Tuesday, September 19, 2023

ಚಂದ್ರಯಾನ-3 ಅದ್ಭುತ ಸಾಧನೆ, ವಿಕ್ರಮ್ ಲ್ಯಾಂಡರ್ ಪಾತ್ರ ಬಹುಮುಖ್ಯ : ಕೆ. ಅನಿಲ್ ಕುಮಾರ್

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಶಾಖೆ ವತಿಯಿಂದ ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಚಂದ್ರಯಾನ-3 ಸಾಧನೆ ಮತ್ತು ಮಹತ್ವ ಕಾರ್ಯಕ್ರಮದಲ್ಲಿ ಬೆಂಗಳೂರು ಇಸ್ರೋ ಚಂದ್ರಯಾನ-3, ವಿಕ್ರಮ್ ಲ್ಯಾಂಡರ್ ಉಪ ಯೋಜನಾ ನಿರ್ದೇಶಕ ಕೆ. ಅನಿಲ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಭದ್ರಾವತಿ, ಸೆ. 19 : ಚಂದ್ರಯಾನ-3 ಅದ್ಭುತ ಸಾಧನೆಯಾಗಿದ್ದು, ಅದರಲ್ಲೂ ಈ ಯೋಜನೆಯಲ್ಲಿ ವಿಕ್ರಮ್ ಲ್ಯಾಂಡರ್ ಪಾತ್ರ ಬಹುಮುಖ್ಯವಾಗಿದೆ ಎಂದು ಬೆಂಗಳೂರು ಇಸ್ರೋ ಚಂದ್ರಯಾನ-3, ವಿಕ್ರಮ್ ಲ್ಯಾಂಡರ್ ಉಪ ಯೋಜನಾ ನಿರ್ದೇಶಕ ಕೆ. ಅನಿಲ್ ಕುಮಾರ್ ಹೇಳಿದರು.

    ಅವರು ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಶಾಖೆ ವತಿಯಿಂದ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಚಂದ್ರಯಾನ-3 ಸಾಧನೆ ಮತ್ತು ಮಹತ್ವ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

    ಭೂಮಿಯಿಂದ ಯಾವುದೇ ಗ್ರಹದ ಕಕ್ಷೆಗೆ ಉಪಗ್ರಹ ಸೇರಿಸಲು ಹಾಗು ಕಾರ್ಯಾಚರಣೆ ಮಾಡಲು ಲ್ಯಾಂಡರ್ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಭೂಮಿಯ ಗುರುತ್ವಾಕರ್ಷಣ ಹಾಗು ಭೂಮಿಯಿಂದ ಇತರೆ ಗ್ರಹಗಳ ದೂರ ಮತ್ತು ಆ ಗ್ರಹ ಗಳ ವಿಸ್ತೀರ್ಣ ಹಾಗು ಗುಣ ಲಕ್ಷಣಗಳನ್ನು ಸರಿಯಾಗಿ ಅಭ್ಯಸಿಸಿ ಲ್ಯಾಂಡರ್ ಗಳನ್ನು ನಿರ್ಮಾಣ ಮಾಡಲಾಗುತ್ತದೆ. ಚಂದ್ರಯಾನ-3, ವಿಕ್ರಮ್ ಲ್ಯಾಂಡರ್ ಕಾರ್ಯ ವೈಖರಿ ಅದ್ಭುತವಾಗಿದೆ ಎಂದರು.

    ಶಿವಮೊಗ್ಗ ಖಗೋಳ ತಜ್ಞ ಡಾ. ಶೇಖರ್ ಗೌಳೇರ್ ಮಾತನಾಡಿ, ನಮ್ಮೆಲ್ಲರಿಗೂ ಭವಿಷ್ಯದಲ್ಲಿ ಚಂದ್ರನ ಅಗತ್ಯತೆ ಅನಿವಾರ್ಯವಾಗಬಹುದಾಗಿದೆ. ಈ ನಿಟ್ಟಿನಲ್ಲಿ ಚಂದ್ರಯಾನ-3 ಹೆಚ್ಚಿನ ಸಹಕಾರಿಯಾಗಲಿದೆ. ಬಾಹ್ಯಕಾಶ ಕ್ಷೇತ್ರದಲ್ಲಿ ದೇಶ ಉತ್ತಮ ಸಾಧನೆ ಮಾಡಿದ್ದು, ವಿಶ್ವದ ಗಮನ ಸೆಳೆದಿದೆ. ವಿಜ್ಞಾನ ಮತ್ತು ಧರ್ಮ ಎರಡೂ ಸಹ ಬೇರೆ ಬೇರೆಯಾಗಿದ್ದು, ಧರ್ಮದ ಆಚರಣೆ ಅವರವರ ವೈಯಕ್ತಿಕ ಹಿನ್ನಲೆಯನ್ನು ಅವಲಂಬಿಸಿದೆ. ಈ ಹಿನ್ನಲೆಯಲ್ಲಿ ಮಕ್ಕಳು ವಿಜ್ಞಾನ ಮತ್ತು ಧರ್ಮ ಎರಡನ್ನು ಹೊಂದಾಣಿಕೆ ಮಾಡಿ ನೋಡಬಾರದು ಎಂದರು.

    ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಮಾತನಾಡಿ, ಮಕ್ಕಳಿಗೆ ಪಠ್ಯೇತರ ವಿಷಯಗಳು ಕುರಿತು ಸಹ ಮಾಹಿತಿ ನೀಡಬೇಕೆಂಬ ಉದ್ದೇಶದಿಂದ ವೇದಿಕೆ ಈ ಕಾರ್ಯಕ್ರಮ ಆಯೋಜಿಸಿದೆ. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.

    ಕಾರ್ಯಕ್ರಮ ಉದ್ಯಮಿ ಬಿ.ಕೆ ಜಗನ್ನಾಥ್ ಉದ್ಘಾಟಿಸಿದರು. ವೇದಿಕೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ವಿದ್ಯಾಸಂಸ್ಥೆ ಸಂಸ್ಥಾಪಕರು, ಕಾರ್ಯಾಧ್ಯಕ್ಷ ಬಿ.ಎಲ್ ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಮಾಪತಿ ಸ್ವಾಗತಿಸಿದರು. ಹಿರಿಯ ಸಾಹಿತಿ ಕಾಂತಪ್ಪ ಮತ್ತು ಶಿಕ್ಷಕ ಎ. ತಿಪ್ಪೇಸ್ವಾಮಿ ನಿರೂಪಿಸಿದರು.

    ವಿದ್ಯಾಸಂಸ್ಥೆ ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ ಹಾಗು ವೇದಿಕೆ ಪ್ರಮುಖರು, ಶಿಕ್ಷಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

No comments:

Post a Comment