Friday, July 15, 2022

ವಿಐಎಸ್‌ಎಲ್ ಬಂಡವಾಳ ಹಿಂಪಡೆಯುವಿಕೆ ಪ್ರಕ್ರಿಯೆಯಿಂದ ಹೊರಗೆ : ಆಶಾದಾಯಕ ಬೆಳವಣಿಗೆ

 ೩೦೦ ಕೋ. ರು. ಬಂಡವಾಳ ತೊಡಗಿಸಲು ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ಮನವಿ


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕರ್ಖಾನೆ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ಮತ್ತು ಪದಾಧಿಕಾರಿಗಳು, ನಿರ್ದೇಶಕರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಭದ್ರಾವತಿ, ಜು. ೧೫: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಬಂಡವಾಳ ಹಿಂಪಡೆಯುವಿಕೆ ಪ್ರಕ್ರಿಯೆ ಮೂಲಕ ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದ್ದು, ಇದೀಗ ಕಾರ್ಖಾನೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ಪ್ರಸ್ತುತ ಕಾರ್ಖಾನೆಯ ಉತ್ಪಾದನೆಯಲ್ಲಿ ಬೆಳವಣಿಗೆ ಸಾಧಿಸಲು ಉಕ್ಕು ಪ್ರಾಧಿಕಾರ ಕೇವಲ ೩೦೦ ಕೋ.ರು. ಬಂಡವಾಳ ತೊಡಗಿಸಲು ಮುಂದಾಗಬೇಕೆಂದು ಕಾರ್ಖಾನೆಯ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್ ಮನವಿ ಮಾಡಿದರು.
      ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೀಗ ಕಾರ್ಖಾನೆ ಆಶಾದಾಯಕ ದಿನಗಳನ್ನು ಎದುರು ನೋಡುವಂತಾಗಿದೆ. ಕೇಂದ್ರ ಸರ್ಕಾರ ೨೦೧೬ರಲ್ಲಿ ಕಾರ್ಖಾನೆಯನ್ನು ಬಂಡವಾಳ ಹಿಂಪಡೆಯುವಿಕೆ ಪ್ರಕ್ರಿಯೆ ಮೂಲಕ ಖಾಸಗೀಕರಣಗೊಳಿಸುವ ಪ್ರಯತ್ನಕ್ಕೆ ಮುಂದಾಯಿತು. ಆದರೆ ಯಾವುದೇ ಖಾಸಗಿ ಮಾಲೀಕರು ಕಾರ್ಖಾನೆಯನ್ನು ಕೊಂಡುಕೊಳ್ಳಲು ಮುಂದೆ ಬರಲಿಲ್ಲ. ಸರ್ಕಾರದ ಪ್ರಯತ್ನ ವಿಫಲವಾಯಿತು. ಇದೀಗ ಕಾರ್ಖಾನೆಯನ್ನು ಬಂಡವಾಳ ಹಿಂಪಡೆಯುವಿಕೆ ಪ್ರಕ್ರಿಯೆಯಿಂದ ಹೊರಗಿಡಲು ಸಂಬಂಧಪಟ್ಟ ಪ್ರಾಧಿಕಾರ ಸೂಚಿಸಿದ್ದು, ಇದು ಕಾರ್ಖಾನೆಯ ಆಶಾದಾಯಕ ಬೆಳೆವಣಿಗೆಯಾಗಿದೆ. ನಮ್ಮೆಲ್ಲರ ಹೋರಾಟ ಯಶಸ್ವಿಯಾದಂತಾಗಿದೆ ಎಂದರು.
      ಪ್ರಸ್ತುತ ಕಾರ್ಖಾನೆಯನ್ನು ಯಾವ ರೀತಿ ಅಭಿವೃದ್ಧಿಪಡಿಸಬೇಕೆಂಬುದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿದೆ. ಕೇಂದ್ರ ಸರ್ಕಾರ ೨೦೧೬ರಲ್ಲಿ ಬಂಡವಾಳ ಹಿಂಪಡೆಯುವಿಕೆ ಪ್ರಕ್ರಿಯೆ ಮೂಲಕ ಖಾಸಗೀಕರಣಗೊಳಿಸುವ ಪ್ರಯತ್ನಕ್ಕೆ ಮುಂದಾದ ಹಿನ್ನಲೆಯಲ್ಲಿ ಪ್ರತಿ ವರ್ಷ ೧೫೦ ಕೋ. ರು. ನಷ್ಟ ಅನುಭವಿಸುವಂತಾಯಿತು. ನಂತರದ ದಿನಗಳಲ್ಲಿ ಕಾರ್ಖಾನೆಯಲ್ಲಿ ಹೆಚ್ಚಿನ ಶ್ರಮವಹಿಸಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಲಾಭದ ದಾರಿಯಲ್ಲಿ ಸಾಗುತ್ತಿದ್ದು, ನಷ್ಟದ ಪ್ರಮಾಣ ೩೦ ರಿಂದ ೪೫ ಕೋ.ರು. ಗಳಿಗೆ ಕಡಿಮೆಗೊಳಿಸಲಾಗಿದೆ. ನಷ್ಟದಲ್ಲೂ ಲಾಭ ಕಂಡುಕೊಳ್ಳಲಾಗುತ್ತಿದೆ. ಉಕ್ಕು ಪ್ರಾಧಿಕಾರ ೨೦೨೧-೨೨ನೇ ಸಾಲಿನಲ್ಲಿ ೧೨,೦೧೫ ಕೋ. ರು. ಲಾಭ ಗಳಿಸಿದ್ದು, ಮುಂದಿನ ದಿನಗಳಲ್ಲಿ ದೆಶದಲ್ಲಿ ಉಕ್ಕು ವಲಯವನ್ನು ಮತ್ತಷ್ಟು ವಿಸ್ತರಿಸಬೇಕೆಂಬ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದಕ್ಕೆ ಪೂರಕವೆಂಬಂತೆ ಉಕ್ಕು ಪ್ರಾಧಿಕಾರ ೧.೫ ಲಕ್ಷ ಕೋಟಿ ಬಂಡವಾಳ ತೊಡಗಿಸಲು ಮುಂದಾಗಿದೆ. ಈ ಬಂಡವಾಳದಲ್ಲಿ ವಿಐಎಸ್‌ಎಲ್ ಕಾರ್ಖಾನೆಗೆ ಕೇವಲ ೩೦೦ ಕೋ.ರು ತೊಡಗಿಸಿದರೆ ಸಾಕು ಕಾರ್ಖಾನೆ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ. ಈಗಾಗಲೇ ಈ ಸಂಬಂಧ ರೂಪುರೇಷೆಗಳನ್ನು ಸಿದ್ದಪಡಿಸಲಾಗಿದೆ. ಈ ಕುರಿತು ಸಂಸದ ಬಿ.ವೈ ರಾಘವೇಂದ್ರ ಅವರೊಂದಿಗೆ ಚರ್ಚಿಸಲಾಗಿದೆ. ರಾಜ್ಯದ ಎಲ್ಲಾ ಸಂಸದರು, ಸಚಿವರು, ಕೇಂದ್ರ ಉಕ್ಕು ಸಚಿವರ ಗಮನಕ್ಕೆ ತರಲಾಗಿದೆ ಎಂದರು.
      ರಾಜ್ಯ ಸರ್ಕಾರ ೨೦೧೯ರಲ್ಲಿ ಕಾರ್ಖಾನೆಗೆ ಬಳ್ಳಾರಿ ಜಿಲ್ಲೆ ರಮಣದುರ್ಗದಲ್ಲಿ ೧೫೦ ಎಕರೆ ಕಬ್ಬಿಣದ ಅದಿರಿನ ಗಣಿ ಮಂಜೂರಾತಿ ಮಾಡಿದ್ದು, ಕೇಂದ್ರ ಸರ್ಕಾರ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು ಪ್ರಯತ್ನಿಸಿದ ಹಿನ್ನಲೆಯಲ್ಲಿ ಗಣಿ ಮಂಜೂರಾತಿ ಪ್ರಕ್ರಿಯೆಯಲ್ಲಿ ಸಮಸ್ಯೆ ಎದುರಾಯಿತು. ಈಗಾಗಲೆ ಈ ಅದಿರು ಗಣಿ ಅಭಿವೃದ್ಧಿಗೆ ೫ ಕೋ.ರು. ಬಂಡವಾಳವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಈ ಅನುದಾನದಲ್ಲಿ ೪ ಕೋ. ರು. ಬಳಸಿಕೊಂಡು ಎಲ್ಲಾ ಇಲಾಖೆಗಳಿಂದ ಅನುಮತಿ ಪಡೆದು ಮುಂದಿನ ಎರಡೂವರೆ ವರ್ಷದಲ್ಲಿ ಅದಿರು ಉತ್ಪಾದನೆ ಕೈಗೊಳ್ಳುವ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ. ಅದಿರು ಕಾರ್ಖಾನೆಗೆ ಲಭ್ಯವಾದ ನಂತರ ಅನುಸರಿಸಬೇಕಾದ ಉತ್ಪಾದನಾ ಕ್ರಮಗಳ ಕುರಿತು ಈಗಾಗಲೇ ರೂಪುರೇಷೆ ಸಹ ಸಿದ್ದಪಡಿಸಲಾಗಿದೆ. ಈ ಎಲ್ಲಾ ಪ್ರಕ್ರಿಯೆಗಳು ಕಾರ್ಖಾನೆ ಆಶಾದಾಯಕ ದಿನಗಳನ್ನು ಎದುರು ನೋಡುವ ಬೆಳವಣಿಗೆಯನ್ನು ಉಂಟುಮಾಡಿವೆ ಎಂದು ಸಂತಸ ವ್ಯಕ್ತಪಡಿಸಿದರು.
      ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಯು.ಎ ಬಸಂತ್‌ಕುಮಾರ್, ಕಾರ್ಯದರ್ಶಿ ಕೆ.ಆರ್ ಮನು, ಖಜಾಂಚಿ ಎಸ್. ಮೋಹನ್, ನಿರ್ದೇಶಕರಾದ ಕುಮಾರಸ್ವಾಮಿ, ಯೋಗೇಶ್, ಸುನಿಲ್‌ಕುಮಾರ್, ರಾಜು, ಮಂಜುನಾಥ್, ಮನೋಹರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





Thursday, July 14, 2022

ಹೊಸಸೇತುವೆ ಸಂಪೂರ್ಣ ಮುಳುಗಡೆ : ಸಂಚಾರ ಸ್ಥಗಿತ


ಭದ್ರಾ ಜಲಾಶಯದಿಂದ ಗುರುವಾರ ಮಧ್ಯಾಹ್ನ ನದಿಗೆ ನೀರು ಬಿಟ್ಟ ಹಿನ್ನಲೆಯಲ್ಲಿ ಭದ್ರಾವತಿ ನಗರದ ಹೃದಯ ಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಹೊಸಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳಿಸಲಾಗಿದೆ.
    ಭದ್ರಾವತಿ, ಜು. ೧೪: ಭದ್ರಾ ಜಲಾಶಯದಿಂದ ಗುರುವಾರ ಮಧ್ಯಾಹ್ನ ನದಿಗೆ ನೀರು ಬಿಟ್ಟ ಹಿನ್ನಲೆಯಲ್ಲಿ ನಗರದ ಹೃದಯ ಭಾಗದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಹೊಸಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದ್ದು, ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳಿಸಲಾಗಿದೆ.
      ಜಲಾಶಯದ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಈ ಬಾರಿ ಜಲಾಶಯ ಬಹುಬೇಗನೆ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ನೀರು ನಗರ ಪ್ರವೇಶಿಸುತ್ತಿದ್ದಂತೆ ಹಂತ ಹಂತವಾಗಿ ಏರಿಕೆ ಕಂಡು ಬರುತ್ತಿದೆ. ರಾತ್ರಿ ಸುಮಾರು ೮.೩೦ರ ವೇಳೆಗೆ ಹೊಸಸೇತುವೆ ಸಂಪೂರ್ಣವಾಗಿ ಮುಳುಗಡೆಗೊಂಡಿದ್ದು, ತಕ್ಷಣ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳಿಸಿ ಎರಡು ಕಡೆ ಬ್ಯಾರಿಗೇಡ್‌ಗಳನ್ನು ಅಳವಡಿಸಲಾಗಿದೆ. ಎರಡು ಬದಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗಿದೆ.
      ಹೊಸಸೇತುವೆ ಮುಳುಗಡೆಗೊಳ್ಳುವ ಒಂದು ತಾಸು ಮೊದಲೇ ಹಳೇಸೇತುವೆ ಸಮೀಪದಲ್ಲಿರುವ ಸಂಗಮೇಶ್ವರ ದೇವಸ್ಥಾನ ಸಂಪೂರ್ಣವಾಗಿ ಮುಳುಗಡೆಗೊಂಡಿದೆ.
      ಎಲ್ಲಾ ವಾಹನಗಳು ಹಳೇಸೇತುವೆ ಸಂಚರಿಸುತ್ತಿದ್ದು, ಇದರಿಂದಾಗಿ ವಾಹನ ದಟ್ಟಣೆ ಅಧಿಕವಾಗಿದೆ. ನೀರನ ಮಟ್ಟ ಇನ್ನೂ ಏರಿಕೆಯಾಗುವ ಸಾಧ್ಯತೆ ಕಂಡು ಬರುತ್ತಿದ್ದು, ಇದರಿಂದಾಗಿ ತಗ್ಗು ಪ್ರದೇಶದ ನಿವಾಸಿಗಳು ಆತಂಕಕ್ಕೆ ಒಳಗಾಗುವಂತಾಗಿದೆ.

ನಿರಂತರ ಮಳೆ ಹಿನ್ನಲೆಯಲ್ಲಿ ಶಾಸಕರಿಂದ ತುರ್ತು ಸಭೆ : ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಸೂಚನೆ

ಭದ್ರಾವತಿ ಕ್ಷೇತ್ರದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಗುರುವಾರ ಸರ್ಕಾರದ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳ ತುರ್ತು ಸಭೆ ನಡೆಸಿದರು.
    ಭದ್ರಾವತಿ, ಜು. ೧೪: ಕ್ಷೇತ್ರದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಗುರುವಾರ ಸರ್ಕಾರದ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳ ತುರ್ತು ಸಭೆ ನಡೆಸಿದರು.
      ಕಂದಾಯ ಇಲಾಖೆ ಅಧಿಕಾರಿಗಳು ತುರ್ತು ಸಂದರ್ಭದಲ್ಲಿ ತಕ್ಷಣ ಸ್ಪಂದಿಸುವ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತಕ್ಷಣ ಭೇಟಿ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದರು.
      ಮೆಸ್ಕಾಂ ಇಲಾಖೆಯವರು ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸುವ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು. ಲೋಕೋಪಯೋಗಿ ಇಲಾಖೆಯವರು ಮಳೆಯಿಂದ ಹಾನಿಯಾದ ರಸ್ತೆಗಳನ್ನು ತಕ್ಷಣ ದುರಸ್ತಿಪಡಿಸುವ ಮೂಲಕ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಇದೆ ರೀತಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಂಗನವಾಡಿ, ಶಾಲಾ ಕಟ್ಟಡಗಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಮಕ್ಕಳಿಗೆ ಯಾವುದೇ ರೀತಿ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದರು. ಉಳಿದಂತೆ ನೀರಾವರಿ, ಕೃಷಿ ಇಲಾಖೆ, ತೋಟಗಾರಿಕೆ ಹಾಗು ನಗರಸಭೆ ಅಧಿಕಾರಿಗಳು ಸಹ ಜಾಗೃತರಾಗಿರುವಂತೆ ಎಚ್ಚರಿಸಿದರು.
      ಸಭೆಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನುಕುಮಾರ್, ಸೂಡಾ ಸದಸ್ಯ ವಿ. ಕದಿರೇಶ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ನಾಗೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಕೃಷಿ ಅಧಿಕಾರಿ ಶಶಿಧರ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕಾಂತರಾಜ್, ಪೊಲೀಸ್ ನಗರ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ, ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭಷ್ಟಾಚಾರ ನಿರ್ಮೂಲನೆಗೆ ಪೊರಕೆ ಹಿಡಿದು ಸ್ವಚ್ಛತೆಗೆ ಮುಂದಾಗಿರುವವರ ಕೈ ಬಲಪಡಿಸಿ : ವಿಜಯಶರ್ಮ

ಭದ್ರಾವತಿ ರಂಗಪ್ಪ ವೃತ್ತದ ಸಮೀಪದಲ್ಲಿರುವ ಮಾರುತಿ ಮೆಡಿಕಲ್ಸ್ ಬಿಲ್ಡಿಂಗ್‌ನಲ್ಲಿ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಕಾರ್ಯಾಲಯ ಉದ್ಘಾಟನೆ ಗುರುವಾರ ನಡೆಯಿತು.  
    ಭದ್ರಾವತಿ, ಜು. ೧೪: ರಾಜ್ಯದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಪೊರಕೆ ಹಿಡಿದು ಸ್ವಚ್ಛತೆ ಮುಂದಾಗಿರುವವರ ಕೈ ಬಲಪಡಿಸಬೇಕೆಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ವಿಜಯಶರ್ಮ ಮನವಿ ಮಾಡಿದರು.
      ಅವರು ಗುರುವಾರ ನಗರದ ರಂಗಪ್ಪ ವೃತ್ತದ ಸಮೀಪದಲ್ಲಿರುವ ಮಾರುತಿ ಮೆಡಿಕಲ್ಸ್ ಬಿಲ್ಡಿಂಗ್‌ನಲ್ಲಿ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.
      ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಅದರಲ್ಲೂ ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಭ್ರಷ್ಟಾಚಾರದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಸೇವಾ ಮನೋಭಾವ ಹೊಂದಿರುವ ಮಾರುತಿ ಮೆಡಿಕಲ್ಸ್ ಆನಂದ್‌ರವರು ಪಕ್ಷಕ್ಕೆ ಸೇರ್ಪಡೆಗೊಂಡು ಇಲ್ಲಿನ ರಾಜಕಾರಣಕ್ಕೆ ಹೊಸ ತಿರುವು ನೀಡಲು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
      ಶಿವಮೊಗ್ಗ-ಚಿಕ್ಕಮಗಳೂರು-ಹಾಸನ ಜಿಲ್ಲಾ ವಲಯ ಉಸ್ತುವಾರಿ ದಿವಾಕರ ಮಾತನಾಡಿ, ಈ ಕ್ಷೇತ್ರದಲ್ಲಿನ ರಾಜಕಾರಣವನ್ನು ಬಹಳ ವರ್ಷಗಳಿಂದ ಗಮನಿಸಿದ್ದೇನೆ. ಒಂದು ಬಾರಿ ಪಕ್ಷದ ಅಭ್ಯರ್ಥಿಗೆ ಅವಕಾಶ ಕೊಡಿ. ನಾವು ಈ ಕ್ಷೇತ್ರದ ಸಂಪೂರ್ಣ ಚಿತ್ರಣ ಬದಲಾಯಿಸುತ್ತೇವೆ. ಎರಡು ಕಾರ್ಖಾನೆಗಳನ್ನು ಅಭಿವೃದ್ಧಿಪಡಿಸುತ್ತೇವೆ. ಭ್ರಷ್ಟಾಚಾರ ಮುಕ್ತ ಕ್ಷೇತ್ರವನ್ನಾಗಿಸುತ್ತೇವೆ ಎಂದರು.
      ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಮಾತನಾಡಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಶಾಸಕರ ಕಛೇರಿಯನ್ನೂ ಸಹ ತೆರೆಯುವ ವಿಶ್ವಾಸ ಹೊಂದಿದ್ದೇವೆ.
      ಪಕ್ಷದ ಮುಖಂಡ, ಉದ್ಯಮಿ ಮೆಡಿಕಲ್ ಆನಂದ್ ಮಾತನಾಡಿ, ಒಂದು ಒಳ್ಳೆಯ ಮಾರ್ಗದಲ್ಲಿ ನಡೆಯಬೇಕೆಂಬ ಆಶಯ ಹೊಂದಿದ್ದೇನೆ. ಇದಕ್ಕೆ ಪೂರಕವಾದ ಪಕ್ಷ ಆಮ್ ಆದ್ಮಿ ಪಾರ್ಟಿಯಾಗಿದ್ದು, ಪಕ್ಷದ ತತ್ವ, ಸಿದ್ದಾಂತಗಳಿಗೆ ಬದ್ಧನಾಗಿದ್ದೇನೆ ಎಂದರು.
      ಜಿಲ್ಲಾ ವಲಯ ಉಸ್ತುವಾರಿ ಗೋಪಾಲ, ಜಿಲ್ಲಾ ಮುಖಂಡ ಎಚ್. ರವಿಕುಮಾರ್, ತಾಲೂಕು ಅಧ್ಯಕ್ಷ ಬಿ.ಕೆ ರಮೇಶ್, ತಾಲೂಕು ಪ್ರಮುಖರಾದ ಪರಮೇಶ್ವರಚಾರ್, ಎನ್.ಪಿ ಜೋಸೆಫ್, ಎ. ಮಸ್ತಾನ್, ಅಬ್ದುಲ್ ಖದೀರ್, ಜಾವಿದ್, ರೇಷ್ಮಬಾನು, ಜೋಸೆಫ್, ನಾಗಮಣಿ, ಜ್ಯೋತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿ ರಂಗಪ್ಪ ವೃತ್ತದ ಸಮೀಪದಲ್ಲಿರುವ ಮಾರುತಿ ಮೆಡಿಕಲ್ಸ್ ಬಿಲ್ಡಿಂಗ್‌ನಲ್ಲಿ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಕಾರ್ಯಾಲಯ ಉದ್ಘಾಟನೆ ಸಮಾರಂಭದಲ್ಲಿ ಪಕ್ಷದ ಪ್ರಮುಖರು ಸಂಭ್ರಮಿಸಿದರು.  



ಧಾನ್ಯಕ್ಕೆ ಶೇ.5 ಜಿಎಸ್ ಟಿ ವಿರೋಧಿಸಿ 2 ದಿನ ಹೋರಾಟ

 


ಭದ್ರಾವತಿ, ಜು. ೧೪: ಕೇಂದ್ರ ಸರ್ಕಾರ ಧಾನ್ಯಕ್ಕೆ ಶೇ.೫ರಷ್ಟು ಜಿಎಸ್‌ಟಿ ವಿಧಿಸಿರುವುದು ಸರಿಯಲ್ಲ. ತಕ್ಷಣ ಹಿಂಪಡೆದುಕೊಳ್ಳುವಂತೆ ಆಗ್ರಹಿಸಿ ದೇಶಾದ್ಯಂತ ಜು.೧೫ ಮತ್ತು ೧೬ ಎರಡು ದಿನ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ರೈಸ್‌ಮಿಲ್ ಮಾಲೀಕರ ಸಂಘ ಹಾಗು ದವಸ ಧಾನ್ಯ, ಅಕ್ಕಿ ವರ್ತಕರ ಸಂಘದ ಪ್ರಮುಖರು ತಿಳಿಸಿದರು.

      ಗುರುವಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶೇ.೫ರಷ್ಟು ಜಿಎಸ್‌ಟಿ ಪರಿಣಾಮ ರೈತರು, ವರ್ತಕರು ಮತ್ತು ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಈ ಹಿಂದೆ ಧಾನ್ಯಕ್ಕೆ ಯಾವುದೇ ಜಿಎಸ್‌ಟಿ ವಿಧಿಸದ ಕಾರಣ ಅಕ್ಕಿ, ಬೇಳೆಕಾಳು ಸೇರಿದಂತೆ ಜನಸಾಮಾನ್ಯರಿಗೆ ಅತಿ ಅಗತ್ಯವಿರುವ ಧ್ಯಾನ ಕಡಿಮೆ ಬೆಲೆಯಲ್ಲಿ ತಲುಪಿಸಲು ಸಾಧ್ಯವಾಗುತ್ತಿತ್ತು. ಇದೀಗ ಜಿಎಸ್‌ಟಿ ವಿಧಿಸಿರುವುದರಿಂದ ಧಾನ್ಯ ಮಾರಾಟ ಉದ್ಯಮಗಳು, ಧಾನ್ಯ ಉತ್ಪಾದಿಸುವ ರೈತರು ಹಾಗು ಧಾನ್ಯ ಕೊಂಡುಕೊಳ್ಳುವ ಜನ ಸಾಮಾನ್ಯರು ಸಂಕಷ್ಟ ಎದುರಿಸುವಂತಾಗಿದೆ ಎಂದರು.

       ಜಿಎಸ್‌ಟಿ ಪರಿಣಾಮ ಈಗಾಗಲೇ ರೈಸ್‌ಮಿಲ್ ಮಾಲೀಕರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದು, ಬಹಳಷ್ಟು ರೈಸ್ ಮಿಲ್‌ಗಳು ಮುಚ್ಚಿ ಹೋಗಿವೆ. ಇದೀಗ ರೈತರು, ಜನಸಾಮಾನ್ಯರು ಸಹ ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಈ ಹಿನ್ನಲೆಯಲ್ಲಿ ವರ್ತಕರು ಹಾಗು ಮಿಲ್ ಮಾಲೀಕರು ಸ್ವಯಂ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
      ಪ್ರಮುಖರಾದ ರೈಸ್ ಮಾಲೀಕರ ಸಂಘದ ಅಧ್ಯಕ್ಷ ಡಾ. ಎನ್‌ಟಿಸಿ ನಾಗೇಶ್, ಗಿರಿರಾಜ್, ಹರೀಶ್‌ಬಾಬು, ಅಭಯ್‌ರಾಜ್, ಮಹಮದ್ ಖಲೀಲ್, ದಿಲೀಪ್‌ಕುಮಾರ್ ಜೈನ್, ಸಂದೇಶ್ ಮೆಹ್ತಾ, ಭರತ್‌ಕುಮಾರ್, ಶಂಕರ್, ಸತ್ಯನಾರಾಯಣ್, ಧನಂಜಯ ಮತ್ತು ರಂಗನಾಥ್ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆ

 


ಭದ್ರಾವತಿ, ಜು.14: ತಾಲೂಕಿನ ಜೀವನದಿ ಭದ್ರಾ ನದಿ ಜಲಾಶಯ 41ನೇ ಬಾರಿಗೆ ಪೂರ್ಣಗೊಂಡಿದ್ದು, ಗುರುವಾರ ಮಧ್ಯಾಹ್ನ 12 ಗಂಟೆಗೆ ಜಲಾಶಯದಿಂದ ನೀರು ನದಿಗೆ ಬಿಡಲಾಯಿತು.

       4 ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ ನೀರು ಬಿಡಲಾಯಿತು. ಜಲಾಶಯದಿಂದ ಹಾಲ್ನೊರೆಯಂತೆ ನೀರು ಧುಮುಕುವ ದೃಶ್ಯ ಕಣ್ತುಂಬಿಕೊಳ್ಳಲು ತಾಲೂಕಿನ ವಿವಿಧತೆಗಳಿಂದ ಜನರು ಆಗಮಿಸಿದ್ದರು. ಕೆಲವರು ವಿಡಿಯೋ ಚಿತ್ರೀಕರಣ ಮಾಡಿಕೊಂಡರು, ಇನ್ನೂ ಕೆಲವರು ಸೆಲ್ಫಿ ತೆಗೆದುಕೊಳ್ಳುವ ಮೂಲಕ ಸಂಭ್ರಮಿಸಿದರು.


Wednesday, July 13, 2022

ಭದ್ರಾ ಜಲಾಶಯದಿಂದ ಬೆಳಗ್ಗೆ 11 ಗಂಟೆಯೊಳಗೆ ನೀರು ಬಿಡುಗಡೆ

ಭದ್ರಾವತಿ, ಜು.14: ತಾಲೂಕಿನ ಜೀವನದಿ ಭದ್ರಾ ನದಿ ಜಲಾಶಯ 41ನೇ ಬಾರಿಗೆ ಪೂರ್ಣಗೊಂಡಿದ್ದು, ಗುರುವಾರ ಬೆಳಿಗ್ಗೆ 11 ಗಂಟೆಯೊಳಗೆ ಜಲಾಶಯದಿಂದ ನೀರು ನದಿಗೆ ಬಿಡುಗಡೆಯಾಗಲಿದೆ.
       ಜಲಾಶಯದ ಗರಿಷ್ಠ ಮಟ್ಟ 186 ಅಡಿಯಾಗಿದ್ದು, ಗುರುವಾರ ಬೆಳಗ್ಗೆ 6 ಗಂಟೆ ಮಾಹಿತಿಯಂತೆ 183.2 ಅಡಿ ತಲುಪಿದೆ. ಈ ಹಿನ್ನೆಲೆಯಲ್ಲಿ 4 ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ ನೀರು ಬಿಡಲಾಗುವುದು. ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹಾಗೂ ಜಾನುವಾರುಗಳನ್ನು ನದಿ ತೀರದ ಪ್ರದೇಶಗಳಿಗೆ ಬಿಡದಂತೆ ಮತ್ತು ಸಾರ್ವಜನಿಕರು ತಿರುಗಾಡದಂತೆ ಮುನ್ನೆಚ್ಚರಿಕೆ ವಹಿಸುವಂತೆ ತಹಸೀಲ್ದಾರ್  ಆರ್ ಪ್ರದೀಪ್ ತಿಳಿಸಿದ್ದಾರೆ. 
     ಮಲೆನಾಡಿನ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಭದ್ರಾ ಜಲಾಶಯ 1962ರಲ್ಲಿ ನಿರ್ಮಾಣಗೊಂಡಿದ್ದು, ಇರುವವರೆಗೆ 41 ಬಾರಿ ಪೂರ್ಣಗೊಂಡಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಬಳ್ಳಾರಿ ಮತ್ತು ಗದಗ ಸೇರಿದಂತೆ ಒಟ್ಟು 8 ಜಿಲ್ಲೆಗಳಿಗೆ ನೀರಾವರಿ ಸೌಲಭ್ಯಗಳನ್ನು ಹೊಂದಿದೆ. ಬೃಹತ್ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಭದ್ರ ನದಿ ರೈತರು, ಕಾರ್ಮಿಕರ ಜೀವನದಿಯಾಗಿದೆ. ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದಾಗ  ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಪ್ರವಾಸಿಗರು ಆಗಮಿಸಿ ಇದರ ಸೌಂದರ್ಯ ಕಣ್ತುಂಬಿ ಕೊಳ್ಳುತ್ತಿದ್ದಾರೆ.