ಮಾನವ ಹಕ್ಕುಗಳ ಹೋರಾಟ ಸಮಿತಿಯಿಂದ ಸಾರ್ವಜನಿಕರಿಗೆ ಪ್ರಶಸ್ತಿ ಸಮರ್ಪಣೆ
ತುಮಕೂರಿನ ಸಿದ್ದಗಂಗಾ ಮಠದ ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಲಿಂಕೈಗ್ಯ ಡಾ. ಶಿವಕುಮಾರ ಸ್ವಾಮೀಜಿಯವರಿಗೆ ಭದ್ರಾವತಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಶನಿವಾರ ವಿಶ್ವ ಮಾನವ ಬಿರುದು ನೀಡಿ ಶ್ರೀಗಳನ್ನು ಸ್ಮರಿಸಲಾಯಿತು.
ಭದ್ರಾವತಿ, ಡಿ. ೨೫: ತುಮಕೂರಿನ ಸಿದ್ದಗಂಗಾ ಮಠದ ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಲಿಂಕೈಗ್ಯ ಡಾ. ಶಿವಕುಮಾರ ಸ್ವಾಮೀಜಿಯವರಿಗೆ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಶನಿವಾರ ವಿಶ್ವ ಮಾನವ ಬಿರುದು ನೀಡಿ ಶ್ರೀಗಳನ್ನು ಸ್ಮರಿಸಲಾಯಿತು.
ಹಳೇನಗರದ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿ, ಸಿದ್ದಗಂಗಾ ಮಠದಲ್ಲಿ ಎಲ್ಲಾ ಜಾತಿ-ಮತದ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಅನ್ನ, ಆಶ್ರಯ, ಶಿಕ್ಷಣವನ್ನು ಲಕ್ಷಾಂತರ ಜನಕ್ಕೆ ನೀಡುವ ಮೂಲಕ 'ಜನ ಸೇವೆಯೇ ಜನಾರ್ಧನ ಸೇವೆ' ಎಂಬಂತೆ ಬಸವಣ್ಣನವರ ದಾರಿಯನ್ನೇ ಎತ್ತಿ ಹಿಡಿದ ಶ್ರೀಗಳ ಕಾರ್ಯ ಅತ್ಯಂತ ಶ್ರೇಷ್ಠವಾಗಿದೆ. ಅಲ್ಲದೆ ಶ್ರೀಗಳ ಸೇವಾ ಕಾರ್ಯಗಳು ಪ್ರಪಂಚದ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿವೆ. ಈ ಹಿನ್ನಲೆಯಲ್ಲಿ ಶ್ರೀಗಳನ್ನು ಗೌರವ ಪೂರ್ವಕವಾಗಿ ಸ್ಮರಣೆ ಮಾಡಿಕೊಳ್ಳುವ ಮೂಲಕ ಪ್ರಪಂಚದ ನಾಗರೀಕರ ಪರವಾಗಿ ವಿಶ್ವ ಮಾನವ ಬಿರುದನ್ನು ನೀಡಿ ಪ್ರಶಸ್ತಿಯನ್ನು ಸಾರ್ವಜನಿಕರಿಗೆ ಸಮರ್ಪಿಸಲಾಗುತ್ತಿದೆ ಎಂದರು.
ಶಾಸಕ ಬಿ.ಕೆ ಸಂಗಮೇಶ್ವರ್, ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ವರಿಷ್ಠ ಕೆ.ಟಿ ಗಂಗಾಧರ್, ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ. ಚಂದ್ರಶೇಖರಯ್ಯ, ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ, ಜೇಡಿಕಟ್ಟೆ ಶ್ರೀ ಮರುಳಸಿದ್ದೇಶ್ವರ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ಹಾಗು ವಿವಿಧ ಸಮಾಜಗಳ ಅಧ್ಯಕ್ಷರು, ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.