Friday, March 26, 2021

ರಂಗ ಚಟುವಟಿಕೆಗಳಿಗೆ ಕ್ರಿಯಾಶೀಲತೆ, ಯುವ ಸಮುದಾಯ ಆಕರ್ಷಿಸಲು ಪ್ರಯತ್ನ : ಕೊಟ್ರಪ್ಪ ಜಿ. ಹಿರೇಮಾಗಡಿ

ಭದ್ರಾವತಿ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರಂಗಮಂಥನ ಸಮಾಲೋಚನಾ ಸಭೆಯಲ್ಲಿ ಹಿರಿಯ ರಂಗ ಕಲಾವಿದ ವೈ.ಕೆ ಹನುಮಂತಯ್ಯ ಮಾತನಾಡಿದರು.  
    ಭದ್ರಾವತಿ, ಮಾ. ೨೬: ಕಲಾವಿದರು, ಶಿವಮೊಗ್ಗ ಸಂಘಟನೆ ಹವ್ಯಾಸಿ ರಂಗ ತಂಡಗಳ ಕಲಾವಿದರ ಸಂಘದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ ರಂಗ ಚಟುವಟಿಕೆಗಳಿಗೆ ಕ್ರಿಯಾಶೀಲತೆ ತರುವ ನಿಟ್ಟಿನಲ್ಲಿ ಮುಂದಾಗಿದೆ ಎಂದು ಸಂಘಟನೆ ಅಧ್ಯಕ್ಷ ಕೊಟ್ರಪ್ಪ ಜಿ. ಹಿರೇಮಾಗಡಿ ತಿಳಿಸಿದರು.
    ಅವರು ನಗರದ ಜನ್ನಾಪುರ ಎನ್‌ಟಿಬಿ ರಸ್ತೆಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರಂಗ ಮಂಥನ ಸಮಾಲೋಚನಾ ಸಭೆಯ ನೇತೃತ್ವವಹಿಸಿ ಮಾತನಾಡಿದರು.  
ಇತ್ತೀಚಿನ ದಿನಗಳಲ್ಲಿ ರಂಗ ಚಟುವಟಿಕೆಗಳು ಕ್ಷೀಣಿಸುತ್ತಿದ್ದು, ಯುವ ಸಮುದಾಯವನ್ನು ರಂಗ ಚಟುವಟಿಕೆಗಳ ಕಡೆ ಆಕರ್ಷಿತರನ್ನಾಸುವ ಮೂಲಕ ರಂಗ ಚಟುವಟಿಕೆಗಳಿಗೆ ಪುನಃ ಜೀವಂತಿಕೆ ತಂದುಕೊಡಬೇಕಾಗಿದೆ. ಯುವ ಸಮುದಾಯ ಹೆಚ್ಚಾಗಿ ಚಲನಚಿತ್ರ, ಟಿ.ವಿ ಚಾನಲ್‌ಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಿಗೆ ಜೋತುಬಿದ್ದಿದ್ದು, ಭ್ರಮಾ ಲೋಕದಲ್ಲಿ ಮುಳುಗಿದೆ. ಈ ಸಮುದಾಯಕ್ಕೆ ನಟನೆಯ ಮೂಲ ಬೇರು ರಂಗಭೂಮಿ ಎಂಬುದನ್ನು ಮನದಟ್ಟು ಮಾಡಬೇಕಾಗಿದೆ ಎಂದರು.
     ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಮಾತನಾಡಿ, ರಂಗ ಚಟುವಟಿಕೆಗಳ ಮೇಲೆ ರಾಜಕೀಯದ   ಕರಿ ನೆರಳು ಬೀಳದಂತೆ ಎಚ್ಚರವಹಿಸಬೇಕು. ರಂಗ ಕಲಾವಿದರ ಪ್ರತಿಭೆ ಅವರ ಮುಂದಿನ ಭವಿಷ್ಯವನ್ನು ನಿರ್ಧರಿಸಲಿದೆ. ಹೆಚ್ಚು ಹೆಚ್ಚು ಕಲಾವಿದರು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಂಡಷ್ಟು ರಂಗ ಚಟುವಟಿಕೆಗಳಿಗೆ ಮಹತ್ವ ಹೆಚ್ಚಾಗಲಿದೆ. ಎಲೆಮರೆ ಕಾಯಿಯಂತಿರುವ ಕಲಾವಿದರನ್ನು ಹುಡುಕಿ ಬೆಳಕಿಗೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದರು.  
ವೈ.ಕೆ ಹನುಮಂತಯ್ಯ, ಜಂಬುಸ್ವಾಮಿ, ಕೆ.ಎಸ್.ರವಿಕುಮಾರ್, ರಾಜ್‌ಕುಮಾರ್, ಕಾ.ರಾ.ನಾಗರಾಜ್, ನಾಗಪ್ಪ, ಚಂದ್ರಕಾಂತ್ ಸೇರಿದಂತೆ ವಿವಿಧ ಕಲಾ ತಂಡಗಳ ಹಿರಿಯ ಕಲಾವಿದರು, ತಂತ್ರಜ್ಞರು ಭಾಗವಹಿಸಿದ್ದರು.
    ಸುಚಿತ್ರ, ವಿಜಯಲಕ್ಷ್ಮಿ ಪ್ರಾರ್ಥನೆ ಮಾಡಿದರು. ಅಪರಂಜಿ ಶಿವರಾಜ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಿ.ಆರ್ ಲವ ಪ್ರ್ರಾಸ್ತಾವಿಕ ನುಡಿಗಳನ್ನಾಡಿದರು. ತಮಟೆ ಜಗದೀಶ್ ವಂದಿಸಿದರು.


Thursday, March 25, 2021

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಳ್ಳದಿರಲು ಮನವಿ

ಭದ್ರಾವತಿ, ಮಾ. ೨೫: ತಾಲೂಕಿನ ನವಿಲೆಬಸವಾಪುರ ಗ್ರಾಮದ ಶ್ರೀ ಬಸವಣ್ಣ ದೇವರ ಜಾತ್ರಾ ಮಹೋತ್ಸವ ಮಾ.೨೯ರವರೆಗೆ ನಡೆಯುತ್ತಿದ್ದು, ಕೋವಿಡ್-೧೯ರ ಹಿನ್ನಲೆಯಲ್ಲಿ ಹೆಚ್ಚಿನ ಜನಸಂದಣಿ ಸೇರದಂತೆ ಎಚ್ಚರವಹಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸದಿರುವಂತೆ ಕೋರಲಾಗಿದೆ.
ಜಾತ್ರಾ ದಿನಗಳಂದು ಯಾವುದೇ ತೀರ್ಥಪ್ರಸಾದ ವಿನಿಯೋಗವಿರುವುದಿಲ್ಲ. ಹಿಂದಿನ ವರ್ಷದಂತೆ ಈ ಬಾರಿ ಸಹ ಅನ್ನಸಂತರ್ಪಣೆ ಇರುವುದಿಲ್ಲ. ಬೇರೆ ಬೇರೆ ಗ್ರಾಮ, ತಾಲೂಕು ಹಾಗು ಜಿಲ್ಲೆಗಳಿಂದ ಆಗಮಿಸುವ ಭಕ್ತಾಧಿಗಳು ಈ ಬಾರಿ ಸಹ ಆಗಮಿಸದಿರುವಂತೆ ಮುಜರಾಯಿ ಅಧಿಕಾರಿ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಕೋರಿದ್ದಾರೆ.

ಮಾ.೨೬ರಂದು ಲೋಕಾಯುಕ್ತರಿಂದ ಅಹವಾಲು ಸ್ವೀಕಾರ

ಭದ್ರಾವತಿ, ಮಾ. ೨೫: ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಮಾ.೨೬ರಂದು ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೧.೩೦ರ ವರಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿರುವ ಅಹವಾಲು ಸ್ವೀಕಾರ ಸಭೆಯ ಸದುಪಯೋಗ ಪಡೆದುಕೊಳ್ಳುವಂತೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಕೋರಿದ್ದಾರೆ.

ಮಾ.೨೮ರಂದು ೬ನೇ ಶರಣ ಸಾಹಿತ್ಯ ಸಮ್ಮೇಳನ


ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಂ. ವಿರುಪಾಕ್ಷಪ್ಪ ಮಾತನಾಡಿದರು.
   ಭದ್ರಾವತಿ, ಮಾ. ೨೫: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಮಾ.೨೮ರಂದು ಸಿದ್ಧಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ತಾಲೂಕು ೬ನೇ ಶರಣ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪರಿಷತ್ ತಾಲೂಕು ಅಧ್ಯಕ್ಷ ಎಂ. ವಿರುಪಾಕ್ಷಪ್ಪ ತಿಳಿಸಿದರು.
    ಅವರು ಗುರುವಾರ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ನಗರದ ಸ್ತ್ರೀ ರೋಗ ತಜ್ಞೆ, ಬರಹಗಾರರಾದ ಡಾ. ವೀಣಾ ಎಸ್ ಭಟ್‌ರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಅಂದು ಬೆಳಿಗ್ಗೆ ೮.೩೦ಕ್ಕೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ರಾಷ್ಟ್ರಧ್ವಜ, ಕಸಾಪ ಗೌರವ ಸಲಹೆಗಾರ ಕೆ. ಮಂದರಕುಮಾರ್ ನಾಡಧ್ವಜ ಹಾಗು ಪರಿಷತ್ ಅಧ್ಯಕ್ಷ ಎಂ. ವಿರುಪಾಕ್ಷಪ್ಪ ಪರಿಷತ್ ಧ್ವಜಾರೋಣಹ ನೆರವೇರಿಸಲಿದ್ದಾರೆ.
    ಬೆಳಿಗ್ಗೆ ೧೦.೨೦ಕ್ಕೆ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಶಿವಮೊಗ್ಗ ಬೆಕ್ಕಿನಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕುವೆಂಪು ವಿಶ್ವ ವಿದ್ಯಾನಿಲಯದ ಕುಲಪತಿ ಡಾ.ಬಿ.ಪಿ ವೀರಭದ್ರಪ್ಪ ಸಮ್ಮೇಳನ ಉದ್ಘಾಟಿಸಲಿದ್ದು, ಸಮ್ಮೇಳನಾಧ್ಯಕ್ಷೆ ಡಾ. ವೀಣಾ ಎಸ್ ಭಟ್, ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ, ನಗರಸಭೆ ಪೌರಾಯುಕ್ತ ಮನೋಹರ್, ಶಿವಮೊಗ್ಗ ಜಿಲ್ಲಾ ಖಜಾನೆ ಉಪನಿರ್ದೇಶಕಿ ಎಚ್.ಎಸ್ ಸಾವಿತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
     ಮಧ್ಯಾಹ್ನ ೧೨.೩೦ ರಿಂದ ೧.೧೫ರವರೆಗೆ ಅನುಭವ ಮಂಟಪ-೧ರಲ್ಲಿ ಡಾ. ವೀಣಾ ಎಸ್. ಭಟ್ 'ವ್ಯಕ್ತಿ-ವ್ಯಕ್ತಿತ್ವ-ಸಾಧನೆ' ವಿಷಯ ಮಂಡಿಸಲಿದ್ದು, ಸಹ್ಯಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ ೨ ರಿಂದ ೪ ಗಂಟೆವರೆಗೆ 'ಇಂದಿನ ಸವಾಲುಗಳು-ವಚನ ಸಾಹಿತ್ಯದ ಪರಿಹಾರ' ವಿಷಯ ಕುರಿತು ಚರ್ಚೆ ನಡೆಯಲಿದ್ದು, ಪ್ರಾಧ್ಯಾಪಕರಾದ ಡಾ. ಚನ್ನೇಶ್ ಹೊನ್ನಾಳಿ ಮತ್ತು ಡಾ. ಪ್ರಕಾಶ್ ಮರ್ಗನಳ್ಳಿ ವಿಷಯ ಮಂಡಿಸಲಿದ್ದಾರೆ. ಶಿರಾಳಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಎಚ್. ರಾಜೇಶ್ವರಿ ಅಧ್ಯಕ್ಷತೆ ವಹಿಸಲಿದ್ದಾರೆ.
     ಸಂಜೆ ೫ ರಿಂದ ೬.೩೦ರವರೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಬಿ ಶಂಕರಪ್ಪ, ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಸಮಾರೋಪ ನುಡಿಗಳನ್ನಾಡಲಿದ್ದಾರೆ ಎಂದರು.
   ಡಾ. ಬಿ.ಜಿ ಧನಂಜಯ ಮಾತನಾಡಿ, ಕಾಯಕ ಯೋಗಿಗಳಾದ ಶರಣರ ವಿಚಾರಧಾರೆಗಳು, ಚಿಂತನೆಗಳು ಸಮಾಜದ ಎಲ್ಲಾ ವರ್ಗಗಳಿಗೂ ತಲುಪಬೇಕೆಂಬ ಉದ್ದೇಶದೊಂದಿಗೆ ವೈಚಾರಿಕ ಮನೋಭಾವದೊಂದಿಗೆ ಸಮ್ಮೇಳನ ಆಯೋಜಿಸಿಕೊಂಡು ಬರಲಾಗುತ್ತಿದೆ. ಅದರಲ್ಲೂ ಯುವ ಸಮೂಹ ಜಾಗೃತಗೊಳ್ಳಬೇಕು. ಸಮಸಮಾಜ ನಿರ್ಮಾಣವಾಗಬೇಕೆಂಬುದು ನಮ್ಮ ಆಶಯವಾಗಿದೆ ಎಂದರು.
    ಪರಿಷತ್ ಪ್ರಧಾನ ಕಾರ್ಯದರ್ಶಿ ಬಾರಂದೂರು ಪ್ರಕಾಶ್ ಮಾತನಾಡಿ, ಯಾವುದೇ ಧರ್ಮ, ಜಾತಿ ಬೇಧಭಾವವಿಲ್ಲದೆ ಲಿಂಗಾಯಿತ ಪರಂಪರೆಯನ್ನು ಬದಿಗಿಟ್ಟು ಶರಣ ಸಾಹಿತ್ಯ ಪರಿಷತ್ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಶರಣ ಸಾಹಿತ್ಯ ಪರಿಷತ್ ಸಮಾಜದ ಪ್ರತಿಯೊಬ್ಬರು ನಮ್ಮದು ಎಂಬ ಮನೋಭಾವನೆಯಿಂದ ನೋಡುವಂತೆ ಎಚ್ಚರವಹಿಸಲಾಗಿದೆ. ಶರಣರ ಆಶಯಗಳನ್ನು ಸಮಾಜದ ಮುಖ್ಯವಾಹಿನಿಯಲ್ಲಿ ತರುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ಅಗತ್ಯವಿದೆ ಎಂದರು.  
   ಸುದ್ದಿಗೋಷ್ಠಿಯಲ್ಲಿ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ, ಹೇಮಾವತಿ ಚಿಗಟೇರಪ್ಪ, ನಂದಿನಿ, ಮಲ್ಲಿಕಾರ್ಜುನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿ ತಾಲೂಕು ೬ನೇ ಶರಣ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷೆ, ವೈದ್ಯೆ ಡಾ. ವೀಣಾ ಎಸ್. ಭಟ್

    ಡಾ. ವೀಣಾ ಎಸ್  ಭಟ್  ಪರಿಚಯ :
ಕಾರವಾರ ಜಿಲ್ಲೆಯ ಕುಮಟಾ ತಾಲ್ಲೂಕಿನ ಬೆತ್ತಗೇರಿ ಗ್ರಾಮದಲ್ಲಿ  ೧೯೬೮ರಲ್ಲಿ ಜನಿಸಿದ ಡಾ. ವೀಣಾ ಎಸ್ ಭಟ್  ಪ್ರಾಥಮಿಕ ಶಿಕ್ಷಣವನ್ನು ಬೆತ್ತಗೇರಿ ಗ್ರಾಮದಲ್ಲಿ ಪೂರೈಸಿದ್ದು, ಪ್ರೌಢಶಾಲಾ ಶಿಕ್ಷಣವನ್ನು ಶಿವಮೊಗ್ಗ  ಕಸ್ತೂರಿಬಾ ಬಾಲಕಿಯರ ಶಾಲೆಯಲ್ಲಿ ಹಾಗು ಉನ್ನತ ಶಿಕ್ಷಣವನ್ನು ಜೆ ಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಹುಬ್ಬಳ್ಳಿ ಕೆಎಂಸಿಯಲ್ಲಿ ಪೂರೈಸಿ ವೈದ್ಯಕೀಯ ಪದವಿಯನ್ನು ಪಡೆದುಕೊಂಡಿದ್ದಾರೆ.
      ನಗರದ ನ್ಯೂಟೌನ್ ವಿಐಎಸ್‌ಎಲ್ ೭ ವರ್ಷಗಳ ಕಾಲ ಸ್ತ್ರೀರೋಗ ತಜ್ಞೆಯಾಗಿ ಕಾರ್ಯ ನಿರ್ವಹಿಸಿದ್ದು , ೨೦೦೩ರಿಂದ  ಸ್ವಂತ ನಯನ ಆಸ್ಪತ್ರೆಯಲ್ಲಿ  ಸೇವೆ ಸಲ್ಲಿಸುತ್ತಿದ್ದಾರೆ .
    ಯೋಗ ಶಿಕ್ಷಕಿ :
ಇವರು ಕೇವಲ ವೈದ್ಯರು ಮಾತ್ರವಲ್ಲದೆ ಯೋಗ ಶಿಕ್ಷಕಿ ಸಹ ಆಗಿದ್ದಾರೆ. ಪತಂಜಲಿ ಯೋಗ ಸಂಸ್ಥೆಯ ಯೋಗ ಕಾರ್ಯಕ್ರಮ ಗಳಿಂದ ಪ್ರಭಾವಿತರಾಗಿ ಯೋಗ ಕಲಿಕೆಯಲ್ಲಿ ತೊಡಗಿಸಿಕೊಂಡರು. ಯೋಗವನ್ನು ಸಂಪೂರ್ಣವಾಗಿ ಕಲಿತು ಕಳೆದ ಕೆಲವು ವರ್ಷಗಳಿಂದ ಸಾರ್ವಜನಿಕರಿಗೆ ಉಚಿತ ಯೋಗ ಹಾಗೂ ಪ್ರಾಣಾಯಾಮ ತರಬೇತಿಯನ್ನು ನೀಡುತ್ತಿದ್ದಾರೆ. ಅಲ್ಲದೆ ಹಲವಾರು ಕಾರ್ಯಕ್ರಮಗಳಲ್ಲಿ ಯೋಗ ಕುರಿತು ಉಪನ್ಯಾಸ ನಡೆಸಿಕೊಟ್ಟಿದ್ದಾರೆ.
    ವೈದ್ಯ ಸಾಹಿತಿ :
    ವೈದ್ಯಕೀಯ ವೃತ್ತಿಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಇವರು ತೊಡಗಿಸಿಕೊಂಡಿದ್ದು, ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಸೇವೆ ಸಲ್ಲಿಸಿದ್ದು,  ಆರೋಗ್ಯಕ್ಕೆ ಸಂಬಂಧಿಸಿದ ಇವರ ಆ ಲೇಖನಗಳು ಪ್ರಕಟಗೊಂಡಿವೆ.
       ಬೊಜ್ಜಿಗಿದೆ ಪರಿಹಾರ, ತಾರುಣ್ಯದ ತಲ್ಲಣಗಳು, ಪ್ರಶ್ನೋತ್ತರ ಮಾಲಿಕೆ ಮತ್ತು ಋತುಚಕ್ರದ ಸುತ್ತಮುತ್ತ ಪುಸ್ತಕಗಳು ಪ್ರಕಟಗೊಂಡಿವೆ.  
    ಸಂದ ಪ್ರಶಸ್ತಿ ಗೌರವಗಳು:
ಇವರಿಗೆ ಏಷ್ಯಾ ಪೆಸಿಫಿಕ್ ಎಕ್ಸಲೆನ್ಸ್ ಅವಾರ್ಡ್, ಆರೋಗ್ಯ ಮಾತಾ, ಯುಗಾದಿ ಪುರಸ್ಕಾರ,  ಸುವರ್ಣ ಕರ್ನಾಟಕ ಪತಂಜಲಿ ರತ್ನ, ಎಸ್ ಎನ್ ಮಲ್ಹೋತ್ರಾ ರಾಷ್ಟ್ರಪ್ರಶಸ್ತಿ,  ವೈದ್ಯ ಸೇವಾ ರತ್ನ, ಮಾನವರತ್ನ ಶ್ರೇಷ್ಠ ವೈದ್ಯ ಸಾಹಿತಿ, ಶ್ರೇಷ್ಠ ಅಲ್ಯುಮಿನಿ, ಸಕಲ ಕಲಾ ವಲ್ಲಭೆ ಮತ್ತು ಈಶ್ವರಮ್ಮ ಪುರಸ್ಕಾರ ಸೇರಿದಂತೆ ಇನ್ನಿತರ ಪ್ರಶಸ್ತಿಗಳು ಲಭಿಸಿವೆ . ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಸೇರಿದಂತೆ ವಿವಿಧ  ಸಂಘ ಸಂಸ್ಥೆಗಳು  ಸನ್ಮಾನಿಸಿ ಗೌರವಿಸಿವೆ.

Wednesday, March 24, 2021

ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಸರ್ವ ಸದಸ್ಯರ ಸಭೆ

ಭದ್ರಾವತಿ, ಮಾ. ೨೪: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಸರ್ವ ಸದಸ್ಯರ ಸಭೆ ಹಳೇನಗರದ ಸಂಘದ ನೂತನ ಕಟ್ಟಡದ ಆವರಣದಲ್ಲಿ ನಡೆಯಿತು.
    ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಿ.ಎಲ್ ರಂಗಸ್ವಾಮಿ ಮಾತನಾಡಿ, ಸಂಘದ ಬಹಳ ವರ್ಷಗಳ ಬೇಡಿಕೆ ಈಡೇರಿದೆ. ನೂತನ ಕಟ್ಟಡ ನಿರ್ಮಾಣಕ್ಕೆ ಸಂಸದರ ನಿಧಿಯಿಂದ ಅನುದಾನ ಬಿಡುಗಡೆಗೊಳಿಸಿರುವ ಬಿ.ವೈ. ರಾಘವೇಂದ್ರ, ಶಾಸಕರ ನಿಧಿಯಿಂದ ಅನುದಾನ ಬಿಡುಗೊಳಿಸಿರುವ ಬಿ.ಕೆ ಸಂಗಮೇಶ್ವರ್ ಹಾಗು ದೇಣಿಗೆ ನೀಡಿರುವ ಸಂಘದ ಸದಸ್ಯರು, ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
   ಸಂಘದ ಖಜಾಂಚಿ ಲೆಕ್ಕಪತ್ರ ಮಂಡಿಸಿ ೫೦ ಲಕ್ಷ ರು. ವೆಚ್ಚದ ನೂತನ ಕಟ್ಟಡ ನಿರ್ಮಾಣಕ್ಕೆ ಇದುವರೆಗೂ ೩೨ ಲಕ್ಷ ರು. ಪಾವತಿಸಲಾಗಿದೆ. ಉಳಿದಂತೆ ಪ್ರಸಕ್ತ ಸಾಲಿನಲ್ಲಿ ಖರ್ಚು, ವೆಚ್ಚಗಳನ್ನು ಸಮರ್ಪಕವಾಗಿ ನಿರ್ವಹಿಸಲಾಗಿದೆ ಎಂದರು.
    ಹಿರಿಯ ಸದಸ್ಯರಾದ ಕೆ. ಶಾಮಣ್ಣ, ಟಿ.ಜಿ ಚಂದ್ರಪ್ಪ, ಪಿಡಬ್ಲ್ಯೂಡಿ ರಂಗಸ್ವಾಮಿ, ಕೆ.ಎಸ್ ಶಿವಮೂರ್ತಿ, ಸಿ. ಪರಮೇಶ್ವರಪ್ಪ, ಎಚ್.ಎನ್ ಮಹಾರುದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿದ್ಯುತ್ ಕೊರತೆ : ಬೆಳಿಗ್ಗೆ, ಸಂಜೆ ತಲಾ ೧ ಗಂಟೆ ಲೋಡ್ ಶೆಡ್ಡಿಂಗ್

ಭದ್ರಾವತಿ, ಮಾ. ೨೪: ಅನಿವಾರ್ಯ ಕಾರಣಗಳಿಂದ ತಾಲೂಕಿನ ಮೆಸ್ಕಾಂ ವ್ಯಾಪ್ತಿಯ ವಿದ್ಯುತ್ ಪೂರೈಕೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ತಲಾ ೧ ಗಂಟೆ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ ಎಂದು ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
   ಕರ್ನಾಟಕ ಪವರ್ ಕಾರ್ಪೋರೇಷನ್, ಯುಪಿಸಿಎಲ್ ಮತ್ತು ಕೇಂದ್ರೀಯ ವಿದ್ಯುತ್ ಉತ್ಪಾದನಾ ಕೇಂದ್ರಗಳ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿರುವುದರಿಂದ ಕೆಲವು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಈ ಹಿನ್ನಲೆಯಲ್ಲಿ ಬೇಡಿಕೆಯಷ್ಟು ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಕೆಪಿಸಿಯಿಂದ ಸುಮಾರು ೨೮೬೪ ಎಂ.ಡಬ್ಲ್ಯೂ, ಯುಪಿಸಿಎಲ್‌ನಿಂದ ಸುಮಾರು ೧೦೧೦ ಎಂ.ಡಬ್ಲ್ಯೂ ಮತ್ತು ಕೇಂದ್ರೀಯ ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದ ಸುಮಾರು ೪೦೭ ಎಂ.ಡಬ್ಲ್ಯೂನಷ್ಟು ವಿದ್ಯುತ್ ಕೊರತೆ ಉಂಟಾಗಿದೆ. ಈ ಹಿನ್ನಲೆಯಲ್ಲಿ ಮೆಸ್ಕಾಂ ೨೦೦ ಎಂ.ಡಬ್ಲ್ಯೂನಷ್ಟು ವಿದ್ಯುತ್ ಕೊರತೆ ಎದುರಿಸುವಂತಾಗಿದೆ.
    ಸ್ಟೇಟ್ ಲೋಡ್ ಡಿಸ್ಪ್ಯಾಚ್ ಸೆಂಟರ್ ಸೂಚನೆಯಂತೆ ತಾಲೂಕಿನಲ್ಲಿ ವಿದ್ಯುತ್ ಜಾಲದ ಸುರಕ್ಷತೆಯ ದೃಷ್ಟಿಯಿಂದ ಅನಿಯಮಿತವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸ ಬರಬಹುದು. ಈ ಹಿನ್ನಲೆಯಲ್ಲಿ ಬೆಳಿಗ್ಗೆ ೧ ಗಂಟೆ ಹಾಗು ಸಂಜೆ ೧ ಗಂಟೆ ಲೋಡ್ ಶೆಡ್ಡಿಂಗ್ ಮಾಡಲಾಗುವುದು ಗ್ರಾಹಕರು ಸಹಕರಿಸುವಂತೆ ಕೋರಿದ್ದಾರೆ.

ಮಾ.೨೫ರಂದು ‘ಭದ್ರಾವತಿ ರಂಗಭೂಮಿ-ಭವಿತವ್ಯದ ದಾರಿಗಳು’

   ಭದ್ರಾವತಿ, ಮಾ. ೨೪: ಹವ್ಯಾಸಿ ರಂಗತಂಡಗಳ ಕಲಾವಿದರ ಸಂಘ ಹಾಗು ರಂಗ ಕಲಾವಿದರು ಜೊತೆಗೂಡಿ ಮಾ.೨೫ರಂದು ಸಂಜೆ ೫.೪೫ಕ್ಕೆ 'ಭದ್ರಾವತಿ ರಂಗಭೂಮಿ-ಭವಿತವ್ಯದ ದಾರಿಗಳು' ವಿಚಾರ ಕುರಿತು ರಂಗ ಮಂಥನ ಏರ್ಪಡಿಸಲಾಗಿದೆ.
   ಶಿವಮೊಗ್ಗ ಕಲಾವಿದರು ಅಧ್ಯಕ್ಷ ಕೊಟ್ರಪ್ಪ ಜಿ. ಹಿರೇಮಾಗಡಿ ಅಧ್ಯಕ್ಷತೆ ವಹಿಸಲಿದ್ದು, ತಾಲೂಕು ಕಾರ್ಯನಿರತಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಅಪರಂಜಿ ಅಭಿನಯ ಶಾಲೆಯ ಅಪರಂಜಿ ಶಿವರಾಜ್ ಮತ್ತು ಕಲಾವಿದರು ಪ್ರಧಾನ ಕಾರ್ಯದರ್ಶಿ ಜಿ.ಆರ್ ಲವ ಉಪಸ್ಥಿತರಿರುವರು.