Friday, November 20, 2020

ಅಕ್ರಮವಾಗಿ ಆಸ್ತಿ ಕಬಳಿಸಲು ಯತ್ನ : ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ

ವಂಚನೆಗೊಳಗಾದ ರುದ್ರೇಶ್ ಕುಟುಂಬದಿಂದ ತಾಲೂಕು ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ

ಭದ್ರಾವತಿ ತಾಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸರ್ವೆ ನಂ.೯೧/೩ರ ೦-೧೮ ಗುಂಟೆ ಆಸ್ತಿಯನ್ನು ನಕಲಿ ಖಾತೆ ಸೃಷ್ಠಿ ಮಾಡಿಕೊಂಡು ಕಬಳಿಸಲು ಯತ್ನಿಸುತ್ತಿರುವ ಎಂ.ಎಸ್ ಶಿವಕುಮಾರ್ ಎಂಬುವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲೂಕು ಪಂಚಾಯಿತಿ ಮುಂಭಾಗ ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಭದ್ರಾವತಿ, ನ. ೨೦: ತಾಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸರ್ವೆ ನಂ.೯೧/೩ರ ೦-೧೮ ಗುಂಟೆ ಆಸ್ತಿಯನ್ನು ನಕಲಿ ಖಾತೆ ಸೃಷ್ಠಿ ಮಾಡಿಕೊಂಡು ಕಬಳಿಸಲು ಯತ್ನಿಸುತ್ತಿರುವ ಎಂ.ಎಸ್ ಶಿವಕುಮಾರ್ ಎಂಬುವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲೂಕು ಪಂಚಾಯಿತಿ ಮುಂಭಾಗ ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ದಾವಣಗೆರೆ ಜಿಲ್ಲೆ ನಿಟ್ಟುವಳ್ಳಿ ಗ್ರಾಮದ ನಿವಾಸಿ ರುದ್ರೇಶ್ ಮೂಲತಃ ಡಿ.ಬಿ ಹಳ್ಳಿ ಗ್ರಾಮದವರಾಗಿದ್ದು, ಇವರ ಕುಟುಂಬಕ್ಕೆ ಸೇರಿದ ಹಾಗು ಅವರ ಅಜ್ಜಿಯವರಿಗೆ ದತ್ತಕ ಪತ್ರದ ಮೂಲಕ ಬಂದಂತಹ ವ್ಯವಸಾಯದ ಸ್ವತ್ತುಗಳು ಮತ್ತು ನಿವೇಶನ ಹಾಗು ಮನೆಯ ಸ್ವತ್ತುಗಳನ್ನು  ಎಂ.ಎಸ್ ಶಿವಕುಮಾರ್ ಮತ್ತು ಈತನ ಪತ್ನಿ ಎಸ್. ಸುಮಾರವರು ಕಬಳಿಸಲು ಅಕ್ರಮ ದಾರಿಯಲ್ಲಿ ಸಾಗುತ್ತಿದ್ದು, ಈಗಾಗಲೇ ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆದು ಆಸ್ತಿ ಹಕ್ಕನ್ನು ಖಾತ್ರಿಪಡಿಸಲಾಗಿದೆ. ಈ ನಡುವೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಅರ್ಜಿ ಚಾಲ್ತಿಯಲ್ಲಿದ್ದು, ಈ ಸಂದರ್ಭದಲ್ಲಿ ಅಕ್ರಮವಾಗಿ ನಕಲಿ ಖಾತೆ ಸೃಷ್ಟಿ ಮಾಡಿಕೊಂಡು ವಂಚಿಸಲಾಗುತ್ತಿದೆ ಎಂದು ಧರಣಿ ಸತ್ಯಾಗ್ರಹ ಕೈಗೊಂಡಿರುವ ರುದ್ರೇಶ್ ಕುಟುಂಬದವರು ಆರೋಪಿಸಿದರು.
   ಶಿವಕುಮಾರ್ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಅಸೆಸ್‌ಮೆಂಟ್ ರಿಜಿಸ್ಟರ್‌ನಲ್ಲಿ ಸ್ವ ಹಸ್ತದಿಂದ ಬರೆದುಕೊಂಡು ನಕಲಿ ಖಾತೆ ಸೃಷ್ಟಿಸಿಕೊಂಡಿದ್ದು, ಇದು ತನಿಖೆಯಿಂದ ದೃಢಪಟ್ಟಿರುವುದರಿಂದ ಈ ಸಂಬಂಧ ಖಾತೆಯು ದೃಢೀಕೃತವಾದುದ್ದಲ್ಲ ಹಾಗು ಎಂ.ಆರ್.ನಂ. ದಾಖಲು ಆಗಿರುವುದಿಲ್ಲ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಿಂಬರಹ ನೀಡಿರುತ್ತಾರೆ. ಈ ಹಿನ್ನಲೆಯಲ್ಲಿ ಸೂಕ್ತ ದಾಖಲೆಗಳೊಂದಿಗೆ ಸುಮಾರು ೨ ತಿಂಗಳ ಹಿಂದೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
    ತಕ್ಷಣ ಸರ್ಕಾರಿ ಕಛೇರಿ ಹಾಗು ಅಧಿಕಾರಿಗಳಿಗೆ ವಂಚಿಸಿರುವ ಶಿವಕುಮಾರ್ ಮತ್ತು ಆತನ ಪತ್ನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ರಮ ಖಾತೆ ರದ್ದುಪಡಿಸಿ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಲಾಯಿತು.
     ರೈತ ಮುಖಂಡರಾದ ಯಶವಂತರಾವ್ ಘೋರ್ಪಡೆ, ಡಿ.ವಿ ವೀರೇಶ್, ಹಿರಯಣ್ಣಯ್ಯ, ನಾಗರಾಜ್, ಬಸವರಾಜ, ರುದ್ರೇಶ್‌ರವರ ತಾಯಿ ಗಂಗಮ್ಮ, ಮುಖಂಡರಾದ ಬಿ.ಎನ್ ರಾಜು, ಬಿ.ವಿ ಗಿರೀಶ್, ಕೆ. ಮಂಜುನಾಥ್ ಹಾಗು ಡಿ.ಬಿ ಹಳ್ಳಿ ಗ್ರಾಮದ ಪ್ರಮುಖರು ಸೇರಿದಂತೆ ಇತರರು ಧರಣಿ ಸತ್ಯಾಗ್ರಹದಲ್ಲಿ ನೈತಿಕ ಬೆಂಬಲ ವ್ಯಕ್ತಪಡಿಸಿ ಪಾಲ್ಗೊಂಡಿದ್ದರು.

Thursday, November 19, 2020

ನ.೨೦ರಂದು ತಾಲೂಕು ಪಂಚಾಯಿತಿ ಮುಂಭಾಗ ಧರಣಿ ಸತ್ಯಾಗ್ರಹ

ಭದ್ರಾವತಿ, ನ. ೧೯: ತಾಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸರ್ವೆ ನಂ.೯೧/೩ರ ೦-೧೮ ಗುಂಟೆ ಆಸ್ತಿಯನ್ನು ನಕಲಿ ಖಾತೆ ಸೃಷ್ಠಿ ಮಾಡಿಕೊಂಡು ಕಬಳಿಸಲು ಯತ್ನಿಸುತ್ತಿರುವ ಎಂ.ಎಸ್ ಶಿವಕುಮಾರ್ ಎಂಬುವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲೂಕು ಪಂಚಾಯಿತಿ ಮುಂಭಾಗ ನ.೨೦ರ ಬೆಳಿಗ್ಗೆ ೧೧.೩೦ಕ್ಕೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
     ದಾವಣಗೆರೆ ಜಿಲ್ಲೆ ನಿಟ್ಟುವಳ್ಳಿ ಗ್ರಾಮದ ನಿವಾಸಿ ರುದ್ರೇಶ್ ಮೂಲತಃ ಡಿ.ಬಿ ಹಳ್ಳಿ ಗ್ರಾಮದವರಾಗಿದ್ದು, ಇವರ ಕುಟುಂಬಕ್ಕೆ ಸೇರಿದ ಆಸ್ತಿಯನ್ನು ಕಬಳಿಸಲು ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸೂಕ್ತ ದಾಖಲೆಗಳೊಂದಿಗೆ ಸುಮಾರು ೨ ತಿಂಗಳ ಹಿಂದೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿನ್ನಲೆಯಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಈ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಬಾಹ್ಯ ಬೆಂಬಲ ನೀಡಲಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್ ತಿಳಿಸಿದ್ದಾರೆ.


ಆದಿದ್ರಾವಿಡ ಹಿತರಕ್ಷಣಾ ಸಮಿತಿ ಅಧ್ಯಕ್ಷರಾಗಿ ಎಸ್. ನಿತ್ಯಾನಂದನ್

ಎಸ್. ನಿತ್ಯಾನಂದನ್
ಭದ್ರಾವತಿ: ಜಿಲ್ಲಾ ಪರಿಶಿಷ್ಟ ಜಾತಿ ಆದಿದ್ರಾವಿಡ(ತಮಿಳು)ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷರಾಗಿ ಎಸ್. ನಿತ್ಯಾನಂದನ್ ಆಯ್ಕೆಯಾಗಿದ್ದಾರೆ.
     ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಜಿಲ್ಲಾ ಸಮಿತಿ ಗೌರವಾಧ್ಯಕ್ಷರಾಗಿ ಇ. ಚಂದ್ರಶೇಖರನ್, ತಾಲೂಕು ಅಧ್ಯಕ್ಷರಾಗಿ ಜಯಪಾಲ್‌ರವರು ಆಯ್ಕೆಯಾದರು. ನೂತನ ಪದಾಧಿಕಾರಿಗಳನ್ನು ಸಮಿತಿ ವತಿಯಿಂದ ಅಭಿನಂದಿಸಲಾಯಿತು ಎಂದು ಪ್ರಧಾನ ಕಾರ್ಯದರ್ಶಿ ಕೆ. ಪೆರುಮಾಳ್ ತಿಳಿಸಿದ್ದಾರೆ.




ಸರ್ಕಾರಿ ಉರ್ದು ಶಾಲೆ ಮೂಲ ಸೌಕರ್ಯಕ್ಕೆ ೧೦ ಲಕ್ಷ ರು. ಅನುದಾನ

ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನ ಸಮೀಪದಲ್ಲಿರುವ ಸರ್ಕಾರಿ ಉರ್ದು ಶಾಲೆಗೆ ಶೌಚಾಲಯ ಸೇರಿದಮತೆ ಮೂಲ ಸೌಕರ್ಯ ಕಲ್ಪಿಸಿಕೊಡುವಂತೆ ಎಎಪಿ ಪಕ್ಷದ ಮುಖಂಡರು ಒತ್ತಾಯಿಸಿದ ಹಿನ್ನಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ನಗರಸಭೆ ಪೌರಾಯುಕ್ತ ಮನೋಹರ್.
ಭದ್ರಾವತಿ, ನ. ೧೯: ಹಳೇನಗರದ ಕನಕಮಂಟಪ ಮೈದಾನ ಸಮೀಪದಲ್ಲಿರುವ ಸರ್ಕಾರಿ ಉರ್ದು ಶಾಲೆಗೆ ಶೌಚಾಲಯ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿಕೊಡುವಂತೆ ಆಮ್ ಆದ್ಮಿ ಪಾರ್ಟಿ ವತಿಯಿಂದ ನಗರಸಭೆ ಪೌರಾಯುಕ್ತರಿಗೆ ಒತ್ತಾಯಿಸಲಾಯಿತು.
    ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ಮನೋಹರ್ ಪರಿಶೀಲನೆ ನಡೆಸಿ ಶಾಸಕರಿಗೆ ಶಾಲೆಯ ವಾಸ್ತವಾಂಶ ಮನವರಿಕೆ ಮಾಡಿಕೊಟ್ಟಿದ್ದು, ತಕ್ಷಣ ಶಾಸಕರು ೧೦ ಲಕ್ಷ ರು. ಶೌಚಾಲಯ ನಿರ್ಮಾಣ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಸದ್ಬಳಕೆ ಮಾಡಿಕೊಳ್ಳುವಂತೆ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರು.
    ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಗಣೇಶ್, ಪಕ್ಷದ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ತಾಲೂಕು ಉಪಾಧ್ಯಕ್ಷ ಇಬ್ರಾಹಿಂ ಖಾನ್, ಮುಖಂಡ ಅಬ್ದುಲ್ ಖದೀರ್, ಶಾಲೆಯ ಮುಖ್ಯ ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.





ಬಾಲ್ಯ ವಿವಾಹ : ಬಾಲಕಿಯನ್ನು ರಕ್ಷಿಸಿದ ಅಧಿಕಾರಿಗಳು


ಭದ್ರಾವತಿ, ನ. ೧೯:  ಬಾಲ್ಯ ವಿವಾಹ ನಡೆಸುತ್ತಿದ್ದ ವೇಳೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಬಾಲಕಿಯನ್ನು ರಕ್ಷಿಸಿರುವ ಘಟನೆ ಗುರುವಾರ ನಡೆದಿದೆ.
     ಉಂಬ್ಳೆಬೈಲ್ ರಸ್ತೆಯಲ್ಲಿರುವ ಲಯನ್ಸ್ ಕ್ಲಬ್‌ನಲ್ಲಿ ನಗರದ ಅನ್ವರ್ ಕಾಲೋನಿ ಬಾಲಕಿಯೊಂದಿಗೆ ಆಸಿಫ್ ಅಲಿ ಎಂಬ ೨೧ ವರ್ಷದ ಯುವಕನ ವಿವಾಹ ನಡೆಯುತ್ತಿತ್ತು. ಆದರೆ, ಬಾಲಕಿಗೆ ಇನ್ನೂ ೧೮ ವರ್ಷ ಪೂರ್ಣಗೊಳ್ಳದೆ ಅಪ್ರಾಪ್ತಳಾಗಿದ್ದಾಳೆ ಎಂಬ ಖಚಿತ ಮಾಹಿತಿ ಆಧರಿಸಿದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ರಕ್ಷಿಸುವ ಜೊತೆಗೆ ವಿವಾಹ ನಡೆಸಲು ಮುಂದಾಗಿದ್ದ ವಧು ಹಾಗೂ ವರನ ಪೋಷಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಬಾಲಕಿಯನ್ನು ವಶಕ್ಕೆ ಪಡೆದು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಮುಂದೆ ಹಾಜರುಪಡಿಸಿ ಬಾಲಮಂದಿರಕ್ಕೆ ಕಳುಹಿಸಲಾಗಿದೆ.
     ಕಾರ್ಯಾಚರಣೆಯಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರದ ಶೃತಿ, ಶಿಶು ಅಭಿವೃದ್ಧಿ ಯೋಜನಾ ವಲಯ ಮೇಲ್ವಿಚಾರಕಿ ಯಶೋಧಾ, ರಮೇಶ್ ಹಾಗು ನ್ಯೂಟೌನ್ ಪೊಲೀಸರು ಪಾಲ್ಗೊಂಡಿದ್ದರು..

ನ.೨೨ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ, ನ. ೧೯: ಮೆಸ್ಕಾಂ ನಗರ ಉಪವಿಭಾಗ ಘಟಕ-೫ರ ಮಾಚೇನಹಳ್ಳಿ ಶಾಖಾ ವ್ಯಾಪ್ತಿಯಲ್ಲಿ ಐಪಿಡಿಎಸ್ ಹಾಗು ವಿದ್ಯುತ್ ಮಾರ್ಗಗಳ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನ.೨೨ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    ಮಾಚೇನಹಳ್ಳಿ, ಕೈಗಾರಿಕಾ ಪ್ರದೇಶ, ಡೈರಿ ವೃತ್ತ, ಜೇಡಿಕಟ್ಟೆ, ವಿಶ್ವೇಶ್ವರಯ್ಯನಗರ, ಶಿವರಾಮನಗರ, ಬಿ.ಎಚ್ ರಸ್ತೆ, ಕ.ರಾ.ಮೀ.ಪೋ. ವಸತಿ ಗೃಹಗಳು, ಜಯಂತಿ ಗ್ರಾಮ, ರಾಮಮೂರ್ತಿ ಮಿನರಲ್ಸ್, ಬಾಳೇನಹಳ್ಳಿ, ಗೌಡ್ರಕೊಪ್ಪ, ವೀರಭದ್ರ ಕಾಲೋನಿ, ಹೊನ್ನವಿಲೆ, ಶೆಟ್ಟಿಹಳ್ಳಿ, ಮಾಚೇನಹಳ್ಳಿ, ಮಲ್ನಾಡ್ ಆಸ್ಪತ್ರೆ, ಅರೇಕೊಪ್ಪ, ಬಿದರೆ, ನಿದಿಗೆ, ದುಮ್ಮಳ್ಳಿ, ಓತಿಘಟ್ಟ, ಸೋಗಾನೆ, ಆಚಾರಿ ಕ್ಯಾಂಪ್, ರೆಡ್ಡಿ ಕ್ಯಾಂಪ್, ಹೆರೆಕಟ್ಟೆ ಹಾಗು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಕೋರಲಾಗಿದೆ.


Saturday, November 14, 2020

ನ.೧೬ರಿಂದ ಪುನಃ ಸೈನಿಕ ತರಬೇತಿ ಆರಂಭ

ಭದ್ರಾವತಿ, ನ. ೧೪: ಭಾರತೀಯ ಸೈನ್ಯಕ್ಕೆ ಸೇರಲು ಇಚ್ಛಿಸುವ ಯುವಕರಿಗೆ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಉಚಿತ ತರಬೇತಿ ನೀಡಲಾಗುತ್ತಿದ್ದು, ಲಾಕ್‌ಡೌನ್ ಹಿನ್ನಲೆಯಲ್ಲಿ ಸುಮಾರು ೬ ತಿಂಗಳ ಹಿಂದೆ ಸ್ಥಗಿತಗೊಂಡಿದ್ದ ತರಬೇತಿ ಇದೀಗ ನ.೧೬ರಿಂದ ಪುನಃ ಆರಂಭಗೊಳ್ಳಲಿದೆ.
    ಭಾರತೀಯ ಸೈನ್ಯಕ್ಕೆ ಸೇರಲು ಸೈನಿಕ ಇಲಾಖೆ ಆಹ್ವಾನಿಸಿದ ಸಂದರ್ಭದಲ್ಲಿ ಸುಮಾರು ೩ ರಿಂದ ೬ ತಿಂಗಳವರೆಗೆ ಪ್ರತಿ ಬಾರಿ ತರಬೇತಿ ನೀಡಲಾಗುತ್ತಿದೆ. ಈ ಬಾರಿ ಜನವರಿ ಆರಂಭದಲ್ಲಿ ಪ್ರಾರಂಭಿಸಲಾಗಿದ್ದ ತರಬೇತಿ ಕೋವಿಡ್-೧೯ರ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಿಸಿದ ಪರಿಣಾಮ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
    ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಪುನಃ ತರಬೇತಿ ಆರಂಭಗೊಳ್ಳಲಿದ್ದು, ತಾಲೂಕಿನ ಯುವಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷ ಅಶೋಕ್ ಕೋರಿದ್ದಾರೆ. ತರಬೇತಿ ಸಂದರ್ಭದಲ್ಲಿ ಉಪಹಾರದ ವ್ಯವಸ್ಥೆಯನ್ನು ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್ ಕೈಗೊಂಡಿದ್ದಾರೆ.