ಸೋಮವಾರ, ಜೂನ್ 26, 2023

ದುರ್ವಾಸನೆ, ರೋಗರುಜಿನ ಹರಡುವ ಭೀತಿ : ಕೋಳಿ ಪಾರಂ ತೆರವುಗೊಳಿಸಿ

ಬಸವನಗುಡಿ ಗ್ರಾಮಸ್ಥರಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ

ಭದ್ರಾವತಿ ತಾಲೂಕಿನ ಎರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಗುಡಿ ವ್ಯಾಪ್ತಿಯಲ್ಲಿರುವ ಕೋಳಿ ಪಾರಂ ತೆರವುಗೊಳಿಸುವಂತೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ಸೋಮವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
    ಭದ್ರಾವತಿ, ಜೂ. ೨೬: ತಾಲೂಕಿನ ಎರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಗುಡಿ ವ್ಯಾಪ್ತಿಯಲ್ಲಿರುವ ಕೋಳಿ ಪಾರಂ ತೆರವುಗೊಳಿಸುವಂತೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ಸೋಮವಾರ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
    ಗ್ರಾಮದ ಪಕ್ಕದಲ್ಲಿಯೇ ಕಡಿಮೆ ಅಂತರದಲ್ಲಿ ಕೋಳಿ ಪಾರಂ ಇದ್ದು, ಇದರಿಂದ ಈ ಭಾಗದಲ್ಲಿ ದುರ್ವಾಸನೆ ಹೆಚ್ಚಾಗುತ್ತಿದೆ. ಕಪ್ಪು ನೊಣಗಳ ಕಾಟ ಹೆಚ್ಚಾಗಿದ್ದು, ರೋಗರುಜಿನಗಳು ಹರಡುವ ಭೀತಿ ಎದುರಾಗಿದೆ. ಮನೆಗಳಲ್ಲಿ ಊಟ ಮಾಡಲು ಸಾಧ್ಯವಾಗುತ್ತಿಲ್ಲ. ಮಕ್ಕಳಲ್ಲಿ ಆಗಾಗ ವಾಂತಿ ಕಾಣಿಸಿಕೊಳ್ಳುತ್ತಿದ್ದು, ಅಲ್ಲದೆ ಸುತ್ತಮುತ್ತಲ ಪರಿಸರದಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಎಲ್ಲಿಬೇಕೆಂದರಲ್ಲಿ ಕೋಳಿ ತ್ಯಾಜ್ಯ ಕಂಡು ಬರುತ್ತಿದ್ದು, ನಾಯಿಗಳ ಹಾವಳಿ ಹೆಚ್ಚಾಗಿದೆ. ನಾಯಿಗಳು ಮಕ್ಕಳ ಮೇಲೆ ದಾಳಿ ನಡೆಸುತ್ತಿರುವ ಘಟನೆಗಳು ನಡೆಯುತ್ತಿವೆ. ಇದರಿಂದ ಒಂದೆಡೆ ಭಯದ ವಾತಾವರಣ ನಿರ್ಮಾಣವಾಗಿದ್ದು, ಬಡವರ್ಗಕ್ಕೆ ಸೇರಿರುವ ನಾವುಗಳು ಸಂಕಷ್ಟಕ್ಕೆ ಒಳಗಾಗುವಂತಾಗಿದೆ ಎಂದು ಅಳಲು ತೋರ್ಪಡಿಸಿಕೊಂಡರು.
    ಈಗಾಗಲೇ ಹಲವಾರು ಬಾರಿ ಈ ಸಂಬಂಧ ಮನವಿ ಸಲ್ಲಿಸಲಾಗಿದ್ದು, ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣ ಕೋಳಿ ಪಾರಂ ತೆರವುಗೊಳಿಸಬೇಕು. ಅಲ್ಲಿಯವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಸಿದರು.
    ಮನವಿ ಆಲಿಸಿದ ತಹಸೀಲ್ದಾರ್‌ರವರು ತಕ್ಷಣ ಸ್ಥಳ ಪರಿಶೀಲನೆಗೆ ತೆರಳಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ನಡುವೆ ಕೋಳಿ ಪಾರಂ ಮಾಲೀಕರಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಸಹ ತೆರವುಗೊಳಿಸುವಂತೆ ಸೂಚಿಸಿದ್ದಾರೆ.

ಪ್ರತಿಯೊಬ್ಬರಲ್ಲೂ ಮಾನವೀಯ ಮೌಲ್ಯಗಳು ಅತ್ಯವಶ್ಯಕ : ಡಾ. ಗುರುಪಾದ ಎಸ್. ಮರಿಗುದ್ದಿ

ಭದ್ರಾವತಿ ಸಿದ್ಧಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ಹಾಗೂ ಅಭಿನಂದನೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಜೂ. ೨೬ : ಪ್ರತಿಯೊಬ್ಬರಲ್ಲೂ ಮಾನವೀಯ ಮೌಲ್ಯಗಳು ಅತ್ಯವಶ್ಯಕವಾಗಿದ್ದು, ೧೨ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಈ ನಿಟ್ಟಿನಲ್ಲಿಯೇ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು ಎಂದು ಸಂಕೇಶ್ವರದ ವಿಶ್ರಾಂತ ಪ್ರಾಧ್ಯಾಪಕ ಡಾ. ಗುರುಪಾದ ಎಸ್. ಮರಿಗುದ್ದಿ ಹೇಳಿದರು.
    ಅವರು ಸಿದ್ಧಾರೂಢನಗರದ ಶ್ರೀ ಬಸವೇಶ್ವರ ಸಭಾಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವಗುರು ಬಸವಣ್ಣನವರ ಜಯಂತ್ಯೋತ್ಸವ ಹಾಗೂ ಅಭಿನಂದನೆ ಕಾರ್ಯಕ್ರಮದಲ್ಲಿ 'ಮಾನವತೆಯ ಮಹಾಯಾನಿ ಬಸವಣ್ಣ' ವಿಷಯ ಮಾತನಾಡಿದರು.
    ಜಗಜ್ಯೋತಿ ಬಸವಣ್ಣನವರ ವಚನಗಳು ಮಾನವತೆಯ ನೆಲೆಗಟ್ಟಿನ ಮೇಲೆ ರೂಪುಗೊಂಡಿವೆ. ಧರ್ಮ, ಜಾತಿ, ಲಿಂಗ ತಾರತಮ್ಯವಿಲ್ಲದೆ ಭೂಮಿ ಮೇಲೆ ಪ್ರತಿಯೊಬ್ಬರನ್ನು ಸಮಾನವಾಗಿ ಕಾಣುವ, ಪ್ರೀತಿಸುವ, ಗೌರವಿಸುವ, ಸಹಬಾಳ್ವೆ ಬದುಕು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಮಾನವೀಯ ಮೌಲ್ಯಗಳು ಸಹಕಾರಿಯಾಗಿವೆ. ನುಡಿದಂತೆ ನಡೆವ ಬಸವಣ್ಣನವರ ಬದುಕು, ವಚನಗಳು ಇಂದಿಗೂ ನಮ್ಮೆಲ್ಲರಿಗೂ ಆದರ್ಶತನವಾಗಿದೆ. ವಚನಗಳಲ್ಲಿನ ಪ್ರತಿಯೊಂದು ಮೌಲ್ಯಗಳನ್ನು ಅರ್ಥಮಾಡಿಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
    ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರ ಬದುಕೇ ನಮ್ಮೆಲ್ಲರಿಗೂ ದಾರಿದೀಪವಾಗಿದೆ. ಅವರ ಆಶಯದಂತೆ ನಾವೆಲ್ಲರೂ ಮುನ್ನಡೆಯಬೇಕಾಗಿದೆ ಎಂದರು.
    ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ಬಿ.ಕೆ ಸಂಗಮೇಶ್ವರ್, ೪ನೇ ಬಾರಿಗೆ ಕ್ಷೇತ್ರದ ಶಾಸಕರನ್ನಾಗಿ ಆಯ್ಕೆ ಮಾಡಿರುವ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ರಾಜ್ಯದಲ್ಲಿ ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದು,  ಪ್ರತಿಯೊಬ್ಬರ ಏಳಿಗೆಗಾಗಿ ಶ್ರಮಿಸುತ್ತಿದೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನಾನು ಬದ್ಧನಾಗಿದ್ದು, ಈಗಾಗಲೇ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಸಾವಿರಾರು ಕೋ.ರು. ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಕ್ಷೇತ್ರದ ಜನರು ನನ್ನ ಮೇಲೆ ಹೊಂದಿರುವ ವಿಶ್ವಾಸಕ್ಕೆ ಚಿರಋಣಿಯಾಗಿರುವೆ ಎಂದರು.
    ಚಿಕ್ಕಮಗಳೂರು ಶ್ರೀ ಬಸವತತ್ವ ಪೀಠ ಹಾಗು ಶಿವಮೊಗ್ಗ ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿದ್ದರು.
    ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಅಭಿನಂದನಾ ನುಡಿಗಳನ್ನಾಡಿದರು. ಪರಿಷತ್ ತಾಲೂಕು ಅಧ್ಯಕ್ಷ ಎನ್.ಎಸ್ ಮಲ್ಲಿಕಾರ್ಜುನಯ್ಯ ಅಧ್ಯಕ್ಷತೆ ವಹಿಸಿದ್ದರು.  ಎಂ. ವಿರುಪಾಕ್ಷಪ್ಪ ಕಾರ್ಯಕ್ರಮ ನಿರೂಪಿಸಿದರು. ವಚನ ಗಾಯನ ನಡೆಯಿತು.

ಮಂತ್ರಿಗಿರಿ ಬೇಡ, ಊರಿನ ಅಭಿವೃದ್ಧಿ ಮುಖ್ಯ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರನ್ನು ಭಾನುವಾರ ಶಾಸಕರ ಗೃಹ ಕಛೇರಿಯಲ್ಲಿ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಜು. ೨೬ : ನನಗೆ ಯಾವುದೇ ಮಂತ್ರಿಗಿರಿ ಅಗತ್ಯವಿಲ್ಲ. ಅಧಿಕಾರಕ್ಕಿಂತ ಊರಿನ ಅಭಿವೃದ್ಧಿಯೇ ನನಗೆ ಮುಖ್ಯ. ಆದರೂ ಜು.೨೦ರೊಳಗಾಗಿ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಸಿಗುವ ವಿಶ್ವಾಸವಿದೆ ಎಂದು  ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.
    ಅವರು ಭಾನುವಾರ ಶಾಸಕರ ಗೃಹ ಕಛೇರಿಯಲ್ಲಿ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಸನ್ಮಾನ, ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
    ಕ್ಷೇತ್ರಕ್ಕೆ ಅನುದಾನ ತರುವ ನಿಟ್ಟಿನಲ್ಲಿ ಇಷ್ಟು ದಿನಗಳ ಕಾಲ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದು, ನನ್ನ ವಿರುದ್ಧ ಅಪಪ್ರಚಾರ ನಡೆಸಲಾಗಿದೆ. ಯಾವುದೇ ಅಪಪ್ರಚಾರಕ್ಕೆ ಕ್ಷೇತ್ರದ ಜನರು ಕಿವಿಗೊಡಬಾರದು ಎಂದರು.
    ಆರೋಗ್ಯ ಸರಿ ಇಲ್ಲ. ಚಿಕಿತ್ಸೆಗಾಗಿ ಲಂಡನ್‌ಗೆ ತೆರಳಿದ್ದಾರೆ, ಸಿಂಗಾಪುರಕ್ಕೆ ತೆರಳಿದ್ದಾರೆ ಎಂದು ವಿರೋಧಿಗಳು ಅಪಪ್ರಚಾರ ಮಾಡುತ್ತ ಅದರಲ್ಲಿಯೂ ರಾಜಕಾರಣ ಮಾಡಲು ಹೊರಟಿದ್ದಾರೆ. ಕ್ಷೇತ್ರದ ಜನರು ಬೆಂಗಳೂರಿಗೆ ಬಂದು ನನ್ನೊಡನೆ ಮಾತನಾಡಿಕೊಂಡು ಊರಿನ ಕೆಲಸ ಮಾಡಿಸಿಕೊಂಡು ಹೋಗುತ್ತಿದ್ದರು. ಊರಿನ ಅಭಿವೃದ್ಧಿ ಆಗಬೇಕು ಎನ್ನುವುದು ನನ್ನ ಮುಖ್ಯ ಉದ್ದೇಶವಾಗಿದ್ದು,  ಎಲ್ಲಾ ಮಂತ್ರಿಗಳು ಸುಲಭವಾಗಿ ಸಿಗುತ್ತಿದ್ದ ಕಾರಣ ಯಾರೂ ಪ್ರಸ್ತಾವನೆ ಸಲ್ಲಿಸಲು ಮುಂದೆ ಬಾರದ ಸಂದರ್ಭದಲ್ಲಿ ಅಲ್ಲಿಯೇ ಇದ್ದು ಅವಕಾಶ ಸದುಪಯೋಗಪಡಿಸಿಕೊಂಡಿದ್ದೇನೆ ಎಂದರು.
    ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರಕ್ಕೆ ೨ ಸಾವಿರ ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದೇನೆ. ಎಂಪಿಎಂ ಕಾರ್ಖಾನೆ ಪುನರಾರಂಭಿಸಲು ಎಲ್ಲ ರೀತಿಯ ಪ್ರಯತ್ನ ನಡೆಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಂ.ಬಿ. ಪಾಟೀಲ್ ಮತ್ತು ಕಾರ್ಖಾನೆ ಅಧ್ಯಕ್ಷರ ಜೊತೆ ಮಾತನಾಡಲಾಗಿದೆ. ವಿಐಎಸ್‌ಎಲ್ ಕಾರ್ಖಾನೆಯನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ನೀಡುವಂತೆ ಕೇಳಲಾಗಿದೆ. ವಾಪಸ್ ಕೊಡದಿದ್ದರೆ ಬಂಡವಾಳ ತೊಡಗಿಸಿ ಅಭಿವೃದ್ಧಿಪಡಿಸುವಂತೆ ಸಂಬಂಧಪಟ್ಟ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
    ಹೊಸ ಸೇತುವೆಗಳ ನಿರ್ಮಾಣ, ರಿಂಗ್ ರೋಡ್ ಕಾಮಗಾರಿ, ಭದ್ರಾ ಕಾಲೋನಿಯಲ್ಲಿರುವ ೧೦ ಎಕರೆ ಜಾಗದಲ್ಲಿ ೧೫೦ ಬೆಡ್‌ಗಳ ಆಸ್ಪತ್ರೆ, ಸುಸಜ್ಜಿತ ಶಸ್ತ್ರಚಿಕಿತ್ಸಾ ಯಂತ್ರೋಪಕರಣಗಳ ಅಳವಡಿಕೆ, ಚನ್ನಗಿರಿ ರಸ್ತೆ ಅಗಲೀಕರಣ, ಮಾಧವಾಚಾರ್ ವೃತ್ತದಿಂದ ಭದ್ರಾ ಕಾಲೋನಿವರೆಗೂ ಹಾಗೂ ಅನ್ವರ್ ಕಾಲೋನಿಯಿಂದ ಬಾಬಳ್ಳಿವರೆಗೂ ೧೦೦ ಅಡಿ ಅಗಲವಾದ ರಸ್ತೆ ಕಾಮಗಾರಿ ಶೀಘ್ರ ಕೈಗೊಳ್ಳಲಾಗುವುದು. ತಕ್ಕಂತೆ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
    ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ, ಪ್ರತಕರ್ತರಾದ ಎನ್. ಬಾಬು, ಬಸವರಾಜ್, ಫಿಲೋಮಿನಾ, ಕಿರಣ್, ಮಹಾಲಿಂಗಪ್ಪ, ಕೆ.ಆರ್ ಶಂಕರ್, ಸುಭಾಷ್‌ರಾವ್ ಸಿಂಧ್ಯಾ, ಬಿ.ಆರ್ ಬದರಿನಾರಾಯಣ ಶ್ರೇಷ್ಠಿ, ಶೈಲೇಶ್ ಕೋಠಿ, ಸುದರ್ಶನ್, ರವೀಂದ್ರನಾಥ್(ಬ್ರದರ್), ರಾಬರ್ಟ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಭಾನುವಾರ, ಜೂನ್ 25, 2023

ಬಿಜೆಪಿಯಿಂದ ತುರ್ತು ಪರಿಸ್ಥಿತಿಯ ಕರಾಳ ದಿನ ಆಚರಣೆ

ಭದ್ರಾವತಿ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ತುರ್ತು ಪರಿಸ್ಥಿತಿಯ ಕರಾಳ ದಿನ ಆಚರಿಸಲಾಯಿತು.
    ಭದ್ರಾವತಿ, ಜೂ. ೨೫ : ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ ಅಂದಿನ ಪ್ರಧಾನಿ ಮಂತ್ರಿ ಇಂದಿರಾಗಾಂಧಿಯವರ ಸರ್ವಾಧಿಕಾರಿ ಧೋರಣೆ ಖಂಡಿಸಿ ಭಾನುವಾರ ಬಿಜೆಪಿ ತಾಲೂಕು ಮಂಡಲ ವತಿಯಿಂದ ಕರಾಳ ದಿನ ಆಚರಿಸಲಾಯಿತು.  
    ಮಂಡಲ ತಾಲೂಕು ಅಧ್ಯಕ್ಷ ಜಿ. ಧರ್ಮಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರು ಮಾತನಾಡಿ, ತುರ್ತು ಪರಿಸ್ಥಿತಿ ಇಂದಿರಾಗಾಂಧಿ ಸರ್ಕಾರದ ದುರಾಡಳಿತದ ಕರಾಳ ದಿನಗಳ ಕಹಿ ನೆನಪು. ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಭವಿಷ್ಯದಲ್ಲಿ ಆ ರೀತಿಯ ಸಂದರ್ಭ ದೇಶ ಎದುರಿಸುವ ಸ್ಥಿತಿ ಬರಬಾರದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಜಾಗೃತರಾಗಬೇಕು ಎಂದರು.
  ಡಾ. ಧನಂಜಯ ಸರ್ಜಿ, ಬಿ.ಕೆ ಶ್ರೀನಾಥ್, ಎಂ. ಪ್ರಭಾಕರ್, ವಿ. ಕದಿರೇಶ್, ನಾಗಭೂಷಣ್, ರಾಘವೇಂದ್ರ, ರಂಗಸ್ವಾಮಿ, ರಾಮಲಿಂಗಯ್ಯ, ಮಧುಕರ್ ಕಾನಿಟ್ಕರ್, ಕೊಟ್ರಪ್ಪ ರೆಡ್ಡಿ,  ಬಿ.ಎಚ್ ರುದ್ರಪ್ಪ, ಭಾರತಮ್ಮ, ಶ್ರೀಧರ್ ಮಾರ್ಷಮ್, ರಂಗಪ್ಪ ಹೊಳೆಹೊನ್ನೂರು, ಕೃಷ್ಣ ಹೊಳೆಹೊನ್ನೂರು. ಪರಶುರಾಮ್ ಹರಿರಾವ್ ಕದಂ,  ಕೇಶವ ಸಾಗರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹಳೇಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಯ ಭವಿಷ್ಯಕ್ಕೆ ಮುನ್ನುಡಿಯಾಗಲಿ

ಪುನರ್ ಮಿಲನ-ಗುರುವಂದನೆ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಶಿಕ್ಷಕ ಭೈರಪ್ಪ

ಭದ್ರಾವತಿ ತಾಲೂಕಿನ ಸೀತಾರಾಮಪುರ ಲೇಪಾಕ್ಷಸ್ವಾಮಿ ಪ್ರೌಢಶಾಲೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ೧೯೮೨-೮೩ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪುನರ್ ಮಿಲನ ಹಾಗು ಗುರುವಂದನಾ ಕಾರ್ಯಕ್ರಮ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಭೈರಪ್ಪ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ, ಜೂ. ೨೫ : ಯಾವುದೇ ವಿದ್ಯಾಸಂಸ್ಥೆಯಾಗಿರಲಿ ಹಳೇಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಯ ಭವಿಷ್ಯಕ್ಕೆ ಮುನ್ನುಡಿ ಬರೆಯುವಂತಾಗಬೇಕು ಎಂದು ತಾಲೂಕಿನ ಸೀತಾರಾಮಪುರ ಲೇಪಾಕ್ಷಸ್ವಾಮಿ ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕ ಭೈರಪ್ಪ ಹೇಳಿದರು.
    ಅವರು ಭಾನುವಾರ ಶಾಲೆಯಲ್ಲಿ ೧೯೮೨-೮೩ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪುನರ್ ಮಿಲನ ಹಾಗು ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಒಂದು ವಿದ್ಯಾಸಂಸ್ಥೆ ಆರಂಭಿಸಿ ಅದನ್ನು ಮುನ್ನಡೆಸಿಕೊಂಡು ಹೋಗುವುದು ಸುಲಭದ ಕೆಲಸವಲ್ಲ. ಹಲವಾರು ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಈ ವಿದ್ಯಾಸಂಸ್ಥೆಯನ್ನು ಇಂದಿಗೂ ಮುನ್ನಡೆಸಿಕೊಂಡು ಬರಲಾಗುತ್ತಿದೆ. ಹಳೇಯ ವಿದ್ಯಾರ್ಥಿಗಳು ಇದನ್ನು ನೆನಪಿನಲ್ಲಿಟ್ಟುಕೊಂಡು ವಿದ್ಯಾಸಂಸ್ಥೆಗೆ ನೆರವಾಗಬೇಕು. ಆಗಮಾತ್ರ ಶಿಕ್ಷಣ ನೀಡಿದ ಗುರುಗಳಿಗೆ, ಶಿಕ್ಷಣ ಸಂಸ್ಥೆಗೆ ಗೌರವ ನೀಡಿದಂತಾಗುತ್ತದೆ ಎಂದರು.
    ಇದಕ್ಕೂ ಮೊದಲು ಪ್ರಾಸ್ತಾವಿಕವಾಗಿ ಮಾತನಾಡಿದ ಹಳೇಯವಿದ್ಯಾರ್ಥಿ, ದಾವಣಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ಸುಮಾರು ೪೦ ವರ್ಷಗಳ ನಂತರ ಹಳೇಯ ವಿದ್ಯಾರ್ಥಿಗಳು ಒಂದೆಡೆ ಸೇರಿ ತಮಗೆ ವಿದ್ಯೆ ಹೇಳಿಕೊಟ್ಟ ಗುರುಗಳಿಗೆ ಗುರುವಂದನೆ ಸಲ್ಲಿಸುತ್ತಿರುವುದು ವಿಶೇಷತೆಯಿಂದ ಕೂಡಿದೆ. ಈ ಕಾರ್ಯಕ್ರಮ ಆಯೋಜನೆಗಾಗಿ ಸುಮಾರು ೬ ವರ್ಷಗಳಿಂದ ರೂಪುರೇಷೆ ಸಿದ್ದಪಡಿಸಿಕೊಂಡು ಬರಲಾಗಿದೆ. ಈ ಶಾಲೆಯ ಹಳೇಯ ವಿದ್ಯಾರ್ಥಿಗಳು ಇಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಮಾದರಿಯಾಗಿದ್ದಾರೆ. ಇದಕ್ಕೆ ಕಾರಣೀಭೂತರಾದ ಗುರುಗಳನ್ನು ಗೌರವಿಸುವುದು ಹಾಗು ಅವರ ಆಶೀರ್ವಾದ ಪಡೆಯುವುದು ಮತ್ತು ಭವಿಷ್ಯದ ಸಮಾಜಕ್ಕೆ ನಾವು ಮಾದರಿಯಾಗುವ ನಿಟ್ಟಿನಲ್ಲಿ ಮುನ್ನಡೆಯುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
    ಗುರುಗಳಾದ ಭೈರಪ್ಪ, ರಾಜಣ್ಣ, ಎ.ಸಿ ಚನ್ನಬಸಪ್ಪ, ನಟರಾಜ್, ದಿವಂಗತ ಕೆ.ಎಸ್ ರುದ್ರಪ್ಪ ಮತ್ತು  ಮುರುಗೇಂದ್ರಪ್ಪ ಅವರಿಗೆ ಗುರುವಂದನೆ ಸಲ್ಲಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಪರಮೇಶ್ವರಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಕಾರ್ಯಕ್ರಮ ಕಾರ್ಯಕಾರಿ ಸಮಿತಿ ಅಧ್ಯಕ್ಷ ಮಂಜುನಾಥ್ ಹಾಗು ಶಾಲೆಯ ಶಿಕ್ಷಕ ವೃಂದವನ್ನು  ಸನ್ಮಾನಿಸಿ ಅಭಿನಂದಿಸಲಾಯಿತು.


ಭದ್ರಾವತಿ ತಾಲೂಕಿನ ಸೀತಾರಾಮಪುರ ಲೇಪಾಕ್ಷಸ್ವಾಮಿ ಪ್ರೌಢಶಾಲೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ೧೯೮೨-೮೩ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪುನರ್ ಮಿಲನ ಹಾಗು ಗುರುವಂದನಾ ಕಾರ್ಯಕ್ರಮ ಯಶಸ್ವಿ ಹಿನ್ನಲೆಯಲ್ಲಿ ಹಳೇಯ ವಿದ್ಯಾರ್ಥಿಗಳು ಕಾರ್ಯಕ್ರಮ ಕಾರ್ಯಕಾರಿ ಸಮಿತಿ ಅಧ್ಯಕ್ಷ ಮಂಜುನಾಥ್ ಅವರನ್ನು ಸನ್ಮಾನಿಸಿ ಸಂಭ್ರಮಿಸಿದರು.

    ಶಾಲೆಯ ಹಳೇಯ ವಿದ್ಯಾರ್ಥಿಗಳಾದ ಸಿದ್ದಯ್ಯ, ಸಾಗರ್, ಮಂಜುನಾಥ್, ತೋಟಯ್ಯ, ರಾಜಪ್ಪ, ಎಸ್.ವಿ ರಾಮಚಂದ್ರ, ಜಗದೀಶ್, ಪ್ರಮೀಳಾ, ನಂಜುಂಡಪ್ಪ, ಉಮೇಶ್, ಮಹೇಶ್ವರಯ್ಯ, ನಾಗರತ್ನ, ಭಾರತಿ, ಕುಮಾರ್ ಸೇರಿದಂತೆ ಇನ್ನಿತರರು ಕಾರ್ಯಕ್ರಮ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
    ಭಾರತಿ ಪ್ರಾರ್ಥಿಸಿ, ನಿತ್ಯಾನಂದ ಸ್ವಾಗತಿಸಿ, ಮುರುಳಿ ನಿರೂಪಿಸಿದರು. ರಾಜ್ಯದ ವಿವಿಧೆಡೆಗಳಿಂದ ಹಾಗು ಹೊರರಾಜ್ಯದಿಂದ ಹಳೇಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮ ಆರಂಭದಲ್ಲಿ ನಿಧನ ಹೊಂದಿದ ಗುರುಗಳಿಗೆ ಹಾಗು ಹಳೇಯ ವಿದ್ಯಾರ್ಥಿಗಳಿಗೆ ಸಂತಾಪ ಸೂಚಿಸಿ ಮೌನಾಚರಣೆ ನಡೆಸಲಾಯಿತು.

ಶನಿವಾರ, ಜೂನ್ 24, 2023

ಕೇಸರಿಪಡೆಯಿಂದ ಜೆಪಿಎಸ್ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಲೇಖನ ಸಾಮಾಗ್ರಿ ವಿತರಣೆ

ಭದ್ರಾವತಿ ನಗರದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕೇಸರಿ ಪಡೆ ವತಿಯಿಂದ ಶನಿವಾರ ಜೆಪಿಎಸ್ ಕಾಲೋನಿ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.
    ಭದ್ರಾವತಿ, ಜೂ. ೨೪ : ಹಲವಾರು ವರ್ಷಗಳಿಂದ ನಗರದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕೇಸರಿ ಪಡೆ ವತಿಯಿಂದ ಶನಿವಾರ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಲೇಖನ ಸಾಮಾಗ್ರಿಗಳನ್ನು ವಿತರಿಸಲಾಯಿತು.
    ನಗರಸಭೆ ವ್ಯಾಪ್ತಿಯ ಜೆಪಿಎಸ್ ಕಾಲೋನಿ ಸರ್ಕಾರಿ ಶಾಲೆಯ ಸುಮಾರು ೪೦ ಮಕ್ಕಳಿಗೆ ಪ್ರಸಕ್ತ ಸಾಲಿಗೆ ಅಗತ್ಯವಿರುವಷ್ಟು ಪುಸ್ತಕ, ಪೆನ್ನು, ಪೆನ್ಸಿಲ್, ಶಾಲಾ ಬ್ಯಾಗ್ ಸೇರಿದಂತೆ ಲೇಖನ ಸಾಮಾಗ್ರಿಗಳನ್ನು ವಿತರಿಸುವ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಲಾಯಿತು.
    ಯುನೈಟೆಡ್ ಇನ್ಸೂರೆನ್ಸ್ ವಿ. ಪ್ರಕಾಶ್ ಶೆಟ್ಟಿ, ಶಾಲೆಯ ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗದವರು, ಸ್ಥಳೀಯ ಮುಖಂಡರು, ಶಾಲೆಯ ಮಕ್ಕಳ ಪೋಷಕರು, ಕೇಸರಿ ಪಡೆ ಪ್ರಮುಖರು ಉಪಸ್ಥಿತರಿದ್ದರು.

೧೪ ಸೆಕೆಂಡ್‌ನಲ್ಲಿ ದೇಶದ ಎಲ್ಲಾ ರಾಜ್ಯಗಳ ಹೆಸರು

ಸಿ. ವೀರ್‌ನಾರಾಯಣ್‌ಸಿಂಗ್ ಓಎಂಜಿ ಬುಕ್ ಆಫ್ ರೆಕಾರ್ಡ್ಸ್


ಭದ್ರಾವತಿ ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ೨ನೇ ತರಗತಿ ವಿದ್ಯಾರ್ಥಿ ಸಿ. ವೀರ್‌ನಾರಾಯಣ್‌ಸಿಂಗ್ ಓಎಂಜಿ ಬುಕ್ ಆಫ್ ರೆಕಾರ್ಡ್ಸ್ ಸಾಧನೆಗೆ ಪಾತ್ರನಾಗಿದ್ದಾನೆ.
    ಭದ್ರಾವತಿ, ಜೂ. ೨೪ : ನಗರದ ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ೨ನೇ ತರಗತಿ ವಿದ್ಯಾರ್ಥಿ ಸಿ. ವೀರ್‌ನಾರಾಯಣ್‌ಸಿಂಗ್ ಓಎಂಜಿ ಬುಕ್ ಆಫ್ ರೆಕಾರ್ಡ್ಸ್ ಸಾಧನೆಗೆ ಪಾತ್ರನಾಗಿದ್ದು, ಕುಟುಂಬ ವರ್ಗದಲ್ಲಿ ಸಂತಸ ಮನೆ ಮಾಡಿದೆ.
    ೭ ವರ್ಷ ೩ ತಿಂಗಳು ವಯಸ್ಸಿನ ಸಿ. ವೀರ್‌ನಾರಾಯಣ್‌ಸಿಂಗ್ ಕೇವಲ ೧೪ ಸೆಕೆಂಡ್‌ಗಳಲ್ಲಿ ಅತಿ ಕಡಿಮೆ ಅವಧಿಯಲ್ಲಿ ದೇಶದ ಎಲ್ಲಾ ರಾಜ್ಯಗಳ ಹೆಸರನ್ನು ಹೇಳುವ ಮೂಲಕ ಬೆರಗುಗೊಳಿಸಿದ್ದಾನೆ. ಈ ಮೂಲಕ ಓಎಂಜಿ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಗೊಂಡಿದ್ದಾನೆ. ಬಾಲಕನ ಬುದ್ದಿಮತ್ತೆ, ಕ್ರಿಯಾಶೀಲತೆಗೆ ಓಎಂಜಿ ಪ್ರಶಂಸೆ ವ್ಯಕ್ತಪಡಿಸಿದೆ. ಈ ಸಾಧನೆ ಏಪ್ರಿಲ್ ತಿಂಗಳಿನಲ್ಲಿ ನಡೆದಿದ್ದು, ಇದೀಗ ಪೋಷಕರಿಗೆ ಸಾಧನೆಯ ಪ್ರಮಾಣಪತ್ರ ಹಾಗು ಪದಕ ಬಂದು ತಲುಪಿದೆ.


    ಸಿ. ವೀರ್‌ನಾರಾಯಣ್‌ಸಿಂಗ್ ತಾಲೂಕಿನ ದೇವರನರಸೀಪುರ ಗ್ರಾಮದ ನಿವಾಸಿಗಳಾದ ಸಿ. ಚರಣ್‌ಸಿಂಗ್ ಮತ್ತು ಆರ್. ದಿವ್ಯರಾಣಿ ದಂಪತಿ ಪುತ್ರನಾಗಿದ್ದಾನೆ. ಬಾಲಕನ ಸಾಧನೆಗೆ ಕುಟುಂಬ ವರ್ಗದವರು, ಗ್ರಾಮಸ್ಥರು, ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.