Wednesday, May 20, 2020

ಎಂಪಿಎಂ ಸ್ವಯಂ ನಿವೃತ್ತ ಕಾರ್ಮಿಕರ ಬಾಕಿ ಹಣ ಬಿಡುಗಡೆ

೨೦ ಕೋ. ರು. ದುರುಪಯೋಗಪಡಿಸಿಕೊಳ್ಳದಿರಲು ಆಡಳಿತ ಮಂಡಳಿಗೆ ಸೂಚನೆ 


ಭದ್ರಾವತಿ ಮೈಸೂರು ಕಾಗದ ಕಾರ್ಖಾನೆ ವಿಆರ್‌ಎಸ್/ವಿಎಸ್‌ಎಸ್ ಯೋಜನೆಯಡಿ ಸ್ವಯಂ ನಿವೃತ್ತಿ ಹೊಂದಿರುವ ಕಾರ್ಮಿಕರಿಗೆ ಬರಬೇಕಾದ ಬಾಕಿ ಹಣ ೨೦ ಕೋ. ರು ಬಿಡುಗಡೆಗೊಳಿಸಿ ಆದೇಶಿಸಿರುವುದು. 
ಭದ್ರಾವತಿ, ಮೇ. ೨೦:  ವಿಆರ್‌ಎಸ್/ವಿಎಸ್‌ಎಸ್ ಯೋಜನೆಯಡಿ ಸ್ವಯಂ ನಿವೃತ್ತಿ ಹೊಂದಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ಕಾರ್ಮಿಕರಿಗೆ ನೀಡಬೇಕಾದ ಬಾಕಿ ಹಣ ಕೊನೆಗೂ ಸರ್ಕಾರ ಮಂಜೂರಾತಿ ಮಾಡಿದ್ದು, ಇದೀಗ ಕಾರ್ಮಿಕರು ನಿಟ್ಟುಸಿರು ಬಿಡುವಂತಾಗಿದೆ. 
ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮಂಗಳವಾರ ಪತ್ರ ಬರೆದಿದ್ದು, ತಕ್ಷಣ ೨೦ ಕೋ. ರು. ಬಿಡುಗಡೆಗೊಳಿಸಲಾಗುತ್ತಿದೆ. ಈ ಹಣವನ್ನು ಯಾವುದೇ ಕಾರಣಕ್ಕೂ ದುರುಪಯೋಗಪಡಿಸಿಕೊಳ್ಳದೆ ವಿಆರ್‌ಎಸ್/ವಿಎಸ್‌ಎಸ್ ಯೋಜನೆಯಡಿ ಸ್ವಯಂ ಹೊಂದಿರುವ ಕಾರ್ಮಿಕರಿಗೆ ನೀಡಬೇಕೆಂದು ಹಾಗು ಯೋಜನೆಯ ಲೆಕ್ಕ ಪರಿಶೋಧನಾ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಈ ಹಿಂದೆ ಕಾರ್ಖಾನೆಯನ್ನು ಖಾಸಗಿಕರಣಗೊಳಿಸುವ ಸಂಬಂಧ ಮಾನವ ಸಂಪನ್ಮೂಲ ಶೂನ್ಯಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾಯಂ ಕಾರ್ಮಿಕರಿಗೆ ಸ್ವಯಂ ನಿವೃತ್ತಿ ಯೋಜನೆ(ವಿಆರ್‌ಎಸ್) ಮತ್ತು ಗುತ್ತಿಗೆ ಕಾರ್ಮಿಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸ್ವಯಂ ಪ್ರತ್ಯೇಕೀಕರಣ ಯೋಜನೆ(ವಿಎಸ್‌ಎಸ್) ಜಾರಿಗೊಳಿಸಿತ್ತು. ಶೇ.೯೦ರಷ್ಟು ಕಾರ್ಮಿಕರು ಈ ಯೋಜನೆಯಡಿ ನಿವೃತ್ತಿ ಪಡೆದುಕೊಂಡಿದ್ದರು. ಸರ್ಕಾರ ಎರಡು ಕಂತುಗಳಲ್ಲಿ ಈ ಯೋಜನೆಗೆ ಹಣ ಬಿಡುಗಡೆಗೊಳಿಸಿತ್ತು. ಆದರೆ ಆಡಳಿತ ಮಂಡಳಿ ಲೆಕ್ಕ ಪರಿಶೋಧನಾ ವರದಿ ಪೂರ್ಣಗೊಳಿಸದ ಕಾರಣ ಕಾರ್ಮಿಕರಿಗೆ ಬರಬೇಕಾದ ಬಾಕಿ ಹಣದಲ್ಲಿ ಕಡಿತ ಮಾಡಿತ್ತು. ಈ ಹಿನ್ನಲೆಯಲ್ಲಿ ಕಾರ್ಮಿಕರು ಕೊನೆ ಹಂತದಲ್ಲಿ ಸಂಕಷ್ಟಕ್ಕೆ ಒಳಗಾಗುವ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ೨೦ ಕೋ. ರು. ಬಿಡುಗಡೆಗೊಳಿಸಿದೆ. ಇದರಿಂದಾಗಿ ಕಾರ್ಮಿಕರು ಪ್ರಸ್ತುತ ಎದುರಾಗಿರುವ ಸಂಕಷ್ಟದಿಂದ ಪಾರಾಗುವಂತಾಗಿದೆ. 



ಮೂಕ ಪ್ರಾಣಿಗಳ ನೆರವಿಗೂ ಮುಂದಾದ ಶಾಸಕ ಬಿ.ಕೆ ಸಂಗಮೇಶ್ವರ್

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಮೂಕ ಪ್ರಾಣಿಗಳ ಸಂಕಷ್ಟಕ್ಕೆ ಸ್ಪಂದಿಸಿ ಗೋ ಶಾಲೆಗಳಿಗೆ ಮೇವು ಕಳುಹಿಸಿ ಕೊಡುತ್ತಿರುವುದು. 
ಭದ್ರಾವತಿ, ಮೇ. ೨೦: ಒಂದೆಡೆ ದೇಶಾದ್ಯಂತ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಮತ್ತೊಂದೆಡೆ ಶ್ರೀಸಾಮಾನ್ಯರ ಬದುಕು ದಿನದಿಂದ ದಿನಕ್ಕೆ ಸಂಕಷ್ಟಗಳಿಗೆ ಬಲಿಯಾಗುತ್ತಿದೆ. ಈ ನಡುವೆ ಸ್ವಯಂ ಸೇವಾ ಸಂಸ್ಥೆಗಳು, ಜನ ಪ್ರತಿನಿಧಿಗಳು, ಉಳ್ಳವರು, ದಾನಿಗಳು ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಮುಂದಾಗುತ್ತಿದ್ದಾರೆ. ಈ ಪೈಕಿ ಶಾಸಕ ಬಿ.ಕೆ ಸಂಗಮೇಶ್ವರ್ ಸಹ ಒಬ್ಬರಾಗಿದ್ದು, ದೇಶದಲ್ಲಿ ಲಾಕ್‌ಡೌನ್ ಜಾರಿಗೆ ಬಂದ ನಂತರ ರೈತರು, ಕಡು ಬಡವರು, ಕೂಲಿ ಕಾರ್ಮಿಕರು, ನಿರಾಶ್ರಿತರು ಸೇರಿದಂತೆ ಎಲ್ಲಾ ವರ್ಗದ ಶ್ರೀಸಾಮಾನ್ಯರ ನೆರವಿಗೆ ಮುಂದಾಗಿದ್ದಾರೆ. ಇದೀಗ ಮೂಕ ಪ್ರಾಣಿಗಳ ಹಸಿವನ್ನೂ ಸಹ ನೀಗಿಸುವ ಕಾರ್ಯ ಕೈಗೊಳ್ಳುತ್ತಿದ್ದಾರೆ. 
ರೈತರ ಹಿತರಕ್ಷಣೆಗಾಗಿ ರೈತರು ಬೆಳೆದ ತರಕಾರಿಯನ್ನು ಖರೀದಿಸಿ ವಿಧಾನಸಭಾ ಕ್ಷೇತ್ರದಾದ್ಯಂತ ಪ್ರತಿ ಮನೆ ಮನೆಗೆ ಹಂಚುವಲ್ಲಿ ಯಶಸ್ವಿಯಾಗಿದ್ದರು. ನಂತರ ಕಡು ಬಡವರು, ಕೂಲಿ ಕಾರ್ಮಿಕರು, ನಿರಾಶ್ರಿತರನ್ನು ಗುರುತಿಸಿ ಬೆಲ್ಲದ ಗಾಣ ಹೊಂದಿರುವ ರೈತರ ಸಹಕಾರ ಸಂಘದ ಸಹಕಾರದೊಂದಿಗೆ ಸಾವಿರಾರು ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಿದ್ದರು. 
ಇದೀಗ ಶಿವಮೊಗ್ಗ, ಅರಸೀಕೆರೆ ಮತ್ತು ಬಾಣವಾರ ಗೋ ಶಾಲೆಗಳಿಗೆ ಕಳೆದ ೭ ದಿನಗಳಿಂದ ನಿರಂತರವಾಗಿ ಮೇವು ವಿತರಣೆ ಮಾಡುತ್ತಿದ್ದು, ಮುಂದಿನ ೭ ದಿನಗಳ ವರೆಗೆ ಕಾರ್ಯ ನಡೆಯಲಿದೆ. ಈ ಕಾರ್ಯಕ್ಕೆ ಸಹೋದರರಾದ ಬಿ.ಕೆ ಜಗನ್ನಾಥ, ಬಿ.ಕೆ ಮೋಹನ್, ಬಿ.ಕೆ ಶಿವಕುಮಾರ್ ಹಾಗೂ ಸ್ಥಳೀಯ ಮುಖಂಡರು ಸಹ ಕೈ ಜೋಡಿಸಿದ್ದಾರೆ. 

ವಿಇಎಸ್ ವಿದ್ಯಾಸಂಸ್ಥೆ ಜಮೀನು ಪರಭಾರೆ : ಆಡಳಿತ ಮಂಡಳಿ ವಿರುದ್ಧ ಆಕ್ರೋಶ

ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಗೆ ಸೇರಿದ ಜಮೀನನ್ನು ಅಕ್ರಮವಾಗಿ ಪರಭಾರೆ ಮಾಡಿರುವುದನ್ನು ಖಂಡಿಸಿ ಮಂಗಳವಾರ  ಆಡಳಿತ ಮಂಡಳಿ ವಿರುದ್ಧ ಕೆಲವು ಸರ್ಕಾರಿ ನೌಕರರು ಹಾಗೂ ಶಿಕ್ಷಕರು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಎದುರು ಆಕ್ರೋಶ ವ್ಯಕ್ತಪಡಿಸಿದರು. 
ಭದ್ರಾವತಿ, ಮೇ. ೨೦: ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಗೆ ಸೇರಿದ ಜಮೀನನ್ನು ಅಕ್ರಮವಾಗಿ ಪರಭಾರೆ ಮಾಡಿರುವುದನ್ನು ಖಂಡಿಸಿ ಮಂಗಳವಾರ  ಆಡಳಿತ ಮಂಡಳಿ ವಿರುದ್ಧ ಕೆಲವು ಸರ್ಕಾರಿ ನೌಕರರು ಹಾಗೂ ಶಿಕ್ಷಕರು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ ಎದುರು ಆಕ್ರೋಶ ವ್ಯಕ್ತಪಡಿಸಿದರು. 
ವಿದ್ಯಾಸಂಸ್ಥೆಗೆ ಆಗಮಿಸಿದ್ದ ಸಿ.ಎಸ್ ಷಡಾಕ್ಷರಿ ಸಿಬ್ಬಂದಿಗಳು ಹಾಗೂ ಪೋಷಕರ ದೂರುಗಳನ್ನು ಸ್ವೀಕಾರ   ಮಾಡಿ ಆಡಳಿತ ಮಂಡಳಿಯ ಕಾರ್ಯ ವೈಖರಿ ಹಾಗೂ ಲೋಪದೋಷಗಳನ್ನು ಪರಿಶೀಲಿಸಿದರು.
ಶಿಕ್ಷಕರ ಸಂಘದ ಪ್ರಮುಖರಾದ ಕೂಬಾನಾಯ್ಕ, ಯು. ಮಹಾದೇವಪ್ಪ, ಬಸವಂತರಾವ್ ದಾಳೆ, ಲೋಹಿತ್, ಧನಂಜಯ ಸೇರಿದಂತೆ ಇನ್ನಿತರ ನೇತೃತ್ವದಲ್ಲಿ ಕೆಲವು ಸರ್ಕಾರಿ ನೌಕರರು, ಶಿಕ್ಷಕರು ಆಡಳಿತ ಮಂಡಳಿ ವಿರುದ್ಧ ಆರೋಪ ಮಾಡಿ ಈ ಹಿಂದೆ ಶೈಕ್ಷಣಿಕ ಚಟುವಟಿಕೆಗಳಿಗಾಗಿ ಅನ್ವರ್ ಕಾಲೋನಿಯಲ್ಲಿ ಸರ್ವೆ ನಂ. ೫೮/೬ರ ೩ ಎಕರೆ ಜಮೀನನ್ನು ವಿದ್ಯಾಸಂಸ್ಥೆ ಖರೀದಿಸಿದ್ದು, ಇದೀಗ ಅಧಿಕ ಮೌಲ್ಯದ ಜಮೀನನ್ನು ಆಡಳಿತ ಮಂಡಳಿ ಅಕ್ರಮವಾಗಿ ಕಡಿಮೆ ಬೆಲೆಗೆ ಪರಭಾರೆ ಮಾಡಿದೆ. ತಕ್ಷಣ ಈ ಜಮೀನನ್ನು ಹಿಂಪಡೆದುಕೊಳ್ಳಬೇಕೆಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿ.ಎಸ್ ಷಡಾಕ್ಷರಿ ಯಾವುದೇ ಕಾರಣಕ್ಕೂ ಜಮೀನನ್ನು ಬೇರೆಯವರಿಗೆ ಪರಭಾರೆ ಮಾಡಲು ಬಿಡುವುದಿಲ್ಲ. ವಿದ್ಯಾಸಂಸ್ಥೆಯ ಶೈಕ್ಷಣಿಕ ಚಟುವಟಿಕೆಗಳಿಗೆ   ಬಳಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಂಘದ ತಾಲೂಕು ಶಾಖೆ ಅಧ್ಯಕ್ಷ, ವಿದ್ಯಾಸಂಸ್ಥೆ ಪದನಿಮಿತ್ತ ಛೇರ್‍ಮನ್ ಎನ್. ಕೃಷ್ಣಪ್ಪ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ಗ್ರಾಮ ಪಂಚಾಯಿತಿಗಳಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಆಡಳಿತವನ್ನೇ ಮುಂದುವರೆಸುವುದು

ಸಚಿವ ಕೆ.ಎಸ್ ಈಶ್ವರಪ್ಪನವರಿಗೆ ಸಿಂಗನಮನೆ ಗ್ರಾ.ಪಂ. ವತಿಯಿಂದ ಮನವಿ 

ಭದ್ರಾವತಿ ಸಿಂಗನಮನೆ ಗ್ರಾಮ ಪಂಚಾಯಿತಿ
ಭದ್ರಾವತಿ, ಮೇ. ೧೯: ವಿಶ್ವದಾದ್ಯಂತ ಕೋವಿಡ್-೧೯ ವ್ಯಾಪಕವಾಗಿ ಹರಡುತ್ತಿದ್ದು, ಇದರ ದುಷ್ಪರಿಣಾಮ ಎಲ್ಲಾ ಕ್ಷೇತ್ರಗಳನ್ನು ವ್ಯಾಪಿಸುತ್ತಿದೆ.  ಮೇ ತಿಂಗಳ ಅಂತ್ಯದೊಳಗೆ ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ನಡೆಯಬೇಕಿದ್ದ ಚುನಾವಣೆ ಸಹ ಇದರಿಂದಾಗಿ ಮುಂದೂಡಲ್ಪಟ್ಟಿದೆ. ಈ ನಡುವೆ ರಾಜ್ಯ ಸರ್ಕಾರ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿ ನೇಮಕಗೊಳಿಸಲು ಮುಂದಾಗಿರುವುದು ತಿಳಿದು ಬಂದಿದೆ. ತಕ್ಷಣ ಈ ನಿರ್ಧಾರದಿಂದ ಹಿಂದೆ ಸರಿದು ಪ್ರಸ್ತುತ ಅಸ್ತಿತ್ವದಲ್ಲಿರುವ ಚುನಾಯಿತ ಪ್ರತಿನಿಧಿಗಳ ಆಡಳಿತವನ್ನೇ ಮುಂದುವರೆಸಬೇಕೆಂದು ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್ ಈಶ್ವರಪ್ಪನವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. 
ಕೋವಿಡ್-೧೯ರ ಸಂಕಷ್ಟದ ಸಮಯದಲ್ಲಿ ಚುನಾವಣೆ ನಡೆಸುವುದು ಅಸಾಧ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ರಾಜ್ಯ ಸರ್ಕಾರ ಅನಿವಾರ್ಯವಾಗಿ ಚುನಾವಣೆಯನ್ನು ೬ ತಿಂಗಳು ಮುಂದೂಡಿರುವುದು ಸ್ವಾಗತಾರ್ಹವಾಗಿದ್ದು, ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಕ ಅಥವಾ ಉಸ್ತುವಾರಿ ಸಮಿತಿ ರಚಿಸಲು ಸರ್ಕಾರಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಅದರೆ ಪ್ರಸ್ತುತ ಎದುರಾಗಿರುವ ಸಂದಿಗ್ದ ಪರಿಸ್ಥಿತಿಯಲ್ಲಿ ಇದು ಸೂಕ್ತವಲ್ಲ. ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸರ್ಕಾರದ ರಥದ ಎರಡು ಗಾಲಿಗಳಿದ್ದಂತೆ. ಸರ್ಕಾರದ ರಥ ಮುನ್ನೆಡೆಸುವಲ್ಲಿ ಇಬ್ಬರ ಪಾತ್ರವೂ ಬಹಳ ಪ್ರಮುಖವಾಗಿದೆ. ಗ್ರಾಮ ಪಂಚಾಯಿತಿ ಒಂದು ಸ್ಥಳೀಯ ಸ್ವಯಂ ಸರ್ಕಾರವಾಗಿದ್ದು, ಚುನಾಯಿತ ಪ್ರತಿನಿಧಿಗಳು ಪಂಚಾಯತ್ ಆಡಳಿತದಲ್ಲಿ ಸಕ್ರಿಯವಾಗಿ ಭಾಗವಹಿಸಿ ಅನುಭವ ಪಡೆದು ಗ್ರಾಮ ಪಂಚಾಯತ್ ಅಭಿವೃದ್ಧಿಯಲ್ಲಿ ಅವರ ಪಾತ್ರ, ಜವಾಬ್ದಾರಿಗಳ ಮಹತ್ವವನ್ನು ಆಳವಾಗಿ ಅರ್ಥೈಸಿಕೊಂಡಿದ್ದಾರೆ. ಇದರಿಂದಾಗಿ ಭೀಕರ ವಿಕೋಪದ ಪರಿಸ್ಥಿತಿಯನ್ನೂ ಸಹ ನಿಭಾಯಿಸಲು ಸಾಧ್ಯವಾಗಿದೆ. ಗ್ರಾಮೀಣ ಜನರ ಅಗತ್ಯಗಳೇನು, ಅಲ್ಲಿನ ಪರಿಸ್ಥಿತಿ ಹೇಗಿದೆ, ಆಗಬೇಕಾದ ಪ್ರಮುಖ ಕಾರ್ಯಗಳೇನು, ಮುಂದಿರುವ ಸವಾಲುಗಳೇನು ಎಂಬುದನ್ನು ಅರಿತುಕೊಂಡಿದ್ದಾರೆಂದು ಮನವರಿಕೆ ಮಾಡಲಾಗಿದೆ.  
ವಿಕೋಪದ ಪರಿಸ್ಥಿತಿ ಇನ್ನೂ ಮುಂದುವರೆಯುತ್ತಿರುವ ಸವಾಲಿನ ಸಮಯದಲ್ಲಿ ಪಂಚಾಯತ್ ಆಡಳಿತಕ್ಕೆ ಕೇವಲ ಆಡಳಿತಾಧಿಕಾರಿ ಅಥವಾ ಉಸ್ತುವಾರಿ ಸಮಿತಿ ನೇಮಕ ಅಸಮಂಜಸವಾದುದು. ಸರ್ಕಾರ ಈ ಆಲೋಚನೆ, ನಿರ್ಧಾರವನ್ನು ತಕ್ಷಣ ಕೈಬಿಟ್ಟು ಪ್ರಸ್ತುತ ಇರುವ ಚುನಾಯಿತ ಪ್ರತಿನಿಧಿಗಳನ್ನು ಮುಂದುವರೆಸುವುದು. ಈಗಾಗಲೇ ಈ ಸಂಬಂಧ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಂಡಿಸಲಾಗಿದೆ. ಈ ಹಿನ್ನಲೆಯಲ್ಲಿ ಮನವಿಗೆ ಪೂರಕವಾಗಿ ಸ್ಪಂದಿಸುವಂತೆ ಅಧ್ಯಕ್ಷೆ ಆರ್. ಉಮಾ, ಉಪಾಧ್ಯಕ್ಷ ಆರ್. ಪ್ರವೀಣ್ ಸೇರಿದಂತೆ ಪಂಚಾಯತ್‌ನ ಎಲ್ಲಾ ೨೧ ಸದಸ್ಯರು ಆಗ್ರಹಿಸಿದ್ದಾರೆ. 

Tuesday, May 19, 2020

ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಹೊಂಡ, ಕಂದಕ ಬದು ನಿರ್ಮಾಣ

ಯೋಜನೆ ಸದ್ಬಳಕೆ ಮಾಡಿಕೊಳ್ಳಲು ರೈತರಿಗೆ ಮನವಿ 

ಭದ್ರಾವತಿ, ಮೇ. ೧೯: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಇಲಾಖೆ ವತಿಯಿಂದ ಕೃಷಿ ಹೊಂಡ ಹಾಗೂ ಕಂದಕ ಬದು ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದ್ದು, ಹೆಚ್ಚಿನ ಮಾಹಿತಿಗೆ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಸಂಪರ್ಕಿಸಬಹುದಾಗಿದೆ.
ಬಿಪಿಎಲ್ ಪಡಿತರ ಚೀಟಿ ಹೊಂದಿದ ರೈತರಿಗೆ ಹಾಗೂ ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ ೧೦*೧೦*೩ ಮೀಟರ್ ಮತ್ತು ೧೫*೧೫*೩ ಮೀಟರ್ ಅಳತೆಯ ಕೃಷಿ ಹೊಂಡ ಹಾಗೂ ಜಮೀನಿನಲ್ಲಿ ಕಂದಕ ಬದು ನಿರ್ಮಾಣ ಮಾಡಿಕೊಳ್ಳಬಹುದಾಗಿದೆ. ತಾಲೂಕಿನ ರೈತರು ಇದರ ಸದುಪಯೋಗಪಡೆದುಕೊಳ್ಳುವಂತೆ ಸಹಾಯಕ ಕೃಷಿ ನಿರ್ದೇಶಕ ಬಿ.ಸಿ ಶಶಿಧರ್ ಮನವಿ ಮಾಡಿದ್ದಾರೆ.

ಮಾ.ಸ ನಂಜುಂಡಸ್ವಾಮಿ ವಿರುದ್ಧ ಸುಳ್ಳು ಸಂದೇಶ :

 ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮನವಿ 

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ಮ.ಸ ನಂಜುಂಡಸ್ವಾಮಿಯವರ ವಿರುದ್ಧ ಸಾಮಾಜಿಕ ಜಾಲತಾಣ(ವಾಟ್ಸಪ್ ಗ್ರೂಪ್)ದಲ್ಲಿ ಹರಿದಾಡುತ್ತಿರುವ ಅವಹೇಳನಕಾರಿ ಸಂದೇಶ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳವಾರ ಸಂಘದ ಭದ್ರಾವತಿ ತಾಲೂಕು ಶಾಖೆವತಿಯಿಂದ ಜಿಲ್ಲಾಧಿಕಾರಿಗಳಿಗೆ ತಹಸೀಲ್ದಾರ್ ಶಿವಕುಮಾರ್ ಮೂಲಕ ಮನವಿ ಸಲ್ಲಿಸಲಾಯಿತು. 

ಭದ್ರಾವತಿ, ಮೇ. ೧೯: ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ಮ.ಸ ನಂಜುಂಡಸ್ವಾಮಿಯವರ ವಿರುದ್ಧ ಸಾಮಾಜಿಕ ಜಾಲತಾಣ(ವಾಟ್ಸಪ್ ಗ್ರೂಪ್)ದಲ್ಲಿ ಹರಿದಾಡುತ್ತಿರುವ ಅವಹೇಳನಕಾರಿ ಸಂದೇಶ ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳವಾರ ಸಂಘದ ತಾಲೂಕು ಶಾಖೆವತಿಯಿಂದ ಜಿಲ್ಲಾಧಿಕಾರಿಗಳಿಗೆ ತಹಸೀಲ್ದಾರ್ ಶಿವಕುಮಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷರಾದ ಮ.ಸ ನಂಜುಂಡಸ್ವಾಮಿಯವರು ನಿವೃತ್ತಿ ಹಂಚಿನಲ್ಲಿದ್ದರೂ ಸಹ ನೌಕರರ ಸಮಸ್ಯೆಗಳಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ನೌಕರರ ಸಮಸ್ಯೆಗಳಿಗೆ ಸ್ಪಂದಿಸುವುದು ಅವರ ಕರ್ತವ್ಯವಾಗಿದ್ದು, ಇದನ್ನು ಅರಿಯದ ಹಾಗೂ ಮಾ.ಸ ನಂಜುಂಡಸ್ವಾಮಿಯವರ ಹೋರಾಟದ ಪೂರ್ವಪರ ತಿಳಿಯದ ಸ್ವಾರ್ಥ ಮನೋಭಾವ ಹೊಂದಿರುವವರು ಅವರ ವಿರುದ್ಧ ಸತ್ಯಕ್ಕೆ ದೂರವಾದ ಸುಳ್ಳು ಸುದ್ದಿಗಳನ್ನು ವಾಯ್ಸ್ ಆಫ್ ಸಾಗರ ಎಂಬ ವಾಟ್ಸಪ್ ಗ್ರೂಪ್‌ನಲ್ಲಿ ಹರಡುವ ಮೂಲಕ ತೇಜೋವಧೆ ಮಾಡಿದ್ದು, ಇವರ ವಿರುದ್ಧ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.
ಸಂಘದ ತಾಲೂಕು ಶಾಖೆ ಅಧ್ಯಕ್ಷ ನೀಲೇಶ್‌ರಾಜ್, ಪ್ರಮುಖರಾದ ಮೋಹನ್, ಆರ್.ಎಸ್ ರವೀಂದ್ರಕುಮಾರ್, ಶ್ರೀಕಾಂತ್, ಹರೀಶ್, ಆಕಾಶ್, ನಾಗರಾಜ್, ರಾಧಮ್ಮ, ಇಸ್ತಿಯಾಕ್ ಆಲಿ ಅಹಮ್ಮದ್ ಖಾನ್, ರಮೇಶ್, ಶ್ರೀಕಾಂತ್ ಬೊಡ್ಕೆ, ಪ್ರಭಾಕರ್, ಪ್ರಕಾಶ್ ಮತ್ತು ಆಶಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ೪೨೦೦ ವಿದ್ಯಾರ್ಥಿಗಳ ಸರಿದ ಅನಿಶ್ಚಿತತೆ

ಒಟ್ಟು ೮೭ ಶಾಲೆಗಳು, ೧೫ ಪರೀಕ್ಷಾ ಕೇಂದ್ರಗಳು

ಭದ್ರಾವತಿ, ಮೇ. ೧೯: ಕೊರೋನಾ ವೈರಸ್ ಹಿನ್ನಲೆಯಲ್ಲಿ ಕಳೆದ ೨ ತಿಂಗಳುಗಳಿಂದ ಅನಿಶ್ಚಿತತೆಯಿಂದ ಕೂಡಿದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿನಾಂಕ ಕೊನೆಗೂ ನಿಗದಿಗೊಂಡಿದ್ದು, ತಾಲೂಕಿನ ಸುಮಾರು ೪೨೦೦ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಎದುರಿಸಲಿದ್ದಾರೆ.
ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ನಿಧಾರದ ಪ್ರಮುಖ ಘಟ್ಟವಾಗಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಹೇಗಾದರೂ ಮಾಡಿನಡೆಸಲೇಬೇಕೆಂಬ ಅಂತಿಮ ನಿರ್ಧಾರದೊಂದಿಗೆ ರಾಜ್ಯ ಸರ್ಕಾರ ಹಲವು ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಂಡು ಪರೀಕ್ಷೆ ದಿನಾಂಕವನ್ನು ಪ್ರಕಟಿಸಿದೆ. ಜೂ.೨೮ ರಿಂದ ಜು.೪ರ ವರೆಗೆ ಪರೀಕ್ಷೆಗಳು ನಡೆಯಲಿವೆ.
ಈಗಾಗಲೇ ೧ ರಿಂದ ೯ನೇ ತರಗತಿ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆ ಸಾಮೂಹಿಕವಾಗಿ ಉತ್ತೀರ್ಣಗೊಳಿಸಿ ಮುಂದಿನ ಶಿಕ್ಷಣಕ್ಕೆ ಅನುವು ಮಾಡಿಕೊಡಲಾಗಿದೆ. ಇದೀಗ ನೂತನ ವರ್ಷದ ಶೈಕ್ಷಣಿಕ ಚಟುವಟಿಕೆಗಳು ಆರಂಭಗೊಳ್ಳಬೇಕಾಗಿತ್ತು. ಆದರೆ ಈ ಹಂತದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿರುವುದು ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಚಟುವಟಿಕೆಗಳಿಗೆ ವಿಳಂಬವಾಗಲಿದೆ ಎನ್ನಲಾಗಿದೆ. ಪ್ರಸ್ತುತ ಎದುರಾಗಿರುವ ಶೈಕ್ಷಣಿಕ ಬಿಗ್ಗಟ್ಟನ್ನು ಸರ್ಕಾರ ಯಾವ ರೀತಿ ಸರಿಪಡಿಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ತಾಲೂಕಿನಲ್ಲಿ ಒಟ್ಟು ೮೭ ಶಾಲೆಗಳ ಸುಮಾರು ೪೨೦೦ ವಿದ್ಯಾರ್ಥಿಗಳು ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸುತ್ತಿದ್ದು, ತಾಲೂಕಿನ ೧೫ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಕೊರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್‌ಡೌನ್ ಜಾರಿಗೆ ಬಂದ ಪರಿಣಾಮ ಶ್ರೀಸಾಮಾನ್ಯರ ಬದುಕು ಅತಂತ್ರವಾಗಿದೆ. ಕೆಲವು ಕುಟುಂಬಗಳು ರಾಜ್ಯದ ವಿವಿಧೆಡೆ ಹಾಗೂ ಹೊರ ರಾಜ್ಯಗಳಲ್ಲಿ ಸಿಲುಕಿಕೊಂಡಿವೆ. ಅಲ್ಲದೆ ಕೊರೋನಾ ವೈರಸ್‌ಗೆ ತುತ್ತಾದವರ ಚಿಕಿತ್ಸೆಗಾಗಿ ತಾಲೂಕಿನ ಸರ್ಕಾರಿ ಶಾಲೆ ಹಾಗೂ ವಸತಿ ಶಾಲೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ವಸತಿ ಶಾಲೆಗಳಲ್ಲಿ ವ್ಯಾಸಂಗ ನಡೆಸುತ್ತಿರುವ ಸುಮಾರು ೨೨೬ ವಿದ್ಯಾರ್ಥಿಗಳು ಮತ್ತು ರಾಜ್ಯದ ವಿವಿಧೆಡೆ ಹಾಗೂ ಹೊರ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳ ಸ್ಥಿತಿ ಅತಂತ್ರವಾಗಿದೆ. ಸರ್ಕಾರ ಇಂತಹ ವಿದ್ಯಾರ್ಥಿಗಳ ನೆರವಿಗೂ ಮುಂದಾಗುವುದಾಗಿ ಭರವಸೆ ನೀಡಿದೆ. ವಿದ್ಯಾರ್ಥಿಗಳು ಎಲ್ಲಿದ್ದಾರೋ ಅಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಆದೇಶ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ತಲುಪಿಲ್ಲ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವ ಹಿನ್ನಲೆಯಲ್ಲಿ ಈ ಬಾರಿ ೨-೩ ಬಾರಿ ಶಿಕ್ಷಣ ತಜ್ಞರು ಹಾಗೂ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ  ಕಾರ್ಯಾಗಾರಗಳನ್ನು ನಡೆಸಲಾಗಿದೆ. ಅಲ್ಲದೆ ಪರೀಕ್ಷೆಗಳು ವಿಳಂಬವಾದ ಹಿನ್ನಲೆಯಲ್ಲಿ ನೇರ ಪೋನ್ ಇನ್ ಕಾರ್ಯಕ್ರಮಗಳನ್ನು ಸಹ ನಡೆಸಲಾಗಿದೆ. ಬಹುತೇಕ ವಿದ್ಯಾರ್ಥಿಗಳ ಪರೀಕ್ಷೆಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿದಿವೆ. ಈ ನಡುವೆ ಪರೀಕ್ಷೆಗೆ ಇನ್ನೂ ಸುಮಾರು ಒಂದು ತಿಂಗಳು ಕಾಲವಕಾಶವಿದ್ದು, ಉತ್ತಮ ಫಲಿತಾಂಶ ನಿರೀಕ್ಷಿಸಲಾಗುತ್ತಿದೆ.