Monday, January 3, 2022

ಗ್ರಾಮಾಂತರ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ನೂತನ ಅಧ್ಯಕ್ಷರಾಗಿ ಎಂ.ರಮೇಶ್ ನೇಮಕ

ಭದ್ರಾವತಿ ತಾಲೂಕಿನ ಶಂಕರಘಟ್ಟ ದೀನಬಂಧು ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ರಮೇಶ್ ಬ್ಲಾಕ್ ಕಾಂಗ್ರೆಸ್‍ ಗ್ರಾಮಾಂತರ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದು, ಶಿವಮೊಗ್ಗ ಜಿಲ್ಲಾ ಹಿಂದುಳಿದ ಘಟಕದ ಜಿಲ್ಲಾಧ್ಯಕ್ಷ ರಮೇಶ್ ಇಕ್ಕೇರಿ ನೇಮಕಾತಿ ಪತ್ರ ವಿತರಿಸಿ ಎಂ. ರಮೇಶ್‌ ಅವರನ್ನು ಅಭಿನಂದಿಸಿದರು.  
    ಭದ್ರಾವತಿ ಜ. 3: ತಾಲೂಕಿನ ಶಂಕರಘಟ್ಟ ದೀನಬಂಧು ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ರಮೇಶ್ ಬ್ಲಾಕ್ ಕಾಂಗ್ರೆಸ್‍ ಗ್ರಾಮಾಂತರ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.  
    ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸೋಮವಾರ  ಜಿಲ್ಲಾ ಹಿಂದುಳಿದ ವರ್ಗಗಳ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾ‍ರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಹಿಂದುಳಿದ ಘಟಕದ ಜಿಲ್ಲಾಧ್ಯಕ್ಷ ರಮೇಶ್ ಇಕ್ಕೇರಿ ನೇಮಕಾತಿ ಪತ್ರ ವಿತರಿಸಿ ಎಂ. ರಮೇಶ್‌ ಅವರನ್ನು ಅಭಿನಂದಿಸಿದರು.  
    ಈ ಸಂದರ್ಭದಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್.ಎಸ್‌ ಸುಂದರೇಶ್‌, ಯುವ ಮುಖಂಡ ಡಾ. ಶ್ರೀನಿವಾಸ್‌ ಕರಿಯಣ್ಣ, ಮುಖಂಡರಾದ ಸೇವಾದಳದ ವೈ.ಎಚ್‌ ನಾಗರಾಜ್‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗು ಜರ್ನಲಿಸಂ ಪಿಜಿ ಡಿಪ್ಲೋಮಾ ಪದವಿ ಪಡೆದಿರುವ ಎಂ. ರಮೇಶ್‌ರವರು ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿದ್ದರು. ಈ ಹಿಂದೆ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದರು. ಅಲ್ಲದೇ ಈ ಹಿಂದಿನ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸ್ರಮ್ಮಿಶ್ರ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷಾಧಿಕಾರಿ ಕರ್ತವ್ಯ ನಿ‍ರ್ವಹಿಸಿದ್ದರು. ಈ ನಡುವೆ ದೀನಬಂಧು ಸೇವಾ ಟ್ರಸ್ಟ್ ಅಧ್ಯಕ್ಷರಾಗಿ ಸಮಾಜಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ.
    ಬ್ಲಾಕ್ ಕಾಂಗ್ರೆಸ್‍ ಗ್ರಾಮಾಂತರ ಹಿಂದುಳಿದ ವರ್ಗಗಳ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಎಂ. ರಮೇಶ್‌ ಅವರಿಗೆ ಶಾಸಕ ಬಿ.ಕೆ ಸಂಗಮೇಶ್ವರ್‌ ಹಾಗು ಬ್ಲಾಕ್‌ ಕಾಂಗ್ರೆಸ್‌ ನಗರ ಮತ್ತು ಗ್ರಾಮಾಂತರ ಘಟಕಗಳ ಅಧ್ಯಕ್ಷರು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಜಯಕರ್ನಾಟಕ ಸಂಘಟನೆ ಜಿಲ್ಲಾ ಉಪಾಧ್ಯಕ್ಷ, ಗೋಣಿಬೀಡಿನ ತ್ಯಾಗರಾಜ್‌ ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ. 




ಶಾಸಕ ಬಿ.ಕೆ.ಸಂಗಮೇಶ್ವರ್ ಸಲಹೆ ಸೂಚನೆ ಮೇರೆಗೆ ನೂತನ ಜವಾಬ್ದಾರಿ ಒಪ್ಪಿಕೊಂಡಿದ್ದು, ಈಗಾಗಲೇ ಶಾಸಕರ ನೇತೃತ್ವದಲ್ಲಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿದೆ. ಹಿಂದುಳಿದ ವರ್ಗಗಳ ಜನರನ್ನು ಕಾಂಗ್ರೆಸ್‌  ಪಕ್ಷದ ಮಖ್ಯವಾಹಿನಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುವ ಜೊತೆಗೆ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲು ಪ್ರಯತ್ನಿಸುತ್ತೇನೆ.
 - ಎಂ.ರಮೇಶ್, ಅಧ್ಯಕ್ಷರು, ಬ್ಲಾಕ್‌ ಕಾಂಗ್ರೆಸ್‌ ಗ್ರಾಮಾಂತರ ಹಿಂದುಳಿದ ವರ್ಗಗಳ 



ಚಾರ್ಲ್ಸ್ ಆನಂದರಾಜ್ ನಿಧನ

ಚಾರ್ಲ್ಸ್ ಆನಂದರಾಜ್
    ಭದ್ರಾವತಿ, ಜ. ೩: ನ್ಯೂಟೌನ್ ವೇನ್ಸ್ ಮೆಮೋರಿಯಲ್ ಚರ್ಚ್ ಖಜಾಂಚಿ, ಜನ್ನಾಪುರ ರಾಜಪ್ಪ ಲೇಔಟ್ ನಿವಾಸಿ ಚಾರ್ಲ್ಸ್ ಆನಂದರಾಜ್(೬೪) ಭಾನುವಾರ ನಿಧನ ಹೊಂದಿದರು.
    ಪತ್ನಿ, ೧ ಗಂಡು, ೧ ಹೆಣ್ಣು ಮಕ್ಕಳನ್ನು ಹೊಂದಿದ್ದರು. ಆನಂದರಾಜ್ ಎಂಪಿಎಂ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಇವರ ಅಂತ್ಯಕ್ರಿಯೆ ಬೈಪಾಸ್ ರಸ್ತೆಯಲ್ಲಿರುವ ಸಂಯುಕ್ತ ಕ್ರೈಸ್ತರ ಸಮಾಧಿಯಲ್ಲಿ ಸೋಮವಾರ ನೆರವೇರಿತು.
     ಯಂಗ್ ಕ್ರಿಶ್ಚಿಯನ್ ಅಸೋಸಿಯೇಷನ್ ನೂತನ ಅಧ್ಯಕ್ಷ ಆರ್. ಮೋಸಸ್, ಬಿಪಿಎಲ್ ರವಿಕುಮಾರ್, ಎಎಪಿ ಪಕ್ಷದ ಎಚ್. ರವಿಕುಮಾರ್, ಎಂಪಿಎಂ ನಿವೃತ್ತ ಕಾರ್ಮಿಕರು, ಕ್ರೈಸ ಸಮುದಾಯದ ಪ್ರಮುಖರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

Sunday, January 2, 2022

ನಿಂಗಮ್ಮ ನಿಧನ

ನಿಂಗಮ್ಮ
ಭದ್ರಾವತಿ, ಜ. ೨: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್ ಅವರ ತಾಯಿ, ಹುಡ್ಕೋ ಕಾಲೋನಿ ನಿವಾಸಿ ನಿಂಗಮ್ಮ(೭೫) ಭಾನುವಾರ ರಾತ್ರಿ ನಿಧನ ಹೊಂದಿದರು.
    ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಹೊಂದಿದ್ದರು. ಮೃತರ ಅಂತ್ಯಕ್ರಿಯೆ ಸೋಮವಾರ ಮಿಲ್ಟ್ರಿಕ್ಯಾಂಪ್ ಬೈಪಾಸ್ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ.  ನಿಂಗಮ್ಮ ನಿಧನಕ್ಕೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ಸೂಚಿಸಿದೆ.

ಸರ್ಕಾರ ಬೇಡಿಕೆಗಳನ್ನು ಈಡೇರಿಸಿ ಉದ್ಯೋಗದ ಭದ್ರತೆ ನೀಡಲಿ

ಅತಿಥಿ ಉಪನ್ಯಾಸಕರಿಂದ ವಿಧಾನಸೌಧದವರೆಗೆ ಪಾದಯಾತ್ರೆಗೆ ಕಾಂಗ್ರೆಸ್ ಬೆಂಬಲ


ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟದ ವತಿಯಿಂದ ಸೇವೆಯನ್ನು ಕಾಯಂ ಮಾಡಲು ಹಾಗು ಹರ್ಷ ಶಾನುಬೋಗ್ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ವಿಧಾನಸೌಧದವರೆಗೆ ಹಮ್ಮಿಕೊಳ್ಳಲಾಗಿರುವ ಪಾದಯಾತ್ರೆಗೆ ಭಾನುವಾರ ಭದ್ರಾವತಿ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ಬೆಂಬಲ ಸೂಚಿಸಿ ಮಾತನಾಡಿದರು.
    ಭದ್ರಾವತಿ, ಜ. ೨:  ಸರ್ಕಾರ ಯಾವುದೇ ಕಾರಣಕ್ಕೂ ಹೋರಾಟ ನಡೆಸುವವರನ್ನು ದಬ್ಬಾಳಿಕೆ ಮೂಲಕ ಹತ್ತಿಕ್ಕುವ ಕೆಲಸ ಮಾಡಬಾರದು. ತಕ್ಷಣ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಬೇಕೆಂದು   ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ಆಗ್ರಹಿಸಿದರು.
    ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟದ ವತಿಯಿಂದ ಸೇವೆಯನ್ನು ಕಾಯಂ ಮಾಡಲು ಹಾಗು ಹರ್ಷ ಶಾನುಬೋಗ್ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ವಿಧಾನಸೌಧದವರೆಗೆ ಹಮ್ಮಿಕೊಳ್ಳಲಾಗಿರುವ ಪಾದಯಾತ್ರೆಗೆ ಭಾನುವಾರ ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಲ್ಲಿ ಬೆಂಬಲ ಸೂಚಿಸಿ ಅವರು ಮಾತನಾಡಿದರು.
    ಸ್ನಾತಕೋತ್ತರ ಪದವಿ ಪೂರೈಸಿಕೊಂಡು ಉಪನ್ಯಾಸಕ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ನಿರ್ಲಕ್ಷ್ಯತನ ವಹಿಸುತ್ತಿರುವುದು ಸರಿಯಲ್ಲ. ವೇತನವನ್ನು ಸಹ ಸರಿಯಾಗಿ ನೀಡದೆ, ಇನ್ನಿತರ ಬೇಡಿಕೆಗಳನ್ನು ಈಡೇರಿಸದೆ, ಉದ್ಯೋಗದ ಭದ್ರತೆ ನೀಡದೆ ಇರುವುದು ಪ್ರಸ್ತುತ ಅತಿಥಿ ಉಪನ್ಯಾಸಕರನ್ನು ಬೀದಿಗೆ ಬರುವಂತೆ ಮಾಡಿದೆ. ಕಳೆದ ಸುಮಾರು ೨ ವರ್ಷಗಳಿಂದ ಕೋವಿಡ್-೧೯ ಮಹಾಮಾರಿಯಿಂದಾಗಿ ಬದುಕು ಅತಂತ್ರವಾಗಿದೆ. ಶಾಲಾ-ಕಾಲೇಜುಗಳಲ್ಲಿ ಪಾಠ ಪ್ರವಚನಗಳು ನಡೆಯುತ್ತಿರುವುದೇ ಹೆಚ್ಚು. ಇಂತಹ ಸಂದರ್ಭದಲ್ಲಿ ಬೇಡಿಕೆಗಳನ್ನು ಈಡೇರಿಸದೆ ಹಠಮಾರಿತನ ಧೋರಣೆ ಅನುಸರಿಸುತ್ತಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ ಎಂದರು.
    ಕಾಂಗ್ರೆಸ್ ಪಕ್ಷ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಸದಾ ಬೆಂಬಲವಾಗಿದ್ದು, ಈಗಾಗಲೇ ವಿರೋಧ ಸಿದ್ದರಾಮಯ್ಯನವರು ಅತಿಥಿ ಉಪನ್ಯಾಸಕರ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಇದೀಗ ನಡೆಯುತ್ತಿರುವ ಪಾದಯಾತ್ರೆಗೂ ನಮ್ಮ ಬೆಂಬಲವಿದೆ ಎಂದರು.  
    ರಾಘವೇಂದ್ರ ಸರಾಟೆ, ಸಂಪತ್‌ಕುಮಾರ್, ರಮೇಶ್ ಬರ್ಗೆ, ವಿಶ್ವ ಕುಮಾರ, ನೂರುಲ್ಲಾ ಷರೀಫ್, ನಿತಿನ್, ಹರ್ಷ, ಜ್ಯೋತಿ, ರುದ್ರೇಶ್ ಛಲವಾದಿ, ಲೋಕೇಶ್ ಗುಬ್ಬಿ, ಅರವಿಂದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜ.೩ರಂದು ಶ್ರೀಮಾತೆ ಸಾವಿತ್ರಿ ಬಾಯಿಪುಲೆ ೧೯೧ನೇ ಜಯಂತಿ

    ಭದ್ರಾವತಿ, ಜ. ೨: ಕರ್ನಾಟಕ ದಲಿತ ನೌಕರರ ಒಕ್ಕೂಟದ ವತಿಯಿಂದ ಜ.೩ರಂದು ಸಂಜೆ ೫.೩೦ಕ್ಕೆ ಬಿ.ಎಚ್ ರಸ್ತೆ, ದುರ್ಗಾ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಅಕ್ಷರದವ್ವ ಶ್ರೀಮಾತೆ ಸಾವಿತ್ರಿ ಬಾಯಿಪುಲೆಯವರ ೧೯೧ನೇ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಡಿಎಸ್‌ಎಸ್ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕು.ವಿ.ವಿ ಪ್ರಾಧ್ಯಾಪಕ ಜಗನ್ನಾಥ ಕೆ.ಡಾಂಗೆ ಉಪನ್ಯಾಸ ನೀಡಲಿದ್ದಾರೆ.
    ತಹಸೀಲ್ದಾರ್ ಆರ್. ಪ್ರದೀಪ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ, ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ. ಜಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಡಿಎಸ್‌ಎಸ್ ತಾಲೂಕು ಸಂಚಾಲಕ ಕೆ. ರಂಗನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ. ತಿಪ್ಪೇಸ್ವಾಮಿ ಕೋರಿದ್ದಾರೆ.

ವಿದ್ಯುತ್ ತಗುಲಿ ಗಾಯಗೊಂಡ ಪ್ರಕರಣ : ೫ ಜನರ ವಿರುದ್ಧ ಪ್ರಕರಣ ದಾಖಲು

    ಭದ್ರಾವತಿ, ಜ. ೨: ಕೆಲವು ದಿನಗಳ ಹಿಂದೆ ಆನೇಕೊಪ್ಪ ನಗರಸಭೆ ಪಂಪ್ ಹೌಸ್ ಬಳಿ ನಿರಂತರ ಜ್ಯೋತಿ ವಿದ್ಯುತ್ ಕಾಮಗಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಖಾಸಗಿ ಕಂಪನಿಯೊಂದರ ಇಬ್ಬರು ಕಾರ್ಮಿಕರಿಗೆ ವಿದ್ಯುತ್ ತಗುಲಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ೫ ಜನರ ವಿರುದ್ಧ ಪ್ರಕರಣ ಕಾಗದನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಬಜಾಜ್ ಎಲೆಕ್ಟ್ರಿಕಲ್ ಲಿಮಿಟೆಡ್ ಕಾರ್ಮಿಕರಾದ ಸಂತೋಷ್ ಮತ್ತು ಪರಮೇಶ್ ಇಬ್ಬರು ೧೧ ಕೆ.ವಿ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ಜಂಪ್ ಜೋಡಿಸುವಾಗಿ ವಿದ್ಯುತ್ ಪ್ರವಹಿಸಿದ್ದು, ಇದರಿಂದಾಗಿ ಇಬ್ಬರು ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದರು. ಇಬ್ಬರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.
    ಯಾವುದೇ ಸುರಕ್ಷತೆ ಇಲ್ಲದೆ ಕಾಮಗಾರಿ ನಿರ್ವಹಿಸಿದ ಹಾಗು ಸುರಕ್ಷತಾ ಸಲಕರಣೆಗಳನ್ನು ನೀಡದೆ ಇರುವ ಆರೋಪದಡಿ   ವ್ಯಾಪ್ತಿಯ ಬಜಾಜ್ ಎಲೆಕ್ಟ್ರಿಕಲ್ ಲಿಮಿಟೆಡ್ ವ್ಯವಸ್ಥಾಪಕರಾದ ವೇದ ಪ್ರಕಾಶ್, ಸೈಟ್ ಸೂಪರ್ ವೈಸರ್ ಮದನ್‌ಕುಮಾರ್ ಹಾಗು ಈ ಭಾಗದ ಮೆಸ್ಕಾಂ ಲೈನ್‌ಮ್ಯಾನ್‌ಗಳಾದ ಭರ್ಮೇಗೌಡ ಮತ್ತು ಚನ್ನಯ್ಯ ಹಾಗು ಕಿರಿಯ ಇಂಜಿನಿಯರ್ ಲೋಕೇಶ್ ಸೇರಿದಂತೆ ಒಟ್ಟು ೫ ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬಡವ ರಾಸ್ಕಲ್ ಚಿತ್ರದ ನಟ ಡಾಲಿ ಧನಂಜಯ ನಗರಕ್ಕೆ ಆಗಮನ : ಅಭಿಮಾನಿಗಳಿಂದ ಜೆಸಿಬಿ ಮೂಲಕ ಪುಷ್ಪ ಮಾಲೆ

ಭದ್ರಾವತಿಗೆ ಭಾನುವಾರ ಆಗಮಿಸಿದ ಬಡವ ರಾಸ್ಕಲ್ ಚಿತ್ರದ ನಟ ಡಾಲಿ ಧನಂಜಯ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರ ನಿವಾಸಕ್ಕೆ ಭೇಟಿ ನೀಡಿದರು.
 
    ಭದ್ರಾವತಿ, ಜ. ೨: ಕಳೆದ ವಾರ ಬಿಡುಗಡೆಯಾದ ಬಡವ ರಾಸ್ಕರ್ ಚಿತ್ರದ ನಟ ಡಾಲಿ ಧನಂಜಯ ಭಾನುವಾರ ಚಿತ್ರದ ಪ್ರಚಾರಕ್ಕೆ ಸಿ.ಎನ್ ರಸ್ತೆಯಲ್ಲಿರುವ ನೇತ್ರಾವತಿ ಚಿತ್ರಮಂದಿರಕ್ಕೆ ಆಗಮಿಸಿದರು.
    ಧನಂಜಯ ಅವರಿಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ಕಂಡು ಬಂದಿತು. ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಬಡವ ರಾಸ್ಕರ್ ಚಿತ್ರ ಇನ್ನೂ ಹೆಚ್ಚಿನ ಪ್ರದರ್ಶನಗೊಳ್ಳಲು ನೆರವಾಗುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುವಂತೆ ಅಭಿಮಾನಿಗಳು ಹಾಗು ಸಾರ್ವಜನಿಕರಿಗೆ ನಟ ಧನಂಜಯ ಮನವಿ ಮಾಡಿದರು.
    ಇದಕ್ಕೂ ಮೊದಲು ಚಿತ್ರಮಂದಿರದ ಮಾಲೀಕ ದುಷ್ಯಂತ್ ರಾಜ್ ಮತ್ತು ಸಿಬ್ಬಂದಿಗಳು ಧನಂಜಯ ಅವರನ್ನು ಪುಷ್ಪ ಮಾಲಿಕೆ ಮೂಲಕ ಸ್ವಾಗತಿಸಿದರು.
    ಅಪ್ಪಾಜಿ ನಿವಾಸಕ್ಕೆ ಭೇಟಿ:
    ನಟ ಧನಂಜಯ ನ್ಯೂಟೌನ್ ಉಂಬ್ಳೆಬೈಲು ರಸ್ತೆಯಲ್ಲಿರುವ ಮಾಜಿ ಶಾಸಕ ದಿವಂಗತ ಶಾಸಕ ಎಂ.ಜೆ ಅಪ್ಪಾಜಿ ನಿವಾಸಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರಿಗೆ ಅಭಿಮಾನಿಗಳು ಜೆಸಿಬಿ ಮೂಲಕ ಪುಷ್ಪ ಮಾಲೆ ಸಮರ್ಪಿಸಿದರು.
    ಜೆಡಿಎಸ್ ಮುಖಂಡರಾ ಶಾರದ ಅಪ್ಪಾಜಿ, ಪುತ್ರ ಎಂ.ಎ ಅಜಿತ್ ಸೇರಿದಂತೆ ಕುಟುಂಬ ವರ್ಗದವರು ಧನಂಜಯ ಅವರಿಗೆ ಅದ್ದೂರಿ ಸ್ವಾಗತ ಕೋರಿದರು.



ಭದ್ರಾವತಿಗೆ ಭಾನುವಾರ ಆಗಮಿಸಿದ ಬಡವ ರಾಸ್ಕಲ್ ಚಿತ್ರದ ನಟ ಡಾಲಿ ಧನಂಜಯ ಅವರಿಗೆ ಅಭಿಮಾನಿಗಳು ಜೆಸಿಬಿ ಮೂಲಕ ಪುಷ್ಪ ಮಾಲೆ ಸಮರ್ಪಿಸಿದರು.