ಸರ್ಕಾರದ ಸೌಲಭ್ಯ ಪಡೆದುಕೊಳ್ಳಿ ಆತಂಕಕ್ಕೆ ಒಳಗಾಗದೆ ಕೊರೋನಾ ವೈರಸ್ ವಿರುದ್ಧ ಹೋರಾಡಿ
ಭದ್ರಾವತಿಯಲ್ಲಿ ಕಟ್ಟಡ ಕಾರ್ಮಿಕರು ಕೂಲಿಬ್ಲಾಕ್ ಶೆಡ್ ಶ್ರೀ ಆಂಜನೇಯ ಅಗ್ರಹಾರದಲ್ಲಿರುವ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಕಛೇರಿಯಲ್ಲಿ ಶುಕ್ರವಾರ ಕಾರ್ಮಿಕರ ದಿನಾಚರಣೆ ಆಚರಿಸಿದರು.
ಭದ್ರಾವತಿ, ಮೇ. ೧: ಕಟ್ಟಡ ಕಾರ್ಮಿಕರು ನಗರದ ಕೂಲಿಬ್ಲಾಕ್ ಶೆಡ್ ಶ್ರೀ ಆಂಜನೇಯ ಅಗ್ರಹಾರದಲ್ಲಿರುವ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಕಛೇರಿಯಲ್ಲಿ ಶುಕ್ರವಾರ ಕಾರ್ಮಿಕರ ದಿನಾಚರಣೆ ಆಚರಿಸಿದರು.ಕೊರೋನಾ ವೈರಸ್ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕಟ್ಟಡ ಕಾರ್ಮಿಕರು ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ಹಾಗೂ ಕೆಲಸದ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಲಾಯಿತು.
ಪ್ರಸ್ತುತ ಉಂಟಾಗಿರುವ ಸಂದಿಗ್ದ ಪರಿಸ್ಥಿತಿಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಕಾರ್ಮಿಕರಿಗೆ ಸಂಘದ ವತಿಯಿಂದ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗಿದೆ. ಅಲ್ಲದೆ ಸರ್ಕಾರದಿಂದ ೨ ಸಾವಿರ ರು. ಆರ್ಥಿಕ ನೆರವು ಬಂದಿದ್ದು, ಇದನ್ನು ಪಡೆದುಕೊಳ್ಳಲು ಮುಂದಾಗಬೇಕು. ಕಾರ್ಮಿಕ ಇಲಾಖೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ನೋಂದಾಣಿ ಮಾಡಿಸಿಕೊಂಡು ಗುರುತಿನ ಚೀಟಿ ಪಡೆದು ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸರ್ಕಾರದ ವತಿಯಿಂದ ದಿನಸಿ ಸಾಮಗ್ರಿ ಬರಲಿದ್ದು, ಕಾರ್ಮಿಕರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ಆರ್ಥಿಕ ನೆರವಿನ ಅಗತ್ಯವಿದ್ದಲ್ಲಿ ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸಿ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕೆಂದು ಕಾರ್ಮಿಕ ಮುಖಂಡರು ತಿಳಿಸಿದರು.
ಇದಕ್ಕೂ ಮೊದಲು ಕಾರ್ಮಿಕರ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಕಾರ್ಮಿಕರಿಗೆ ಸಿಹಿ ಹಂಚಲಾಯಿತು.
ಸಂಘದ ಅಧ್ಯಕ್ಷ ನಾಗರಾಜ್, ಕಾರ್ಯಾಧ್ಯಕ್ಷ ಸುಂದರ್ ಬಾಬು, ಉಪಾಧ್ಯಕ್ಷ ಚಂದ್ರಶೇಖರ್, ತಾಂತ್ರಿಕ ಸಲಹೆಗಾರ ಮನೋಹರ್, ಕಾರ್ಯದರ್ಶಿ ನಾರಾಯಣ ಸ್ವಾಮಿ, ಶಿವು, ಸುಬ್ರಮಣಿ, ನಿಸಾರ್, ಅಂತೋಣಿ ಕ್ರೂಸ್, ಹರೀಶ್ ಶಿಲ್ಪಿ, ರೆಡ್ಡಿ, ಕೃಷ್ಣ, ಕುಮಾರ್, ಅಂತೋಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.