ಗುರುವಾರ, ಅಕ್ಟೋಬರ್ 23, 2025

ಮಲೆನಾಡಿನ ವಿಶಿಷ್ಟ ಜಾನಪದ ಕಲೆ ಅಂಟಿಗೆ ಪಂಟಿಗೆ ಕಲಾ ತಂಡಕ್ಕೆ ಸ್ವಾಗತ

ಶಾಸಕ ಸಂಗಮೇಶ್ವರ್ ಸೇರಿದಂತೆ ೪೦ ಅಪೇಕ್ಷಿತರ ಮನೆಗಳಿಗೆ ತೆರಳಿ ಪ್ರದರ್ಶನ 

ಭದ್ರಾವತಿಯಲ್ಲಿ ತೀರ್ಥಹಳ್ಳಿ ತಾಲೂಕಿನ ಶಕುಂತಲಮ್ಮ ಮತ್ತು ಸಂಗಡಿಗರ ಅಂಟಿಗೆ ಪಂಟಿಗೆ ಮಹಿಳಾ ತಂಡವನ್ನು ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ (ಎಸ್‌ಎವಿ) ಕನ್ನಡ ಶಾಲೆ ಸಮೀಪದಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ ಅಂಟಿ ಪಂಟಿಗೆ ಪ್ರದರ್ಶನಕ್ಕೆ ಚಾಲನೆ ನೀಡಿದರು. 
    ಭದ್ರಾವತಿ: ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ವತಿಯಿಂದ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಈ ಬಾರಿ ಸಹ ದೀಪಾವಳಿ ಸಂಭ್ರಮಕ್ಕೆ ಸಡಗರ ತರುವ ಮಲೆನಾಡಿನ ವಿಶಿಷ್ಟ ಜಾನಪದ ಕಲೆಯಾದ ಅಂಟಿಗೆ ಪಂಟಿಗೆ ಕಲಾ ತಂಡವನ್ನು ನಗರಕ್ಕೆ ಆಹ್ವಾನಿಸಲಾಗಿತ್ತು. 
    ತೀರ್ಥಹಳ್ಳಿ ತಾಲೂಕಿನ ಶಕುಂತಲಮ್ಮ ಮತ್ತು ಸಂಗಡಿಗರ ಅಂಟಿಗೆ ಪಂಟಿಗೆ ಮಹಿಳಾ ತಂಡವನ್ನು ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ (ಎಸ್‌ಎವಿ) ಕನ್ನಡ ಶಾಲೆ ಸಮೀಪದಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ ಅಂಟಿ ಪಂಟಿಗೆ ಪ್ರದರ್ಶನಕ್ಕೆ ಚಾಲನೆ ನೀಡಿದರು. 
     ನಂತರ ಕಲಾ ತಂಡ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಸುಮಾರು ೪೦ ಅಪೇಕ್ಷಿತರ ಮನೆಗಳಿಗೆ ಜ್ಯೋತಿಯೊಂದಿಗೆ ತೆರಳಿ ಅಂಟಿಗೆ ಪಂಟಿಗೆ ಕಲೆ ಪ್ರದರ್ಶಿಸಿತು. ಅಲ್ಲದೆ ಹಬ್ಬದ ಶುಭಾ ಕೋರುವ ಮೂಲಕ ಕುಟುಂಬದಲ್ಲಿ ಸಮೃದ್ಧಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸಿತು. ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ, ಜಾನಪದ ಕಲಾವಿದ ಎಂ.ಆರ್ ರೇವಣಪ್ಪ ನೇತೃತ್ವವಹಿಸಿದ್ದರು. 
    ಅಂಟಿಗೆ ಪಂಟಿಗೆ ಈ ವಿಶಿಷ್ಟ ಜಾನಪದ ಕಲೆ ಪ್ರಸ್ತುತ ನಶಿಸಿ ಹೋಗುವ ಹಂತದಲ್ಲಿದ್ದು, ಇದನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವ ಉದ್ದೇಶದೊಂದಿಗೆ ಈ ಕಲಾ ತಂಡವನ್ನು ಆಹ್ವಾನಿಸಲಾಗಿತ್ತು.  
ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಪ್ರಮುಖರು ಪಾಲ್ಗೊಂಡಿದ್ದರು. 
 

ತೀರ್ಥಹಳ್ಳಿ ತಾಲೂಕಿನಿಂದ ಭದ್ರಾವತಿಗೆ ಆಗಮಿಸಿದ್ದ ಶಕುಂತಲಮ್ಮ ಮತ್ತು ಸಂಗಡಿಗರ ಅಂಟಿಗೆ ಪಂಟಿಗೆ ಮಹಿಳಾ ತಂಡ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಸುಮಾರು ೪೦ ಅಪೇಕ್ಷಿತರ ಮನೆಗಳಿಗೆ ಜ್ಯೋತಿಯೊಂದಿಗೆ ತೆರಳಿ ಅಂಟಿಗೆ ಪಂಟಿಗೆ ಕಲೆ ಪ್ರದರ್ಶಿಸಿತು. ಅಲ್ಲದೆ ಹಬ್ಬದ ಶುಭಾ ಕೋರುವ ಮೂಲಕ ಕುಟುಂಬದಲ್ಲಿ ಸಮೃದ್ಧಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸಿತು. 

ನಿರುದ್ಯೋಗಿಗಳಿಗೆ ವಂಚನೆ ಆರೋಪ : ಖಾಸಗಿ ಕಂಪನಿ ವಿರುದ್ಧ ಪ್ರಕರಣ ದಾಖಲು

ಕಂಪನಿಗೆ ಬೀಗ ಜಡಿದ ತಹಸೀಲ್ದಾರ್ ನೇತೃತ್ವದ ತಂಡ 

ನಿರುದ್ಯೋಗಿಗಳಿಂದ ಸಾವಿರಾರು ರು. ಪಡೆದು ವಂಚಿಸಲಾಗುತ್ತಿದೆ ಎಂದು ಆರೋಪಿಸಿ ಭದ್ರಾವತಿ ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೆಕ್ಸಾನ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಇತ್ತೀಚೆಗೆ ಪ್ರತಿಭಟನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಹೋರಾಟಗಾರರು ಆಗ್ರಹಿಸಿದ್ದರು. ಈ ಹಿನ್ನಲೆಯಲ್ಲಿ ಗುರುವಾರ ತಹಸೀಲ್ದಾರ್ ಪರುಸಪ್ಪ ಕುರುಬರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಂಪನಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಅಲ್ಲದೆ ಕಂಪನಿಗೆ ಬೀಗ ಜಡಿಯಲಾಗಿದೆ. 
    ಭದ್ರಾವತಿ : ನಿರುದ್ಯೋಗಿಗಳಿಂದ ಸಾವಿರಾರು ರು. ಪಡೆದು ವಂಚಿಸಲಾಗುತ್ತಿದೆ ಎಂದು ಆರೋಪಿಸಿ ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೆಕ್ಸಾನ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಇತ್ತೀಚೆಗೆ ಪ್ರತಿಭಟನೆ ನಡೆಸಿ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಹೋರಾಟಗಾರರು ಆಗ್ರಹಿಸಿದ್ದರು. 
ರಾಜ್ಯದ ಧಾರವಾಡ, ಹುಬ್ಬಳ್ಳಿ, ರಾಯಚೂರು ಸೇರಿದಂತೆ ಸುತ್ತ ಮುತ್ತಲ ಜಿಲ್ಲೆಗಳಿಂದ ನೂರಾರು ಯುವಕ, ಯುವತಿಯರನ್ನು ಕರೆತಂದು ಅವರಿಂದ ಸಾವಿರಾರು ರು. ಹಣ ಪಡೆದು ಪ್ರೊಡೆಕ್ಟ್ ಹೆಸರಲ್ಲಿ ವಂಚಿಸಲಾಗುತ್ತಿದೆ ಎಂದು ಪ್ರತಿಭಟನೆ ನಡೆಸಿ ಆರೋಪಿಸಲಾಗಿತ್ತು. 
    ಈ ಕಂಪನಿಯ ಗುಟ್ಟು ಹೊರಬರಬಾರದು ಎಂದು ಸ್ಥಳೀಯರಿಗೆ ಉದ್ಯೋಗ ನೀಡದೆ ವಂಚಿಸುತ್ತಿದ್ದಾರೆ. ಅಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವ ಯುವಕರಿಗೆ ಯಾವುದೇ ಸಾರಿಗೆ, ಸಂಬಳ, ಭತ್ಯೆ ಇತ್ಯಾದಿ ಭದ್ರತೆ ಇರುವುದಿಲ್ಲ. ಕಾರ್ಮಿಕ ಇಲಾಖೆಯ ನೋಂದಣಿಯಾಗಲಿ ಇರುವುದಿಲ್ಲ. ಈ ಹಿನ್ನಲೆಯಲ್ಲಿ ತಕ್ಷಣ ಈ ಕಂಪನಿಯ ವಿರುದ್ದ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗ್ರೇಡ್-೨ ತಹಸೀಲ್ದಾರ್ ಮಂಜನಾಯ್ಕ್ ರವರಿಗೆ ಮನವಿ ಸಲ್ಲಿಸಲಾಗಿತ್ತು. 
ಈ ಹಿನ್ನಲೆಯಲ್ಲಿ ಗುರುವಾರ ತಹಸೀಲ್ದಾರ್ ಪರುಸಪ್ಪ ಕುರುಬರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಂಪನಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಅಲ್ಲದೆ ಕಂಪನಿಗೆ ಬೀಗ ಜಡಿಯಲಾಗಿದೆ. 
ಹೋರಾಟಗಾರರಾದ ಕೆ. ಮಂಜುನಾಥ್, ನಗರಸಭೆ ಸದಸ್ಯ ಐ.ವಿ ಸಂತೋಷ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ನಗರಸಭೆ ಕುಡಿಯುವ ನೀರಿನ ಬಣ್ಣದಲ್ಲಿ ವ್ಯತ್ಯಸ : ನೀರು ವಿಷಪೂರತವಲ್ಲ

ತುರ್ತುಸಭೆಯಲ್ಲಿ ಪೌರಾಯುಕ್ತ ಎನ್.ಕೆ ಹೇಮಂತ್ ಸ್ಪಷ್ಟನೆ 

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ಕುಡಿಯುವ ನೀರಿನ ಸಂಬಂಧ ತುರ್ತುಸಭೆ ನಡೆಸಲಾಯಿತು. 
    ಭದ್ರಾವತಿ: ಅಕಾಲಿಕ ಮಳೆಯಿಂದಾಗಿ ಭದ್ರಾ ಜಲಾಶಯದಿಂದ ನದಿಗೆ ಹರಿಯುತ್ತಿರುವ ನೀರಿನ ಜೊತೆಗೆ ಚರಂಡಿ, ಹಳ್ಳಕೊಳ್ಳ, ತೋಟ ಮತ್ತು ಜಮೀನಿನ ನೀರು ಸಹ ಸೇರ್ಪಡೆಗೊಂಡು ನೀರು ಮತ್ತಷ್ಟು ಕಲ್ಮಶಗೊಳ್ಳುತ್ತಿದೆ. ನಗರಸಭೆ ಶುದ್ಧೀಕರಣ ಘಟಕದಲ್ಲಿ ಈ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತಿದೆ. ಆದರೂ ಕೆಲವೆಡೆ ನೀರಿನ ಬಣ್ಣದಲ್ಲಿ ವ್ಯತ್ಯಾಸವಾಗುತ್ತಿದೆ. ಈ ನೀರು ವಿಷಪೂರಿತವಲ್ಲ ಕುಡಿಯಲು ಯೋಗ್ಯವಾಗಿದೆ ಎಂದು ನಗರಸಭೆ ಪೌರಾಯುಕ್ತ ಎನ್.ಕೆ ಹೇಮಂತ್ ಮನವರಿಕೆ ಮಾಡಿದರು.
ಅವರು ಗುರುವಾರ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ  ಆಯೋಜಿಸಲಾಗಿದ್ದ ಕುಡಿಯುವ ನೀರಿನ ತುರ್ತು ಸಭೆಯಲ್ಲಿ ಮಾಹಿತಿ ನೀಡಿದರು. 
    ನಗರಸಭೆಯಿಂದ ಪ್ರತಿದಿನ ನದಿಯಿಂದ ೩೪.೬೭ ಎಂ.ಎಲ್.ಡಿ ನೀರು ಪಡೆದು ೩೧.೨ ಎಂ.ಎಲ್.ಡಿ ನೀರು ಶುದ್ಧೀಕರಿಸಲಾಗುತ್ತಿದೆ. ೨೯.೬೪ ಎಂ ಎಲ್ ಡಿ ಶುದ್ಧೀಕರಿಸಿದ ನೀರು  ಕುಡಿಯಲು ಸರಬರಾಜು ಮಾಡಲಾಗುತ್ತಿದೆ. ನಗರಸಭೆ  ೨೩.೧೫ ಜಿಎಲ್‌ಎಸ್‌ಆರ್ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ೨೪,೫೫೦ ಮನೆ  ಮತ್ತು ೧,೪೫೦ ವಾಣಿಜ್ಯ ಬಳಕೆ ನೀರಿನ ಸಂಪರ್ಕ ಹೊಂದಿದ್ದು, ಅಲ್ಲದೆ ಕೈಗಾರಿಕೆ, ವಸತಿರಹಿತ ಸಂಪರ್ಕ (ಕೆ.ಎಸ್.ಆರ್.ಪಿ ಮತ್ತು ಸೋಗಾನೆ ಕಾರಾಗೃಹ) ೧೦ ಎಲ್.ಎಲ್ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
    ನೀರಿನ ಶುದ್ಧೀಕರಣ ಘಟಕದಲ್ಲಿ ಇಸ್ರೇಲ್ ಮತ್ತು ಜಪಾನ್ ಮಾದರಿಯ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ನೀರು ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತಿದೆ. ಶೇ. ೭೦ರಷ್ಟು ಶುದ್ಧೀಕರಿಸಿದ ನೀರು ಜನರಿಗೆ ತಲುಪಿತ್ತಿದ್ದು, ಕೆಲವು ಕಾರಣಗಳಿಂದ ಶೇ.೩೦ರಷ್ಟು ನೀರು ವ್ಯರ್ಥವಾಗುತ್ತಿದೆ. ಈ ಪ್ರಮಾಣ ಬೇರೆ ಕಡೆ ಹೆಚ್ಚಿನದಾಗಿದೆ. ಇನ್ನು ಹೆಚ್ಚಿನ ಸುಧಾರಣೆಗಳನ್ನು ಕೈಗೊಂಡಲ್ಲಿ ಈ ಪ್ರಮಾಣ ಮತ್ತಷ್ಟು ಕಡಿಮೆಗೊಳಿಸಬಹುದು ಎಂದರು. 
    ಕೆಲವು ದಿನಗಳಿಂದ ಅಕಾಲಿಕ ಮಳೆಯಿಂದಾಗಿ ಕೆಲವು ಭಾಗಗಳಲ್ಲಿ ನೀರಿನ ಬಣ್ಣದಲ್ಲಿ ವ್ಯತ್ಯಾಸವಾಗಿದೆ. ಈ ನೀರನ್ನು ಜನರು ಒಂದು ದಿನ ಬಿಟ್ಟು ಮರುದಿನ ಬಳಸಬಹುದು ಅಥವಾ ನೀರನ್ನು ಬಿಸಿ ಮಾಡಿ ಬಳಸಬಹುದು. ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದರು.  
    ಸ್ಥಾಯಿ ಸಮಿತಿ  ಅಧ್ಯಕ್ಷ ಸೈಯದ್ ರಿಯಾಜ್, ಹಿರಿಯ ಸದಸ್ಯ ವಿ. ಕದಿರೇಶ್ ಉಪಸ್ಥಿತರಿದ್ದರು. 
      ನಗರಸಭೆ ಅಧಿಕಾರಿಗಳಾದ ಪ್ರಸಾದ್, ಸಂತೋಷ್ ಪಾಟೀಲ್, ನೀರು ಸರಬರಾಜು ವಿಭಾಗದ ಎಂ.ಡಿ ಗೌಸ್, ನಗರಸಭೆ ಸದಸ್ಯರಾದ ಶಶಿಕಲಾ ನಾರಾಯಣಪ್ಪ, ಅನುಸುಧಾ ಮೋಹನ್ ಪಳನಿ, ಬಸವರಾಜ್ ಬಿ. ಆನೆ ಕೊಪ್ಪ, ಜಾರ್ಜ್, ಐ.ವಿ ಸಂತೋಷ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಟಿಎಪಿಸಿಎಂಎಸ್ ಆಡಳಿತ ಮಂಡಳಿಗೆ ಕಾಂಗ್ರೆಸ್ ಬೆಂಬಲಿತ ನೂತನ ನಿರ್ದೇಶಕರು

೨೫ ಲಕ್ಷ ರು. ನಷ್ಟ ತೀರಿಸಿ, ರೈತರಿಗೆ ಅನುಕೂಲ ಮಾಡಿಕೊಡಲು ಬದ್ಧ 

ಭದ್ರಾವತಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನ ೧೩ ಜನ ನಿರ್ದೇಶಕರು ಆಯ್ಕೆಯಾಗಿದ್ದು, ನಗರದ ಚನ್ನಗಿರಿ ರಸ್ತೆಯಲ್ಲಿರುವ  ಸಂಘದ ಕಛೇರಿಯಲ್ಲಿ ಗುರುವಾರ ನೂತನ ನಿರ್ದೇಶಕರು ಸಂಭ್ರಮ ಹಂಚಿಕೊಂಡರು. 
    ಭದ್ರಾವತಿ : ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಗೆ ನೂತನ ೧೩ ಜನ ನಿರ್ದೇಶಕರು ಆಯ್ಕೆಯಾಗಿದ್ದು, ನಗರದ ಚನ್ನಗಿರಿ ರಸ್ತೆಯಲ್ಲಿರುವ  ಸಂಘದ ಕಛೇರಿಯಲ್ಲಿ ಗುರುವಾರ ನೂತನ ನಿರ್ದೇಶಕರು ಸಂಭ್ರಮ ಹಂಚಿಕೊಂಡರು. 
    ನೂತನ ನಿರ್ದೇಶಕ ಬಿ.ಕೆ ಶಿವಕುಮಾರ್ ಮಾತನಾಡಿ, ನಿರ್ದೇಶಕರಾಗಿ ಆಯ್ಕೆಯಾಗಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ. ನಿರ್ದೇಶಕರಾದ ನಾವೆಲ್ಲರೂ ಸಹ ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಪ್ರಸ್ತುತ ಸಂಘದಲ್ಲಿ ೨೫೩ ಷೇರುದಾರರಿದ್ದು, ೨೫ ಲಕ್ಷ ರು. ನಷ್ಟದಲ್ಲಿ ಮುನ್ನಡೆಯುತ್ತಿದೆ. ಸಂಘವನ್ನು ಸಾಲದಿಂದ ಮುಕ್ತಿಗೊಳಿಸಿ ರೈತರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವುದಾಗಿ ಭರವಸೆ ನೀಡಿದರು. 
    ನೂತನ ನಿರ್ದೇಶಕರಾದ ತಳ್ಳಿಕಟ್ಟೆ ಕ್ಷೇತ್ರದ ಎಚ್. ಲೋಕೇಶಪ್ಪ, ಜಯನಗರ ಕ್ಷೇತ್ರದ ರವೀಂದ್ರನಾಯ್ಡು, ಕೆಂಚೇನಹಳ್ಳಿ ಕ್ಷೇತ್ರದ ಸುರೇಶ್, ಭದ್ರಾವತಿ ಕ್ಷೇತ್ರದ ಬಿ.ಟಿ ನಾಗರಾಜ್, ಬಾರಂದೂರು ಕ್ಷೇತ್ರದ ಡಿ. ಶಿವಶಂಕರ್, ಮಾರಶೆಟ್ಟಿಹಳ್ಳಿ ಕ್ಷೇತ್ರದ ಕೆ. ಶ್ರೀನಿವಾ, ಅಗಸನಹಳ್ಳಿ ಕ್ಷೇತ್ರದ ಕೃಷ್ಣಪ್ಪ, ಕೊಮಾರನಹಳ್ಳಿ ಕ್ಷೇತ್ರದ ಸತ್ಯನಾರಾಯಣರಾವ್, ತಡಸ ಕ್ಷೇತ್ರದ ಖಲೀಂ ಉಲ್ಲಾ, ತಳ್ಳಿಕಟ್ಟೆ ಕ್ಷೇತ್ರದ ಓ.ಎನ್ ರತ್ನಮ್ಮ ಹಾಗು ಭದ್ರಾವತಿ ಕ್ಷೇತ್ರದ ವಿನೋದಬಾಯಿ ಉಪಸ್ಥಿತರಿದ್ದು ಸಂಭ್ರಮ ಹಂಚಿಕೊಂಡರು. 
    ಸಹಕಾರಿ ಕ್ಷೇತ್ರದಲ್ಲೂ ಕಾಂಗ್ರೆಸ್ ಮುಂಚೂಣಿ: 
    ನೂತನ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಎಸ್. ಕುಮಾರ್ ಮತ್ತು ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿಯವರು, ಈ ಚುನಾವಣೆಯಲ್ಲಿ ೮ ಕ್ಷೇತ್ರಗಳಿಂದ ಒಟ್ಟು ೧೭ ಮಂದಿ ಸ್ಪರ್ಧಿಸಿ, ೮ ಮಂದಿ ಆಯ್ಕೆಯಾಗಿದ್ದಾರೆ. ಉಳಿದ ೫ ಮಂದಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಒಟ್ಟು ೧೩ ನಿರ್ದೇಶಕರ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಎಲ್ಲಾ ೧೩ ನಿರ್ದೇಶಕರು ಸಹ ಕಾಂಗ್ರೆಸ್ ಬೆಂಬಲಿತರಾಗಿದ್ದು, ಕಾಂಗ್ರೆಸ್ ಸಹಕಾರಿ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದೆ. ವಿಶೇಷವಾಗಿ ಶಾಸಕರ ಸಹೋದರ ಬಿ.ಕೆ ಶಿವಕುಮಾರ್‌ರವರು ಆಯ್ಕೆಯಾಗಿರುವುದು ಸಂಘಕ್ಕೆ ಹೆಚ್ಚಿನ ಬಲಬಂದಿದೆ. ಮುಂದಿನ ದಿನಗಳಲ್ಲಿ ಸಂಘ ಹೆಚ್ಚಿನ ಬೆಳವಣಿಗೆ ಹೊಂದುವ ಮೂಲಕ ರೈತರ ನೆರವಿಗೆ ಮುಂದಾಗುವ ವಿಶ್ವಾಸವಿದೆ ಎಂದರು. ಪ್ರಮುಖರಾದ ದಶರಥಗಿರಿ, ಬಸವಂತಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.