ್ಲಿ ಬೆಳಿಗ್ಗೆ ೯ ಗಂಟೆಗೆ ನಗರದ ಬಿ.ಎಚ್ ರಸ್ತೆ ಅಪ್ಪರ್ ಹುತ್ತಾದಿಂದ ಸಭಾ ವೇದಿಕೆವರೆಗೂ ನಾಡಪ್ರಭು ಕೆಂಪೇಗೌಡರ ಭಾವಚಿತ್ರ ಹಾಗು ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಬೃಹತ್ ಮೆರವಣಿಗೆ ನಡೆಯಲಿದೆ.
    ಒಕ್ಕಲಿಗರ ಸಂಘದಿಂದ ಆಚರಣೆ :
    ತಾಲೂಕು ಒಕ್ಕಲಿಗರ ಸಂಘ ದಿಂದ ಸಂಜೆ ೫.೩೦ಕ್ಕೆ  ಅಪ್ಪರ್ ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ನಡೆಯಲಿದೆ. ಸಂಘದ ಅಧ್ಯಕ್ಷ ಎ.ಟಿ ರವಿ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕಾರ್ಯದರ್ಶಿ ಆರ್. ಪ್ರಕಾಶ್ ಕೋರಿದ್ದಾರೆ.

Saturday, June 25, 2022

ನ್ಯಾಯವಾದಿ ಎ.ಎನ್ ಕಾರ್ತಿಕ್ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕಾರ

ಭದ್ರಾವತಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಎ.ಎನ್ ಕಾರ್ತಿಕ್ ಶನಿವಾರ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.
    ಭದ್ರಾವತಿ, ಜೂ. ೨೫: ನಗರದ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಎ.ಎನ್ ಕಾರ್ತಿಕ್ ಶನಿವಾರ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.
    ಲಯನ್ಸ್ ಕ್ಲಬ್ ೨ನೇ ಜಿಲ್ಲಾ ಉಪ ಗೌರ್ವನರ್ ಮಹಮದ್ ಹನೀಫ್ ಪದಗ್ರಹಣ ಬೋಧಿಸಿದರು. ದೈವಜ್ಞ ಬ್ರಾಹ್ಮಣ ಸಂಘದ ಎಂ. ನಾಗರಾಜ ಶೇಟ್ ಕಾರ್ಯದರ್ಶಿಯಾಗಿ ಹಾಗು ಜಿ.ಪಿ ದರ್ಶನ್ ಖಜಾಂಚಿಯಾಗಿ, ಉಳಿದಂತೆ  ಲಿಯೋ ಕ್ಲಬ್ ಅಧ್ಯಕ್ಷರಾಗಿ ನಿಖಿತಾ ಎನ್ ಶೇಟ್, ಕಾರ್ಯದರ್ಶಿಯಾಗಿ ಆರ್. ಶ್ರೇಷ್ಠ ಮತ್ತು ಖಜಾಂಚಿಯಾಗಿ ಮೋನಾಲ್ ಕೆ. ಗೌಡ ಹಾಗು ಇನ್ನಿತರರು ಅಧಿಕಾರ ಸ್ವೀಕರಿಸಿದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಕ್ಲಬ್ ಪ್ರಮುಖರಾದ ಬಿ. ದಿವಾಕರ ಶೆಟ್ಟಿ, ಹೆಬ್ಬಂಡಿ ನಾಗರಾಜ್, ನಿಕಟಪೂರ್ವ ಪದಾಧಿಕಾರಿಗಳಾದ ಬಿ.ಎಸ್ ಮಹೇಶ್‌ಕುಮಾರ್, ಡಿ. ಶಂಕರಮೂರ್ತಿ, ವಿನೋದ್ ಗಿರಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜೂ.೨೮ರ ಉಚಿತ ಬೃಹತ್ ಆರೋಗ್ಯ ಶಿಬಿರ ಯಶಸ್ವಿಗೊಳಿಸಲು ಸಂಸದರ ಸಲಹೆ

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಭದ್ರಾವತಿಯಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಜೂ.೨೮ರಂದು ಹಮ್ಮಿಕೊಳ್ಳಲಾಗಿದ್ದು, ಶಿಬಿರ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶನಿವಾರ ಸಂಸದ ಬಿ.ವೈ ರಾಘವೇಂದ್ರ ಬಿಜೆಪಿ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಸಿದರು.
    ಭದ್ರಾವತಿ, ಜೂ. ೨೫ : ಕ್ಷೇತ್ರದಲ್ಲಿರುವ ಅಸಂಘಟಿತ ಹಾಗು ವಲಸೆ ಕಾರ್ಮಿಕರು ಮತ್ತು ಅವರ ಅವಲಂಬಿತ ಕುಟುಂಬ ವರ್ಗದವರ ಆರೋಗ್ಯ ಕಾಳಜಿ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಜೂ.೨೮ರಂದು ಹಮ್ಮಿಕೊಳ್ಳಲಾಗಿದ್ದು, ಶಿಬಿರ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶನಿವಾರ ಸಂಸದ ಬಿ.ವೈ ರಾಘವೇಂದ್ರ ಬಿಜೆಪಿ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಸಿದರು.
    ಕ್ಷೇತ್ರದಲ್ಲಿರುವ ಅಸಂಘಟಿತ ಹಾಗು ವಲಸೆ ಕಾರ್ಮಿಕರು ಮತ್ತು ಅವರ ಅವಲಂಬಿತ ಕುಟುಂಬ ವರ್ಗದವರನ್ನು ಗುರುತಿಸಿ ಉಚಿತ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಶಿವಮೊಗ್ಗ ಮ್ಯಾಕ್ಸ್ ಆಸ್ಪತ್ರೆ ಸಹಯೋಗದೊಂದಿಗೆ ಕಾರ್ಮಿಕರ ಕಲ್ಯಾಣ ಮಂಡಳಿ ಮುಂದಾಗಿದೆ. ಜೂ.೨೮ರಂದು ಬೆಳಿಗ್ಗೆ ೯ ಗಂಟೆಗೆ ಶಿಬಿರ ಆರಂಭಗೊಳ್ಳಲಿದ್ದು, ಎಲ್ಲಾ ರೀತಿಯ ಕಾಯಿಲೆಗಳ ತಪಾಸಣೆ ನಡೆಯಲಿದೆ. ಹೆಚ್ಚಿನ ಚಿಕಿತ್ಸೆಗೂ ಅವಕಾಶ ಕಲ್ಪಿಸಿಕೊಡಲಿದ್ದು, ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.  ಬೃಹತ್ ಶಿಬಿರ ಇದಾಗಿದ್ದು, ಪಕ್ಷದ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಕಾಳಜಿವಹಿಸಿ ಶಿಬಿರ ಯಶಸ್ವಿಗೊಳಿಸುವಂತೆ ಸಂಸದರು ಸಲಹೆ ನೀಡಿದರು.
    ಸಭೆಯಲ್ಲಿ ಪಕ್ಷದ ಪ್ರಮುಖರಾದ ಎಂ. ಪ್ರಭಾಕರ್, ಬಿ.ಕೆ ಶ್ರೀನಾಥ್, ಎಸ್. ಕುಮಾರ್, ಮಂಗೋಟೆ ರುದ್ರೇಶ್, ಜಿ. ಆನಂದ್‌ಕುಮಾರ್, ಹೇಮಾವತಿ ವಿಶ್ವನಾಥ್, ಕೆ. ಮಂಜುನಾಥ್, ರಾಮಲಿಂಗಯ್ಯ, ಚಂದ್ರಪ್ಪ, ಶಶಿಕಲಾ, ಅನ್ನಪೂರ್ಣ, ಪ್ರಭಾಕರ್, ರವಿಕುಮಾರ್, ಕರಿಗೌಡ, ಕವಿತಾ ರಾವ್, ಬಿ.ಎಸ್ ನಾರಾಯಣಪ್ಪ, ರಾಮನಾಥ್ ಬರ್ಗೆ, ಚನ್ನೇಶ್, ಶೋಭಾ ಪಾಟೀಲ್, ಮಂಜುಳ, ಎಸ್.ಎನ್ ನಾಗಮಣಿ, ಗೋಕುಲ್‌ಕೃಷ್ಣ, ನಕುಲ್, ಧನುಷ್, ಮಲ್ಲೇಶ್, ವಿಜಯ್, ಚಂದ್ರು ದೇವರಹಳ್ಳಿ ಸೇರಿದಂತೆ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

೫ ಕೋ.ರು ವೆಚ್ಚದ ಕಾರ್ಮಿಕರ ಭವನ ಮಂಜೂರಾತಿ : ಜೂ.೨೮ರಂದು ಗುದ್ದಲಿ ಪೂಜೆ

ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ಪೂರ್ವಭಾವಿ ಸಭೆ

೫ ಕೋ.ರು ವೆಚ್ಚದಲ್ಲಿ ಭದ್ರಾವತಿ ಉಜ್ಜನಿಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾರ್ಮಿಕರ ಭವನದ ಗುದ್ದಲಿ ಪೂಜೆ ಕಾರ್ಯಕ್ರಮದ ಪೂರ್ವಭಾವಿ ಸಭೆ ಶನಿವಾರ ಸಂಸದ ಬಿ.ವೈ ರಾಘವೇಂದ್ರ ನೇತೃತ್ವದಲ್ಲಿ ನಡೆಯಿತು.
    ಭದ್ರಾವತಿ, ಜೂ. ೨೫ : ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನಗರದಲ್ಲಿ ನೂತನ ಕಾರ್ಮಿಕರ ಭವನ ಮಂಜೂರಾತಿಯಾಗಿದ್ದು, ಸುಮಾರು ೫ ಕೋ. ರು. ವೆಚ್ಚದ ಭವನದ ಗುದ್ದಲಿ ಪೂಜೆ ಜೂ.೨೮ರಂದು ನಡೆಯಲಿದೆ. ಈ ಸಂಬಂಧ ಸಂಸದ ಬಿ.ವೈ ರಾಘವೇಂದ್ರ ಶನಿವಾರ ನಗರದ ಲೋಕೋಪಯೋಗಿ ಇಲಾಖೆ ಅತಿಥಿ ಗೃಹದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಿದರು.
    ಕ್ಷೇತ್ರದಲ್ಲಿ ಅಸಂಘಟಿತ ಹಾಗು ವಲಸೆ ಕಾರ್ಮಿಕರು ಹೆಚ್ಚಾಗಿದ್ದು, ಅಲ್ಲದೆ ವಲಸೆ ಕಾರ್ಮಿಕರ ಅನುಕೂಲಕ್ಕಾಗಿ ತಾತ್ಕಾಲಿಕ ವಸತಿ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಕಾರ್ಮಿಕರ ಭವನದಲ್ಲಿ ವಸತಿ ಸಮುಚ್ಚಯ ನಿರ್ಮಾಣಗೊಳ್ಳಲಿದೆ. ಎಂಪಿಎಂ ಕಾರ್ಖಾನೆ ಸೇರಿದ ಉಜ್ಜನಿಪುರ ವ್ಯಾಪ್ತಿಯಲ್ಲಿ ೨ ಎಕರೆ ಜಮೀನು ಮಂಜೂರಾತಿ ಮಾಡಲಾಗಿದೆ. ಭವನ ನಿರ್ಮಾಣಕ್ಕೆ ಜೂ.೨೮ರಂದು ಮಧ್ಯಾಹ್ನ ೧ ಗಂಟೆಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಕಾರ್ಯಕ್ರಮದ ಪೂರ್ವಭಾವಿಯಾಗಿ ಸಂಸದರು ವಿವಿಧ ಕಾರ್ಮಿಕ ಸಂಘಟನೆಗಳು, ತಹಸೀಲ್ದಾರ್, ನಗರಸಭೆ ಅಧಿಕಾರಿಗಳು ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
    ತಹಸೀಲ್ದಾರ್ ಆರ್. ಪ್ರದೀಪ್, ಜಿಲ್ಲಾ ಕಾರ್ಮಿಕ ಅಧಿಕಾರಿ, ಕಾರ್ಮಿಕ ನಿರೀಕ್ಷಕರು, ನಗರಸಭೆ ಅಧಿಕಾರಿಗಳು, ಕರ್ನಾಟಕ ಸ್ಟೇಟ್ ಕನಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು, ತಾಲೂಕು ಅಧ್ಯಕ್ಷ ಚಂದ್ರಶೇಖರ್ ಹಾಗು ಪದಾಧಿಕಾರಿಗಳು ಉಪಸ್ಥಿತರಿದ್ದರು.

Friday, June 24, 2022

ವಿಇಎಸ್ ವಿದ್ಯಾಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಕೆ. ಶ್ಯಾಮಣ್ಣ ನಿಧನ




ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತರ ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ನಿವೃತ್ತ ದೈಹಿಕ ಶಿಕ್ಷಕರು ಕೆ. ಶ್ಯಾಮಣ್ಣ(82) ಶನಿವಾರ ಬೆಳಗ್ಗೆ ನಿಧನಹೊಂದಿದರು. ಪತ್ನಿ ಓರ್ವ ಪುತ್ರ ಇಬ್ಬರು ಪುತ್ರಿಯರನ್ನು ಹೊಂದಿದ್ದರು. ಕೆಲವು ವರ್ಷಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಶ್ಯಾಮಣ್ಣ ಅವರು ದೈಹಿಕ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ್ದರು. ಕ್ರೀಡಾಕ್ಷೇತ್ರದಲ್ಲಿ ಹಲವು ಸಾಧನೆಗಳನ್ನು ಮಾಡುವ ಮೂಲಕ ಯುವ ಕ್ರೀಡಾಪಟುಗಳಿಗೆ ಮಾರ್ಗದರ್ಶಕರು. ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಎರಡು ಬಾರಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ  ಅಧ್ಯಕ್ಷರಾಗಿ, ಪದಾಧಿಕಾರಿಯಾಗಿ ಸೇವೆಸಲ್ಲಿಸಿದ್ದರು. ಅಲ್ಲದೆ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಗೌರವ ಅಧ್ಯಕ್ಷರಾಗಿದ್ದರು. ಇವರ ನಿಧನಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಪ್ಪ  ಹಾಗೂ ಪದಾಧಿಕಾರಿಗಳು, ಮಾಜಿ ಅಧ್ಯಕ್ಷ ಎನ್. ಕೃಷ್ಣಪ್ಪ, ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆ ಸಂಸ್ಥಾಪಕರಾದ ಡಾ.ಜಿ.ಎಂ ನಟರಾಜ್, ಬಿ ಎಲ್ ರಂಗಸ್ವಾಮಿ,  ಸರ್ಕಾರಿ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು, ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರ ಗಣ್ಯರು, ವಿವಿಧ ಸಂಘ ಸಂಸ್ಥೆಗಳು ಸಂತಾಪ ಸೂಚಿಸಿವೆ.


Android ಗಾಗಿ Outlook ಪಡೆಯಿರಿ

ಮಕ್ಕಳು ಮಾದಕ ವ್ಯಸನಕ್ಕೆ ಬಲಿಯಾಗದಂತೆ ಎಚ್ಚರವಹಿಸಿ : ಬಿ.ಜಿ ಧನಂಜಯ

ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಅರಕ್ಷಕ ಇಲಾಖೆ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಲಾಗಿದ್ದ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳಸಾಗಾಣಿಕೆ ವಿರುದ್ದ ಜಾಗೃತಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಅಧ್ಯಕ್ಷತೆವಹಿಸಿ ಮಾತನಾಡಿದರು.
    ಭದ್ರಾವತಿ, ಜೂ. ೨೪; ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರವಹಿಸುವ ನಿಟ್ಟಿನಲ್ಲಿ ಪೋಷಕರ ಪಾತ್ರ ಪ್ರಮುಖವಾಗಿದೆ ಎಂದು ಹೊಸಮನೆ ಸರ್ಕಾರಿ ಪ್ರಥಮ ದರ್ಜೇ ಕಾಲೇಜು ಪ್ರಾಂಶುಪಾಲ ಡಾ. ಬಿ.ಜಿ.ಧನಂಜಯ ಹೇಳಿದರು.
ಅವರು ಶುಕ್ರವಾರ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಅರಕ್ಷಕ ಇಲಾಖೆ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಲಾಗಿದ್ದ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳಸಾಗಾಣಿಕೆ ವಿರುದ್ದ ಜಾಗೃತಿ ಮಾಸಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
    ವ್ಯಸನಮುಕ್ತರಾದ ಯುವ ಜನತೆಯಿಂದ ಮಾತ್ರ ಬಲಿಷ್ಟ ರಾಷ್ಟ್ರ ನಿರ್ಮಾಣ ಸಾಧ್ಯ. ಹಿನ್ನಲೆಯಲ್ಲಿ ಪೋಷಕರು ತಮ್ಮ ಮಕ್ಕಳ ಚಲನವಲನಗಳ ಮೇಲೆ ನಿಗಾವಹಿಸಬೇಕು. ವಿದ್ಯಾರ್ಥಿಗಳು ನೆರೆಹೊರೆಯವರು ಹಾಗೂ ಸಮಾಜದಲ್ಲಿನ ಪ್ರತಿಯೊಬ್ಬರನ್ನೂ ಗೌರವದಿಂದ ಪ್ರೀತಿ, ವಿಶ್ವಾಸದಿಂದ ಕಾಣಬೇಕು. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು. ಯಾವುದೇ ಕಾರಣಕ್ಕೂ ಮಾದಕ ವ್ಯಸನಕ್ಕೆ ಬಲಿಯಾಗದಂತೆ ಎಚ್ಚರವಹಿಸಬೇಕೆಂದರು.
    ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯ ಅರಕ್ಷಕ ಠಾಣಾಧಿಕಾರಿ  ಶಾಂತಲಾ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಯುವಕರು ದುಶ್ಚಟಗಳಿಂದ ದೂರವಿದ್ದು ಆರೋಗ್ಯ ರಕ್ಷಣೆಯ ಕಡೆಗೆ ಗಮನಹರಿಸಬೇಕು. ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟ ಕಾನೂನು ಬಾಹಿರವಾಗಿದ್ದು, ವಿದ್ಯಾರ್ಥಿಗಳು ಇವುಗಳಿಂದು ದೂರವಿರಬೇಕೆಂದರು.
    ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಎನ್. ಕುಮಾರ್ ಮಾತನಾಡಿ, ಇಂದಿನ ಯುವ ಸಮೂಹ ವಿನೋದಕ್ಕಾಗಿ ಕಲಿಯುವ ದುಶ್ಚಟಗಳೇ ಅವರ ಭವಿಷ್ಯವನ್ನು ಬಲಿ ತೆಗೆದುಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಉಪನ್ಯಾಸಕರಾದ ಉಮೇಶ್‌ಕುಮಾರ್, ಕೆ.ಬಿ ರೇವಣಸಿದ್ದಪ್ಪ, ಪರಶುರಾಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ : ಸಿ.ಎಸ್ ಷಡಾಕ್ಷರಿ

ಭದ್ರಾವತಿ ಸೈಂಟ್ ಚಾರ್ಲ್ಸ್ ಕನ್ನಡ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗು ಪದನಿಮಿತ್ತ ಬ್ಲಾಕ್ ಯೋಜನಾ ಸಮನ್ವಯಾಧಿಕಾರಿಗಳ ಕಛೇರಿ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗುರುಸ್ಪಂದನ ಕಾರ್ಯಕ್ರಮವನ್ನು  ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಉದ್ಘಾಟಿಸಿದರು.
    ಭದ್ರಾವತಿ, ಜೂ. ೨೪ : ಶಿಕ್ಷಕ ವೃತ್ತಿಯಲ್ಲಿ ತೊಡಗಿರುವವರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಹೇಳಿದರು.
    ಅವರು ಶುಕ್ರವಾರ ನಗರ ಸೈಂಟ್ ಚಾರ್ಲ್ಸ್ ಕನ್ನಡ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗು ಪದನಿಮಿತ್ತ ಬ್ಲಾಕ್ ಯೋಜನಾ ಸಮನ್ವಯಾಧಿಕಾರಿಗಳ ಕಛೇರಿ ಮತ್ತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘ ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗುರುಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಈಗಾಗಲೇ ಶಿಕ್ಷಕರ ಬಹುತೇಕ ಬೇಡಿಕೆಗಳು ಈಡೇರಿಸಿ ಕೊಡುವಲ್ಲಿ ಸಂಘ ಯಶಸ್ವಿಯಾಗಿದ್ದು, ಶಿಕ್ಷಕರ ಬಹುತೇಕ ಕೆಲಸಗಳು ಆನ್‌ಲೈನ್ ವ್ಯವಸ್ಥೆಯಲ್ಲಿ ನಡೆಯುತ್ತಿದೆ. ವೇತನ ಸಂಬಂಧ ಉಂಟಾಗಿದ್ದ ಸಮಸ್ಯೆ ಸಹ ಬಗೆ ಹರಿದಿದ್ದು, ಶಿಕ್ಷಕರ ಮೊಬೈಲ್‌ಗಳಿಗೆ ಮಾಹಿತಿ ಬರುವಂತಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬೇಡಿಕೆಗಳನ್ನು ಈಡೇರಿಸಿಕೊಡುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಲಾಗುವುದು ಎಂದರು.
    ಶಿಕ್ಷಕರ ಬಹುದಿನಗಳ ಬೇಡಿಕೆಯಂತೆ ನೂತನ ಗುರುಭವನ ನಿರ್ಮಾಣಕ್ಕೆ ಈಗಾಗಲೇ ೨ ಕೋ. ರು. ಅನುದಾನ ಬಿಡುಗಡೆಯಾಗಿದ್ದು, ಭವನದ ಕಾಮಗಾರಿ ಶೀಘ್ರದಲ್ಲಿಯೇ ಆರಂಭಗೊಳ್ಳಲಿದೆ ಎಂದರು.
    ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಟಿ. ಪೃಥ್ವಿರಾಜ್ ಮಾತನಾಡಿ, ರಾಜ್ಯಾಧ್ಯಕ್ಷರಾದ ಸಿ.ಎಸ್ ಷಡಾಕ್ಷರಿಯವರು ಶಿಕ್ಷಕರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುತ್ತಿದ್ದಾರೆ. ಇದರಿಂದಾಗಿ ಹಲವಾರು ಬೇಡಿಕೆಗಳು ಈಡೇರುವಂತಾಗಿದೆ. ಪ್ರಸ್ತುತ ನೂತನ ಪಿಂಚಣಿ ವ್ಯವಸ್ಥೆಯನ್ನು ಬದಲಿಸಿ ಹಳೇ ವ್ಯವಸ್ಥೆಯನ್ನೇ ಮುಂದುವರೆಸುವಂತೆ ಸರ್ಕಾರಕ್ಕೆ ಒತ್ತಾಯಿಸುವಂತೆ ಮನವಿ ಮಾಡಿದರು.
    ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಸಿ.ಆರ್ ಪರಮೇಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆರ್. ಮೋಹನ್‌ಕುಮಾರ್, ಸಹ ಕಾರ್ಯದರ್ಶಿ ಸುಮತಿ, ತಾಲೂಕು ಶಾಖೆ ಅಧ್ಯಕ್ಷ ಬಿ. ಸಿದ್ದಬಸಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಡಿ.ಬಿ ರುದ್ರಪ್ಪ, ಪ್ರಧಾನ ಕಾರ್ಯದರ್ಶಿ ಶ್ರೀಧರಗೌಡ, ಸುಮತಿ, ಚಿತ್ರ, ಬಸವಂತರಾವ್ ದಾಳೆ, ಯು. ಮಹಾದೇವಪ್ಪ, ರೇವಣಪ್ಪ, ರಾಜು, ಮಲ್ಲಿಕಾರ್ಜುನ್, ಆನಂದ್, ಮಾಯಮ್ಮ, ಜ್ಯೋತಿ, ಎ. ತಿಪ್ಪೇಸ್ವಾಮಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನವೀದ್ ಅಹಮದ್, ಶಿಕ್ಷಣ ಸಂಯೋಜಕ ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ತಾಲೂಕಿನ ಪ್ರಾಥಮಿಕ ಶಾಲೆಗಳ ಶಿಕ್ಷಕರು ಹಾಗು ಶಿಕ್ಷಣ ಇಲಾಖೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಎಸ್.ಕೆ ಮೋಹನ್ ಸ್ವಾಗತಿಸಿದರು.

ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಎ.ಎನ್ ಕಾರ್ತಿಕ್ : ಜೂ.೨೫ರಂದು ಪದಗ್ರಹಣ

ಭದ್ರಾವತಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಎ.ಎನ್ ಕಾರ್ತಿಕ್
    ಭದ್ರಾವತಿ, ಜೂ. ೨೪ : ನಗರದ ಲಯನ್ಸ್ ಕ್ಲಬ್ ಪ್ರಸ್ತಕ ಸಾಲಿನ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಎ.ಎನ್ ಕಾರ್ತಿಕ್ ಆಯ್ಕೆಯಾಗಿದ್ದು, ಜೂ.೨೫ರಂದು ಸಂಜೆ ೭ ಗಂಟೆಗೆ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪದಗ್ರಹಣ ಸ್ವೀಕರಿಸಲಿದ್ದಾರೆ.
    ಎ.ಎನ್ ಕಾರ್ತಿಕ್ ಹಿರಿಯ ನ್ಯಾಯವಾದಿ ದಿವಂಗತ ಎ.ಬಿ ನಂಜಪ್ಪ ಹಾಗು ಲೋಹಿತಾ ದಂಪತಿ ಪುತ್ರರಾಗಿದ್ದು, ಈ ಹಿಂದೆ ಕ್ಲಬ್ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಪ್ರಸ್ತುತ ತಾಲೂಕು ಒಕ್ಕಲಿಗರ ಸಂಘದ ಖಜಾಂಚಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
    ಉಳಿದಂತೆ ದೈವಜ್ಞ ಬ್ರಾಹ್ಮಣ ಸಂಘದ ಎಂ. ನಾಗರಾಜ ಶೇಟ್ ಕಾರ್ಯದರ್ಶಿಯಾಗಿ ಹಾಗು ಜಿ.ಪಿ ದರ್ಶನ್ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
    ಲಯನ್ಸ್ ಕ್ಲಬ್ ೨ನೇ ಜಿಲ್ಲಾ ಉಪ ಗೌರ್ವನರ್ ಮಹಮದ್ ಹನೀಫ್ ಪದಗ್ರಹಣ ಬೋಧಿಸಲಿದ್ದು, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಉಪಸ್ಥಿತರಿರುವರು.

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಅಧ್ಯಕ್ಷರಾಗಿ ಜಿ. ಸುರೇಶಯ್ಯ

ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಭದ್ರಾವತಿ ತಾಲೂಕು ಅಧ್ಯಕ್ಷರಾಗಿ ನಗರಸಭೆ ಮಾಜಿ ಸದಸ್ಯ ಜಿ. ಸುರೇಶಯ್ಯ ಆಯ್ಕೆಯಾಗಿದ್ದು, ಈ ಸಂಬಂಧ ಹಮ್ಮಿಕೊಳ್ಳಲಾಗಿದ್ದ ಅಧಿಕಾರ ಸ್ವೀಕರ ಸಮಾರಂಭವನ್ನು ಬಿಳಿಕಿ ಹಿರೇಮಠದ ಪೀಠಾಧ್ಯಕ್ಷರು ಹಾಗು ಮಹಾಸಭಾ ಗೌರವಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಉದ್ಘಾಟಿಸಿದರು.
    ಭದ್ರಾವತಿ, ಜೂ. ೨೪: ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಅಧ್ಯಕ್ಷರಾಗಿ ನಗರಸಭೆ ಮಾಜಿ ಸದಸ್ಯ ಜಿ. ಸುರೇಶಯ್ಯ ಆಯ್ಕೆಯಾಗಿದ್ದು, ಬಿಳಿಕಿ ಹಿರೇಮಠದ ಪೀಠಾಧ್ಯಕ್ಷರು ಹಾಗು ಮಹಾಸಭಾ ಗೌರವಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು.
    ಜಿಲ್ಲಾಧ್ಯಕ್ಷ ರುದ್ರಮನಿ ಸಜ್ಜನ್, ನಿಕಟಪೂರ್ವ ತಾಲೂಕು ಅಧ್ಯಕ್ಷೆ ನಂದಿನಿ ಮಲ್ಲಿಕಾರ್ಜುನ್, ಚುನಾವಣಾಧಿಕಾರಿ ಭುವನೇಶ್ವರ್, ತಾಲೂಕು ಘಟಕದ ಖಜಾಂಚಿ ಮೂರ್ತಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ತಾಲೂಕು ಘಟಕದ ಪದಾಧಿಕಾರಿಗಳು, ಮಹಿಳಾ ಘಟಕ ಹಾಗೂ ಯುವ ಘಟಕದ ಪದಾಧಿಕಾರಿಗಳು, ಸಮಾಜದ ಹಿರಿಯರು, ಹಿತೈಷಿಗಳು ಪಾಲ್ಗೊಂಡು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
    ಪ್ರಧಾನ ಕಾರ್ಯದರ್ಶಿ ರವಿ ಕಾರ್ಯಕ್ರಮ ನಿರೂಪಿಸಿದರು. ಜನ್ನಾಪುರ ಜಗದೀಶ್ ಪ್ರಾಸ್ತವಿಕ ನುಡಿಗಳನ್ನಾಡಿದರು. ಕೂಡ್ಲಿಗೆರೆ ರುದ್ರೇಶ್ ವಂದಿಸಿದರು. ಅಥ್ಲೆಟಿಕ್ ಕ್ರೀಡಾಪಟು ಪರಮೇಶ್ವರ್ ಅವರನ್ನು ಸನ್ಮಾನಿಸಲಾಯಿತು.

Thursday, June 23, 2022

ತಾಲೂಕು ಒಕ್ಕಲಿಗರ ಸಂಘ ಕೆಲವರ ವೈಯಕ್ತಿಕ ಹಿತಾಸಕ್ತಿಗೆ ಸೀಮಿತ : ಅಸಮಾಧಾನ

ಭದ್ರಾವತಿ ತಾಲೂಕಿನ ಒಕ್ಕಲಿಗ ಕುಲಬಾಂಧವರ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ನಡೆಯಿತು. 

    ಭದ್ರಾವತಿ, ಜೂ. ೨೩:  ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಸಹ ಕೆಲವರ ವೈಯಕ್ತಿಕ ಹಿತಾಸಕ್ತಿಯಿಂದಾಗಿ ಇನ್ನೂ ಸಂಘಟಿತರಾಗಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರನ್ನು ಒಗ್ಗೂಡಿಸುವ ಕೆಲಸ ನಡೆಯಬೇಕೆಂದು ಒಕ್ಕಲಿಗ ಸಮುದಾಯದ ಮುಖಂಡರು ಆಗ್ರಹಿಸಿದರು.
    ತಾಲೂಕಿನ ಒಕ್ಕಲಿಗ ಕುಲಬಾಂಧವರ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪ್ರಮುಖರಾದ ಆಟೋ ಚಾಲಕರ ಸಂಘದ ಅಧ್ಯಕ್ಷ ಲಕ್ಷ್ಮಣ, ಜೆಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ, ರಮೇಶ್, ನಾಗರಾಜ್ ದೊಡ್ಡಗೊಪ್ಪೇನಹಳ್ಳಿ ಸೇರಿದಂತೆ ಇನ್ನಿತರರು ಮಾತನಾಡಿ, ಕ್ಷೇತ್ರದಲ್ಲಿ ಒಕ್ಕಲಿಗರು ಸುಮಾರು ೩೫ ಸಾವಿರ ಜನಸಂಖ್ಯೆ ಹೊಂದಿದ್ದರೂ ಸಹ ಇದುವರೆಗೂ ಸರಿಯಾಗಿ ಸಂಘಟಿತರಾಗಲು ಸಾಧ್ಯವಾಗಿಲ್ಲ. ರಾಜ್ಯದೆಲ್ಲೆಡೆ ಒಕ್ಕಲಿಗರು ಪ್ರಬಲರಾಗಿದ್ದು, ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸದೃಢಗೊಂಡಿದ್ದಾರೆ.  ಆದರೆ ಕ್ಷೇತ್ರದಲ್ಲಿ ಮಾತ್ರ ಒಕ್ಕಲಿಗರು ಸಂಘಟಿತರಾಗದ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದರು.
    ತಾಲೂಕು ಒಕ್ಕಲಿಗರ ಸಂಘ ಕೆಲವರ ಹಿತಾಸಕ್ತಿಗೆ ಮಾತ್ರ ಸೀಮಿತವಾಗಿದ್ದು, ಕುಲ ಬಾಂಧವರ ಹಿತಾಸಕ್ತಿಯನ್ನು ಕಡೆಗಣಿಸಲಾಗುತ್ತಿದೆ. ಇದುವರೆಗೂ ಒಂದು ಸುಸಜ್ಜಿತವಾದ ಸಮುದಾಯ ಭವನ ಹೊಂದಲು ಸಾಧ್ಯವಾಗಿಲ್ಲ. ಅಲ್ಲದೆ ಕಡು ಬಡವರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಸರ್ಕಾರದ ಅನುದಾನ, ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ತಾಲೂಕು ಒಕ್ಕಲಿಗರ ಸಂಘ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಒಕ್ಕಲಿಗರು ಎಂದರೆ ಸಮಾಜದ ಎಲ್ಲರೊಂದಿಗೂ ಬೆರೆತು ಸಾಗುವವರು ಎಂಬುದನ್ನು ಅರಿತುಕೊಳ್ಳಬೇಕು. ಇತರೆ ಸಮುದಾಯವನ್ನು ತಿರಸ್ಕರಿಸಿ ಮುಂದೆ ಸಾಗುವುದು ಅಸಾಧ್ಯ. ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಯಬೇಕು. ಸರ್ಕಾರದ ಅನುದಾನ, ಸೌಲಭ್ಯಗಳನ್ನು ತಿರಸ್ಕರಿಸುವುದು ಸರಿಯಲ್ಲ. ಒಕ್ಕಲಿಗ ಸಮುದಾಯದಲ್ಲೂ ಕಡು ಹಾಗು ಮಧ್ಯಮ ವರ್ಗದವರಿದ್ದಾರೆ. ಅವರನ್ನು ಸಹ ಅರ್ಥಿಕವಾಗಿ, ಶೈಕ್ಷಣಿಕವಾಗಿ ಎಲ್ಲಾ ರೀತಿಯಿಂದಲೂ ಅಭಿವೃದ್ಧಿಪಡಿಸುವಂತಾಗಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕುಲಬಾಂಧವರು ಎಚ್ಚೆತ್ತುಕೊಂಡು ಸಂಘಟಿತರಾಗಬೇಕೆಂದರು.
    ಸೋಮಶೇಖರ್ ಸಂಕ್ಲಿಪುರ, ಶಿವಣ್ಣ ಕಲ್ಲಹಳ್ಳಿ, ಸಂದೇಶ್‌ಗೌಡ, ಸುಹಾಸ್ ಗೌಡ, ಮುಳ್ಕೆರೆ ಲೋಕೇಶ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

ವಿಐಎಸ್‌ಎಲ್ ಇತಿಹಾಸದ ವೈಭವ ಮರಳಿ ಪಡೆಯಲು ಸಹಕರಿಸಿ : ಬಿ.ಎಲ್ ಚಂದ್ವಾನಿ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ನೂತನ ಕಾರ್ಯಪಾಲಕ ನಿರ್ದೇಶಕರಾಗಿ ನೇಮಕಗೊಂಡ ಬಿ.ಎಲ್. ಚಂದ್ವಾನಿ ಅವರಿಗೆ ಸುರಜಿತ್ ಮಿಶ್ರ ಅಧಿಕಾರ ಹಸ್ತಾಂತರಿಸಿದರು.
    ಭದ್ರಾವತಿ, ಜೂ. ೨೩ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ತನ್ನ ಇತಿಹಾಸದ ವೈಭವನ ಮರಳಿ ಪಡೆಯುವ ನಿಟ್ಟಿನಲ್ಲಿ ಎಲ್ಲರೂ ಶಕ್ತಿ ಮೀರಿ ಶ್ರಮಿಸುವ ಅಗತ್ಯವಿದ್ದು, ಎಲ್ಲರೂ ಸಹಕಾರ ನೀಡುವಂತೆ ಕಾರ್ಖಾನೆ ನೂತನ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಮನವಿ ಮಾಡಿದರು.
    ಅವರು ಗುರುವಾರ ಕಾರ್ಖಾನೆಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಪ್ರಾಯೋಗಿಕ ಮತ್ತು ಸಕಾರಾತ್ಮಕ ದೃಷ್ಠಿಕೋನವನ್ನು ಹೊಂದಿರುವ ಆಶಾವಾದದ ವ್ಯಕ್ತಿಯಾಗಿದ್ದು, ಪ್ರಸ್ತುತ ಕಾರ್ಖಾನೆ ಎದುರಿಸುತ್ತಿರುವ ಸವಾಲನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸ ಹೊಂದಿದ್ದೇನೆ. ಕಾರ್ಖಾನೆಯ ಸಾಮರ್ಥ್ಯ, ಅದರ ಬೃಹತ್ ಉತ್ಪನ್ನ ಮಿಶ್ರಣ, ಸಮರ್ಥ ಮಾನವ ಸಂಪನ್ಮೂಲ, ಗುಣಮಟ್ಟದ ಉತ್ಪನ್ನಗಳನ್ನು ಬಳಸಿಕೊಂಡು ಪ್ರಗತಿ ಹೊಂದಬೇಕಾಗಿದೆ.  ಲಭ್ಯವಿರುವ ಅವಕಾಶಗಳನ್ನು ಬಳಸಿಕೊಳ್ಳಲು ಮತ್ತು ಕಾರ್ಖಾನೆಯನ್ನು ಅದರ ಹಿಂದಿನ ವೈಭವಕ್ಕೆ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕಾಗಿದೆ ಎಂದರು.  
. ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಪ್ರಭಾರಿ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರ  ಅವರಿಂದ ಅಧಿಕಾರ ಸ್ವೀಕರಿಸಿದರು. ಕಾರ್ಖಾನೆಯ ವಿವಿಧ ವಿಭಾಗಗಳ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಿಐಎಸ್‌ಎಲ್ ಕಾರ್ಯಪಾಲಕ ನಿರ್ದೇಶಕರಾಗಿ ಬಿ.ಎಲ್ ಚಂದ್ವಾನಿ


ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ನೂತನ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ 
    ಭದ್ರಾವತಿ, ಜೂ. ೨೩ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕರಾಗಿ ಬಿ.ಎಲ್ ಚಂದ್ವಾನಿ ನೇಮಕಗೊಂಡಿದ್ದಾರೆ.
    ಬಿ.ಎಲ್ ಚಂದ್ವಾನಿಯವರು ಮಾ.೩೦, ೧೯೬೭ರಲ್ಲಿ ಭಿಲಾಯಿ ಸಮೀಪದ ಕುಟೇಲಭತದಲ್ಲಿ ಜನಿಸಿದ್ದು, ಪ್ರಾಥಮಿಕ ಶಿಕ್ಷಣವನ್ನು ಕಮ್ಹಾರಿಯಾದ ಸರ್ಕಾರಿ ಶಾಲೆ ಮತ್ತು ದುರ್ಗಿನ ಸರ್ಕಾರಿ ವಿವಿಧೋದ್ದೇಶ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿ ೧೯೮೮ರಲ್ಲಿ ಭೋಪಾಲ್ ಮೌಲಾನಾ ಆಜಾದ್ ಕಾಲೇಜ್ ಆಫ್ ಟೆಕ್ನಾಲಜಿಯಲ್ಲಿ ಬಿ.ಇ. (ಮೆಕ್ಯಾನಿಕಲ್) ಪದವಿಪಡೆದುಕೊಂಡಿದ್ದಾರೆ.
    ಚಂದ್ವಾನಿಯವರು ಆರಂಭದಲ್ಲಿ ಭಿಲಾಯ್ ಸ್ಟೀಲ್ ಪ್ಲಾಂಟ್‌ಗೆ ಮ್ಯಾನೇಜ್‌ಮೆಂಟ್ ಟ್ರೈನಿ/ ಗ್ರಾಜ್ಯುಯೇಟ್ ಇಂಜಿನಿಯರ್ ಹುದ್ದೆಗೆ ೧೯೮೯ರಲ್ಲಿ ಸೇರಿದ್ದು, ೨೦೧೮ರಲ್ಲಿ ಮುಖ್ಯ ಜನರಲ್ ಮ್ಯಾನೇಜರ್ ಹುದ್ದೆಗೆ ಮುಂಬಡ್ತಿ ಹೊಂದಿದರು. ಇವರು ಭಿಲಾಯ್ ಸ್ಟೀಲ್ ಪ್ಲಾಂಟ್‌ನಲ್ಲಿ ಕೋಕ್ ಓವನ್, ಸ್ಟೀಲ್ ಮೇಕಿಂಗ್ ಶಾಪ್, ಮೈನ್ಸ್, ಬ್ಲಾಸ್ಟ್ ಫರ್ನೇಸ್‌ನ (ಮೆಕ್ಯಾನಿಕಲ್) ವಿಭಾಗ ಮತ್ತು ಅದಿರು ನಿರ್ವಹಣೆ ಸ್ಥಾವರದಲ್ಲಿ ಕೆಲಸ ಮಾಡಿದ ಹೆಚ್ಚಿನ ಅನುಭವ ಹೊಂದಿದ್ದಾರೆ. ಅಲ್ಲದೆ ೨೦೦೫ರಲ್ಲಿ ಇಂಗ್ಲೆಂಡ್‌ನಲ್ಲಿ ವಿದೇಶಿ ತರಬೇತಿ ಪಡೆದುಕೊಂಡಿದ್ದಾರೆ.

ಕೋಟ್ಪಾ ಕಾಯ್ದೆಯಡಿ ದಾಳಿ : ೨,೧೦೦ ರು. ದಂಡ ವಸೂಲಾತಿ

ಶಿವಮೊಗ್ಗ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ವತಿಯಿಂದ ಭದ್ರಾವತಿ ನಗರಸಭೆ ವ್ಯಾಪ್ತಿಯ ಉಜ್ಜನಿಪುರ ಹಾಗೂ ಕಾಗದನಗರದಲ್ಲಿ ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ-೨೦೦೩ ಅಡಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿರುವ ಘಟನೆ ಗುರುವಾರ ನಡೆದಿದೆ.
    ಭದ್ರಾವತಿ, ಜೂ. ೨೩ : ಶಿವಮೊಗ್ಗ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ವತಿಯಿಂದ ನಗರಸಭೆ ವ್ಯಾಪ್ತಿಯ ಉಜ್ಜನಿಪುರ ಹಾಗೂ ಕಾಗದನಗರದಲ್ಲಿ ತಂಬಾಕು ನಿಯಂತ್ರಣ ಕಾನೂನು ಕೋಟ್ಪಾ-೨೦೦೩ ಅಡಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿರುವ ಘಟನೆ ಗುರುವಾರ ನಡೆದಿದೆ.
  ಉಜ್ಜನಿಪುರ ಮತ್ತು ಕಾಗದನಗರದ ಹಲವೆಡೆ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಒಟ್ಟು ೨,೧೦೦ ರೂ  ದಂಡ ವಿಧಿಸಲಾಯಿತು. ಅಲ್ಲದೆ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.
    ಕಾರ್ಯಾಚರಣೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಎಂ.ವಿ ಅಶೋಕ್, ಎಚ್‌ಐಓ ಆನಂದಮೂರ್ತಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾಬಾಯಿ, ಶಿವಮೊಗ್ಗ ಜಿಲ್ಲಾ  ತಂಬಾಕು ನಿಯಂತ್ರಣ ಕೋಶದ ರವಿರಾಜ್, ಪೇಪರ್ ಟೌನ್  ಪೊಲೀಸ್ ಠಾಣೆ ಸಿಬ್ಬಂದಿ ಮಂಜುನಾಥ್ ಹಾಗೂ ನಗರ ಆರೋಗ್ಯ ಕೇಂದ್ರದ ಮನೋಹರ್, ಚೇತನ್ ಪಾಲ್ಗೊಂಡಿದ್ದರು.



೭೦ರ ಪೈಕಿ ೨೫ ಕೆರೆಗಳ ಬೌಂಡರಿ ನಿಗದಿ : ಹೋರಾಟಕ್ಕೆ ಸ್ಪಂದನೆ

ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಕೃತಜ್ಞತೆ

೨೫ನೇ ಕೆರೆ ಬೌಂಡರಿ ನಿಗದಿಪಡಿಸುವ ಕಾರ್ಯ ಭದ್ರಾವತಿ ನಗರಸಭೆ ವ್ಯಾಪ್ತಿಯ ಗೋಲ್ಡನ್ ಜ್ಯೂಬಿಲಿ ಕಾಲೋನಿ ಸಮೀಪವಿರುವ ಹುತ್ತಾ ಸರ್ವೇ ನಂ.೪೮ರ ಸರ್ಕಾರಿ ಕೆರೆಯಲ್ಲಿ ನಡೆದಿದ್ದು, ಈ ಕರೆ ೮ ಎಕರೆ ೩೬ ಗುಂಟೆ ವಿಸ್ತೀರ್ಣ ಹೊಂದಿದೆ. ನಗರಸಭೆ ಸದಸ್ಯರಾದ ಲತಾ ಚಂದ್ರಶೇಖರ್ ಹಾಗು ಆರ್. ಮೋಹನ್‌ಕುಮಾರ್ ಸ್ಥಳದಲ್ಲಿಯೇ ಉಪಸ್ಥಿತರಿದ್ದು, ಬೌಂಡರಿ ನಿಗದಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಿ    
    ಭದ್ರಾವತಿ, ಜೂ. ೨೩ : ಅಂತರ್ಜಲ ಹೆಚ್ಚಿಸಿ ದನಗಾಹಿಗಳಿಗೆ, ಪ್ರಾಣಿಪಕ್ಷಿಗಳಿಗೆ, ರೈತರಿಗೆ ಅನುಕೂಲ ಕಲ್ಪಿಸಿ ಕೊಡುವ ಉದ್ದೇಶದಿಂದ ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಸುಮಾರು ೭೦ ಕೆರೆಗಳನ್ನು ಗುರುತಿಸಲಾಗಿದ್ದು, ಈ ಪೈಕಿ ೨೫ ಕೆರೆಗಳ ಬೌಂಡರಿ ನಿಗದಿಪಡಿಸಲಾಗಿದೆ. ಈ ಹಿನ್ನಲೆಯಲ್ಲಿ ತಾಲೂಕು ಆಡಳಿತ ಹಾಗು ನಗರಸಭೆ ಆಡಳಿತಕ್ಕೆ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಚಾರಿಟಬಲ್ ಟ್ರಸ್ಟ್, ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಕೃತಜ್ಞತೆ ಸಲ್ಲಿಸಲಾಗಿದೆ.
    ಕೆರೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವೇದಿಕೆ ವತಿಯಿಂದ ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಈ ಹೋರಾಟಕ್ಕೆ ಇದೀಗ ಪ್ರತಿಫಲ ಲಭಿಸುತ್ತಿದೆ. ಸುಮಾರು ೭೦ ಕೆರೆಗಳ  ಬೌಂಡರಿ ನಿಗದಿಪಡಿಸಲು ಆದೇಶವಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.  ೨೫ನೇ ಕೆರೆ ಬೌಂಡರಿ ನಿಗದಿಪಡಿಸುವ ಕಾರ್ಯ ನಗರಸಭೆ ವ್ಯಾಪ್ತಿಯ ಗೋಲ್ಡನ್ ಜ್ಯೂಬಿಲಿ ಕಾಲೋನಿ ಸಮೀಪವಿರುವ ಹುತ್ತಾ ಸರ್ವೇ ನಂ.೪೮ರ ಸರ್ಕಾರಿ ಕೆರೆಯಲ್ಲಿ ನಡೆದಿದ್ದು, ಈ ಕರೆ ೮ ಎಕರೆ ೩೬ ಗುಂಟೆ ವಿಸ್ತೀರ್ಣ ಹೊಂದಿದೆ. ನಗರಸಭೆ ಸದಸ್ಯರಾದ ಲತಾ ಚಂದ್ರಶೇಖರ್ ಹಾಗು ಆರ್. ಮೋಹನ್‌ಕುಮಾರ್ ಸ್ಥಳದಲ್ಲಿಯೇ ಉಪಸ್ಥಿತರಿದ್ದು, ಬೌಂಡರಿ ನಿಗದಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಿ ವೇದಿಕೆ ಅಧ್ಯಕ್ಷ ಆರ್. ವೇಣುಗೋಪಾಲ್ ಅವರನ್ನು ಅಭಿನಂದಿಸಿದರು.
    ತಹಸೀಲ್ದಾರ್ ಆರ್. ಪ್ರದೀಪ್, ಗ್ರಾಮ ಲೆಕ್ಕಾಧಿಕಾರಿ ಅನಿಲ್‌ರಾಜ್, ಭೂದಾಖಲೆಗಳ ಸಹಾಯಕ ನಿರ್ದೇಶಕ ಎನ್. ದೇವೇಂದ್ರಪ್ಪ, ಪರ್ಯಾವೇಕ್ಷಕ ಎ.ಎಲ್ ನಟರಾಜ್, ಸರ್ವೇಯರ್ ಎಚ್.ಎಲ್ ಮಂಜಾನಾಯ್ಕ್, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಎಚ್.ಎಂ ಮನುಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ರಂಗರಾಜಪುರೆ, ಕಂದಾಯ ಅಧಿಕಾರಿ ರಾಜ್‌ಕುಮಾರ್, ರಾಜ್ಯಸ್ವ ನಿರೀಕ್ಷಕ ಆರ್. ಚೇತನ್, ಸಿಬ್ಬಂದಿ ವರ್ಗದವರಾದ ದೊಡ್ಡಯ್ಯ, ನ್ಯೂಟೌನ್ ಪೊಲೀಸ್ ಠಾಣಾಧಿಕಾರಿ ದೇವರಾಜ್ ಹಾಗು ಸಿಬ್ಬಂದಿ ವರ್ಗದವರಿಗೆ ಆರ್. ವೇಣುಗೋಪಾಲ್ ಕೃತಜ್ಞತೆ ಸಲ್ಲಿಸಿದ್ದಾರೆ.

Wednesday, June 22, 2022

ವಿಐಎಸ್‌ಎಲ್ ಕಾರ್ಖಾನೆಯಲ್ಲಿ ವಾಸವಿದ್ದ ಚಿರತೆ..?

ಭದ್ರಾವತಿ ನ್ಯೂಟೌನ್ ವಸತಿ ಗೃಹದಲ್ಲಿ ಬುಧವಾರ ಬೆಳಿಗ್ಗೆ ಪ್ರತ್ಯಕ್ಷವಾದ ಚಿರತೆ. 

    ಭದ್ರಾವತಿ, ಜೂ. ೨೨ : ನಗರದ ನ್ಯೂಟೌನ್ ವಸತಿ ಗೃಹದಲ್ಲಿ ಬುಧವಾರ ಬೆಳಿಗ್ಗೆ ಪ್ರತ್ಯಕ್ಷವಾದ ಚಿರತೆ ವಿಐಎಸ್‌ಎಲ್ ಕಾರ್ಖಾನೆಯಿಂದ ಬಂದಿರುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
    ಈ ಹಿಂದೆ ಸುಮಾರು ೨ ವರ್ಷಗಳ ಹಿಂದೆ ಕಾರ್ಖಾನೆಯಲ್ಲಿ ಚಿರತೆ ವಾಸವಿರುವ ಬಗ್ಗೆ ಸುಳಿವುಗಳು ಲಭ್ಯವಾಗಿದ್ದವು. ಅಲ್ಲದೆ ಚಿರತೆಗೆ ನಾಯಿಗಳು ಬಲಿಯಾಗಿರುವ ಮಾಹಿತಿ ಸಹ ಲಭ್ಯವಾಗಿದ್ದವು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಕೆಲವು ಕಾರ್ಮಿಕರು ಸಹ ಚಿರತೆ ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಖಾನೆಯಲ್ಲಿ ಬೀಡುಬಿಟ್ಟು ಜಾಲಾಡಿದ್ದರು. ಅಲ್ಲದೆ ಬೋನ್ ಸಹ ಇಡಲಾಗಿತ್ತು. ಆದರೆ ಚಿರತೆ ಮಾತ್ರ ಪ್ರತ್ಯಕ್ಷವಾಗಿರಲಿಲ್ಲ.
    ಇದೀಗ ಈ ಕುರಿತು ಅರಣ್ಯ ಇಲಾಖೆ ಸಹ ಚಿರತೆ ವಿಐಎಸ್‌ಎಲ್ ಕಾರ್ಖಾನೆಯಿಂದ ಬಂದಿರುವ ಅನುಮಾನ ವ್ಯಕ್ತಪಡಿಸುತ್ತಿದೆ. ಅದರಲ್ಲೂ ಜನವಸತಿ ಪ್ರದೇಶಕ್ಕೆ ಚಿರತೆ ದೂರದಿಂದ ಬಂದಿರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ವಾಸ್ತವ್ಯವಾಗಿ ಚಿರತೆ ಮೂಲ ನೆಲೆ ಕುರಿತು ಇದುವರೆಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಉಪ ಅರಣ್ಯ ಸಂಕರ್‍ಷಣಾಧಿಕಾರಿಯಾಗಿ ಶಿವಶರಣಯ್ಯ ಅಧಿಕಾರ ಸ್ವೀಕಾರ

ಶಿವಶರಣಯ್ಯ
    ಭದ್ರಾವತಿ, ಜೂ. ೨೨ : ಇಲ್ಲಿನ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಹಿರಿಯ ಎಸ್‌ಎಫ್‌ಎಸ್ ಅಧಿಕಾರಿ ಶಿವಶರಣಯ್ಯ ಅಧಿಕಾರ ವಹಿಸಿಕೊಂಡಿದ್ದಾರೆ.
    ಈ ಹಿಂದೆ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಕೆ.ಎಂ ಗಾಮನಗಟ್ಟಿಯವರು ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಶಿವಶರಣಯ್ಯ ಅವರನ್ನು ನೇಮಕಗೊಳಿಸಲಾಗಿದೆ. ಶಿವಶರಣಯ್ಯರವರು ಈ ಹಿಂದೆ ಧಾರವಾಡದ ಅರಣ್ಯ ಇಲಾಖೆ ತರಬೇತಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೆ ಅರಣ್ಯ ಇಲಾಖೆಯ ಹಲವಾರು ವಿಭಾಗಗಳಲ್ಲಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ.

ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ, ಪೋಷಕರ ಸಭೆ

ಭದ್ರಾವತಿ ತಾಲೂಕಿನ ಸೀತಾರಾಮಪುರದ ಶ್ರೀ ಲೇಪಾಕ್ಷಸ್ವಾಮಿ  ಪ್ರೌಢಶಾಲೆಯಲ್ಲಿ ಬುಧವಾರ ಪೋಷಕರ ಸಭೆ ಮತ್ತು ಉಚಿತ ಸಮವಸ್ತ್ರ ವಿತರಣೆ ನಡೆಯಿತು.
    ಭದ್ರಾವತಿ, ಜೂ. ೨೨ : ತಾಲೂಕಿನ ಸೀತಾರಾಮಪುರದ ಶ್ರೀ ಲೇಪಾಕ್ಷಸ್ವಾಮಿ  ಪ್ರೌಢಶಾಲೆಯಲ್ಲಿ ಬುಧವಾರ ಪೋಷಕರ ಸಭೆ ಮತ್ತು ಉಚಿತ ಸಮವಸ್ತ್ರ ವಿತರಣೆ ನಡೆಯಿತು.
    ಶಿಕ್ಷಕರು ಹಾಗು ದಾನಿಗಳ ನೆರವಿನೊಂದಿಗೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಮವಸ್ತ್ರ ವಿತರಿಸಲಾಯಿತು. ಈ ಹಿನ್ನಲೆಯಲ್ಲಿ ಶಾಲಾ ಆಡಳಿತ ಮಂಡಳಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಅಭಿನಂದಿಸಿದರು.
    ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನವೀದ್ ಅಹಮದ್, ಶಾಲೆಯ ಮುಖ್ಯ ಶಿಕ್ಷಕ ಎಸ್. ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಎಲ್ಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವಿಐಎಸ್‌ಎಲ್ ವಸತಿಗೃಹಗಳಲ್ಲಿ ಪ್ರತ್ಯಕ್ಷವಾದ ಚಿರತೆ : ೪ ಗಂಟೆಗೂ ಹೆಚ್ಚು ಸಮಯ ನಿರಂತರ ಕಾರ್ಯಾಚರಣೆ

ಚಿರತೆ ಹಿಡಿಯುವಲ್ಲಿ ಯಶಸ್ವಿಯಾದ ಅರಣ್ಯ ಸಿಬ್ಬಂದಿಗಳು

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ವಸತಿ ಗೃಹಗಳಲ್ಲಿ ಬುಧವಾರ ಬೆಳಿಗ್ಗೆ ಏಕಾಏಕಿ ಕಾಣಿಸಿಕೊಂಡ ಚಿರತೆ.
    ಭದ್ರಾವತಿ, ಜೂ. ೨೨:  ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ವಸತಿ ಗೃಹಗಳಲ್ಲಿ ಬುಧವಾರ ಬೆಳಿಗ್ಗೆ ಏಕಾಏಕಿ ಕಾಣಿಸಿಕೊಂಡು ಸ್ಥಳೀಯರಲ್ಲಿ ಭಯ ಹುಟ್ಟಿಸಿದ್ದ ಚಿರತೆಯೊಂದನ್ನು ಸುಮಾರು ೪ ಗಂಟೆಗೂ ಹೆಚ್ಚು ಸಮಯ ಕಾರ್ಯಾಚರಣೆ ನಡೆಸಿ  ಸೆರೆ ಹಿಡಿಯುವಲ್ಲಿ ಅರಣ್ಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.


ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ವಸತಿ ಗೃಹಗಳಲ್ಲಿ ಬುಧವಾರ ಬೆಳಿಗ್ಗೆ ಏಕಾಏಕಿ ಕಾಣಿಸಿಕೊಂಡ ಚಿರತೆಯನ್ನು ನೋಡಲು ಜಮಾಯಿಸಿರುವ ಜನರು.
    ಬೆಳಿಗ್ಗೆ ಪಾಳು ಬಿದ್ದಿದ್ದ ಮನೆಯಿಂದ ಏಕಾಏಕಿ ಹೊರಬಂದು ಕಾಣಿಸಿಕೊಂಡಿದ್ದ ಚಿರತೆ ಮಹಿಳೆಯೊಬ್ಬರ ಮೈ ಪರಚಿ ಮತ್ತೊಂದು ಮನೆಯ ಹಿಂಬದಿಯಲ್ಲಿ ಅವಿತುಕೊಂಡಿದ್ದು, ತಕ್ಷಣ ಮಾಹಿತಿ ತಿಳಿದ ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ಕೈಗೊಂಡರು. ಚಿರತೆ ಬೇರೆ ಕಡೆಗೆ ತಪ್ಪಿಸಿಕೊಳ್ಳದಂತೆ ಎಚ್ಚರ ವಹಿಸಿದ ಅರಣ್ಯ ಸಿಬ್ಬಂದಿಗಳು ಸುತ್ತುವರೆದು ಕಾರ್ಯಾಚರಣೆ ನಡೆಸಿದರು. ವನ್ಯಜೀವಿ ವಿಭಾಗದ ಶಿವಮೊಗ್ಗ ವೃತ್ತದ ಹಿರಿಯ ಪಶು ವೈದ್ಯಾಧಿಕಾರಿ ಡಾ. ವಿನಯ್‌ರವರ ತಂಡ ಚುಚ್ಚು ಮದ್ದು ನೀಡಿದ ನಂತ ಅರಣ್ಯ ಸಿಬ್ಬಂದಿಗಳು  ಚಿರತೆಯನ್ನು ಬಲೆ ಬೀಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.


ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ವಸತಿ ಗೃಹಗಳಲ್ಲಿ ಬುಧವಾರ ಬೆಳಿಗ್ಗೆ ಏಕಾಏಕಿ ಕಾಣಿಸಿಕೊಂಡ ಚಿರತೆ ಮಹಿಳೆಯೊಬ್ಬರ ಮೈ ಪರಚಿರುವುದು.
    ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶರಣಯ್ಯ, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಪುಟ್ಟಟ್ನಳ್ಳಿ, ವಲಯ ಅರಣ್ಯಾಧಿಕಾರಿ ರಾಜೇಶ್, ಉಪ ವಲಯ ಅರಣ್ಯಾಧಿಕಾರಿಗಳಾದ ಬಿ.ಆರ್ ದಿನೇಶ್‌ಕುಮಾರ್, ನವೀನ್, ಅರಣ್ಯ ರಕ್ಷಕರಾದ ಬಾಲರಾಜ್, ಶ್ರೀಧರ್, ಅರಣ್ಯ ವೀಕ್ಷಕರಾದ ಶಶಿಲ್‌ಕುಮಾರ್, ನಾಗೇಂದ್ರಪ್ಪ ಹಾಗು ವ್ಯನ್ಯಜೀವಿ ವಿಭಾಗದ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.


ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ವಸತಿ ಗೃಹಗಳಲ್ಲಿ ಬುಧವಾರ ಬೆಳಿಗ್ಗೆ ಏಕಾಏಕಿ ಕಾಣಿಸಿಕೊಂಡ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಚುಚ್ಚುಮದ್ದು ನೀಡಿದ ನಂತರ ಬಲೆ ಬೀಸಿ ಸೆರೆ ಹಿಡಿದಿರುವುದು.
    ಸ್ಥಳಕ್ಕೆ ಪೊಲೀಸ್ ಉಪಾಧೀಕ್ಷಕ ಜಿತೇಂದ್ರ ಕುಮಾರ್ ದಯಾಮ, ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ, ವಿವಿಧ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು, ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ವಸಂತಕುಮಾರ್ ಹಾಗು ಸಿಬ್ಬಂದಿಗಳು ಸ್ಥಳದಲ್ಲಿಯೇ ಬೀಡು ಬಿಟ್ಟು ಕಾರ್ಯಾಚರಣೆಗೆ ಸಹಕರಿಸಿದರು.


ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ವಸತಿ ಗೃಹಗಳಲ್ಲಿ ಬುಧವಾರ ಬೆಳಿಗ್ಗೆ ಏಕಾಏಕಿ ಕಾಣಿಸಿಕೊಂಡ ಚಿರತೆಯನ್ನು ಯಶಸ್ವಿಯಾಗಿ ಸೆರೆ ಹಿಡಿದು ಬೋನಿಗೆ ಬಿಡಲಾಯಿತು. 
    ಇದಕ್ಕೂ ಮೊದಲು ಸ್ಥಳೀಯ ನಿವಾಸಿಗಳಿಗೆ ಮನೆಯಿಂದ ಹೊರಬರದಂತೆ ಎಚ್ಚರಿಕೆ ನೀಡಲಾಯಿತು. ಚಿರತೆ ಪತ್ತೆಯಾದ ಸ್ಥಳದ ಸಮೀಪದಲ್ಲಿಯೇ ಶ್ರೀ ಸತ್ಯಸಾಯಿಬಾಬಾ ಶಾಲೆ, ವಿಐಎಸ್‌ಎಲ್ ಆಸ್ಪತ್ರೆ(ದೊಡ್ಡಾಸ್ಪತ್ರೆ) ಹಾಗು ಅಂಗಡಿ ಮುಂಗಟ್ಟುಗಳಿವೆ. ಸದ್ಯ ಚಿರತೆ ಶಾಲೆ ಆವರಣ ಪ್ರವೇಶಿಸಿಲ್ಲ. ಅಲ್ಲದೆ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಅರಣ್ಯ ಸಿಬ್ಬಂದಿಗಳ ಕಾರ್ಯಾಚರಣೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  
    ಚಿರತೆ ಬಗ್ಗೆ ಮಾಹಿತಿ ತಿಳಿದು ನಗರದ ವಿವಿಧೆಡೆಗಳಿಂದ ಜನರು ಸ್ಥಳಕ್ಕೆ ಆಗಮಿಸಿ ಜಮಾಯಿಸಿದ್ದರು. ಇದರಿಂದಾಗಿ ಜನರನ್ನು ಪೊಲೀಸರು ನಿಯಂತ್ರಿಸಲು ಹರಸಾಹಸ ಪಡುವಂತಾಯಿತು. ಜನರ ಸದ್ದು ಗದ್ದಲದಿಂದಾಗಿ ಸೆರೆ ಹಿಡಿಯುವುದು ಸ್ವಲ್ಪ ವಿಳಂಬವಾಯಿತು ಎನ್ನಲಾಗಿದೆ.