
ಭದ್ರಾವತಿಯಲ್ಲಿ ಕೇರಳ ಸಮಾಜಂ ವತಿಯಿಂದ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ೧೩ನೇ ವರ್ಷದ ಓಣಂ ಅಚರಣೆ ಏರ್ಪಡಿಸಲಾಗಿತ್ತು. ಶಿವಮೊಗ್ಗ ಕೇರಳ ಸಮಾಜಂ ಮುಖಂಡ ಎನ್.ಡಿ ಸತೀಶ್, ತಾಲೂಕು ಅಧ್ಯಕ್ಷ ಗಂಗಾಧರ್, ಸುರೇಶ್, ಶಿವುಪಾಟೀಲ್, ಶೋಭಾ ಬಾಲಚಂದ್ರನ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ ; ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಸಹ ಭಾಷೆ, ವೇಷ-ಭೂಷಣ, ಸಂಪ್ರದಾಯ ಆಚರಣೆಗಳನ್ನು ಅನುಸರಿಸುವ ಮೂಲಕ ತಮ್ಮ ಮಾತೃನೆಲದ ಮೇಲಿನ ಅಭಿಮಾನ ಜೀವಂತವಾಗಿಟ್ಟಿರುವುದು ಮಲೆಯಾಳಿ ಭಾಷಿಕರ ವಿಶೇಷತೆಯಾಗಿದೆ ಎಂದು ಶಿವಮೊಗ್ಗ ಕೇರಳ ಸಮಾಜಂ ಮುಖಂಡ ಎನ್.ಡಿ ಸತೀಶ್ ಹೇಳಿದರು.
ಅವರು ಕೇರಳ ಸಮಾಜಂ ವತಿಯಿಂದ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ೧೩ನೇ ವರ್ಷದ ಓಣಂ ಅಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಕೇರಳಿಗರು ಎಲ್ಲೆಡೆ ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡಿದ್ದಾರೆ. ದೂರದೃಷ್ಟಿ ಉಳ್ಳವರಾಗಿದ್ದು, ಭವಿಷ್ಯದ ಬಗ್ಗೆ ಚಿಂತನೆ ಮಾಡುವವರಾಗಿದ್ದಾರೆ. ಪ್ರಪಂಚದಲ್ಲಿ ಸೇವಾ ಕ್ಷೇತ್ರಗಳು ಎಲ್ಲೇ ಇದ್ದರೂ ಅಲ್ಲಿ ಮಲೆಯಾಳಿಗಳು ಇದ್ದೇ ಇರುತ್ತಾರೆ. ಆ ಮೂಲಕ ಪ್ರಪಂಚದ ಎಲ್ಲರೊಂದಿಗೂ ಸಮನ್ವಯತೆ ಸಾಧಿಸಿಕೊಂಡಿದ್ದು, ಇದು ಇವರ ವಿಶೇಷತೆಯಾಗಿದೆ ಎಂದರು.
ಇಲ್ಲಿನ ಕೇರಳ ಸಮಾಜಂ ಜಾತಿ, ಮತ ಬೇಧಭಾವವಿಲ್ಲದೆ ಮಲೆಯಾಳಿ ಭಾಷಿಕರನ್ನು ಒಗ್ಗೂಡಿಸಿಕೊಂಡು ಓಣಂ ಆಚರಿಸಿಕೊಂಡುಬರುತ್ತಿರುವುದು ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಘಟಿತವಾಗಿ ಮುನ್ನಡೆಯುವಂತಾಗಬೇಕೆಂದರು.
ಉಡುಪಿ ಕೇರಳ ಸಮಾಜಂ ಅಧ್ಯಕ್ಷ ಸುಗುಣ ಕುಮಾರ್ ಮಾತನಾಡಿ, ಕೇರಳಿಗರ ಮಾತೃ ಭಾಷೆ ಮಲೆಯಾಳಿ. ಆದರೂ ಪ್ರಪಂಚದ ಯಾವುದೇ ಮೂಲೆಯಲ್ಲಿ ವಾಸಿಸುತ್ತಿದ್ದರೂ ಸಹ ಅಲ್ಲಿನ ಭಾಷೆಯನ್ನು ಕಲಿಯಬೇಕು. ಆ ಮೂಲಕ ಎಲ್ಲರೊಳಗೆ ಒಂದಾಗಬೇಕೆಂದರು.
ಕೇರಳ ಸಮಾಜಂ ಅಧ್ಯಕ್ಷ ಗಂಗಾಧರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಲೆಯಾಳಿಗರು ಎಲ್ಲೆ ಇದ್ದರೂ, ಯಾವುದೇ ಕ್ಷೇತ್ರದಲ್ಲಿದ್ದರೂ ಸಹ ಅವರು ನಿಷ್ಠೆ,ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುತ್ತಾರೆ. ಇದು ಮಲೆಯಾಳಿ ಸಮುದಾಯದವರ ವಿಶೇಷತೆಯಾಗಿದೆ ಎಂದರು.
ಬಹುಮುಖ್ಯವಾಗಿ ಕೇರಳಿಗರ ಮತ್ತೊಂದು ವಿಶೇಷತೆ ಎಂದರೆ, ಯಾರನ್ನೂ ಅನುಕರಣೆ ಮಾಡುವುದಿಲ್ಲ. ಬದಲಿಗೆ ಅವರು ತಮ್ಮ ಭಾಷೆ, ವೇಷ-ಭೂಷಣ, ಸಂಪ್ರದಾಯ ಆಚರಣೆಗಳನ್ನು ಇತರರು ಅನುಸರಣೆ ಮಾಡುವಂತೆ ಮಾಡುತ್ತಾರೆ ಎಂದರು.
ಕೇರಳ ಸಮಾಜಂ ಮಹಿಳಾ ವಿಭಾಗದ ಅಧ್ಯಕ್ಷೆ ಶೋಭಾ ಬಾಲಚಂದ್ರನ್, ಯುವ ವಿಭಾಗದ ಅಧ್ಯಕ್ಷ ಪ್ರಸನ್ನ ಕುಮಾರ್, ವಿಐಎಸ್‌ಎಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಸುರೇಶ್, ಭೋವಿ ಸಮಾಜದ ಅಧ್ಯಕ್ಷ ಶಿವು ಪಾಟೀಲ್ ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಿ.ಆರ್ ರಮೇಶ್ ಪ್ರಾರ್ಥಿಸಿ, ವಿಜಯ್ ಕುಮಾರ್ ಸ್ವಾಗತಿಸಿದರು. ಪ್ರಶಾಂತ್ ಅಪ್ಪು, ಡೇವಿಸ್ ಕಾರ್ಯಕ್ರಮ ನಿರೂಪಿಸಿದರು. ಹೂವಿನ ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನಗಳನ್ನು ಹಾಗು ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್‌ಗಳು ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದು ಸಾಧನೆ ಮಾಡಿರುವ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.