Monday, October 11, 2021

ಕಡಜ ದಾಳಿಗೆ ಮತ್ತೊಬ್ಬ ವ್ಯಕ್ತಿ ಬಲಿ

ಕುಮಾರ್   
ಭದ್ರಾವತಿ, ಅ.೧೧: ಕಳೆದ ಕೆಲವು ದಿನಗಳ ಹಿಂದೆ ಕಡಜದ ಹುಳುಗಳ ದಾಳಿಯಿಂದ ಇಬ್ಬರು ಮೃತಪಟ್ಟಿದ್ದರು. ಇದೀಗ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. 
ತಾಲೂಕಿನ ಉಕ್ಕುಂದ ಗ್ರಾಮದ ನಿವಾಸಿ, ಕೃಷಿ ಕೂಲಿ ಕಾರ್ಮಿಕ ಕುಮಾರ್(೩೮) ಮೃತಪಟ್ಟಿದ್ದು, ಇವರು ಕೆಂಚಮ್ಮನಹಳ್ಳಿಯ ರಂಗಪ್ಪ ಎನ್ನುವ ತೆಂಗಿನ ತೋಟದಲ್ಲಿ ಕಾಯಿ ಕೀಳುವ ಕೆಲಸ ಮಾಡುತ್ತಿದ್ದಾಗ ಭಾನುವಾರ ಬೆಳಿಗ್ಗೆ ಕಡಜದ ಹುಳುಗಳು ದಾಳಿ ನಡೆಸಿವೆ. ತೀವ್ರ ಅಸ್ವಸ್ಥಗೊಂಡಿದ್ದ ಇವರನ್ನು ಮೊದಲು ನಗರದ ದುರ್ಗಾ ನರ್ಸಿಂಗ್ ಹೋಂಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ನಾರಾಯಣ ಹೃದಯಾಲಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗಿನ ಜಾವ ಮೃತಪಟ್ಟಿದ್ದಾರೆ. 
ಮೃತ ಕುಮಾರ್ ಪತ್ನಿ, ಒಂದು ಗಂಡು ಮತ್ತು ಒಂದು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 
        ಅಕಸ್ಮಿಕ ಸಾವು ಪರಿಹಾರಕ್ಕೆ ವರದಿ ಸಲ್ಲಿಕೆ :
    ಕಡಜ ದಾಳಿಯಿಂದ ಈ ಹಿಂದೆ ಮೃತಪಟ್ಟಿರುವ ಇಬ್ಬರು ವ್ಯಕ್ತಿಗಳು ಸೇರಿದಂತೆ ಆಕಸ್ಮಿಕವಾಗಿ ಮೃತಪಟ್ಟಿರುವ ಒಟ್ಟು ೫ ಮಂದಿಗೆ ಪರಿಹಾರ ನೀಡುವ ಸಂಬಂಧ ಅಗತ್ಯ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ದಾಖಲಾತಿಗಳ ಪರಿಶೀಲನೆ ನಡೆಯುತ್ತಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ಸಿಗಲಿದೆ ಎಂದು ತಹಸೀಲ್ದಾರ್ ಪ್ರದೀಪ್ ಪತ್ರಿಕೆಗೆ ತಿಳಿಸಿದ್ದಾರೆ.  

Sunday, October 10, 2021

ಜೆ.ಎಚ್ ಪಟೇಲ್ ಎಲ್ಲಾ ವರ್ಗದವರಿಗೂ ನ್ಯಾಯ ದೊರಕಿಸಿಕೊಟ್ಟ ಮಾದರಿ ನಾಯಕ : ಬಲ್ಕೀಶ್ ಬಾನು

ಭದ್ರಾವತಿಯಲ್ಲಿ ಭಾನುವಾರ ಜೆ.ಎಚ್ ಪಟೇಲ್ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜೆ.ಎಚ್ ಪಟೇಲರ ೯೧ನೇ ಜನ್ಮ ದಿನಾಚರಣೆ ಹಾಗೂ ಸಾವಯವ-ರಾಜಕಾರಣ ಕುರಿತು ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಬಲ್ಕೀಶ್ ಬಾನು ಉದ್ಘಾಟಿಸಿದರು.
    ಭದ್ರಾವತಿ, ಅ. ೧೦; ಮಾಜಿ ಮುಖ್ಯಮಂತ್ರಿ ಜೆ.ಎಚ್ ಪಟೇಲ್‌ರವರು ಅವರ ಅವಧಿಯಲ್ಲಿ ಅವರ ಸಹೋದರಿ ಅನುಸೂಯಮ್ಮ ಅವರನ್ನು ಶಿವಮೊಗ್ಗ ಜಿಲ್ಲಾ ಪಂಚಾಯಿ ಅಧ್ಯಕ್ಷರನ್ನಾಗಿ ಮಾಡುವ ಅವಕಾಶವಿದ್ದರೂ ಅದನ್ನು ಧಿಕ್ಕರಿಸಿ ಜಾತಿ ವರ್ಗಗಳನ್ನು ಪರಿಗಣಿಸದೆ ಮುಸ್ಲಿಂ ಮಹಿಳೆಯಾದ ನನ್ನನ್ನು ಅಧ್ಯಕ್ಷೆಯನ್ನಾಗಿ ಮಾಡುವ ಮೂಲಕ ಎಲ್ಲಾ ವರ್ಗದವರಿಗೂ ನ್ಯಾಯ ದೊರಕಿಸಿಕೊಡುವ ಮೂಲಕ ಮಾದರಿ ನಾಯಕರಾಗಿ ಗುರುತಿಸಿಕೊಂಡಿದ್ದರು ಎಂದು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಬಲ್ಕೀಶ್ ಬಾನು  ನೆನಪು  ಮಾಡಿಕೊಂಡರು.
    ಅವರು ಭಾನುವಾರ ಜೆ.ಎಚ್ ಪಟೇಲ್ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜೆ.ಎಚ್ ಪಟೇಲರ ೯೧ನೇ ಜನ್ಮ ದಿನಾಚರಣೆ ಹಾಗೂ ಸಾವಯವ-ರಾಜಕಾರಣ ಕುರಿತು ವಿಚಾರ ಸಂಕೀರ್ಣ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು.
ಈ ನಿಟ್ಟಿನಲ್ಲಿ ನನಗೆ ಸಮಾಜ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ಧೀಮಂತ ವ್ಯಕ್ತಿ, ಅಪರೂಪದ ರಾಜಕಾರಿಣಿ ಜೆ.ಎಚ್. ಪಟೇಲ್ ಅವರನ್ನು ನಿತ್ಯ ನೆನಪು ಮಾಡಿಕೊಳ್ಳತ್ತೇನೆ ಎಂದರು. ಮನುಷ್ಯ ಹುಟ್ಟಿದ ಮೇಲೆ ಸಮಾಜಕ್ಕೆ ಏನನ್ನಾದರೂ ಕೊಡುಗೆಯಾಗಿ ನೀಡಬೇಕು. ಆಗ ಮಾತ್ರ ದೇವರು ನಮ್ಮನ್ನು ಮೆಚ್ಚುತ್ತಾನೆ ಎಂದರು.
    ಪಟೇಲರು ಮೌಲ್ಯ ಮತ್ತು ರಾಜಕಾರಣ ಎರಡನ್ನು ಜೊತೆ ಜೊತೆಯಾಗಿ ತೆಗೆದುಕೊಂಡು ಹೋದವರು. ಅವರ ನಿಷ್ಠೆ, ಪ್ರಾಮಾಣಿಕತೆ, ಆದರ್ಶ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
      ಉಪನ್ಯಾಸ ನೀಡಿದ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ, ಸಮಾಜ ಸುಧಾರಣೆಯ ವಿಚಾರದಲ್ಲಿ ರಾಜಕಾರಣ ಮಾಡದೆ ಪಕ್ಷಾತೀತವಾಗಿ ಶ್ರಮಿಸಬೇಕು ಎಂಬುದು ದಿವಂಗತ ಜೆ.ಎಚ್ ಪಟೇಲರ ಆಶಯವಾಗಿತ್ತು. ಅದರಂತೆ ಪ್ರಬುದ್ದ ರಾಜಕಾರಣ ನಡೆಸಿದವರು. ಸಮಾಜವಾದ ಪರಿಕಲ್ಪನೆಯನ್ನು ಅಳವಡಿಸಿಕೊಂಡು ಅಭಿವೃದ್ದಿ ಮಾಡುವ ಮೂಲಕ ಆಧುನಿಕ ಕರ್ನಾಟಕದ ನಿರ್ಮಾಣಕ್ಕೆ ಕಾರಣರಾದರು. ಇಂತಹ ಮಹಾನ್ ನಾಯಕನನ್ನು ಕೇವಲ ಸ್ಮರಣೆ ಮಾಡಿಕೊಳ್ಳುವ ಬದಲು ಅವರ ಆಶಯಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ಈ ನಾಡಿನ ಅಭಿವೃದ್ದಿಗೆ ಶ್ರಮಿಸುವಂತಾಗಬೇಕೆಂದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ, ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ ಪಟೇಲ್ ಮಾತನಾಡಿ, ಪ್ರಸ್ತುತ ನಮಗೆ ಏನು ಬೇಕು ಎಂಬುದರ ಬಗ್ಗೆ ಹೆಚ್ಚು ಚಿಂತನೆ ಮಾಡಬೇಕಾಗಿದೆ. ಅಧಿಕಾರ ವಿಕೇಂದ್ರೀಕರಣದಂತೆ ಜವಾಬ್ದಾರಿ ವಿಕೇಂದ್ರೀಕರಣವೂ ಆಗಬೇಕಿದ್ದು, ಎಲ್ಲರಿಗೂ ಅನುಕೂಲವಾಗುವ ವಾತಾವರಣ ಸೃಷ್ಟಿಸಬೇಕಾಗಿದೆ.  ಸ್ಥಳೀಯವಾಗಿ ಹೊಸ ಪರಿಕಲ್ಪನೆಯನ್ನು ಸೃಷ್ಟಿಸಿಕೊಂಡರೆ ಆ ದಿಕ್ಕಿನಲ್ಲಿ ನಡೆಯಲು ಸಾಧ್ಯವಾಗುತ್ತದೆ ಎಂದರು.
 .     ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಜೆ.ಪಿ ಯೋಗೇಶ್, ಶಿಕ್ಷಣ ಪ್ರಸಾರಕ ಸಂಸ್ಥೆಯ ಉಪಾಧ್ಯಕ್ಷ ಶಶಿಭೂಷಣ ಹೆಗ್ಗಡೆ, ಉದ್ಯಮಿ ಬಿ.ಕೆ ಜಗನ್ನಾಥ್, ಒಳಚರಂಡಿ ಮತ್ತು ನಗರ ನೀರು ಸರಬರಾಜು ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ವಿದ್ಯಾಥಿ ಸಂಘಟನೆ ರಾಜ್ಯಾಧ್ಯಕ್ಷ ವಿನಯ್ ರಾಜಾವತ್, ಸಿ.ಎಂ ಖಾದರ್, ಶಶಿಕುಮಾರ್ ಎಸ್. ಗೌಡ, ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ನಗರಸಭಾ ಸದಸ್ಯ ಆರ್. ಮೋಹನ್‌ಕುಮಾರ್, ಜಿಲ್ಲಾ ಯೂನಿಯನ್ ಬ್ಯಾಂಕ್ ನಿರ್ದೇಶಕ ಸಂಜೀವ ಕುಮಾರ್, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಂ.ಎಸ್ ಜನಾರ್ಧನ ಅಯ್ಯಂಗಾರ್, ಬಿ. ಗಂಗಾಧರ್, ಸುಷ್ಮಾ  ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

ಬೌದ್ಧ ವಿಹಾರ/ಮಂದಿರ ನಿರ್ಮಾಣಕ್ಕೆ ಸ್ವಂತ ಜಮೀನು ದಾನ

ಬೌದ್ಧ ವಿಹಾರ/ಮಂದಿರ ನಿರ್ಮಾಣಕ್ಕೆ ಜಮೀನು ದಾನ ಮಾಡಿರುವ 
ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಧಿಕಾರಿ ಶ್ರೀನಿವಾಸ್
    ಭದ್ರಾವತಿ, ಅ. ೧೦: ನಗರದಲ್ಲಿ ಬೌದ್ಧ ವಿಹಾರ/ಮಂದಿರ ನಿರ್ಮಾಣಕ್ಕೆ ಸ್ವಂತ ಜಮೀನು ದಾನ ನೀಡುವ ಮೂಲಕ ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಶ್ರೀನಿವಾಸ್ ಉದಾರತೆ ಮೆರೆದಿದ್ದಾರೆ.
    ನಗರದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಿರುವ ಬಹಳಷ್ಟು ಮಂದಿ ಇತ್ತೀಚಿನ ವರ್ಷಗಳಲ್ಲಿ ಬೌದ್ಧ ಧರ್ಮದ ಕಡೆ ಹೆಚ್ಚಿನ ಒಲವು ತೋರಿಸುತ್ತಿದ್ದು, ಭಗವಾನ್ ಬುದ್ಧ ಹಾಗು ಅಂಬೇಡ್ಕರ್ ಅವರ ಅನುಯಾಯಿಗಳಿಗೆ ಪೂರಕ ವಾತಾವರಣ ಕಲ್ಪಿಸಿಕೊಡುವಂತೆ ಇದೀಗ ಬೌದ್ಧ ವಿಹಾರ/ಮಂದಿರ ನಿರ್ಮಾಣಗೊಳ್ಳುತ್ತಿದೆ.
    ಮೂಲತಃ ಹೊಸನಂಜಾಪುರ ಗ್ರಾಮದವರಾದ ದಾವಣಗೆರೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ಶ್ರೀನಿವಾಸ್ ಅವರು ತಮ್ಮ ಸ್ವಂತ ಜಮೀನಿನಲ್ಲಿ ಬೌದ್ಧ ವಿಹಾರ ನಿರ್ಮಾಣಕ್ಕೆ ಸುಮಾರು ೨ ಎಕರೆ ಜಾಗವನ್ನು ಸಂಬುದ್ಧ ಧಮ್ಮಾಂಕುರ ಟ್ರಸ್ಟ್‌ಕ್ಕೆ ದಾನವಾಗಿ ನೀಡಿದ್ದಾರೆ.  ಬಾಕಿ ಉಳಿದಿರುವುದು ಸುಂದರ ಬೌದ್ಧ ವಿಹಾರ/ಮಂದಿರ ನಿರ್ಮಾಣದ ಕಾರ್ಯ ಮಾತ್ರ.  ಅ.೧೪ರಂದು ಬೌದ್ಧ ವಿಹಾರ/ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ನಡೆಯುತ್ತಿದ್ದು, ಶೀಘ್ರವಾಗಿ ಮುಕ್ತಾಯಗೊಳ್ಳುವ ಮೂಲಕ ಲೋಕಾರ್ಪಣೆಗೊಳ್ಳುವಂತಾಗಲಿ ಎಂಬುದು ಬೌದ್ಧ ಅನುಯಾಯಿಗಳ ಆಶಯವಾಗಿದೆ.
    ಇದೆ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳ ಪ್ರಮುಖರಾದ ಸುರೇಶ್ ಹಾಗು ಶಿಕ್ಷಕ ಎ. ತಿಪ್ಪೇಸ್ವಾಮಿ ಅವರು ಬೌದ್ಧ ಭಿಕ್ಕುಗಳ ಸಮ್ಮುಖದಲ್ಲಿ ಬೌದ್ಧ ಧರ್ಮ ದೀಕ್ಷೆ ಪಡೆಯಲಿದ್ದಾರೆ.


Saturday, October 9, 2021

ಅ.೧೦ರಂದು ಜೆ.ಎಚ್ ಪಟೇಲ್ ೯೧ನೇ ಜನ್ಮದಿನಾಚರಣೆ

ಜೆ.ಎಚ್ ಪಟೇಲ್
    ಭದ್ರಾವತಿ, ಅ. ೯: ಜೆ.ಎಚ್ ಪಟೇಲ್ ಅಭಿಮಾನಿ ಬಳಗದ ವತಿಯಿಂದ ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿ ಜೆ.ಎಚ್ ಪಟೇಲ್ ಅವರ ೯೧ನೇ ಜನ್ಮ ದಿನಾಚರಣೆ ಅಂಗವಾಗಿ ವಿಚಾರ ಸಂಕಿರ್ಣ ಸಾವಯವ-ರಾಜಕಾರಣ ಅ.೧೦ರಂದು ಬೆಳಿಗ್ಗೆ ೧೧ ಗಂಟೆಗೆ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
    ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು, ಮಾಜಿ ಶಾಸಕ, ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಜೆ ಪಟೇಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕ ಬೇಳೂರ ಗೋಪಾಲ ಕೃಷ್ಣ ಪಟೇಲ್ ಅವರ ಭಾವಚಿತ್ರ ಅನಾವರಣಗೊಳಿಸಲಿದ್ದು, ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಶಶಿಭೂಷಣ ಹೆಗ್ಗಡೆ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಿದ್ದಾರೆ. ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಉಪನ್ಯಾಸ ನೀಡಲಿದ್ದಾರೆ.
    ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಬಲ್ಕೀಶ್ ಬಾನು, ಒಳಚರಂಡಿ ಮತ್ತು ನಗರ ನೀರು ಸರಬರಾಜು ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ, ನ್ಯಾಯವಾದಿಗಳಾದ ಟಿ. ಚಂದ್ರೇಗೌಡ, ಎಂ. ಶಿವಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ, ಉಪವಲಯ ಅರಣ್ಯಾಧಿಕಾರಿ ಬಿ.ಆರ್ ದಿನೇಶ್‌ಕುಮಾರ್, ವಿದ್ಯಾಥಿ ಸಂಘಟನೆ ರಾಜ್ಯಾಧ್ಯಕ್ಷ ವಿನಯ್ ರಾಜಾವತ್, ಶಶಿಕುಮಾರ್ ಎಸ್. ಗೌಡ, ಬಾಬು ದೀಪಕ್‌ಕುಮಾರ್, ಶಿವಬಸಪ್ಪ, ಬಿ. ಗಂಗಾಧರ್  ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.

ಅ.೧೪ರಂದು ಹೊಸನಂಜಾಪುರದಲ್ಲಿ ಬೌದ್ಧ ವಿಹಾರ/ಮಂದಿರ ನಿರ್ಮಾಣಕ್ಕೆ ಅಡಿಗಲ್ಲು : ಪ್ರೊ. ರಾಚಪ್ಪ

ಅ.೧೪ರಂದು ಬೆಳಿಗ್ಗೆ ೧೦.೩೦ಕ್ಕೆ ಭದ್ರಾವತಿ ನಗರದ ಬೊಮ್ಮನಕಟ್ಟೆ ರಸ್ತೆಯ ಹೊಸನಂಜಾಪುರದಲ್ಲಿ ಬೌದ್ಧ ವಿಹಾರ/ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಪ್ರೊ. ರಾಚಪ್ಪ ತಿಳಿಸಿದರು.
    ಭದ್ರಾವತಿ, ಅ. ೯: ಸಂಬುದ್ಧ ಧಮ್ಮಾಂಕುರ ಟ್ರಸ್ಟ್ ವತಿಯಿಂದ ಬುದ್ಧ ಶಕೆ ೨೫೬೫, ಭೀಮಶಕೆ ೧೩೦ನೇ ವರ್ಷದ ಅಂಗವಾಗಿ ಭಗವಾನ್ ಬುದ್ಧ ಹಾಗು ಡಾ. ಬಿ.ಆರ್ ಅಂಬೇಡ್ಕರ್ ಸ್ಮರಣಾರ್ಥ ಅ.೧೪ರಂದು ಬೆಳಿಗ್ಗೆ ೧೦.೩೦ಕ್ಕೆ  ನಗರದ ಬೊಮ್ಮನಕಟ್ಟೆ ರಸ್ತೆಯ ಹೊಸನಂಜಾಪುರದಲ್ಲಿ ಬೌದ್ಧ ವಿಹಾರ/ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಪ್ರೊ. ರಾಚಪ್ಪ ತಿಳಿಸಿದರು.
    ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೊಂದು ವಿಶೇಷ ಕಾರ್ಯಕ್ರಮವಾಗಿದೆ. ಭಗವಾನ್ ಬುದ್ಧನ ಭವ್ಯ ಪರಂಪರೆ, ಭಾರತ ದೇಶದ ಇತಿಹಾಸ, ಸ್ವಾತಂತ್ರ್ಯದ ಹೋರಾಟಗಳು, ಮಹಾನ್ ವ್ಯಕ್ತಿಗಳ ಸ್ಮರಣೆ ಎಲ್ಲವೂ ಈ ಸಮಾರಂಭದಲ್ಲಿ ಅನಾವರಣಗೊಳ್ಳಲಿವೆ ಎಂದರು.
    ಕೊಳ್ಳೇಗಾಲ ಚೇತವನ ಬುದ್ಧ ವಿಹಾರದ ಸುಗತಪಾಲ ಭಂತೇಜಿ, ಧಮ್ಮಾಚಾರಿಗಳಾದ ಚಾಂದಿಮಾ, ಲಕ್ಷ್ಮಣ್ ಮತ್ತು ಸಂಘಪಾಲೋ ಅವರು ದಿವ್ಯ ಸಾನಿಧ್ಯ ವಹಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಸಮಾರಂಭ ಉದ್ಘಾಟಿಸುವರು. ಟ್ರಸ್ಟ್ ಅಧ್ಯಕ್ಷ ಪ್ರೊ. ರಾಚಪ್ಪ ಅಧ್ಯಕ್ಷತೆ ವಹಿಸಲಿದ್ದು, ದಲಿತ ಮುಖಂಡರಾದ ಸತ್ಯ, ಡಿ. ನರಸಿಂಹಮೂರ್ತಿ, ಸುರೇಶ್, ಎನ್. ಶ್ರೀನಿವಾಸ್, ಮೈಲಾರಪ್ಪ, ಶಿವಗಂಗಾ, ಟ್ರಸ್ಟ್ ಉಪಾಧ್ಯಕ್ಷ ಬಿ.ಡಿ ಸಾವಕ್ಕನವರ್, ಕಾರ್ಯದರ್ಶಿ ಶ್ರೀನಿವಾಸ್, ನಗರಸಭಾ ಸದಸ್ಯರಾದ ಚನ್ನಪ್ಪ, ಉದಯಕುಮಾರ್, ಬಿ.ಪಿ ಸರ್ವಮಂಗಳ ಭೈರಪ್ಪ, ಪ್ರೇಮಾ ಬದರಿನಾರಾಯಣ, ಗ್ರಾಮ ಪಂಚಾಯಿತಿ ಸದಸ್ಯ ಕಿರಣ್‌ರಾಜ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
    ದಲಿತ ಮುಖಂಡ ಸತ್ಯ ಮಾತನಾಡಿ, ಭಗವಾನ್ ಬುದ್ಧ ಹಾಗು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗಳು ಎಲ್ಲೆಡೆ ವಿಸ್ತಾರಗೊಳ್ಳಗೊಳ್ಳಬೇಕು. ಈ ನಿಟ್ಟಿನಲ್ಲಿ ಎಲ್ಲರ ಸಹಕಾರದೊಂದಿಗೆ ಬೌದ್ಧ ವಿಹಾರ ನಿರ್ಮಾಣವಾಗುತ್ತಿದೆ. ಇಂತಹ ಮಹಾನ್ ಕಾರ್ಯ ಯಶಸ್ವಿಯಾಗಲು ಕೈಜೋಡಿಸಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ಮುಖಂಡ ಸುರೇಶ್ ಮಾತನಾಡಿ, ಬೌದ್ಧ ವಿಹಾರ ನಿರ್ಮಾಣದೊಂದಿಗೆ ಹೊಸ ಯುಗ ಆರಂಭಗೊಳ್ಳುವ ಲಕ್ಷಣಗಳು ಎದ್ದುಕಾಣುತ್ತಿದೆ. ಭವಿಷ್ಯದಲ್ಲಿ ನಾವೆಲ್ಲರೂ ಬುಧ್ದ ಹಾಗು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಮುನ್ನಡೆಯುವಂತಾಗಬೇಕಾಗಿದೆ ಎಂದರು.
    ಬೌದ್ಧ ವಿಹಾರ ನಿರ್ಮಾಣಕ್ಕೆ ಸ್ವಂತ ಜಮೀನಿನ ಜಾಗವನ್ನು ದಾನ ಮಾಡಿರುವ ಟ್ರಸ್ ಕಾರ್ಯದರ್ಶಿ ಶ್ರೀನಿವಾಸ್ ಮಾತನಾಡಿ, ಬಹಳ ವರ್ಷಗಳಿಂದ ಬೌದ್ಧ ವಿಹಾರ ನಿರ್ಮಾಣ ಮಾಡಬೇಕೆಂಬ ಬಯಕೆ ಹೊಂದಿದ್ದು, ಇದೀಗ ಸಾಕಾರಗೊಳ್ಳುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.
    ದಲಿತ ಮುಖಂಡ ಚಿನ್ನಯ್ಯ, ಶಿಕ್ಷಕ ಎ. ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಅಂಜುಮಾನ್-ಎ-ಇಸ್ಲಾಹುಲ್-ಮುಸ್ಲಿಮೀನ್ ನೂತನ ಅಧ್ಯಕ್ಷರಾಗಿ ಮುರ್ತುಜಾ ಖಾನ್ ಆಯ್ಕೆ

ಪತ್ರಿಕಾಗೋಷ್ಠಿಯಲ್ಲಿ ಮುಶಿರಾನ ಕಮಿಟಿ ಸದಸ್ಯ ಬಾಬಾಜಾನ್ ಮಾಹಿತಿ


ಭದ್ರಾವತಿ ಅಂಜುಮನ್-ಎ-ಇಸ್ಲಾಹುಲ್-ಮುಸ್ಲಿಮೀನ್ ನೂತನ ಅಧ್ಯಕ್ಷರಾಗಿ ನಗರಸಭೆ ಮಾಜಿ ಸದಸ್ಯ ಮುರ್ತುಜಾ ಖಾನ್ ಅವರು ಆಯ್ಕೆಯಾಗಿದ್ದಾರೆಂದು ಮುಶಿರಾನ ಕಮಿಟಿ ಸದಸ್ಯ ಬಾಬಾಜಾನ್ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

    ಭದ್ರಾವತಿ, ಅ. ೯: ನಗರದ ಅಂಜುಮನ್-ಎ-ಇಸ್ಲಾಹುಲ್-ಮುಸ್ಲಿಮೀನ್ ನೂತನ ಅಧ್ಯಕ್ಷರಾಗಿ ನಗರಸಭೆ ಮಾಜಿ ಸದಸ್ಯ ಮುರ್ತುಜಾ ಖಾನ್ ಅವರು ಆಯ್ಕೆಯಾಗಿದ್ದಾರೆಂದು ಮುಶಿರಾನ ಕಮಿಟಿ ಸದಸ್ಯ ಬಾಬಾಜಾನ್ ತಿಳಿಸಿದರು.
    ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೧೯ ಸುನ್ನಿ ಮಸೀದಿಗಳ ಆಡಳಿತ ವ್ಯಾಪ್ತಿಯನ್ನು ಒಳಗೊಂಡಿರುವ ಅಂಜುಮಾನ್-ಎ-ಇಸ್ಲಾಹುಲ್-ಮುಸ್ಲಿಮೀನ್ ಅಧ್ಯಕ್ಷ ಸ್ಥಾನ ಕಳೆದ ೭ ತಿಂಗಳುಗಳಿಂದ ಖಾಲಿ ಉಳಿದಿತ್ತು. ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ಮುಶಿರಾನ ಕಮಿಟಿಗೆ ಮನವಿಗಳು ಸಲ್ಲಿಕೆಯಾದ ಹಿನ್ನಲೆಯಲ್ಲಿ ಅ.೫ರಂದು ಸಂಜಯ್ ಕಾಲೋನಿ ಆಜಂ ಮಸೀದಿಯಲ್ಲಿ ಮುಶಿರಾನ ಕಮಿಟಿ ಸದಸ್ಯರಾದ ಸಿ.ಎಂ ಸಾಧಿಕ್, ಬಾಬಾಜಾನ್ ಮತ್ತು ಸೈಯದ್ ಜಾಫರ್ ನೇತೃತ್ವದಲ್ಲಿ ಸಭೆ ನಡೆಸಿ ಚುನಾವಣೆ ನಡೆಸಲು ತೀರ್ಮಾನಿಸಲಾಯಿತು.
    ಅದರಂತೆ ಅಧ್ಯಕ್ಷ ಸ್ಥಾನದ ಚುನಾವಣೆಗೆ ಅಮೀರ್‌ಜಾನ್, ಫೀರ್‌ಷರೀಫ್ ಮತ್ತು ಮುರ್ತುಜಾ ಖಾನ್ ಸ್ಪರ್ಧಿಸಿದ್ದು, ಈ ಪೈಕಿ ಮುರ್ತುಜಾ ಖಾನ್‌ರವರು ಹೆಚ್ಚಿನ ಮತಗಳನ್ನು ಪಡೆದು ಮುಂದಿನ ೩ ವರ್ಷಗಳ ಅವಧಿಗೆ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ೧೯ ಮಸೀದಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ ಚಲಾಯಿಸಿದರು. ನೂತನ ಅಧ್ಯಕ್ಷರಾಗಿ ಮುರ್ತುಜಾ ಖಾನ್ ಅವರನ್ನು ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದರು.
    ನೂತನ ಅಧ್ಯಕ್ಷ ಮುರ್ತುಜಾ ಖಾನ್ ಮಾತನಾಡಿ, ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ತುಂಬಾ ಹಳೇಯದಾದ ಸಂಸ್ಥೆ ಇದಾಗಿದ್ದು, ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಈ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ನಿಯಮಾನುಸಾರ ಬಹಳಷ್ಟು ಚುನಾವಣೆಗಳು ನಡೆದಿವೆ. ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಹಲವಾರು ಮಂದಿ ನಮ್ಮೊಂದಿಗೆ ಇದ್ದಾರೆ. ಎಲ್ಲಾ ೧೯ ಮಸೀದಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗು ಸದಸ್ಯರು ಸೇರಿದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಲಹೆ, ಸೂಚನೆ, ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇನೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜೆಬಿಟಿ ಬಾಬು, ಅಬ್ದುಲ್ ಖಾದರ್, ಜಾವಿದ್, ೧೯ ಮಸೀದಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗು ಸದಸ್ಯರು ಉಪಸ್ಥಿತರಿದ್ದರು.

ದುಶ್ಚಟಗಳಿಂದ ದೂರವಿದ್ದು ಇತಿಮಿತಿಯಲ್ಲಿ ಬದುಕು ರೂಪಿಸಿಕೊಂಡಾಗ ಮಾನಸಿಕ ಆರೋಗ್ಯ ಸಾಧ್ಯ : ಡಾ. ಕೃಷ್ಣ ಎಸ್ ಭಟ್

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಭದ್ರಾವತಿ ಘಟಕದಲ್ಲಿ ರೋಟರಿ ಕ್ಲಬ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಕುಟುಂಬ ವೈದ್ಯ ಡಾ. ಕೃಷ್ಣ ಎಸ್ ಭಟ್ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಅ. ೯: ದುಶ್ಚಟಗಳಿಗೆ ಬಲಿಯಾಗದೆ, ಕೀಳರಿಮೆಯಿಂದ ದೂರವಿರುವ ಮೂಲಕ ನಮ್ಮ ಸುತ್ತಮುತ್ತಲಿನ ಪರಿಸರಕ್ಕೆ ಹೊಂದಿಕೊಂಡು ನಮ್ಮ ಇತಿಮಿತಿಯಲ್ಲಿ ಬದುಕು ರೂಪಿಸಿಕೊಂಡಾಗ ನಾವೆಲ್ಲರೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ನಗರದ ಕುಟುಂಬ ವೈದ್ಯ ಡಾ. ಕೃಷ್ಣ ಎಸ್ ಭಟ್ ತಿಳಿಸಿದರು.
    ಅವರು ನಗರದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಘಟಕದಲ್ಲಿ ರೋಟರಿ ಕ್ಲಬ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಮಾನಸಿಕ ಆರೋಗ್ಯ ಸಹ ದೈಹಿಕ ಆರೋಗ್ಯದಷ್ಟೆ ಮುಖ್ಯವಾಗಿದೆ. ಪ್ರತಿಯೊಬ್ಬರ ನಡುವೆ ಪರಸ್ಪರ ಹೊಂದಾಣಿಕೆ ಮನೋಭಾವನೆ ಅಗತ್ಯವಾಗಿದೆ. ಯಾವುದೇ ರೀತಿಯಲ್ಲಿ ಇತರರಿಗೆ ಹೋಲಿಕೆ ಮಾಡಿಕೊಳ್ಳುವ ಮನಸ್ಥಿತಿಗೆ ಹೊಂದಿಕೊಳ್ಳದೆ. ಇರುವುದರಲ್ಲಿಯೇ ಸಂತೃಪ್ತಿ ಪಡುವ ಮನೋಭಾವ ರೂಪಿಸಿಕೊಳ್ಳಬೇಕೆಂದರು. ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು.  ಭವಿಷ್ಯದಲ್ಲಿ ಒಳ್ಳೆಯ ಅವಕಾಶಗಳನ್ನು ಎದುರು ನೋಡುವ ವಿಶ್ವಾಸಹೊಂದಿರಬೇಕು. ಯಾವುದೇ ಕಾರಣಕ್ಕೂ ಹತಾಶೆ, ನಿರಾಸೆಗಳಿಗೆ ಒಳಗಾಗಬಾರದು ಎಂದರು.
    ಮನೋವೈದ್ಯ ಡಾ. ಹರೀಶ ದೇಲಂತ ಬೆಟ್ಟು ಮಾತನಾಡಿ, ಪ್ರತಿಯೊಬ್ಬರ ಕೆಲಸದಲ್ಲಿ ನಿಷ್ಠೆ ಬಹು ಮುಖ್ಯವಾಗಿದೆ. ಅದರಲ್ಲಿಯೇ ತೃಪ್ತಿ ಹೊಂದಿ, ಎಷ್ಟೇ ಒತ್ತಡವಿದ್ದರೂ ಮದ್ಯ ಸೇವನೆ ವ್ಯಸನಕ್ಕೆ ಬಲಿಯಾಗಬಾರದು. ಪ್ರತಿದಿನ ನಡಿಗೆ, ಯೋಗ, ಪ್ರಾಣಯಾಮ, ವ್ಯಾಯಾಮಕ್ಕೆ ಸ್ವಲ್ಪ ಸಮಯ ಮೀಸಲಿಡಬೇಕೆಂದರು.
    ಘಟಕದ ವ್ಯವಸ್ಥಾಪಕಿ ಅಂಬಿಕಾ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಅಧ್ಯಕ್ಷ ಆದರ್ಶ, ಕಾರ್ಯದರ್ಶಿ ರಾಘವೇಂದ್ರ ಉಪಾಧ್ಯಾಯ, ಬಿ.ಎಂ ಶಾಂತಕುಮಾರ್, ಸುಂದರ್‌ಬಾಬು, ಅಡವೀಶಯ್ಯ, ಬಸ್ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.