ಒಂದು ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ, ಮಹಿಳೆಯರು ಸೇರಿದಂತೆ ಒಟ್ಟು ೪೪೫ ಸಿಬ್ಬಂದಿಗಳು ಕರ್ತವ್ಯ
ಸಂಸದ ಬಿ.ವೈ ರಾಘವೇಂದ್ರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಭದ್ರಾವತಿ, ಜ. ೧೨: ಕೇಂದ್ರ ಮೀಸಲು ಪೊಲೀಸ್ ಪಡೆಯ ವಿಶೇಷ ವಿಭಾಗವಾಗಿರುವ ಕ್ಷಿಪ್ರ ಕಾರ್ಯ ಪಡೆ (ರ‍್ಯಾಪಿಡ್ ಆಕ್ಷನ್ ಪೋರ್ಸ್-ಆರ್‌ಎಎಫ್) ಘಟಕ ನಗರದ ಮಿಲ್ಟ್ರಿಕ್ಯಾಂಪ್ ಹೊಸ ಬುಳ್ಳಾಪುರದಲ್ಲಿ ಕಾರ್ಯಾರಂಭಗೊಳ್ಳುತ್ತಿದ್ದು, ಜ.೧೬ರಂದು ಘಟಕದ ಶಿಲಾನ್ಯಾಸ ನೆರವೇರಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ನಗರಕ್ಕೆ ಆಗಮಿಸುತ್ತಿದ್ದಾರೆಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದರು.
ಅವರು ಮಂಗಳವಾರ ಮಿಲ್ಟ್ರಿಕ್ಯಾಂಪ್ ಸಶಸ್ತ್ರ ಮೀಸಲುಪಡೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗೃಹ ಸಚಿವರು ಅಂದು ಮಧ್ಯಾಹ್ನ ೧೨.೪೫ಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದು, ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
ಘಟಕ ಕುರಿತು ಮಾಹಿತಿ ನೀಡಿದ ಸಂಸದರು, ರಾಜ್ಯ ಗೃಹ ಇಲಾಖೆ ಅಕ್ಟೋಬರ್, ೨೦೧೯ರಲ್ಲಿ ಈ ಘಟಕ ಸ್ಥಾಪಿಸಲು ೫೦.೨೯ ಎಕರೆ ಪ್ರದೇಶವನ್ನು ಮಂಜೂರು ಮಾಡಿದೆ. ಜಿಲ್ಲಾ ರಕ್ಷಣಾಧಿಕಾರಿಗಳು ಸಿಆರ್‌ಪಿಎಫ್ ೯೭ ಕಮಾಂಡೆಂಟ್, ಆರ್‌ಎಎಫ್ ಬೆಟಾಲಿಯನ್, ಚೆನ್ನೈ ಇವರಿಗೆ ಹಸ್ತಾಂತರಿಸಿದ್ದಾರೆ. ಪ್ರಸ್ತುತ ಘಟಕ ಕರ್ನಾಟಕ ರಾಜ್ಯದ ೩೦ ಜಿಲ್ಲೆಗಳು, ಕೇರಳ ರಾಜ್ಯದ ೪ ಜಿಲ್ಲೆಗಳು, ಗೋವಾ ರಾಜ್ಯದ ೨ ಜಿಲ್ಲೆಗಳು ಮತ್ತು ಲಕ್ಷದ್ವೀಪ ಹಾಗು ಪುದುಚೇರಿ ತಲಾ ೧ ಜಿಲ್ಲೆಯನ್ನು ಒಳಗೊಂಡಿದೆ. ಶಿಲಾನ್ಯಾಸಗೊಂಡ ಮರುದಿನದಿಂದಲೇ ತಾತ್ಕಾಲಿಕವಾಗಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಲಿದ್ದು, ೨-ಡೆಪ್ಯೂಟಿ ಕಮಾಂಡೆಂಟ್, ೬-ಅಸಿಸ್ಟೆಂಟ್ ಕಮಾಂಡೆಂಟ್, ೧೬-ಇನ್ಸ್‌ಪೆಕ್ಟರ್, ೩೨-ಸಬ್‌ಇನ್ಸ್‌ಪೆಕ್ಟರ್, ೩೪-ಅಸಿಸ್ಟೆಂಟ್ ಸಬ್‌ಇನ್ಸ್‌ಪೆಕ್ಟರ್, ೫೬-ಹೆಡ್‌ಕಾನ್‌ಸ್ಟೇಬಲ್, ೨೬೪-ಕಾನ್‌ಸ್ಟೇಬಲ್, ೩೪-ಬೇಸ್‌ಮೆನ್ ಸೇರಿದಂತೆ ೩೯೯ ಮಂದಿ ಹಾಗು ಉಳಿದ ಮಹಿಳಾ ಸಿಬ್ಬಂದಿಗಳು ಸೇರಿದಂತೆ ಒಟ್ಟು ೪೪೫ ಸಿಬ್ಬಂದಿಗಳು ಘಟಕದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಸುಮಾರು ೧ ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಚರಣೆಗೆ ಬರುವ ವಿಶ್ವಾಸವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ, ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಪವಿತ್ರ ರಾಮಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಟಿ ಮೇಘರಾಜ್, ಮುಖಂಡರಾದ ಎಸ್. ದತ್ತಾತ್ರಿ, ಶಿವರಾಜ್, ಎಂ. ಪ್ರಭಾಕರ್, ಮಂಗೋಟೆ ರುದ್ರೇಶ್, ಆರ್.ಎಸ್ ಶೋಭಾ, ರಾಮಲಿಂಗಯ್ಯ, ಕದಿರೇಶ್, ಕೂಡ್ಲಿಗೆರೆ ಹಾಲೇಶ್, ಜಿ. ಆನಂದಕುಮಾರ್, ಸಂತೋಷ್ ಬಳ್ಳಿಗೆರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.