Monday, April 5, 2021

ಡಿಎಸ್‌ಎಸ್ ಹಿರಿಯೂರು ಗ್ರಾಮ ಶಾಖೆ ಉದ್ಘಾಟನೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಬಣ) ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮ ಶಾಖೆ ಉದ್ಘಾಟನೆ ಸೋಮವಾರ ನಡೆಯಿತು.
    ಭದ್ರಾವತಿ, ಏ. ೫: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಬಣ) ತಾಲೂಕಿನ ಹಿರಿಯೂರು ಗ್ರಾಮ ಶಾಖೆ ಉದ್ಘಾಟನೆ ಸೋಮವಾರ ನಡೆಯಿತು.
    ಗ್ರಾಮದ ಬಯಲು ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಿತಿ ರಾಜ್ಯ ಖಜಾಂಚಿ ಸತ್ಯ ಶಾಖೆಯನ್ನು ಉದ್ಘಾಟಿಸಿದರು. ಗ್ರಾಮದ ಅಚಲ ಸದ್ಗುರು ಆಶ್ರಮದ ಶ್ರೀ ಲಕ್ಷ್ಮಣಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.
     ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪವಿತ್ರ ಮಂಜುನಾಥ್, ಹಾಲು ಸಹಕಾರ ಸಂಘದ ಉಪಾಧ್ಯಕ್ಷ ರಾಜಣ್ಣ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ, ರಾಜ್ಯ ಸಂಘಟನಾ ಸಂಚಾಲಕಿ ಶಾಂತಿ, ತಾಲೂಕು ಸಂಚಾಲಕ ಕೆ. ರಂಗನಾಥ್, ಅಂಗವಿಕಲ ಘಟಕದ ಜಿಲ್ಲಾಧ್ಯಕ್ಷ ಕಾಣಿಕ್‌ರಾಜ್, ಜಿಂಕ್‌ಲೈನ್ ಮಣಿ, ವಿನೋದ್, ರಾಮಲಿಂಗಮ್, ಶಿವಾಜಿರಾವ್, ಸಂದೀಪ್ ಆರ್,  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸೇವೆಗಾಗಿ ಮೀಸಲಾದ ಸ್ನೇಹ ಜೀವಿ ಬಳಗ : ಪೊಲೀಸ್ ಉಮೇಶ್

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಪೊಲೀಸ್ ಉಮೇಶ್ ನೇತೃತ್ವದ ಭದ್ರಾವತಿ ಸ್ನೆಹ ಜೀವಿ ಬಳಗದ ಸದಸ್ಯರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
   ಭದ್ರಾವತಿ, ಏ. ೫: ಯಾವುದೇ ಆಸೆ, ಆಕಾಂಕ್ಷೆಗಳಿಲ್ಲದೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಉದಯಿಸಿದ ಸ್ನೇಹಜೀವಿ ಬಳಗ ಇಂದು ಬೃಹತ್‌ದಾಗಿ ಬೆಳೆದಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದೆ ಎಂದು ಬಳಗದ ಸಂಸ್ಥಾಪಕ ಪೊಲೀಸ್ ಉಮೇಶ್ ತಿಳಿಸಿದರು.
   ಅವರು ಬಳಗಕ್ಕೆ ಸೇರ್ಪಡೆ ಹಾಗು ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾದ ಬಳಗದ ನೂತನ ಸದಸ್ಯರಿಗೆ ಸನ್ಮಾನ ಸಮಾರಂಭದ ನೇತೃತ್ವವಹಿಸಿ ಮಾತನಾಡಿದರು.
    ದೇವಸ್ಥಾನಗಳಲ್ಲಿ ಅನ್ನದಾಸೋಹದಂತಹ ಸೇವಾ ಕಾರ್ಯಗಳನ್ನು ಆಯೋಜಿಸಿಕೊಂಡು ಬರುತ್ತಿದ್ದ ಬಳಗ ನಂತರದ ದಿನಗಳಲ್ಲಿ ಹಲವು ರೀತಿಯ ಸೇವಾಗಳನ್ನು ಮೈಗೂಡಿಸಿಕೊಂಡಿದೆ. ಪ್ರಮುಖವಾಗಿ ಬಡವರ ತುರ್ತು ಆರೋಗ್ಯ ಸೇವೆಗಾಗಿ ಆಂಬ್ಯುಲೆನ್ಸ್ ವ್ಯವಸ್ಥೆ, ಕೋವಿಡ್-೧೯ರ ಸಂದರ್ಭದಲ್ಲಿ ನಿಗರ್ತಿಕರು, ಕಡು ಬಡವರಿಗೆ ಆಹಾರ ಮತ್ತು ದವಸ ಧಾನ್ಯ ವಿತರಣೆ, ಧಾರ್ಮಿಕ ಕಾರ್ಯಗಳಿಗೆ ನೆರವು ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಜೊತೆಗೆ ಇದೀಗ ಬಳಗದ ಸದಸ್ಯರು ಸೇವಾ ಮನೋಭಾವನೆಯೊಂದಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸ್ಪರ್ಧಿಸಿ ಗೆಲವು ಸಾಧಿಸಿದ್ದಾರೆ ಎಂದರು.
    ಬಳಗದಲ್ಲಿ ಯಾವುದೇ ಪಕ್ಷದ, ಜಾತಿಭೇದವಿಲ್ಲ. ಎಲ್ಲರಿಗೂ ಸೇವೆ ಮಾಡಲು ಅವಕಾಶವಿದೆ. ಸೇವಾ ಮನೋಭಾವನೆ ಹೊಂದಿರುವವರು ಬಳಗಕ್ಕೆ ಸೇರ್ಪಡೆಗೊಳ್ಳಬಹುದು. ಪ್ರಸ್ತುತ ನಗರಸಭೆಗೆ ನಡೆಯುತ್ತಿರುವ ಚುನಾವಣೆಗೂ ಬಳಗದ ಸದಸ್ಯರು ಸ್ಪರ್ಧಿಸಲಿದ್ದಾರೆ. ಕೆಲವೇ ದಿನಗಳಲ್ಲಿ ಹೆಸರುಗಳನ್ನು ಪ್ರಕಟಿಸಲಾಗುವುದು ಎಂದರು.
    ಪ್ರಮುಖರಾದ ಮುಳ್ಕೆರೆ ಲೋಕೇಶ್, ವಿನೋದ್, ಪ್ರದೀಪ್‌ಕುಮಾರ್, ಕಾಂತ ದಿನೇಶ್ ಸೇರಿದಂತೆ ಇನ್ನಿತರರು ಬಳಗಕ್ಕೆ ಸೇರ್ಪಡೆಗೊಂಡರು.
    ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಗದ ನಂದಿನಿ ಬಾಯಿ, ಲಕ್ಷ್ಮಮ್ಮ, ಮಂಜುಳ, ಕೆ.ವಿ ಧನಂಜಯ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಬಳಗದ ಸತೀಶ್‌ಗೌಡ, ಮೇಘರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಪ್ಪಾಜಿ ಮಾರ್ಗದರ್ಶನದಲ್ಲಿ ಜೆಡಿಎಸ್ ಪುನಃ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ : ಆರ್. ಕರುಣಾಮೂರ್ತಿ

ಭದ್ರಾವತಿ ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪತ್ನಿ ಶಾರದ ಅಪ್ಪಾಜಿ ನೇತೃತ್ವದಲ್ಲಿ ಸೋಮವಾರ ಜೆಡಿಎಸ್ ಪಕ್ಷದ ಮುಖಂಡರು ಸುದ್ದಿಗೋಷ್ಠಿ ನಡೆಸಿದರು.
   ಭದ್ರಾವತಿ, ಏ. ೫: ಈ ಬಾರಿಯ ನಗರಸಭೆ ಚುನಾವಣೆಯಲ್ಲೂ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.
    ಅವರು ಸೋಮವಾರ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ಪತ್ನಿ ಶಾರದ ಅಪ್ಪಾಜಿ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಅಪ್ಪಾಜಿ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ ರಾಜಕೀಯವಾಗಿ ಅವರು ನಡೆದು ಬಂದ ದಾರಿಯಲ್ಲಿ ಇಂದು ನಾವೆಲ್ಲರೂ ಒಗ್ಗಟ್ಟಾಗಿ ಸಾಗಬೇಕಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ೩೫ ವಾರ್ಡ್‌ಗಳ ಪೈಕಿ ೨೩ ವಾರ್ಡ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ನಗರಸಭೆ ಚುಕ್ಕಾಣಿ ಹಿಡಿಯಲಾಗಿತ್ತು. ಈ ಬಾರಿ ಚುನಾವಣೆಯಲ್ಲೂ ಜೆಡಿಎಸ್ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವ ವಿಶ್ವಾಸವಿದೆ ಎಂದರು.
    ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ. ಶ್ರೀಕಾಂತ್, ಮಾಜಿ ಶಾಸಕಿ ಶಾರದಪೂರ್‍ಯಾನಾಯ್ಕ, ಜಿ.ಪಂ. ಸದಸ್ಯ ಎಸ್. ಮಣಿಶೇಖರ್, ಮಾಜಿ ಸದಸ್ಯ ಎಸ್. ಕುಮಾರ್, ಸೇರಿದಂತೆ ಇನ್ನಿತರರು ಮಾತನಾಡಿ, ಅಪ್ಪಾಜಿಯವರು ನಮ್ಮೊಂದಿಗೆ ಇಲ್ಲದಿರುವ ಸಂದರ್ಭದಲ್ಲಿ ಚುನಾವಣೆ ಎದುರಾಗಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸುವುದು ಅನಿವಾರ್ಯವಾಗಿದೆ. ಅಪ್ಪಾಜಿಯವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಗೆಲುವಿಗೆ ಸಹಕಾರಿಯಾಗಲಿವೆ. ಅಪ್ಪಾಜಿಯವರ ಅಭಿಮಾನಿಗಳು, ಪಕ್ಷದ  ಕಾರ್ಯಕರ್ತರು ಆತ್ಮವಿಶ್ವಾಸದಿಂದ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಮನವಿ ಮಾಡಿದರು.
   ಎಲ್ಲಾ ೩೫ ವಾರ್ಡ್‌ಗಳಲ್ಲೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಮುಂದಿನ ೨-೩ ದಿನಗಳಲ್ಲಿ ಅಧಿಕೃತ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸುವುದಾಗಿ ತಿಳಿಸಿದರು.
     ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಸದಸ್ಯ ಜೆ.ಪಿ ಯೋಗೇಶ್, ಎಂ.ಎ ಅಜಿತ್, ಕರಿಯಪ್ಪ, ಡಿ.ಟಿ ಶ್ರೀಧರ್, ಪೀರ್‌ಷರೀಫ್, ಮೈಲಾರಪ್ಪ, ಸುಕನ್ಯ, ಕುಮಾರ್, ಬದರಿನಾರಾಯಣ, ಗುಣಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಮಳೆಗಾಲ ಆರಂಭಕ್ಕೂ ಮೊದಲು ಖಾಸಗಿ ಬಸ್ ನಿಲ್ದಾಣ ನಿರ್ಮಾಣ : ಶಾಸಕ ಬಿ.ಕೆ ಸಂಗಮೇಶ್ವರ್ ಭರವಸೆ

ಭದ್ರಾವತಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪ ಸುಮಾರು ೨.೧೭ ಕೋ. ರು. ವೆಚ್ಚದಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು.
      ಭದ್ರಾವತಿ, ಏ. ೫: ನಗರಸಭೆ ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಖಾಸಗಿ ಬಸ್ ನಿಲ್ದಾಣದ ಕಾಮಗಾರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ತರಾತುರಿಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಸೋಮವಾರ ಖಾಸಗಿ ಬಸ್ ನಿಲ್ದಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಏ.೮ರಿಂದ ನೀತಿ ಸಂಹಿತೆ ಜಾರಿಗೆ ಬರಲಿದೆ. ಏ.೧೦ರಂದು ಖಾಸಗಿ ಬಸ್ ನಿಲ್ದಾಣ ಕಾಮಗಾರಿಯ ಟೆಂಡರ್ ತೆರೆಯಲಿದ್ದು, ಏ.೧೫ರಿಂದ ಕಾಮಗಾರಿ ಆರಂಭಗೊಳ್ಳಲಿದೆ. ಮಳೆಗಾಲ ಆರಂಭಗೊಳ್ಳುವ ಮೊದಲು ಕಾಮಗಾರಿ ಮುಕ್ತಾಯಗೊಳ್ಳಬೇಕು. ಈ ಹಿನ್ನಲೆಯಲ್ಲಿ ಕಾಮಗಾರಿಗೆ ಯಾವುದೇ ರೀತಿ ತೊಂದರೆಯಾಗಬಾರದೆಂಬ ಉದ್ದೇಶದೊಂದಿಗೆ ತರಾತುರಿಯಲ್ಲಿ ಗುದ್ದಲಿ ಪೂಜೆ ನೆರವೇರಿಸಲಾಗುತ್ತಿದೆ ಎಂದರು.
     ಹಲವಾರು ವರ್ಷಗಳಿಂದ ನಗರದಲ್ಲಿ ಖಾಸಗಿ ಬಸ್‌ನಿಲ್ದಾಣ ನಿರ್ಮಿಸಬೇಕೆಂಬ ಬೇಡಿಕೆ ಇದ್ದು, ಈ ಹಿಂದೆ ೨೦೧೨ರ ನನ್ನ ಅವಧಿಯಲ್ಲಿ ನಿಲ್ದಾಣಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಡಲಾಗಿತ್ತು. ನಂತರ ೨೦೧೮ರಲ್ಲಿ ಸುಸಜ್ಜಿತ ಖಾಸಗಿ ಬಸ್ ನಿಲ್ದಾಣ ನಿರ್ಮಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ಸೂಚಿಸಿ ೨.೧೭ ಕೋ. ರು. ವೆಚ್ಚದಲ್ಲಿ ಬಸ್ ನಿಲ್ದಾಣಕ್ಕೆ ಅನುಮೋದನೆ ನೀಡಿದೆ ಎಂದರು.
     ಇದೆ ರೀತಿ ಕೆಎಸ್‌ಆರ್‌ಟಿಸಿ ಬಸ್ ಘಟಕದಲ್ಲಿ ಸುಮಾರು ೪ ಕೋ.ರು ವೆಚ್ಚದಲ್ಲಿ ಹೈಟೆಕ್ ಮುಖ್ಯ ಬಸ್ ನಿಲ್ದಾಣ ನಿರ್ಮಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಹ ಸಲ್ಲಿಸಲಾಗಿದೆ. ಉಳಿದಂತೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸಮೀಪ ಹೊಸ ಸೇತುವೆ ನಿರ್ಮಾಣ ಸೇರಿದಂತೆ ಹಲವರು ಅಭಿವೃದ್ಧಿ ಕಾರ್ಯಗಳಿಗೆ ಮಂಜೂರಾತಿ ದೊರೆತ್ತಿದೆ ಎಂದರು.
    ವೇದಿಕೆಯಲ್ಲಿ ಖಾಸಗಿ ಬಸ್ ಏಜೆಂಟರ್‌ಗಳ ಸಂಘದ ಅಧ್ಯಕ್ಷ ಶ್ರೀನಿವಾಸ್, ಉದ್ಯಮಿ ಎ. ಮಾಧು, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ್, ಲೋಕೇಶ್, ಪ್ರಕಾಶ್‌ರಾವ್, ಬಾಬಾಜಾನ್, ಶಿವಣ್ಣ, ಮಂಜು, ಜಾರ್ಜ್, ವೆಂಕಟೇಶ್, ಮುರುಗನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.    


Sunday, April 4, 2021

ಅಧಿಕ ಪ್ರವಾಹದ ವಿದ್ಯುತ್ ತಂತಿ ತಗುಲಿ ಎತ್ತು ಸಾವು

ವಿದ್ಯುತ್ ತಂತಿ ತಗುಲಿದ ಪರಿಣಾಮ ಎತ್ತು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಭದ್ರಾವತಿ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
    ಭದ್ರಾವತಿ, ಏ. ೪: ವಿದ್ಯುತ್ ತಂತಿ ತಗುಲಿದ ಪರಿಣಾಮ ಎತ್ತು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
   ಕಲ್ಲಹಳ್ಳಿ ಗ್ರಾಮದ ಅಂತರಘಟ್ಟಮ್ಮ ದೇವಸ್ಥಾನದ ಬಳಿ ವಿದ್ಯುತ್ ಕಂಬದ ಮೇಲೆ ಮರದ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ ಅಧಿಕ ವಿದ್ಯುತ್ ಪ್ರವಾಹದ ತಂತಿ ಕತ್ತರಿಸಿಕೊಂಡು ರಸ್ತೆಗೆ ಬಿದ್ದಿದ್ದು, ಮಂಜಪ್ಪ ಎಂಬುವರು ತಮ್ಮ ಎತ್ತಿನ ಗಾಡಿಯಲ್ಲಿ ತೋಟಕ್ಕೆ ಹೋಗುವಾಗ ವಿದ್ಯುತ್ ತಂತಿ ಎತ್ತಿನ ಕಾಲಿಗೆ ತಲುಲಿದ ಪರಿಣಾಮ ಎತ್ತು ಸ್ಥಳದಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದೆ ಎನ್ನಲಾಗಿದೆ. \
    ಎತ್ತಿನ ಸಾವಿಗೆ ಮೆಸ್ಕಾಂ ಇಲಾಖೆ ನಿರ್ಲಕ್ಷ್ಯತನ  ಕಾರಣ ಎಂದು ಆರೋಪಿಸಲಾಗಿದೆ. ಘಟನೆ ಕುರಿತು ಗ್ರಾಮ ಪಂಚಾಯಿತಿ ಸದಸ್ಯ ಧನಂಜಯ ಆತಂಕ ವ್ಯಕ್ತಪಡಿಸಿದ್ದಾರೆ.

ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷರಾಗಿ ೨ನೇ ಬಾರಿಗೆ ಜಗದೀಶ್ ಪುನರ್ ಆಯ್ಕೆ

ಜೆ. ಜಗದೀಶ್
    ಭದ್ರಾವತಿ, ಏ. ೪: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್ ಪುನರ್ ಆಯ್ಕೆಯಾಗಿದ್ದಾರೆ.
   ಭಾನುವಾರ ನಡೆದ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆ. ಜಗದೀಶ್ ೧೧೭, ಸುರೇಶ್ ೩೮ ಮತ್ತು ಶ್ರೀನಿವಾಸ್ ೬೩ ಮತಗಳನ್ನು ಪಡೆದುಕೊಂಡರು. ಜೆ. ಜಗದೀಶ್ ೨ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಉಳಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶೈಲಶ್ರೀ ಮತ್ತು ಕುಮಾರ್ ಆಳ್ವಾ ಇಬ್ಬರು ೮೯ ಸಮಮತಗಳನ್ನು ಹಾಗು ರಾಘವೇಂದ್ರ ೩೭ ಮತಗಳನ್ನು ಪಡೆದುಕೊಂಡಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಲಾಟರಿ ಮೂಲಕ ಆಯ್ಕೆ ನಡೆದು ಮೊದಲ ಅವಧಿಗೆ ಕುಮಾರ್ ಆಳ್ವಾ ಹಾಗು ಎರಡನೇ ಅವಧಿಗೆ ಶೈಲಶ್ರೀ ಆಯ್ಕೆಯಾಗಿದ್ದಾರೆ. ಕಾರ್ಮಿಕ ಸಂಘದ ಚುನಾವಣೆ ಇತಿಹಾಸದಲ್ಲಿ ಎರಡನೇ ಬಾರಿಗೆ ಮಹಿಳೆಯೊಬ್ಬರು ಆಯ್ಕೆಯಾಗಿ ಗಮನ ಸೆಳೆದಿದ್ದಾರೆ. ಈ ಹಿಂದೆ ಮೊದಲ ಬಾರಿಗೆ ರಾಜಮ್ಮ ಎಂಬುವರು ಆಯ್ಕೆಯಾಗಿದ್ದರು.
   ಪ್ರಧಾನ ಕಾರ್ಯದರ್ಶಿಯಾಗಿ ಬಸಂತ್‌ಕುಮಾರ್ ಆಯ್ಕೆಯಾಗಿದ್ದು, ೧೨೫ ಮತಗಳನ್ನು ಹಾಗು ಅಮೃತ್‌ಕುಮಾರ್ ೮೭ ಮತಗಳನ್ನು ಪಡೆದುಕೊಂಡಿದ್ದಾರೆ. ಉಳಿದಂತೆ ಎಂ.ಎಲ್ ಯೋಗೀಶ್, ಮನೋಹರ್, ಸುನಿಲ್, ರಾಜು, ಕುಮಾರಸ್ವಾಮಿ, ಮಂಜುನಾಥ್ ಆಯ್ಕೆಯಾಗಿದ್ದಾರೆ.
ಒಟ್ಟು ೨೨೨ ಮತಗಳಲ್ಲಿ ೨೧೮ ಮತಗಳು ಚಲಾವಣೆಯಾಗಿವೆ. ಇಳಯರಾಜ ಮತ್ತು ಅಡವೀಶಯ್ಯ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು.

ಸರ್ಕಾರದ ಯಾವುದೇ ಅನುದಾನವಿಲ್ಲದೆ ಕೆರೆಗಳ ಹೂಳು ತೆಗೆಯುವ ಕಾರ್ಯಾಚರಣೆ

೫ ಕೆರೆಗಳ ಹೂಳು ತೆಗೆಯುವ ಕಾರ್ಯ ಪೂರ್ಣ :  ಪೌರಾಯುಕ್ತ ಮನೋಹರ್ ಖುದ್ದು ಪರಿಶೀಲನೆ


ಪೌರಾಯುಕ್ತ ಮನೋಹರ್ ಭಾನುವಾರ ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳ ಹೂಳು ತೆಗೆಯುವ ಕಾರ್ಯಾಚರಣೆ ನಡೆಸುತ್ತಿರುವ ತಂಡದೊಂದಿಗೆ ಖುದ್ದಾಗಿ ಭೇಟಿ ನೀಡಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಪರಿಶೀಲನೆ ನಡೆಸಿದರು. 
   ಭದ್ರಾವತಿ, ಏ. ೪: ನಗರಸಭೆ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಹೇಗಾದರೂ ಮಾಡಿ ಅಭಿವೃದ್ಧಿಗೊಳಿಸಬೇಕೆಂಬ ಉದ್ದೇಶದೊಂದಿಗೆ ಕಳೆದ ಸುಮಾರು ೨ ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿರುವ ನಗರಸಭೆ ಪೌರಾಯುಕ್ತ ಮನೋಹರ್ ನೇತೃತ್ವದ ತಂಡ ಬಹುತೇಕ ಯಶಸ್ವಿ ದಾರಿಯಲ್ಲಿ ಸಾಗುತ್ತಿದೆ.
     ಬೇಸಿಗೆಯಲ್ಲಿ ರೈತರಿಗೆ, ಜಾನುವಾರುಗಳಿಗೆ ಅನುಕೂಲ ಕಲ್ಪಿಸಿಕೊಡುವ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿಸಲು ನಗರಸಭೆ ವ್ಯಾಪ್ತಿಯಲ್ಲಿನ ಕೆರೆಗಳನ್ನು ಅಭಿವೃದ್ಧಿಗೊಳಿಸುವಂತೆ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಹಲವಾರು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬರುತ್ತಿದ್ದು, ಈ ಸಂಬಂಧ ನಗರಸಭೆಗೆ ಹಲವಾರು ಬಾರಿ ಮನವಿ ಸಹ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಕಳೆದ ಸುಮಾರು ೨ ವರ್ಷಗಳಿಂದ ನಿರಂತರವಾಗಿ ಪೌರಾಯುಕ್ತ ಮನೋಹರ್ ನಗರಸಭೆ ವ್ಯಾಪ್ತಿಯಲ್ಲಿ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ವಹಿಸಿ ತಾಲೂಕು ಆಡಳಿತದ ನೆರವಿನೊಂದಿಗೆ ಬೌಂಡರಿ ನಿಗದಿಪಡಿಸುವ ಮೂಲಕ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು ೭೦ ಕೆರೆಗಳ ಪೈಕಿ ಪ್ರಸ್ತುತ ೧೮ ಕೆರೆಗಳ ಬೌಂಡರಿ ನಿಗದಿಪಡಿಸುವ ಜೊತೆಗೆ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ.
       ಸರ್ಕಾರದ ನೆರವಿಲ್ಲದೆ ಹೂಳು ತೆಗೆಯುವ ಕಾರ್ಯಾಚರಣೆ:
     ಗ್ರಾಮಾಂತರ ಭಾಗದಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಲಕ್ಷಾಂತರ ರು. ಹಣ ವ್ಯಯ ಮಾಡಿ  ಹೂಳುವ ತೆಗೆಯುವ ಮೂಲಕ ಕೆರೆಗಳ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಆದರೆ ನಗರಸಭೆ ವ್ಯಾಪ್ತಿಯಲ್ಲಿನ ಕೆರೆಗಳನ್ನು ಸರ್ಕಾರದ ಯಾವುದೇ ಅನುದಾನವಿಲ್ಲದೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಪೌರಾಯುಕ್ತರ ತಂಡ ಮುಂದಾಗಿದೆ.
     ವಿವಿಧ ಸಂಘಟನೆಗಳ ಸಹಕಾರೊಂದಿಗೆ, ಸ್ವಯಂ ಸೇವಕರು, ಸ್ಥಳೀಯ ರೈತರು ಹಾಗು ದಾನಿಗಳ ನೆರವಿನೊಂದಿಗೆ ಲಕ್ಷಾಂತರ ರು. ವೆಚ್ಚದಲ್ಲಿ ಹೂಳು ತೆಗೆಯುವ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಇದುವರೆಗೂ ೧೮ ಕೆರೆಗಳ ಪೈಕಿ ಸಿದ್ದಾಪುರದ ಗೌಡನ ಕಟ್ಟೆ ಕೆರೆ, ಚಿಕ್ಕಯ್ಯನ ಕೆರೆ, ಹೊಸೂರು ಕೆರೆ, ಬುಳ್ಳಾಪುರ ಚಿಕ್ಕಯ್ಯನ ಕೆರೆ ಮತ್ತು ಬಾಳೆಕಟ್ಟೆ ಕೆರೆ ಒಟ್ಟ ೫ ಕೆರೆಗಳ ಹೂಳು ತೆಗೆಯುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ.
      ಪೌರಾಯುಕ್ತರಿಂದ ಖುದ್ದು ಪರಿಶೀಲನೆ :
    ಪೌರಾಯುಕ್ತ ಮನೋಹರ್ ಭಾನುವಾರ ಕೆರೆಗಳ ಹೂಳು ತೆಗೆಯುವ ಕಾರ್ಯಾಚರಣೆ ನಡೆಸುತ್ತಿರುವ ತಂಡದೊಂದಿಗೆ ಖುದ್ದಾಗಿ ಭೇಟಿ ನೀಡಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಪರಿಶೀಲನೆ ನಡೆಸಿದರು. ಅಲ್ಲದೆ ಸ್ಥಳೀಯ ರೈತರು, ಮುಖಂಡರು ಹಾಗು ವಿವಿಧ ಸಂಘಟನೆಗಳ ಪ್ರಮುಖರೊಂದಿಗೆ ಚರ್ಚಿಸಿದರು.
    ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ಪ್ರಮುಖರಾದ ಆರ್. ವೇಣುಗೋಪಾಲ್, ರಮಾ ವೆಂಕಟೇಶ್, ಶೈಲಜಾ ರಾಮಕೃಷ್ಣ, ಶಶಿಕಲಾ ವಿಶ್ವನಾಥ್, ಮುರುಗನ್, ಹೂಳು ತೆಗೆಯುವ ಕಾರ್ಯಾಚರಣೆ ನಡೆಸುತ್ತಿರುವ ರೈತ ಮುಖಂಡರಾದ ಸತೀಶ್, ಕಂಠಪ್ಪ, ಬಸವರಾಜ್, ಚಂದ್ರಪ್ಪ, ಇಂದ್ರಣ್ಣ, ಮುರುಗಣ್ಣ, ನಾಸೀರ್, ನಾಗಣ್ಣ, ಜಗದೀಶ್ ಹಾಗು ನಗರಸಭೆ ಸೂಪರ್‌ವೈಸರ್ ಗೋವಿಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.