Saturday, July 10, 2021

ಲಕ್ಷಾಂತರ ರು. ಮೌಲ್ಯದ ಅಡಕೆ ಚೀಲ ಕಳವು ಪ್ರಕರಣ : ೩ ಜನರ ಸೆರೆ

ಭದ್ರಾವತಿ ಹಳೇನಗರ ಪೊಲೀಸರ ಕಾರ್ಯಾಚರಣೆ


ಲಕ್ಷಾಂತರ ರು. ಮೌಲ್ಯದ ಅಡಕೆ ಚೀಲ ಕಳ್ಳತನ ಮಾಡಿ ಬೇರೆಡೆಗೆ ಸಾಗಿಸುತ್ತಿದ್ದ ೩ ಜನರನ್ನು ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿರುವುದು.
    ಭದ್ರಾವತಿ, ಜು. ೧೦: ಲಕ್ಷಾಂತರ ರು. ಮೌಲ್ಯದ ಅಡಕೆ ಚೀಲ ಕಳ್ಳತನ ಮಾಡಿ ಬೇರೆಡೆಗೆ ಸಾಗಿಸುತ್ತಿದ್ದ ೩ ಜನರನ್ನು ಹಳೇನಗರ ಠಾಣೆ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
    ನೆಹರು ನಗರದ ನಿವಾಸಿ, ಗುಜರಿ ವ್ಯಾಪಾರಿ ದಾದಪೀರ್(೨೯), ಸಾದತ್ ಕಾಲೋನಿ ನಿವಾಸಿ ಸಲೀಂ ಅಲಿಯಾಸ್ ಚನ್ನಗಿರಿ(೪೩) ಹಾಗು ಹನುಮಂತಪ್ಪ ಶೆಡ್ ನಿವಾಸಿ ಷಫಿವುಲ್ಲಾ(೩೨) ಬಂಧಿತರಾಗಿದ್ದು, ಅಡಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ತರೀಕೆರೆ ರಸ್ತೆ ಶಿವನಿ ಕ್ರಾಸ್ ಬಳಿ ೩ ಜನರನ್ನು ಸೆರೆ ಹಿಡಿದಿದ್ದಾರೆ.
     ಬಂಧಿತರಿಂದ ೨೦ ಚೀಲ, ಒಟ್ಟು ೭೦೦ ಕೆ.ಜಿ ತೂಕದ ಸುಮಾರು ೧,೨೯,೫೦೦ ರು. ಮೌಲ್ಯದ ಅಡಕೆ ಹಾಗು ಕೃತ್ಯಕ್ಕೆ ಬಳಸಿದ ೩,೦೦,೦೦೦ ರು. ಮೌಲ್ಯದ ಟಾಟಾ ಏಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
    ಪೊಲೀಸ್ ಉಪಾಧೀಕ್ಷಕ ಐಪಿಎಸ್ ಅಧಿಕಾರಿ ಸಾಹಿಲ್ ಬಾಗ್ಲಾ ಮತ್ತು ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಮಾರ್ಗದರ್ಶನದಲ್ಲಿ ಹಳೇನಗರ ಪೊಲೀಸ್ ಠಾಣಾಧಿಕಾರಿ ಪ್ರಭು ಡಿ ಕೆಳಗಿನ ಮನಿ ಮತ್ತು ಸಿಬ್ಬಂದಿಗಳಾದ ಹಾಲಪ್ಪ, ಫಿರೋಜ್, ಮಂಜುನಾಥ್ ಮತ್ತು ಸುನಿಲ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಯಶಸ್ವಿ ಕಾರ್ಯಾಚರಣೆ ನಡೆಸಿದ ತಂಡವನ್ನು ಜಿಲ್ಲಾ ರಕ್ಷಣಾಧಿಕಾರಿ ಹಾಗು ಹೆಚ್ಚುವರಿ ರಕ್ಷಣಾಧಿಕಾರಿಗಳು ಅಭಿನಂದಿಸಿದ್ದಾರೆ.

ಸಂಘಟನೆಗಳಿಂದ ಮಾತ್ರ ಯಾವುದೇ ಬೇಡಿಕೆ ಈಡೇರಲು ಸಾಧ್ಯ : ಆಯನೂರು ಮಂಜುನಾಥ್

ಭದ್ರಾವತಿ ವಿಐಎಸ್‌ಎಲ್ ಅತಿಥಿಗೃಹದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತೀಯ ಮಜ್ದೂರ್ ಸಂಘದ ೨೧ನೇ ತ್ರೈವಾರ್ಷಿಕ ಅಧಿವೇಶನ(ವರ್ಚ್ಯಲ್)ದಲ್ಲಿ ಕಾರ್ಮಿಕ ಮುಖಂಡ, ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಜು. ೧೦: ಯಾವುದೇ ಬೇಡಿಕೆಗಳು ಈಡೇರಬೇಕಾದರೇ ಅದು ಸಂಘಟನೆ ಮೂಲಕ ಮಾತ್ರ ಸಾಧ್ಯವಾಗಿದ್ದು,  ಸಂಘಟನೆಗಳಿಗೆ ಸರ್ಕಾರದ ಜೊತೆ ಗುರುತಿಸಿಕೊಳ್ಳದೆ ಹೋರಾಟ ನಡೆಸುವ ಮನೋಭಾವ ಬಹಳ ಮುಖ್ಯ ಎಂದು ಕಾರ್ಮಿಕ ಮುಖಂಡ, ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
     ಅವರು ಶನಿವಾರವಾರ ನಗರದ ವಿಐಎಸ್‌ಎಲ್ ಅತಿಥಿಗೃಹದ ಸಭಾಂಮಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತೀಯ ಮಜ್ದೂರ್ ಸಂಘದ ೨೧ನೇ ತ್ರೈವಾರ್ಷಿಕ ಅಧಿವೇಶನ(ವರ್ಚ್ಯಲ್)ದಲ್ಲಿ ಪಾಲ್ಗೊಂಡು ಮಾತನಾಡಿದರು.
    ದೇಶದಲ್ಲಿ ಶ್ರಮಿಜೀವಿಗಳಾದ ಕಾರ್ಮಿಕ ವರ್ಗದವರ ಧ್ವನಿಯಾಗಿ ತನ್ನದೇ ಆದ ಸೈದ್ದಾಂತಿಕ ಸಿದ್ದಾಂತಗಳೊಂದಿಗೆ ಭಾರತೀಯ ಮಜ್ದೂರ್ ಸಂಘ ಬೃಹತ್ ಸಂಘಟನೆಯಾಗಿ ಬೆಳೆದು ಬಂದಿದೆ. ಈ ಸಂಘಟನೆ ಎಂದಿಗೂ ಸರ್ಕಾರದ ಜೊತೆ ಗುರುತಿಸಿಕೊಳ್ಳದೆ ಕಾರ್ಮಿಕರ ಪರವಾದ ನಿಲುವುಗಳಿಗೆ ಬದ್ಧವಾಗಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
    ಒಬ್ಬ ರಾಜಕಾರಣಿಯಾದರೂ ಸಹ ಈ ಸಂಘಟನೆಯೊಂದಿಗಿನ ಒಡನಾಟದಿಂದಾಗಿ ನಾನು ಸಹ ಕಾರ್ಮಿಕ ಹೋರಾಟಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ಪ್ರಸ್ತುತ ದೇಶದಲ್ಲಿ ಕಾರ್ಮಿಕರು ಅನುಭವಿಸುತ್ತಿರುವ ಸಂಕಷ್ಟಗಳು ಸಾಕಷ್ಟಿವೆ. ಯಾವುದೇ ಸಂಘಟನೆಗಳ  ಪದಾಧಿಕಾರಿಗಳು ಸರ್ಕಾರದ ನಿರ್ಣಯಗಳನ್ನು ಪ್ರಶ್ನಿಸುವ, ಅನ್ಯಾಯದ ವಿರುದ್ಧ ಪ್ರತಿಭಟಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಭಾರತೀಯ ಮಜ್ದೂರು ಸಂಘದ ಪದಾಧಿಕಾರಿಗಳು ಈ ನಿಟ್ಟಿನಲ್ಲಿಯೇ ಸಾಗುತ್ತಿದ್ದು, ಈ ಸಂಘಟನೆಯಲ್ಲಿನ ಬಹಳಷ್ಟು ಹೋರಾಟಗಾರರು ಇಂದಿನವರಿಗೆ ಸ್ಪೂರ್ತಿದಾಯಕರಾಗಿದ್ದಾರೆ ಎಂದರು.
     ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ವಿಶ್ವನಾಥಶೆಟ್ಟಿ ಮಾತನಾಡಿ, ದೇಶ ಇದ್ದರೆ ನಾವು, ಕಾರ್ಮಿಕರು ಈ ದೇಶದ ಸೈನಿಕರಿದಂತೆ ಎಂಬ ಭಾವನೆಯೊಂದಿಗೆ ಸಂಘಟನೆ ಬೆಳೆದು ಬಂದಿದೆ. ದೇಶ ಭಕ್ತಿ ಹಾಗು ರಾಷ್ಟ್ರೀಯ ಹಿತಾಸಕ್ತಿಗಳೊಂದಿಗೆ ಕಾರ್ಮಿಕರ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗೆ ಕಾರ್ಮಿಕರ ಸಮಸ್ಯೆ ಬಗೆಹರಿಸುವುದೇ ಮೊದಲ ಆದ್ಯತೆಯಾಗಿದೆ ಎಂದರು.
    ಸಂಘಟನೆಗಳಿಗೆ ಸದಸ್ಯರ ಸಂಖ್ಯೆ ಹೆಚ್ಚಿಸುವುದು ಮುಖ್ಯವಲ್ಲ. ಗುಣಾತ್ಮಕವಾದ ಸಂಖ್ಯೆ ಹೆಚ್ಚಿಸುವುದು ಮುಖ್ಯವಾಗಿದೆ. ಹೋರಾಟಗಳು ಗುಣಾತ್ಮಕವಾದ ದಾರಿಯಲ್ಲಿಯೇ ಸಾಗಬೇಕು. ಈ ನಿಟ್ಟಿನಲ್ಲಿ ಕಾರ್ಮಿಕರ ಪರವಾದ ಹೋರಾಟಗಳಲ್ಲಿ ಸಂಘಟನೆ ಮುನ್ನಡೆಯುತ್ತಿದೆ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕೆಂದರು.
    ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಕೆ ಪ್ರಕಾಶ್ ಮಾತನಾಡಿ, ೧೯೫೫ರಲ್ಲಿ ಆರಂಭವಾದ ಸಂಘಟನೆ ತನ್ನ ಆದ ಸಿದ್ದಾಂತಗಳೊಂದಿಗೆ ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡುತ್ತಿದೆ. ಪ್ರಸ್ತುತ ದೇಶದಲ್ಲಿಯೇ ಅತಿಹೆಚ್ಚು ಸದಸ್ಯರನ್ನು ಹೊಂದಿರುವ ಸಂಘಟನೆ ಇದಾಗಿದೆ. ರಾಜ್ಯದಲ್ಲಿ ಈ ಸಂಘಟನೆಯನ್ನು ಅನೇಕ ಮಹಾನ್ ನಾಯಕರು ಕಟ್ಟಿ ಬೆಳೆಸಿದ್ದಾರೆ. ಈ ಸಂಘ ಭವಿಷ್ಯದಲ್ಲಿ ಮತ್ತಷ್ಟು ಸಂಘಟಿತಗೊಳ್ಳುವ ವಿಶ್ವಾಸವಿದೆ ಎಂದರು.
    ಇದಕ್ಕೂ ಮೊದಲು ವರ್ಚ್ಯಲ್ ಕಾರ್ಯಕ್ರಮವನ್ನು ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿನಯ್ ಕುಮಾರ್ ಸಿನ್ಹ ಉದ್ಘಾಟಿಸಿ ಮಾತನಾಡಿದರು.
    ರಾಜ್ಯ ಕಾರ್ಯದರ್ಶಿ ಎಚ್.ಎಲ್ ವಿಶ್ವನಾಥ್ ನಿರೂಪಿಸಿದರು. ಗಾಯತ್ರಿ ವಂದೇಮಾತರಂ ಗೀತೆ ಹಾಡಿದರು. ಜಿಲ್ಲಾಧ್ಯಕ್ಷ ಯೋಗೇಶ್ ಪೈ ವಂದಿಸಿದರು. ರಾಜ್ಯದ ವಿವಿಧೆಡೆಗಳಿಂದ ಸಂಘದ ಪ್ರಮುಖರು ಪಾಲ್ಗೊಂಡಿದ್ದರು.

Friday, July 9, 2021

ಕೋವಿಡ್-೧೯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ೧ ಲಕ್ಷ ರು. ದೇಣಿಗೆ

ಕೋವಿಡ್-೧೯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಭದ್ರಾವತಿ ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ (ರಾಮ್ಕೋಸ್) ರು.೧ ಲಕ್ಷ ದೇಣಿಗೆ ನೀಡಿದೆ.
     ಭದ್ರಾವತಿ, ಜು. ೯: ಕೋವಿಡ್-೧೯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನಗರದ ರೈತರ ಅಡಕೆ ಮಾರಾಟ ಮತ್ತು ಪರಿಷ್ಕರಣ ಸಹಕಾರ ಸಂಘ (ರಾಮ್ಕೋಸ್) ರು.೧ ಲಕ್ಷ ದೇಣಿಗೆ ನೀಡಿದೆ.
.    ಶಿವಮೊಗ್ಗ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ನಾಗೇಶ್ ಎಸ್ ಡೋಂಗ್ರೆ ಅವರ ಮೂಲಕ ಪರಿಹಾರದ ಚೆಕ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಯಿತು.
    ಸಂಘದ ಅಧ್ಯಕ್ಷ ಸಿ. ಮಲ್ಲೇಶಪ್ಪ. ಉಪಾಧ್ಯಕ್ಷ ಎಂ. ಪರಮೇಶ್ವರಪ್ಪ. ನಿರ್ದೇಶಕರಾದ ಹೆಚ್.ಆರ್ ತಿಮ್ಮಪ್ಪ, ಎಚ್.ಎಸ್.ಸಂಜೀವಕುಮಾರ್. ಎಚ್.ಟಿ ಉಮೇಶ್ ಮತ್ತು ಉಮಾ ಹಾಗು ಆಡಳಿತಾಧಿಕಾರಿ ಎಂ.ವಿರುಪಾಕ್ಷಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತಂಬಾಕು ಉತ್ಪನ್ನಗಳ ಮಾರಾಟ : ೪೦೫೦ ರು. ದಂಡ ವಸೂಲಾತಿ

ಶಿವಮೊಗ್ಗ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಶುಕ್ರವಾರ ಭದ್ರಾವತಿ ಹಳೇನಗರ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟದಲ್ಲಿ ತೊಡಗಿದ್ದ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಲಾಯಿತು.  
     ಭದ್ರಾವತಿ, ಜು. ೯: ಶಿವಮೊಗ್ಗ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಶುಕ್ರವಾರ ಹಳೇನಗರ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟದಲ್ಲಿ ತೊಡಗಿದ್ದ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ೪೦೫೦ ರು. ದಂಡ ವಸೂಲಾತಿ ಮಾಡಲಾಗಿದೆ.
     ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ ೨೦೦೩ರ ಅಡಿಯಲ್ಲಿ ದಾಳಿ ನಡೆಸಿ ದಂಡ ವಸೂಲಾತಿ ಮಾಡುವ ಜೊತೆಗೆ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.
    ಕಾರ್ಯಾಚರಣೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಟಿ ರಾಜೇಗೌಡ, ಹಿರಿಯ ಆರೋಗ್ಯ ಸಹಾಯಕ ಆನಂದಮೂರ್ತಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ರವಿರಾಜ್, ಪ್ರಾಥಮಿಕ ಆರೋಗ್ಯ ಕೇಂದ್ರದ ಹರೀಶ್, ಆಕಾಶ್ ಹಾಗು ಹಳೇನಗರ ಪೊಲೀಸ್ ಠಾಣೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಜು.೧೧ರಂದು ಕೂಡ್ಲಿಗೆರೆ ಭಾಗದಲ್ಲಿ ವಿದ್ಯುತ್ ವ್ಯತ್ಯಯ

ಭದ್ರಾವತಿ, ಜು. ೯: ತಾಲೂಕಿನ ಮೆಸ್ಕಾಂ ಕೂಡ್ಲಿಗೆರೆ ೬೬/೧೧ ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಅಡಕೆ ತೋಟದಲ್ಲಿ ಹಾದು ಹೋಗಿರುವ ೧೧ ಕೆವಿ ಮಾರ್ಗ ಮತ್ತು ಕಂಬವನ್ನು ಸ್ಥಳಾಂತರಿಸುವ ಕಾರ್ಯ ಹಮ್ಮಿಕೊಂಡಿರುವುದರಿಂದ ಜು.೧೧ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
     ಕೂಡ್ಲಿಗೆರೆ ಗ್ರಾಮದ ಧನಂಜಯ ಎಂಬುವರ ಅಡಕೆ ತೋಟದಲ್ಲಿ ಹಾದು ಹೋಗಿರುವ ಮಾರ್ಗ ಮತ್ತು ಕಂಬವನ್ನು ರಸ್ತೆ ಬದಿಯಲ್ಲಿ ಹಾದು ಹೋಗಿರುವ ಎನ್‌ಜೆವೈ ಮಾರ್ಗದ ಕೆಳಗಡೆ ಸ್ವಯಂ ಆರ್ಥಿಕ ಯೋಜನೆಯಡಿ ಸ್ಥಳಾಂತರ ಮಾಡುವ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.  ಈ ಹಿನ್ನಲೆಯಲ್ಲಿ ಕೂಡ್ಲಿಗೆರೆ, ಆಟಗೇರಿ ಕ್ಯಾಂಪ್, ಕಲ್ಪನಹಳ್ಳಿ, ಹೊಸಹಳ್ಳಿ, ಕುಮರಿನಾರಾಯಣಪುರ, ಸೀತಾರಾಂಪುರ, ಅತ್ತಿಗುಂದ, ಬಸಲೀಕಟ್ಟೆ, ರೆಡ್ಡಿಕ್ಯಾಂಪ್, ಅರಳಿಹಳ್ಳಿ, ತಿಪ್ಲಾಪುರ, ಜಯನಗರ, ಕಾಗೇಹಳ್ಳ, ಸಂಜೀವನಗರ, ದೇವರಹಳ್ಳಿ, ಗುಡ್ಡದನೇರಲಕೆರೆ, ಕೊಮಾರನಹಳ್ಳಿ, ಬಂಡಿಗುಡ್ಡ, ಬದನೆಹಾಳ್, ಉದಯನಗರ, ಬೆಳ್ಳಿಗೆರೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

ಮಣ್ಣೆತ್ತಿನ ಅಮಾವಾಸ್ಯೆ : ಮಾರಿಯಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಲಂಕಾರ

ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ಭದ್ರಾವತಿ ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ವಿಶೇಷ ಪೂಜೆ, ಅಲಂಕಾರ ಕೈಗೊಳ್ಳಲಾಗಿತ್ತು.
   ಭದ್ರಾವತಿ, ಜು. ೯: ಮಣ್ಣೆತ್ತಿನ ಅಮಾವಾಸ್ಯೆ ಅಂಗವಾಗಿ ನಗರದ ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ವಿಶೇಷ ಪೂಜೆ, ಅಲಂಕಾರ ಕೈಗೊಳ್ಳಲಾಗಿತ್ತು.
    ಬೆಳಿಗ್ಗೆಯಿಂದಲೇ ನೂರಾರು ಭಕ್ತಾಧಿಗಳು ದೇವಸ್ಥಾನಕ್ಕೆ ಆಗಮಿಸಿ ಅಮ್ಮನವರ ದರ್ಶನ ಪಡೆದು ಕೃಪೆಗೆ ಪಾತ್ರರಾದರು. ಅಮ್ಮನವರಿಗೆ ವಿಶೇಷ ಅಲಂಕಾರ ಕೈಗೊಳ್ಳುವ ಮೂಲಕ ವಿಶೇಷ ಪೂಜೆ, ಮಹಾಮಂಗಳಾರತಿ ಜರುಗಿತು. ಭಕ್ತಾಧಿಗಳಿಗೆ ತೀರ್ಥಪ್ರಸಾದ ವಿನಿಯೋಗ ನಡೆಯಿತು.
     ಉದ್ಯಮಿ ಎ. ಮಾಧು, ದೇವಸ್ಥಾನ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಈ ದೇವಸ್ಥಾನದಲ್ಲಿ ಪ್ರತಿ ವರ್ಷ ಮಣ್ಣೆತ್ತಿನ ಅಮಾವಾಸ್ಯೆಯನ್ನು ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ಸಾವಿರಾರು ಭಕ್ತಾಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಆದರೆ ಈ ಬಾರಿ ಕೊರೋನಾ ಹಿನ್ನಲೆಯಲ್ಲಿ ಭಕ್ತಾಧಿಗಳ ಸಂಖ್ಯೆ ಕಡಿಮೆಯಾಗಿರುವುದು ಕಂಡು ಬಂದಿತು.



Thursday, July 8, 2021

ಕಟ್ಟಡ ಕಾರ್ಮಿಕರು ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಗಮನ ಹರಿಸಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರಿಗೆ ದಿನಸಿ ಸಾಮಗ್ರಿ ವಿತರಿಸಲಾಯಿತು.
    ಭದ್ರಾವತಿ, ಜು. ೮: ಕಟ್ಟಡ ಕಾರ್ಮಿಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಕರೆ ನೀಡಿದರು.
   ಅವರು ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಟ್ಟಡ ಕಾರ್ಮಿಕರಿಗೆ ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜದಲ್ಲಿ ಕಟ್ಟಡ ಕಾರ್ಮಿಕರು ಅನುಭವಿಸುತ್ತಿರುವ ಸಂಕಷ್ಟ ಎಲ್ಲರಿಗೂ ತಿಳಿದಿದೆ. ಶ್ರಮ ಜೀವಿಗಳಾದ ತಾವು ತಮ್ಮ ದುಡಿಮೆಯಲ್ಲಿ ಸಾಧ್ಯವಾದಷ್ಟು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಲ್ಲಿ ಭವಿಷ್ಯದಲ್ಲಿ ಕುಟುಂಬದ ಆಧಾರಸ್ತಂಭಗಳಾಗುವ ಜೊತೆಗೆ ಅವರ ಬದುಕು ಸಹ ಉಜ್ವಲಗೊಳ್ಳಲಿದೆ ಎಂದರು.
     ಕಳೆದ ಸುಮಾರು ೨ ವರ್ಷಗಳಿಂದ ಕೋವಿಡ್-೧೯ರ ಪರಿಣಾಮ ಜನಸಾಮಾನ್ಯರ ಬದುಕು ಅತಂತ್ರವಾಗಿದ್ದು, ಪ್ರತಿದಿನ ಜೀವ ಭಯದಲ್ಲಿ ಬದುಕು ಸಾಗಿಸುವಂತಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಕಟ್ಟಡ ಕಾರ್ಮಿಕರು ಅತಿಹೆಚ್ಚು ಜಾಗೃತರಾಗಬೇಕಾಗಿದೆ. ಯಾವುದೇ ಕಾರಣಕ್ಕೂ ಕೊರೋನಾ ಸೋಂಕಿಗೆ ಒಳಗಾಗಬಾರದು. ಒಂದು ವೇಳೆ ಕ್ಷೇತ್ರದಲ್ಲಿ ಸೋಂಕಿಗೆ ಒಳಗಾದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅಸಾಧ್ಯವಾಗಿದ್ದು,  ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ಬಹುತೇಕ ಸೋಂಕಿತರು ಗುಣಮುಖರಾಗಿ ಹಿಂದಿರುಗಿಲ್ಲ. ಈ ಹಿನ್ನಲೆಯಲ್ಲಿ ಮುಂಜಾಗ್ರತೆ ವಹಿಸುವಂತೆ ಎಚ್ಚರಿಸಿದರು.
    ನಗರಸಭಾ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಕಟ್ಟಡ ಕಾರ್ಮಿಕರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಅವರ ಒಡನಾಡಿಯಾಗಿ ಹತ್ತಿರದಿಂದ ಕಂಡಿದ್ದೇನೆ. ಕಟ್ಟಡ ಕಾರ್ಮಿಕರ ಬದುಕು ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಬಲಿಯಾಗಬಾರದು. ಈಗಾಗಲೇ ಕೊರೋನಾ ೧ ಮತ್ತು ೨ನೇ ಅಲೆ ಪರಿಣಾಮ ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ೩ನೇ ಅಲೆ ಮಕ್ಕಳನ್ನು ಬಾಧಿಸುವ ಕುರಿತು ಈಗಾಗಲೇ ತಜ್ಞರು ಎಚ್ಚರಿಸಿದ್ದಾರೆ. ಈ ಹಿನ್ನಲೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರವಹಿಸಬೇಕು. ಅಲ್ಲದೆ ಎಲ್ಲಾ ಕಟ್ಟಡ ಕಾರ್ಮಿಕರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಕಡ್ಡಾಯವಾಗಿ ಗುರುತಿಸಿ ಚೀಟಿ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.
    ಕಾರ್ಮಿಕ ನಿರೀಕ್ಷಕಿ ಮಮತಾಜ್ ಬೇಗಂ, ನಗರಸಭಾ ಸದಸ್ಯ ಜಾರ್ಜ್, ಕಟ್ಟಡ ಕಾರ್ಮಿಕರ ಸಂಘದ ಮಹಿಳಾ ಘಟಕದ ಪದಾಧಿಕಾರಿ ಹಾಗು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಹೇಮಾವತಿ, ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು, ಉಪಾಧ್ಯಕ್ಷ ಚಂದ್ರಶೇಖರ್, ತಾಲೂಕು ಅಧ್ಯಕ್ಷ ನಾಗರಾಜ್, ಸಂಘಟನಾ ಕಾರ್ಯದರ್ಶಿ ಅಭಿಲಾಷ್, ತಾಂತ್ರಿಕ ಸಲಹೆಗಾರ ಮನೋಹರ್, ಅಂತೋಣಿ ಕ್ರೂಸ್, ತಾಲೂಕು ಪೈಂಟರ್‍ಸ್ ಸಂಘದ ಗೌರವಾಧ್ಯಕ್ಷ ಶಿವಣ್ಣಗೌಡ, ಅಧ್ಯಕ್ಷ ಮಂಜುನಾಥ್, ಕುಂಚ ಕಲಾವಿದರ ಸಂಘದ ಹಫೀಜ್ ಉರ್ ರಹಮಾನ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.