ಭದ್ರಾವತಿ ರಂಗಪ್ಪವೃತ್ತ ಜೈಭೀಮಾ ನಗರದಲ್ಲಿ ಶನಿವಾರ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಜೀವನ ಆಧಾರಿತ ಮಹಾನಾಯಕ ಧಾರಾವಾಹಿ ಯಶಸ್ವಿಯಾಗಿ ಮುಂದುವರೆಯಬೇಕೆಂಬ ಆಶಯದೊಂದಿಗೆ ಧಾರಾವಾಹಿ ಸೃಷ್ಠಿಕರ್ತೆ ಹಾಗು ವಾಹಿನಿ ಮುಖ್ಯಸ್ಥರು ಮತ್ತು ಸಿಬ್ಬಂದಿಗಳಿಗೆ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನೆ ಕಾರ್ಯಕ್ರಮ ಪೌರಾಯುಕ್ತ ಮನೋಹರ್ ಉದ್ಘಾಟಿಸಿ ಮಾತನಾಡಿದರು.
ಭದ್ರಾವತಿ, ಅ. ೧೦: ದೇಶದಲ್ಲಿ ಎಲ್ಲರೂ ಶಿಕ್ಷಣವಂತರಾಗುವ ಜೊತೆಗೆ ತಾರತಮ್ಯ ನಿರ್ಮೂಲನೆಯಾಗಬೇಕೆಂಬುದು ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಆಶಯವಾಗಿದ್ದು, ಅದರಂತೆ ಪೌರಕಾರ್ಮಿಕರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಬೇಕೆಂದು ಪೌರಾಯುಕ್ತ ಮನೋಹರ್ ಕರೆ ನೀಡಿದರು.
ಅವರು ಶನಿವಾರ ರಂಗಪ್ಪವೃತ್ತ ಜೈಭೀಮಾ ನಗರದಲ್ಲಿ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಜೀವನ ಆಧಾರಿತ ಮಹಾನಾಯಕ ಧಾರಾವಾಹಿ ಯಶಸ್ವಿಯಾಗಿ ಮುಂದುವರೆಯಬೇಕೆಂಬ ಆಶಯದೊಂದಿಗೆ ಧಾರಾವಾಹಿ ಸೃಷ್ಠಿಕರ್ತೆ ಹಾಗು ವಾಹಿನಿ ಮುಖ್ಯಸ್ಥರು ಮತ್ತು ಸಿಬ್ಬಂದಿಗಳಿಗೆ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.
ಸಮಾಜದಲ್ಲಿ ಪೌರಕಾರ್ಮಿಕರ ಶ್ರಮ ಹೆಚ್ಚಿನದ್ದಾಗಿದ್ದು, ಪೌರಕಾರ್ಮಿಕರು ಅಂಬೇಡ್ಕರ್‌ರವರ ಆಶಯಗಳನ್ನು ಸರಿಯಾಗಿ ಅರಿತುಕೊಳ್ಳಬೇಕು. ಈ ರೀತಿಯ ಕಾರ್ಯಕ್ರಮಗಳು ಎಲ್ಲರಿಗೂ ಮಾರ್ಗದರ್ಶಕವಾಗಬೇಕೆಂದರು.
ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಮಾತನಾಡಿ, ದೀನ ದಲಿತರ ದ್ವನಿ, ಮಹಾನ್‌ಚೇತನ ಡಾ. ಬಿ.ಆರ್ ಅಂಬೇಡ್ಕರ್‌ರವರು ದೇಶಕ್ಕೆ ನೀಡಿರುವ ಸಂವಿಧಾನ ಎಲ್ಲರನ್ನು ಸರ್ವಸಮಾನತೆಯಿಂದ ಕಾಣುವಂತೆ ಮಾಡಿದೆ. ಅಂಬೇಡ್ಕರ್‌ರವರು ತಮ್ಮ ಬದುಕಿನ ಕೊನೆಯವರೆಗೂ ನೋವು, ಅವಮಾನ, ಸಂಕಷ್ಟಗಳನ್ನು ಎದುರಿಸಿ ಭವಿಷ್ಯದ ಸಮಾಜಕ್ಕೆ ಬೆಳಕಾಗಿ ನಿಂತವರು. ಇವರ ಆದರ್ಶತನ ಎಲ್ಲರೂ ಮೈಗೂಡಿಸಿಕೊಂಡು ಮುನ್ನಡೆಬೇಕೆಂದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಮಾತನಾಡಿದರು. ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಜಿಲ್ಲಾ ಸಂಚಾಲಕ ಚಿನ್ನಯ್ಯ, ಡಿಎಸ್‌ಎಸ್ ಅಂಗವಿಕಲರ ವಿಭಾಗದ ಜಿಲ್ಲಾಧ್ಯಕ್ಷ ಕಾಣಿಕ್‌ರಾಜ್, ಜಿಂಕ್‌ಲೈನ್ ಮಣಿ, ರಂಗನಾಥ್, ಮಾರುತಿ ಮೆಡಿಕಲ್ ಆನಂದ್, ಈಶ್ವರಪ್ಪ, ಎ. ತಿಪ್ಪೇಸ್ವಾಮಿ, ಚುಂಜ್ಯಾನಾಯ್ಕ, ಹಿರಿಯ ಪತ್ರಕರ್ತ ಎನ್. ಬಾಬು, ಪರಮೇಶ್ವರಪ್ಪ(ಪರ್ಮಿ), ಎನ್. ಗೋವಿಂದ, ಕಾರ್ತಿಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಡಿಎಸ್ಎಸ್ ಕಾರ್ಯಕರ್ತ ನವೀನಕುಮಾರ್ ನೇತೃತ್ವದ ಹರೀಶ್, ಶಂಕರ್, ಮಂಜ, ಕಿರಣ, ಶಶಿ ಮತ್ತು ಸುಮನ್ ಸೇರಿದಂತೆ ಇನ್ನಿತರರನ್ನೊಳಗೊಂಡ ತಂಡ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸಿತು.