ಗುರುವಾರ, ಅಕ್ಟೋಬರ್ 23, 2025

ನಗರಸಭೆ ಕುಡಿಯುವ ನೀರಿನ ಬಣ್ಣದಲ್ಲಿ ವ್ಯತ್ಯಸ : ನೀರು ವಿಷಪೂರತವಲ್ಲ

ತುರ್ತುಸಭೆಯಲ್ಲಿ ಪೌರಾಯುಕ್ತ ಎನ್.ಕೆ ಹೇಮಂತ್ ಸ್ಪಷ್ಟನೆ 

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಗುರುವಾರ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ಕುಡಿಯುವ ನೀರಿನ ಸಂಬಂಧ ತುರ್ತುಸಭೆ ನಡೆಸಲಾಯಿತು. 
    ಭದ್ರಾವತಿ: ಅಕಾಲಿಕ ಮಳೆಯಿಂದಾಗಿ ಭದ್ರಾ ಜಲಾಶಯದಿಂದ ನದಿಗೆ ಹರಿಯುತ್ತಿರುವ ನೀರಿನ ಜೊತೆಗೆ ಚರಂಡಿ, ಹಳ್ಳಕೊಳ್ಳ, ತೋಟ ಮತ್ತು ಜಮೀನಿನ ನೀರು ಸಹ ಸೇರ್ಪಡೆಗೊಂಡು ನೀರು ಮತ್ತಷ್ಟು ಕಲ್ಮಶಗೊಳ್ಳುತ್ತಿದೆ. ನಗರಸಭೆ ಶುದ್ಧೀಕರಣ ಘಟಕದಲ್ಲಿ ಈ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತಿದೆ. ಆದರೂ ಕೆಲವೆಡೆ ನೀರಿನ ಬಣ್ಣದಲ್ಲಿ ವ್ಯತ್ಯಾಸವಾಗುತ್ತಿದೆ. ಈ ನೀರು ವಿಷಪೂರಿತವಲ್ಲ ಕುಡಿಯಲು ಯೋಗ್ಯವಾಗಿದೆ ಎಂದು ನಗರಸಭೆ ಪೌರಾಯುಕ್ತ ಎನ್.ಕೆ ಹೇಮಂತ್ ಮನವರಿಕೆ ಮಾಡಿದರು.
ಅವರು ಗುರುವಾರ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ  ಆಯೋಜಿಸಲಾಗಿದ್ದ ಕುಡಿಯುವ ನೀರಿನ ತುರ್ತು ಸಭೆಯಲ್ಲಿ ಮಾಹಿತಿ ನೀಡಿದರು. 
    ನಗರಸಭೆಯಿಂದ ಪ್ರತಿದಿನ ನದಿಯಿಂದ ೩೪.೬೭ ಎಂ.ಎಲ್.ಡಿ ನೀರು ಪಡೆದು ೩೧.೨ ಎಂ.ಎಲ್.ಡಿ ನೀರು ಶುದ್ಧೀಕರಿಸಲಾಗುತ್ತಿದೆ. ೨೯.೬೪ ಎಂ ಎಲ್ ಡಿ ಶುದ್ಧೀಕರಿಸಿದ ನೀರು  ಕುಡಿಯಲು ಸರಬರಾಜು ಮಾಡಲಾಗುತ್ತಿದೆ. ನಗರಸಭೆ  ೨೩.೧೫ ಜಿಎಲ್‌ಎಸ್‌ಆರ್ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ೨೪,೫೫೦ ಮನೆ  ಮತ್ತು ೧,೪೫೦ ವಾಣಿಜ್ಯ ಬಳಕೆ ನೀರಿನ ಸಂಪರ್ಕ ಹೊಂದಿದ್ದು, ಅಲ್ಲದೆ ಕೈಗಾರಿಕೆ, ವಸತಿರಹಿತ ಸಂಪರ್ಕ (ಕೆ.ಎಸ್.ಆರ್.ಪಿ ಮತ್ತು ಸೋಗಾನೆ ಕಾರಾಗೃಹ) ೧೦ ಎಲ್.ಎಲ್ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
    ನೀರಿನ ಶುದ್ಧೀಕರಣ ಘಟಕದಲ್ಲಿ ಇಸ್ರೇಲ್ ಮತ್ತು ಜಪಾನ್ ಮಾದರಿಯ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ನೀರು ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತಿದೆ. ಶೇ. ೭೦ರಷ್ಟು ಶುದ್ಧೀಕರಿಸಿದ ನೀರು ಜನರಿಗೆ ತಲುಪಿತ್ತಿದ್ದು, ಕೆಲವು ಕಾರಣಗಳಿಂದ ಶೇ.೩೦ರಷ್ಟು ನೀರು ವ್ಯರ್ಥವಾಗುತ್ತಿದೆ. ಈ ಪ್ರಮಾಣ ಬೇರೆ ಕಡೆ ಹೆಚ್ಚಿನದಾಗಿದೆ. ಇನ್ನು ಹೆಚ್ಚಿನ ಸುಧಾರಣೆಗಳನ್ನು ಕೈಗೊಂಡಲ್ಲಿ ಈ ಪ್ರಮಾಣ ಮತ್ತಷ್ಟು ಕಡಿಮೆಗೊಳಿಸಬಹುದು ಎಂದರು. 
    ಕೆಲವು ದಿನಗಳಿಂದ ಅಕಾಲಿಕ ಮಳೆಯಿಂದಾಗಿ ಕೆಲವು ಭಾಗಗಳಲ್ಲಿ ನೀರಿನ ಬಣ್ಣದಲ್ಲಿ ವ್ಯತ್ಯಾಸವಾಗಿದೆ. ಈ ನೀರನ್ನು ಜನರು ಒಂದು ದಿನ ಬಿಟ್ಟು ಮರುದಿನ ಬಳಸಬಹುದು ಅಥವಾ ನೀರನ್ನು ಬಿಸಿ ಮಾಡಿ ಬಳಸಬಹುದು. ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದರು.  
    ಸ್ಥಾಯಿ ಸಮಿತಿ  ಅಧ್ಯಕ್ಷ ಸೈಯದ್ ರಿಯಾಜ್, ಹಿರಿಯ ಸದಸ್ಯ ವಿ. ಕದಿರೇಶ್ ಉಪಸ್ಥಿತರಿದ್ದರು. 
      ನಗರಸಭೆ ಅಧಿಕಾರಿಗಳಾದ ಪ್ರಸಾದ್, ಸಂತೋಷ್ ಪಾಟೀಲ್, ನೀರು ಸರಬರಾಜು ವಿಭಾಗದ ಎಂ.ಡಿ ಗೌಸ್, ನಗರಸಭೆ ಸದಸ್ಯರಾದ ಶಶಿಕಲಾ ನಾರಾಯಣಪ್ಪ, ಅನುಸುಧಾ ಮೋಹನ್ ಪಳನಿ, ಬಸವರಾಜ್ ಬಿ. ಆನೆ ಕೊಪ್ಪ, ಜಾರ್ಜ್, ಐ.ವಿ ಸಂತೋಷ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ