Tuesday, December 27, 2022

ಶೀಘ್ರದಲ್ಲಿಯೇ ಪ್ರತಿಷ್ಠಾಪನೆಗೊಳ್ಳಲಿದೆ ಅಂಬೇಡ್ಕರ್ ವೃತ್ತದಲ್ಲಿ ನೂತನ ೧೨ ಅಡಿ ಎತ್ತರದ ಕಂಚಿನ ಪ್ರತಿಮೆ

ಮಹಾರಾಷ್ಟ್ರದ ಗಾರ್ನೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವತಿಯಿಂದ ೨೮ ಲಕ್ಷ ರು. ವೆಚ್ಚದಲ್ಲಿ ಪ್ರತಿಮೆ ನಿರ್ಮಾಣ

ಭದ್ರಾವತಿಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಭಾರತರತ್ನ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ನೂತನ ೧೨ ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪನೆಗೆ ಸುಮಾರು ೨ ವರ್ಷಗಳ ಹಿಂದೆಯೇ ವೇದಿಕೆ ನಿರ್ಮಿಸಿರುವುದು.
    ಭದ್ರಾವತಿ, ಡಿ. ೨೭: ದಲಿತ ಸಂಘಟನೆಗಳ ಹೋರಾಟದ ಫಲವಾಗಿ ಕೊನೆಗೂ ನಗರದ ಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಭಾರತರತ್ನ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ನೂತನ ೧೨ ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪನೆಗೊಳ್ಳಲಿದೆ.
    ಅಂಡರ್ ಬ್ರಿಡ್ಜ್ ಬಳಿ ಅಂಬೇಡ್ಕರ್‌ರವರ ಪ್ರತಿಮೆ ಪ್ರತಿಸ್ಥಾಪಿಸಬೇಕೆಂದು ಆಗ್ರಹಿಸಿ ದಲಿತಪರ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸಿದ ಹಿನ್ನಲೆಯಲ್ಲಿ ಈ ಹಿಂದೆ ಬಿ.ಎಸ್ ಯಡಿಯೂರಪ್ಪನವರು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪ್ರತಿಮೆ ಅನಾವರಣಗೊಳಿಸಲಾಗಿತ್ತು. ಆದರೆ ಈ ಪ್ರತಿಮೆ ಕುಬ್ಜ ರೀತಿಯಲ್ಲಿದ್ದು, ಅಂಬೇಡ್ಕರ್‌ರವರಿಗೆ ಅವಮಾನ ಮಾಡುವ ರೀತಿಯಲ್ಲಿ ಕಂಡು ಬರುತ್ತಿದೆ. ಈ ಪ್ರತಿಮೆಯನ್ನು ಬದಲಾಯಿಸಿ ಅಂಬೇಡ್ಕರ್‌ರವರನ್ನು ಹೋಲುವ ಹಾಗು ಸುಂದರವಾಗಿ ಕಾಣುವ ೧೨ ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಿಸಬೇಕೆಂಬ ಹೋರಾಟ ಆರಂಭಗೊಂಡಿತು.
    ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಈ ಹಿಂದಿನ ಪೌರಾಯುಕ್ತರಾಗಿದ್ದ ಮನೋಹರ್‌ರವರು ನಗರಸಭೆ ವತಿಯಿಂದ ಪ್ರತಿಮೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಪ್ರತಿಷ್ಠಾಪನೆಗಾಗಿ ಅಂಬೇಡ್ಕರ್ ವೃತ್ತವನ್ನು ನವೀಕರಣಗೊಳಿಸಿ ವೇದಿಕೆ ಸಹ ನಿರ್ಮಿಸಿಕೊಟ್ಟಿದ್ದರು. ಆದರೆ ಪ್ರತಿಮೆ ಮಾತ್ರ ಸುಮಾರು ೨ ವರ್ಷ ಕಳೆದರೂ ಸಹ ಪ್ರತಿಸ್ಥಾಪನೆಗೊಂಡಿಲ್ಲ. ಇದೀಗ ಪ್ರತಿಷ್ಠಾಪನೆಗೆ ಸಿದ್ದತೆಗಳು ನಡೆಯುತ್ತಿದ್ದು, ಮಹಾರಾಷ್ಟ್ರದ ಗಾರ್ನೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ೨೮ ಲಕ್ಷ ರು. ವೆಚ್ಚದಲ್ಲಿ ಪ್ರತಿಮೆ ನಿರ್ಮಿಸಿ ಕೊಡಲು ಮುಂದಾಗಿದೆ.
    ಇಂದಿನ ಪೌರಾಯುಕ್ತ ಮನುಕುಮಾರ್‌ರವರು ಇತ್ತೀಚೆಗೆ ಸಭೆ ನಡೆಸಿ ದಲಿತ ಸಂಘಟನೆಗಳ ಮುಖಂಡರು, ಅಭಿಮಾನಿಗಳು ಹಾಗು ಚುನಾಯಿತ ಪ್ರತಿನಿಧಿಗಳ ಸಲಹೆ, ಸೂಚನೆ ಮೇರೆಗೆ ತೀರ್ಮಾನ ಕೈಗೊಂಡು ೧೨ ಅಡಿ ಎತ್ತರದ ಕಂಚಿನ ಪ್ರತಿಮೆಗೆ ೩೫ ಲಕ್ಷ ರು. ಅಂದಾಜು ವೆಚ್ಚ ತಯಾರಿಸಿ ಟೆಂಡರ್ ಆಹ್ವಾನಿಸಿದ್ದರು. ಟೆಂಡರ್‌ನಲ್ಲಿ ಭಾಗವಹಿಸಿದ್ದ ಗಾರ್ನೆಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಕಡಿಮೆ ವೆಚ್ಚದಲ್ಲಿ ಪ್ರತಿಮೆ ನಿರ್ಮಿಸಿ ಕೊಡಲು ಮುಂದೆ ಬಂದಿದೆ.
    ದಲಿತಪರ ಸಂಘಟನೆಗಳು ಶಾಸಕ ಬಿ.ಕೆ.ಸಂಗಮೇಶ್ವರ್, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷ ಚನ್ನಪ್ಪ, ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಮತ್ತು ಪೌರಾಯುಕ್ತ ಮನುಕುಮಾರ್ ಹಾಗು ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿವೆ.  


ಭದ್ರಾವತಿಬಿ.ಎಚ್ ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಭಾರತರತ್ನ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ನೂತನ ೧೨ ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪನೆಗಾಗಿ ನೀಲ ನಕ್ಷೆ ರಚಿಸಿ ಟೆಂಡರ್ ಆಹ್ವಾನಿಸಿರುವುದು.  

ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಸಮೀಪ ಮೃತದೇಹ ಪತ್ತೆ

    ಭದ್ರಾವತಿ, ಡಿ. ೨೭ : ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದ್ದು, ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಮೃತಪಟ್ಟಿರುವ ವ್ಯಕ್ತಿಯನ್ನು ತಾಲೂಕಿನ ಮತ್ತಿಘಟ್ಟ ಗ್ರಾಮದ ನಿವಾಸಿ ನಂದೀಶ(೨೮) ಎಂದು ಗುರುತಿಸಲಾಗಿದೆ. ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಮದ್ಯದಂಗಡಿ ಪಕ್ಕದಲ್ಲಿರುವ ಪಂಕ್ಚರ್ ಅಂಗಡಿ ಮುಂಭಾಗ ಮೃತದೇಹ ಪತ್ತೆಯಾಗಿದೆ. ಈತ ಸೋಮವಾರ ರಾತ್ರಿ ಮೃತಪಟ್ಟಿರಬಹುದು ಎನ್ನಲಾಗಿದೆ. ಮಂಗಳವಾರ ಸ್ಥಳಕ್ಕೆ ಸಂಬಂಧಿಕರು ಆಗಮಿಸಿ ಮೃತದೇಹ ಗುರುತಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.

ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ತಡಸ ಗ್ರಾಮಕ್ಕೆ ಭೇಟಿ

ಭದ್ರಾವತಿ ತಾಲೂಕಿನ  ತಡಸ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರ ಜಮೀನುಗಳಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ(ಕಾಡಾ)ದ ಅಧ್ಯಕ್ಷೆ ಕೆ.ಬಿ ಪವಿತ್ರ ರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಭದ್ರಾವತಿ, ಡಿ. ೨೭ :  ತಾಲೂಕಿನ  ತಡಸ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರ ಜಮೀನುಗಳಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ(ಕಾಡಾ)ದ ಅಧ್ಯಕ್ಷೆ ಕೆ.ಬಿ ಪವಿತ್ರ ರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಜಮೀನುಗಳಿಗೆ ಸಂಪರ್ಕಗೊಂಡಿರುವ ಕಾಲುವೆಗಳು ಮತ್ತು ಜಮೀನು ರಸ್ತೆಗಳನ್ನು ಪರಿಶೀಲಿಸಿ ನಂತರ 'ನಮ್ಮ ಹೊಲ ನಮ್ಮ ರಸ್ತೆ' ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ತಡಸ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗು ಸದಸ್ಯರುಗಳು ಮತ್ತು ಅಭಿವೃದ್ಧಿ ಅಧಿಕಾರಿ ಹಾಗು ಈ ವ್ಯಾಪ್ತಿಯ ರೈತರು ಉಪಸ್ಥಿತರಿದ್ದರು.

Monday, December 26, 2022

ಕುವೆಂಪು ವಿಶ್ವವಿದ್ಯಾನಿಲಯ ನೌಕರರ ಹುದ್ದೆಗಳ ಉನ್ನತೀಕರಣದ ಪರಿನಿಯಮ ಅನುಮೋದನೆಗೆ ಒತ್ತಾಯ

ಕುವೆಂಪು ವಿಶ್ವವಿದ್ಯಾನಿಲಯ ನೌಕರರ ಹುದ್ದೆಗಳ ಉನ್ನತೀಕರಣದ ಪರಿನಿಯಮ ಅನುಮೋದನೆ ಕುರಿತು ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್‌ನಾರಾಯಣ್‌ರವರ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ ಹಾಗೂ ಡಿ.ಎಸ್.ಅರುಣ್ ರವರು ಚರ್ಚಿಸಿದರು.
    ಭದ್ರಾವತಿ, ಡಿ. ೨೬: ಕುವೆಂಪು ವಿಶ್ವವಿದ್ಯಾನಿಲಯ ನೌಕರರ ಹುದ್ದೆಗಳ ಉನ್ನತೀಕರಣದ ಪರಿನಿಯಮ DRAFT STATUES GOVERNING THE UPGRADATION AND REORGANIZATION OF THE SANCTIONED MINISTERIAL POSTS IN THE KUVEMPU UNIVERSITY ಅನುಮೋದನೆ ಕುರಿತು ಬೆಳಗಾವಿಯ ಸುವರ್ಣಸೌಧದಲ್ಲಿ ಸೋಮವಾರ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್‌ನಾರಾಯಣ್‌ರವರ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ ಹಾಗೂ ಡಿ.ಎಸ್.ಅರುಣ್ ರವರು ಚರ್ಚಿಸಿದರು.
    ಕುವೆಂಪು ವಿಶ್ವವಿದ್ಯಾನಿಲಯದ ಅಧ್ಯಾಪಕೇತರ ನೌಕರರ ಸಂಘದವರ ಜೊತೆ ಸೇರಿ ಎಸ್. ರುದ್ರೇಗೌಡ ಹಾಗು ಡಿ.ಎಸ್ ಅರುಣ್‌ರವರು ಪರಿನಿಯಮದ ಅನುಮೋದನೆಗೆ ಒತ್ತಾಯಿಸಿದರು.
ಅಧ್ಯಾಪಕೇತರ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್ ಪ್ರತಿನಿಧಿಗಳಾದ ಎಂ.ಎಂ ಸ್ವಾಮಿ, ಪಿ. ಮಹೇಶ್, ಡಿ. ಕೃಷ್ಣ ಮತ್ತು ಬಸವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಂಸದ ಬಿ.ವೈ ರಾಘವೇಂದ್ರ, ಎಸ್. ರುದ್ರೇಗೌಡ, ಡಿ.ಎಸ್ ಅರುಣ್, ಪಟ್ಟಾಭಿರಾಮ್ ಜೀರವರಿಗೆ ಸಂಘ ಕೃತಜ್ಞತೆ ಸಲ್ಲಿಸಿದೆ.

ಜಿ. ರಾಜಶೇಖರಪ್ಪ ನಿಧನ

ಜಿ. ರಾಜಶೇಖರಪ್ಪ
    ಭದ್ರಾವತಿ, ಡಿ. ೨೬: ಹಳೇನಗರದ ವೀರಶೈವ ಸೇವಾ ಸಮಾಜದ ಅಧ್ಯಕ್ಷ ಆರ್. ಮಹೇಶ್‌ಕುಮಾರ್‌ರವರ ತಂದೆ ಜಮೀನ್ದಾರ್ ಜಿ. ರಾಜಶೇಖರಪ್ಪ(೯೨) ಸೋಮವಾರ ನಿಧನ ಹೊಂದಿದರು.
    ೩ ಪುತ್ರರು, ೩ ಪುತ್ರಿಯರು, ಅಳಿಯಂದಿರು, ಸೊಸೆಯಂದಿರು ಹಾಗು ಮೊಕ್ಕಳು ಇದ್ದರು. ಇವರ ಅಂತ್ಯಕ್ರಿಯೆ ಸಂಜೆ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ವೀರಶೈವ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

ಐಎಂಎ ಅಧ್ಯಕ್ಷೆ ಡಾ. ಕವಿತಾ ಭಟ್ ನಿಧನ

ಡಾ. ಕವಿತಾ ಭಟ್
    ಭದ್ರಾವತಿ, ಡಿ. ೨೬: ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ತಾಲೂಕು ಶಾಖೆ ಅಧ್ಯಕ್ಷೆ ಡಾ. ಕವಿತಾ ಭಟ್(೬೩) ಸೋಮವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನ ಹೊಂದಿದರು.
    ಪತಿ, ಓರ್ವ ಪುತ್ರ ಇದ್ದರು. ಮಧ್ಯಾಹ್ನ ಊಟದ ಸಮಯದಲ್ಲಿ ಏಕಾಏಕಿ ಹೃದಯಾಘಾತವಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
    ಇತ್ತೀಚೆಗೆ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಡಾ. ಕವಿತಾ ಭಟ್ ಹಾಗು ಇವರ ಪತಿ ಡಾ. ಕೆ.ಜಿ ಭಟ್ ಇಬ್ಬರು ಸಹ ನಗರದ  ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಕವಿತಾ ಭಟ್‌ರವರು ಭೂಮಿಕಾ ವೇದಿಕೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ ನಿಧನಕ್ಕೆ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು, ವೈದ್ಯರು ಸಂತಾಪ ಸೂಚಿಸಿದ್ದಾರೆ.

ಜನ್ನಾಪುರ ಎನ್‌ಟಿಬಿ ಕಛೇರಿ ಮೆಸ್ಕಾಂ ಪಾವತಿ ಕೇಂದ್ರ ಸ್ಥಗಿತ ಆದೇಶ ಹಿಂಪಡೆಯಿರಿ


ಮೆಸ್ಕಾಂ ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗೆ ಮನವಿ

 


ಭದ್ರಾವತಿ ಜನ್ನಾಪುರ ನಗರಸಭೆ ಶಾಖಾ ಕಛೇರಿ(ಎನ್‌ಟಿಬಿ ಕಛೇರಿ) ಹಾಗು ಉಂಬ್ಳೆಬೈಲು ರಸ್ತೆ, ಮೆಸ್ಕಾಂ ಘಟಕ-೨ ಕಛೇರಿ ಆವರಣದಲ್ಲಿರುವ ವಿದ್ಯುತ್ ಬಿಲ್ ಪಾವತಿ ಕೇಂದ್ರಗಳನ್ನು ಜ.೧, ೨೦೨೩ರಿಂದ ಸ್ಥಗಿತಗೊಳಿಸಲು ಮೆಸ್ಕಾಂ ಹೊರಡಿಸಿರುವ ಆದೇಶ ರದ್ದುಪಡಿಸಲು ಆಗ್ರಹಿಸಿ ಸೋಮವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಬ್ದುಲ್ ಮುನಾಫ್‌ರವರಿಗೆ ಮನವಿ ಸಲ್ಲಿಸಲಾಯಿತು. 
   ಭದ್ರಾವತಿ, ಡಿ. ೨೬ : ಜನ್ನಾಪುರ ನಗರಸಭೆ ಶಾಖಾ ಕಛೇರಿ(ಎನ್‌ಟಿಬಿ ಕಛೇರಿ) ಹಾಗು ಉಂಬ್ಳೆಬೈಲು ರಸ್ತೆ, ಮೆಸ್ಕಾಂ ಘಟಕ-೨ ಕಛೇರಿ ಆವರಣದಲ್ಲಿರುವ ವಿದ್ಯುತ್ ಬಿಲ್ ಪಾವತಿ ಕೇಂದ್ರಗಳನ್ನು ಜ.೧, ೨೦೨೩ರಿಂದ ಸ್ಥಗಿತಗೊಳಿಸಲು ಮೆಸ್ಕಾಂ ಹೊರಡಿಸಿರುವ ಆದೇಶ ರದ್ದುಪಡಿಸಲು ಆಗ್ರಹಿಸಿ ಸೋಮವಾರ ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ, ಸುವರ್ಣ ಮಹಿಳಾ ವೇದಿಕೆ ವತಿಯಿಂದ ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಬ್ದುಲ್ ಮುನಾಫ್‌ರವರಿಗೆ ಮನವಿ ಸಲ್ಲಿಸಲಾಯಿತು.
     ಈ ಹಿಂದೆ ಅಂದಿನ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದ ಪರಿಣಾಮ ನ್ಯೂಟೌನ್ ಭಾಗದ ಜನ್ನಾಪುರ, ಹುತ್ತಾಕಾಲೋನಿ, ಸಿದ್ದಾಪುರ, ಹೊಸೂರು ತಾಂಡ ಹಾಗು ನ್ಯೂಟೌನ್ ಭಾಗದ ಸ್ಲಂ ನಿವಾಸಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸುಮಾರು ೪೦ ವರ್ಷಗಳ ಹಿಂದೆ ನಗರಸಭೆ ಜನ್ನಾಪುರ ಎನ್‌ಟಿಬಿ ಕಛೇರಿ ಆವರಣದಲ್ಲಿ ಪಾವತಿ ಕೇಂದ್ರ ಆರಂಭಿಸಲಾಯಿತು. ನಂತರ ದಿನಗಳಲ್ಲಿ ಎನ್‌ಟಿಬಿ ಕಛೇರಿಯಲ್ಲಿ ಉಚಿತವಾಗಿ ಕೊಠಡಿಯನ್ನು ಸಹ ನೀಡಲಾಯಿತು. ಅಲ್ಲದೆ ಸಾರ್ವಜನಿಕರಿಗೆ ಮಳೆ, ಬಿಸಿಲಿನಿಂದ ರಕ್ಷಣೆ ನೀಡುವ ಸಂಬಂಧ ಈ ಹಿಂದೆ ಪೌರಾಯುಕ್ತರಾಗಿದ್ದ ಮನೋಹರ್‌ರವರು ಶೆಲ್ಟರ್ ಸಹ ನಿರ್ಮಿಸಿಕೊಟ್ಟಿದ್ದಾರೆ. ಇದೀಗ ಈ ಕೇಂದ್ರವನ್ನು ಸ್ಥಗಿತಗೊಳಿಸಲು ಆದೇಶ ಹೊರಡಿಸಿರುವುದು ಸರಿಯಲ್ಲ. ಈ ಹಿನ್ನಲೆಯಲ್ಲಿ ತಕ್ಷಣ ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿದರು.
     ಪ್ರಮುಖರಾದ ಆರ್. ವೇಣುಗೋಪಾಲ್, ರಮಾವೆಂಕಟೇಶ್, ಶೈಲಜಾರಾಮಕೃಷ್ಣ, ದೇವಿಕಾನಾಗರಾಜ್, ಪಂಕಜಾ ನಟರಾಜ್, ವೇದಾ ಬಸವರಾಜ್, ಗೀತಾ, ಸುಜಾತ, ಲತಾ, ರಾಧಾ, ಇಂದ್ರಾಣಿ, ಶೈಲಜಾಮಹೇಶ್, ಶ್ರೀಲಕ್ಷ್ಮೀ, ಜಯಶ್ರೀ, ಬಿ.ವಿ ಶಶಿಕಲಾ, ಗೋಪಿ ಎಲೆಕ್ಟ್ರಿಕಲ್, ಆರ್. ಮುರುಗೇಶ್, ಎಂ.ವಿ ಚಂದ್ರಶೇಖರ್, ಎ. ವಿಶ್ವೇಶ್ವರರಾವ್, ಬಿ.ಎಸ್ ನವಾದ್, ಎಚ್.ಎನ್ ದಿನೇಶ್, ಜಾನ್ಸನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.