Thursday, March 9, 2023

ವಿಐಎಸ್‌ಎಲ್ ಕಾರ್ಖಾನೆಯಿಂದ ‘ಭದ್ರಾವತಿ’ ಅಸ್ತಿತ್ವ : ಬಿ.ಎಂ ಸಂತೋಷ್

ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಕುರುಬರ ಸಂಘ ಬೆಂಬಲ  

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಸುಮಾರು ೫೦ ದಿನಗಳಿಂದ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟಕ್ಕೆ ತಾಲೂಕು ಕುರುಬರ ಸಂಘದಿಂದ ಅವರು ಗುರುವಾರ ಬೆಂಬಲ ಸೂಚಿಸಿ ಸಂಘದ ಅಧ್ಯಕ್ಷ ಬಿ.ಎಂ ಸಂತೋಷ್ ಮಾತನಾಡಿದರು.
    ಭದ್ರಾವತಿ, ಮಾ. ೯: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಿಂದಾಗಿ ಭದ್ರಾವತಿ ಪ್ರಪಂಚದ ಭೂಪುಟದಲ್ಲಿ ಗುರುತಿಸಿಕೊಂಡಿದೆ. ಇಂತಹ ಭವ್ಯ ಪರಂಪರೆ ಹೊಂದಿರುವ ಕಾರ್ಖಾನೆ ಉಳಿಯಬೇಕೆಂಬುದು ಕ್ಷೇತ್ರದ ಪ್ರತಿಯೊಬ್ಬರ ಆಶಯವಾಗಿದೆ ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಎಂ ಸಂತೋಷ್ ಹೇಳಿದರು.
    ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಸುಮಾರು ೫೦ ದಿನಗಳಿಂದ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟಕ್ಕೆ ತಾಲೂಕು ಕುರುಬರ ಸಂಘದಿಂದ ಅವರು ಗುರುವಾರ ಬೆಂಬಲ ಸೂಚಿಸಿ ಮಾತನಾಡಿದರು.
    ವಿಐಎಸ್‌ಎಲ್ ಕಾರ್ಖಾನೆ ಪರಂಪರೆ, ವೈಭವ ನಾವೆಲ್ಲರೂ ಪುಸ್ತಕದಲ್ಲಿ ಓದಿ ತಿಳಿದುಕೊಳ್ಳುವ ಜೊತೆಗೆ ನಮ್ಮ ಬದುಕಿನಲ್ಲೂ ನೋಡಿದ್ದೇವೆ. ಇಂತಹ ಅದ್ಭುತವಾದ ಕಾರ್ಖಾನೆ ಇಲ್ಲದ ಭದ್ರಾವತಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಕಾರ್ಖಾನೆಯಿಂದ ಭದ್ರಾವತಿ ಉಳಿದುಕೊಂಡಿದೆ. ನಮ್ಮೆಲ್ಲರ ಹೋರಾಟ ಕಾರ್ಖಾನೆ ಉಳಿಯುವುದಾಗಿ ಭವಿಷ್ಯದಲ್ಲಿ ಹೋರಾಟ ಅಥವಾ ಇನ್ಯಾವುದೋ ರೀತಿಯ ಪ್ರಯತ್ನದಿಂದ ಕಾರ್ಖಾನೆ ಉಳಿಯುವ ವಿಶ್ವಾಸವಿದೆ ಎಂದರು.
    ಗುತ್ತಿಗೆ ಕಾರ್ಮಿಕರು ಕಳೆದ ಸುಮಾರು ೫೦ ದಿನಗಳಿಂದ ನಿರಂತರವಾಗಿ ವಿವಿಧ ರೀತಿಯ ಹೋರಾಟ ನಡೆಸುವ ಜೊತೆಗೆ ಪ್ರಧಾನಿ, ಕೇಂದ್ರ ಸಚಿವರು ಹಾಗು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಗಮನ ಸೆಳೆಯುವ ನಿಟ್ಟಿನಲ್ಲೂ ಪ್ರಯತ್ನಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇಂದಿಗೂ ಹೋರಾಟ ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ. ಕ್ಷೇತ್ರದಲ್ಲಿರುವ ವಿವಿಧ ಸಂಘ-ಸಂಸ್ಥೆಗಳು ಸೇರಿದಂತೆ ಸಮಸ್ತ ನಾಗರೀಕರು ನಿಮ್ಮ ಜೊತೆಗಿದ್ದು, ನಿಮ್ಮ ಎಲ್ಲಾ ಹೋರಾಟಕ್ಕೂ ಕುರುಬರ ಸಂಘ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
    ಈಗಾಗಲೇ ಸಮಾಜದ ಮುಖಂಡರು, ವಿಧಾನಪರಿಷತ್ ಸದಸ್ಯರಾದ ವಿಶ್ವನಾಥ್‌ರವರು ಹೋರಾಟ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದ್ದಾರೆ. ಇವರು ಬೆಂಬಲ ಸೂಚಿಸಿದ ನಂತರ ಸಾಕಷ್ಟು ಬೆಳವಣಿಗೆಗಳು ನಡೆದಿದ್ದು, ಕಾರ್ಖಾನೆ ಉಳಿಸಿಕೊಳ್ಳುವ ಸಂಬಂಧ ಚರ್ಚೆಗಳು ನಡೆಯುತ್ತಿವೆ. ಶ್ರೀ ಕ್ಷೇತ್ರ ಕಾಗಿನೆಲೆ ಪೀಠದ ಸಮಾಜದ ಗುರುಗಳೊಂದಿಗೂ ಸಹ ಈಗಾಗಲೇ ಈ ಸಂಬಂಧ ಚರ್ಚಿಸಲಾಗಿದ್ದು, ಗುರುಗಳು ಸಹ ಇಲ್ಲಿಗೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಸೂಚಿಸಲಿದ್ದಾರೆಂದು ಭರವಸೆ ನೀಡಿದರು.
    ನಗರಸಭಾ ಸದಸ್ಯ ಕಾಂತರಾಜ್ ಹಾಗು ಕುರುಬರ ಸಂಘದ ನಿರ್ದೇಶಕರು, ಸಮಾಜದ ಮುಖಂಡರು, ಕುರುಬ ಸಮಾಜದ ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು. ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಗುತ್ತಿಗೆ ಕಾರ್ಮಿಕರು ಉಪಸ್ಥಿತರಿದ್ದರು.

ನಿರ್ಮಲ ಮಹಿಳಾ ಸೇವಾ ಕೇಂದ್ರದಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಮಾನವ ಸರಪಳಿ, ಜಾಥಾ ಮೂಲಕ ಜಾಗೃತಿ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ನಿರ್ಮಲ ಮಹಿಳಾ ಸೇವಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಮಾನವ ಸರಪಳಿ ಹಾಗೂ ಜಾಥಾ ಕಾರ್ಯಕ್ರಮಕ್ಕೆ ನಗರ ಪೊಲೀಸ್ ವೃತ್ತ ನಿರೀಕ್ಷಕ ಶಾಂತಿನಾಥ್ ಚಾಲನೆ ನೀಡಿದರು.
    ಭದ್ರಾವತಿ, ಮಾ. ೯:  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ನಿರ್ಮಲ ಮಹಿಳಾ ಸೇವಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಮಾನವ ಸರಪಳಿ ಹಾಗೂ ಜಾಥಾ ಕಾರ್ಯಕ್ರಮಕ್ಕೆ ನಗರ ಪೊಲೀಸ್ ವೃತ್ತ ನಿರೀಕ್ಷಕ ಶಾಂತಿನಾಥ್ ಪಾರಿವಾಳ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು.
    ನಗರದ ರಂಗಪ್ಪ ವೃತ್ತದಲ್ಲಿ ಸುಮಾರು ೧೦ ನಿಮಿಷ ಮಾನವ ಸರಪಳಿ ನಿರ್ಮಿಸಿ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳ ಕುರಿತು ಜಾಗೃತಿ ಮೂಡಿಸುವ ಫಲಕಗಳನ್ನು ಹಿಡಿದು ವೀರಶೈವ ಸಭಾಭವನದವರೆಗೂ ಜಾಥಾ ನಡೆಸಲಾಯಿತು.
    ನಂತರ ನಡೆದ ವೇದಿಕೆ ಕಾರ್ಯಕ್ರಮ ತಹಸೀಲ್ದಾರ್ ಸುರೇಶಚಾರ್ ಉದ್ಘಾಟಿಸಿದರು.  ನಗರ ಪೊಲೀಸ್ ವೃತ್ತ ನಿರೀಕ್ಷಕ ಶಾಂತಿನಾಥ್ ಮಹಿಳೆಯರ ಸುರಕ್ಷತೆ, ಕಾನೂನಿನಲ್ಲಿ ಮಹಿಳೆಯರಿಗಿರುವ ಸೌಲಭ್ಯಗಳ ಕುರಿತು ಹಾಗು ಇಆರ್‌ಎಸ್‌ಎಸ್ ೧೧೨ ಸಹಾಯವಾಣಿ ಬಗ್ಗೆ ಮಾಹಿತಿ ನೀಡಿದರು.
    ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರಾದ ರಾಜೇಶ್ವರಿ, ಗಾಂಧಿನಗರ ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದ ಧರ್ಮ ಗುರು ಸ್ಟೀಫನ್ ಡೆಸಾ, ನಿರ್ಮಲ ಆಸ್ಪತ್ರೆ ವ್ಯವಸ್ಥಾಪಕಿ ರೀಟಾ ವರ್ಗೀಸ್, ಸೈಂಟ್ ಚಾರ್ಲ್ಸ್ ಬೊರೋಮಿಯೋ ಸಂಸ್ಥೆ ಪ್ರಾಂತೀಯ ಸಮಾಜ ಸೇವಾ ಸಲಹೆಗಾರರಾದ ಸಿಸ್ಟರ್ ವಿನ್ಸಿ, ನಿರ್ಮಲ ಮಹಿಳಾ ಸೇವಾ ಕೇಂದ್ರದ ನಿರ್ದೇಶಕಿ ಸಿಸ್ಟರ್ ತೆರೇಸಾ, ಕಾರ್ಯಕರ್ತರಾದ ಜಯಂತಿ ರಾಘವೇಂದ್ರ ಸಗಾಯ, ಮೇರಿ ರಾಜು, ಕೌಸಲ್ಯ ತೆರೇಸಾ, ಸತ್ಯ ರವಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  

Wednesday, March 8, 2023

ವಿವಿಧೆಡೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಭದ್ರಾವತಿ ಕೆಎಸ್‌ಆರ್‌ಟಿಸಿ ಬಸ್ ಘಟಕದಲ್ಲಿ ಬುಧವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಭದ್ರಾವತಿ, ಮಾ. ೮ : ಕೆಎಸ್‌ಆರ್‌ಟಿಸಿ ಬಸ್ ಘಟಕ ಸೇರಿದಂತೆ ನಗರದ ವಿವಿಧೆಡೆ ಬುಧವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಕೆಎಸ್‌ಆರ್‌ಟಿಸಿ ಬಸ್ ಘಟಕದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಘಟಕ ವ್ಯವಸ್ಥಾಪಕಿ ಅಂಬಿಕಾ ಸುಧೀರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಇಲಾಖೆ ನಿರೀಕ್ಷಕಿ ಮುಮ್ತಾಜ್ ಬೇಗಂ, ಶಾಶ್ವತಿ ಮಹಿಳಾ ಸಮಾಜದ ಅಧ್ಯಕ್ಷೆ ರೂಪರಾವ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಆಕಾಶ ನೀಲಿ ಬಣ್ಣದ ಸೀರೆಯುಟ್ಟು ಸಂಭ್ರಮಿಸಿದ ಉದ್ಯೋಗಸ್ಥ ಮಹಿಳೆಯರು :
ನಗರದ ಅಂಡರ್‌ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಭಾರತೀಯ ಜೀವವಿಮಾ ನಿಗಮದ ಕಛೇರಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಆಕಾಶ ನೀಲಿ ಬಣ್ಣದ ಸೀರೆಯುಟ್ಟು ಸಂಭ್ರಮಿಸಿದರು. ಮಹಿಳಾ ದಿನಾಚರಣೆ ಶುಭಾಶಯ ಹಂಚಿಕೊಂಡರು.


ಭದ್ರಾವತಿ ಭಾರತೀಯ ಜೀವವಿಮಾ ನಿಗಮದ ಕಛೇರಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಆಕಾಶ ನೀಲಿ ಬಣ್ಣದ ಸೀರೆಯುಟ್ಟು ಸಂಭ್ರಮಿಸಿದರು.

ಎಎಪಿ ಪಕ್ಷದಲ್ಲಿ ಹಣವಂತರಿಗೆ ಮಣೆ : ಎಚ್. ರವಿಕುಮಾರ್ ರಾಜೀನಾಮೆ

ಭದ್ರಾವತಿಯಲ್ಲಿ ಬುಧವಾರ ಆಮ್ ಆದ್ಮಿ ಪಾರ್ಟಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಪಕ್ಷದ ಮುಖಂಡರಾದ ಎಚ್. ರವಿಕುಮಾರ್, ರಮೇಶ್ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು. 
    ಭದ್ರಾವತಿ, ಮಾ. ೮ : ಆಮ್ ಆದ್ಮಿ ಪಾರ್ಟಿ(ಎಎಪಿ) ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲ. ರಾಜ್ಯದ ನಾಯಕರು ಹಣವಂತರಿಗೆ ಮಣೆ ಹಾಕುತ್ತಿರುವುದು ಬೇಸರ ತಂದಿದೆ. ಈ ಹಿನ್ನಲೆಯಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಪಕ್ಷದ ಮುಖಂಡರಾದ ಎಚ್. ರವಿಕುಮಾರ್ ಮತ್ತು ರಮೇಶ್ ಹೇಳಿದರು.
    ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರವರ ನೇತೃತ್ವದಲ್ಲಿ ಆಮ್ ಆದ್ಮಿ ಪಾರ್ಟಿ ಭ್ರಷ್ಟಾಚಾರ ಮುಕ್ತ ಆಡಳಿತದ ಜೊತೆಗೆ ಶ್ರೀಸಾಮಾನ್ಯರ ಪಕ್ಷವಾಗಿ ಗುರುತಿಸಿಕೊಂಡಿದೆ. ಪಕ್ಷದ ತತ್ವ, ಸಿದ್ದಾಂತಗಳನ್ನು ಮೆಚ್ಚಿ ಸುಮಾರು ೧ ದಶಕದಿಂದ ತಾಲೂಕಿನಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ. ಪಕ್ಷ ಸಂಘಟನೆಗಾಗಿ ಎಲ್ಲವನ್ನು ತ್ಯಾಗಮಾಡಿದ್ದೇವೆ. ಆದರೆ ಇಂದು ಪ್ರಾಮಾಣಿಕ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.
    ಪಕ್ಷದಿಂದ ಯಾವುದೇ ರೀತಿ ಪ್ರತಿಫಲ ಬಯಸಲಿಲ್ಲ. ಇಂದಿಗೂ ಸಹ ಬದ್ದತೆಯನ್ನು ಉಳಿಸಿಕೊಂಡು ಬಂದಿದ್ದೇನೆ. ಇತ್ತೀಚೆಗೆ ರಾಜ್ಯದ ಮುಖಂಡರು ಪಕ್ಷಕ್ಕಾಗಿ ದುಡಿದವರನ್ನು ನಿರ್ಲಕ್ಷ್ಯ ಮಾಡಿ ಹಣವಂತರಿಗೆ ಮಣೆ ಹಾಕುತ್ತಿದ್ದಾರೆ. ಇದರಿಂದಾಗಿ ಮನಸ್ಸಿಗೆ ತುಂಬಾ ಬೇಸರ ಉಂಟಾಗಿದೆ. ಪಕ್ಷದಿಂದ ಹೊರಬರಲು ನಿರ್ಧರಿಸಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಅಥವಾ ಅಮಿಷಗಳಿಗೆ ಬಲಿಯಾಗಿ ಪುನಃ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಿಲ್ಲ ಎಂದರು.
    ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಸೂಕ್ತ ನಿರ್ಧಾರ ಕೈಗೊಂಡು ಮುನ್ನಡೆಯಲಾಗುವುದು. ಪಕ್ಷ ಸಂಘಟನೆಯಲ್ಲಿ ಸಹಕರಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ವಿಶ್ವ ಮಹಿಳಾ ದಿನಾಚರಣೆ : ವಿಐಎಸ್‌ಎಲ್ ಹೋರಾಟಕ್ಕೆ ಚುಂಚಾದ್ರಿ ಮಹಿಳಾ ವೇದಿಕೆ ಬೆಂಬಲ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಬುಧವಾರ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಬೆಂಬಲ ಸೂಚಿಸುವ ಮೂಲಕ ಈ ಬಾರಿ ವಿಶ್ವ ಮಹಿಳಾ ದಿನಾಚರಣೆ ವಿಶಿಷ್ಟವಾಗಿ ಆಚರಿಸಲಾಯಿತು. ಪಾದಯಾತ್ರೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಮಾ. ೮ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿವಿಗಾಗಿ ಕಾರ್ಖಾನೆ ಮುಂಭಾಗ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಬುಧವಾರ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಬೆಂಬಲ ಸೂಚಿಸುವ ಮೂಲಕ ಈ ಬಾರಿ ವಿಶ್ವ ಮಹಿಳಾ ದಿನಾಚರಣೆ ವಿಶಿಷ್ಟವಾಗಿ ಆಚರಿಸಲಾಯಿತು.
    ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸಬೇಕೆಂಬ ಮನೋಭಾವನೆಯೊಂದಿಗೆ ವೇದಿಕೆವತಿಯಿಂದ ಈ ಬಾರಿ ವಿಶ್ವ ಮಹಿಳಾ ದಿನಾಚರಣೆಯನ್ನು ಯಾವುದೇ ಸಡಗರ ಸಂಭ್ರಮವಿಲ್ಲದೆ ವಿಶಿಷ್ಟವಾಗಿ ಆಚರಿಸಲು ತೀರ್ಮಾನಿಸುವ ಮೂಲಕ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು.
ಮಧ್ಯಾಹ್ನ ಕಾರ್ಖಾನೆ ಮುಂಭಾಗದಿಂದ ಗುತ್ತಿಗೆ ಕಾರ್ಮಿಕರೊಂದಿಗೆ ತಾಲೂಕು ಕಛೇರಿವರೆಗೂ ಪಾದಯಾತ್ರೆ ನಡೆಸುವ ಮೂಲಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
    ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಸುಮಾರು ೩೦ ಸಾವಿರಕ್ಕೂ ಹೆಚ್ಚು ಕಾರ್ಮಿಕರು ೩ ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದು, ಲಕ್ಷಾಂತರ ಜನರ ಬದುಕಿಗೆ ಆಧಾರವಾಗಿತ್ತು. ಈ ಕಾರ್ಖಾನೆ ಗುಣಮಟ್ಟದ ಉಕ್ಕು ತಯಾರಿಕೆಗೆ ವಿಶ್ವದಲ್ಲಿಯೇ ಹೆಸರುವಾಸಿಯಾಗಿದ್ದು, ಪ್ರಸ್ತುತ ಕಾರ್ಖಾನೆಯಲ್ಲಿ ಸುಮಾರು ೧೪೦೦ ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕಾರ್ಖಾನೆ ಮುಚ್ಚುವ ಸ್ಥಿತಿ ಇದೀಗ ಎದುರಾಗಿದ್ದು, ಇದರಿಂದಾಗಿ ಗುತ್ತಿಗೆ ಕಾರ್ಮಿಕರ ಬದುಕಿಗೆ ತೊಂದರೆಯಾಗಿದೆ ಎಂದು  ಅಳಲು ವ್ಯಕ್ತಪಡಿಸಲಾಗಿದೆ.
ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ಹೂಡದೆ, ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ಉನ್ನತೀಕರಿಸದೇ ನಷ್ಟದ ಲೆಕ್ಕಾಚಾರ ತೋರಿಸಿ ಮುಚ್ಚುವ ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಕಾರ್ಖಾನೆ ಹಾಗು ಕಾರ್ಮಿಕರ ಹಿತದೃಷ್ಟಿಯಿಂದ ಸರ್ಕಾರ ಕಾರ್ಖಾನೆಯನ್ನು ಮುಚ್ಚುವ ಪ್ರಕ್ರಿಯೆ ಹಿಂಪಡೆಯಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
    ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ನೇತೃತ್ವ ವಹಿಸಿದ್ದರು. ಉಪಾಧ್ಯಕ್ಷೆ ಎಂ.ಬಿ ಸುಮ, ಕಾರ್ಯದರ್ಶಿ ಲತಾ, ಸಹ ಕಾರ್ಯದರ್ಶಿ ಶೀಲಾ, ಖಜಾಂಚಿ ಭಾರತಿ, ನಿರ್ದೇಶಕರಾದ ಪುಷ್ಪ, ಮಂಗಳ, ಸುಧಾ, ನೂತನ್, ಸರಸ್ವತಿ, ಆಶಾ, ಮಮತ, ದೀಪಾ, ಗೀತ, ಕುಸುಮ, ಲತಾ ರವೀಂದ್ರ, ಪ್ರತಿಭಾ, ಸವಿತ, ಮಂಜುಳ, ಸೌಮ್ಯ, ಆಶಾ ಜಯಂತ್ ಸೇರಿದಂತೆ ವೇದಿಕೆ ಸದಸ್ಯರು, ಗುತ್ತಿಗೆ ಕಾರ್ಮಿಕರು ಪಾಲ್ಗೊಂಡಿದ್ದರು.

ಬಾರ್ ಮುಂಭಾಗ ನಿಂತಿದ್ದ ಇಬ್ಬರ ಮೇಲೆ ಹಲ್ಲೆ : ದೂರು ದಾಖಲು

    ಭದ್ರಾವತಿ, ಮಾ. ೮ : ಬಾರ್‌ನಲ್ಲಿ ಊಟ ಮುಗಿಸಿಕೊಂಡು ಮಾತನಾಡುತ್ತಾ ಹೊರಗಡೆ ನಿಂತಿದ್ದಾಗ ಇಬ್ಬರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
    ಜೇಡಿಕಟ್ಟೆ ನಿವಾಸಿ ರವೀಂದ್ರ ಪ್ರಸಾದ್ ಮತ್ತು ವರಣ್ ಇಬ್ಬರು ಸ್ನೇಹಿತರೊಂದಿಗೆ ಮಂಗಳವಾರ ಸಂಜೆ ಬ್ಲೂಬಲ್ ಬಾರ್‌ಗೆ ಹೋಗಿದ್ದು, ಊಟ ಮುಗಿಸಿ ಹೊರಗಡೆ ಮಾತನಾಡುತ್ತಾ ನಿಂತಿದ್ದಾಗ ಬಾರ್‌ನಲ್ಲಿದ್ದ ಸೈಯದ್ ಇಮ್ರಾನ್, ನಯಾಜ್ ಸೇರಿದಂತೆ ಇನ್ನಿತರರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸುವ ಮೂಲಕ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹಲ್ಲೆಯಿಂದ ಗಾಯಗೊಂಡಿರುವ ವರುಣ್ ಚಿಕಿತ್ಸೆಗಾಗಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಮಾ.೯ರಂದು ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ಮಹಾರಥೋತ್ಸವ

    ಭದ್ರಾವತಿ, ಮಾ. ೮ : ತಾಲೂಕಿನ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಮಾ.೯ರಂದು ಮಧ್ಯಾಹ್ನ ೧೨ ಗಂಟೆಗೆ ಮಹಾರಥೋತ್ಸವ ನಡೆಯಲಿದೆ.
    ಬೆಳಗ್ಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ೧೨ ಗಂಟೆಗೆ ರಥೋತ್ಸವ, ಭಕ್ತರಿಗೆ ಅನ್ನ ಸಂತರ್ಪಣೆ, ಸಂಜೆ ಅಷ್ಟಾವದಾನ ಸೇವೆ, ಶಯನೋತ್ಸವ, ೧೦ರಂದು ಸಂಜೆ ರಾಜಬೀದಿ ಉತ್ಸವ, ೧೧ರಂದು ಕಲಾ ತತ್ವ ಹೋಮ, ಕುಂಭಾಭಿಷೇಕ ಮತ್ತು ಮಂಗಳಾರತಿ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಹಾರಥೋತ್ಸವ ಯಶಸ್ವಿಗೊಳಿಸಲು ದೇವಾಲಯ ಸಮಿತಿ ಕೋರಿದೆ.