ಗುರುವಾರ, ಆಗಸ್ಟ್ 27, 2020

ಎಂಪಿಎಂ ಬಡಾವಣೆ ಅಭಿವೃದ್ಧಿಗೆ ಬದ್ಧ : ಬಿ.ಕೆ ಸಂಗಮೇಶ್ವರ್

ಸಸಿ ನೆಡುವ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ಭದ್ರಾವತಿ ನಗರದ ಆನೆಕೊಪ್ಪ ಎಂಪಿಎಂ ಬಡಾವಣೆಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ  ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.

    ಭದ್ರಾವತಿ, ಆ. ೨೭: ನಗರದ ಆನೆಕೊಪ್ಪದಲ್ಲಿರುವ ಎಂಪಿಎಂ ಬಡಾವಣೆ ಅಭಿವೃದ್ಧಿಗೆ ಬದ್ಧನಾಗಿದ್ದು, ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಭರವಸೆ ನೀಡಿದರು.
       ಮೈಸೂರು ಕಾಗದ ಕಾರ್ಖಾನೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ನಗರದ ಆನೆಕೊಪ್ಪ ಎಂಪಿಎಂ ಬಡಾವಣೆಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ  ಕಾರ್ಯಕ್ರಮ ಉದ್ದಾಟಿಸಿ ಅವರು ಮಾತನಾಡಿದರು.  
    ಎಂಪಿಎಂ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರ್ಮಿಕರು ಪ್ರಸ್ತುತ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದು, ಈ ಹಿನ್ನಲೆಯಲ್ಲಿ ಬಡಾವಣೆ ಅಭಿವೃದ್ಧಿಗೆ ನಗರಸಭೆ ಮೂಲಕ ಸಾಧ್ಯವಾದಷ್ಟು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಮುಂದಿನ ೬ ತಿಂಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದರು.
     ಬಡಾವಣೆ ಉತ್ತಮ ಪರಿಸರ ಹೊಂದಿದ್ದು, ಭೂಮಿಗೆ ಹೆಚ್ಚಿನ ಬೆಲೆ ಬಂದಿದೆ. ಭವಿಷ್ಯದಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದುವ ವಿಶ್ವಾಸವಿದೆ. ಬಡಾವಣೆಯಲ್ಲಿ ತಕ್ಷಣ ಹೆಚ್ಚಿನ ಮನೆಗಳು ನಿರ್ಮಾಣಗೊಳ್ಳಬೇಕು. ಆಗ ಮಾತ್ರ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯ. ಈಗಾಗಲೇ ಬಹುತೇಕ ಸಮಸ್ಯೆಗಳು ಬಗೆಹರಿದಿವೆ. ಇದನ್ನು ನಿವೇಶನ ಹೊಂದಿರುವವರು ಅರ್ಥ ಮಾಡಿಕೊಳ್ಳಬೇಕು. ಆರ್ಥಿಕ ಸಮಸ್ಯೆಗಳು ಇದ್ದಲ್ಲಿ ಪ್ರಸ್ತುತ ಸಾಲಸೌಲಭ್ಯ ವ್ಯವಸ್ಥೆ ಕಲ್ಪಿಸಿಕೊಳ್ಳಲು ಹಲವು ಯೋಜನೆಗಳಿದ್ದು, ಇವುಗಳ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.


       ಮೆಸ್ಕಾಂ ಕಾರ್ಯ ನಿರ್ವಾಹಕ ಇಂಜಿನಿಯರ್ ಎನ್.ಎಸ್ ಸತೀಶ್‌ಚಂದ್ರ ಮಾತನಾಡಿ, ಇಲಾಖೆ ಸಹ ಮರಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿನಾಕಾರಣ ಮರಗಳನ್ನು ಕಡಿಯುವ ಮನಸ್ಥಿತಿ ಹೊಂದಿಲ್ಲ. ಮರಗಳು ಇದ್ದಲ್ಲಿ ಉತ್ತಮ ಪರಿಸರ ಸಾಧ್ಯ. ಪ್ರಸ್ತುತ ಎಂಪಿಎಂ ಕಾರ್ಖಾನೆ ಮೆಸ್ಕಾಂ ಇಲಾಖೆಯಲ್ಲಿ ನೂರಾರು ಕೋ. ರು. ಬಾಕಿ ಉಳಿಸಿಕೊಂಡಿದೆ. ಈ ಹಣ ವಸೂಲಾತಿಗಾಗಿ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ಆದರೂ ಸಹ ಕಾರ್ಖಾನೆ ಪ್ರಸ್ತುತ ಎದುರಿಸುತ್ತಿರುವ ಸಂದಿಗ್ದ ಪರಿಸ್ಥಿತಿಗೆ ಪೂರಕವಾಗಿ ಸ್ಪಂದಿಸುತ್ತಿದೆ. ಬಡಾವಣೆಗೆ ನಿರಂತರವಾಗಿ ವಿದ್ಯುತ್ ಪೂರೈಕೆಗೆ ಬದ್ಧವಾಗಿದೆ. ಆದರೆ ಸಹಕಾರ ಸಂಘ ಕೆಲವೊಂದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದರು.
   ನಗರಸಭೆ ಪೌರಾಯುಕ್ತ ಮನೋಹರ್ ಮಾತನಾಡಿ, ನಿರ್ಮಾಣಗೊಂಡಿರುವ ಮನೆಗಳಿಗೆ ಸಮರ್ಪಕವಾಗಿ ಯುಜಿಡಿ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ರಸ್ತೆ, ಚರಂಡಿ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು
     ವಲಯ ಅರಣ್ಯಾಧಿಕಾರಿ ಕೆ.ಎಚ್ ಮಂಜುನಾಥ್, ಉಪ ವಲಯ ಅರಣ್ಯಾಧಿಕಾರಿ ದಿನೇಶ್‌ಕುಮಾರ್, ಬಡಾವಣೆ ನಿವಾಸಿ ಸಂತೋಷ್ ಹಾಗು ಸಂಘದ ಪದಾಧಿಕಾರಿಗಳು, ಸದಸ್ಯರು, ಬಡಾವಣೆ ನಿವಾಸಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಅಧ್ಯಕ್ಷತೆ ವಹಿಸಿದ್ದರು. ಮಾವು, ಹಲಸು, ಬೇವು ಸೇರಿದಂತೆ ಹಲವು ಜಾತಿಯ ಸಸಿಗಳನ್ನು ಬಡಾವಣೆ ವ್ಯಾಪ್ತಿಯಲ್ಲಿ ನೆಡಲಾಯಿತು.

ಬುಧವಾರ, ಆಗಸ್ಟ್ 26, 2020

ಸ್ಮಶಾನ ಜಾಗ ಒತ್ತುವರಿ : ಜಮೀನು ಕಳೆದುಕೊಂಡ ರೈತರು

ಏಕಾಏಕಿ ಕಾರ್ಯಾಚರಣೆಯಿಂದ ಬೆಳೆ ನಾಶ : ಆರೋಪ

ಭದ್ರಾವತಿ ತಾಲೂಕಿನ ತಾವರಘಟ್ಟ ಗ್ರಾಮ ಪಂಚಾಯಿತಿಗೆ ಸೇರಿದ ತಾವರಘಟ್ಟ ಸ್ಮಶಾನ ಜಾಗಕ್ಕೆ ಸಂಬಂಧಿಸಿದಂತೆ ಒತ್ತುವರಿ ತೆರವು ಕಾರ್ಯಾಚರಣೆ ಬುಧವಾರ ಸಂಜೆ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ನಡೆದಿದೆ.
ಭದ್ರಾವತಿ: ತಾಲೂಕಿನ ತಾವರಘಟ್ಟ ಗ್ರಾಮ ಪಂಚಾಯಿತಿಗೆ ಸೇರಿದ ತಾವರಘಟ್ಟ ಸ್ಮಶಾನ ಜಾಗಕ್ಕೆ ಸಂಬಂಧಿಸಿದಂತೆ ಒತ್ತುವರಿ ತೆರವು ಕಾರ್ಯಾಚರಣೆ ಬುಧವಾರ ಸಂಜೆ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ನಡೆದಿದೆ.
     ತಾವರಘಟ್ಟ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂ. ೨೯(ಹಳೇ ಸರ್ವೆ ನಂ.೧೪)ರ ಗೋಮಾಳ ಜಾಗದಲ್ಲಿ ಸ್ಮಶಾನ ನಿರ್ಮಾಣಕ್ಕೆ ಸರ್ಕಾರದಿಂದ ೧ ಎಕರೆ ೨೦ ಗುಂಟೆ ಜಮೀನು ಮಂಜೂರಾತಿಯಾಗಿದ್ದು, ಈ ಹಿನ್ನಲೆಯಲ್ಲಿ ತಾಲೂಕು ಆಡಳಿತದಿಂದ ಜು.೨೧ರಂದು ಸರ್ವೆ ಕಾರ್ಯ ನಡೆಸಲು ಗ್ರಾಮಕ್ಕೆ ತೆರಳಿದ್ದಾಗ ಗೋಮಾಳ ಒತ್ತುವರಿ ಮಾಡಿರುವ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಹಾಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಲಘು ಲಾಠಿ ಪ್ರಹಾರ ಸಹ ನಡೆದಿತ್ತು.  


   ಇದೀಗ ಏಕಾಏಕಿ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಜಮೀನು ತೆರವು ಕಾರ್ಯಾಚರಣೆ ನಡೆಸಲಾಗಿದ್ದು,  ಇದರಿಂದಾಗಿ ಜಮೀನು ಕಳೆದುಕೊಂಡ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ ಕಾರ್ಯಾಚರಣೆ ನಡೆಸಿರುವುದರಿಂದ ಹೆಚ್ಚಿನ ಹಾನಿ ಉಂಟಾಗಿದ್ದು, ಶುಂಠಿ, ಭತ್ತ, ಅಡಕೆ, ತೆಂಗಿನ ಬೆಳೆಗಳು ನಾಶವಾಗಿದೆ. ಅಲ್ಲದೆ ಒತ್ತುವರಿ ಕಾರ್ಯಾಚರಣೆಯಲ್ಲೂ ತಾರತಮ್ಯ ಮಾಡಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಭದ್ರಾ ಜಲಾಶಯಕ್ಕೆ ಬಾಗಿನ

ಭದ್ರಾವತಿ ತಾಲೂಕಿನ ಭದ್ರಾ ಜಲಾಶಯದಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ರೈತ ವರಿಷ್ಠ ಕೆ.ಟಿ ಗಂಗಾಧರ್ ನೇತೃತ್ವದಲ್ಲಿ ಬಾಗಿನ ಸಮರ್ಪಿಸಲಾಯಿತು.
ಭದ್ರಾವತಿ, ಆ. ೨೬:  ತಾಲೂಕಿನ ಜೀವನದಿ ಭದ್ರಾ ನದಿ ಜಲಾಶಯ ಬಹುತೇಕ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಬಾಗಿನ ಸಮರ್ಪಿಸಲಾಯಿತು.
   ಭದ್ರಾ ಜಲಾಶಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ರೈತ ಮುಖಂಡ, ವರಿಷ್ಠ ಕೆ.ಟಿ ಗಂಗಾಧರ್ ನೇತೃತ್ವವಹಿಸಿದ್ದರು.
    ಪ್ರಮುಖರಾದ ಯಶವಂತರಾವ್ ಘೋರ್ಪಡೆ,  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್, ತಾಲೂಕು ಅಧ್ಯಕ್ಷ ಹಿರಿಯಣ್ಣಯ್ಯ, ಗೊಂದಿ ಜಯರಾಂ, ಮಂಜಪ್ಪ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.






ಮಂಗಳವಾರ, ಆಗಸ್ಟ್ 25, 2020

ಆ.೨೭ರಂದು ಶ್ರದ್ದಾಂಜಲಿ ಸಭೆ

ಭದ್ರಾವತಿ, ಆ. ೨೫: ಕಳೆದ ೨ ದಿನಗಳ ಹಿಂದೆ ನಿಧನ ಹೊಂದಿದ ಪ್ರಗತಿಪರ ಚಿಂತಕ, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ. ಶ್ರೀನಿವಾಸನ್‌ರವರಿಗೆ ಆ.೨೭ರಂದು ಶ್ರದ್ದಾಂಜಲಿ ಸಭೆ ಹಮ್ಮಿಕೊಳ್ಳಲಾಗಿಇದೆ.
ನಗರದ ಉಂಬ್ಳೆಬೈಲು ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಸಂಜೆ ೫ ಗಂಟೆಗೆ ಸಭೆ ನಡೆಯಲಿದ್ದು, ಸಭೆ ಯಶಸ್ವಿಗೊಳಿಸುವಂತೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಕೋರಿದೆ.


ಆ.೨೭ರಂದು ಸಸಿ ನೆಡುವ ಕಾರ್ಯಕ್ರಮ

ಭದ್ರಾವತಿ, ಆ. ೨೫: ಮೈಸೂರು ಕಾಗದ ಕಾರ್ಖಾನೆ  ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ನಗರಸಭೆ, ಮೆಸ್ಕಾಂ ಹಾಗು ಅರಣ್ಯ ಇಲಾಖೆ ಸಹಯೋಗದೊಂದಿಗೆ ಆನೆಕೊಪ್ಪದಲ್ಲಿರುವ ಎಂಪಿಎಂ ಬಡಾವಣೆಯಲ್ಲಿ ಆ.೨೭ರಂದು ಬೆಳಿಗ್ಗೆ ೧೧.೩೦ಕ್ಕೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ನಗರಸಭೆ ಪೌರಾಯುಕ್ತ ಮನೋಹರ್, ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಎನ್.ಎಸ್ ಸತೀಶ್‌ಚಂದ್ರ ಮತ್ತು ವಲಯ ಅರಣ್ಯಾಧಿಕಾರಿ ಕೆ.ಎಚ್ ಮಂಜುನಾಥ್ ಉಪಸ್ಥಿತರಿರುವರು.


ಬೀದಿ ಬದಿ ವ್ಯಾಪಾರಸ್ಥರಿಗೆ ಆರ್ಥಿಕ ನೆರವು

ಭದ್ರಾವತಿಯಲ್ಲಿ ಕೆನರಾ ಬ್ಯಾಂಕ್ ನೆರವಿನೊಂದಿಗೆ ಸುಮಾರು ೪೯ ಬೀದಿ ಬದಿ ವ್ಯಾಪಾರಿಗಳಿಗೆ ಪಿ.ಎಂ ಸೇವಾ ನಿಧಿಯಿಂದ  ಸಾಲ ಮಂಜೂರಾತಿ ಮಾಡಲಾಗಿದ್ದು, ಮಂಗಳವಾರ ಶಾಸಕ ಬಿ.ಕೆ ಸಂಗಮೇಶ್ವರ್ ಪಾರಿಗಳಿಗೆ ಸಾಲ ಮಂಜೂರಾತಿ ಪತ್ರ ವಿತರಿಸಿದರು.
ಭದ್ರಾವತಿ, ಆ. ೨೫: ನಗರಸಭೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪರ ನಡೆಸುವ ಮೂಲಕ ಜೀವನ ಸಾಗಿಸುತ್ತಿರುವ ಬಡ ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರ್ಥಿಕ ನೆರವು ಕಲ್ಪಿಸಿಕೊಡುವಲ್ಲಿ ನಗರಸಭೆ ಆಡಳಿತ ಯಶಸ್ವಿಯಾಗಿದೆ.
     ಕೆನರಾ ಬ್ಯಾಂಕ್ ನೆರವಿನೊಂದಿಗೆ ಸುಮಾರು ೪೯ ಬೀದಿ ಬದಿ ವ್ಯಾಪಾರಿಗಳಿಗೆ ಪಿ.ಎಂ ಸೇವಾ ನಿಧಿಯಿಂದ  ಸಾಲ ಮಂಜೂರಾತಿ ಮಾಡಲಾಗಿದ್ದು, ಮಂಗಳವಾರ ಶಾಸಕ ಬಿ.ಕೆ ಸಂಗಮೇಶ್ವರ್ ನಗರಸಭೆ ಸಭಾಂಗಣದಲ್ಲಿ ವ್ಯಾಪಾರಿಗಳಿಗೆ ಸಾಲ ಮಂಜೂರಾತಿ ಪತ್ರ ವಿತರಿಸಿದರು.
    ನಗರಸಭೆ ಪೌರಾಯುಕ್ತ ಮನೋಹರ್, ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ, ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





ಸೋಮವಾರ, ಆಗಸ್ಟ್ 24, 2020

ಕನ್ನಡಕ್ಕೆ ಮೊದಲ ಆದ್ಯತೆ ನೀಡಿ : ಕರವೇ ಆಗ್ರಹ

ಬ್ಯಾಂಕ್ ಆಫ್  ಬರೋಡ ಶಾಖಾ ಕಛೇರಿ ವ್ಯವಸ್ಥಾಪಕರಿಗೆ ಮನವಿ

ಭದ್ರಾವತಿ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡುವ ಮೂಲಕ ಕಡ್ಡಾಯವಾಗಿ ಕನ್ನಡ ಬಳಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಸೋಮವಾರ ಶಾಖಾ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಆ. ೨೪: ನಗರದ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡುವ ಮೂಲಕ ಕಡ್ಡಾಯವಾಗಿ ಕನ್ನಡ ಬಳಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಸೋಮವಾರ ಶಾಖಾ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
       ಬ್ಯಾಂಕಿನ ನಾಮಫಲಕ ಹಾಗು ಎಲ್ಲಾ ವ್ಯವಹಾರಗಳು ಕನ್ನಡ ಭಾಷೆಯಲ್ಲಿ ನಡೆಯಬೇಕು. ಠೇವಣಿ ತೆರೆಯುವ ಅರ್ಜಿ, ಎಟಿಎಂ ಯಂತ್ರದಲ್ಲಿ ಹಾಗು ಇನ್ನಿತರೆ ಅರ್ಜಿ ನಮೂನೆಗಳಲ್ಲಿ ಕೇವಲ ಹಿಂದಿ ಮತ್ತು ಆಂಗ್ಲ ಭಾಷೆಗಳು ನಮೂದಾಗಿದ್ದು, ಈ ಎಲ್ಲಾ ನಮೂನೆ ಹಾಗು ಹಣ ತೆಗೆಯುವ ಯಂತ್ರದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಬ್ಯಾಂಕಿನಲ್ಲಿ ಕನ್ನಡ ಭಾಷೆ ಕಡ್ಡಾಯಗೊಳಿಸಬೇಕೆಂದು ಆಗ್ರಹಿಸಲಾಗಿದೆ.
     ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಗ್ರಾಹಕರು ಹಾಗು ಇನ್ನಿತರೆ ವ್ಯವಹಾರಗಳನ್ನು ನಡೆಸಲು ಬ್ಯಾಂಕಿಗೆ ಬರುವವರಿಗೆ ಹಿಂದಿ ಹಾಗು ಆಂಗ್ಲ ಭಾಷೆಗಳು ಸರಿಯಾಗಿ ಅರ್ಥವಾಗದೆ ವ್ಯವಹಾರ ನಡೆಸಲು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ತಕ್ಷಣ ಅರ್ಜಿ ನಮೂನೆಗಳು, ಎಲ್ಲಾ ವ್ಯವಹಾರಗಳು ಕನ್ನಡದಲ್ಲಿ ನಡೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.
    ಕರಾವೇ ತಾಲೂಕು ಶಾಖೆ ಅಧ್ಯಕ್ಷ ಬಿ.ವಿ ಗಿರೀಶ್, ಪ್ರಧಾನ ಕಾರ್ಯದರ್ಶಿ ಜಿ. ಮಂಜುನಾಥ್, ಕಾರ್ಯದರ್ಶಿ ಎ. ಸಂದೇಶ್‌ಕುಮಾರ್, ಜೆಡಿಯು ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.