ಭದ್ರಾವತಿ ಎಂಪಿಎಂ ಕಾರ್ಖಾನೆ ಸಮೀಪದಲ್ಲಿರುವ ದಿ ಸದರನ್ ಗ್ಯಾಸ್ ಲಿಮಿಟೆಡ್.
ಭದ್ರಾವತಿ, ಮೇ. ೫: ಕೊರೋನಾ ೨ನೇ ಅಲೆ ಪರಿಣಾಮ ವೈದ್ಯಕೀಯ ಉದ್ದೇಶಗಳಿಗೆ ಬಳಸುವ ಲಿಕ್ವಿಡ್ ಆಕ್ಸಿಜನ್(ದ್ರವ ರೂಪದ ಆಮ್ಲಜನಕ)ಗೆ ಇದೀಗ ಹೆಚ್ಚಿನ ಬೇಡಿಕೆಗಳು ಬರುತ್ತಿದ್ದು, ಜಿಲ್ಲೆಯಲ್ಲಿ ಲಿಕ್ವಿಡ್ ಆಕ್ಸಿಜನ್ ಕೊರತೆ ಎದುರಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ನಗರದ ದಿ ಸದರನ್ ಗ್ಯಾಸ್ ಲಿಮಿಟೆಡ್‌ನಲ್ಲಿ ಪುನಃ ಲಿಕ್ವಿಡ್ ಆಕ್ಸಿಜನ್ ಉತ್ಪಾದಿಸುವ ಸಂಬಂಧ ಕಂಪನಿಯೊಂದಿಗೆ ಚರ್ಚಿಸುವುದು ಸೂಕ್ತವಾಗಿದೆ.
ಜಿಲ್ಲೆಯಲ್ಲಿ ಲಿಕ್ವಿಡ್ ಆಕ್ಸಿಜನ್ ಕೊರತೆ ಉಂಟಾಗದಂತೆ ಎಚ್ಚರ ವಹಿಸಿರುವ ಜಿಲ್ಲಾಡಳಿತ ಈಗಾಗಲೇ ನಗರದ ವಿಐಎಸ್‌ಎಲ್ ಕಾರ್ಖಾನೆಯಲ್ಲಿರುವ ಬಾಲ್ದೋಟ ಒಡೆತನದ ಎಂಎಸ್‌ಪಿಎಲ್ ಖಾಸಗಿ ಆಕ್ಸಿಜನ್ ಉತ್ಪಾದನಾ ಕಂಪನಿಯೊಂದಿಗೆ ಸದ್ಯಕ್ಕೆ ಮಾತುಕತೆ ನಡೆಸಿದೆ. ಆದರೆ ಉತ್ಪಾದನೆ ಇನ್ನೂ ಆರಂಭಗೊಂಡಿಲ್ಲ. ಕಳೆದ ವರ್ಷ ಕೊರೋನಾ ಸೋಂಕು ಕಾಣಿಸಿಕೊಂಡ ಆರಂಭದಲ್ಲಿಯೇ ಈ ಕಾರ್ಖಾನೆಯನ್ನು ಪುನಃ ಆರಂಭಿಸುವ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪನವರ ನೇತೃತ್ವದಲ್ಲಿ ಮಾತುಕತೆಗಳು ನಡೆದಿದ್ದವು. ಆದರೆ ಹಲವು ಕಾರಣಗಳಿಂದ ಆರಂಭಗೊಂಡಿರಲಿಲ್ಲ. ಇದೀಗ ತುರ್ತಾಗಿ ಆರಂಭಿಸುವ ಲಕ್ಷಣಗಳು ಕಂಡು ಬರುತ್ತಿವೆ. ಒಂದು ವೇಳೆ ಉತ್ಪಾದನೆ ಆರಂಭಗೊಂಡರೂ ಸಹ ಹಲವು ಸಮಸ್ಯೆಗಳು ಎದುರಾಗಲಿವೆ. ಮುಖ್ಯವಾಗಿ ಈ ಕಂಪನಿ ಉತ್ಪಾದಿಸುತ್ತಿರುವುದು ಕಾರ್ಖಾನೆಗಳಿಗೆ ಪೂರೈಸುವ ಆಕ್ಸಿಜನ್ ಆಗಿದ್ದು, ಇದನ್ನು ವೈದ್ಯಕೀಯ ಉದ್ದೇಶಗಳಿಗೆ ಬಳಸಲು ದ್ರವ ರೂಪಕ್ಕೆ ಪರಿವರ್ತಿಸಬೇಕಾಗಿದೆ. ಆದರೆ ಈ ವ್ಯವಸ್ಥೆ ಕಾರ್ಖಾನೆ ಹೊಂದಿಲ್ಲ. ಈ ಹಿನ್ನಲೆಯಲ್ಲಿ ಕಾರ್ಖಾನೆ ಆರಂಭಗೊಂಡರೂ ಸಹ ಆಧುನೀಕರಣಗೊಳಿಸಬೇಕಾಗಿದೆ. ಈ ಕುರಿತಂತೆ ಚರ್ಚಿಸಲು ಸಚಿವ ಜಗದೀಶ್ ಶೆಟ್ಟರು ಗುರುವಾರ ಕಾರ್ಖಾನೆಗೆ ಭೇಟಿ ನೀಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ. ಒಟ್ಟಾರೆ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡು ಉತ್ಪಾದನೆ ಆರಂಭಗೊಳ್ಳಲು ಕನಿಷ್ಠ ೫-೬ ದಿನಗಳಾದರೂ ಬೇಕಾಗುತ್ತದೆ.
ಇದು ಒಂದೆಡೆ ಇರಲಿ, ಮತ್ತೊಂದೆಡೆ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಸಮೀಪದಲ್ಲಿರುವ ದಿ ಸದರನ್ ಗ್ಯಾಸ್ ಲಿಮಿಟೆಡ್‌ನಲ್ಲಿ ಪ್ರಸ್ತುತ ವೈದಕೀಯ ಉದ್ದೇಶಗಳಿಗೆ ಬಳಸುವ ಲಿಕ್ವಿಡ್ ಆಕ್ಸಿಜನ್ ಉತ್ಪಾದನೆ ಸ್ಥಗಿತಗೊಂಡಿದ್ದು, ಈ ಕಾರ್ಖಾನೆಯಲ್ಲಿ ಆರಂಭದಿಂದಲೂ ಒಡಂಬಡಿಕೆ ಮಾಡಿಕೊಂಡು ಲಿಕ್ವಿಡ್ ಆಕ್ಸಿಜನ್ ಖರೀದಿಸುತ್ತಿರುವ ಆಸ್ಪತ್ರೆಗಳಿಗೆ ಪ್ರಸ್ತುತ ಕಂಪನಿಯ ಇತರೆ ಘಟಕಗಳಿಂದ ಲಿಕ್ವಿಡ್ ಆಕ್ಸಿಜನ್ ಸರಬರಾಜು ಮಾಡಿಕೊಂಡು ಪೂರೈಸಲಾಗುತ್ತಿದೆ. ಇದೀಗ ಹೆಚ್ಚಿನ ಬೇಡಿಕೆಗಳು ಬರುತ್ತಿರುವ ಕಾರಣ ಕಾರ್ಖಾನೆಯಲ್ಲಿ ಪುನಃ ಲಿಕ್ವಿಡ್ ಆಕ್ಸಿಜನ್ ಉತ್ಪಾದಿಸುವ ಸಾಧ್ಯತೆ ಹೆಚ್ಚಾಗಿದೆ.
೧೯೭೭ರಲ್ಲಿ ಆರಂಭಗೊಂಡಿರುವ ದಿ ಸದರನ್ ಗ್ಯಾಸ್ ಲಿಮಿಟೆಡ್ ೪ ದಶಕಗಳಿಂದ ವೈದ್ಯಕೀಯ ಉದ್ದೇಶಗಳಿಗೆ ಹಾಗು ಕಾರ್ಖಾನೆಗಳಿಗೆ ಅಗತ್ಯವಿರುವ ಆಕ್ಸಿಜನ್ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಈ ಭಾಗದ ಮಧ್ಯಮ ಹಾಗು ಸಣ್ಣ ಪ್ರಮಾಣದ ಉದ್ಯಮಗಳು, ಆಸ್ಪತ್ರೆಗಳು ಆಕ್ಸಿಜನ್‌ಗಾಗಿ ಈ ಕಾರ್ಖಾನೆಯನ್ನು ಅವಲಂಬಿಸಿವೆ. ಜಿಲ್ಲಾಡಳಿತ ತಕ್ಷಣ ಈ ಕಾರ್ಖಾನೆ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ತುರ್ತಾಗಿ ಲಿಕ್ವಿಡ್ ಆಕ್ಸಿಜನ್ ಉತ್ಪಾದಿಸುವ ಸಂಬಂಧ ಚರ್ಚಿಸುವುದು ಸೂಕ್ತ ಎಂಬ ಸಲಹೆಗಳು ವ್ಯಕ್ತವಾಗುತ್ತಿವೆ.