ಶನಿವಾರ, ಮೇ 23, 2020

ಎಪಿಎಂಸಿ : ಮೇ.೨೪ರಂದು ವ್ಯಾಪಾರ, ವಹಿವಾಟು ಸ್ಥಗಿತ

ಭದ್ರಾವತಿ, ಮೇ. ೨೩: ಸರ್ಕಾರದ ಮಾರ್ಗಸೂಚಿಗಳ ಅನ್ವಯ ಮೇ.೩೧ರ ವರೆಗೆ ಲಾಕ್‌ಡೌನ್ ಜಾರಿಯಲ್ಲಿದ್ದು, ಭಾನುವಾರ ಸಂಪೂರ್ಣ ಲಾಕ್‌ಡೌನ್ ಘೋಷಿಸಿರುವ ಹಿನ್ನಲೆಯಲ್ಲಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಯಾವುದೇ ವ್ಯಾಪಾರ, ವಹಿವಾಟು ಇರುವುದಿಲ್ಲ.
ಕೋವಿಡ್-೧೯ ಸೋಂಕು ಹರಡದಂತೆ ತಡೆಗಟ್ಟುವ ಉದ್ದೇಶದಿಂದ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ. ಈ ಹಿನ್ನಲೆಯಲ್ಲಿ ರೈತರು, ಸಾರ್ವಜನಿಕರು ಸಹಕರಿಸುವಂತೆ ಸಮಿತಿ ಕಾರ್ಯದರ್ಶಿ ಕೋರಿದ್ದಾರೆ.

ಏಕಾಏಕಿ ಕ್ವಾರಂಟೈನ್ ನಿರ್ಮಾಣ ಸ್ಥಳೀಯರ ವಿರೋಧ : ಪ್ರತಿಭಟನೆ

ಮಹಾರಾಷ್ಟ್ರದಿಂದ ಬಂದ ೧೮ ಜನ : ಕೊರೋನಾ ವೈರಸ್ ಭೀತಿ 

ಭದ್ರಾವತಿ ತಾಲೂಕಿನ ಹುಣಸೆಕಟ್ಟೆ ಜಂಕ್ಷನ್ ಸಮೀಪದಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ  ಏಕಾಏಕಿ ಕ್ವಾರಂಟೈನ್ ನಿರ್ಮಾಣ ಮಾಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿದರು.
ಭದ್ರಾವತಿ, ಮೇ. ೨೩: ತಾಲೂಕಿನ ಹುಣಸೆಕಟ್ಟೆ ಜಂಕ್ಷನ್ ಸಮೀಪದಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ  ಏಕಾಏಕಿ ಕ್ವಾರಂಟೈನ್ ನಿರ್ಮಾಣ ಮಾಡಿರುವುದನ್ನು ವಿರೋಧಿಸಿ ಗ್ರಾಮಸ್ಥರು ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಸ್ಥಳೀಯರ ಗಮನಕ್ಕೆ ಬಾರದಂತೆ ಕ್ವಾರಂಟೈನ್ ನಿರ್ಮಾಣ ಮಾಡುವ ಮೂಲಕ ಮಹಾರಾಷ್ಟ್ರದಿಂದ ಬಂದಿರುವ ೧೮ ಜನರನ್ನು ನಿಗಾದಲ್ಲಿರಿಸಲು ಕರೆ ತರಲಾಯಿತು. ಈ ವಿಚಾರ ತಿಳಿದ ಗ್ರಾಮಸ್ಥರು ಕ್ಯಾರಂಟೈನ್ ಮುಂಭಾಗ ದಿಢೀರನೆ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ತಹಸೀಲ್ದಾರ್ ಶಿವಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ, ನಗರಸಭೆ ಪೌರಾಯುಕ್ತ ಮನೋಹರ್, ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾದರು. 

ಶುಕ್ರವಾರ, ಮೇ 22, 2020

ಶುಲ್ಕ ವಸೂಲಾತಿ : ಖಾಸಗಿ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಭದ್ರಾವತಿ ನಗರದಲ್ಲಿ ಕೆಲವು ಖಾಸಗಿ ಶಾಲೆಗಳು ಸರ್ಕಾರದ ಆದೇಶದ ವಿರುದ್ಧ ಶುಲ್ಕ ವಸೂಲಾತಿ ಮಾಡುತ್ತಿವೆ. ತಕ್ಷಣ ಈ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್‌ಗೆ ಆಮ್ ಆದ್ಮಿ ಪಾರ್ಟಿ ಜಿಲ್ಲಾ ಶಾಖೆ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಮೇ. ೨೨: ನಗರದಲ್ಲಿ ಕೆಲವು ಖಾಸಗಿ ಶಾಲೆಗಳು ಸರ್ಕಾರದ ಆದೇಶದ ವಿರುದ್ಧ ಶುಲ್ಕ ವಸೂಲಾತಿ ಮಾಡುತ್ತಿವೆ. ತಕ್ಷಣ ಈ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್‌ಗೆ ಆಮ್ ಆದ್ಮಿ ಪಾರ್ಟಿ ಜಿಲ್ಲಾ ಶಾಖೆ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ಪರಿಣಾಮವಾಗಿ ಯಾವುದೇ ವಯಿವಾಟು, ಉದ್ಯೋಗವಿಲ್ಲದೆ ಶ್ರೀಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದು, ಆರ್ಥಿಕ ಸಮಸ್ಯೆ ಎದುರಾಗಿದೆ. ಇದನ್ನು ಮನಗಂಡಿರುವ ಸರ್ಕಾರ ಖಾಸಗಿ ಶಾಲೆಗಳಲ್ಲಿ ಶುಲ್ಕ ವಸೂಲಾತಿ ಮಾಡಬಾರದೆಂದು ಆದೇಶಿಸಿದೆ. ಆದರೂ ಸಹ ಸರ್ಕಾರದ ಆದೇಶ ಗಾಳಿಗೆ ತೂರಿ ಪೋಷಕರ ಮೊಬೈಲ್‌ಗೆ ಎಸ್‌ಎಂಎಸ್ ಕಳುಹಿಸುವುದರ ಮೂಲಕ ವಸೂಲಾತಿಗೆ ಮುಂದಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಈ ಹಿನ್ನಲೆಯಲ್ಲಿ ತಕ್ಷಣ ಶಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ನೋಟಿಸ್ ಜಾರಿಗೊಳಿಸಿ ಸಭೆ ನಡೆಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.
ಖಾಸಗಿ ಶಾಲೆಗಳ ವಿರುದ್ಧ ಸೂಕ್ತ ಕ್ರಮ:
ಮನವಿ ಸ್ವೀಕರಿಸಿದ ತಹಸೀಲ್ದಾರ್ ಶಿವಕುಮಾರ್ ಮಾತನಾಡಿ, ತಕ್ಷಣ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಉಪಾಧ್ಯಕ್ಷ ಮುಳ್ಕೆರೆ ಲೋಕೇಶ್, ಸಹ ಕಾರ್ಯದರ್ಶಿಗಳಾದ ಆರ್. ಪರಮೇಶ್ ನಾಯ್ಕ, ಬಿ.ಎಸ್ ಪ್ರದೀಪ್ ಕುಮಾರ್, ಖಜಾಂಚಿ ಪರಮೇಶ್ವರಾಚಾರ್, ಜೋಸೆಫ್, ಇಬ್ರಾಹಿಂ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಗುರುವಾರ, ಮೇ 21, 2020

ಸಂಕಷ್ಟದ ಸಮಯದಲ್ಲಿ ಅಸಹಾಯಕರ ನೆರವಿಗೆ ಮುಂದಾಗುವುದು ಪ್ರತಿಯೊಬ್ಬರ ಕರ್ತವ್ಯ

‘ಸಾಂತ್ವನ’ ಮಹಿಳಾ ಕೇಂದ್ರಕ್ಕೆ ಹಣ್ಣು, ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳ ವಿತರಣೆ 

ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ಭದ್ರೇಶ್ವರ ಸಮುದಾಯ ಭವನದ ಬಳಿ ಇರುವ ಸ್ವಾಧರ ಗೃಹ ‘ಸಾಂತ್ವನ’ ಮಹಿಳಾ ಕೇಂದ್ರದಕ್ಕೆ  ಉಸ್ಮಾನಿಯಾ ಚಾರಿಟಬಲ್ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಜೆಬಿಟಿ ಬಾಬು ನೇತೃತ್ವದಲ್ಲಿ  ಹಣ್ಣು, ಬಟ್ಟೆ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.
ಭದ್ರಾವತಿ, ಮೇ. ೨೧: ಸಂಕಷ್ಟದ ಸಮಯದಲ್ಲಿ ಅಸಹಾಯಕರಿಗೆ ನೆರವಾಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್‌ರವರು ತಮ್ಮ ಜೀವನದ ಕೊನೆಯವರೆಗೂ ಈ ನಿಟ್ಟಿನಲ್ಲಿ ತಮ್ಮ ಹೋರಾಟವನ್ನು ಮುಂದುವರೆಸಿದ್ದರು. ಆದರೂ ಸಹ ದೇಶದಲ್ಲಿ ಇಂದಿಗೂ ಶ್ರೀಮಂತರು ಮತ್ತು ಬಡವರ ನಡುವೆ ತಾರತಮ್ಯ ದೂರವಾಗಿಲ್ಲ ಎಂದು ಪ್ರಗತಿಪರ ಸಂಘಟನೆಗಳ ಮುಖಂಡ ಸುರೇಶ್ ವಿಷಾದ ವ್ಯಕ್ತಪಡಿಸಿದರು.
ಅವರು ಗುರುವಾರ ನಗರದ ಬಿ.ಎಚ್ ರಸ್ತೆ ಶ್ರೀ ಭದ್ರೇಶ್ವರ ಸಮುದಾಯ ಭವನದ ಬಳಿ ಇರುವ ಸ್ವಾಧರ ಗೃಹ ‘ಸಾಂತ್ವನ’ ಮಹಿಳಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಣ್ಣು, ಬಟ್ಟೆ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಂಬೇಡ್ಕರ್‌ರವರು ಸಮಾಜದ ಎಲ್ಲಾ ವರ್ಗದ ಜನರು ಸಹ ಸಮಾನತೆಯಿಂದ ಬದುಕಬೇಕೆಂಬ ಆಶಯ ಹೊಂದಿದ್ದರು. ಈ ನಿಟ್ಟಿನಲ್ಲಿ ಸಂವಿಧಾನವನ್ನು ರಚಿಸಿ ದಲಿತರು, ಮಹಿಳೆಯರು, ಅಸಹಾಯಕರ ಹಿತರಕ್ಷಣೆಗೆ ಮುಂದಾಗಿದ್ದರು. ಆದರೂ ಸಹ ದೇಶದಲ್ಲಿ ಬದಲಾಗದ ಜನರ ಸ್ಥಿತಿಯನ್ನು ಕಂಡು ನೊಂದಿದ್ದರು ಎಂದರು.
ಕೊರೋನಾ ವೈರಸ್ ಪರಿಣಾಮದಿಂದಾಗಿ ಪ್ರಸ್ತುತ ಎಲ್ಲೆಡೆ ಎದುರಾಗಿರುವ ಸಂಕಷ್ಟಕ್ಕೆ ಪ್ರತಿಯೊಬ್ಬರು ಸ್ಪಂದಿಸಬೇಕು. ಅದರಲ್ಲೂ ಅಸಹಾಯಕ ಮಹಿಳೆಯರ ನೆರವಿಗೆ ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಯಾರಿಗೆ ಅಗತ್ಯವಿದೆಯೋ ಅವರಿಗೆ ಸೇವೆ ತಲುಪಬೇಕೆಂದರು.
ಉಸ್ಮಾನಿಯಾ ಚಾರಿಟಬಲ್ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಜೆಬಿಟಿ ಬಾಬು ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಪೌರಾಯುಕ್ತ ಮನೋಹರ್, ಯುವ ಮುಖಂಡ ಬಿ.ಎಸ್ ಗಣೇಶ್, ಪ್ರಮುಖರಾದ ಬಿ.ಟಿ ನಾಗರಾಜ್, ಟಿಪ್ಪುಸುಲ್ತಾನ್, ಪರಮೇಶ್ವರಚಾರ್, ಮುಸ್ವೀರ್ ಬಾಷಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಬುಧವಾರ, ಮೇ 20, 2020

ಬಲಿಜ ಸಮಾಜದ ಕಡುಬಡವರಿಗೆ ಆರ್ಥಿಕ ನೆರವು ನೀಡಿ

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಮನವಿ 

ಭದ್ರಾವತಿ, ಮೇ. ೨೦:  ಆರ್ಥಿಕವಾಗಿ ಹಿಂದುಳಿದ ಬಲಿಜ ಸಮಾಜದ ಕಡುಬಡವರಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಬೇಕೆಂದು ಒತ್ತಾಯಿಸಿ ಬುಧವಾರ ತಹಸೀಲ್ದಾರ್ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
     ಸಮಾಜದವರು ಅರಿಶಿನ-ಕುಂಕುಮ, ಬಳೆ, ಹೂ ಮಾರಾಟ ಸೇರಿದಂತೆ ಸಣ್ಣ ಸಣ್ಣ ಕಸಬುಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.  ಕೊರೋನಾ ವೈರಸ್ ಲಾಕ್ ಡೌನ್ ಪರಿಣಾಮ ಯಾವುದೇ ವ್ಯಾಪಾರ ವಹಿವಾಟು ಇಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.
      ಈಗಾಗಲೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕಡುಬಡವರ ಸಂಕಷ್ಟಕ್ಕೆ ಸ್ಪಂದಿಸಿ ೫ ಸಾವಿರ ರು. ನೆರವು ಘೋಷಿಸಿದ್ದಾರೆ. ಇದೆ ರೀತಿಯಲ್ಲಿ  ಬಲಿಜ ಸಮಾಜದವರ ನೆರವಿಗೆ ಮುಂದಾಗುವಂತೆ ಕೋರಲಾಗಿದೆ.

ಎಂಪಿಎಂ ಸ್ವಯಂ ನಿವೃತ್ತ ಕಾರ್ಮಿಕರ ಬಾಕಿ ಹಣ ಬಿಡುಗಡೆ

೨೦ ಕೋ. ರು. ದುರುಪಯೋಗಪಡಿಸಿಕೊಳ್ಳದಿರಲು ಆಡಳಿತ ಮಂಡಳಿಗೆ ಸೂಚನೆ 


ಭದ್ರಾವತಿ ಮೈಸೂರು ಕಾಗದ ಕಾರ್ಖಾನೆ ವಿಆರ್‌ಎಸ್/ವಿಎಸ್‌ಎಸ್ ಯೋಜನೆಯಡಿ ಸ್ವಯಂ ನಿವೃತ್ತಿ ಹೊಂದಿರುವ ಕಾರ್ಮಿಕರಿಗೆ ಬರಬೇಕಾದ ಬಾಕಿ ಹಣ ೨೦ ಕೋ. ರು ಬಿಡುಗಡೆಗೊಳಿಸಿ ಆದೇಶಿಸಿರುವುದು. 
ಭದ್ರಾವತಿ, ಮೇ. ೨೦:  ವಿಆರ್‌ಎಸ್/ವಿಎಸ್‌ಎಸ್ ಯೋಜನೆಯಡಿ ಸ್ವಯಂ ನಿವೃತ್ತಿ ಹೊಂದಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ಕಾರ್ಮಿಕರಿಗೆ ನೀಡಬೇಕಾದ ಬಾಕಿ ಹಣ ಕೊನೆಗೂ ಸರ್ಕಾರ ಮಂಜೂರಾತಿ ಮಾಡಿದ್ದು, ಇದೀಗ ಕಾರ್ಮಿಕರು ನಿಟ್ಟುಸಿರು ಬಿಡುವಂತಾಗಿದೆ. 
ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮಂಗಳವಾರ ಪತ್ರ ಬರೆದಿದ್ದು, ತಕ್ಷಣ ೨೦ ಕೋ. ರು. ಬಿಡುಗಡೆಗೊಳಿಸಲಾಗುತ್ತಿದೆ. ಈ ಹಣವನ್ನು ಯಾವುದೇ ಕಾರಣಕ್ಕೂ ದುರುಪಯೋಗಪಡಿಸಿಕೊಳ್ಳದೆ ವಿಆರ್‌ಎಸ್/ವಿಎಸ್‌ಎಸ್ ಯೋಜನೆಯಡಿ ಸ್ವಯಂ ಹೊಂದಿರುವ ಕಾರ್ಮಿಕರಿಗೆ ನೀಡಬೇಕೆಂದು ಹಾಗು ಯೋಜನೆಯ ಲೆಕ್ಕ ಪರಿಶೋಧನಾ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಈ ಹಿಂದೆ ಕಾರ್ಖಾನೆಯನ್ನು ಖಾಸಗಿಕರಣಗೊಳಿಸುವ ಸಂಬಂಧ ಮಾನವ ಸಂಪನ್ಮೂಲ ಶೂನ್ಯಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾಯಂ ಕಾರ್ಮಿಕರಿಗೆ ಸ್ವಯಂ ನಿವೃತ್ತಿ ಯೋಜನೆ(ವಿಆರ್‌ಎಸ್) ಮತ್ತು ಗುತ್ತಿಗೆ ಕಾರ್ಮಿಕರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಸ್ವಯಂ ಪ್ರತ್ಯೇಕೀಕರಣ ಯೋಜನೆ(ವಿಎಸ್‌ಎಸ್) ಜಾರಿಗೊಳಿಸಿತ್ತು. ಶೇ.೯೦ರಷ್ಟು ಕಾರ್ಮಿಕರು ಈ ಯೋಜನೆಯಡಿ ನಿವೃತ್ತಿ ಪಡೆದುಕೊಂಡಿದ್ದರು. ಸರ್ಕಾರ ಎರಡು ಕಂತುಗಳಲ್ಲಿ ಈ ಯೋಜನೆಗೆ ಹಣ ಬಿಡುಗಡೆಗೊಳಿಸಿತ್ತು. ಆದರೆ ಆಡಳಿತ ಮಂಡಳಿ ಲೆಕ್ಕ ಪರಿಶೋಧನಾ ವರದಿ ಪೂರ್ಣಗೊಳಿಸದ ಕಾರಣ ಕಾರ್ಮಿಕರಿಗೆ ಬರಬೇಕಾದ ಬಾಕಿ ಹಣದಲ್ಲಿ ಕಡಿತ ಮಾಡಿತ್ತು. ಈ ಹಿನ್ನಲೆಯಲ್ಲಿ ಕಾರ್ಮಿಕರು ಕೊನೆ ಹಂತದಲ್ಲಿ ಸಂಕಷ್ಟಕ್ಕೆ ಒಳಗಾಗುವ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ೨೦ ಕೋ. ರು. ಬಿಡುಗಡೆಗೊಳಿಸಿದೆ. ಇದರಿಂದಾಗಿ ಕಾರ್ಮಿಕರು ಪ್ರಸ್ತುತ ಎದುರಾಗಿರುವ ಸಂಕಷ್ಟದಿಂದ ಪಾರಾಗುವಂತಾಗಿದೆ. 



ಮೂಕ ಪ್ರಾಣಿಗಳ ನೆರವಿಗೂ ಮುಂದಾದ ಶಾಸಕ ಬಿ.ಕೆ ಸಂಗಮೇಶ್ವರ್

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಮೂಕ ಪ್ರಾಣಿಗಳ ಸಂಕಷ್ಟಕ್ಕೆ ಸ್ಪಂದಿಸಿ ಗೋ ಶಾಲೆಗಳಿಗೆ ಮೇವು ಕಳುಹಿಸಿ ಕೊಡುತ್ತಿರುವುದು. 
ಭದ್ರಾವತಿ, ಮೇ. ೨೦: ಒಂದೆಡೆ ದೇಶಾದ್ಯಂತ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಮತ್ತೊಂದೆಡೆ ಶ್ರೀಸಾಮಾನ್ಯರ ಬದುಕು ದಿನದಿಂದ ದಿನಕ್ಕೆ ಸಂಕಷ್ಟಗಳಿಗೆ ಬಲಿಯಾಗುತ್ತಿದೆ. ಈ ನಡುವೆ ಸ್ವಯಂ ಸೇವಾ ಸಂಸ್ಥೆಗಳು, ಜನ ಪ್ರತಿನಿಧಿಗಳು, ಉಳ್ಳವರು, ದಾನಿಗಳು ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಮುಂದಾಗುತ್ತಿದ್ದಾರೆ. ಈ ಪೈಕಿ ಶಾಸಕ ಬಿ.ಕೆ ಸಂಗಮೇಶ್ವರ್ ಸಹ ಒಬ್ಬರಾಗಿದ್ದು, ದೇಶದಲ್ಲಿ ಲಾಕ್‌ಡೌನ್ ಜಾರಿಗೆ ಬಂದ ನಂತರ ರೈತರು, ಕಡು ಬಡವರು, ಕೂಲಿ ಕಾರ್ಮಿಕರು, ನಿರಾಶ್ರಿತರು ಸೇರಿದಂತೆ ಎಲ್ಲಾ ವರ್ಗದ ಶ್ರೀಸಾಮಾನ್ಯರ ನೆರವಿಗೆ ಮುಂದಾಗಿದ್ದಾರೆ. ಇದೀಗ ಮೂಕ ಪ್ರಾಣಿಗಳ ಹಸಿವನ್ನೂ ಸಹ ನೀಗಿಸುವ ಕಾರ್ಯ ಕೈಗೊಳ್ಳುತ್ತಿದ್ದಾರೆ. 
ರೈತರ ಹಿತರಕ್ಷಣೆಗಾಗಿ ರೈತರು ಬೆಳೆದ ತರಕಾರಿಯನ್ನು ಖರೀದಿಸಿ ವಿಧಾನಸಭಾ ಕ್ಷೇತ್ರದಾದ್ಯಂತ ಪ್ರತಿ ಮನೆ ಮನೆಗೆ ಹಂಚುವಲ್ಲಿ ಯಶಸ್ವಿಯಾಗಿದ್ದರು. ನಂತರ ಕಡು ಬಡವರು, ಕೂಲಿ ಕಾರ್ಮಿಕರು, ನಿರಾಶ್ರಿತರನ್ನು ಗುರುತಿಸಿ ಬೆಲ್ಲದ ಗಾಣ ಹೊಂದಿರುವ ರೈತರ ಸಹಕಾರ ಸಂಘದ ಸಹಕಾರದೊಂದಿಗೆ ಸಾವಿರಾರು ಕುಟುಂಬಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಿದ್ದರು. 
ಇದೀಗ ಶಿವಮೊಗ್ಗ, ಅರಸೀಕೆರೆ ಮತ್ತು ಬಾಣವಾರ ಗೋ ಶಾಲೆಗಳಿಗೆ ಕಳೆದ ೭ ದಿನಗಳಿಂದ ನಿರಂತರವಾಗಿ ಮೇವು ವಿತರಣೆ ಮಾಡುತ್ತಿದ್ದು, ಮುಂದಿನ ೭ ದಿನಗಳ ವರೆಗೆ ಕಾರ್ಯ ನಡೆಯಲಿದೆ. ಈ ಕಾರ್ಯಕ್ಕೆ ಸಹೋದರರಾದ ಬಿ.ಕೆ ಜಗನ್ನಾಥ, ಬಿ.ಕೆ ಮೋಹನ್, ಬಿ.ಕೆ ಶಿವಕುಮಾರ್ ಹಾಗೂ ಸ್ಥಳೀಯ ಮುಖಂಡರು ಸಹ ಕೈ ಜೋಡಿಸಿದ್ದಾರೆ.