Saturday, June 26, 2021

ಚನ್ನಗಿರಿ ಅರಣ್ಯ ವಲಯದ ವಾಚರ್ ಆತ್ಮಹತ್ಯೆಗೆ ಯತ್ನ

ಆರ್‌ಎಫ್‌ಓ ವಿರುದ್ಧ ಕಿರುಕುಳ ಆರೋಪ


ದಿನಗೂಲಿ ನೌಕರ ಮಹಾದೇವಪ್ಪ
   ಭದ್ರಾವತಿ, ಜೂ. ೨೬: ತಾಲೂಕಿನ ಅರಣ್ಯ ವಿಭಾಗದ ಚನ್ನಗಿರಿ ವಲಯದ ಕ್ಷೇಮಾಭಿವೃದ್ಧಿಯ ದಿನಗೂಲಿ ನೌಕರರೊಬ್ಬರು ಆರ್‌ಎಫ್‌ಓ ಎದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
    ದಿನಗೂಲಿ ನೌಕರ ಮಹಾದೇವಪ್ಪ ಆತ್ಮಹತ್ಯೆಗೆ ಯತ್ನಿಸಿದ್ದು, ಇವರನ್ನು ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
    ಮಹಾದೇವಪ್ಪ ಚನ್ನಗಿರಿ ವಲಯದಲ್ಲಿ ವಾಚರ್ ಕರ್ತವ್ಯ ನಿರ್ವಹಿಸುತ್ತಿದ್ದು, ವಲಯಾಧಿಕಾರಿ ಸತೀಶ್‌ರವರು ಇವರಿಗೆ ಕಗ್ಗಿ ಅರಣ್ಯ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಸೂಚಿಸಿದ್ದರು. ಆದರೆ ಮಹಾದೇವಪ್ಪರವರು ಕಗ್ಗಿ ಅರಣ್ಯ ಶಾಖೆ ವಾಸದ ಸ್ಥಳದಿಂದ ಸುಮಾರು ೪೦ ಕಿ.ಮೀ ದೂರದಲ್ಲಿರುವ ಹಿನ್ನಲೆಯಲ್ಲಿ ಹಾಗು ಆರೋಗ್ಯ ಸರಿ ಇಲ್ಲದ ಕಾರಣ ಚನ್ನಗಿರಿ ವಲಯದಲ್ಲಿಯೇ ಮುಂದುವರೆಸುವಂತೆ ಕೋರಿದ್ದರು ಎನ್ನಲಾಗಿದೆ.
    ಈ ನಡುವೆ  ಮಹಾದೇವಪ್ಪ ಅವರಿಗೆ ವಲಯಾಧಿಕಾರಿ ಸತೀಶ್‌ರವರು ಕಗ್ಗಿ ಅರಣ್ಯ ಶಾಖೆಯಲ್ಲೇ ಕರ್ತವ್ಯ ನಿರ್ವಹಿಸುವಂತೆ  ಒತ್ತಡ ಹಾಕಿದ್ದರು. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಹಿನ್ನಲೆಯಲ್ಲಿ ಮಹಾದೇವಪ್ಪ ಅವರ ಎದುರಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಆದರೆ ಈ ಕುರಿತು ಪೊಲೀಸ್ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಾಗಿದೆ.

ತುರ್ತು ಪರಿಸ್ಥಿತಿ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡವರ ಸ್ಮರಣೆ

ಭಾರತೀಯ ಜನತಾ ಪಕ್ಷ ಭದ್ರಾವತಿ ತಾಲೂಕು ಮಂಡಲ ವತಿಯಿಂದ ಶನಿವಾರ ಇಂದಿರಾಗಾಂಧಿಯವರ ಆಡಳಿತಾವಧಿಯಲ್ಲಿ ದೇಶಾದ್ಯಂತ ಜಾರಿಗೊಳಿಸಲಾಗಿದ್ದ ತುರ್ತು ಪರಿಸ್ಥಿತಿ ವಿರುದ್ಧ ಅಂದು ಹೋರಾಟದಲ್ಲಿ ಪಾಲ್ಗೊಂಡಿದ್ದವರನ್ನು ಸ್ಮರಿಸುವ ಮೂಲಕ ಅವರನ್ನು ಗೌರವಿಸಲಾಯಿತು.
   ಭದ್ರಾವತಿ, ಜೂ. ೨೬: ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ವತಿಯಿಂದ ಶನಿವಾರ ಇಂದಿರಾಗಾಂಧಿಯವರ ಆಡಳಿತಾವಧಿಯಲ್ಲಿ ದೇಶಾದ್ಯಂತ ಜಾರಿಗೊಳಿಸಲಾಗಿದ್ದ ತುರ್ತು ಪರಿಸ್ಥಿತಿ ವಿರುದ್ಧ ಅಂದು ಹೋರಾಟದಲ್ಲಿ ಪಾಲ್ಗೊಂಡಿದ್ದವರನ್ನು ಸ್ಮರಿಸುವ ಮೂಲಕ ಅವರನ್ನು ಗೌರವಿಸಲಾಯಿತು.
   ೧೯೭೫ರ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗು ಜನ ಸಂಘದ ನೇತೃತ್ವದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟದಲ್ಲಿ ಪಾಲ್ಗೊಂಡಿದ್ದ ಕ್ಷೇತ್ರದ ನಿವಾಸಿಗಳಾದ ರುದ್ರಪ್ಪ, ಸುದರ್ಶನಮೂರ್ತಿ, ಬಾರದಮ್ಮ, ಮಧುಕರ್‌ಕಾನಿಟ್ಕರ್, ಇಂದ್ರಸೇನಾ, ರಾಮಲಿಂಗಯ್ಯ ಮತ್ತು ಟಿ. ವೆಂಕಟೇಶ್ ಸೇರಿದಂತೆ ಇನ್ನಿತರರನ್ನು ಸನ್ಮಾನಿಸಿ ಗೌರವಿಸಲಾಯಿತು.
   ಅಲ್ಲದೆ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ಹೋರಾಟವನ್ನು ಸ್ಮರಿಸಲಾಯಿತು.
    ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಪ್ರಧಾನ ಕಾರ್ಯದರ್ಶಿ ಚನ್ನೇಶ್, ರಾಜ್ಯ ಕಾರ್ಯಕಾರಣಿ ಸದಸ್ಯೆ ಆರ್.ಎಸ್ ಶೋಭಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ಯುವ ಘಟಕದ ಅಧ್ಯಕ್ಷ ವಿಜಯ್, ನಗರಸಭಾ ಸದಸ್ಯೆ ಶಶಿಕಲಾ, ಪ್ರಮುಖರಾದ ವಿಶ್ವನಾಥರಾವ್ ಕೋಠಿ, ಚಂದ್ರಪ್ಪ, ಬಿ.ಎಸ್ ನಾರಾಯಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಿ : ಮಧುಸೂದನ್

ಎಚ್‌ಡಿಎಫ್‌ಸಿ ಬ್ಯಾಂಕ್ ಶಿವಮೊಗ್ಗ ಶಾಖೆ ಇದರ ಸಹಯೋಗದೊಂದಿಗೆ ಭದ್ರಾವತಿ ತರುಣ ಭಾರತಿ ವಿದ್ಯಾಕೇಂದ್ರದ ವತಿಯಿಂದ ನಗರದ ನ್ಯೂ ಕಾಲೋನಿಯಲ್ಲಿರುವ ಬಾಲಭಾರತಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವನಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.
   ಭದ್ರಾವತಿ, ಜೂ. ೨೬: ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದು ಇಂದಿನ ದಿನಗಳಲ್ಲಿ ಅತಿ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ವನಮಹೋತ್ಸವ ಕಾರ್ಯಕ್ರಮ ಹೆಚ್ಚು ಸಹಕಾರಿಯಾಗಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಶಿವಮೊಗ್ಗ ಶಾಖಾ ಅಧಿಕಾರಿ ಮಧುಸೂದನ್ ಹೇಳಿದರು.
   ಎಚ್‌ಡಿಎಫ್‌ಸಿ ಬ್ಯಾಂಕ್ ಶಿವಮೊಗ್ಗ ಶಾಖೆ ಇದರ ಸಹಯೋಗದೊಂದಿಗೆ ತರುಣ ಭಾರತಿ ವಿದ್ಯಾಕೇಂದ್ರದ ವತಿಯಿಂದ ನಗರದ ನ್ಯೂ ಕಾಲೋನಿಯಲ್ಲಿರುವ ಬಾಲಭಾರತಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
   ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ತಿಳಿಸಿಕೊಡುವ ಜೊತೆಗೆ ಪರಿಸರ ಸಂರಕ್ಷಣೆಯಂತಹ ಸಮಾಜ ಮುಖಿ ಕಾರ್ಯಗಳನ್ನು ವಿದ್ಯಾಸಂಸ್ಥೆ ಆಯೋಜಿಸಿಕೊಂಡು ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
      ವಿಶ್ವ ಭೂಷಣ ವಿಶ್ವಸ್ಥ ಮಂಡಳಿ ಅಧ್ಯಕ್ಷ ಡಾ.ಎಂ.ಎಚ್ ವಿದ್ಯಾಶಂಕರ್ ಮಾತನಾಡಿ,  ಪ್ರಸ್ತುತ ಎದುರಾಗಿರುವ ಕೋವಿಡ್-೧೯ರ ಸಂಕಷ್ಟದ ಸಂದರ್ಭದಲ್ಲಿ ಆಮ್ಲಜನಕದ ಪ್ರಾಮುಖ್ಯತೆ ಎಲ್ಲರಿಗೂ ತಿಳಿಯುತ್ತಿದೆ. ಈ ಹಿನ್ನಲೆಯಲ್ಲಿ ಸಹಜವಾಗಿ ಪರಿಸರ ಪ್ರಜ್ಞೆ ಬೆಳೆಯುತ್ತಿದೆ. ಸಸಿಗಳನ್ನು ನೆಡುವ ಮೂಲಕ ಅವುಗಳನ್ನು ಪೋಷಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ತರುಣ ಭಾರತಿ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ಹೆಚ್ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬಾಲಭಾರತಿ ಶಾಲೆಯ ಮುಖ್ಯ ಶಿಕ್ಷಕಿ ಶಕುಂತಲಾ, ರಾಮಚಂದ್ರ, ರಮೇಶ್, ಕಿರಣ್, ವಿಶ್ವವಂದ್ಯ, ರವಿ, ಉಮೇಶ್, ಶಾಂತಮ್ಮ, ಪುರುಷೋತ್ತಮ್, ದೀಪಿಕಾ, ರಾಧಿಕಾ ಮತ್ತು ಸವಿತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಾಲಾ ಆವರಣದಲ್ಲಿ ೭೫ಕ್ಕೂ ಹೆಚ್ಚಿನ ಹಣ್ಣಿನ  ಗಿಡಗಳನ್ನು ನೆಡಲಾಯಿತು.  

ಎಂಪಿಎಂ ಆಸ್ಪತ್ರೆಯಲ್ಲಿ ಹೆಚ್ಚುವರಿ ಲಸಿಕಾ ಕೇಂದ್ರ ಉದ್ಘಾಟನೆ

ಭದ್ರಾವತಿ ನಗರಸಭೆ ವಾರ್ಡ್ ನಂ.೧೯ರ ವ್ಯಾಪ್ತಿಯ ಎಂಪಿಎಂ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ತೆರೆಯಲಾಗಿರುವ ಕೋವಿಡ್-೧೯ ಲಸಿಕಾ ಕೇಂದ್ರವನ್ನು ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
   ಭದ್ರಾವತಿ, ಜೂ. ೨೬: ನಗರಸಭೆ ವಾರ್ಡ್ ನಂ.೧೯ರ ವ್ಯಾಪ್ತಿಯ ಎಂಪಿಎಂ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ತೆರೆಯಲಾಗಿರುವ ಕೋವಿಡ್-೧೯ ಲಸಿಕಾ ಕೇಂದ್ರವನ್ನು ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
   ವಾರ್ಡ್ ಸದಸ್ಯ ಬಸವರಾಜ ಬಿ. ಆನೇಕೊಪ್ಪರವರು ಎಂಪಿಎಂ ಆಸ್ಪತ್ರೆಯಲ್ಲಿ ಲಸಿಕಾ ಕೇಂದ್ರ ತೆರೆಯುವಂತೆ ಹಲವು ಬಾರಿ ಜಿಲ್ಲಾಧಿಕಾರಿಗಳಿಗೆ ಹಾಗು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಿದ್ದರು. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗು ಶಾಸಕರ ಗಮನಕ್ಕೂ ತಂದಿದ್ದರು. ಈ ಹಿನ್ನಲೆಯಲ್ಲಿ ಹೆಚ್ಚುವರಿಯಾಗಿ ಲಸಿಕಾ ಕೇಂದ್ರ ತೆರೆಯಲಾಗಿದೆ.
    ನಗರಸಭಾ ಸದಸ್ಯರಾದ ಬಸವರಾಜ ಬಿ ಆನೇಕೊಪ್ಪ, ಜಯಶೀಲ ಸುರೇಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಎಂಪಿಎಂ ನಗರಾಡಳಿತ ಇಲಾಖೆ ಅಧಿಕಾರಿ ಸತೀಶ್, ಮುಖಂಡರಾದ ತಿಮ್ಮಪ್ಪ, ವೆಂಕಟೇಶ್ ಉಜ್ಜನಿಪುರ, ಗಿರ್ಗೇಶ್, ರಮೇಶ್, ದಿನೇಶ್, ಪ್ರವೀಣ್‌ಕುಮಾರ್, ಗಂಗಾಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Friday, June 25, 2021

ಸರ್ಕಾರಿ ನೌಕರರು ಕರ್ತವ್ಯದ ಜೊತೆಗೆ ಸೋಂಕಿಗೆ ಒಳಗಾಗದಂತೆ ಎಚ್ಚರ ವಹಿಸಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ಶುಕ್ರವಾರ ಹೊಸಸೇತುವೆ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ನೌಕರರಿಗೆ ಲಸಿಕೆ ಹಾಕುವ ಕಾರ್ಯಕ್ರಮ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
   ಭದ್ರಾವತಿ, ಜೂ. ೨೫: ಸರ್ಕಾರಿ ನೌಕರರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವುದರ ಜೊತೆಗೆ ಕೊರೋನಾ ಸೋಂಕಿಗೆ ಒಳಗಾಗದಂತೆ ತಮ್ಮ ಆರೋಗ್ಯ ರಕ್ಷಿಸಿಕೊಳ್ಳಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಕರೆ ನೀಡಿದರು.
   ಅವರು ಶುಕ್ರವಾರ ಹೊಸಸೇತುವೆ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ನೌಕರರಿಗೆ ಲಸಿಕೆ ಹಾಕುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಸಮಾಜಕ್ಕೆ ಸರ್ಕಾರಿ ನೌಕರರ ಕೊಡುಗೆ ಅಪಾರವಾಗಿದ್ದು, ನೌಕರರು ಕರ್ತವ್ಯದ ಜೊತೆಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಅದರಲ್ಲೂ ಕೊರೋನಾ ಸೋಂಕಿಗೆ ಒಳಗಾಗದಂತೆ ಹೆಚ್ಚಿನ ಜಾಗೃತಿ ವಹಿಸಬೇಕೆಂದರು.
  ಸಂಘದ ತಾಲೂಕು ಶಾಖೆ ಅಧ್ಯಕ್ಷ ಬಿ. ಸಿದ್ದಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ನಗರಸಭಾ ಸದಸ್ಯ ಸುದೀಪ್‌ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್ ಬಸವರಾಜ್, ವಿದ್ಯಾಸಂಸ್ಥೆ ಛೇರ್‍ಮನ್ ಬಿ.ಎಲ್ ರಂಗಸ್ವಾಮಿ, ಎ.ಜೆ. ರಂಗನಾಥಪ್ರಸಾದ್, ಡಿ.ಎಸ್ ರಾಜಪ್ಪ, ಶ್ರೀಕಾಂತ್, ರಾಜ್‌ಕುಮಾರ್, ದಿನೇಶ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭದ್ರಾವತಿಯಲ್ಲಿ ೩೫ ಸೋಂಕು : ಒಬ್ಬರು ಬಲಿ

ಭದ್ರಾವತಿ, ಜೂ. ೨೫: ಲಾಕ್‌ಡೌನ್ ಸಡಿಲಗೊಂಡು ೫ ದಿನ ಕಳೆದಿದ್ದು, ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಸೋಂಕಿನ ಪ್ರಮಾಣ ೫೦ರ ಗಡಿ ದಾಟಿಲ್ಲ.
   ಶುಕ್ರವಾರ ೩೫ ಸೋಂಕು ದೃಢಪಟ್ಟಿದ್ದು, ೮೬೭ ಮಾದರಿ ಸಂಗ್ರಹಿಸಲಾಗಿದೆ. ೨೧ ಮಂದಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೂ ೭೦೩೬ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ ೬೯೩೭ ಮಂದಿ ಗುಣಮುಖರಾಗಿದ್ದಾರೆ. ೯೯ ಸಕ್ರಿಯ ಪ್ರಕರಣಗಳು ಬಾಕಿ ಉಳಿದಿವೆ. ಸೋಂಕಿಗೆ ಒಬ್ಬರು ಮೃತಪಟ್ಟಿದ್ದಾರೆ.
    ಒಟ್ಟು ೭೫ ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ನಗರ ಪ್ರದೇಶದಲ್ಲಿ ೨೩ ಕಂಟೈನ್‌ಮೆಂಟ್ ಜೋನ್‌ಗಳಿವೆ. ಇದುವರೆಗೂ ೧೪೩ ಜೋನ್‌ಗಳನ್ನು ತೆರವುಗೊಳಿಸಲಾಗಿದೆ. ಗ್ರಾಮಾಂತರ ವ್ಯಾಪ್ತಿಯಲ್ಲಿ ೨೦ ಜೋನ್‌ಗಳಿದ್ದು, ೨೯ ಜೋನ್‌ಗಳನ್ನು ತೆರವುಗೊಳಿಸಲಾಗಿದೆ.

ಜೀವವಿಮಾ ಪ್ರತಿನಿಧಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸಿ

ಭದ್ರಾವತಿ ನಗರದ ಅಂಡರ್‌ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಭಾರತೀಯ ಜೀವವಿಮಾ ನಿಗಮದ ಶಾಖಾ ಕಛೇರಿ ಆವರಣದಲ್ಲಿ ವಿಶ್ರಾಂತಿ ಅಂದೋಲನದ ಅಂಗವಾಗಿ ನಡೆದ ಸಭೆಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜೀವವಿಮಾ ಪ್ರತಿನಿಧಿಗಳು ಆಗ್ರಹಿಸಿದರು.
   ಭದ್ರಾವತಿ, ಜೂ. ೨೫:  ಕರ್ತವ್ಯದ ಸಮಯದಲ್ಲಿ ಕೊರೋನಾ ಸೋಂಕಿನ ಪರಿಣಾಮ ಮೃತಪಟ್ಟ ಭಾರತೀಯ ಜೀವವಿಮಾ ನಿಗಮದ ಜೀವವಿಮಾ ಪ್ರತಿನಿಧಿಗಳ ಕುಟುಂಬಕ್ಕೆ ೧ ಕೋ. ರು. ಪರಿಹಾರದ ಜೊತೆಗೆ ಅನಾಥರಾದ ಪ್ರತಿನಿಧಿಗಳ ಮಕ್ಕಳ ವಿದ್ಯಾಭ್ಯಾಸದ ವೆಚ್ಚ ಭರಿಸುವುದು ಸೇರಿದಂತೆ ಬೇಡಿಕೆಗಳನ್ನು ಈಡೇರಿಸುವಂತೆ ಶುಕ್ರವಾರ ಆಗ್ರಹಿಸಲಾಯಿತು.
   ನಗರದ ಅಂಡರ್‌ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಭಾರತೀಯ ಜೀವವಿಮಾ ನಿಗಮದ ಶಾಖಾ ಕಛೇರಿ ಆವರಣದಲ್ಲಿ ವಿಶ್ರಾಂತಿ ಅಂದೋಲನದ ಅಂಗವಾಗಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಜೀವವಿಮಾ ಪ್ರತಿನಿಧಿಗಳ ಸಂಘದ ಪ್ರಮುಖರು, ಪಾಲಿಸಿದಾರರಿಗೆ ಕೊರೋನಾ ಸಂದರ್ಭದಲ್ಲಿ ಪಾಲಿಸಿ ಪ್ರೀಮಿಯಂ ಮೇಲಿನ ೩ ತಿಂಗಳ ಬಡ್ಡಿಯನ್ನ ಮನ್ನಾ ಮಾಡಬೇಕು. ಲಾಕ್‌ಡೌನ್ ಸಂದರ್ಭದಲ್ಲಿ ಲ್ಯಾಪ್ಸ್ ಆದ ಪಾಲಿಸಿಗಳನ್ನು ಬಡ್ಡಿ ರಹಿತವಾಗಿ ಹಾಗು ಫಾರ್ಮಲಿಟಿ ರಹಿತವಾಗಿ ಪುನರುಜ್ಜೀವನಗೊಳಿಸಬೇಕೆಂದು ಒತ್ತಾಯಿಸಿದರು.
    ಐಆರ್‌ಡಿಎ ನೋಟಿಫಿಕೇಷನ್ ಪ್ರಕಾರ ಕಮಿಷನ್ ಜಾರಿಗೊಳಿಸಬೇಕು. ಆನಂದ ಮುಖಾಂತರ ಮಾಡುವ ಪ್ರತಿ ಪಾಲಿಸಿಗಳಿಗೆ ೧೧೦೦ ರು. ಭತ್ಯೆಯಾಗಿ ನೀಡಬೇಕು. ಏಜೆಂಟ್ಸ್ ರೆಗ್ಯೂಲೇಷನ್ ಆಕ್ಟ್‌ನ ಕೆಲವು ನಿಯಮಗಳು ತಕ್ಷಣವೇ ಬದಲಾವಣೆಯಾಗಬೇಕು. ಆನ್‌ಲೈನ್ ಮತ್ತು ಆಫ್‌ಲೈನ್ ಪಾಲಿಸಿಗಳ ಮೇಲೆ ಪ್ರೀಮಿಯಂನಲ್ಲಿ ಯಾವುದೇ ವ್ಯತ್ಯಾಸವಿರಬಾರದು. ಪ್ರತಿನಿಧಿಗಳ ಕಲ್ಯಾಣ ನಿಧಿ ಸ್ಥಾಪಿಸಿ ೨೦೦ ಕೋ. ರು. ಮೀಸಲಿಡಬೇಕು. ಗುಂಪು ವಿಮೆ ೨೫ ರಿಂದ ೫೦ ಲಕ್ಷದವರೆಗೆ ಅಪಘಾತ ಸಹಿತವಾಗಬೇಕು. ೧ ಲಕ್ಷ ರು. ಕೋವಿಡ್ ಮುಂಗಡ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
    ಸಂಘದ ಅಧ್ಯಕ್ಷ ಆರ್. ಮಂಜುನಾಥ್, ಉಪಾಧ್ಯಕ್ಷ ಆನಂದ ಪ್ರಕಾಶ್ ರಾವ್, ಕಾರ್ಯದರ್ಶಿ ಸಿ.ಎ ಮುನಿರಾಜು, ಜಂಟಿ ಕಾರ್ಯದರ್ಶಿ ಆರ್. ನರಸಿಂಹಯ್ಯ, ಖಜಾಂಚಿ ಎಚ್.ಕೆ ಶಿವರಾಮು, ನಂಜುಂಡಪ್ಪ, ಟಿ. ರಮೇಶ್, ಪಿ. ಸುರೇಶ್, ಕೆ.ಎಚ್. ಮಂಜುನಾಥನಾಯ್ಕ್, ಬಿ.ಎಂ. ನಂಜುಂಡಪ್ಪ, ಅನಿತಾ ಮಲ್ಲೇಶ್, ಸಂಪತ್‌ಕುಮಾರ್, ವಿ. ಮಂಜುನಾಥ್‌ರಾವ್, ಪಿ.ಎಚ್ ನಾಗರಾಜ್, ಎಸ್. ಸಂಪತ್, ಮಾದೇಶ, ಚಂದ್ರಕಲಾ, ಪ್ರಿಯಾ, ಶೋಭಾ, ಕೆ.ಎಸ್ ನಟರಾಜ್, ಎಂ. ಲಿಂಗರಾಜು, ಜಿ. ಶಿವಕುಮಾರ್, ನರೇಂದ್ರ ಬಾಬು, ಡಿ. ಲಕ್ಷ್ಮೀಕಾಂತ, ಬಿಜಿಸಿ ಕುಮಾರ್, ಎಂ. ಶಿವಮೂರ್ತಿ, ಓ. ರಾಮನಾಯ್ಕ್, ಶ್ರೀನಿವಾಸ್ ರೆಡ್ಡಿ ಮತ್ತು ಆರ್. ಮಲ್ಲೇಶಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.