Wednesday, January 20, 2021

ಎಬಿವಿಪಿ ನೇತೃತ್ವದಲ್ಲಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಬುಧವಾರ ನಗರದ ಬೊಮ್ಮನಕಟ್ಟೆ ಸರ್.ಎಂ.ವಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.
ಭದ್ರಾವತಿ, ಜ. ೨೦: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಬುಧವಾರ ನಗರದ ಬೊಮ್ಮನಕಟ್ಟೆ ಸರ್.ಎಂ.ವಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.
    ಕೊರೋನಾ ಮಹಾಮಾರಿಯಿಂದಾಗಿ ಶೈಕ್ಷಣಿಕ ಚಟುವಟಿಕೆಗಳು ಕಳೆದ ಸುಮಾರು ೮-೯ ತಿಂಗಳು ಸ್ಥಗಿತಗೊಂಡು ಇದೀಗ ಆರಂಭಗೊಂಡಿವೆ.  ಈ ನಡುವೆ ವಿದ್ಯಾರ್ಥಿಗಳು ಹಲವು ಸಮಸ್ಯೆಗಳು ಎದುರಿಸುವಂತಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಸರ್ಕಾರ ನೀಡುತ್ತಿದ್ದ ಕೆಲವು ವಿದ್ಯಾರ್ಥಿ ವೇತನಗಳು ಕೊರೋನಾ ಸಂದರ್ಭದಲ್ಲಿ ಸರಿಯಾಗಿ ಬಿಡುಗಡೆಯಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ತಕ್ಷಣ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಬೇಕು.
     ಪ್ರಸ್ತುತ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಹಾಸ್ಟೆಲ್‌ಗಳನ್ನು ತೆರೆಯಲಾಗಿದ್ದು, ಉಳಿದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ. ತಕ್ಷಣ ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೆಲ್‌ಗಳನ್ನು ತೆರೆಯುವುದು.
       ಅನೇಕ ಕಾಲೇಜುಗಳಲ್ಲಿ ಕೆಲವು ವಿಷಯಗಳಿಗೆ ಕಾಯಂ ಉಪನ್ಯಾಸಕರು ಇರುವುದಿಲ್ಲ ಪ್ರಸ್ತುತ ಕಾಲೇಜುಗಳು ಪ್ರಾರಂಭವಾಗಿ  ವಿದ್ಯಾರ್ಥಿಗಳು ತರಗತಿಗಳಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ತರಗತಿಗಳನ್ನು ನಡೆಸಬೇಕು.
       ಪ್ರಸ್ತುತ ಎಲ್ಲಾ ಕಾಲೇಜುಗಳಿಗೆ ಮತ್ತು ಹಾಸ್ಟೆಲ್‌ಗಳಿಗೆ ಸಮರ್ಪಕವಾಗಿ ಬಸ್ ಸೌಲಭ್ಯಗಳು ಇರುವುದಿಲ್ಲ. ಕೊರೋನಾ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಬಸ್‌ಗಳ ಸಂಚಾರ ಇನ್ನೂ ಸರಿಯಾಗಿ ಆರಂಭಗೊಂಡಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ತಕ್ಷಣ ಬಸ್ ವ್ಯವಸ್ಥೆ ಕಲ್ಪಿಸುವ ಜೊತೆಗೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು.
    ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಜಯ ಗೌಡರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಜಿಲ್ಲಾ ಸಹ ಸಂಚಾಲಕ ಕುಮಾರಸ್ವಾಮಿ, ಎಸ್.ಎಫ್.ಡಿ ಪ್ರಮುಖ ಹಾಲಸ್ವಾಮಿ, ಮಂಚ್ ಪ್ರಮುಖ ಕಲ್ಪನಾ, ನಿರಂಜನ್, ಆಕಾಶ್, ಅಭಿ, ಮುರುಗೇಶ್, ಹಿಮಾ ಮತ್ತು ಯಶಸ್ವಿನಿ  ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು  ಪಾಲ್ಗೊಂಡಿದ್ದರು.                      

Tuesday, January 19, 2021

ಶ್ರೀ ಮಹಾಯೋಗಿ ವೇಮನ ಜಯಂತಿ ಆಚರಣೆ



ಭದ್ರಾವತಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಛೇರಿ ಸಭಾಂಗಣದಲ್ಲಿ ಮಂಗಳವಾರ ಶ್ರೀ ಮಹಾಯೋಗಿ ವೇಮನ ಜಯಂತಿ ಸರಳವಾಗಿ ಆಚರಿಸಲಾಯಿತು.
  ಭದ್ರಾವತಿ, ಜ. ೧೯: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಛೇರಿ ಸಭಾಂಗಣದಲ್ಲಿ ಮಂಗಳವಾರ ಶ್ರೀ ಮಹಾಯೋಗಿ ವೇಮನ ಜಯಂತಿ ಸರಳವಾಗಿ ಆಚರಿಸಲಾಯಿತು.
  ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಮಹಾಯೋಗಿ ವೇಮನರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
   ತಾಲೂಕು ಕಛೇರಿ ಅಧಿಕಾರಿಗಳು, ಸಿಬ್ಬಂದಿಗಳು, ರೆಡ್ಡಿ ಸಮಾಜದ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಕೇರಳ ಸಮಾಜಂ ಅಧ್ಯಕ್ಷರಾಗಿ ವಿಜಯಲಕ್ಷ್ಮಿ

ಭದ್ರಾವತಿ ಕೇರಳ ಸಮಾಜಂ ಮಹಿಳಾ ವಿಭಾಗಂ ನೂತನ ಪದಾಧಿಕಾರಿಗಳು.
ಭದ್ರಾವತಿ, ಜ. ೧೯: ಕೇರಳ ಸಮಾಜಂ ಮಹಿಳಾ ವಿಭಾಗಂ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಅಧ್ಯಕ್ಷರಾಗಿ ವಿಜಯಲಕ್ಷ್ಮಿ ಆಯ್ಕೆಯಾಗಿದ್ದಾರೆ.
     ಕೇರಳ ಸಮಾಜಂ ಅಧ್ಯಕ್ಷ ಗಂಗಾಧರನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷರಾಗಿ ಶೋಭ ಬಾಲಚಂದ್ರನ್, ಪ್ರಧಾನ ಕಾರ್ಯದರ್ಶಿಯಾಗಿ ಎಸ್. ಹೇಮಂತ ಕಲ್ಯಾಣಿ, ಸಹಕಾರ್ಯದರ್ಶಿಯಾಗಿ ರೇಖಾ ಚಂದ್ರನ್, ಖಜಾಂಚಿಯಾಗಿ ಎಂ. ಸೀತಾಲಕ್ಷ್ಮಿ, ಸಲಹೆಗಾರರಾಗಿ ಎಂ. ವಾಸಂತಿ ಹಾಗು ಸದಸ್ಯರಾಗಿ ಕೆ. ಶಶಿಕಲಾ ಸುರೇಶ್, ಶೈಲಜಾ ಸುರೇಶ್, ಕೆ. ಲೋಲಾಕ್ಷಿ, ಕೆ.ಎಸ್. ಯಶೋಧ, ಪ್ರೇಮಾ ವೇಲಾಯುಧನ್, ಸಿಂಧು ದಿವಾಕರ್ ಮತ್ತು ಸ್ವಾತಿ ರಜನೀಸ್ ಆಯ್ಕೆಯಾಗಿದ್ದಾರೆ.
   ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಜಿ. ಸುರೇಶ್, ಸಹಕಾರ್ಯದರ್ಶಿ ಪಿ.ಆರ್ ಪ್ರಭಾಕರನ್, ಖಜಾಂಚಿ ಎ. ಚಂದ್ರಶೇಖರ್, ಆರ್. ರಾಧಾಕೃಷ್ಣನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಡಾಟಾ ಎಂಟ್ರಿ ಆಪರೇಟರ್

ಎಸಿಬಿ ಬಲೆಗೆ ಡಾಟಾ ಎಂಟ್ರಿ ಆಪರೇಟರ್ ವೇಣು
ಭದ್ರಾವತಿ, ಜ. ೧೯: ಇಲ್ಲಿನ ಸಿದ್ದರೂಢನಗರದ ವಾಣಿಜ್ಯ ತೆರಿಗೆ ಇಲಾಖೆ ಕಛೇರಿಯಲ್ಲಿ ದಿನಗೂಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್ ಲಂಚ ಸ್ವೀಕರಿಸುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳ ಬಲೆ ಬಿದ್ದಿರುವ ಘಟನೆ ಮಂಗಳವಾರ ನಡೆದಿದೆ.
   ಡಾಟಾ ಎಂಟ್ರಿ ಆಪರೇಟರ್ ವೇಣು(೩೬) ಎಂಬಾತ ಶಾಮಿಯಾನ ಅಂಗಡಿಯೊಂದರ ಜಿಎಸ್‌ಟಿ ನೋಂದಣಿಗಾಗಿ ರು. ೨,೫೦೦ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾನೆ.
   ಪೊಲೀಸ್ ಉಪಾಧೀಕ್ಷಕ ಪಿ. ಲೋಕೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಠಾಣಾಧಿಕಾರಿ ಇಮ್ರಾನ್ ಬೇಗ್, ಸಿಬ್ಬಂದಿಗಳಾದ ವಸಂತ್, ರಘುನಾಯ್ಕ್, ನಾಗರಾಜ್, ಸುರೇಂದ್ರ, ಹರೀಶ್ ಮತ್ತು ಯೋಗೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ತೆರಿಗೆದಾರರ ಸಂಘದ ಅಧ್ಯಕ್ಷರಾಗಿ ಕೆ.ಎಂ ಸತೀಶ್ ಮರು ಆಯ್ಕೆ

ಕೆ.ಎಂ ಸತೀಶ್
ಭದ್ರಾವತಿ, ಜ. ೧೯: ಜನ್ನಾಪುರ-ಹುತ್ತಾ ತೆರಿಗೆದಾರರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಕೆ.ಎಂ ಸತೀಶ್ ಪುನಃ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ.
    ಉಪಾಧ್ಯಕ್ಷರಾಗಿ ಬಿ. ಯಲ್ಲಪ್ಪ, ಕಾರ್ಯದರ್ಶಿಯಾಗಿ ಬಿ. ಚಂದ್ರಶೇಖರಯ್ಯ, ಸಹಕಾರ್ಯದರ್ಶಿಯಾಗಿ ಬಿ.ಎ ಚಂದ್ರಪ್ಪ, ಖಜಾಂಚಿಯಾಗಿ ಭದ್ರಯ್ಯ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಬಿ.ಪಿ.ಎನ್ ಚಂದ್ರಶೇಖರ್, ದೇವೇಂದ್ರಪ್ಪ, ಎ.ಬಿ ಭೀಮೋಜಿರಾವ್, ಜಿ.ಬಿ ಚಂದ್ರಶೇಖರ್, ಪಿ. ಶಿವನ್, ಚಾಂದು, ಎನ್. ಕೃಷ್ಣಪ್ಪ ಮತ್ತು ರುದ್ರೇಶ್ ಆಯ್ಕೆಯಾಗಿದ್ದಾರೆ.  
    ಎಂಪಿಎಂ ನಿವೃತ್ತ ಅಧಿಕಾರಿ ಹಾಗು ಹಿರಿಯ ನ್ಯಾಯಾವಾದಿಯಾಗಿರುವ ಕೆ.ಎಂ ಸತೀಶ್ ಕಳೆದ ಸುಮಾರು ೨೫ ವರ್ಷಗಳಿಂದ ಸಂಘದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಮುನ್ನಡೆಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ.

ನಗರ ಸಾರಿಗೆಗೆ ಹೆಚ್ಚಿನ ಬಸ್, ಸಿಗ್ನಲ್ ಲೈಟ್ ಅಳವಡಿಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಗೆ ಆಗ್ರಹ

ಭದ್ರಾವತಿ ಅಭಿವೃದ್ಧಿ ವೇದಿಕೆ ವತಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ



ಭದ್ರಾವತಿ, ಜ. ೧೯: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭದ್ರಾವತಿ ಅಭಿವೃದ್ಧಿ ವೇದಿಕೆ ವತಿಯಿಂದ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.
    ಲಕ್ಷಾಂತರ ಜನಸಂಖ್ಯೆ ಹೊಂದಿರುವ ನಗರದಲ್ಲಿ ವಿವಿಧ ವಾರ್ಡ್‌ಗಳ ನಡುವೆ ಸಂಚರಿಸಲು ನಗರ ಸಾರಿಗೆ ಕೊರತೆ ಕಂಡು ಬರುತ್ತಿದ್ದು, ಕೇವಲ ೨ ಬಸ್ಸುಗಳು ಮಾತ್ರ ಸಂಚರಿಸುತ್ತಿವೆ. ಇದರಿಂದಾಗಿ ಪ್ರಯಾಣಿಕರು ಗಂಟೆಗಟ್ಟಲೆ ಕಾಯುವಂತಾಗಿದೆ. ಕೋವಿಡ್-೧೯ರ ಹಿನ್ನಲೆಯಲ್ಲಿ ಸಮರ್ಪಕ ಹಾಗು ತುರ್ತು ಸಾರಿಗೆ ವ್ಯವಸ್ಥೆ ಅಗತ್ಯವಿದೆ. ಅಲ್ಲದೆ ರೈಲಿನ ಮೂಲಕ ನಗರಕ್ಕೆ ಬರುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೈಲುಗಳು ಬರುವ ನಿಗದಿತ ಸಮಯಕ್ಕೆ ಸರಿಯಾಗಿ ಹೆಚ್ಚುವರಿಯಾಗಿ ೨ ಬಸ್ಸುಗಳ ವ್ಯವಸ್ಥೆ ಕಲ್ಪಿಸುವಂತೆ ನಗರದ ಕೆಎಸ್‌ಆರ್‌ಟಿಸಿ ಘಟಕದ ವ್ಯವಸ್ಥಾಪಕರಿಗೆ ಮನವಿ ಮಾಡಲಾಗಿದೆ.
     ತಾಲೂಕಿನ ನಗರ ಹಾಗು ಗ್ರಾಮೀಣ ಪ್ರದೇಶಗಳಿಂದ ಪ್ರತಿ ದಿನ ನೂರಾರು ಮಂದಿ ಆರೋಗ್ಯ ಸೇವೆ ಪಡೆದುಕೊಳ್ಳಲು ಮಣಿಪಾಲ್ ಆಸ್ಪತ್ರೆ ಅವಲಂಬಿಸಿದ್ದಾರೆ. ಅನಾರೋಗ್ಯಕ್ಕೆ ಒಳಗಾದವರ ಜೊತೆಗೆ ಕುಟುಂಬ ವರ್ಗದವರು ಸಹ ಆಸ್ಪತ್ರೆಗೆ ತೆರಳುತ್ತಿದ್ದು, ಮಣಿಪಾಲ್ ಆಸ್ಪತ್ರೆಗೆ ತರ್ತು ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನಲೆಯಲ್ಲಿ ಭದ್ರಾವತಿ ಘಟಕದಿಂದ ಶಿವಮೊಗ್ಗ-ತೀರ್ಥಹಳ್ಳಿ-ಆಗುಂಬೆ ಮಾರ್ಗವಾಗಿ ಮಣಿಪಾಲ್-ಉಡುಪಿಗೆ ತೆರಳುವಂತೆ ಹಾಗು ಶಿವಮೊಗ್ಗ-ಆಯನೂರು-ರಿಪ್ಪನ್‌ಪೇಟೆ-ಹುಂಚ-ಕೋಣಂದೂರು-ತೀರ್ಥಹಳ್ಳಿ-ಆಗುಂಬೆ ಮಾರ್ಗವಾಗಿ ತೆರಳುವಂತೆ ಮತ್ತು ಎನ್.ಆರ್ ಪುರ-ಕೊಪ್ಪ-ಹರಿಹರಿಪುರ-ಆಗುಂಬೆ ಮಾರ್ಗವಾಗಿ ಮಣಿಪಾಲ್-ಉಡುಪಿಗೆ ತೆರಳುವಂತೆ ಬಸ್‌ಗಳ ವ್ಯವಸ್ಥೆ ಕಲ್ಪಿಸಿಕೊಡುವಂತೆ ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದ ವಿಭಾಗೀಯ ಸಾರಿಗೆ ವ್ಯವಸ್ಥಾಪಕರಿಗೆ ಮನವಿ ಮಾಡಲಾಗಿದೆ.
    ನಗರದಲ್ಲಿ ದಿನ ದಿಂದ ದಿನಕ್ಕೆ ವಾಹನಗಳ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನಲೆಯಲ್ಲಿ ಸಂಚಾರಿ ದಟ್ಟಣೆ ಉಂಟಾಗುತ್ತಿದ್ದು, ಈ ನಡುವೆ ನಗರದ ಪ್ರಮುಖ ವೃತ್ತಗಳಾದ ಅಂಬೇಡ್ಕರ್ ವೃತ್ತ, ರಂಗಪ್ಪ ವೃತ್ತ ಮತ್ತು ಮಾಧವಚಾರ್ ವೃತ್ತಗಳಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಳ್ಳುತ್ತಿದ್ದು, ಇದರಿಂದಾಗಿ ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೆ ಅಪಘಾತಗಳ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಕಂಡು ಬರುತ್ತಿದೆ. ಈ  ಹಿನ್ನಲೆಯಲ್ಲಿ ಈ ವೃತ್ತಗಳಲ್ಲಿ ಆಟೋಮ್ಯಾಟಿಕ್ ಎಲೆಕ್ಟ್ರಿಕಲ್ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸುವುದು ಸೂಕ್ತ ವಾಗಿದೆ. ಅಲ್ಲದೆ ನಗರದ ವಿವಿಧ ಭಾಗಗಳಲ್ಲಿ ಕಳವು ಪ್ರಕರಣಗಳು, ಪುಂಡಪೋಕರಿಗಳ ಹಾವಳಿಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಭಯದ ವಾತಾವರಣದಲ್ಲಲಿ ಬದುಕುವಂತಾಗಿದೆ. ಈ ಹಿನ್ನಲೆಯಲ್ಲಿ ಕಾನೂನು ಬಾಹಿರ ಕೃತ್ಯಗಳನ್ನು ತಡೆಗಟ್ಟಲು ಅಗತ್ಯವಿರುವ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಗಳನ್ನು ಅಳವಡಿಸುವಂತೆ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳಿಗೆ ಆಗ್ರಹಿಸಲಾಗಿದೆ.
   ಮನವಿ ಸಲ್ಲಿಸುವ ಸಂದರ್ಭದಲ್ಲಿ ವೇದಿಕೆ ಗೌರವಾಧ್ಯಕ್ಷ ಡಿ. ನಂಜಪ್ಪ, ಅಧ್ಯಕ್ಷ ಜಿ.ಟಿ ಬಸವರಾಜ್, ಉಪಾಧ್ಯಕ್ಷ ಎಸ್.ಎಸ್ ಭೈರಪ್ಪ, ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹಮೂರ್ತಿ, ಕಾರ್ಯದರ್ಶಿ ಸಿ.ಎಸ್ ಶಂಕರಯ್ಯ, ಕಾರ್ಯದರ್ಶಿ ರಾಮಪ್ಪ ಮತ್ತು ಖಜಾಂಚಿ ಕೆ.ಜೆ ಹನುಮಂತಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಜ.೨೬ರಂದು ಗಣ ರಾಜ್ಯೋತ್ಸವ



    ಭದ್ರಾವತಿ, ಜ. ೧೯: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಜ.೨೬ರಂದು ಬೆಳಿಗ್ಗೆ ೯ ಗಂಟೆಗೆ ಹಳೇನಗರದ ಕನಕಮಂಟಪ ಮೈದಾನದಲ್ಲಿ ೭೨ನೇ ಗಣರಾಜ್ಯೋತ್ಸವ ಹಮ್ಮಿಕೊಳ್ಳಲಾಗಿದೆ.
     ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್, ಸಂಸದ ಬಿ.ವೈ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಸಿ.ಎಂ ಇಬ್ರಾಹಿಂ, ಆರ್. ಪ್ರಸನ್ನಕುಮಾರ್, ಆಯನೂರು ಮಂಜುನಾಥ್, ಎಸ್.ಎಲ್ ಭೋಜೆಗೌಡ, ಎಸ್. ರುದ್ರೇಗೌಡ, ಭಾರತಿ ಶೆಟ್ಟಿ, ತಾ.ಪಂ. ಅಧ್ಯಕ್ಷೆ ಡಿ. ಲಕ್ಷ್ಮೀ ದೇವಿ, ಉಪಾಧ್ಯಕ್ಷೆ ನೇತ್ರಾಬಾಯಿ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ನಾಗರಾಜ್, ಜಿ.ಪಂ. ಸದಸ್ಯರಾದ ಡಿ.ಆರ್ ರೇಖಾ ಉಮೇಶ್, ಜೆ.ಪಿ ಯೋಗೇಶ್, ಎಸ್. ಮಣಿಶೇಖರ್, ವೀರಭದ್ರಪ್ಪ ಪೂಜಾರಿ, ಎಪಿಎಂಸಿ ಅಧ್ಯಕ್ಷ ಲವೇಶ್‌ಗೌಡ ಮತ್ತು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್. ಕೃಷ್ಣಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
    ತಾಲೂಕು ದಂಡಾಧಿಕಾರಿ ಜಿ. ಸಂತೋಷ್‌ಕುಮಾರ್ ಧ್ವಜಾರೋಹಣ ನೆರವೇರಿಸಲಿದ್ದು, ತಾಲೂಕು ಪಂಚಾಯಿತಿ ಸದಸ್ಯರು, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಗಣ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಲಾಗಿದೆ.