Tuesday, March 7, 2023

ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿಯಾಗಿಲ್ಲ

ಅಂದು ವಿರೋಧ ಪಕ್ಷದಲ್ಲಿ ಪ್ರತಿಭಟಿಸಿದವರು, ಇಂದು ೩ ಲಕ್ಷ ಅರ್ಜಿ ವಜಾ ಮಾಡಿಸಿದ್ದಾರೆ : ತೀ.ನ ಶ್ರೀನಿವಾಸ್ ಆರೋಪ

ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ, ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ತೀ.ನ. ಶ್ರೀನಿವಾಸ್ ಮಂಗಳವಾರ ಭದ್ರಾವತಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ಮಾ. ೭: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಸುಮಾರು ೮ ವರ್ಷ ಕಳೆದರೂ ಸಹ ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತರಲು ಪ್ರಯತ್ನಿಸಿಲ್ಲ. ಅಲ್ಲದೆ ರೈತರ ಸುಮಾರು ೩ ಲಕ್ಷ ಅರ್ಜಿಗಳನ್ನು ವಜಾ ಮಾಡಿಸಿದ್ದಾರೆಂದು ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ, ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ತೀ.ನ. ಶ್ರೀನಿವಾಸ್ ಆರೋಪಿಸಿದರು.
    ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದು ಸುಮಾರು ೧೫ ವರ್ಷಗಳು ಕಳೆದಿವೆ. ದೇಶದ ಇತರೆ ರಾಜ್ಯಗಳಲ್ಲಿ ಅರಣ್ಯ ವಾಸಿಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ. ಆದರೆ ರಾಜ್ಯದಲ್ಲಿ ಇದುವರೆಗೂ ಹಕ್ಕು ಪತ್ರ ವಿತರಿಸಿಲ್ಲ. ಈ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್‌ರವರು ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ೩ ಪತ್ರಗಳನ್ನು ಬರೆದು ೨೦೦೯ ಡಿಸೆಂಬರ್ ಒಳಗೆ ಹಕ್ಕುಪತ್ರ ಕೊಡಲು ಸೂಚಿಸಿದ್ದರು. ಆದರೆ ಯಡಿಯೂರಪ್ಪರವರು ಹಕ್ಕುಪತ್ರ ಕೊಡುವ ಬದಲು ಕಾನೂನು ಬಾಹಿರವಾಗಿ, ಅರಣ್ಯ ಹಕ್ಕು ಕಾಯ್ದೆ ಉಲ್ಲಂಘಸಿ ರೈತರು ಸಲ್ಲಿಸಿದ್ದ ಸುಮಾರು ೩ ಲಕ್ಷ ಅರ್ಜಿಗಳನ್ನು ವಜಾಮಾಡಿ ನೋಟಿಸ್ ಕೊಡಿಸಿದ್ದರು ಎಂದು ಆರೋಪಿಸಿದರು.
    ವಿರೋಧ ಪಕ್ಷದಲ್ಲಿದ್ದಾಗ ಯಡಿಯೂರಪ್ಪ, ಸಂಸದ ಬಿ.ವೈ ರಾಘವೇಂದ್ರ, ಸಚಿವ ಅರಗ ಜ್ಞಾನೇಂದ್ರ, ವಿಧಾನಸಭೆ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪ್ರತಿಭಟನೆ ನಡೆಸಿ ಅರಣ್ಯ ಹಕ್ಕು ಕಾಯ್ದೆಯಲ್ಲಿ ೭೫ ವರ್ಷದ ಅನುಭವದ ಹಕ್ಕು ಕೇಳಲಾಗಿದೆ. ಇದನ್ನು ಕಾಯ್ದೆಗೆ ತಿದ್ದುಪಡಿ ತಂದು ೨೫ ವರ್ಷಕ್ಕೆ ಇಳಿಸಬೇಕೆಂದು ಆಗ್ರಹಿಸಿದ್ದರು. ಕೇಂದ್ರದಲ್ಲಿ ಸುಮಾರು ೮ ವರ್ಷಗಳಿಂದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಸಹ ಕಾಯ್ದೆ ತಿದ್ದುಪಡಿ ಬಗ್ಗೆ ಪ್ರಯತ್ನಿಸಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅವಧಿಯಲ್ಲಿ ಸರ್ವೋಚ್ಛ ನ್ಯಾಯಾಲಯ ಫೆಬ್ರವರಿ ೨೦೧೯ರಲ್ಲಿ ನೀಡಿದ ಆದೇಶ ಮತ್ತು ಅರಣ್ಯ ಹಕ್ಕು ಕಾಯ್ದೆಯನ್ನು ಕಸದ ಬುಟ್ಟಿಗೆ ಹಾಕಿ ಪುನಃ ೩ ಲಕ್ಷ ಅರ್ಜಿಗಳನ್ನು ವಜಾಮಾಡಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
    ವಿರೋಧ ಪಕ್ಷದಲ್ಲಿದ್ದಾಗ ಅರ್ಜಿಗಳನ್ನು ವಜಾ ಮಾಡಬೇಡಿ ಎಂದು ಪ್ರತಿಭಟಿಸಿದವರು ಪ್ರಸ್ತುತ ಅಧಿಕಾರದಲ್ಲಿದ್ದರೂ ಸಹ ಮೌನವಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ. ಜಿಲ್ಲೆಯಲ್ಲಿ ಸಾವಿರಾರು ಅರ್ಜಿಗಳು ಬಾಕಿ ಉಳಿದಿದ್ದು, ತಕ್ಷಣ ಮಾತಿನಂತೆ ನಡೆದುಕೊಂಡು ಅರಣ್ಯವಾಸಿಗಳಿಗೆ ಹಕ್ಕು ಪತ್ರ ಕೊಡಬೇಕೆಂದು ಆಗ್ರಹಿಸಿದರು.
    ಕೇಂದ್ರ ಹಾಗು ರಾಜ್ಯ ಸರ್ಕಾರದ ಸುಮಾರು ೧೦ ಆದೇಶಗಳು ೨೭.೦೪.೧೯೭೮ರ ಹಿಂದೆ ಭೂಮಿ ಸಾಗುವಳಿ ಮಾಡಿಕೊಂಡಿದ್ದು, ಟಿ.ಟಿ ಕೈ ಬರಹದ ಪಾಣಿಗಳನ್ನು ಹೊಂದಿದ್ದರೆ ಅವರುಗಳು ಬಡವರು, ಭೂ ರಹಿತರು, ಸಣ್ಣ ಹಿಡುವಳಿದಾರರು, ಪರಿಶಿಷ್ಟಜಾತಿಯವರಾಗಿದ್ದರೆ ೩ ಎಕರೆ ಭೂಮಿ ಮಂಜೂರು ಮಾಡಬೇಕೆಂದು ಆದೇಶವಿದ್ದರೂ ದಲಿತರ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು ದೂರಿದರು.
    ಇದೆ ರೀತಿ ೨೭.೦೪.೧೯೭೮ರ ಹಿಂದೆ ಅರಣ್ಯ ಭೂಮಿ ಸಾಗುವಳಿ ಮಾಡಿಕೊಂಡವರಿಗೆ ಭೂ ಮಂಜೂರು ಮಾಡಲು ೧೦ ಸರ್ಕಾರಿ ಆದೇಶಗಳಿದ್ದರೂ ಸಹ ಇದುವರೆಗೂ ರಾಜ್ಯದ ರೈತರಿಗೆ ಹಕ್ಕು ಪತ್ರ ನೀಡಿಲ್ಲ. ಅರಣ್ಯ ಇಲಾಖೆ ಶಿಫಾರಸ್ಸು ಮಾಡಿ ಬೆಂಗಳೂರಿನ ಅರಣ್ಯ ಭವನಕ್ಕೆ ಕಳಿಸಿದ ೨೦ ಸಾವಿರ ಅರ್ಜಿಗಳು ದೂಳು ಹಿಡಿದಿದ್ದು, ಹರಿದು ಹೋಗಿವೆ ಎಂದು ಆಕ್ರೋಶ ಹೊರ ಹಾಕಿದರು. ತಕ್ಷಣ ಇವರಿಗೆ ದೇಶದ ಕಾನೂನಿನ ಅನುಸಾರ ಹಕ್ಕು ಪತ್ರ ಕೊಡಬೇಕೆಂದು ಒತ್ತಾಯಿಸಿದರು.
    ಕೇಂದ್ರ ಹಾಗು ರಾಜ್ಯ ಸರ್ಕಾರಗಳು ರಾಜ್ಯದ ಉಚ್ಛ ನ್ಯಾಯಾಲಯ ಹಾಗು ದೇಶದ ಸರ್ವೋಚ್ಛ ನ್ಯಾಯಾಲಯಗಳಲ್ಲಿ ಪ್ರಕರಣಗಳಿದ್ದಾಗ ವಸ್ತುಸ್ಥಿತಿಯನ್ನು ನ್ಯಾಯಾಲಯಕ್ಕೆ ತಿಳಿಸದಿದ್ದರಿಂದ ಜಿಲ್ಲೆಯಲ್ಲಿ ಕಂದಾಯ ಇಲಾಖೆಯಿಂದ ಹಕ್ಕುಪತ್ರ ಕೊಟ್ಟ ಪ್ರಕರಣಗಳಲ್ಲೂ ಅರಣ್ಯ ಜಮೀನೆಂದು ನಮೂದಾಗುತ್ತಿದೆ. ಹುಲ್ಲುಬನಿ, ಗೋಮಾಳ ಎಂದು ನಮೂದಿರುವ ಪ್ರದೇಶಗಳನ್ನು ಬೇಕಾಬಿಟ್ಟಿಯಾಗಿ ಅರಣ್ಯ ಎಂದು ನಮೂದು ಮಾಡಲಾಗಿದೆ. ವಾಸದ ಮನೆ, ಜಮೀನಿರುವ ಯಾವುದೇ ಜಾಗಗಳನ್ನು ಅರಣ್ಯ ಎಂದು ನಮೂದಿಸಬಾರದೆಂದು ಆಗ್ರಹಿಸಿದರು.
    ಮಲೆನಾಡು ರೈತರ ಹೋರಾಟ ಸಮಿತಿ ಪದಾಧಿಕಾರಿಗಳು, ಬಗರ್ ಹುಕುಂ ರೈತರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.  

No comments:

Post a Comment