ಬಿಜೆಪಿ ಹೋರಾಟಕ್ಕೆ ತಹಸೀಲ್ದಾರ್ ತಲೆ ದಂಡ..?, ವರ್ಗಾವಣೆ ಖಂಡಿಸಿ ಫೆ. ೫ರಂದು ಪ್ರತಿಭಟನೆ
ತಹಸೀಲ್ದಾರ್ ಪ್ರದೀಪ್ ಆರ್ ನಿಕ್ಕಮ್
ಭದ್ರಾವತಿ, ಫೆ. ೪: ಅಕ್ರಮವಾಗಿ ಬಡಾವಣೆ ನಿರ್ಮಿಸಿಕೊಂಡು ನಿವಾಸಿ ದೃಢೀಕರಣ ನೀಡಲಾಗಿದೆ ಎಂದು ಆರೋಪಿಸಿ ಕೆಲವು ದಿನಗಳ ಹಿಂದೆ ತಾಲೂಕು ಬಿಜೆಪಿ ಮಂಡಲ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಗಿತ್ತು. ಇದಕ್ಕೆ ಪೂರಕವೆಂಬಂತೆ ಇದೀಗ ತಹಸೀಲ್ದಾರ್ ವರ್ಗಾವಣೆ ಸುದ್ದಿ ವ್ಯಾಪಕವಾಗಿ ಹರಡಿದ್ದು, ವರ್ಗಾವಣೆ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ತಾಲೂಕಿನ ಕಂಬದಾಳು ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳಿಕಲ್ ಬೆಟ್ಟದಲ್ಲಿರುವ ಅರಣ್ಯ ಇಲಾಖೆಗೆ ಸೇರಿರುವ ಜಾಗವನ್ನು ಕೆಲವರು ಅಕ್ರಮವಾಗಿ ಕಬಳಿಸಿಕೊಂಡು ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದು, ಈ ಜಾಗಕ್ಕೆ ಬಿ.ಕೆ ಸಂಗಮೇಶ್ವರ್ ಬಡಾವಣೆ ಎಂಬ ಹೆಸರನ್ನು ನಾಮಕರಣಗೊಳಿಸಿ ನಿವಾಸಿಗಳಿಗೆ ಬಡಾವಣೆ ಹೆಸರಿನಲ್ಲಿ ನಿವಾಸಿ ದೃಢೀಕರಣ ನೀಡಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿತ್ತು. ಅಲ್ಲದೆ ನಿವಾಸಿ ದೃಢೀಕರಣ ಪತ್ರ ನೀಡಲು ಕಾರಣಕರ್ತರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಪೂರಕವೆಂಬಂತೆ ಇದೀಗ ತಹಸೀಲ್ದಾರ್ ಪ್ರದೀಪ್ ಆರ್ ನಿಕ್ಕಮ್ ವರ್ಗಾವಣೆ ಸುದ್ದಿ ಕೇಳಿ ಬರುತ್ತಿದೆ.
ಪುರಸಭೆ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರದೀಪ್ ಆರ್ ನಿಕ್ಕಮ್ ಕಳೆದ ವರ್ಷ ಜುಲೈ ತಿಂಗಳಿನಲ್ಲಿ ವರ್ಗಾವಣೆಗೊಂಡು ಬಂದಿದ್ದರು. ಇವರ ವಿರುದ್ಧ ಇದುವರೆಗೂ ಯಾವುದೇ ಆರೋಪಗಳು ಕೇಳಿ ಬಂದಿರಲಿಲ್ಲ. ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಕಛೇರಿಯಲ್ಲಿ ಪಾರದರ್ಶಕ ಆಡಳಿತಕ್ಕೆ ಹೆಚ್ಚಿನ ಒತ್ತುವ ನೀಡುವ ಜೊತೆಗೆ ಹೊಸತನ ರೂಪಿಸಿದ್ದರು. ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳು ಹಾಗು ದಾನಿಗಳಿಂದ ಆರ್ಥಿಕ ನೆರವು ಸಂಗ್ರಹಿಸಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು. ಇದರ ಜೊತೆಗೆ ಹಲವಾರು ಅಕ್ರಮಗಳ ವಿರುದ್ಧ ಧ್ವನಿ ಎತ್ತಿದ್ದರು. ಇದೀಗ ಇವರ ವರ್ಗಾವಣೆ ಸುದ್ದಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ವರ್ಗಾವಣೆ ವಿರುದ್ಧ ಫೆ.೫ರಂದು ಹೋರಾಟ :
ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ತಹಸೀಲ್ದಾರ್ ಪ್ರದೀಪ್ ಆರ್. ನಿಕ್ಕಮ್ ಅವರನ್ನು ಉದ್ದೇಶ ಪೂರ್ವಕವಾಗಿ ವರ್ಗಾವಣೆ ಗೊಳಿಸುತ್ತಿರುವುದನ್ನು ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ಖಂಡಿಸಿದೆ.
ತಹಸೀಲ್ದಾರ್ ವರ್ಗಾವಣೆ ರದ್ದು ಮಾಡುವ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಿ ಗಮನ ಸೆಳೆಯಲು ಫೆ.೫ರಂದು ಬೆಳಿಗ್ಗೆ ೧೧.೫೯ಕ್ಕೆ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.