Monday, March 8, 2021

೭ ದಿನಗಳವರೆಗೆ ಶಾಸಕರ ಅಮಾನತು ಸರಿಯಲ್ಲ : ತಕ್ಷಣ ಅಮಾನತು ಆದೇಶ ಹಿಂಪಡೆಯಲಿ

ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೆಷನ್ ಪತ್ರಿಕಾಗೋಷ್ಠಿಯಲ್ಲಿ ಆಗ್ರಹ


ಭದ್ರಾವತಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಅಧ್ಯಕ್ಷ ಸೆಲ್ವರಾಜ್ ಮಾತನಾಡಿದರು.
   ಭದ್ರಾವತಿ, ಮಾ. ೮: ಕ್ಷೇತ್ರದ ಶಾಸಕರನ್ನು ೭ ದಿನಗಳವರೆಗೆ ಕಲಾಪದಿಂದ ಅಮಾನತುಗೊಳಿಸಿರುವುದು ಸರಿಯಲ್ಲ. ಇದನ್ನು ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ಖಂಡಿಸುವ ಜೊತೆಗೆ ತಕ್ಷಣ ಅಮಾನತು ಆದೇಶ ಹಿಂಪಡೆಯುವಂತೆ ಒತ್ತಾಯಿಸುತ್ತದೆ ಎಂದು ಅಧ್ಯಕ್ಷ ಸೆಲ್ವರಾಜ್ ತಿಳಿಸಿದರು.
   ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕ್ಷೇತ್ರದ ಮತದಾರರು ತಮ್ಮ ಪ್ರತಿನಿಧಿಯನ್ನು ವಿಧಾನಸಭೆಗೆ ಆಯ್ಕೆಮಾಡಿ ಕಳುಹಿಸುತ್ತಾರೆ. ಶಾಸಕರು ತಮ್ಮ ಸಮಸ್ಯೆಗಳನ್ನು ತೋರ್ಪಡಿಸಿಕೊಳ್ಳುವ ಮೊದಲೇ ಅವರನ್ನು ೭ ದಿನಗಳ ಕಾಲ ಅಮಾನತು ಮಾಡಿರುವ ಕ್ರಮ ಸರಿಯಲ್ಲ. ತಪ್ಪು ನಡೆದಿರಬಹುದು, ಶಿಕ್ಷೆ ವಿಧಿಸಲಿ ಆದರೆ ೭ ದಿನಗಳವರೆಗೆ ಅಮಾನತು ಶಿಕ್ಷೆ ಸರಿಯಲ್ಲ. ಇದರಿಂದಾಗಿ ಕ್ಷೇತ್ರದ ಮತದಾರರಿಗೆ ಅನ್ಯಾಯವಾಗಿದೆ ಎಂದರು.
    ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳಲ್ಲಿ ಉದ್ಯೋಗವಿಲ್ಲದೆ ಕಾರ್ಮಿಕ ಕುಟುಂಬಗಳು ಬೀದಿಗೆ ಬಿದ್ದಿವೆ. ನಿರುದ್ಯೋಗ, ಆರ್ಥಿಕ ಸಮಸ್ಯೆಗಳು ತಲೆತೋರಿವೆ. ಈ ನಡುವೆ ಹಲವು ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬಿದ್ದಿವೆ. ಇಂತಹ ಸಂದರ್ಭದಲ್ಲಿ ೭ ದಿನಗಳವರೆಗೆ ಅಮಾನತು ಮಾಡಿರುವುದು ಸರಿಯಲ್ಲ. ಸಭಾಧ್ಯಕ್ಷರು ತಮ್ಮ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
     ವಿಧಾನಸಭೆಯಲ್ಲಿ ಶಾಸಕರು ನಡೆದುಕೊಂಡಿರುವ ರೀತಿ ಸರಿ ಇಲ್ಲದಿರಬಹುದು. ಒಬ್ಬ ಶಾಸಕರಿಗೆ ಆ ರೀತಿ ಅನ್ಯಾಯವಾದರೆ ಜನಸಾಮಾನ್ಯರ ಗತಿ ಏನೆಂಬುದನ್ನು ಚಿಂತಿಸಬೇಕಾದ ಅಗತ್ಯವಿದೆ. ಪ್ರಸ್ತುತ ಕ್ಷೇತ್ರದಲ್ಲಿ ನಡೆದಿರುವ ಅಹಿತಕರ ಘಟನೆಗಳು ಪುನಃ ಮರುಕಳುಹಿಸಬಾರದು. ಎಲ್ಲರೂ ಒಂದೆಡೆ ಸೇರಿ ಶಾಂತಿಸಭೆ ಮೂಲಕ ಸಮಸ್ಯೆಗ ಪರಿಹಾರ ಕಂಡುಕೊಳ್ಳಬೇಕೆಂದರು.  
   ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಭಾಸ್ಕರಬಾಬು, ಜಾರ್ಜ್, ಫ್ರಾನ್ಸಿಸ್, ದಾಸ್, ಡೇನಿಯಲ್ ಫಾಸ್ಟರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

೫ ದಶಕಗಳ ಮಹಿಳಾ ಶಕ್ತಿ ಅನಾವರಣ : ಇತರೆ ಸಂಘಟನೆಗಳಿಗೆ ಸ್ಪೂರ್ತಿ

ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಮಹಿಳಾ ಸೇವಾ ಸಮಾಜ.

* ಅನಂತಕುಮಾರ್
       ಭದ್ರಾವತಿ, ಮಾ. ೭: ಸಮಾಜದಲ್ಲಿ ಸಂಘಟನೆಗಳು ಬಹುಬೇಗನೆ ಹುಟ್ಟಿಕೊಳ್ಳುತ್ತವೆ. ಆದರೆ ಎಲ್ಲಾ ಸಂಘಟನೆಗಳು ಹೆಚ್ಚು ದಿನ ಅಸ್ತಿತ್ವದಲ್ಲಿರುವುದಿಲ್ಲ. ಸಂಘಟನೆಗಳನ್ನು ಮುನ್ನಡೆಸಿಕೊಂಡು ಹೋಗುವುದು ಸುಲಭದ ಕೆಲಸವಲ್ಲ. ಸಂಘಟನೆ ಕಟ್ಟಿದವರಲ್ಲಿ ಕ್ರಿಯಾಶೀಲತೆ, ಸಂಘಟನಾತ್ಮಕ ಚತುರತೆ, ಆಯಾ ಕಾಲ ಘಟ್ಟಕ್ಕೆ ತಕ್ಕಂತೆ ಹೊಂದಿಕೊಳ್ಳುವ ಮನಸ್ಥಿತಿ ಎಲ್ಲವೂ ಬಹಳ ಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಮಹಿಳೆಯರು ಸಂಘಟನೆಗಳನ್ನು ಮುನ್ನಡೆಸಿಕೊಂಡು ಹೋಗುವುದು ಎಂದರೆ ನಿಜಕ್ಕೂ ಸವಾಲಿನ ಕೆಲಸವಾಗಿದೆ. ಸುಮಾರು ೫ ದಶಕಗಳಿಗೂ ಹೆಚ್ಚು ಕಾಲದಿಂದ ಮುನ್ನಡೆಯುತ್ತಿರುವ ಹಳೇನಗರದ ಮಹಿಳಾ ಸೇವಾ ಸಮಾಜ ಇದೀಗ ನಗರದ ಇತರೆ ಮಹಿಳಾ ಸಂಘಟನೆಗಳಿಗೆ ಮಾದರಿಯಾಗಿ ಹೊರಹೊಮ್ಮಿದೆ.
     ಹೌದು..! ಸುಮಾರು ೫ ದಶಕಗಳ ಹಿಂದೆ ಕೆಲವೇ ಕೆಲವು ಮಹಿಳೆಯರು ಒಂದೆಡೆ ಸೇರಿ ಹುಟ್ಟುಹಾಕಿದ ಮಹಿಳಾ ಸಮಾಜ ಇಂದು ಬೃಹದಾಗಿ ಬೆಳೆದಿದೆ. ಅದರಲ್ಲೂ ನಗರದಲ್ಲಿ ಸುಸಜ್ಜಿತವಾದ ಸ್ವಂತ ಕಟ್ಟಡ ಹೊಂದಿರುವ ಏಕೈಕ ಮಹಿಳಾ ಸಮಾಜ ಇದಾಗಿದೆ. ಯಾವುದೇ ಆದಾಯದ ಮೂಲವಿಲ್ಲದಿದ್ದರೂ ಸಹ ಇದುವರೆಗೂ ಕ್ರಿಯಾಶೀಲವಾಗಿ ಮುನ್ನಡೆಸಿಕೊಂಡು ಬಂದಿರುವುದೇ ಈ ಮಹಿಳಾ ಸಮಾಜದ ವಿಶೇಷತೆಯಾಗಿದೆ.
     ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸ್ವಸಹಾಯ ಮಹಿಳಾ ಸಂಘಟನೆಗಳಿಗೂ ಈ ಮಹಿಳಾ ಸಂಘಟನೆಗೂ ಬಹಳಷ್ಟು ವ್ಯತ್ಯಾಸಗಳಿವೆ. ಸ್ವಸಹಾಯ ಸಂಘಟನೆಗಳಲ್ಲಿ ಆರ್ಥಿಕ ಲಾಭದ ಉದ್ದೇಶಕ್ಕಾಗಿ ಮಹಿಳೆಯರು ಒಂದೆಡೆ ಸೇರಿಕೊಳ್ಳುತ್ತಾರೆ. ಆದರೂ ಪೂರ್ಣಪ್ರಮಾನದಲ್ಲಿ ಮಹಿಳೆಯರು ಸಂಘಟನೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಆದರೆ ಈ ಘಟನೆಯಲ್ಲಿ ಯಾವುದೇ ಆರ್ಥಿಕ ಚಟುವಟಿಕೆಗಳಿಲ್ಲದಿದ್ದರೂ ಸ್ವಯಂ ಪ್ರೇರಣೆಯಿಂದ ಮಹಿಳೆಯರು ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ.


ಭದ್ರಾವತಿ ಹಳೇನಗರದ ಮಹಿಳಾ ಸೇವಾ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು.

    ರಾಷ್ಟ್ರೀಯ ಹಬ್ಬಗಳ ಆಚರಣೆ, ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳು, ರಕ್ತದಾನ, ನೇತ್ರದಾನ ಶಿಬಿರ ಸೇರಿದಂತೆ ಇನ್ನಿತರ ಆರೋಗ್ಯ ಶಿಬಿರಗಳು, ಸ್ವಚ್ಛತೆ, ಶ್ರಮದಾನ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಲಯನ್ಸ್, ರೋಟರಿ ಕ್ಲಬ್ ಸೇರಿದಂತೆ ಇನ್ನಿತರ ಸ್ವಯಂ ಸೇವಾ ಸಂಸ್ಥೆಗಳು ಕೈಗೊಳ್ಳುವ ಸೇವಾ ಕಾರ್ಯಗಳಲ್ಲೂ ಸಹಭಾಗಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.      
   ಪ್ರಸ್ತುತ ಈ ಸಂಘಟನೆಯಲ್ಲಿ ಸುಮಾರು ೮೦ ಸದಸ್ಯರಿದ್ದು, ಬಹುತೇಕ ಸದಸ್ಯರು ಗೃಹಿಣಿಯರಾಗಿದ್ದಾರೆ.  ವೈದ್ಯರಾಗಿ, ಶಿಕ್ಷಕಿಯರಾಗಿ, ನ್ಯಾಯವಾದಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವವರು ಸಹ ಸದಸ್ಯರಾಗಿದ್ದಾರೆ. ತಮ್ಮ ದಿನನಿತ್ಯದ ಬದುಕಿನ ಒತ್ತಡದ ನಡುವೆಯೂ ಒಂದಿಷ್ಟು ಸಮಯ ಈ ಸಂಘಟನೆಗಾಗಿ ಮೀಸಲಿಟ್ಟಿದ್ದಾರೆ. ಈ ಸಂಘಟನೆಯ ಬಹುತೇಕ ಸದಸ್ಯರು ಸಂಘಟನಾತ್ಮಕ ಮನೋಭಾವನೆ ಬೆಳೆಸಿಕೊಂಡಿರುವ ಕಾರಣ ಹಾಗು ಪಾರದರ್ಶಕತೆ ಕಾಯ್ದುಕೊಂಡಿರುವ ಹಿನ್ನಲೆಯಲ್ಲಿ ಇದುವರೆಗೂ ಸಂಘಟನೆ ಮುನ್ನಡೆದುಕೊಂಡು ಬರಲು ಸಾಧ್ಯವಾಗಿದೆ ಎಂದರೆ ತಪ್ಪಾಗಲಾರದು.

'ಈ ಮಹಿಳಾ ಸೇವಾ ಸಮಾಜವನ್ನು ಇದುವರೆಗೂ ಮುನ್ನಡೆಸಿಕೊಂಡು ಬಂದಿರುವುದೇ ಹೆಚ್ಚು. ಸುಮಾರು ೨೦ಕ್ಕೂ ಅಧಿಕ ವರ್ಷದಿಂದ ಸದಸ್ಯೆಯಾಗಿದ್ದು, ಪ್ರಸ್ತುತ ಸಮಾಜದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಸುಮಾರು ೧೫ ದಿನಗಳ ಹಿಂದೆ ಸುಮಾರು ೨೦ ಲಕ್ಷ ರು. ನಗರಸಭೆ ಅನುದಾನದಲ್ಲಿ ನಿರ್ಮಾಣಗೊಂಡಿರುವ ಸಮಾಜದ ನೂತನ ಕಟ್ಟಡದ ಉದ್ಘಾಟನೆ ನಡೆದಿದ್ದು, ಮೇಲ್ಭಾಗದ ಕಟ್ಟಡಕ್ಕೆ ಸಂಸದರ ನಿಧಿಯಿಂದ ಸುಮಾರು ೩೦ ಲಕ್ಷ ರು. ಬಿಡುಗಡೆಯಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಸಹ ಆರಂಭಗೊಳ್ಳುತ್ತಿದೆ. ಈ ಸೇವಾ ಸಮಾಜದಲ್ಲಿ ಹಲವು ಒತ್ತಡಗಳ ನಡುವೆಯೂ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ.'
                                       - ಹೇಮಾವತಿ ವಿಶ್ವನಾಥ್, ಅಧ್ಯಕ್ಷರು, ಮಹಿಳಾ ಸೇವಾ ಸಮಾಜ

   ಪ್ರಸ್ತುತ ಗೌರವಾಧ್ಯಕ್ಷರಾಗಿ ವಸುಧ ಮುಕುಂದ್, ಅಧ್ಯಕ್ಷರಾಗಿ ಹೇಮಾವತಿ ವಿಶ್ವನಾಥ್, ಉಪಾಧ್ಯಕ್ಷೆಯಾಗಿ ಕಮಲಕುಮಾರಿ, ಪ್ರಧಾನ ಕಾರ್ಯದರ್ಶಿಯಾಗಿ ಶೋಭಗಂಗರಾಜ್, ಸಹಕಾರ್ಯದರ್ಶಿಯಾಗಿ ಇಂದಿರಾ ರಮೇಶ್, ಖಜಾಂಚಿ ಜಯಂತಿಶೇಟ್ ಹಾಗು ಸದಸ್ಯರಾಗಿ ಅನ್ನಪೂರ್ಣ ಸತೀಶ್, ಚಂದ್ರಕಲಾ ವರದರಾಜ್, ಶಕುಂತಲ ರವಿಕುಮಾರ್, ಭಾಗ್ಯ ನಿಜಗುಣ, ಶಾರದ ಶ್ರೀನಿವಾಸ್, ಕಮಲರಾಯ್ಕರ್ ಹಾಗು ಗೌರವ ಸಲಹೆಗಾರರಾಗಿ ಬಿ.ಎಸ್ ರೂಪರಾವ್ ಮತ್ತು ಯಶೋಧ ವೀರಭದ್ರಪ್ಪ ಸೇರಿದಂತೆ ಇನ್ನಿತರರು ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.  



Sunday, March 7, 2021

ಜಾನಕಮ್ಮ ನಿಧನ


ಜಾನಕಮ್ಮ
   ಭದ್ರಾವತಿ, ಮಾ. ೭: ನಗರದ ಹಿರಿಯ ಪತ್ರಕರ್ತ ರವೀಂದ್ರನಾಥ್(ಬ್ರದರ್‍ಸ್)ರವರ ತಾಯಿ ಜಾನಕಮ್ಮ(೯೩) ಭಾನುವಾರ ನಿಧನ ಹೊಂದಿದರು.
    ಜಾನಕಮ್ಮ ಜನ್ನಾಪುರ ಕುರುಬರ ಬೀದಿ ನಿವಾಸಿವಾಗಿದ್ದು, ೫ ಗಂಡು, ೨ ಹೆಣ್ಣು ಮಕ್ಕಳನ್ನು ಬಿಟ್ಟಗಲಿದ್ದಾರೆ. ಇವರ ಅಂತ್ಯಕ್ರಿಯೆ ಸೋಮವಾರ ಬೆಳಗ್ಗೆ ೧೧ ಗಂಟೆಗೆ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಮೃತರ ನಿಧನಕ್ಕೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.  

ವೈ. ಲೋಹಿತ್‌ಗೆ ಡಾಕ್ಟರೇಟ್ ಪದವಿ

ವೈ. ಲೋಹಿತ್
   ಭದ್ರಾವತಿ, ಮಾ. ೭: ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ವೈ. ಲೋಹಿತ್ ಕುವೆಂಪು ವಿಶ್ವವಿದ್ಯಾಲನಿಲಯದ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.
   ಕುವೆಂಪು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎಸ್.ಎಂ ಪ್ರಕಾಶ್ ಮಾರ್ಗದರ್ಶನಲ್ಲಿ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ 'ಎಫಿಕೆಸಿ ಆಫ್ ಫ್ಲೈಮೆಟ್ರಿಕ್ ಟ್ರೈನಿಂಗ್ ಆನ್ ಆಕ್ವ, ಲ್ಯಾಂಡ್ ಅಂಡ್ ಸ್ಯಾಂಡ್ ಸರ್ಫೇಸಸ್' (Efficacy of Plyometric Training on Aqua, Land and Sand Surfaces)  ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.
   ಲೋಹಿತ್ ನಗರದ ಗಣೇಶ್ ಕಾಲೋನಿ ನಿವಾಸಿ, ವಿಐಎಸ್‌ಎಲ್ ನಿವೃತ್ತ ಕಾರ್ಮಿಕ, ಕಬಡ್ಡಿ ಕ್ರೀಡಾಪಟು ಯಲ್ಲೋಜಿ-ಅಂಬುಜಾ ಬಾಯಿ ದಂಪತಿ ಪುತ್ರರಾಗಿದ್ದಾರೆ. ಲೋಹಿತ್ ಸಹ ಅತ್ಯುತ್ತಮ ವಾಲಿಬಾಲ್ ಕ್ರೀಡಾಪುಟ ಆಗಿದ್ದು, ಕುವೆಂಪು ವಿ.ವಿ ಕ್ರೀಡಾಕೂಟ ಹಾಗು ರಾಜ್ಯಮಟ್ಟದ ಪಂದ್ಯಾವಳಿಗಳನ್ನು ಪ್ರತಿನಿಧಿಸಿದ್ದಾರೆ.


ಯಶಸ್ವಿಯಾಗಿ ಮುಕ್ತಾಯಗೊಂಡ ೩ನೇ ವರ್ಷದ ಜನೌಷಧ ದಿವಸ್

ಭದ್ರಾವತಿ ಜನ್ನಾಪುರದ ಜನೌಷಧಿ ಕೇಂದ್ರ ಹಾಗು ಸ್ಕಂದ ಟ್ರಸ್ಟ್ ವತಿಯಿಂದ ಭಾನುವಾರ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ೩ನೇ ವರ್ಷದ ಜನೌಷಧ ದಿವಸ್ ಆಚರಿಸಲಾಯಿತು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್ ಬಹುಮಾನ ವಿತರಿಸಿದರು.
   ಭದ್ರಾವತಿ, ಮಾ. ೭: ನಗರದ ಜನ್ನಾಪುರದ ಜನೌಷಧಿ ಕೇಂದ್ರ ಹಾಗು ಸ್ಕಂದ ಟ್ರಸ್ಟ್ ವತಿಯಿಂದ ಭಾನುವಾರ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ೩ನೇ ವರ್ಷದ ಜನೌಷಧ ದಿವಸ್ ಆಚರಿಸಲಾಯಿತು.
     ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್ ಉದ್ಘಾಟಿಸಿ ಕೇಂದ್ರ ಸರ್ಕಾರ ಜನೌಷಧ ಯೋಜನೆ ಜಾರಿಗೆ ತಂದಿರುವ ಉದ್ದೇಶಗಳನ್ನು ವಿವರಿಸಿದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯವರು ಜನೌಷಧ ಫಲಾನುಭವಿಗಳೊಂದಿಗೆ ನಡೆಸಿದ ನೇರ ಸಂವಾದ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು.  
   ಜನೌಷಧ ದಿನಾಚರಣೆ ಅಂಗವಾಗಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆ, ಆನೇಕೊಪ್ಪ ಎಂಪಿಎಂ ಬಡಾವಣೆಯಲ್ಲಿರುವ ಸಂಜೀವಿನಿ ಹಿರಿಯ ನಾಗರೀಕರ ಆರೈಕೆ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣೆ, ಔಷಧಿ ವಿತರಣೆ, ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗು ಅರಿವು ಕಾರ್ಯಕ್ರಮ ಹಾಗು ಲಯನ್ಸ್‌ಕ್ಲಬ್‌ನಲ್ಲಿ ಹಿರಿಯ ವೈದ್ಯ ಡಾ. ಎಂ. ರವೀಂದ್ರನಾಥ ಕೋಠಿ ನೇತೃತ್ವದಲ್ಲಿ ಉಚಿತ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ಒಟ್ಟು ೭ ದಿನಗಳ ಕಾಲ ಜನಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
    ಕಾರ್ಯಕ್ರಮದಲ್ಲಿ ಸ್ಕಂದ ಟ್ರಸ್ಟ್‌ನ ಬಿ. ಶ್ರೀಧರ, ನಾರಾಯಣ, ಜನ್ನಾಪುರ ಜನೌಷಧ ಕೇಂದ್ರದ ಜಿ.ಕೆ ಮಧುಸೂದನ್, ಸುನಿಲ್‌ಗಾಯಕ್ವಾಡ್   ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

Saturday, March 6, 2021

ಕಸಾಪ ಪಾರದರ್ಶಕತೆ ಕಾಯ್ದುಕೊಳ್ಳಲು ಡಿ.ಬಿ ಶಂಕರಪ್ಪ ಸ್ಪರ್ಧೆ ಅನಿವಾರ್ಯ : ಅಪೇಕ್ಷ ಮಂಜುನಾಥ್

ಹಿರಿಯ ಸಾಹಿತ್ಯ ಎನ್.ಎಸ್ ಲಕ್ಷ್ಮೀನಾರಾಯಣಭಟ್ ನಿಧನಕ್ಕೆ ಕಸಾಪ ಸಂತಾಪ

ಭದ್ರಾವತಿ ನ್ಯೂಟೌನ್‌ನಲ್ಲಿರುವ ಕಸಾಪ ಕಛೇರಿಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎನ್.ಎಸ್ ಲಕ್ಷ್ಮೀನಾರಾಯಣಭಟ್‌ರವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
   ಭದ್ರಾವತಿ, ಮಾ. ೬: ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮತ್ತಷ್ಟು ಸದೃಢವಾಗಿ ಬೆಳೆಯಬೇಕಾದರೆ ಇಂದಿನ ಅಧ್ಯಕ್ಷರಾಗಿರುವ ಡಿ.ಬಿ ಶಂಕರಪ್ಪನವರು ಮುಂದುವರೆಯುವುದು ಅಗತ್ಯವಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಹೇಳಿದರು.
ಅವರು ಶನಿವಾರ ನ್ಯೂಟೌನ್‌ನಲ್ಲಿರುವ ಪರಿಷತ್ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ಹಿರಿಯ ಸಾಹಿತಿ ಎನ್.ಎಸ್ ಲಕ್ಷ್ಮೀನಾರಾಯಣ ಭಟ್‌ರವರ ನಿಧನಕ್ಕೆ ಸಂತಾಪ ಹಾಗು ಪರಿಷತ್ ಜಿಲ್ಲಾಧ್ಯಕ್ಷ ಡಿ.ಬಿ ಶಂಕರಪ್ಪನವರೊಂದಿಗೆ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
  ಇಳಿವಯಸ್ಸಿನಲ್ಲೂ ಶಂಕರಪ್ಪನವರ ಕಾರ್ಯ ಚಟುವಟಿಕೆಗಳು ಪರಿಷತ್‌ನ ಇತರರಿಗೆ ಸ್ಪೂರ್ತಿದಾಯಕವಾಗಿವೆ. ಪರಿಷತ್‌ನಲ್ಲಿ ಪಾರದರ್ಶಕತೆಗೆ ಮೊದಲ ಆದ್ಯತೆ ನೀಡಿದ್ದಾರೆ. ಅಲ್ಲದೆ ಪರಿಷತ್‌ನ ಎಲ್ಲಾ ಕಾರ್ಯಚಟುವಟಿಕೆಗಳಲ್ಲೂ ಕ್ರಿಯಾಶೀಲವಾಗಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಿದ್ದಾರೆ. ಪ್ರಸ್ತುತ ಜಿಲ್ಲಾಧ್ಯಕ್ಷರ ಚುನಾವಣೆ ಎದುರಾಗಿದ್ದು, ಈ ಹಿಂದೆ ವಯಸ್ಸಿನ ಕಾರಣಕ್ಕಾಗಿ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಸೂಕ್ತ ಅಭ್ಯರ್ಥಿಗಳಿಗಾಗಿ ಇದುವರೆಗೂ ಹುಡುಕಾಟ ನಡೆಸಲಾಯಿತು. ಆದರೆ ಯಾವುದೇ ಸೂಕ್ತ ಅಭ್ಯರ್ಥಿ ಇಲ್ಲದ ಕಾರಣ ಪುನಃ ಚುನಾವಣೆಗೆ ಸ್ಪರ್ಧಿಸುವಂತೆ ಡಿ.ಬಿ ಶಂಕರಪ್ಪನವರಿಗೆ ಮನವಿ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಅವರು ಪರಿಷತ್ ಸದಸ್ಯರ ಅಭಿಪ್ರಾಯ ಪಡೆಯಲು ಖುದ್ದಾಗಿ ಆಗಮಿಸಿದ್ದಾರೆ ಎಂದರು.
  ಜಿಲ್ಲಾಧ್ಯಕ್ಷ ಡಿ.ಬಿ ಶಂಕರಪ್ಪ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪರಿಷತ್ ಚುನಾವಣೆ ಎದುರಿಸಬೇಕಾದರೆ ಸ್ಪರ್ಧಿಸುವ ಅಭ್ಯರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ತಮ್ಮದೇ ಆದ ಮತದಾರರನ್ನು ಹೊಂದಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಷತ್‌ನ ಗೌರವ ಉಳಿಸಿಕೊಂಡು ಬರುವುದು ಎಲ್ಲರ ಜವಾಬ್ದಾರಿಯಾಗಿದೆ. ಈ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ನಡೆದಿರುವ ತಪ್ಪುಗಳು ಪುನಃ ಮರುಕಳುಹಿಸಬಾರದು. ಈ ಬಾರಿ ಚುನಾವಣೆಗೆ ಅವರು ಸ್ಪರ್ಧಿಸುತ್ತಿರುವ ಮಾಹಿತಿ ತಿಳಿದು ಬಂದ ಕಾರಣ ಅವರ ವಿರುದ್ಧ ಪುನಃ ಸ್ಪರ್ಧಿಸಬೇಕೆಂಬ ನಿರ್ಧಾರಕ್ಕೆ ಬಂದಿದ್ದೇನೆ. ಈ ಹಿನ್ನಲೆಯಲ್ಲಿ ನಿಮೆಲ್ಲರ ಅಭಿಪ್ರಾಯ ಬಹಳ ಮುಖ್ಯವಾಗಿದೆ ಎಂದರು.
    ಸಭೆಯಲ್ಲಿ ಪಾಲ್ಗೊಂಡಿದ್ದ ಜೆ.ಎನ್ ಬಸವರಾಜಪ್ಪ, ಅಪರಂಜಿ ಶಿವರಾಜ್, ಅರಳೇಹಳ್ಳಿ ಅಣ್ಣಪ್ಪ ಸೇರಿದಂತೆ ಪ್ರಮುಖರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
      ಎನ್.ಎಸ್ ಲಕ್ಷ್ಮೀನಾರಾಯಣ ಭಟ್ ಸರಳ ಸಜ್ಜನಿಕೆ ಸಾಹಿತಿ:
   ಎನ್.ಎಸ್ ಲಕ್ಷ್ಮೀನಾರಾಯಣಭಟ್‌ರವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ. ಅವರ ನಿಧನದಿಂದ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಎಂ.ಎನ್ ಸುಂದರ್‌ರಾಜ್ ತಿಳಿಸಿದರು.
   ಅಪರೂಪದ ಸಾಹಿತಿಗಳಲ್ಲಿ ಲಕ್ಷ್ಮೀನಾರಾಯಣ ಭಟ್ ಸಹ ಒಬ್ಬರಾಗಿದ್ದು, ಅವರು ತಮ್ಮ ದಿನನಿತ್ಯದ ಬದುಕಿನಲ್ಲಿ ಅತ್ಯಂತ ಸರಳತೆಯನ್ನು ಕಾಯ್ದುಕೊಂಡು ಬಂದಿದ್ದರು. ಅಲ್ಲದೆ ಇತರರಿಗೆ ಮಾದರಿಯಾಗಿ ಬದುಕಿದ್ದರು. ಇವರ ಅಗಲಿಕೆ ತುಂಬಾ ನೋವುಂಟ ಮಾಡಿದೆ ಎಂದರು.
   ಲಕ್ಷ್ಮೀನಾರಾಯಣಭಟ್‌ರವರ ನಿಧನಕ್ಕೆ ಸಂತಾಪ ಸೂಚಿಸುವ ಮೂಲಕ ಮೌನಾಚರಣೆ ನಡೆಸಿ ಗೌರವ ಸಲ್ಲಿಸಲಾಯಿತು. ಕಸಾಪ ಜಿಲ್ಲಾ ಉಪಾಧ್ಯಕ್ಷ ಎಚ್.ಎನ್ ಮಹಾರುದ್ರ, ತಾಲೂಕು ಘಟಕದ ಕೋಶಾಧ್ಯಕ್ಷ ಜಿ.ಎನ್ ಸತ್ಯಮೂರ್ತಿ, ಕಾರ್ಯದರ್ಶಿ ವೈ.ಕೆ ಹನುಮಂಯ್ಯ ಸೇರಿದಂತೆ ಉಪಸ್ಥಿತರಿದ್ದರು. ಕಾರ್ಯದರ್ಶಿ ಸಿ. ಚನ್ನಪ್ಪ ಸ್ವಾಗತಿಸಿದರು.

ಕಲಾಪದಿಂದ ಶಾಸಕರ ಅಮಾನತ್ತು, ಮುಖಂಡರು, ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು

ಯುವ ಕಾಂಗ್ರೆಸ್ ಖಂಡನೆ, ಮಧ್ಯ ಪ್ರವೇಶಕ್ಕೆ ರಾಜ್ಯಪಾಲರಿಗೆ ಮನವಿ  

ಶಾಸಕ ಬಿ.ಕೆ ಸಂಗಮೇಶ್ವರನ್ನು ವಿಧಾನಸಭೆ ಕಲಾಪದಿಂದ ಅಮಾನತ್ತುಗೊಳಿಸಿರುವುದನ್ನು ವಿರೋಧಿಸಿ ಹಾಗು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಯುವ ಕಾಂಗ್ರೆಸ್ ತಾಲೂಕು ಘಟಕದ ವತಿಯಿಂದ ಶನಿವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.  
   ಭದ್ರಾವತಿ, ಮಾ. ೬: ಶಾಸಕ ಬಿ.ಕೆ ಸಂಗಮೇಶ್ವರನ್ನು ವಿಧಾನಸಭೆ ಕಲಾಪದಿಂದ ಅಮಾನತ್ತುಗೊಳಿಸಿರುವುದನ್ನು ವಿರೋಧಿಸಿ ಹಾಗು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಯುವ ಕಾಂಗ್ರೆಸ್ ತಾಲೂಕು ಘಟಕದ ವತಿಯಿಂದ ಶನಿವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.  
    ಕಳೆದ ೨ ದಿನಗಳಿಂದ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಹಾಗು ಬಿಜೆಪಿ ಪಕ್ಷದವರು ಆಡಳಿತವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ವಿಚಾರಗಳ ಬಗ್ಗೆ ತಮ್ಮ ಅಳಲನ್ನು ತೋರ್ಪಡಿಸಿಕೊಳ್ಳುವ ಉದ್ದೇಶದಿಂದ ಸದನದ ಭಾವಿಗಿಳಿದು ಅಂಗಿ ಕಳಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಕಾರಣ ಕಲಾಪದಿಂದ ಸುಮಾರು ಒಂದು ವಾರ ಕಾಲ ಶಾಸಕರನ್ನು ಅಮಾನತ್ತುಗೊಳಿಸಿರುವುದು ಸರಿಯಾದ ಕ್ರಮವಲ್ಲ. ಇದನ್ನು ಯುವ ಘಟಕ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
    ನಗರದಲ್ಲಿ ಇತ್ತೀಚೆಗೆ ನಡೆದ ಕಬಡ್ದಿಪಂದ್ಯಾವಳಿ ವೇಳೆ ಬಿಜೆಪಿ ಹಾಗು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಗಲಭೆಯಲ್ಲಿ ಗೂಂಡಗಳಂತೆ ವರ್ತಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಧರ್ಮದ ಹೆಸರಿನಲ್ಲಿ ಘೋಷಣೆ ಕೂಗಿ ಕೋಮುಗಲಭೆ ಸೃಷ್ಟಿಸುವ   ವಾತಾವರಣದ ವಿರುದ್ದ ಧ್ವನಿಯೆತ್ತಿದ ಶಾಸಕರು ಹಾಗು ಕುಟುಂಬ ವರ್ಗದವರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡು ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಯಿತು.
     ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದ್ದು, ತಕ್ಷಣ ರಾಜ್ಯಪಾಲರು ಮಧ್ಯಪ್ರವೇಶಿಸಿ ಪ್ರಜಾಪ್ರಭುತ್ವದ ಆಶಯ ಎತ್ತಿ ಹಿಡಿಯಬೇಕು. ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆಗೆ ಆಗ್ರಹಿಸಬೇಕು. ವಿಧಾನಸಭಾಧ್ಯಕ್ಷರ ಅಮಾನತ್ತು ಆದೇಶವನ್ನು ರದ್ದುಪಡಿಸಬೇಕೆಂದು ಒತ್ತಾಯಿಸಲಾಯಿತು.
      ಯುವ ಕಾಂಗ್ರೆಸ್ ನಗರ ಅಧ್ಯಕ್ಷ ಜಿ. ವಿನೋದ್ ಕುಮಾರ್, ಗ್ರಾಮಾಂತರ ಅಧ್ಯಕ್ಷ ಅಫ್ತಾಬ್ ಅಹ್ಮದ್, ಪ್ರಧಾನ ಕಾರ್ಯದರ್ಶಿಗಳಾದ ಎ.ಪಿ ಗಣೇಶ್, ಕೇಶವ್, ವರುಣ್, ಶಿವು, ಯೋಗೀಶ್, ಶಿವರಾಜ್, ಫಯಾಜ್, ಬಾಷಾ, ಇರ್ಫಾನ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರುಗಳು ಪಾಲ್ಗೊಂಡಿದ್ದರು.