Friday, April 9, 2021

೩೫ ವಾರ್ಡ್‌ಗಳಲ್ಲೂ ಸ್ಪರ್ಧೆ : ಆಕಾಂಕ್ಷಿಗಳು ಪಕ್ಷಕ್ಕೆ ಸೇರ್ಪಡೆಗೊಳ್ಳಲು ಅವಕಾಶ

ಭದ್ರಾವತಿ ನಗರಸಭೆ ಚುನಾವಣೆಗೆ ೩೨ನೇ ವಾರ್ಡ್ ಜೆಡಿಯು ಅಭ್ಯರ್ಥಿಯಾಗಿ ಸ್ಪರ್ಧಿಸಲು ದಿವ್ಯಶ್ರೀಯವರಿಗೆ ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಬಿ ಫಾರಂ ನೀಡಲಾಯಿತು.
    ಭದ್ರಾವತಿ, ಏ. ೯: ಜನತಾದಳ(ಸಂಯುಕ್ತ) ಕರ್ನಾಟಕ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಜನಸೇವೆಯಲ್ಲಿ ತೊಡಗುವ ಅಭಿಲಾಸೆಯೊಂದಿರುವ ಆಕಾಂಕ್ಷಿಗಳಿಗೆ ಈ ಬಾರಿ ನಗರಸಭೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲಾಗುವುದು ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ, ಶಿವಮೊಗ್ಗ ಉಸ್ತುವಾರಿ ಶಶಿಕುಮಾರ್ ಎಸ್. ಗೌಡ ಹಾಗು ಜಿಲ್ಲಾ ಸಂಚಾಲಕ ದೇವರಾಜ್ ಸಿಂಧೆ ತಿಳಿಸಿದರು.
    ಅವರು ಶುಕ್ರವಾರ ಹಳೇನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ನಗರಸಭೆ ಚುನಾವಣೆಯಲ್ಲಿ ೩೫ ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿದೆ. ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸಲು ಪಕ್ಷದ ವರಿಷ್ಠರು ಏ.೧೩ರವರೆಗೆ ನಗರದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಈ ಹಿನ್ನಲೆಯಲ್ಲಿ ಆಕಾಂಕ್ಷಿಗಳು ನೇರವಾಗಿ ಬಂದು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಬೇಹಳ್ಳಿ ಡಿ. ನಾಗರಾಜು, ಪ್ರಧಾನ ಕಾರ್ಯದರ್ಶಿ(ಸಂಘಟನೆ) ಶಿವಮೊಗ್ಗ ಜಿಲ್ಲಾ ಉಸ್ತುವಾರಿ  ಮೊ: ೯೪೪೮೨೦೨೨೩೩ ಅಥವಾ ದೇವರಾಜ್ ಸಿಂಧೆ, ಜಿಲ್ಲಾ ಸಂಚಾಲಕರು, ಮೊ: ೯೪೮೦೨೭೭೨೯೯ ಅಥವಾ ಶಶಿಕುಮಾರ್ ಎಸ್. ಗೌಡ, ಉಪಾಧ್ಯಕ್ಷರು, ರಾಜ್ಯ ಯುವ ಘಟಕ ಮೊ: ೯೦೦೮೭೮೭೩೫೦ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದರು.
    ಪಕ್ಷದ ವತಿಯಿಂದ ಮೊದಲ ಬಾರಿಗೆ ೩೨ನೇ ವಾರ್ಡ್‌ನ ಅಧಿಕೃತ ಅಭ್ಯರ್ಥಿಯಾಗಿ ದಿವ್ಯಶ್ರೀ ಶಶಿಕುಮಾರ್ ಎಸ್. ಗೌಡ ಸ್ಪರ್ಧಿಸುತ್ತಿದ್ದು, ರಾಜ್ಯಾಧ್ಯಕ್ಷರಾದ ಮಹಿಮಾ ಜೆ ಪಟೇಲ್‌ರವರ ಸೂಚನೆಮೇರೆಗೆ ಬಿ ಫಾರಂ ನೀಡಲಾಗುತ್ತಿದೆ. ಚುನಾವಣೆಯಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಕಾಯ್ದುಕೊಳ್ಳವುದು ಪಕ್ಷದ ಬಹುದೊಡ್ಡ ಆಶಯವಾಗಿದೆ ಎಂದರು.
   ಸುದ್ದಿಗೋಷ್ಠಿಯಲ್ಲಿ ಯುವ ಘಟಕದ ರಾಜ್ಯ ಕಾರ್ಯದರ್ಶಿ ಕೆ.ಎಸ್ ಅಣ್ಣಪ್ಪ, ಮಹಿಳಾ ಘಟಕದ ತಾಲೂಕು ಸಂಚಾಲಕಿ ದಿವ್ಯಶ್ರೀ ಶಶಿಕುಮಾರ್ ಎಸ್. ಗೌಡ ಉಪಸ್ಥಿತರಿದ್ದರು.    

Thursday, April 8, 2021

ನಗರಸಭೆ ಚುನಾವಣೆ : ಮೊದಲ ದಿನ ೬ ನಾಮಪತ್ರ ಸಲ್ಲಿಕೆ

   ಭದ್ರಾವತಿ, ಏ. ೮: ನಗರಸಭೆ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆ ಗುರುವಾರದಿಂದ ಆರಂಭಗೊಂಡಿದ್ದು, ನಾಮಪತ್ರ ಸಲ್ಲಿಸಲು ೫ ಕಡೆ ಕೇಂದ್ರಗಳನ್ನು ತೆರೆಯಲಾಗಿದೆ. ಮೊದಲ ದಿನ ೬ ನಾಮಪತ್ರಗಳು ಸಲ್ಲಿಕೆಯಾಗಿವೆ.
    ವಾರ್ಡ್ ನಂ. ೧, ೨, ೩, ೪, ೩೩, ೩೪ ಮತ್ತು ೩೫ರ ವ್ಯಾಪ್ತಿಯಲ್ಲಿ ೨ ನಾಮಪತ್ರಗಳು, ವಾರ್ಡ್ ನಂ. ೫, ೬, ೭, ೮, ೯, ೧೦ ಮತ್ತು ೧೧ರ ವ್ಯಾಪ್ತಿಯಲ್ಲಿ ೧ ನಾಮಪತ್ರ, ವಾರ್ಡ್ ನಂ. ೧೨, ೧೩, ೧೪, ೧೫, ೧೬, ೧೭ ಮತ್ತು ೧೮ರ ವ್ಯಾಪ್ತಿಯಲ್ಲಿ ಒಬ್ಬ ಅಭ್ಯರ್ಥಿಯಿಂದ ೨ ನಾಮಪತ್ರ ಹಾಗು ವಾರ್ಡ್ ನಂ.೨೬, ೨೭, ೨೮, ೨೯, ೩೦, ೩೧ ಮತ್ತು ೩೨ರ ವ್ಯಾಪ್ತಿಯಲ್ಲಿ ೧ ನಾಮಪತ್ರ ಸಲ್ಲಿಕೆಯಾಗಿವೆ. ಮತ್ತು ವಾರ್ಡ್ ನಂ. ೧೯, ೨೦, ೨೧, ೨೨, ೨೩, ೨೪ ಮತ್ತು ೨೫ರ ವ್ಯಾಪ್ತಿಯಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.


ಏ.೧೧ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ, ಏ. ೮: ಲೋಕೋಪಯೋಗಿ ಇಲಾಖೆವತಿಯಿಂದ ನಗರದ ಹೊಸಮನೆ ಭಾಗದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಏ.೧೧ರಂದು ಬೆಳಿಗ್ಗೆ ೧೦.೩೦ರಿಂದ ಸಂಜೆ ೫.೩೦ರ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ), ಹೊಳೆಹೊನ್ನೂರು ವೃತ್ತ, ಎನ್.ಎಂ.ಸಿ ರಸ್ತೆ, ಸಂತೆ ಮೈದಾನ, ಭೋವಿ ಕಾಲೋನಿ, ಹೊಸಮನೆ, ಕುವೆಂಪು ನಗರ, ಸುಭಾಷ್‌ನಗರ, ತ್ಯಾಗರಾಜ ನಗರ, ತಮ್ಮಣ್ಣ ಕಾಲೋನಿ, ಶಿವಾಜಿ ವೃತ್ತ, ಹನುಮಂತ ನಗರ, ವಿಜಯ ನಗರ, ಅಶ್ವತ್ಥ ನಗರ, ಕಬಳಿಕಟ್ಟೆ ಕೇಶವಪುರ ಮತ್ತು ಗಾಂಧಿನಗರ ಸೇರಿದಂತೆ ಇನ್ನಿತರ ಪ್ರದೇಶಗಳ ಗ್ರಾಹಕರು ಸಹಕರಿಸುವಂತೆ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.

ರಾಜ್ಯ ಬೆಂಚ್ ಪ್ರೆಸ್ ಸ್ಪರ್ಧೆಗೆ ಆಯ್ಕೆ

ಭದ್ರಾವತಿ, ಏ. ೮: ದಾವಣಗೆರೆಯಲ್ಲಿ ಏ.೧೦ ಮತ್ತು ೧೧ರಂದು ನಡೆಯಲಿರುವ ರಾಜ್ಯ ಬೆಂಚ್ ಪ್ರೆಸ್ ಸ್ಪರ್ಧೆಗೆ ಶಿವಮೊಗ್ಗ ಡಿಸ್ಟ್ರಿಕ್ಟ್ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ಸ್ಟೀಲ್ ಫಿಟ್‌ನೆಸ್ ೨೪*೭ ಸುಜಿತ್‌ಕುಮಾರ್ ನೇತೃತ್ವದಲ್ಲಿ ಸ್ಪರ್ಧಾಳುಗಳನ್ನು ಆಯ್ಕೆ ಮಾಡಲಾಗಿದೆ.
೪೭ ಕೆ.ಜಿ ಸಬ್ ಜ್ಯೂನಿಯರ್ ವಿಭಾಗಕ್ಕೆ ಭದ್ರಾವತಿ ಬೊಮ್ಮನಕಟ್ಟೆ ಶಮನ್ ಷಾವಲಿ ವ್ಯಾಯಾಮ ಶಾಲೆಯ ಎಂ. ಸಾನಿಯ, ಶಿವಮೊಗ್ಗ ಸೋಲಿಟ್ ಫಿಟ್‌ನೆಸ್ ಸೆಂಟರ್‌ನ ಎಸ್. ರಜನಿ ಮತ್ತು ಡಿ. ಸಹನ ೫೭ ಕೆ.ಜಿ ಸೀನಿಯರ್ ಮತ್ತು ಜ್ಯೂನಿಯರ್ ವಿಭಾಗಕ್ಕೆ, ಎಸ್.ಕೆ ಪಲ್ಲವಿ, ಬಿ.ಜೆ ಶಂಕೇಶ್ವರಿ ೬೩ ಕೆ.ಜಿ ಸಬ್ ಜ್ಯೂನಿಯರ್ ವಿಭಾಗಕ್ಕೆ ಹಾಗು ಬಿ.ಎಚ್ ಪದ್ಮಶ್ರೀ ೮೪ ಕೆ.ಜಿ ಜ್ಯೂನಿಯರ್ ವಿಭಾಗಕ್ಕೆ ಮತ್ತು ಶಿವಮೊಗ್ಗ ಸಹ್ಯಾದ್ರಿ ಸೈನ್ಸ್ ಕಾಲೇಜಿನ ಎಸ್. ಸ್ನೇಹ ೮೪ ಕೆ.ಜಿ ಸಬ್ ಜ್ಯೂನಿಯರ್ ವಿಭಾಗಕ್ಕೆ ಆಯ್ಕೆಯಾಗಿದ್ದಾರೆ.
ಭದ್ರಾವತಿ ಕಾರಂತ್ ಜಿಮ್‌ನ ಲುಕ್‌ಮಾನ್ ಆಹ್ಮದ್ ೫೩ ಕೆ.ಜಿ ಹಾಗು ಲಿಂಗರಾಜು ೫೯ ಕೆ.ಜಿ ಸಬ್ ಜ್ಯೂನಿಯರ್ ವಿಭಾಗಕ್ಕೆ, ಎಸ್. ಹರ್ಷಿತ್ ೬೬ ಕೆ.ಜಿ ಸಬ್ ಜ್ಯೂನಿಯರ್, ಕೆ.ಎಲ್ ದಯಾನಂದ ೧೦೫ ಕೆ.ಜಿ ಸಬ್ ಜ್ಯೂನಿಯರ್ ಹಾಗು ಕೆ. ಪ್ರಕಾಶ್ ಕಾರಂತ್ ೮೩ ಕೆ.ಜಿ ಮಾಸ್ಟರ್-ವಿಭಾಗಕ್ಕೆ ಆಯ್ಕೆಯಾಗಿದ್ದಾರೆ.
ಶಿವಮೊಗ್ಗ ಸ್ಟೇಡಿಯಂ ಜಿಮ್‌ನ ಶಶಿಧರ್.ಎ ೭೪ ಕೆ.ಜಿ ಮಾಸ್ಟರ್-೨ ವಿಭಾಗ, ವರ್ಷಿತ್ ಎಸ್ ರಾವ್ ೯೩ ಕೆ.ಜಿ ಸಬ್ ಜ್ಯೂನಿಯರ್ ವಿಭಾಗ, ಕೆ. ಭಾಸ್ಕರ್ ೬೬ ಕೆ.ಜಿ ಮಾಸ್ಟರ್-೨ ವಿಭಾಗ ಹಾಗು ಇ. ರಕ್ಷಿತ್ ೧೦೫ ಕೆ.ಜಿ ಸಬ್ ಜ್ಯೂನಿಯರ್ ವಿಭಾಗಕ್ಕೆ, ಶಿವಮೊಗ್ಗ ಕಿಷನ್ ಬಾಡಿ ಲೈನ್‌ನ ಆರ್. ಅವಿನಾಶ್ ೬೬ ಕೆ.ಜಿ ಸೀನಿಯರ್, ಎಚ್. ಅರುಣ್ ೮೩ ಕೆ.ಜಿ ಸೀನಿಯರ್, ಸಾಗರ ಕಾರ್ಗಲ್ ಪೊಲೀಸ್ ಠಾಣೆಯ ಗಿಲ್ ಬರ್ಟ್ಸ್ ಡಯಾಸ್ ೮೩ ಕೆ.ಜಿ ಮಾಸ್ಟರ್-೨ ವಿಭಾಗಕ್ಕೆ ಹಾಗು ಭದ್ರಾವತಿ ಮಯೂರ್ ಜಿಮ್‌ನ ಶಶಿಧರ್ ಎಸ್. ೯೩ ಕೆ.ಜಿ ಮಾಸ್ಟರ್-೨ ವಿಭಾಗಕ್ಕೆ ಆಯ್ಕೆಯಾಗಿದ್ದಾರೆಂದು ಶಿವಮೊಗ್ಗ ಡಿಸ್ಟ್ರಿಕ್ಟ್ ಪವರ್‌ಲಿಫ್ಟಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಕೆ. ಪ್ರಕಾಶ್ ಕಾರಂತ್ ತಿಳಿಸಿದ್ದಾರೆ.

Wednesday, April 7, 2021

ನಗರಸಭೆ ಚುನಾವಣೆ ಏ.೮ರಿಂದ ನಾಮಪತ್ರ ಸಲ್ಲಿಕೆ ಆರಂಭ : ಅಭ್ಯರ್ಥಿಗಳ ಘೋಷಣೆಯಲ್ಲಿ ಬಿಜೆಪಿ ಮೊದಲು

ಆಕಾಂಕ್ಷಿಗಳಿಂದ ಟಿಕೇಟ್‌ಗಾಗಿ ಮಾತೃ ಪಕ್ಷದಿಂದ ಇತರೆ ಪಕ್ಷಕ್ಕೆ ಜಿಗಿತ


ಭದ್ರಾವತಿ ಜನ್ನಾಪುರ ವಾರ್ಡ್ ನಂ.೨೯ರಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಸುಮಾರು ೩ ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಿದ್ದ ಕರ್ನಾಟಕ ಜನಸೈನ್ಯ ಸಂಘಟನೆ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್ ಪತ್ನಿ ಶೃತಿ ಮಾತೃ ಪಕ್ಷದಲ್ಲಿ ಸ್ಪರ್ಧಿಸಲು ಅವಕಾಶ ಸಿಗದಿರುವುದು ತಿಳಿಯುತ್ತಿದ್ದಂತೆ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
      * ಅನಂತಕುಮಾರ್
   ಭದ್ರಾವತಿ: ಸುಮಾರು ೨ ವರ್ಷಗಳ ನಂತರ ನಡೆಯುತ್ತಿರುವ ಇಲ್ಲಿನ ನಗರಸಭೆ ಚುನಾವಣೆಗೆ ಗುರುವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಈ ನಡುವೆ ವಿವಿಧ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಘೋಷಣೆಗೆ ಮುಂದಾಗಿವೆ.
    ಎಲ್ಲಾ ಪಕ್ಷಗಳಿಗಿಂತ ಮೊದಲು ಭಾರತೀಯ ಜನತಾ ಪಕ್ಷ ೩೫ ವಾರ್ಡ್‌ಗಳ ಪೈಕಿ ೨೧ ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಬುಧವಾರ ಘೋಷಿಸಿದೆ. ಉಳಿದ ೧೪ ವಾರ್ಡ್‌ಗಳಿಗೆ ೨ನೇ ಹಂತದಲ್ಲಿ ಘೋಷಣೆ ಮಾಡಲಿದೆ.
    ಪ್ರಸ್ತುತ ಘೋಷಣೆ ಮಾಡಿರುವ ಬಹುತೇಕ ಅಭ್ಯರ್ಥಿಗಳು ಪಕ್ಷದ ವಿವಿಧ ಪದಾಧಿಕಾರಿಗಳು, ಅವರ ಸಂಬಂಧಿಕರು, ಕಾರ್ಯಕರ್ತರು ಹಾಗು ಹಿಂದೂಪರ ಸಂಘಟನೆಗಳ ಪ್ರಮುಖರಾಗಿದ್ದಾರೆ. ಪ್ರತಿ ಬಾರಿ ಚುನಾವಣೆಯಲ್ಲೂ ಬಿಜೆಪಿ ಬೂತ್‌ಮಟ್ಟದ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದೆ. ಈ ಬಾರಿ ಸಹ ಬೂತ್‌ಮಟ್ಟದಲ್ಲಿಯೇ ಅಭ್ಯರ್ಥಿಗಳ ಆಯ್ಕೆ ನಡೆದಿದೆ ಎನ್ನಲಾಗಿದೆ.
     ಇನ್ನುಳಿದಂತೆ ಯಾವುದೇ ಪಕ್ಷಗಳು ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಆದರೆ ಕೆಲವರು ನಾವೇ ಪಕ್ಷದ ಅಧಿಕೃತ ಅಭ್ಯರ್ಥಿಗಳೆಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಕ್ಕೆ ಮುಂದಾಗಿದ್ದಾರೆ. ಇನ್ನೂ ಕೆಲವರು ಮಾತೃ ಪಕ್ಷದಲ್ಲಿ ಸ್ಪರ್ಧಿಸಲು ಅವಕಾಶ ಸಿಗದಿರುವುದು ತಿಳಿದು ಬಂದ ತಕ್ಷಣ ಬೇರೆ ಪಕ್ಷಗಳಿಗೆ ಸೇರ್ಪಡೆಗೊಳ್ಳುತ್ತಿದ್ದು, ಜನ್ನಾಪುರ ವಾರ್ಡ್ ನಂ.೨೯ರಲ್ಲಿ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಸುಮಾರು ೩ ವಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಿದ್ದ ಕರ್ನಾಟಕ ಜನಸೈನ್ಯ ಸಂಘಟನೆ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್ ಪತ್ನಿ ಶೃತಿ ಮಾತೃ ಪಕ್ಷದಲ್ಲಿ ಸ್ಪರ್ಧಿಸಲು ಅವಕಾಶ ಸಿಗದಿರುವುದು ತಿಳಿಯುತ್ತಿದ್ದಂತೆ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
   ಉಳಿದಂತೆ ಸುಮಾರು ೩-೪ ವರ್ಷಗಳಿಂದ ಆಮ್ ಆದ್ಮಿ ಪಾರ್ಟಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಪ್ರಮುಖರಾದ ಉಪಾಧ್ಯಕ್ಷರಾಗಿದ್ದ ಮುಳ್ಕೆರೆ ಲೋಕೇಶ್, ಪ್ರಧಾನ ಕಾರ್ಯದರ್ಶಿಯಾಗಿದ್ದ ವಿ. ವಿನೋದ್, ಕಾರ್ಯದರ್ಶಿಯಾಗಿದ್ದ ಪ್ರದೀಪ್ ಹಾಗು ಮಹಿಳಾ ಘಟಕದ ತಾಲೂಕು ಅಧ್ಯಕ್ಷೆಯಾಗಿದ್ದ ಕಾಂತ ದಿನೇಶ್ ಪಕ್ಷವನ್ನು ತೊರೆದು ಸ್ನೇಹ ಜೀವಿ ಬಳಗ ಸೇರ್ಪಡೆಗೊಂಡಿದ್ದಾರೆ.
  ಉಳಿದಂತೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನದ ನಂತರ ಜೆಡಿಎಸ್ ಪಕ್ಷ ಒಡೆದ ಮನೆಯಂತಾಗಿದ್ದು, ಇದೀಗ ಪುನಃ ಶಾರದ ಅಪ್ಪಾಜಿ ನೇತೃತ್ವದಲ್ಲಿ ಒಗ್ಗಟ್ಟು ಪ್ರದರ್ಶಿಸಲಾಗುತ್ತಿದೆ. ಪ್ರಮುಖವಾಗಿ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಪಕ್ಷದಿಂದ ದೂರ ಉಳಿದಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಅಪ್ಪಾಜಿ ರಾಜಕೀಯ ಒಡನಾಡಿಯಾಗಿದ್ದ ಎಸ್. ಕುಮಾರ್ ಶಾಸಕ ಬಿ.ಕೆ ಸಂಗಮೇಶ್ವರ್ ಪರ ಗುರುತಿಸಿಕೊಂಡಿದ್ದರು. ಇದೀಗ ಪುನಃ ಜೆಡಿಎಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಅಭ್ಯರ್ಥಿಗಳ ಗೆಲುವಿಗೆ ಶಕ್ತಿಮೀರಿ ಶ್ರಮಿಸುವುದಾಗಿ ಇತ್ತೀಚಿಗೆ ಸುದ್ದಿಗೋಷ್ಠಿಯಲ್ಲಿ ಭರವಸೆ ನೀಡಿದ್ದಾರೆ.
          ೫ ಕಡೆ ನಾಮಪತ್ರ ಸಲ್ಲಿಕೆಗೆ ಅವಕಾಶ:
      ತಾಲೂಕು ಚುನಾವಣಾಧಿಕಾರಿಯಾಗಿರುವ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ನಗರಸಭೆ ೩೫ ವಾರ್ಡ್‌ಗಳ ಚುನಾವಣೆ ಹಿನ್ನಲೆಯಲ್ಲಿ ನಾಮಪತ್ರ ಸಲ್ಲಿಸಲು ೫ ಕಡೆ ಕೇಂದ್ರಗಳನ್ನು ತೆರೆದಿದ್ದಾರೆ.
ವಾರ್ಡ್ ನಂ. ೧, ೨, ೩, ೪, ೩೩, ೩೪ ಮತ್ತು ೩೫ರಲ್ಲಿ ಸ್ಪರ್ಧಿಸುವವರು  ಸಮಾಜ ಕಲ್ಯಾಣ ಇಲಾಖೆ, ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ. ನಾಗರಾಜ್ ಚುನವಣಾಧಿಕಾರಿಯಾಗಿ, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
     ವಾರ್ಡ್ ನಂ. ೫, ೬, ೭, ೮, ೯, ೧೦ ಮತ್ತು ೧೧ರಲ್ಲಿ ಸ್ಪರ್ಧಿಸುವವರು ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಅನ್ಸರ್ ಆಲಿ ಬೇಗ್ ಚುನಾವಣಾಧಿಕಾರಿಯಾಗಿ, ತಾಲೂಕು ಪಂಚಾಯಿತಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ವಾರ್ಡ್ ನಂ. ೧೨, ೧೩, ೧೪, ೧೫, ೧೬, ೧೭ ಮತ್ತು ೧೮ರಲ್ಲಿ ಸ್ಪರ್ಧಿಸುವವರು ನಗರಸಭೆ ಉಪಾಧ್ಯಕ್ಷರ ಕೊಠಡಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ಮೀನುಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಷಡಾಕ್ಷರಿ ಚುನಾವಣಾಧಿಕಾರಿಯಾಗಿ, ತಾಲೂಕು ಪಂಚಾಯಿತಿ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
     ವಾರ್ಡ್ ನಂ. ೧೯, ೨೦, ೨೧, ೨೨, ೨೩, ೨೪ ಮತ್ತು ೨೫ರಲ್ಲಿ ಸ್ಪರ್ಧಿಸುವವರು ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ಕೃಷಿ ಇಲಾಖೆ ಉಪ ನಿರ್ದೇಶಕ ಡಿ.ಎಂ ಬಸವರಾಜ್ ಚುನಾವಣಾಧಿಕಾರಿಯಾಗಿ, ಸಹಾಯಕ ಕೃಷಿ ನಿರ್ದೇಶಕ ಬಿ.ಸಿ ಶಶಿಧರ್ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
      ವಾರ್ಡ್ ನಂ.೨೬, ೨೭, ೨೮, ೨೯, ೩೦, ೩೧ ಮತ್ತು ೩೨ರಲ್ಲಿ ಸ್ಪರ್ಧಿಸುವವರು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ಚುನಾವಣಾಧಿಕಾರಿಯಾಗಿ, ಹಿರಿಯ ಸಹಾಯಕ ನಿರ್ದೇಶಕ ಜೆ. ಕಾಂತರಾಜ್ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
         ಅರ್ಜಿ ವಜಾ :
    ನಗರಸಭೆ ಚುನಾವಣೆ ತಡೆಯಾಜ್ಞೆ ಸಂಬಂಧ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ಬುಧವಾರ ನಡೆದಿದ್ದು, ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಚುನಾವಣಾ ಪ್ರಕ್ರಿಯೆಗಳು ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆ.

ಎಬಿವಿಪಿ ವತಿಯಿಂದ ವೀರ ಯೋಧರಿಗೆ ಶ್ರದ್ದಾಂಜಲಿ

ಛತ್ತಿಸ್‌ಗಡದಲ್ಲಿ ಶನಿವಾರ ನಡೆದ ನಕ್ಸಲ್ ದಾಳಿಯಲ್ಲಿ ಮೃತಪಟ್ಟ ವೀರ ಯೋಧರಿಗೆ ಭದ್ರಾವತಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು.
   ಭದ್ರಾವತಿ, ಏ. ೭: ಛತ್ತಿಸ್‌ಗಡದಲ್ಲಿ ಶನಿವಾರ ನಡೆದ ನಕ್ಸಲ್ ದಾಳಿಯಲ್ಲಿ ಮೃತಪಟ್ಟ ವೀರ ಯೋಧರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು.
  ನಕ್ಸಲ್ ದಾಳಿಯನ್ನು ಖಂಡಿಸಿರುವ ವಿದ್ಯಾರ್ಥಿ ಪರಿಷತ್ ನಕ್ಸಲರ ಅಟ್ಟಹಾಸಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸುವ ಮೂಲಕ ಹುತಾತ್ಮರಾದ ವೀರ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪರಿಷತ್‌ನ ಪ್ರಮುಖರಾದ ಆಕಾಶ್, ಮನು, ಕೇಶವ, ದಿಲೀಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೆಎಸ್‌ಆರ್‌ಟಿಸಿ ನೌಕರರ ಹೋರಾಟಕ್ಕೆ ಬೆಂಬಲ : ಬಸ್‌ಗಳಿಲ್ಲದೆ ಬಿಕೋ ಎನ್ನುತ್ತಿರುವ ನಿಲ್ದಾಣ

ಭದ್ರಾವತಿ ಬಸ್ ನಿಲ್ದಾಣ ಬಸ್‌ಗಳಿಲ್ಲದೆ ಬಿಕೋ ಎನ್ನುತ್ತಿರುವುದು. 
    ಭದ್ರಾವತಿ, ಏ. ೭: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಹೋರಾಟಕ್ಕೆ ನಗರದಲ್ಲೂ ಪೂರಕ ಬೆಂಬಲ ವ್ಯಕ್ತವಾಗಿದ್ದು, ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆಯಿಂದ ಯಾವುದೇ ಬಸ್‌ಗಳ ಸಂಚಾರ ಕಂಡು ಬರಲಿಲ್ಲ. ಇದರಿಂದಾಗಿ ದೂರದ ಊರುಗಳಿಗೆ ತೆರಳಬೇಕಾದ ಪ್ರಯಾಣಿಕರು ಸಂಕಷ್ಟಕ್ಕೆ ಒಳಗಾಗುವಂತಾಯಿತು.
   ಖಾಸಗಿ ಬಸ್‌ಗಳ ಸಂಚಾರ ಎಂದಿನಂತೆ ಕಂಡು ಬಂದಿದ್ದು, ಹೊಳೆಹೊನ್ನೂರು, ಚನ್ನಗಿರಿ, ದಾವಣಗೆರೆ, ಚಿತ್ರದುರ್ಗ ಹಾಗು ಹುಣಸೇಕಟ್ಟೆ, ಶಂಕರಘಟ್ಟ ಮಾರ್ಗವಾಗಿ ಸಂಚರಿಸುವ ಖಾಸಗಿ ಬಸ್‌ಗಳಲ್ಲಿ ಹೆಚ್ಚಿನ ಪ್ರಯಾಣಿಕರು ಕಂಡು ಬಂದರು. ಉಳಿದಂತೆ ಭದ್ರಾವತಿ-ಶಿವಮೊಗ್ಗ ನಡುವೆ ಸಂಚರಿಸುವ ಪ್ರಯಣಿಕರು ಮ್ಯಾಕ್ಸಿಕ್ಯಾಬ್‌ಗಳನ್ನು ಅವಲಂಬಿಸುವಂತಾಯಿತು. ಕೆಲವರು ಸ್ವಂತ ವಾಹನಗಳಲ್ಲಿ ಸಂಚರಿಸುತ್ತಿರುವುದು ಕಂಡು ಬಂದಿತು.