Saturday, May 30, 2020

ನಗರಸಭೆ ವ್ಯಾಪ್ತಿಯ ಕೆರೆಗಳನ್ನು ಅಭಿವೃದ್ಧಿಗೊಳಿಸಿ : ತಕ್ಷಣ ಸಭೆ ಕರೆಯಲು ತಹಸೀಲ್ದಾರ್‌ಗೆ ಮನವಿ

ಭದ್ರಾವತಿ ನಗರಸಭೆ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ತಕ್ಷಣ ಸಭೆ ಕರೆದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಶನಿವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ತಹಸೀಲ್ದಾರ್ ಶಿವಕುಮಾರ್‌ರವರಿಗೆ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಮೇ. ೩೦: ನಗರಸಭೆ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ತಕ್ಷಣ ಸಭೆ ಕರೆದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ ಶನಿವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ತಹಸೀಲ್ದಾರ್ ಶಿವಕುಮಾರ್‌ರವರಿಗೆ ಮನವಿ ಸಲ್ಲಿಸಲಾಯಿತು. 
ಕಳೆದ ೪೦ ವರ್ಷಗಳಿಂದ ನಿರಂತರವಾಗಿ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದು, ತಾಲೂಕಿನ ಕೆರೆಗಳನ್ನು ಅಭಿವೃದ್ಧಿಗೊಳಿಸಿ ಮಾದರಿ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಸಹ ಹೋರಾಟ ನಡೆಸಲಾಗುತ್ತಿದೆ. ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೨೫ಕ್ಕೂ ಅಧಿಕ ಕೆರೆಗಳಿದ್ದು, ಇದುವರೆಗೂ ಯಾವುದೇ ಕೆರೆಗಳನ್ನು ಅಭಿವೃದ್ಧಿಗೊಳಿಸಿರುವುದಿಲ್ಲ. 
ಕೆರೆಗಳನ್ನು ಅಭಿವೃದ್ಧಿಗೊಳಿಸುವುದರಿಂದ ನಗರಸಭೆ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಲಿದ್ದು, ದನಗಾಹಿಗಳಿಗೆ, ರೈತರಿಗೆ, ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಹಿನ್ನಲೆಯಲ್ಲಿ ಕೆರೆಗಳನ್ನು ಅಭಿವೃದ್ಧಿಗೊಳಿಸುವ ಸಂಬಂಧ ನಗರಸಭೆ ಪೌರಾಯುಕ್ತರು, ಭದ್ರಾವತಿ-ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಹಾಗೂ ತಾಲೂಕು ಸರ್ವೆಯರುಗಳು, ನಗರ ವೃತ್ತ ನಿರೀಕ್ಷಕರು, ನೀರಾವರಿ ನಿಗಮದ ಅಧಿಕಾರಿಗಳೊನ್ನೊಳಗೊಂಡ ಸಭೆಯನ್ನು ನಡೆಸಿ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. 
ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್, ಮುಕುಂದಯ್ಯ, ಗ್ಸೇವಿಯರ್, ಜಯದೇವ ಹಾಗೂ ಭವಾನಿಶಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಸರ್ಕಾರಿ ಶಾಲೆಗಳ ೪ ಶಿಕ್ಷಕರು ನಿವೃತ್ತಿ

ಭದ್ರಾವತಿ ಬೋವಿ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಕ ಸೂರಯ್ಯ ಶನಿವಾರ ನಿವೃತ್ತಿ ಹೊಂದಿದರು. 
ಭದ್ರಾವತಿ, ಮೇ. ೩೦: ತಾಲೂಕಿನ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಒಟ್ಟು ೪ ಶಿಕ್ಷಕರು ಶನಿವಾರ ನಿವೃತ್ತಿ ಹೊಂದಿದ್ದಾರೆ. 
ಬೋವಿ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಕ ಸೂರಯ್ಯ, ಕೋಡಿ ಹೊಸೂರು ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಎಸ್.ಎಂ ಓಂಕಾರಯ್ಯ, ದೊಣಬಘಟ್ಟ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಶಾಹೀನ್ ಪವೀನ್ ಮತ್ತು ಕೂಡ್ಲಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಜಯಶ್ರೀ ಎಂ. ಬೈಲೂರು ನಿವೃತ್ತಿ ಹೊಂದಿದ್ದಾರೆ. 

ಪರಿಶಿಷ್ಟ ಜಾತಿ/ಪಂಗಡ, ಅಂಗವಿಕಲರ ಅನುದಾನ ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲ

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಸದಸ್ಯರು ಆಕ್ರೋಶ

ಭದ್ರಾವತಿ ಶನಿವಾರ ತಾಲೂಕು ಪಂಚಾಯಿತಿ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 
ಭದ್ರಾವತಿ, ಮೇ. ೩೦: ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ನಿರ್ಲಕ್ಷ್ಯತನದಿಂದ ಪರಿಶಿಷ್ಟ ಜಾತಿ/ಪಂಗಡದವರಿಗಾಗಿ ಮೀಸಲಿಡಲಾಗಿದ್ದ ಹಣ ಸರ್ಕಾರಕ್ಕೆ ಹಿಂದಿರುಗಿದ್ದು, ಇದರಿಂದಾಗಿ ಫಲಾನುಭವಿಗಳು ಸಂಕಷ್ಟ ಅನುಭವಿಸುವಂತಾಗಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯರು ಆರೋಪಿಸಿದರು. 
ಅವರು ಶನಿವಾರ ಹಳೇನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲೂಕು ಪಂಚಾಯಿತಿಗೆ ವಿವಿಧ ಯೋಜನೆಯಡಿ ಬಿಡುಗಡೆಯಾಗುವ ಅನುದಾನದಲ್ಲಿ ಅಂಗವಿಕಲರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಶೇ.೩, ಮತ್ತು ಶೇ.೫ರಷ್ಟು ಅನುದಾನ ಮೀಸಲಿಡಲಾಗುತ್ತಿದೆ. ಈ ಸಂಬಂಧ ಪ್ರಸಕ್ತ ಸಾಲಿನಲ್ಲಿ ಸದಸ್ಯರು ತಮ್ಮ ತಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಟ್ಟಿ ಸಲ್ಲಿಸಿದ್ದು, ಆದರೆ ಕಾರ್ಯನಿರ್ವಹಣಾಧಿಕಾರಿಗಳ ನಿರ್ಲಕ್ಷ್ಯತನದಿಂದ ಸರ್ಕಾರಕ್ಕೆ ಹಣ ಹಿಂದಿರುಗಿದೆ. 
ಮೀಸಲಿಡಲಾದ ಹಣ ಸದ್ಬಳಕೆ ಮಾಡಿಕೊಳ್ಳುವಲ್ಲಿ ಅಧಿಕಾರಿ ವರ್ಗ ವಿಫಲವಾಗಿದ್ದು, ಈ ಸಂಬಂಧ ಈ ಹಿಂದೆ ಸದಸ್ಯರು ಅಧಿಕಾರಿಗಳ ಗಮನಕ್ಕೆ ತಂದು ಎಚ್ಚರಿಸಿದ್ದರು. ಆದರೆ ಅಧಿಕಾರ ವರ್ಗ ನಿರ್ಲಕ್ಷ್ಯತನ ವಹಿಸಿದೆ. ಅಂಗವಿಕಲರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಟೆಂಡರ್ ಕರೆಯುವಲ್ಲಿ ವಿಫಲವಾಗಿದೆ. ಅಲ್ಲದೆ ಸದಸ್ಯರಿಗೆ ಗೌರವ ನೀಡದೆ ನಡೆದುಕೊಳ್ಳುತ್ತಿದೆ. ತಕ್ಷಣ ಕಾರ್ಯನಿರ್ವಹಣಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. 
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಆಶಾ ಶ್ರೀಧರ್, ಸದಸ್ಯರಾದ ಅಣ್ಣಾಮಲೈ, ಧರ್ಮೇಗೌಡ, ಕೆ. ಮಂಜುನಾಥ್, ಕೆ.ವಿ ರುದ್ರಪ್ಪ, ಎಂ.ಜಿ ದಿನೇಶ್, ಆರ್. ತಿಪ್ಪೇಶ್‌ರಾವ್, ಗೀತಾ ಜಗದೀಶ್, ಉಷಾಕಿರಣ, ಸಿ. ಮಂಜುಳ, ಯಶೋದಮ್ಮ, ಲಕ್ಷ್ಮೀದೇವಿ, ತುಂಗಮ್ಮ ಜಯಪ್ಪ, ಎಸ್. ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.   

Friday, May 29, 2020

ಪತ್ರಕರ್ತ ಸಾ.ನ. ಗೋವಿಂದರಾಜು ನಿಧನ

ಸಾ.ನ. ಗೋವಿಂದರಾಜು 
ಭದ್ರಾವತಿ, ಮೇ. ೨೯: ಹಲವಾರು ವರ್ಷಗಳಿಂದ ನಗರದಲ್ಲಿ ಪ್ರಕಟವಾಗುತ್ತಿರುವ ಮಾಸ ಪತ್ರಿಕೆಯೊಂದರ ಸಂಪಾದಕ ಸಾ.ನ. ಗೋವಿಂದರಾಜು(೬೫) ನಿಧನ ಹೊಂದಿದರು.
ಪತ್ನಿ, ೧ ಹೆಣ್ಣು, ೨ ಗಂಡು ಮಕ್ಕಳು ಸೇರಿದಂತೆ ಬಂಧು-ಬಳಗವನ್ನು ಬಿಟ್ಟಗಲಿದ್ದಾರೆ. ಪ್ರಸ್ತುತ ಶಿವಮೊಗ್ಗದಲ್ಲಿ ವಾಸವಿದ್ದರು. ಮೃತರ ನಿಧನಕ್ಕೆ ಕಾಗದ ನಗರ ಗ್ರಂಥಾಲಯದ ಮೇಲ್ವಿಚಾರಕ ರಾಜ್‌ಕುಮಾರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.  

ಜು.೩೧ರ ವರೆಗೆ ತೆರಿಗೆ ಪಾವತಿಗೆ ಶೇ.೫ರಷ್ಟು ರಿಯಾಯಿತಿ

ಭದ್ರಾವತಿ, ಮೇ. ೨೯: ನಗರಸಭೆ ಆಸ್ತಿ ತೆರಿಗೆದಾರರು ಜು.೩೧ರವರೆಗೆ ತೆರಿಗೆ ಪಾವತಿಸಲು ಸರ್ಕಾರ ಕಾಲಾವಕಾಶ ನೀಡಿದ್ದು, ತೆರಿಗೆದಾರರು ಇದರ ಸದುಪಯೋಗದೊಂದಿಗೆ ಶೇ.೫ರಷ್ಟು ರಿಯಾಯಿತಿ ಪಡೆಯುವಂತೆ ಪೌರಾಯುಕ್ತರು ಕೋರಿದ್ದಾರೆ. 
ಜುಲೈ ೩೧ರೊಳಗೆ ತೆರಿಗೆ ಪಾವತಿಸಿದ್ದಲ್ಲಿ ಶೇ.೫ ರಿಯಾಯಿತಿ, ಆಗಸ್ಟ್ ೧ ರಿಂದ ಅಕ್ಟೋಬರ್ ೩೧ರ ವರೆಗೆ ದಂಡ ರಹಿತ ತೆರಿಗೆ ಪಾವತಿಸಬಹುದಾಗಿದೆ. ವಿಳಂಬವಾಗಿ ತೆರಿಗೆ ಪಾವತಿಸಿದ್ದಲ್ಲಿ ನವಂಬರ್ ೧ ರಿಂದ ಶೇ.೨ರಷ್ಟು ದಂಡ ವಿಧಿಸಲಾಗುವುದು ಎಂದು ಪೌರಾಯುಕ್ತ ಮನೋಹರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮೇ.೨೯ ‘ಆಶಾ ಸಂರಕ್ಷಣಾ ದಿನ’ವಾಗಿ ಘೋಷಿಸಿ : ಸರ್ಕಾರಕ್ಕೆ ಮನವಿ

ರಾಜ್ಯ ಸರ್ಕಾರ ಮೇ.೨೯ ‘ಆಶಾ ಸಂರಕ್ಷಣಾ ದಿನ’ವೆಂದು ಘೋಷಣೆ ಮಾಡುವ ಜೊತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭದ್ರಾವತಿಯಲ್ಲಿ ಶುಕ್ರವಾರ ಆಶಾ ಕಾರ್ಯಕರ್ತೆಯರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. 
ಭದ್ರಾವತಿ, ಮೇ. ೨೯: ರಾಜ್ಯ ಸರ್ಕಾರ ಮೇ.೨೯ ‘ಆಶಾ ಸಂರಕ್ಷಣಾ ದಿನ’ವೆಂದು ಘೋಷಣೆ ಮಾಡುವ ಜೊತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶುಕ್ರವಾರ ಆಶಾ ಕಾರ್ಯಕರ್ತೆಯರು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. 
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಿ, ಆಶಾ ಕಾರ್ಯಕರ್ತೆಯರ ಮೇಲೆ ದೈಹಿಕ ಹಲ್ಲೆ ಮಾಡಿದವರನ್ನು ಶಿಕ್ಷಿಸಿ, ಹಲ್ಲೆಗೆ ಒಳಗಾದ ಆಶಾ ಕಾರ್ಯಕರ್ತೆಗೆ ಸೂಕ್ತ ಪರಿಹಾರ ನೀಡುವುದು. ಮಾರ್ಚ್ ತಿಂಗಳಿಂದ ಕೋವಿಡ್-೧೯ರ ಸಂಬಂಧ ಕರ್ತವ್ಯಕ್ಕೆ ನಿಯೋಜನೆಗೊಳಿಸುವ ಅವಧಿವರೆಗೂ ವಿಶೇಷ ಪ್ಯಾಕೇಜ್ ಮಾಸಿಕ ರು. ೧೦,೦೦೦ ನೀಡುವಂತೆ ಒತ್ತಾಯಿಸಿದರು. 
ಅಗತ್ಯವಿರುವಷ್ಟು ಮಾಸ್ಕ್ ಹಾಗೂ ಸ್ಯಾನಿಟೈಸರ್, ಗ್ಲೌಸ್‌ಗಳನ್ನು ನೀಡುವುದು. ಪಾನಮತ್ತರಾಗಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗೈದವರಿಗೆ ಉಗ್ರ ಶಿಕ್ಷೆ ನೀಡುವ ಜೊತೆಗೆ ಮದ್ಯ ನಿಷೇಧ ಮಾಡುವುದು. ಕೋವಿಡ್-೧೯ರ ಪರಿಣಾಮ ಸಾವಿಗೀಡಾದ ಆಶಾ ಕಾರ್ಯಕರ್ತೆಯರ ಕುಟುಂಬಕ್ಕೆ ನೀಡುವಂತೆ ೫೦ ಲಕ್ಷ ರು. ವಿಮೆ ಸೌಲಭ್ಯವನ್ನು ಕೋವಿಡ್-೧೯ ಸೇವೆಯಲ್ಲಿರುವಾಗ ಸಾವಿಗೀಡಾದ ಆಶಾ ಕಾರ್ಯಕರ್ತೆಯರ ಕುಟುಂಬಕ್ಕೂ ನೀಡುವಂತೆ ಆಗ್ರಹಿಸಿದರು. 
ಸಂಘದ ಜಿಲ್ಲಾಧ್ಯಕ್ಷೆ ರಾಜೇಶ್ವರಿ, ತಾಲೂಕು ಅಧ್ಯಕ್ಷೆ ಚಂದ್ರಕಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

೧೦೦ ಮೀಟರ್ ಅಂತರದ ಒಳಗಿರುವ ಮದ್ಯದಂಗಡಿಗಳ ಪರವಾನಗಿ ರದ್ದುಗೊಳಿಸಿ

ಮುಖ್ಯಮಂತ್ರಿಗಳಿಗೆ ಸಂಯುಕ್ತ ಜನತಾದಳ ವತಿಯಿಂದ ತಹಸೀಲ್ದಾರ್ ಮೂಲಕ ಮನವಿ 

ಕರ್ನಾಟಕ ಅಬಕಾರಿ ಅಧಿನಿಯಮ ಉಲ್ಲಂಘಿಸಿ ಅಕ್ರಮವಾಗಿ ೧೦೦ ಮೀಟರ್ ಅಂತರದ ಒಳಗಿರುವ ಮದ್ಯದಂಗಡಿಗಳ ವಿರುದ್ದ ಸ್ವತಃ ದೂರು ದಾಖಲಿಸಿಕೊಂಡು ಪರವಾನಿಗೆ ನವೀಕರಣಗೊಳ್ಳದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶುಕ್ರವಾರ ಭದ್ರಾವತಿಯಲ್ಲಿ ಮುಖ್ಯಮಂತ್ರಿಗಳಿಗೆ ಸಂಯುಕ್ತ ಜನತಾದಳ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ನೇತೃತ್ವದಲ್ಲಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಮೇ. ೨೯: ಶಾಲಾ-ಕಾಲೇಜು, ಆಸ್ಪತ್ರೆ, ಧಾರ್ಮಿಕ ಸ್ಥಳಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರು ವಾಸಿಸುವ ಸ್ಥಳಗಳಲ್ಲಿ ಕರ್ನಾಟಕ ಅಬಕಾರಿ ಅಧಿನಿಯಮ ಉಲ್ಲಂಘಿಸಿ ಅಕ್ರಮವಾಗಿ ೧೦೦ ಮೀಟರ್ ಅಂತರದ ಒಳಗಿರುವ ಮದ್ಯದಂಗಡಿಗಳ ವಿರುದ್ದ ಸ್ವತಃ ದೂರು ದಾಖಲಿಸಿಕೊಂಡು ಪರವಾನಿಗೆ ನವೀಕರಣಗೊಳ್ಳದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶುಕ್ರವಾರ ಮುಖ್ಯಮಂತ್ರಿಗಳಿಗೆ ಸಂಯುಕ್ತ ಜನತಾದಳ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶಶಿಕುಮಾರ್ ಎಸ್ ಗೌಡ ನೇತೃತ್ವದಲ್ಲಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಲಾಯಿತು.
ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ದೇಶದಲ್ಲಿ ಮದ್ಯಪಾನ ನಿರ್ಮೂಲನೆ ಬಯಸಿ ರಾಮರಾಜ್ಯದ ಕನಸು ಕಂಡಿದ್ದರು. ಆದರೆ ಅವರ ಕನಸು ಇಂದಿಗೂ ನನಸಾಗಿಲ್ಲ. ಮಹಾತ್ಮಗಾಂಧಿಯವರ ಚಿಂತನೆಗಳನ್ನು ಗಾಳಿಗೆ ತೂರಿ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಮದ್ಯ ವ್ಯಸನಿಗಳು ಹಣ, ಆರೋಗ್ಯ ಮತ್ತು ಮಾನ ಕಳೆದುಕೊಳ್ಳುವಂತಾಗಿದೆ. ಅಲ್ಲದೆ ಬಡ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ ಎಂದು ಅಳಲು ವ್ಯಕ್ತಪಡಿಸಲಾಗಿದೆ.
ದೇಶದಲ್ಲಿ ಈಗಾಗಲೇ ಗುಜರಾತ್, ಬಿಹಾರ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಮದ್ಯಪಾನ ನಿಷೇಧಿಸಲಾಗಿದೆ. ರಾಜ್ಯದಲ್ಲೂ ಸಹ ದಿಟ್ಟ ನಿರ್ಧಾರ ಕೈಗೊಂಡು ಮದ್ಯಪಾನ ನಿಷೇಧ ಜಾರಿಗೆ ತರಲು ಮುಂದಾಗಬೇಕು. ಪ್ರಸ್ತುತ ಹೊಸದಾಗಿ ಸುಮಾರು ೧ ಸಾವಿರಕ್ಕೂ ಹೆಚ್ಚು ಎಂಎಸ್‌ಐಎಲ್ ಮದ್ಯದಂಗಡಿಗಳನ್ನು ತೆರೆಯಲು ಪರವಾನಗಿ ನೀಡಲು ಮುಂದಾಗಿರುವ ವಿಚಾರ ತಿಳಿದುಬಂದಿದೆ. ಯಾವುದೇ ಕಾರಣಕ್ಕೂ ಹೊಸದಾಗಿ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಬಾರದೆಂದು ಮನವಿ ಮಾಡಲಾಗಿದೆ.
ಪ್ರಸ್ತುತ ರಾಜ್ಯದಲ್ಲಿ ೧೧,೦೩೭ ಮದ್ಯದಂಗಡಿಗಳಿದ್ದು, ಬಹುತೇಕ ಮದ್ಯದಂಗಡಿಗಳು ಶಿಕ್ಷಣ ಸಂಸ್ಥೆ, ಕಾಲೇಜು, ವಿಶ್ವವಿದ್ಯಾನಿಲಯ, ಪೂರ್ವ ಪ್ರಾಥಮಿಕ ಶಾಲೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಛೇರಿಗಳು, ಎ ಮತ್ತು ಬಿ ದರ್ಜೆ ಹೊಂದಿರುವ ಕಛೇರಿ ಮತ್ತು ಸಿಟಿ ಕಾರ್ಪೋರೇಷನ್, ಸಿಟಿ ಮುನಿಸಿಪಾಲಿಟಿ ಕಾರ್ಪೋರೇಷನ್, ಟೌನ್ ಮುನ್ಸಿಪಲ್ ಕಾರ್ಪೋರೇಷನ್, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ, ಧಾರ್ಮಿಕ ಸಂಸ್ಥೆಗಳು ಎಂದರೆ ದೇವಸ್ಥಾನ, ಮಠ, ಮಸೀದಿ, ಚರ್ಚ್, ಸಾರ್ವಜನಿಕ ಧಾರ್ಮಿಕ ಮತ್ತು ಧರ್ಮಾರ್ಥ ದತ್ತಿ, ಅಂಗನವಾಡಿ, ೩೦ ಹಾಸಿಗೆಯುಳ್ಳ ನರ್ಸಿಂಗ್ ಹೋಂ ಸೇರಿದಂತೆ ಇನ್ನಿತರ ಸ್ಥಳಗಳ ೧೦೦ ಮೀಟರ್ ಅಂತರದ ಒಳಗಿವೆ. ಅಲ್ಲದೆ ಕೆಲವು ಮದ್ಯದಂಗಡಿಗಳು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಮದ್ಯದಿಂದ ೨೨೦ ಮೀಟರ್ ಅಂತರದ ಒಳಗಿವೆ. ಮುಖ್ಯಮಂತ್ರಿಗಳು ತಾಲೂಕು ದಂಡಾಧಿಕಾರಿಗಳಿಗೆ ಮತ್ತು ಅಬಕಾರಿ ಉಪ ಆಯುಕ್ತರಿಗೆ ಸ್ವತಃ ದೂರು ದಾಖಲಿಸಿಕೊಂಡು  ಈ ಮದ್ಯದಂಗಡಿಗಳ ಪರವಾನಗಿ ನವೀಕರಣಗೊಳ್ಳದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಒಂದು ವೇಳೆ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಜೆ. ಪಟೇಲ್‌ರವರ ನೇತೃತ್ವದಲ್ಲಿ ರಾಜ್ಯಾದ್ಯಂತ ಶಾಂತಿಯುತವಾಗಿ ಹಾಗೂ ಲಾಕ್‌ಡೌನ್ ಮುಗಿದ ನಂತರ ನಿರಂತರವಾಗಿ ಹೋರಾಟ ನಡೆಸುವುದಾಗಿ ಎಚ್ಚರಿಸಲಾಗಿದೆ.
ಪಕ್ಷದ ಮುಖಂಡರಾದ ಬಾಬು ದೀಪಕ್ ಕುಮಾರ್, ಹರೀಶ್‌ಗೌಡ, ಮನೋಜ್, ರವಿಚಂದ್ರ, ರೈತ ಮುಖಂಡ ಸುಬ್ಬೇಗೌಡ, ದಲಿತ ಮುಖಂಡ ರವಿಕುಮಾರ್ ನಾಯ್ಕ, ಕರವೇ(ಪ್ರವೀಣ್‌ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.