Wednesday, March 17, 2021

ಬೆಲೆ ನಿಯಂತ್ರಣ, ಕೃಷಿ ಕಾಯ್ದೆ ರದ್ದು, ಕನಿಷ್ಠ ಬೆಂಬಲ ಬೆಲೆಗೆ ಎಎಪಿ ಆಗ್ರಹ : ತಹಸೀಲ್ದಾರ್‌ಗೆ ಮನವಿ

ಹೆಚ್ಚುತ್ತಿರುವ ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಬೆಲೆ ನಿಯಂತ್ರಣ ಹಾಗು ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವ ಮತ್ತು ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಖಾತ್ರಿ ನೀಡುವ ಸಂಬಂಧ ಬುಧವಾರ ಭದ್ರಾವತಿಯಲ್ಲಿ ಆಮ್ ಆದ್ಮಿ ಪಾರ್ಟಿ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
     ಭದ್ರಾವತಿ, ಮಾ. ೧೭: ಹೆಚ್ಚುತ್ತಿರುವ ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಬೆಲೆ ನಿಯಂತ್ರಣ ಹಾಗು ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವ ಮತ್ತು ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಖಾತ್ರಿ ನೀಡುವ ಸಂಬಂಧ ಬುಧವಾರ ಆಮ್ ಆದ್ಮಿ ಪಾರ್ಟಿ ವತಿಯಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
    ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರಿಂದಾಗಿ ಶ್ರೀಸಾಮಾನ್ಯರ ಬದುಕು ಸಂಕಷ್ಟಕ್ಕೆ ಒಳಗಾಗಿದೆ. ಕೇಂದ್ರ ಸರ್ಕಾರದ ರೈತ ವಿರೋಧಿ ೩ ಕಾಯ್ದೆಗಳು ರೈತರಿಗೆ ಮಾರಕವಾಗಿದ್ದು, ಕೃಷಿ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ, ಬಂಡವಾಳಶಾಹಿಗಳ ಕೈಗೊಪ್ಪಿಸುವ ಹುನ್ನಾರ ನಡೆಸಲಾಗುತ್ತಿದೆ. ಅಲ್ಲದೆ ಸಾರ್ವಜನಿಕ ಉದ್ಯಮಗಳನ್ನು ಸಹ ಖಾಸಗೀಕರಣಗೊಳಿಸಲಾಗುತ್ತಿದೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಹ ಸಿಗುತ್ತಿಲ್ಲ ಎಂದು ಆರೋಪಿಸಲಾಯಿತು.
    ತಕ್ಷಣ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ರದ್ದುಕೊಳ್ಳಬೇಕು. ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ಕೈಬಿಡಬೇಕು ಹಾಗು ರೈತರಿಗೆ ಕನಿಷ್ಠ ಬೆಂಬಲ ಬೆಲೆ ದೊರೆಯಬೇಕೆಂದು ಆಗ್ರಹಿಸಲಾಯಿತು.
    ಆಮ್ ಆದ್ಮಿ ಪಾರ್ಟಿ ತಾಲೂಕು ಅಧ್ಯಕ್ಷ ಡಿ.ಎಂ ಚಂದ್ರಪ್ಪ, ಜಿಲ್ಲಾಧ್ಯಕ್ಷೆ ಸುನಿತಾಸಿಂಗ್, ತಾಲೂಕು ಉಪಾಧ್ಯಕ್ಷರಾದ ಮುಳ್ಕೆರೆ ಲೋಕೇಶ್, ಎನ್.ಪಿ ಜೋಸೆಫ್, ಪ್ರಧಾನ ಕಾರ್ಯದರ್ಶಿ ವಿನೋದ್, ಸಹ ಕಾರ್ಯದರ್ಶಿ ಪ್ರದೀಪ್, ಮಹಿಳಾ ಘಟಕದ ಅಧ್ಯಕ್ಷೆ ಕಾಂತ ದಿನೇಶ್, ಉಪಾಧ್ಯಕ್ಷೆ ನಿಸೀಬಾ ಬೇಗಂ ಹಾಗು ಕಾರ್ಯದರ್ಶಿ ಮೇರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಾ.೨೦ರಂದು ಜಮಾಬಂಧಿ ಕಾರ್ಯಕ್ರಮ

    ಭದ್ರಾವತಿ, ಮಾ. ೧೭: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಾ. ೨೦ರಂದು ಬೆಳಿಗ್ಗೆ ೧೧ ಗಂಟೆಗೆ ಜಮಾಬಂಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
   ತಾಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಪಂಚಾಯಿತಿ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಮಹೇಶ್ವರಪ್ಪ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸದಸ್ಯರು ತಪ್ಪದೇ ಪಾಲ್ಗೊಳ್ಳುವಂತೆ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ ಕೋರಿದ್ದಾರೆ.

ಮಾ.೧೯ರಂದು ನಗರಸಭೆ ಮುಂಭಾಗ ಅಸಹಕಾರ ಚಳುವಳಿ

ಭದ್ರಾವತಿ, ಮಾ. ೧೭: ನಗರಸಭೆ ವ್ಯಾಪ್ತಿಯ ಕೊಳಚೆ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಂಪರ್ಕಕ್ಕೆ ಹೆಚ್ಚಿನ ಠೇವಣಿ ವಿಧಿಸಿರುವುದನ್ನು ಹಾಗು ನೀರಿನ ಬಿಲ್ ಮೀಟರ್ ಲೆಕ್ಕದಲ್ಲಿ ಪಾವತಿಸಲು ಆದೇಶಿಸಿರುವುದನ್ನು ವಿರೋಧಿಸಿ ಕರ್ನಾಟಕ ಜನಸೈನ್ಯ ವತಿಯಿಂದ ಮಾ.೧೯ರಂದು ಬೆಳಿಗ್ಗೆ ೧೦ ಗಂಟೆಗೆ ನಗರಸಭೆ ಮುಂಭಾಗ ಅಸಹಕಾರ ಚಳುವಳಿ ಹಮ್ಮಿಕೊಳ್ಳಲಾಗಿದೆ.
   ಪ್ರಸ್ತುತ ನಗರದಲ್ಲಿ ವಿಐಎಸ್‌ಎಲ್  ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಕಾರ್ಮಿಕರು ಉದ್ಯೋಗವಿಲ್ಲದೆ ಬೀದಿ ಪಾಲಾಗಿದ್ದು, ಅಲ್ಲದೆ ಕೋವಿಡ್-೧೯ರ ಪರಿಣಾಮ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕುಡಿಯುವ ನೀರಿನ ನಲ್ಲಿ ಸಂಪರ್ಕಕ್ಕೆ ೨೬೦೦ ರು. ಠೇವಣಿ ವಿಧಿಸಿ, ನೀರಿನ ಬಿಲ್ ಮೀಟರ್ ಲೆಕ್ಕದಲ್ಲಿ ಪಾವತಿಸಲು ಆದೇಶಿರುವುದು ಸರಿಯಲ್ಲ. ಕುಡಿಯುವ ನೀರಿಗೆ ಹಣ ಕೇಳುವುದು ಸರಿಯಲ್ಲ. ಉಚಿತವಾಗಿ ಕುಡಿಯುವ ನೀರು ಒದಗಿಸಬೇಕು. ಈ ಹಿನ್ನಲೆಯಲ್ಲಿಈಗಾಗಲೇ ಹಣ ಪಾವತಿಸಿರುವವರಿಗೆ ಹಣ ಹಿಂದಿರುಗಿಸುವುದು. ಆದೇಶವನ್ನು ತಕ್ಷಣ ರದ್ದುಪಡಿಸಬೇಕೆಂದು ಆಗ್ರಹಿಸಿ ಅಸಹಕಾರ ಚಳುವಳಿ ಹಮ್ಮಿಕೊಳ್ಳಲಾಗಿದೆ. ಕೊಚಚೆ ಪ್ರದೇಶದ ನಿವಾಶಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.  

Tuesday, March 16, 2021

ರಾಜ್ಯಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಬಿ.ವೈ ವಿಜಯೇಂದ್ರ

ಎಂಎಸ್‌ಎಂಇ ಪ್ರೊಮೋಷನಲ್ ಕೌನ್ಸಿಲ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಸಿ ರಮೇಶ್ ಅಭಿನಂದನೆ

ಕಬಡ್ಡಿ ಪಂದ್ಯಾವಳಿ ವೇಳೆ ಹಲ್ಲೆಗೊಳ್ಳಲಾಗಿದ್ದ ಬಿಜೆಪಿ ಪಕ್ಷದ ಸ್ಥಳೀಯ ಮುಖಂಡರು ಹಾಗು ಕಾರ್ಯಕರ್ತರನ್ನು ಭೇಟಿ ಮಾಡಿ ಧೈರ್ಯ ತುಂಬಲು ಸೋಮವಾರ ಭದ್ರಾವತಿ ನಗರಕ್ಕೆ ಆಗಮಿಸಿದ್ದ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರರನ್ನು ಎಂಎಸ್‌ಎಂಇ ಪ್ರೊಮೋಷನಲ್ ಕೌನ್ಸಿಲ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಸಿ ರಮೇಶ್ ಅಭಿನಂದಿಸಿದರು.
   ಭದ್ರಾವತಿ, ಮಾ. ೧೬: ನಗರದಲ್ಲಿ ಕಬಡ್ಡಿ ಪಂದ್ಯಾವಳಿ ವೇಳೆ ಹಲ್ಲೆಗೊಳ್ಳಲಾಗಿದ್ದ ಬಿಜೆಪಿ ಪಕ್ಷದ ಸ್ಥಳೀಯ ಮುಖಂಡರು ಹಾಗು ಕಾರ್ಯಕರ್ತರನ್ನು ಭೇಟಿ ಮಾಡಿ ಧೈರ್ಯ ತುಂಬಲು ಸೋಮವಾರ ನಗರಕ್ಕೆ ಆಗಮಿಸಿದ್ದ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರರನ್ನು ಎಂಎಸ್‌ಎಂಇ ಪ್ರೊಮೋಷನಲ್ ಕೌನ್ಸಿಲ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಸಿ ರಮೇಶ್ ಅಭಿನಂದಿಸಿದರು.
ರಾಜ್ಯಾದ್ಯಂತ ಸಂಚರಿಸಿ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಶ್ರಮವಹಿಸುತ್ತಿರುವ ವಿಜಯೇಂದ್ರರನ್ನು ಉದ್ಯಮಿ, ನಗರದ ನಿವಾಸಿ ಎಚ್.ಸಿ ರಮೇಶ್ ಅಭಿನಂದಿಸುವ ಜೊತೆಗೆ ಕ್ಷೇತ್ರದಲ್ಲಿ ಪಕ್ಷದ ಮುಖಂಡರು ಹಾಗು ಕಾರ್ಯಕರ್ತರ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ಮಂಡಲ ಅಧ್ಯಕ್ಷ ಎಂ ಪ್ರಭಾಕರ್, ಪ್ರಮುಖರಾದ ಮಂಗೋಟೆ ರುದ್ರೇಶ್, ಕೂಡ್ಲಿಗೆರೆ ಹಾಲೇಶ್, ವಿ. ಕದಿರೇಶ್, ಜಿ. ಆನಂದಕುಮಾರ್, ಕೆ. ಮಂಜುನಾಥ್, ಚನ್ನೇಶ್, ರಾಮನಾಥ್ ಬರ್ಗೆ, ಧನುಷ್ ಬೋಸ್ಲೆ, ನಾರಾಯಣಪ್ಪ ದೊಡ್ಮನೆ, ಎಂ.ಎಸ್ ಸುರೇಶಪ್ಪ, ಮಹಿಳಾ ಮೋರ್ಚಾ ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಇನ್ನಿತರರು ಉಪಸಿತರಿದ್ದರು.


ಪುರುಷರೊಂದಿಗೆ ಸಮಾನತೆ ಕಾಯ್ದುಕೊಂಡಾಗ ಮಾತ್ರ ಬದುಕು ಸಾರ್ಥಕ : ಡಾ. ಅನುರಾಧ ಪಟೇಲ್

ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಭದ್ರಾವತಿ ಅಪ್ಪರ್‌ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಉದ್ಘಾಟಿಸಿದರು.
   ಭದ್ರಾವತಿ, ಮಾ. ೧೬: ಮಹಿಳೆಯರು ತಮ್ಮಲ್ಲಿ ಅಡಗಿರುವ ಅದ್ಭುತವಾದ ಶಕ್ತಿಗಳಿಂದ ಜಾಗೃತಗೊಂಡು ಪುರುಷರೊಂದಿಗೆ ಸಮಾನತೆ ಕಾಯ್ದುಕೊಂಡಾಗ ಮಾತ್ರ ಬದುಕು ಸಾರ್ಥಕಗೊಳ್ಳುತ್ತದೆ ಎಂದು ನಗರದ ಚುಂಚಾದ್ರಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಡಾ. ಅನುರಾಧ ಪಟೇಲ್ ಹೇಳಿದರು.
   ಅವರು ಮಂಗಳವಾರ ವೇದಿಕೆ ವತಿಯಿಂದ ಅಪ್ಪರ್‌ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
    ಮಹಿಳೆ ಶಕ್ತಿ ಸ್ವರೂಣಿಯಾಗಿದ್ದು, ಸಂಸ್ಕೃತಿ, ಸಂಸ್ಕಾರಗಳೊಂದಿಗೆ ಕ್ರಿಯಾಶೀಲತೆ, ಸಮಾಜದೊಂದಿಗೆ ಸಾಮಾಜಿಕ ಬದ್ದತೆ, ಜವಾಬ್ದಾರಿ ಹಾಗು ಕುಟುಂಬ ನಿರ್ವಹಣೆಯಲ್ಲಿ ಅದ್ಬುತವಾದ ಶಕ್ತಿ ಕಾಯ್ದುಕೊಂಡಿದ್ದಾಳೆ. ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆಯಲ್ಲಿದ್ದರೂ ಸಹ ಇವುಗಳಿಂದ ಜಾಗೃತಗೊಳ್ಳಬೇಕು. ಮಹಿಳೆಯರ ಪ್ರತಿಯೊಂದು ಶ್ರಮದ ಹಿಂದೆ ಪುರುಷರು ಸಹ ಕಾರಣಕರ್ತರು ಎಂಬುದನ್ನು ಮರೆಯಬಾರದು ಎಂದರು.
   ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್, ಜಿ.ಪಂ. ಮಾಜಿ ಸದಸ್ಯ ಎಸ್. ಕುಮಾರ್ ಮಾತನಾಡಿದರು. ಶ್ರೀಕ್ಷೇತ್ರ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
     ನಗರಸಭಾ ಸದಸ್ಯ ಎಂ.ಎ ಅಜಿತ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ, ಉತ್ತರ ಕನ್ನಡ ಅಂಕೋಲ ಜಾನಪದ ಕೋಗಿಲೆ ಪದ್ಮಶ್ರೀ ಸುಕ್ರಿ ಬೊಮ್ಮನಗೌಡ ಹಾಗು ತುಳಸಿ ಗೌಡ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು.
   ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ನೆರವೇರಿತು. ವೇದಿಕೆ ಕಾರ್ಯಕ್ರಮದ ನಂತರ ಬೆಂಗಳೂರಿನ ಗಾನ ಸೌರಭ ಯಕ್ಷಗಾನ ಶಾಲಾ ತಂಡದಿಂದ ಡಾ. ಶಿವಕುಮಾರ್ ಬೇಗಾರ್ ನಿರ್ದೇಶನದ ಮೋಹಿನಿ ಭಸ್ಮಾಸುರ ಪ್ರಸಂಗ ಯಕ್ಷಗಾನ ಪ್ರದರ್ಶನ ನಡೆಯಿತು.

Monday, March 15, 2021

ಭೂ ಸೇನೆಗೆ ಉಚಿತ ದೈಹಿಕ, ಲಿಖಿತ ಪರೀಕ್ಷೆ ತರಬೇತಿ ಮುಕ್ತಾಯ

ಪೊಲೀಸ್ ಉಮೇಶ್ ನೇತೃತ್ವದಲ್ಲಿ ಯುವಕರಿಂದ ಗುರುವಂದನೆ

ಭದ್ರಾವತಿಯಲ್ಲಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಭಾರತೀಯ ಭೂ ಸೇನೆಗೆ ಸೇರಲು ಉಚಿತ ದೈಹಿಕ ಹಾಗು ಲಿಖಿತ ಪರೀಕ್ಷೆ ತರಬೇತಿ ನೀಡಲಾಗುತ್ತಿದ್ದು, ಸೋಮವಾರ ತರಬೇತಿ ಪಡೆದ ಯುವಕರು ಗುರುವಂದನೆ ಮೂಲಕ ತರಬೇತಿದಾರರಿಗೆ ಹಾಗು ಆಯೋಜಕರಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದರು.
    ಭದ್ರಾವತಿ, ಮಾ. ೧೫: ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಭಾರತೀಯ ಭೂ ಸೇನೆಗೆ ಸೇರಲು ಉಚಿತ ದೈಹಿಕ ಹಾಗು ಲಿಖಿತ ಪರೀಕ್ಷೆ ತರಬೇತಿ ನೀಡಲಾಗುತ್ತಿದ್ದು, ಸೋಮವಾರ ತರಬೇತಿ ಪಡೆದ ಯುವಕರು ಗುರುವಂದನೆ ಸಲ್ಲಿಸುವ ಮೂಲಕ ವಿಶೇಷವಾಗಿ ಗಮನ ಸೆಳೆದರು.
 ಹಲವಾರು ವರ್ಷಗಳಿಂದ ಮಾಜಿ ಸೈನಿಕರ ಸಂಘದ ವತಿಯಿಂದ ಉಚಿತ ತರಬೇತಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಸಹ ನಗರದ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ತರಬೇತಿ ನಡೆಯಿತು. ನಗರ ಹಾಗು ಗ್ರಾಮಾಂತರ ಭಾಗದ ಸುಮಾರು ೪೨ ಯುವಕರು ಪ್ರತಿದಿನ ಬೆಳಿಗ್ಗೆ ತರಬೇತಿಯಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಂಡರು.
    ತರಬೇತಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಬಿ.ಎಚ್ ರಸ್ತೆ ಶ್ರೀ ಭದ್ರೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತರಬೇತಿ ನೀಡಿದ ತರಬೇತುದಾರರಿಗೆ ಹಾಗು ಆಯೋಜಕರಿಗೆ ವಿಶೇಷವಾಗಿ ಗುರುವಂದನೆ ಮೂಲಕ ಕೃತಜ್ಞತೆ ಸಲ್ಲಿಸಿದರು.
   ಈ ಸಂದರ್ಭದಲ್ಲಿ ತರಬೇತಿ ಪಡೆದ ಯುವಕರು ಮಾತನಾಡಿ, ಭೂ ಸೇನೆಗೆ ಸೇರಲು ತರಬೇತಿ ಪಡೆಯಲು ದೂರದ ಊರುಗಳಿಗೆ ತೆರಳಬೇಕಾಗುತ್ತದೆ. ಅಲ್ಲದೆ ಸಾಕಷ್ಟು ಹಣ ಖರ್ಚಾಗುತ್ತದೆ. ಇಲ್ಲಿಯೇ ಉಚಿತ ತರಬೇತಿ ನೀಡುತ್ತಿರುವುದರಿಂದ  ಹೆಚ್ಚಿನ ಅನುಕೂಲವಾಗಿದೆ. ಅಲ್ಲದೆ ತರಬೇತಿ ಅವಧಿಯಲ್ಲಿ ತರಬೇತಿದಾರರು ಹಾಗು ಆಯೋಜಕರ ಹೆಚ್ಚಿನ ಕಾಳಜಿ ಹಾಗು ಶ್ರಮ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
   ಈ ಬಾರಿ ತರಬೇತಿ ಯಶಸ್ವಿಗೆ ಹೆಚ್ಚಿನ ಸಹಕಾರ ನೀಡುವ ಮೂಲಕ ಯುವಕರಿಗೆ ಸ್ಪೂರ್ತಿದಾಯಕರಾಗಿರುವ ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್ ಮಾತನಾಡಿ, ಯುವಕರು ತಮ್ಮ ಗುರಿ ತಲುಪಿದಾಗ ಮಾತ್ರ ತರಬೇತಿ ಸಾರ್ಥಕಗೊಳ್ಳುತ್ತದೆ. ಸೇನಾ ರ್‍ಯಾಲಿಯಲ್ಲಿ ಆಯ್ಕೆಯಾಗುವ ಮೂಲಕ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವಂತಾಗಬೇಕು. ಇದು ನಮ್ಮ ಆಶಯವಾಗಿದ್ದು, ಮುಂದಿನ ದಿನಗಳಲ್ಲಿ ತರಬೇತಿಗೆ ಇನ್ನೂ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
   ಸಂಘದ ಅಧ್ಯಕ್ಷ ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವೆಂಕಟಗಿರಿ, ಬೋರೇಗೌಡ, ಅಹಮದ್, ಗೋವಿಂದಪ್ಪ, ಹಿರಿಯ ನಗರಸಭಾ ಸದಸ್ಯ ಕೆ.ಎನ್ ಭೈರಪ್ಪಗೌಡ, ಮಾಜಿ ಸೈನಿಕರ ಸಂಘ ಹಾಗು ಸ್ನೇಹಿ ಜೀವಿ ಬಳಗದ ಪ್ರಮುಖರು ಉಪಸ್ಥಿತರಿದ್ದರು.

ಮಾ.೧೬ರಂದು ಮಹಿಳಾ ದಿನಾಚರಣೆ ಅಂಗವಾಗಿ ಯಕ್ಷಗಾನ ಪ್ರದರ್ಶನ

    ಭದ್ರಾವತಿ, ಮಾ. ೧೫: ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಮಾ.೧೬ರಂದು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಅಪ್ಪರ್‌ಹುತ್ತಾ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮದಲ್ಲಿ ಬೆಂಗಳೂರಿನ ಗಾನ ಸೌರಭ ಯಕ್ಷಗಾನ ಶಾಲಾ ತಂಡದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
    ಡಾ. ಶಿವಕುಮಾರ್ ಬೇಗಾರ್ ನಿರ್ದೇಶನದ ಮೋಹಿನಿ ಭಸ್ಮಾಸುರ ಪ್ರಸಂಗ ನಡೆಯಲಿದ್ದು, ಅಲ್ಲದೆ ಸಾಧಕರಿಗೆ ಸನ್ಮಾನ, ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಲಿವೆ. ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಉತ್ತರ ಕನ್ನಡ ಅಂಕೋಲ ಜಾನಪದ ಕೋಗಿಲೆ ಪದ್ಮಶ್ರೀ ಸುಕ್ರಿ ಬೊಮ್ಮನಗೌಡ ಹಾಗು ಜಾನಪದ ಕಲಾವಿದ ತುಳಸಿಗೌಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ.