ಭದ್ರಾವತಿ ನಗರಸಭೆ ಪೌರಾಯುಕ್ತ ಮನೋಹರ್ ಮಂಗಳವಾರ ಒಂದೇ ದಿನ ಖುದ್ದಾಗಿ ಸುಮಾರು ೫-೬ ಕೆರೆಗಳನ್ನು ವೀಕ್ಷಣೆ ನಡೆಸಿ ಸಂಪೂರ್ಣ ಮಾಹಿತಿ ಪಡೆದರು.
ಭದ್ರಾವತಿ, ಜು. ೭: ನಗರಸಭೆ ಪೌರಾಯುಕ್ತ ಮನೋಹರ್ ಮಂಗಳವಾರ ಒಂದೇ ದಿನ ಖುದ್ದಾಗಿ ಸುಮಾರು ೫-೬ ಕೆರೆಗಳನ್ನು ವೀಕ್ಷಣೆ ನಡೆಸಿ ಸಂಪೂರ್ಣ ಮಾಹಿತಿ ಪಡೆದರು.
ನಗರಸಭೆ ವ್ಯಾಪ್ತಿಯಲ್ಲಿನ ಕೆರೆಗಳನ್ನು ಅಭಿವೃದ್ಧಿಪಡಿಸಿ ಅಂತರ್ಜಲ ಹೆಚ್ಚಿಸುವ ಮೂಲಕ ರೈತರಿಗೆ ಹಾಗೂ ದನಗಾಹಿಗಳಿಗೆ ಅನುಕೂಲ ಕಲ್ಪಿಸಿಕೊಡುವಂತೆ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ನೇತೃತ್ವದಲ್ಲಿ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಹಾಗೂ ಸುವರ್ಣ ಮಹಿಳಾ ವೇದಿಕೆ ವತಿಯಿಂದ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು.
ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಪೌರಾಯುಕ್ತರು ಜನ್ನಾಪುರ ಸರ್ವೆ ನಂ.೭೦ರ ೪೫ ಎಕರೆ ೨೦ ಗುಂಟೆ ವಿಸ್ತೀರ್ಣವುಳ್ಳ ಜನ್ನಾಪುರ ಕೆರೆ, ಸಿದ್ದಾಪುರ ವ್ಯಾಪ್ತಿಯ ಸರ್ವೆ ನಂ. ೧೩೩ರ ೮ ಎಕರೆ ೩೬ ಗುಂಟೆ ಗೌಡನ ಕೆರೆ, ಸರ್ವೆ ನಂ. ೩೬ರ ೨ ಎಕರೆ ೮ ಗುಂಟೆ ಬಿದಿರೊಡ್ಡು ಕೆರೆ, ಸರ್ವೆ ನಂ.೧೯ರ ೬ ಎಕರೆ ೨೭ ಗುಂಟೆ ಚಿಕ್ಕಯ್ಯನ ಕೆರೆ, ಸರ್ವೆ ನಂ.೬೩ರ ೪೫ ಎಕರೆ ೩ ಗುಂಟೆ ಬಳಸೋಕೆರೆ, ಸರ್ವೆ ನಂ.೬೯ರ ೧ ಎಕರೆ ೨೬ ಗುಂಟೆ ಬಳಸೋಕೆರೆ, ಸರ್ವೆ ನಂ. ೮೬ರ ೫ ಎಕರೆ, ೧೫ ಗುಂಟೆ ನೆಲಕಟ್ಟೆ ಕೆರೆ ಮತ್ತು ಸರ್ವೆ ೧೧೦ರ ೨೪ ಎಕರೆ, ೧೦ ಗುಂಟೆ ಹೊಸೂರು ಕೆರೆಗಳನ್ನು ವೀಕ್ಷಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈಗಾಗಲೇ ತಹಸೀಲ್ದಾರ್ ನೇತೃತ್ವದಲ್ಲಿ ನಗರಸಭೆ ವ್ಯಾಪ್ತಿಯಲ್ಲಿನ ಕೆರೆಗಳ ಬೌಂಡರಿ ಗುರುತಿಸುವ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಬೌಂಡರಿ ಕಾರ್ಯ ಕೈಗೊಂಡ ನಂತರ ಕೆರೆಗಳ ಸ್ವಚ್ಛತಾ ಕೈಗೊಂಡು ಅಭಿವೃದ್ಧಿಗೆ ಸಂಬಂಧಿಸಿದಂತೆ ಪೌರಾಯುಕ್ತರು ಯೋಜನಾ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ.
ಕೆರೆಗಳ ವೀಕ್ಷಣೆ ಸಂದರ್ಭದಲ್ಲಿ ಪ್ರಮುಖರಾದ ಆರ್. ವೇಣುಗೋಪಾಲ್, ರಮಾವೆಂಕಟೇಶ್, ಶೈಲಜಾ ರಾಮಕೃಷ್ಣ, ದೇವಿಕಾ ನಾಗರಾಜ್, ಆರ್. ಮುಕುಂದಯ್ಯ, ಅಂತೋಣಿ ಗ್ಸೇವಿಯರ್, ಭವಾನಿ ಶಂಕರ್, ರೈತ ಮುಖಂಡ ಎಸ್.ಎಸ್ ನೀಲಕಂಠಪ್ಪ, ಪ್ರಸನ್ನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಸರ್ವೆ ನಂ.೭೦ರ ೪೫ ಎಕರೆ ೨೦ ಗುಂಟೆ ವಿಸ್ತೀರ್ಣವುಳ್ಳ ಜನ್ನಾಪುರ ಕೆರೆ ಅಭಿವೃದ್ಧಿ ಕಾರ್ಯಗಳು ಶೀಘ್ರವಾಗಿ ಆರಂಭಗೊಳ್ಳುವಂತೆ ಕೆರೆ ದಂಡೆ ಮೇಲಿರುವ ಶ್ರೀ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.