Saturday, March 20, 2021

೧೮ ವರ್ಷ ಸೇವೆ ಸಲ್ಲಿಸಿ ಮರಳಿ ಬಂದ ವೀರ ಯೋಧನಿಗೆ ಅಭಿನಂದನೆ

ಹೆಬ್ಬಂಡಿ ತಾಂಡಾ ಎಚ್.ಪಿ ಮೋಹನ್ ಮೇಘಾಲಯ, ಜಮ್ಮು-ಕಾಶ್ಮೀರ, ಚೀನಾ ಗಡಿಯಲ್ಲಿ ಕರ್ತವ್ಯ


ಭಾರತೀಯ ಸೇನೆಯಲ್ಲಿ ಸುಮಾರು ೧೮ ವರ್ಷ ಸೇವೆ ಸಲ್ಲಿಸಿ ಹಿಂದಿರುಗಿದ ಭದ್ರಾವತಿ ತಾಲೂಕಿನ ಹೆಬ್ಬಂಡಿ ತಾಂಡಾದ ನಿವಾಸಿ, ವೀರಯೋಧ ಎಚ್.ಪಿ ಮೋಹನ್‌ರನ್ನು ಅಭಿನಂದಿಸಲಾಯಿತು.
    ಭದ್ರಾವತಿ, ಮಾ. ೨೦: ಭಾರತೀಯ ಸೇನೆಯಲ್ಲಿ ಸುಮಾರು ೧೮ ವರ್ಷ ಸೇವೆ ಸಲ್ಲಿಸಿ ಹಿಂದಿರುಗಿದ ತಾಲೂಕಿನ ಹೆಬ್ಬಂಡಿ ತಾಂಡಾದ ನಿವಾಸಿ, ವೀರಯೋಧ ಎಚ್.ಪಿ ಮೋಹನ್‌ರನ್ನು ಅಭಿನಂದಿಸಲಾಯಿತು.
    ತಾಂಡಾದ ದಿವಂಗತ ಪೀಕ್ಯಾನಾಯ್ಕ, ರುಕ್ಮಿಣಿ ಬಾಯಿರವರ ಪುತ್ರರಾಗಿರುವ ಎಚ್.ಪಿ ಮೋಹನ್ ೨೦೦೨-೦೩ರಲ್ಲಿ ಭಾರತೀಯ ಸೇನೆಗೆ ಸೇವೆಗೆ ಸೇರಿದ್ದು, ಮೇಘಾಲಯ, ಜಮ್ಮು-ಕಾಶ್ಮೀರ ಹಾಗು ಚೀನಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸಿ ಮರಳಿದ್ದಾರೆ.
   ಎಚ್.ಪಿ ಮೋಹನ್ ಮರಳಿ ಬಂದ ಹಿನ್ನಲೆಯಲ್ಲಿ ತಾಂಡಾದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕುಟುಂಬಸ್ಥರು, ತಾಂಡಾ ನಿವಾಸಿಗಳು ಸಿಹಿ ಹಂಚಿ ಸಂಭ್ರಮಿಸಿದರು.
ಮುಖ್ಯ ಶಿಕ್ಷಕರಾದ ಹನುಮಂತನಾಯ್ಕ, ಎಸ್. ಕೂಬಾನಾಯ್ಕ, ಜಮೀನ್ದಾರ್ ಪ್ರೇಮ್‌ಕುಮಾರ್, ಆನಂದನಾಯ್ಕ, ಎಂ.ಎಸ್ ನಾಯ್ಕ, ಕೇಶವಮೂರ್ತಿ ಮತ್ತು ಪಿ. ಧನಂಜಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತ್ರಿಕೋನಾಸನ ಯೋಗ ಸ್ಪರ್ಧೆಯಲ್ಲಿ ಡಿ. ನಾಗರಾಜ್ ಯೂನಿವರ್ಸಲ್ ರೆಕಾರ್ಡ್

ಭದ್ರಾವತಿ, ಮಾ. ೨೦: ನಗರದ ವಿವೇಕಾನಂದ ಯೋಗ ಟ್ರಸ್ಟ್ ಅಧ್ಯಕ್ಷ, ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್ ೩ ನಿಮಿಷಗಳ ತ್ರಿಕೋನಾಸನ ಯೋಗ ಸ್ಪರ್ಧೆಯಲ್ಲಿ ಯೂನಿವರ್ಸಲ್ ರೆಕಾರ್ಡ್‌ಗೆ ಪಾತ್ರರಾಗಿದ್ದಾರೆ.
   ಭದ್ರಾವತಿ, ಮಾ. ೨೦: ನಗರದ ವಿವೇಕಾನಂದ ಯೋಗ ಟ್ರಸ್ಟ್ ಅಧ್ಯಕ್ಷ, ಅಂತರಾಷ್ಟ್ರೀಯ ಯೋಗಪಟು ಡಿ. ನಾಗರಾಜ್ ೩ ನಿಮಿಷಗಳ ತ್ರಿಕೋನಾಸನ ಯೋಗ ಸ್ಪರ್ಧೆಯಲ್ಲಿ ಯೂನಿವರ್ಸಲ್ ರೆಕಾರ್ಡ್‌ಗೆ ಪಾತ್ರರಾಗಿದ್ದಾರೆ.
   ಶಿವಮೊಗ್ಗ ಕೋಟೆ ರಸ್ತೆಯಲ್ಲಿರುವ ವಾಸವಿ ಪಬ್ಲಿಕ್ ಶಾಲೆಯಲ್ಲಿ ವರ್ಷಿಣಿ ಯೋಗ ಶಿಕ್ಷಣ ಸಂಸ್ಥೆ ಮತ್ತು ಸಾಂಸ್ಕೃತಿಕ ಕ್ರೀಡಾ ಟ್ರಸ್ಟ್ ಹಾಗು ಜೈ ಭೀಮ್ ಕನ್ನಡ ಸೈನ್ಯ ರಕ್ಷಣಾವೇದಿಕೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಈ ಸಾಧನೆಗೆ ಪಾತ್ರರಾಗಿದ್ದು, ಈಗಾಗಲೇ ನಾಗರಾಜ್‌ರವರು ಹಲವಾರು ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
   ವರ್ಷಿಣಿ ಯೋಗಕೇಂದ್ರದ ಅಧ್ಯಕ್ಷ ಪಿ. ಪೆಂಚಾಲಯ್ಯ, ಕಾರ್ಯದರ್ಶಿ ವೆಂಕಟೇಶ್, ಯೋಗ ತೀರ್ಪುಗಾರರಾದ ಮುದ್ದುಕೃಷ್ಣ, ಗೋಪಾಲ್‌ರಾಜ್, ಪುರಶುರಾಮ್ ಹಾಗು ಡಾ. ನಿಂಗೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಸುಮಾರು ೧೩೫ಕ್ಕೂ ಹೆಚ್ಚು ಯೋಗಪಟುಗಳು ಭಾಗವಹಿಸಿದ್ದರು.

ತಂಬಾಕು ಉತ್ಪನ್ನಗಳ ಮಾರಾಟ ಕಾಯ್ದೆ ಉಲ್ಲಂಘನೆ : ೧೩೫೦ ರು. ದಂಡ

ಭದ್ರಾವತಿಯಲ್ಲಿ ಕಾಯ್ದೆ ಉಲ್ಲಂಘಿಸಿ ಅಕ್ರಮವಾಗಿ ತಂಬಾಕು ಉತ್ಪನ್ನಗಳ ಮಾರಾಟದಲ್ಲಿ ತೊಡಗಿರುವ ಅಂಗಡಿಮುಂಗಟ್ಟುಗಳ ಮೇಲೆ ಶನಿವಾರ ದಾಳಿ ನಡೆಸಿ ಸುಮಾರು ೧೩೫೦ ರು. ದಂಡ ವಸೂಲಾತಿ ಮಾಡಿರುವ ಘಟನೆ ನಡೆದಿದೆ.
     ಭದ್ರಾವತಿ, ಮಾ. ೨೦: ಕಾಯ್ದೆ ಉಲ್ಲಂಘಿಸಿ ಅಕ್ರಮವಾಗಿ ತಂಬಾಕು ಉತ್ಪನ್ನಗಳ ಮಾರಾಟದಲ್ಲಿ ತೊಡಗಿರುವ ಅಂಗಡಿಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಸುಮಾರು ೧೩೫೦ ರು. ದಂಡ ವಸೂಲಾತಿ ಮಾಡಿರುವ ಘಟನೆ ಶನಿವಾರ ನಡೆದಿದೆ.
     ಶಿವಮೊಗ್ಗ ಜಿಲ್ಲಾ ತಂಬಾಕು ಕೋಶ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮತ್ತು ಪೊಲೀಸ್ ಇಲಾಖೆ ವತಿಯಿಂದ  ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಸಮೀಪ ಅಂಗಡಿಮುಂಗಟ್ಟುಗಳ ಮೇಲೆ ದಾಳಿ ನಡೆಸಲಾಯಿತು.
     ಕಾರ್ಯಾಚರಣೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಎಂ.ವಿ ಅಶೋಕ್, ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ರಾಜೇಗೌಡ, ತಾಲೂಕು ಹಿರಿಯ ಸಹಾಯಕ ಆನಂದಮೂರ್ತಿ, ಕಿರಿಯ ಆರೋಗ್ಯ ಸಹಾಯಕ ಹರೀಶ್, ಜಿಲ್ಲಾ ತಂಬಾಕು ಕೋಶದ ಹೇಮಂತ್ ರಾಜ್, ರವಿರಾಜ್ ಹಾಗು ಪೊಲೀಸ್ ಠಾಣಾಧಿಕಾರಿ ಅನ್ನಪೂರ್ಣ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಧರ್ಮ ವಿರೋಧಿ ಆರೋಪ

ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಸ್ಥಾನದಿಂದ ಉಚ್ಛಾಟನೆ

ಸಿ.ಎಂ ಖಾದರ್
    ಭದ್ರಾವತಿ, ಮಾ. ೨೦: ಸ್ವ ಧರ್ಮೀಯ ಕೆಲವರು ನನ್ನ ವಿರುದ್ಧ ವಿನಾಕಾರಣ ಧರ್ಮ ವಿರೋಧಿ ಆರೋಪದೊಂದಿಗೆ ತೇಜೋವಧೆ ಮಾಡುವ ಜೊತೆಗೆ ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಸ್ಥಾನದಿಂದ ಉಚ್ಛಾಟನೆಗೊಳಿಸಿದ್ದು, ಕುತಂತ್ರ ನಡೆಸುತ್ತಿರುವವರ ವಿರುದ್ಧ ಕಾನೂನು ಕೈಗೊಳ್ಳಬೇಕೆಂದು ಸಿ.ಎಂ ಖಾದರ್ ಆಗ್ರಹಿಸಿದರು.
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷನಾಗಿದ್ದು, ಅಲ್ಲದೆ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷರಾಗಿ ಸಹ ಸೇವೆ ಸಲ್ಲಿಸುತ್ತಿದ್ದೇನೆ. ಎಲ್ಲಾ ಧರ್ಮಗಳನ್ನು ಪ್ರೀತಿಸುವ, ಗೌರವಿಸುವ ಮನೋಭಾವ ನಮ್ಮದಾಗಿದೆ. ಸಂವಿಧಾನ ಸಹ ಈ ನಿಟ್ಟಿನಲ್ಲಿ ನಮಗೆ ಹಕ್ಕನ್ನು ನೀಡಿದೆ. ಅಲ್ಲದೆ ಪವಿತ್ರ ಕುರಾನ್ ಧರ್ಮಗ್ರಂಥದಲ್ಲೂ ಉಲ್ಲೇಖಿಸಲಾಗಿದೆ.  ಈಗಿರುವಾಗ ಇತ್ತೀಚಿಗೆ ಶಿವಮೊಗ್ಗದಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಜನಾಕ್ರೋಶ ಸಭೆಯ ಮೆರವಣಿಗೆಯಲ್ಲಿ ನಾನು ಘೋಷಣೆಗಳನ್ನು ಕೂಗುವಾಗ ಜೈ ಶ್ರೀರಾಮ್ ಘೋಷಣೆ ಸಹ ಕೂಗಿದ್ದೇನೆ.  ಜೆಬಿಟಿ ಬಾಬು ಎಂಬುವರು ನಾನು ಜೈ ಶ್ರೀರಾಮ್ ಘೋಷಣೆ ಕೂಗುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ವಾಟ್ಸಫ್, ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಧರ್ಮ ವಿರೋಧಿ ಎಂದು ಅಪಪ್ರಚಾರ ನಡೆಸುವ ಮೂಲಕ ತೇಜೋವಧೆಗೆ ಮುಂದಾಗಿದ್ದಾರೆ. ಈ ವಿಚಾರ ಸಹ ಧರ್ಮಗುರುಗಳ ಗಮನಕ್ಕೆ ತರಲಾಗಿದೆ. ಧರ್ಮ ಗುರುಗಳು ಸಹ ಈ ವಿಚಾರವನ್ನು ದೊಡ್ಡದಾಗಿ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಆದರೂ ಸಹ ನನ್ನನ್ನು ತೇಜೋವಧೆ ಮಾಡಲು ಮುಂದಾಗುತ್ತಿದ್ದಾರೆ. ಇದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದರು.
    ನನ್ನ ಏಳಿಗೆಯನ್ನು ಸಹಿಸದ ಸ್ವಯಂ ಘೋಷಿತ ಮುಖಂಡರಾದ ಜೆಬಿಟಿ ಬಾಬು, ನಗರಸಭಾ ಸದಸ್ಯರಾದ ಟಿಪ್ಪುಸುಲ್ತಾನ್, ಮುರ್ತುಜಾಖಾನ್, ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ಮಾಜಿ ಅಧ್ಯಕ್ಷರಾದ ಫೀರ್‌ಷರೀಫ್, ಬಾಬಾಜಾನ್, ಬೊಮ್ಮನಕಟ್ಟೆ ನಿವಾಸಿ ಮಸ್ತಾನ್, ಬ್ರೋಕರ್ ಖಾದರ್, ಭೂತನಗುಡಿ ನಿವಾಸಿ ಜಾವಿದ್ ಸೇರಿದಂತೆ ಇನ್ನಿತರರು ನನನ್ನು ಅಂಜುಮಾನ್ ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಸ್ಥಾನ ಕೆಳಗಿಳಿಸಲು ಹಲವಾರು ತಿಂಗಳುಗಳಿಂದ ಹುನ್ನಾರ ನಡೆಸುತ್ತಿದ್ದು, ಈ ಹಿಂದೆ ಸಹ ಇದೆ ರೀತಿ ಹುನ್ನಾರ ನಡೆಸಿದ್ದರು. ಇದೀಗ ಜೈಶ್ರೀರಾಮ್ ಘೊಷಣೆಯನ್ನು ನೆಪವಾಗಿಟ್ಟುಕೊಂಡು ಅಧಿಕಾರದಿಂದ ಕೆಳಗಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.
    ಈಗಾಗಲೇ ಈ ಸಂಬಂಧ ಹಳೇನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪೊಲೀಸರು ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ. ಈ ವಿಚಾರವನ್ನು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಗಳ ಗಮನಕ್ಕೂ ತರಲಾಗುವುದು. ನಾನು ಯಾವುದೇ ದ್ರೇಶದ್ರೋಹಿ ಅಥವಾ ಧರ್ಮ ವಿರೋಧಿ ಘೋಷಣೆಗಳನ್ನು ಕೂಗಿಲ್ಲ. ಇದನ್ನು ಈಗಲೂ ಸಮರ್ಥಿಸಿಕೊಳ್ಳಲು ಸಿದ್ದನಿದ್ದೇನೆ. ಈ ಕುರಿತು ನ್ಯಾಯಾಲಯದಲ್ಲೂ ಪ್ರಶ್ನಿಸಲಾಗುವುದು ಎಂದರು.

Friday, March 19, 2021

ಕಾಟಿಕ್ ಸಮುದಾಯ ಪರಿಶಿಷ್ಟ ಜಾತಿಗೆ ಸೇರಿಸಿ : ಸರ್ಕಾರಕ್ಕೆ ಮನವಿ

ಕಾಟಿಕ್ (ಕಲಾಲ್) ಜಾತಿಯನ್ನು ಪರಿಶಿಷ್ಟಜಾತಿಗೆ ಸೇರಿಸುವಂತೆ ಒತ್ತಾಯಿಸಿ ತಾಲೂಕು ಕಾಟಿಕ್ ಸಮಾಜದವರು ತಾಲೂಕು ಕಚೇರಿ  ಮಲ್ಲಿಕಾರ್ಜುನ್ ಅವರಿಗೆ ಮನವಿ ಸಲ್ಲಿಸಿದರು.
   ಭದ್ರಾವತಿ, ಮಾ. ೧೯: ಕಾಟಿಕ್(ಕಲಾಲ್) ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸಿ ತಾಲೂಕು ಕಾಟಿಕ್ ಸಮಾಜದ ವತಿಯಿಂದ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
   ಕಾಟಿಕ್ ಸಮುದಾಯದವರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಾಗಿದ್ದು, ೨೦೧೧-೧೨ರಲ್ಲಿ ಸರ್ಕಾರದ ಆದೇಶದ ಮೇರೆಗೆ ಶಿವಮೊಗ್ಗ ಕುವೆಂಪು ವಿಶ್ವ ವಿದ್ಯಾನಿಲಯದ ಪ್ರೊ. ಎಂ.ಗುರುಲಿಂಗಯ್ಯ ಕಾಟಿಕ್ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ವರದಿ ಸಿದ್ದಪಡಿಸಿದ್ದರು. ಆದರೆ ಈ ಹಿಂದಿನ ಸರ್ಕಾರಗಳು ಈ ವರದಿಯನ್ನು ಪರಿಗಣಿಸದೆ ಇರುವುದು ಈ ಸಮುದಾಯಕ್ಕೆ ಸಂವಿಧಾನಬದ್ದವಾಗಿ ಸಾಮಾಜಿಕ ನ್ಯಾಯ ಸಿಗದಂತಾಗಿದೆ. ಇಂದಿನ ಸರ್ಕಾರ ಈ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಲಾಯಿತು.
   ಸಮಾಜದ ತಾಲೂಕು ಅಧ್ಯಕ್ಷ ಲಿಂಗರಾಜು, ಅಶೋಕ್, ವಸಂತಕುಮಾರ್, ಕುಮಾರ್, ಶ್ರೀನಿವಾಸ್, ಗಿರೀಶ್, ಪರಶುರಾಮ್ ಸೇರಿದಂತೆ ಇನ್ನಿತರರಿದ್ದರು.




ಕುಡಿಯುವ ನೀರಿನ ಸಂಪರ್ಕಕ್ಕೆ ಠೇವಣಿ, ಮೀಟರ್ ಲೆಕ್ಕದಲ್ಲಿ ಬಿಲ್ ಪಾವತಿ ಆದೇಶಕ್ಕೆ ಆಕ್ರೋಶ

ಕರ್ನಾಟಕ ಜನಸೈನ್ಯ ವತಿಯಿಂದ ನಗರಸಭೆ ಮುಂಭಾಗ ಅಸಹಕಾರ ಚಳುವಳಿ

ಭದ್ರಾವತಿ ನಗರಸಭೆ ವ್ಯಾಪ್ತಿಯ ಕೊಳಚೆ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಂಪರ್ಕಕ್ಕೆ ಹೆಚ್ಚಿನ ಠೇವಣಿ ವಿಧಿಸಿರುವುದನ್ನು ಹಾಗು ನೀರಿನ ಬಿಲ್ ಮೀಟರ್ ಲೆಕ್ಕದಲ್ಲಿ ಪಾವತಿಸಲು ಆದೇಶಿಸಿರುವುದನ್ನು ವಿರೋಧಿಸಿ ಕರ್ನಾಟಕ ಜನಸೈನ್ಯ ವತಿಯಿಂದ ಶುಕ್ರವಾರ ನಗರಸಭೆ ಮುಂಭಾಗ ಅಸಹಕಾರ ಚಳುವಳಿ ನಡೆಸಲಾಯಿತು.
    ಭದ್ರಾವತಿ, ಮಾ. ೧೯: ನಗರಸಭೆ ವ್ಯಾಪ್ತಿಯ ಕೊಳಚೆ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಂಪರ್ಕಕ್ಕೆ ಹೆಚ್ಚಿನ ಠೇವಣಿ ವಿಧಿಸಿರುವುದನ್ನು ಹಾಗು ನೀರಿನ ಬಿಲ್ ಮೀಟರ್ ಲೆಕ್ಕದಲ್ಲಿ ಪಾವತಿಸಲು ಆದೇಶಿಸಿರುವುದನ್ನು ವಿರೋಧಿಸಿ ಕರ್ನಾಟಕ ಜನಸೈನ್ಯ ವತಿಯಿಂದ ಶುಕ್ರವಾರ ನಗರಸಭೆ ಮುಂಭಾಗ ಅಸಹಕಾರ ಚಳುವಳಿ ನಡೆಸಲಾಯಿತು.
   ಚಳುವಳಿಯಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಮಾತನಾಡಿ, ನಗರಸಭೆ ವತಿಯಿಂದ ಪ್ರತಿ ಮನೆಗೆ ಕುಡಿಯುವ ನೀರಿಗಾಗಿ ೨೦೦೦ ರು. ಠೇವಣಿ ಪಡೆಯಲಾಗಿದ್ದು, ಇದೀಗ ಪುನಃ ನಲ್ಲಿ ಸಂಪರ್ಕ ಕಲ್ಪಿಸಲು ೨೮೮೦ ರು. ಹಾಗು ನೀರಿನ ಬಿಲ್ ಮೀಟರ್ ಲೆಕ್ಕದಲ್ಲಿ ಪಾವತಿಸಲು ಆದೇಶಿಸಲಾಗಿದೆ. ಪ್ರಸ್ತುತ ನಗರದಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಕಾರ್ಮಿಕರು ಉದ್ಯೋಗವಿಲ್ಲದೆ ಬೀದಿ ಪಾಲಾಗಿದ್ದು, ಅಲ್ಲದೆ ಕೋವಿಡ್-೧೯ರ ಪರಿಣಾಮ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕುಡಿಯುವ ನೀರಿಗೆ ಹಣ ಕೇಳುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
 ಉಚಿತವಾಗಿ ಕುಡಿಯುವ ನೀರು ಒದಗಿಸಬೇಕು. ಈಗಾಗಲೇ ಹಣ ಪಾವತಿಸಿರುವವರಿಗೆ ಹಣ ಹಿಂದಿರುಗಿಸಬೇಕು. ನೀರಿನ ಬಿಲ್ ಮೀಟರ್ ಲೆಕ್ಕದಲ್ಲಿ ಪಾವತಿಸುವ ಆದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿದರು.
    ಕರ್ನಾಟಕ ಜನಸೈನ್ಯ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್ ನೇತೃತ್ವವಹಿಸಿದ್ದರು. ಗೌರವಾಧ್ಯಕ್ಷ ಅನಿಲ್ ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಅನಂತರಾಮು, ತಾಲೂಕು ಅಧ್ಯಕ್ಷ ರಾಜು, ಜಿಲ್ಲಾ ಉಸ್ತುವಾರಿ ಸಮಿತಿ ಅಧ್ಯಕ್ಷ ಐ.ವಿ ಸಂತೋಷ್‌ಕುಮಾರ್, ಕರ್ನಾಟಕ ರಾಜ್ಯ ಮಾದಿಗ ಸಮಾಜ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್, ಕಾರ್ಯದರ್ಶಿ ಶ್ರೀನಿವಾಸ್, ಗ್ರಾಮಾಂತರ ಅಧ್ಯಕ್ಷ ಪ್ರದೀಪ್, ಕನ್ನಡ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ಹಾಗು ಪದಾಧಿಕಾರಿಗಳು, ಡಿಎಸ್‌ಎಸ್ ಮುಖಂಡ ಕುಬೇಂದ್ರಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಮೊದಲ ಬಾರಿಗೆ ೯೨.೬೫ ಲಕ್ಷ ರು. ಉಳಿತಾಯದ ಕಾಗದ ರಹಿತ ಬಜೆಟ್ ಮಂಡನೆ

ಭದ್ರಾವತಿ ನಗರಸಭೆ ಆಡಳಿತಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಶುಕ್ರವಾರ ಟ್ಯಾಬ್ ಮೂಲಕ ಕಾಗದ ರಹಿತ ಬಜೆಟ್ ಮಂಡಿಸಿದರು.
    ಭದ್ರಾವತಿ : ಈ ಬಾರಿ ನಗರಸಭೆ ವತಿಯಿಂದ ವಿಶಿಷ್ಟವಾಗಿ ೯೨.೬೫ ಲಕ್ಷ ರು. ಉಳಿತಾಯದ  ಕಾಗದ ರಹಿತ ಬಜೆಟ್ ಶುಕ್ರವಾರ ನಗರಸಭೆ ಆಡಳಿತಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಟಿ ವಿ ಪ್ರಕಾಶ್ ಮಂಡಿಸಿದರು.
    ಇದೇ ಮೊದಲ ಬಾರಿಗೆ ಟ್ಯಾಬ್ ಬಳಸಿ  ಬಜೆಟ್ ಮಂಡಿಸುವಲ್ಲಿ ನಗರಸಭೆ ಆಡಳಿತ ಯಶಸ್ವಿಯಿತು. ಪ್ರಾರಂಭಿಕ ಶಿಲ್ಕು ೩,೧೦೩.೪೦ ಲಕ್ಷ ರು.,  ನಿರೀಕ್ಷಿತ ಆದಾಯ ೬,೫೩೩.೨೫ ಲಕ್ಷ  ರು , ಒಟ್ಟು ಆದಾಯ ೯,೬೩೬.೬೫ ಲಕ್ಷ ರು. ಗಳಾಗಿವೆ. ಉಳಿದಂತೆ ೯,೫೪೪ ಲಕ್ಷ ರು. ವೆಚ್ಚ ನಿರೀಕ್ಷಿಸಲಾಗಿದೆ.
    ಆಸ್ತಿ ತೆರಿಗೆ ೫೪೫ ಲಕ್ಷ ರು., ಅಭಿವೃದ್ಧಿ ಶುಲ್ಕ ಮತ್ತು ಸೆಕ್ಷನ್ ೧೦೮ರ ಪುರಸಭೆ ಕಾಯ್ದೆ ೧೯೬೪ರಂತೆ(ಬಿ ಖಾತೆ) ೧೭೦ ಲಕ್ಷ ರು., ವಾಣಿಜ್ಯ ಮಳಿಗೆ ಬಾಡಿಗೆ ೨೦ ಲಕ್ಷ ರು., ಇತರೇ ಕಟ್ಟಡಗಳಿಂದ ಬಾಡಿಗೆ ೪ ಲಕ್ಷ ರು., ಉದ್ದಿಮೆ ಪರವಾನಿಗೆ ೨೦ ಲಕ್ಷ ರು., ಜಾಹೀರಾತು ಶುಲ್ಕ ೫ ಲಕ್ಷ ರು, ಇತರೆ ೨೩೪.೭೫ ಲಕ್ಷ ರು. ಹಾಗು ನೀರು ಬಳಕೆದಾರರ ಶುಲ್ಕ ೬೦೫ ಲಕ್ಷ ರು. ಸೇರಿದಂತೆ ೧೬೦೩.೭೫ ಲಕ್ಷ ರು. ಹಾಗು ಸರ್ಕಾರದ ವಿವಿಧ ಅನುದಾನಗಳಿಂದ ಎಸ್‌ಎಫ್‌ಸಿ ವೇತನ ೭೬೩ ಲಕ್ಷ ರು., ಎಸ್‌ಎಫ್‌ಸಿ ವಿದ್ಯುತ್ ಶುಲ್ಕ ೮೫೨ ಲಕ್ಷ ರು., ಎಸ್‌ಎಫ್‌ಸಿ ಮುಕ್ತಿ ನಿಧಿ/ವಿಶೇಷ ೫೪೧ ಲಕ್ಷ ರು., ಡೇ ನಲ್ಮ್ ೮೦ ಲಕ್ಷ ರು., ೧೫ನೇ ಹಣಕಾಸು ೭೫೧ ಲಕ್ಷ ರು., ಅಮೃತ್ ಯೋಜನೆ ೮೦೦ ಲಕ್ಷ ರು., ಸ್ವಚ್ಛ್ ಭಾರತ್/ಡಿಪಿಎಆರ್/ಇತ್ಯಾದಿ ೩೪೯.೭೫ ಲಕ್ಷ ರು., ಇತರೆ ಇಲಾಖೆಗಳಿಗೆ ಪಾವತಿಸಬೇಕಾದ ವಸೂಲಾತಿಗಳು ೬೪೨.೭೫ ಲಕ್ಷ ರು. ಹಾಗು ಗೃಹಭಾಗ್ಯ ಯೋಜನೆ ೧೫೦ ಲಕ್ಷ ರು. ಸೇರಿದಂತೆ ಒಟ್ಟು ೬೫೩೩.೫೦ ಲಕ್ಷ ರು. ಆದಾಯ ನಿರೀಕ್ಷಿಸಲಾಗಿದೆ.
     ಅಮೃತ್ ನಗರ ಯೋಜನೆ ೮೦೦ ಲಕ್ಷ ರು., ಮುಂದುವರೆದ ಕಾಮಗಾರಿಗಳು ೧,೨೫೭.೫೦ ಲಕ್ಷ ರು., ಸಿಬ್ಬಂದಿ ವೇತನ/ಭತ್ಯೆಗಳು/ಬಾಕಿ ಪಾವತಿಗಳು ೭೬೩ ಲಕ್ಷ ರು., ಬೀದಿ ದೀಪ ಹಗು ನೀರು ಸರಬರಾಜು ವಿದ್ಯುತ್(ಬಾಕಿ ಸೇರಿಕೊಂಡು) ೮೫೨ ಲಕ್ಷ ರು., ಹೊರ ಗುತ್ತಿಗೆ ಕಾರ್ಮಿಕರ ವಿಶೇಷ ವೇತನ ೧೯ ಲಕ್ಷ ರು., ಪೌರಕಾರ್ಮಿಕರ ದಿನಾಚರಣೆ/ಉಪಹಾರ/ಸುರಕ್ಷ ಸಲಕರಣೆಗಳು, ದಸರಾ ಹಬ್ಬ ೩೦ ಲಕ್ಷ ರು., ಇತರೆ ವಂತಿಕೆಗಳು ೪೦೫ ಲಕ್ಷ ರು., ಬಡತನ ನಿರ್ಮೂಲನಾ ಕಾರ್ಯಕ್ರಮ ೨೫೩.೭೫ ಲಕ್ಷ ರು., ಕ್ರೀಡೆ, ಸಾಂಸ್ಕೃತಿಕ ಕಾರ್ಯಕಮಗಳಿಗೆ ಪ್ರೋತ್ಸಾಹ ಧನ ೫ ಲಕ್ಷ ರು., ಕಛೇರಿ ವೆಚ್ಚ ೧೮೬.೧೫ ಲಕ್ಷ ರು., ದಾಸ್ತಾನು ಖರೀದಿ/ಎಸ್‌ಡಬ್ಲ್ಯೂಎಂ ಸಲಕರಣೆ ೧೧೦ ಲಕ್ಷ ರು., ಕಾನೂನು ಶುಲ್ಕ ೨೫ ಲಕ್ಷ ರು., ವಾಹನ ಬಾಡಿಗೆ ೧೦ ಲಕ್ಷ ರು., ಗೌರವಧನ/ಸಭಾ ವೆಚ್ಚಗಳು ೩೫ ಲಕ್ಷ ರು., ಕಟ್ಟಡಗಳ ದುರಸ್ತಿ/ನವೀಕರಣ ೫೬೨ ಲಕ್ಷ ರು., ಡೇ ನಲ್ಮ್ ಕಾರ್ಯಕ್ರಮ ೮೦ ಲಕ್ಷ ರು., ರಸ್ತೆ ಮತ್ತು ಚರಂಡಿಗಳು ೧೨೨೫ ಲಕ್ಷ ರು, ಬಸ್ ಶೆಲ್ಟರ್ ೨೧೭ ಲಕ್ಷ ರು, ಬೀದಿ ನಾಯಿಗಳ ಎಬಿಸಿ ಕಾರ್ಯಕ್ರಮಕ್ಕೆ ೧೫ ಲಕ್ಷ ರು., ಪ್ರಮುಖ ವೃತ್ತಗಳ ಅಭಿವೃದ್ಧಿ/ನಾಮಫಲಕಗಳು ೫೦ ಲಕ್ಷ ರು., ವಾಹನ ಯಂತ್ರೋಪಕರಣ ಮತ್ತು ಇತರೇ ೧೫೦.೨೦ ಲಕ್ಷ ರು., ಬೀದಿ ದೀಪ ನಿರ್ವಹಣೆ ೩೨೫ ಲಕ್ಷ ರು., ಸರ್ಕಾರಕ್ಕೆ ಪಾವತಿಸಬೇಕಾದ ಸೆಸ್, ಶಾಸನಬದ್ಧ ಪಾವತಿಗಳು ಹಾಗು ಗುತ್ತಿಗೆದಾರರ ಮರು ಪಾವತಿ ೮೬೭.೯೦ ಲಕ್ಷ ರು., ನೀರು ಸರಬರಾಜು ವಿಭಾಗ ೧೩೯ ಲಕ್ಷ ರು., ಮನೆ ಮನೆ ಕಸ ಸಂಗ್ರಹಣೆ ೧೦೦ ಲಕ್ಷ ರು, ಉದ್ಯಾನವನ ಅಭಿವೃದ್ಧಿ ೨೫೦ ಲಕ್ಷ ರು ಹಾಗು ಅಂಗನವಾಡಿ ಕಟ್ಟಡಗಳ ದುರಸ್ತಿ ೨೦ ಲಕ್ಷ ರು. ಸೇರಿದಂತೆ ಒಟ್ಟು ೯,೫೪೪ ಲಕ್ಷ ರು. ವೆಚ್ಚ ನಿರೀಕ್ಷಿಸಲಾಗಿದೆ.
   ಹೊಸ ಯೋಜನೆಗಳು :
*  ೨೬ ಕೋ. ರು. ವೆಚ್ಚದಲ್ಲಿ ಹಳೇನಗರ ಬಸವೇಶ್ವರ ವೃತ್ತದಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ.
* ೯೨ ಲಕ್ಷ ರು. ವೆಚ್ಚದಲ್ಲಿ ಪ್ರಮುಖ ವೃತ್ತಗಳ ಅಭಿವೃದ್ಧಿ.
* ಕೆ ಪಿ ಟಿ ಸಿ ಎಲ್  ಮಾದರಿಯಲ್ಲಿ ನೀರಿನ ಶುಲ್ಕ ವಸೂಲಾತಿ.
* ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿಕೆ, ೮ ಈ ಘಟಕಗಳ ನಿರ್ಮಾಣ.
* ಬಯಲು ಮುಕ್ತ  ಶೌಚ ನಗರ ಘೋಷಣೆ .
* ಅಂಗವಿಕಲರಿಗಾಗಿ ಪ್ರತ್ಯೇಕ ಸಮುದಾಯ ಭವನ .
    ಹಳೇ ಯೋಜನೆಗಳು:
* ಮನೆ ಮನೆ ಕಸ ಸಂಗ್ರಹಣೆಗೆ ೧೦೦ ಲಕ್ಷ ರು. ಮೀಸಲು.
* ತಲಾ ೭.೫೦ ಲಕ್ಷ ರು. ಅನುದಾನದಲ್ಲಿ ೭೪ ಜನ ಪೌರಕಾರ್ಮಿಕರಿಗೆ ಗೃಹ ಭಾಗ್ಯ.
* ೪೦೦೦ ಜಿ+೩ ಗುಂಪು ಮನೆ ಯೋಜನೆ.
* ೧೮೦.೨೩ ಲಕ್ಷ ರು. ವೆಚ್ಚದಲ್ಲಿ ನಗರಸಭೆ ಬಿ ಮತ್ತು ಸಿ ಗ್ರೂಪ್ ಅಧಿಕಾರಿಗಳು, 
   ನೌಕರರಿಗೆ   ವಸತಿ ಗೃಹ.
* ಒಳಚರಂಡಿ ಕಾಮಗಾರಿ ಪೂರ್ಣಗೊಳಿಸಲು ೨೧.೦೬ ಕೋ.ರು. ಹೆಚ್ಚುವರಿ ಅನುದಾನ.
ಕೊರೋನಾ ಸಂಕಷ್ಟದ ನಡುವೆಯೂ ಈ ಬಾರಿ ಸಹ ಉಳಿತಾಯ ಬಜೆಟ್ ಮಂಡಿಸುವಲ್ಲಿ ನಗರಸಭೆ ಆಡಳಿತ ಯಶಸ್ವಿಯಾಗಿದ್ದು, ಅಲ್ಲದೆ ಹೊಸ ಯೋಜನೆಗಳು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳ ವರ್ಗ ಯಶಸ್ವಿಯಾಗಿದೆ.
ಪೌರಾಯುಕ್ತ ಮನೋಹರ್, ಲೆಕ್ಕಾಧಿಕಾರಿ ಸೈಯದ್ ಮೆಹಬೂಬ್ ಆಲಿ, ಪರಿಸರ ಅಭಿಯಂತರ ಪ್ರಭಾಕರ್, ಇಂಜಿನಿಯರ್ ರಂಗರಾಜಪುರೆ, ಕಂದಾಯಾಧಿಕಾರಿ ರಾಜ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.