Sunday, May 29, 2022

ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ

ಭದ್ರಾವತಿಯಲ್ಲಿ ಶ್ರೀ ವಿನಾಯಕ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಶ್ರೀ ಹರಿಹರೇಶ್ವರ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಭಾನುವಾರ ಶ್ರೀರಾಮನಗರದ ಶ್ರಮಜೀವಿ ಮರಿಸಿದ್ದಯ್ಯ ಕಲ್ಯಾಣ ಮಂಟಪದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೋಟ್ ಬುಕ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.
    ಭದ್ರಾವತಿ, ಮೇ. ೨೯: ಶ್ರೀ ವಿನಾಯಕ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಶ್ರೀ ಹರಿಹರೇಶ್ವರ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಭಾನುವಾರ ಶ್ರೀರಾಮನಗರದ ಶ್ರಮಜೀವಿ ಮರಿಸಿದ್ದಯ್ಯ ಕಲ್ಯಾಣ ಮಂಟಪದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೋಟ್ ಬುಕ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.
    ಹಲವಾರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಟ್ರಾವೆಲ್ಸ್ ಮಾಲೀಕ ಮತ್ತು ಸಿವಿಲ್ ಗುತ್ತಿಗೆದಾರ ಎ. ಧರ್ಮೇಂದ್ರ ಪ್ರತಿವರ್ಷ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್‌ಬುಕ್‌ಗಳನ್ನು ವಿತರಿಸುತ್ತಿದ್ದು, ಈ ಬಾರಿ ಒಟ್ಟು ೧೫೦೦ ನೋಟ್ ಬುಕ್‌ಗಳನ್ನು ವಿತರಿಸಿದರು.
    ಬಾಬಳ್ಳಿ, ಕಾಗೇಕೋಡಮಗ್ಗಿ, ಜಯನಗರ, ವೀರಾಪುರ, ರಾಮನಗರ, ಕುಮರಿನಾರಾಯಣಪುರ ಮತ್ತು ತಳ್ಳಿಕಟ್ಟೆ ಗ್ರಾಮಗಳ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೋಟ್ ಬುಕ್‌ಗಳನ್ನು ವಿತರಿಸಲಾಯಿತು.
    ಯು. ಹರೀಶ್‌ರಾವ್, ಸಿ. ಹರಿಬಾಬು, ಸಿ.ಎಸ್ ನಾಗರಾಜ್, ಮಮತ, ರೂಪವತಿ, ಮಂಗಳ ಗೌರಮ್ಮ, ಶಶಿಕುಮಾರ, ಪರಮೇಶ್ವರಪ್ಪ, ಸತ್ಯನಾರಾಯಣ, ಸುರೇಶ್, ಗಂಗಣ್ಣ, ಕಾವೇರಮ್ಮ ಮತ್ತು ಗಣೇಶ್ ಕಲ್ಲೇರಿ, ಆಶಾರಾಣಿ ಧರ್ಮೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಿವಲಿಂಗೇಗೌಡ ಕಾರ್ಯಕ್ರಮ ನಿರೂಪಿಸಿದರು.

ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಅಶೋಕ್ ಹಾರನಹಳ್ಳಿಗೆ ಸನ್ಮಾನ

ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಹಾಗು ಲೋಕಶಿಕ್ಷಣ ಟ್ರಸ್ಟ್ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅವರನ್ನು ಭದ್ರಾವತಿ ತಾಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ಭಾನುವಾರ ಸನ್ಮಾನಿಸಿ ಗೌರವಿಸಲಾಯಿತು.

    ಭದ್ರಾವತಿ, ಮೇ. ೨೯: ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಹಾಗು ಲೋಕಶಿಕ್ಷಣ ಟ್ರಸ್ಟ್ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅವರನ್ನು
    ತಾಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ಭಾನುವಾರ ಸನ್ಮಾನಿಸಿ ಗೌರವಿಸಲಾಯಿತು. ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಎಂ.ಎಸ್ ಜನಾರ್ಧನ್ ಅಯ್ಯಂಗಾರ್ ಅಶೋಕ್ ಹಾರನಹಳ್ಳಿ ಅವರನ್ನು ಸ್ವಾಗತಿಸಿದರು. ಹೊಯ್ಸಳ ಕರ್ನಾಟಕ ಅಧ್ಯಕ್ಷ ಕೃಷ್ಣಸ್ವಾಮಿ, ಉಪಾಧ್ಯಕ್ಷ ಜಿ. ರಮಾಕಾಂತ್, ಗೌರವಾಧ್ಯಕ್ಷರಾದ ಡಾ. ಹರೀಶ್ ದೇಲಂತಬೆಟ್ಟು ಮತ್ತು ರವಿಕುಮಾರ್, ಖಜಾಂಚಿ ಮಂಜುನಾಥ್, ಕಾರ್ಯದರ್ಶಿ ಕೇಶವಮೂರ್ತಿ, ಸುಬ್ರಮಣ್ಯ, ಪಿ.ಕೆ ಮಂಜುನಾಥ್, ನರಸಿಂಹಸ್ವಾಮಿ, ಶೇಷಾದ್ರಿ,  ಎನ್. ಕೃಷ್ಣಮೂರ್ತಿ, ನಾಗೇಶ್, ಶಿವಮೊಗ್ಗ ಅಡುಗೆ ಸಂಘದ ಅಧ್ಯಕ್ಷ ಮಾಧವ ಮೂರ್ತಿ, ಮಧ್ವ ಮಂಡಳಿ ಅಧ್ಯಕ್ಷ ಜಯತೀರ್ಥ ಉಮೇಶ್, ಶೋಭ ಕನಕಲಕ್ಷ್ಮಿ, ಹೇಮಾ ಸೇರಿದಂತೆ ವಿಪ್ರ ಬಾಂಧವರು ಉಪಸ್ಥಿತರಿದ್ದರು.

ಪ್ರತಿಯೊಂದು ಕೆಲಸದ ಹಿಂದೆ ಕಾರ್ಮಿಕರ ಶ್ರಮವಿದೆ : ಬಿಳಿಕಿ ಶ್ರೀ

ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್, ಶ್ರಮ ಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಭಾನುವಾರ ಭದ್ರಾವತಿ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಶೈವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕರ ದಿನಾಚರಣೆ ಹಾಗೂ ಸಾಧನ-ಸಲಕರಣೆಗಳ ವಿತರಣಾ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಕಾರ್ಮಿಕರ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಮೇ. ೨೯: ಕಾರ್ಮಿಕರ ಶ್ರಮಕ್ಕೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಕಾರ್ಮಿಕರು ತಮ್ಮ ತಮ್ಮ ವೃತ್ತಿಗಳಲ್ಲಿ ಶ್ರದ್ಧೆ, ಪ್ರಾಮಾಣಿಕತೆಯಿಂದ ತೊಡಗಿಸಿಕೊಳ್ಳುವ ಜೊತೆಗೆ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗು ಸಂಸ್ಕಾರ ನೀಡಬೇಕೆಂದು ಬಿಳಿಕಿ ಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್, ಶ್ರಮ ಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಭಾನುವಾರ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಶೈವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕರ ದಿನಾಚರಣೆ ಹಾಗೂ ಸಾಧನ-ಸಲಕರಣೆಗಳ ವಿತರಣಾ ಕಾರ್ಯಕ್ರಮದಲ್ಲಿ  ಶ್ರೀಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
    ಕಾರ್ಮಿಕರಿಲ್ಲದ ಸಮಾಜ ಕಲ್ಪಿಸಿಕೊಳ್ಳುವುದು ಅಸಾಧ್ಯವಾಗಿದ್ದು, ಪ್ರತಿಯೊಂದು ಕೆಲಸದ ಹಿಂದೆ ಕಾರ್ಮಿಕರ ಶ್ರಮವಿದೆ. ಕಾರ್ಮಿಕರು ಶ್ರಮ ಜೀವಿಗಳಾಗಿದ್ದು, ಧರ್ಮ, ಜಾತಿ, ಪಂಥಗಳನ್ನು ಮೀರಿದವರು. ಇವರನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬರು ಅವಲಂಬಿಸಿಕೊಂಡಿದ್ದಾರೆ. ಇಂತಹ ಕಾರ್ಮಿಕರ ಬದುಕು ಸಹ ಉತ್ತಮಗೊಳ್ಳಬೇಕು. ಇವರು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಬೇಕು. ಆಗ ಮಾತ್ರ ನಿಮ್ಮ ಶ್ರಮ ಸಾರ್ಥಕಗೊಳ್ಳುತ್ತದೆ ಎಂದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ, ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಶ್ರಮಜೀವಿಗಳಾದ ಕಾರ್ಮಿಕರ ಸಂಕಷ್ಟಗಳಿಗೆ ಪೂರಕವಾಗಿ ಸ್ಪಂದಿಸುತ್ತಿವೆ. ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿವೆ. ಈ ಯೋಜನೆಗಳ ಕುರಿತು ಮಾಹಿತಿ ಹೊಂದುವ ಜೊತೆಗೆ ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿದ್ದರು. ಕೆಎಸ್‌ಸಿಡಬ್ಲ್ಯೂಸಿಯು ತಾಲೂಕು ಅಧ್ಯಕ್ಷ ಕೆ. ಚಂದ್ರಶೇಖರ್, ಗೌರವಾಧ್ಯಕ್ಷ ಜಿ. ಸುರೇಶ್‌ಕುಮಾರ್, ಶಿವಮೊಗ್ಗ ಶಾಖೆಯ ಗೌರವ ಸಲಹೆಗಾರ ಎಂ. ಭೂಪಾಲ್, ಶ್ರಮಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ಗೌರವ ಸಲಹೆಗಾರ ಬಿ.ಕೆ ಶ್ರೀನಾಥ್, ಉದ್ಯಮಿ ಎ. ಮಾಧು, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ರಾಜೇಶ್ವರಿ, ಸಂಜಯ್‌ಕುಮಾರ್, ಬಾಬು, ವಿಶ್ವನಾಥ್, ಸುಬ್ರಮಣಿ, ಲಕ್ಷ್ಮಣ್, ಸುಪ್ರಿಯ, ಎನ್. ಕುಮಾರ್, ಮನೋಹರ್, ಸುಂದರ್ ಬಾಬು, ಶಿವಣ್ಣಗೌಡ, ನಾಗೇಂದ್ರರೆಡ್ಡಿ, ಕೃಷ್ಣ, ವಿಜಯ್ ಸಿದ್ದಾರ್ಥ, ಕುಮಾರ್ ಹಾಗು ಶಿಕಾರಿಪುರ, ಶಿರಾಳಕೊಪ್ಪ, ಹೊಸನಗರ, ಆನವಟ್ಟಿ, ಸೊರಬ, ತಾಳಗೊಪ್ಪ, ಸಾಗರ, ತೀರ್ಥಹಳ್ಳಿ ಮತ್ತು ಹೊಳೆಹೊನ್ನೂರು ಹೋಬಳಿ ಶಾಖೆಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.    
    ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಕಾರ್ಮಿಕರ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕೆಎಸ್‌ಸಿಡಬ್ಲ್ಯೂಸಿಯು ತಾಲೂಕು ಕಾರ್ಯಾಧ್ಯಕ್ಷ ಅಭಿಲಾಷ್ ಕಾರ್ಯಕ್ರಮ ನಿರೂಪಿಸಿದರು.

ದೇಶದಲ್ಲಿ ಮರೆಯಾಗಿರುವ ಹಿಂದೂ ಧರ್ಮದ ಸಂಸ್ಕೃತಿ, ಪರಂಪರೆ ಅನಾವರಣ

ಹಿಂದೂಪರ ಸಂಘಟನೆಗಳ ಹೋರಾಟಕ್ಕೆ ಸಂದ ಫಲ : ಬಿ.ವೈ ರಾಘವೇಂದ್ರ

ವಿಶ್ವ ಹಿಂದೂ ಪರಿಷತ್ ವತಿಯಿಂದ ಭದ್ರಾವತಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ೩೮ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಧರ್ಮಶ್ರೀ ಸಭಾಭವನ ಮಹಡಿಗಳ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಬಿ.ವೈ ರಾಘವೇಂದ್ರ ಪಾಲ್ಗೊಂಡು ನೂತನ ದಂಪತಿಗೆ ಶುಭ ಹಾರೈಸಿದರು.

    ಭದ್ರಾವತಿ, ಮೇ. ೨೯: ದೇಶದ ಇತಿಹಾಸದಲ್ಲಿ ಮರೆಯಾಗಿರುವ ಹಿಂದೂ ಧರ್ಮದ ಹಲವಾರು ಸಂಸ್ಕೃತಿ, ಪರಂಪರೆ ಇದೀಗ ಅನಾವರಣಗೊಳ್ಳುತ್ತಿದ್ದು, ವಿಶ್ವ ಹಿಂದು ಪರಿಷತ್ ಸೇರಿದಂತೆ ಹಲವಾರು ಹಿಂದೂ ಪರ ಸಂಘಟನೆಗಳ ಹೋರಾಟಕ್ಕೆ ಇದೀಗ ಫಲ ಲಭಿಸುತ್ತಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು. 
ಅವರು ಭಾನುವಾರ ವಿಶ್ವ ಹಿಂದೂ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೩೮ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಧರ್ಮಶ್ರೀ ಸಭಾಭವನ ಮಹಡಿಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. 
ಹಿಂದಿನ ಇತಿಹಾಸ ಅರಿಯದವರು ಭವಿಷ್ಯದಲ್ಲಿ ಇತಿಹಾಸವನ್ನು ನಿರ್ಮಿಸಲಾರರು. ನಮ್ಮ ದೇಶದ, ನಾಡಿನ ಇತಿಹಾಸ, ಧರ್ಮ, ಸಂಸ್ಕೃತಿಯನ್ನು ನಾವುಗಳು ಅರಿತುಕೊಳ್ಳುವ ಜೊತೆಗೆ ನಮ್ಮ ಮುಂದಿನ ಪೀಳಿಗೆಯವರಿಗೆ ತಿಳಿಸಿಕೊಡಬೇಕು. ಈ ಕಾರ್ಯದಲ್ಲಿ ವಿಶ್ವ ಹಿಂದೂ ಪರಿಷತ್ ನಿರಂತರವಾಗಿ ತೊಡಗಿಸಿಕೊಂಡು ಬಂದಿರುವುದು ಶ್ಲಾಘನೀಯ. ವಿಶ್ವ ಹಿಂದೂ ಪರಿಷತ್ ಕಾರ್ಯ ಚಟುವಟಿಕೆಗಳಿಗೆ ಬೆನ್ನೆಲುಬಾಗಿರುವ ಹಿಂದೂ ಅಭಿಮಾನಿಗಳು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 
ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ದೇಶದಲ್ಲಿ ಮರೆಯಾಗಿರುವ ಹಿಂದೂ ಧರ್ಮದ ಹಲವಾರು ಸಂಸ್ಕೃತಿ, ಪರಂಪರೆ ಇದೀಗ ಅನಾವರಣಗೊಳ್ಳುತ್ತಿದ್ದು, ಜಮ್ಮು-ಕಾಶ್ಮೀರದ ೩೭೦ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಈ ದೇಶದಲ್ಲಿ ಹಿಂದೂ ಧರ್ಮದ ನೆಲೆಗಟ್ಟಿನಲ್ಲಿ ಬದುಕುತ್ತಿರುವ ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಧರ್ಮದವರು ಸಹ ಒಂದೇ ಎಂಬ ಭಾವನೆಯನ್ನು ಮೂಡಿಸಲಾಗಿದೆ. ಇದೀಗ ಜಮ್ಮು-ಕಾಶ್ಮೀರದಲ್ಲಿ ಮರೆಯಾಗಿದ್ದ ಹಿಂದೂ ಧರ್ಮದ ಹಲವಾರು ಸಂಸ್ಕೃತಿ, ಪರಂಪರೆ ಅನಾವರಣಗೊಳ್ಳುತ್ತಿವೆ. ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ನಮ್ಮ ಹಿರಿಯರ ಬಹಳ ವರ್ಷಗಳ ಕನಸು ನನಸಾಗುತ್ತಿದೆ. ಈ ರೀತಿಯ ಕಾರ್ಯಗಳಲ್ಲಿ ಕೈಜೋಡಿಸಿಕೊಂಡು ಬರುತ್ತಿರುವ ವಿಶ್ವ ಹಿಂದೂ ಪರಿಷತ್ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ಗುರುತಿಸಿಕೊಂಡಿದೆ ಎಂದರು. 
ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಸ್ವಂತ ನಿವೇಶನ ಹೊಂದುವ ಮೂಲಕ ಸಮುದಾಯ ಭವನ ನಿರ್ಮಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಸಮಾಜದ ಎಲ್ಲರ ಸಹಕಾರದೊಂದಿಗೆ ಭವನವನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸುವ ಕಾರ್ಯ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಭವನದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು. 
ಶಾಸಕ ಬಿ.ಕೆ ಸಂಗಮೇಶ್ವರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ವಿಶ್ವ ಹಿಂದು ಪರಿಷತ್ ಕ್ಷೇತ್ರಿಯ ಕಾರ್ಯದರ್ಶಿ ಕೇಶವ ಹೆಗ್ಡೆ, ಪ್ರಾಂತ್ಯ ಉಪಾಧ್ಯಕ್ಷ ಹಾ ರಾಮಪ್ಪ, ಜಿಲ್ಲಾಧ್ಯಕ್ಷ  ವಾಸುದೇವ ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಎಸ್. ಮುತ್ತುರಾಮಲಿಂಗಮ್, ಮಾತೃ ಮಂಡಳಿ ಅಧ್ಯಕ್ಷೆ ಯಶೋಧ ವೀರಭದ್ರಪ್ಪ, ಧರ್ಮಶ್ರೀ ಸಭಾ ಭವನ ಕಟ್ಟಡ ಸಮಿತಿ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ, ನಗರಸಭಾ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಪೌರಾಯುಕ್ತ ಮನುಕುಮಾರ್, ಸದಸ್ಯ ಆರ್. ಶ್ರೇಯಸ್, ದಾನಿ ವೇದಾವತಿ ಶಿವಮೂತಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಆರ್. ಪೂರ್ವಚಾರ್, ವೈದ್ಯ ಡಾ. ನರೇಂದ್ರ ಭಟ್, ಡಿ.ಆರ್ ಶಿವಕುಮಾರ್, ವೈ.ಎಸ್ ರಾಮಮೂರ್ತಿ, ಮಂಜುನಾಥ ಪವಾರ್, ಎನ್. ಎಸ್ ಮಹೇಶ್ವರಪ್ಪ, ಡಾ. ಬಿ.ಜಿ ಧನಂಜಯ, ಕೆ.ಆರ್ ಸತೀಶ್, ಮಂಜುನಾಥ್ ಕದಿರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು. ಒಂದು ಜೊತೆ ಸಾಮೂಹಿಕ ವಿವಾಹ ನಡೆಯಿತು. ವೇದಬ್ರಹ್ಮ ಕೃಷ್ಣಮೂರ್ತಿ ಸೋಮಯಾಜಿ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. 

ದೇಶದಲ್ಲಿ ಹಿಂದೂ ಧರ್ಮದ ಸಂಸ್ಕೃತಿ, ಪರಂಪರೆಯನ್ನು ಮರೆಮಾಚುವ ಷಡ್ಯಂತ್ರಗಳು ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ನಾವುಗಳು ಎಚ್ಚೆತ್ತುಕೊಂಡು ನಮ್ಮ ಪೂರ್ವಿಜರ ಹಿಂದಿನ ಇತಿಹಾಸ, ಸಂಸ್ಕೃತಿ, ಪರಂಪರೆ ಅರಿತುಕೊಳ್ಳುವ ಅಗತ್ಯವಿದೆ. ಈ ಮೂಲಕ ನಮ್ಮ ಹೋರಾಟ ಮುಂದುವರೆಸಬೇಕಾದ ಅನಿರ್ವಾಯತೆ ಇದೀಗ ನಿರ್ಮಾಣಗೊಂಡಿದೆ.
                                                                        - ಬಿ.ವೈ ರಾಘವೇಂದ್ರ, ಸಂಸದರು, ಶಿವಮೊಗ್ಗ

Saturday, May 28, 2022

ಸೈಲ್ ಸ್ವರ್ಣ ಜಯಂತಿ : ಕಥೆ ಬರೆಯುವ ಸ್ಪರ್ಧೆ

ಸೈಲ್ ಸ್ವರ್ಣ ಜಯಂತಿ ಲಾಂಛನ

     ಭದ್ರಾವತಿ, ಮೇ. ೨೮ : ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಭಾರತೀಯ ಉಕ್ಕು ಪ್ರಾಧಿಕಾರ) ೨೪ನೇ ಜನವರಿ, ೧೯೭೩ ರಂದು ಆರಂಭಗೊಂಡಿದ್ದು, ತನ್ನ ೫೦ನೇ ವರ್ಷಾಚರಣೆ ಸೈಲ್ ಸ್ವರ್ಣ ಜಯಂತಿ ಅಂಗವಾಗಿ 'ಕಳೆದ ಐದು ದಶಕಗಳಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಸೈಲ್‌ನ ಕೊಡುಗೆ'.ಎಂಬ ವಿಷಯ ಕುರಿತು ದ್ವಿಭಾಷಾ ಕಥೆ ಬರೆಯುವ ಸ್ಪರ್ಧೆಯನ್ನು ಆಯೋಜಿಸಿದೆ.
     ಈ  ಸ್ಪರ್ಧೆಯು ಸೃಜನಶೀಲತೆ ಮತ್ತು ಬರವಣಿಗೆ ಕೌಶಲ್ಯವನ್ನು ಪ್ರದರ್ಶಿಸಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಎಲ್ಲರೂ ಮುಕ್ತವಾಗಿ ಭಾಗವಹಿಸಲು ಅವಕಾಶವಿದ್ದು,  ಸ್ಪರ್ಧೆಯ ವಿವರಗಳು ಕಂಪನಿಯ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಮತ್ತು ಅದರ ವೆಬ್‌ಸೈಟ್ www.sail.co.in ನಲ್ಲಿ ಲಭ್ಯವಿದೆ. ಆ.೨೫ ಇಮೇಲ್ ಮೂಲಕ ಸ್ಪರ್ಧೆಗೆ ನಮೂದುಗಳನ್ನು ಸ್ವೀಕರಿಸುವ ಕೊನೆಯ ದಿನವಾಗಿದ್ದು,  ಆದರೆ ಕರಡು ಪ್ರತಿಗಳನ್ನು ಆ. ೩೧ರವರೆಗೆ ಸ್ವೀಕರಿಸಲಾಗುತ್ತದೆ. ಪ್ರತಿ ನಮೂದನ್ನು sailstory2022@gmail.com ಮತ್ತು ಪೋಸ್ಟ್ (ಕರಡು ಪ್ರತಿ) ಎರಡೂ ಇಮೇಲ್ ಮೂಲಕ ಸಲ್ಲಿಸಬೇಕು. ವಿಜೇತರನ್ನು ಸೈಲ್‌ನ ಮೇಲೆ ತಿಳಿಸಲಾದ ವೆಬ್‌ಸೈಟ್ ಮತ್ತು ಅದರ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಘೋಷಿಸಲಾಗುತ್ತದೆ ಮತ್ತು ಪ್ರಮಾಣಪತ್ರಗಳು ಮತ್ತು ಆಕರ್ಷಕ ಬಹುಮಾನಗಳೊಂದಿಗೆ ನೀಡಲಾಗುತ್ತದೆ.


ದುರಸ್ತಿ ಮಾಡುವಾಗ ಯಂತ್ರಕ್ಕೆ ಸಿಲುಕಿ ಕಾರ್ಮಿಕ ಸಾವು


ಭದ್ರಾವತಿ ಲೋಯರ್‌ಹುತ್ತಾ ಕೈಗಾರಿಕಾ ಪ್ರದೇಶದಲ್ಲಿರುವ ಆರ್‌ಎಎಸ್ ಪಾರ್‍ಮಾಸಿಟಿಕಲ್ ಕಾರ್ಖಾನೆ (ಆಹಾರ ತಯಾರಿಕಾ ಘಟಕ)ಯಲ್ಲಿ ದುರಸ್ತಿ ಮಾಡುವಾಗ ಕಾರ್ಮಿಕ ಸೆಂದಿಲ್‌ಕುಮಾರ್ ಯಂತ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
    ಭದ್ರಾವತಿ, ಮೇ. ೨೯: ನಗರದ ಲೋಯರ್‌ಹುತ್ತಾ ಕೈಗಾರಿಕಾ ಪ್ರದೇಶದಲ್ಲಿರುವ ಆರ್‌ಎಎಸ್ ಪಾರ್‍ಮಾಸಿಟಿಕಲ್ ಕಾರ್ಖಾನೆ (ಆಹಾರ ತಯಾರಿಕಾ ಘಟಕ)ಯಲ್ಲಿ ಕಾರ್ಮಿಕನೋರ್ವ ಯಂತ್ರಕ್ಕೆ ಸಿಲುಕಿ ಸಾವು ಕಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
    ತಾಲೂಕಿನ ಬಸವನಗುಡಿ ನಿವಾಸಿ ಸೆಂದಿಲ್‌ಕುಮಾರ್ ಮೃತಪಟ್ಟ ದುರ್ದೈವಿಯಾಗಿದ್ದು, ಕಾರ್ಖಾನೆಯಲ್ಲಿ ಕಚ್ಚಾ ವಸ್ತುಗಳನ್ನು ಮಿಕ್ಸರ್ ಮಾಡುವ ಯಂತ್ರವನ್ನು ದುರಸ್ತಿ ಮಾಡುವ ವೇಳೆ ಆಕಸ್ಮಿಕವಾಗಿ ಯಂತ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ.
    ರಾತ್ರಿ ಸುಮಾರು ೧೨.೩೦ರ ಸಮಯದಲ್ಲಿ ಈ ಘಟನೆ ನಡೆದಿದ್ದು, ಸೆಂದಿಲ್‌ಕುಮಾರ್‌ರವರ ದೇಹ ಯಂತ್ರಕ್ಕೆ ಸಿಲುಕಿ ಕಾಲು, ಕೈ ಹಾಗು ಹೊಟ್ಟೆ ಭಾಗ ಜಜ್ಜಿ ಹೋಗಿದೆ. ತಕ್ಷಣ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿದ್ದಾದರೂ ಯಾವುದೇ ಫಲಕಾರಿಯಾಗಲಿಲ್ಲ. ಈ ಸಂಬಂಧ ಸೆಂದಿಲ್‌ಕುಮಾರ್‌ರವರ ಪತ್ನಿ ಶಾಂತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕಾರ್ಖಾನೆಯ ವ್ಯವಸ್ಥಾಪಕರ ವಿರುದ್ಧ ದೂರು ದಾಖಲಿಸಿದ್ದಾರೆ.

ಶಾಲೆಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪ್ರತಿಯೊಬ್ಬರ ಪಾತ್ರ ಬಹಳ ಮುಖ್ಯ : ಎ.ಕೆ ನಾಗೇಂದ್ರಪ್ಪ

ಭದ್ರಾವತಿ ಕಾಗದನಗರದ ಪೇಪರ್‌ಟೌನ್ ಪ್ರೌಢಶಾಲೆಯಲ್ಲಿ ಶನಿವಾರ ೮ನೇ ತರಗತಿಗೆ ಪ್ರವೇಶಪಡೆದ ವಿದ್ಯಾರ್ಥಿಗಳಿಗೆ ಟೈ, ಬೆಲ್ಟ್ ಹಾಗು ಸಮವಸ್ತ್ರಗಳನ್ನು ವಿತರಿಸಲಾಯಿತು.
    ಭದ್ರಾವತಿ, ಮೇ. ೨೮: ಇತ್ತೀಚಿನ ವರ್ಷಗಳಲ್ಲಿ ಸಂಘ-ಸಂಸ್ಥೆಗಳು, ದಾನಿಗಳು ಹಾಗು ಹಳೇಯ ವಿದ್ಯಾರ್ಥಿಗಳು ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಕೈಜೋಡಿಸುತ್ತಿರುವ ಪರಿಣಾಮ ಶಾಲೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಹೇಳಿದರು.
    ಅವರು ಶನಿವಾರ ಪೇಪರ್‌ಟೌನ್  ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಲಾ ಮಕ್ಕಳಿಗೆ ಟೈ, ಬೆಲ್ಟ್ ಹಾಗು ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಪ್ರತಿಯೊಬ್ಬರಿಗೂ ಶಿಕ್ಷಣ ಅವಶ್ಯಕವಾಗಿದ್ದು, ಇದಕ್ಕೆ ಪೂರಕವಾಗಿ ಶಾಲೆಗಳು ಸಹ ಅಭಿವೃದ್ಧಿ ಹೊಂದಬೇಕಾಗಿದೆ. ಶಾಲೆಗಳಲ್ಲಿ ಶಿಕ್ಷಣ ಪಡೆದವರು ಅವುಗಳ ಅಭಿವೃದ್ಧಿ ಬಗ್ಗೆ ಚಿಂತಿಸುವ ಜೊತೆಗೆ ಸರ್ವಾಂಗೀಣ ಬೆಳವಣಿಗೆಯಲ್ಲಿ ಕೈಜೋಡಿಸಬೇಕು. ನಾವು ಶಿಕ್ಷಣ ಪಡೆದ ಶಾಲೆಯನ್ನು ಎಂದಿಗೂ ಮರೆಯಬಾರದು. ಸಾಮಾನ್ಯ ಜನರನ್ನು ಸಹ ಶಾಲೆಗಳ ಅಭಿವೃದ್ಧಿಯಲ್ಲಿ ಕೈಜೋಡಿಸುವಂತೆ ಪ್ರೇರೇಪಿಸಬೇಕು. ಪ್ರತಿಯೊಬ್ಬರು ತಮದೇ ಆದ ಕೊಡುಗೆಗಳನ್ನು ನೀಡಿದಾಗ ಮಾತ್ರ ಶಾಲೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಜೊತೆಗೆ ಭವಿಷ್ಯದ ಮಕ್ಕಳಿಗೂ ನೆರವಾಗಲಿವೆ ಎಂದರು.
    ಶಾಲೆಯ ದೈಹಿಕ ಅಪೇಕ್ಷಾ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಶಾಲೆ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಅವರು ಸಮಾಜದಲ್ಲಿ ಗುರುತಿಸಿಕೊಳ್ಳಲು ಕಾರಣವಾಗಿದೆ. ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಳೇಯ ವಿದ್ಯಾರ್ಥಿಗಳು ಶಾಲೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಶಾಲೆಯಲ್ಲಿ ಕಳೆದ ೩ ವರ್ಷಗಳಿಂದ ದಾನಿಗಳು ಹಾಗು ಹಳೇಯ ವಿದ್ಯಾರ್ಥಿಗಳ ನೆರವಿನೊಂದಿಗೆ ಮಕ್ಕಳಿಗೆ ಉಚಿತವಾಗಿ ಟೈ, ಬೆಲ್ಟ್ ಹಾಗು ಸಮವಸ್ತ್ರಗಳನ್ನು ವಿತರಿಸಲಾಗುತ್ತಿದೆ ಎಂದರು.
    ಶಾಲೆಯ  ಮುಖ್ಯೋಪಾಧ್ಯಾಯಿನಿ ಎ.ಆರ್ ಭಾರತಿ ಅಧ್ಯಕ್ಷತೆ ವಹಿಸಿದ್ದರು. ೧೯೮೨-೮೩ನೇ ಸಾಲಿನ ಹಳೇಯ ವಿದ್ಯಾರ್ಥಿಗಳು, ದಾನಿಗಳಾದ ಬಸವರಾಜ್, ಸತೀಶ್‌ಕುಮಾರ್, ಲಿಂಗೋಜಿರಾವ್ ಮತ್ತು ಈರಪ್ಪ ಹಾಗು ಸಿಆರ್‌ಪಿ ಸಿ. ಚನ್ನಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಸಹ ಶಿಕ್ಷಕರಾದ ಎಂ. ಕಾಂತರಾಜು ಸ್ವಾಗತಿಸಿದರು. ಸಿ. ಬಸವರಾಜ ವಂದಿಸಿದರು. ಶಾಲೆಯಲ್ಲಿ ೮ನೇ ತರಗತಿಗೆ ಪ್ರವೇಶಪಡೆದ ವಿದ್ಯಾರ್ಥಿಗಳಿಗೆ ಟೈ, ಬೆಲ್ಟ್ ಹಾಗು ಸಮವಸ್ತ್ರಗಳನ್ನು ವಿತರಿಸಲಾಯಿತು.