Wednesday, October 14, 2020

ದಸರಾ ಈ ಬಾರಿ ಜನ ಜಾಗೃತಿ ಹಬ್ಬ : ಪೌರಾಯುಕ್ತ ಮನೋಹರ್


ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಾಡಹಬ್ಬ ದಸರಾ ಅಂಗವಾಗಿ ಆಯೋಜಿಸಲಾಗಿದ್ದ ಸಭೆಯಲ್ಲಿ ಪೌರಾಯುಕ್ತ ಮನೋಹರ್ ಮಾತನಾಡಿದರು.
ಭದ್ರಾವತಿ: ವಿಶ್ವದಾದ್ಯಂತ ಕೋವಿಡ್-೧೯ ವ್ಯಾಪಿಸುವ ಮೂಲಕ ಶ್ರೀಸಾಮಾನ್ಯರ ಬದುಕನ್ನು ದುಸ್ತರಗೊಳಿಸಿದ್ದು, ಈ ನಡುವೆ ಎಲ್ಲಾ ಸಂಕಷ್ಟಗಳಿಂದ ನಮ್ಮನ್ನು ದೂರ ಮಾಡುವಂತಾಗಲಿ ಎಂಬ ಆಶಯದೊಂದಿಗೆ ಈ ಬಾರಿ ನಗರಸಭೆ ಆಡಳಿತದಿಂದ ಅತ್ಯಂತ ಸರಳವಾಗಿ ೯ ದಿನಗಳ ಕಾಲ ನಾಡಹಬ್ಬ ದಸರಾ ಆಚರಿಸಲಾಗುತ್ತಿದೆ ಎಂದು ಪೌರಾಯುಕ್ತ ಮನೋಹರ್ ತಿಳಿಸಿದರು. 

        ನಾಡಹಬ್ಬ ದಸರಾ ಹಿನ್ನಲೆಯಲ್ಲಿ ಮಂಗಳವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಪೌರಾಯುಕ್ತರು ಈ ಬಾರಿ ನಾಡಹಬ್ಬವನ್ನು ಜನ ಜಾಗೃತಿ ಹಬ್ಬವಾಗಿ ಆಚರಿಸಲಿದ್ದು, ಇದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಲಾಗಿದೆ. ಅ.೧೭ರಂದು ಬೆಳಿಗ್ಗೆ ೧೦.೩೦ಕ್ಕೆ ಗ್ರಾಮ ದೇವತೆ ಶ್ರೀ ಹಳದಮ್ಮ ದೇವಸ್ಥಾನದ ಪ್ರಾಂಗಣದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
       ಅ.೧೮ರಂದು ಬೆಳಿಗ್ಗೆ ೧೦ ಗಂಟೆಗೆ ಕೊರೋನಾ ಜಾಗೃತಿ ನಡಿಗೆ ಆಯೋಜಿಸಲಾಗಿದ್ದು, ಅ.೧೯ರಂದು ಸಂಜೆ ೪ ಗಂಟೆಗೆ ಕೊರೋನಾ ಬಾಧಕ ಕುರಿತ ಅನುಭವ, ಅನಿಸಿಕೆ, ಅಭಿಪ್ರಾಯಗಳನ್ನೊಳಗೊಂಡ ಕವನಗಳನ್ನು ಸ್ಥಳದಲ್ಲಿಯೇ ಸ್ವರಚಿಸಿ ವಾಚನ ಮಾಡುವ ಸ್ಪರ್ಧೆ ನಡೆಯಲಿದೆ. ಪ್ರಥಮ ೩ ಮಂದಿಗೆ ಬಹುಮಾನಗಳನ್ನು ನೀಡಲಿದ್ದು, ಗರಿಷ್ಠ ೧೦೦ ಮಂದಿ ಮಾತ್ರ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿ ಹಾಗು ಹೆಸರು ನೋಂದಾಯಿಸಲು ಈಶ್ವರಪ್ಪ, ಮೊ: ೯೮೮೦೧೯೦೪೪೧ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದರು.
        ಅ.೨೦ರಂದು ಬೆಳಿಗ್ಗೆ ೧೧ ಗಂಟೆಗೆ ರಂಗೋಲಿ ಮೂಲಕ ಜನಾರೋಗ್ಯ ಸಂದೇಶ ಸಾರುವ ನಿಟ್ಟಿನಲ್ಲಿ 'ದಸರೆಯ ಸ್ವಚ್ಛ ಸುಂದರ  ರಂಗೋಲಿ' ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಗರಿಷ್ಠ ೫೦ ಮಂದಿ ಮಾತ್ರ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿ ಹಾಗು ಹಿಸರು ನೋಂದಾಯಿಸಲು ಶಾಂತಕುಮಾರಿ, ಮೊ: ೯೫೩೫೩೨೬೨೮೪ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದರು.
             ಅ.೨೧ರಂದು ಬೆಳಿಗ್ಗೆ ೧೧ ಗಂಟೆಗೆ ಜನಾರೋಗ್ಯ ಕಾಡುವಂತಹ ಆಹಾರ ತಯಾರಿಕೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 'ಅಡುಗೆ-ಆರೋಗ್ಯ' ಸ್ಪರ್ಧೆಯನ್ನು ನ್ಯೂಟೌನ್ ಬಂಟರ ಭವನದಲ್ಲಿ ಆಯೋಜಿಸಲಾಗಿದ್ದು, ಗರಿಷ್ಠ ೫೦ ಮಂದಿ ಮಾತ್ರ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿ ಹಾಗು ಹೆಸರು ನೋಂದಾಯಿಸಲು ಸುವಾಸಿನಿ, ಮೊ: ೯೪೮೧೦೬೩೩೯೨ ಸಂಖ್ಯೆಗೆ ಹಾಗು ಅ.೨೨ರಂದು ಮಧ್ಯಾಹ್ನ ೩ ಗಂಟೆಗೆ ಹಳೇನಗರದ ಬಲಿಜ ಸಮುದಾಯ ಭವನದಲ್ಲಿ ಕೊರೋನಾ ಜಾಗೃತಿ ಮೂಡಿಸುವ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ಗರಿಷ್ಠ ೫೦ ಮಂದಿ ಮಾತ್ರ ಭಾಗವಹಿಸಬಹುದಾಗಿದ್ದು, ಹೆಚ್ಚಿನ ಮಾಹಿತಿ ಹಾಗು ಹೆಸರು ನೋಂದಾಯಿಸಲು ನರಸಿಂಹಮೂರ್ತಿ, ಮೊ: ೯೪೪೯೧೨೪೮೮೮  ಕರೆ ಮಾಡಬಹುದಾಗಿದೆ ಎಂದರು.


        ಅ.೨೩ರಂದು ಮಧ್ಯಾಹ್ನ ೩ ಗಂಟೆಗೆ ನ್ಯೂಟೌನ್ ಬಂಟರ ಭವನದಲ್ಲಿ ಭಾಷಣ ಸ್ಪರ್ಧೆ ಆಯೋಜಿಸಲಾಗಿದ್ದು, ಗರಿಷ್ಠ ೫೦ ಮಂದಿ ಮಾತ್ರ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿ ಹಾಗು ಹೆಸರು ನೋಂದಾಯಿಸಲು ಮೊ: ೯೦೩೬೭೫೧೬೯೯ ಸಂಖ್ಯೆಗೆ ಕರೆ ಮಾಡಬಹುದಾಗಿದ್ದು, ಅ.೨೪ರಂದು ಮಧ್ಯಾಹ್ನ ೩ ಗಂಟಗೆ ನಗರಸಭೆ ಸಭಾಂಗಣದಲ್ಲಿ ಕಳೆದ ೬ ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿರುವ ಕೊರೋನಾ ವಾರಿರ್ಯಸ್‌ಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಉಳಿದಂತೆ ಅ.೨೫ ರಂದು ಆಯುಧ ಪೂಜೆ, ೨೬ರಂದು ಶಮಿಪೂಜೆ ಪ್ರತಿವರ್ಷದಂತೆ ಈ ಬಾರಿ ಸಹ ನಡೆಯಲಿವೆ. ಆದರೆ ಯಾವುದೇ ರೀತಿ ವೈಭವದ ಆಚರಣೆಗಳಿರುವುದಿಲ್ಲ ಎಂದು ಪೌರಾಯುಕ್ತರು ಸ್ಪಷ್ಟಪಡಿಸಿದರು.
        ಸಭೆಯಲ್ಲಿ ಕಂದಾಯಾಧಿಕಾರಿ ರಾಜ್‌ಕುಮಾರ್, ಇಂಜಿನಿಯರ್ ರಂಗರಾಜಪುರೆ, ಲೆಕ್ಕಾಧಿಕಾರಿ ಸೈಯದ್ ಮೆಹಬೂಬ್ ಆಲಿ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು, ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ವಸಂತ್‌ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.



Sunday, October 11, 2020

ವಿದ್ಯುತ್ ತಗುಲಿ ಯುವತಿ ಸಾವು

     ಸಿಂಧೂ
ಭದ್ರಾವತಿ, ಅ. ೧೧: ಆಕಸ್ಮಿಕವಾಗಿ ವಿದ್ಯುತ್ ತಗುಲಿದ ಪರಿಣಾಮ ಯುವತಿಯೋರ್ವಳು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
    ತಳ್ಳಿಕಟ್ಟೆ ಗ್ರಾಮದ ವಸಂತ್ ಎಂಬುವರ ಪುತ್ರಿ ಸಿಂಧೂ ಮೃತಪಟ್ಟಿದ್ದು, ಮನೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಗುಲಿದೆ ಎನ್ನಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕನ ಶವ ಪತ್ತೆ

ಶಿವಮೊಗ್ಗ, ಅ. ೧೧: ಚಾನಲ್ ದಂಡೆಯಲ್ಲಿ ಆಡುತ್ತಿದ್ದ ಬಾಲಕ ಶವವಾಗಿ ಪತ್ತೆಯಾಗಿರುವ ಘಟನೆ ಭಾನುವಾರ ಬೆಳಲಕಟ್ಟೆಯಲ್ಲಿ ನಡೆದಿದೆ.
       ಅ.೧೦ ರಂದು ಮಧ್ಯಾಹ್ನ ೨ ಗಂಟೆಯ ವೇಳೆಗೆ  ಹುಡಗರೊಂದಿಗೆ ಬೆಳಲಕಟ್ಟೆಯ ನಿವಾಸಿ ಕುಮಾರನಾಯ್ಕ್‌ರವರ ಮಗ ದಿಲೀಪ ನಾಯ್ಕ ಎಂಬ ೧೩ ವರ್ಷದ  ಬಾಲಕ  ದಿಡೀರನೇ ನಾಪತ್ತೆಯಾಗಿದ್ದನು.
        ಈ ಕುರಿತು ಅವರ ತಂದೆ ಕುಮಾರ ನಾಯ್ಕ್ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಗನ ನಾಪತ್ತೆ ಕುರಿತು ದೂರು ದಾಖಲಿಸಿದ್ದರು. ಅದೇ ಚಾನಲ್ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಬಾಲಕನ ಮುಖ, ಕಣ್ಣು ಹಾಗು ಕಿವಿಗಳನ್ನು ಜಲಚರಗಳು ತಿಂದಿರುವ ಕಲೆ ಕಂಡುಬಂದಿದೆ.

ಮಹಿಳೆಯ ಕೊರಳಿನಲ್ಲಿದ್ದ ಚಿನ್ನದ ಸರ ಅಪಹರಣ

ಭದ್ರಾವತಿ, ಅ. ೧೧: ದೇವಸ್ಥಾನಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರ ಕೊರಳಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಗರಸಭೆ ವ್ಯಾಪ್ತಿಯ ಭಂಡಾರಹಳ್ಳಿಯಲ್ಲಿ ನಡೆದಿದೆ.
      ಭಂಡಾರಹಳ್ಳಿ ನಿವಾಸಿ ವಸಂತಿ ಎಂಬುವರು ಪತಿ ಕೃಷ್ಣಪ್ಪನಾಯಕ ಮತ್ತು ತನ್ನ ೩ ಚಿಕ್ಕ ಮಕ್ಕಳೊಂದಿಗೆ ಶನಿವಾರ ಮಧ್ಯಾಹ್ನ ಸುಮಾರು ೧.೪೫ರ ಸಮಯದಲ್ಲಿ ಮನೆಯ ಸಮೀಪದಲ್ಲಿರುವ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ದ್ವಿಚಕ್ರವಾಹನದಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ಕೊರಳಿನಲ್ಲಿದ್ದ ಸುಮಾರು ೩೦ ಗ್ರಾಂ. ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದು, ಅಪಹರಿಸಲಾಗಿರುವ ಚಿನ್ನದ ಸರದ ಅಂದಾಜು ಮೌಲ್ಯ ೯೦ ಸಾವಿರ ರು. ಗಳಾಗಿದ್ದು, ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ಕರ್ತವ್ಯನಿರತ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕ ನಿಧನ

ಭದ್ರಾವತಿ, ಅ. ೧೧: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಕರ್ತವ್ಯದಲ್ಲಿ ತೊಡಗಿದ್ದ ಗುತ್ತಿಗೆ ಕಾರ್ಮಿಕನೋರ್ವ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
    ಜಿಂಕ್‌ಲೈನ್ ನಿವಾಸಿ ಮಂಜುನಾಥ್(೪೦) ನಿಧನ ಹೊಂದಿದ್ದು, ಮಧ್ಯಾಹ್ನ ೩.೪೫ರ ಸುಮಾರಿನಲ್ಲಿ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ.
      ಬಡ ಕುಟುಂಬಕ್ಕೆ ಸಾಂತ್ವಾನ ಹೇಳಿರುವ ಸಮಾಜ ಸೇವಕ ಪೊಲೀಸ್ ಉಮೇಶ್ ಮೃತರ ನಿವಾಸಕ್ಕೆ ತೆರಳಿ ಸ್ನೇಹಜೀವಿ ಗೆಳೆಯರ ಬಳಗದ ವತಿಯಿಂದ ಮೃತರ ೨೫ ಸಾವಿರ ರು. ನೆರವು ನೀಡಿದ್ದಾರೆ. ಅಲ್ಲದೆ ಸೂಕ್ತ ಪರಿಹಾರ ನೀಡುವಂತೆ ಗುತ್ತಿಗೆದಾರರಿಗೆ ಆಗ್ರಹಿಸಿದ್ದಾರೆ.

Saturday, October 10, 2020

ಮಹಿಳೆಯರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಿ : ಎಂ.ಎಚ್ ಲಕ್ಷ್ಮಣ

ಭದ್ರಾವತಿ ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿಯಲ್ಲಿ ಬೆಂಗಳೂರಿನ ದಿ ಹಂಗರ್ ಪ್ರಾಜೆಕ್ಟ್ ಸಹಕಾರದೊಂದಿಗೆ ವಿಕಸನ ಸಂಸ್ಥೆಯ ವತಿಯಿಂದ  'ಸಂಭಾವ್ಯ ನಾಯಕತ್ವ' ತರಬೇತಿ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಅ. ೧೦: ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಬೇಕೆಂದು ವಿಕಸನ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಎಂ.ಎಚ್ ಲಕ್ಷ್ಮಣ ಕರೆ ನೀಡಿದರು.
     ಅವರು ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿಯಲ್ಲಿ ಬೆಂಗಳೂರಿನ ದಿ ಹಂಗರ್ ಪ್ರಾಜೆಕ್ಟ್ ಸಹಕಾರದೊಂದಿಗೆ ವಿಕಸನ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಸಂಭಾವ್ಯ ನಾಯಕತ್ವ' ತರಬೇತಿಯಲ್ಲಿ ಪಾಲ್ಗೊಂಡು ಮಾತನಾಡಿದರು.
     ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಮಹಿಳೆಯರು ಹೆಚ್ಚಾಗಿ ಭಾಗವಹಿಸಬೇಕೆಂಬ ಉದ್ದೇಶದಿಂದ ಸರ್ಕಾರ ಶೇ.೫೦ರಷ್ಟು ಮೀಸಲಾತಿ ನೀಡಿದೆ. ಇದನ್ನು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಬೇಕು. ಚುನಾವಣೆಯಲ್ಲಿ ಸ್ಪರ್ಧಿಸುವ ಮಹಿಳೆಯರು ಗ್ರಾಮ ಪಂಚಾಯಿತಿ ಆಡಳಿತದ ಕಾರ್ಯ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊಂದಿರಬೇಕು. ಇದರಿಂದ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮಹಿಳೆಯರು ತಮ್ಮ ಅಧಿಕಾರ ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ ಎಂದರು.
     ಸಭೆಯಲ್ಲಿ ಸಿಂಗನಮನೆ ಗ್ರಾಮದ ಮಹಿಳೆಯರು, ಪಂಚಾಯಿತಿ ಮಹಿಳಾ ಸದಸ್ಯರು ಭಾಗವಹಿಸಿದ್ದು, ಈ ಪೈಕಿ ೪ ಮಹಿಳಾ ಸದಸ್ಯರು ಮುಂಬರುವ ಚುನಾವಣೆಯಲ್ಲಿ ಪುನಃ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದರು. ವಿಕಸನ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.

ವರ್ಗಾವಣೆಗೊಂಡ ಅಗ್ನಿಶಾಮಕ ಸಿಬ್ಬಂದಿ ಬಾಬು ಎಸ್. ಗೌಡಗೆ ಬೀಳ್ಕೊಡುಗೆ

ಭದ್ರಾವತಿ ಅಗ್ನಿಶಾಮಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಾಬು ಎಸ್. ಗೌಡರವರು ಮುಂಬಡ್ತಿ ಹೊಂದಿ ಕಾರವಾರ ಹಳಿಯಾಳ ತಾಲೂಕಿಗೆ ವರ್ಗಾವಣೆ ಗೊಂಡ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು
ಭದ್ರಾವತಿ, ಅ. ೧೦: ನಗರದ ಅಗ್ನಿಶಾಮಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಾಬು ಎಸ್. ಗೌಡರವರು ಮುಂಬಡ್ತಿ ಹೊಂದಿ ಕಾರವಾರ ಹಳಿಯಾಳ ತಾಲೂಕಿಗೆ ವರ್ಗಾವಣೆ ಗೊಂಡ ಹಿನ್ನಲೆಯಲ್ಲಿ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
      ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅಗ್ನಿಶಾಮಕ ಠಾಣಾಧಿಕಾರಿ ಎನ್. ವಸಂತಕುಮಾರ್,  ಬಾಬು ಎಸ್. ಗೌಡರವರು ಇಲಾಖೆಯಲ್ಲಿ ಇದುವರೆಗೂ ಉತ್ತಮವಾಗಿ ಸೇವೆ ಸಲ್ಲಿಸುವ ಜೊತೆಗೆ ಇಲಾಖೆಯ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಮುಂಬಡ್ತಿ ಹೊಂದಿರುವ ಇವರು ಇನ್ನೂ ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದರು.
ಸನ್ಮಾನ ಸ್ವೀಕರಿಸಿದ ಬಾಬು ಎಸ್. ಗೌಡ ಮಾತನಾಡಿ, 'ಭೇಟಿ ಆಕಸ್ಮಿಕ, ಅಗಲಿಕೆ ಅನಿವಾರ್ಯ'.  ೧೦ ವರ್ಷದ ಸೇವಾ ಅವಧಿಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
      ಸಿಬ್ಬಂದಿ ವಿನೂತನ್ ಮಾತನಾಡಿ, ಬಾಬುರವರು ಇಲಾಖೆಯಲ್ಲಿ ತಮ್ಮೊಂದಿಗೆ ೮ ವರ್ಷಗಳಿಂದ ಒಡನಾಡಿಯಾಗಿ ಉತ್ತಮ ಬಾಂಧವ್ಯ ಹೊಂದಿದ್ದರು ಎಂದರು.
        ಸಿಬ್ಬಂದಿ ಡಿ.ಎನ್. ಸುರೇಶ್ ಮಾತನಾಡಿ, ಬಾಬುರವರು ಎಲ್ಲಾ ಸಿಬ್ಬಂದಿಗಳನ್ನು ಸಮಾನವಾಗಿ ಕಾಣುವ ಮೂಲಕ ಸಿಬ್ಬಂದಿಗಳ ವಸತಿಗೃಹಗಳಿಗೆ ಸಂಬಂಧಪಟ್ಟ ಎಲ್ಲಾ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದರು.
      ಇದೇ ಸಂದರ್ಭದಲ್ಲಿ ಇಲಾಖೆಯಲ್ಲಿ ಸುಮಾರು ೩೦ ವರ್ಷಗಳಿಂದ ಸ್ವೀಪರ್ ಕೆಲಸ ಮಾಡಿ ನಿವೃತ್ತ ಹೊಂದಿರುವ ಮಹಿಮೂಮ(ಕಾಕಮ್ಮ) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.  
   ವೇದಿಕೆಯಲ್ಲಿ ಉಪಸ್ಥಿತರಿದ್ದು ಪ್ರಮುಖ ಅಗ್ನಿಶಾಮಕ  ಕೆ.ಎಸ್. ರಮೇಶ್ ರವರು ಎಲ್ಲರನ್ನೂ ಸ್ವಾಗತಿಸಿದರು.  ಅ.ಶಾ. ವಿನೂತನ್.ಎಂ ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿದರು.
      ಸಿಬ್ಬಂದಿಗಳಾದ ಹೆಚ್.ವಿ ಸುರೇಶಾಚಾರ್,  ಎಸ್.ಎಚ್ ಕುಮಾರ್, ಜಿ.ಟಿ ಶ್ರೀನಿವಾಸ್, ಆರ್. ಕರಿಯಣ್ಣ, ಎಂ.ಸಿ ಮಹೇಂದ್ರ, ಎಚ್.ಎಂ ಹರೀಶ್, ಕೆ.ಎಚ್ ರಾಜಾನಾಯ್ಕ್, ಗೃಹರಕ್ಷಕ ದಳ ಸಿಬ್ಬಂದಿಗಳಾದ ಪರಮೇಶ್ವರ ನಾಯ್ಕ, ಕೆ.ಆರ್ ಶಂಕರ್, ಜಿ ಸುರೇಶ್, ಡಿ.ಜಿ ಸುನಿಲ್, ಮುಬಾರಕ್ ಮತ್ತು ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.