Thursday, January 25, 2024

ಮತ ಹಾಕುವ ಮತದಾರ ಯೋಚಿಸಿ ಎಚ್ಚರಿಕೆಯಿಂದ ಮತದಾನ ಮಾಡಿ : ನ್ಯಾ. ಟಿ. ಶ್ರೀಕಾಂತ್

ತಾಲೂಕು ಆಡಳಿತ ಹಾಗು ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮತದಾರರ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಭದ್ರಾವತಿ; ನಮ್ಮ ಸಂವಿಧಾನ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತದಾನದ ಹಕ್ಕು ನೀಡಿದ್ದು, ಮತ ಹಾಕುವ ಮತದಾರ ಯೋಚಿಸಿ ಎಚ್ಚರಿಕೆಯಿಂದ ಮತದಾನ ಮಾಡಬೇಕು ಎಂದು ನಗರದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ. ಶ್ರೀಕಾಂತ್ ಹೇಳಿದರು.
ತಾಲೂಕು ಆಡಳಿತ ಹಾಗು ತಾಲೂಕು ಕಾನೂನು ಸೇವೆಗಳ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮತದಾನ ಎನ್ನುವುದು ಸಂವಿಧಾನ ನಮಗೆ ಕೊಟ್ಟಿರುವ ಹಕ್ಕು ಮಾತ್ರವಲ್ಲದೆ ಅದು ನಮ್ಮೆಲ್ಲರ ಕರ್ತವ್ಯವೂ ಆಗಿದೆ. ನಾವು ಹಾಕುವ ಒಂದು ಮತದಿಂದ ಗೆಲ್ಲುವ ಚುನಾಯಿತ ಪ್ರತಿನಿಧಿಗಳು, ಮಾಡುವ ಕಾನೂನುಗಳಿಂದ ಸಮಾಜದ ಮೇಲೆ ಹಾಗು ನಮ್ಮ ಮೇಲೆ ಸಾಕಷ್ಟು ಉತ್ತಮ ಪರಿಣಾಮ ಬೀರುತ್ತವೆ. 
ಹಿಂದೆ ನ್ಯಾಯವಾದಿಗಳು ಹೆಚ್ಚಾಗಿ ರಾಜಕೀಯ ರಂಗ ಪ್ರವೇಶಿಸುತ್ತಿದ್ದರು. ಕಾನೂನುಗಳ ಅರಿವು ತಿಳುವಳಿಕೆ ಕೂಡ ಹೊಂದಿರುತ್ತಿದ್ದರು, ಇತ್ತೀಚೆಗೆ ರಾಜಕೀಯ ಪ್ರವೇಶ ಕಡಿಮೆಯಾಗಿದೆ. ಇಂದಿಗೂ ಬ್ರಿಟಿಷರು ಮಾಡಿರುವ ಕಾನೂನುಗಳನ್ನೇ ನಾವು ಒಪ್ಪಿಕೊಂಡು ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಅವುಗಳನ್ನು ತಿದ್ದುಪಡಿ ಮಾಡುವುದೂ ಸಹ ಕಷ್ಟವಾಗಿದೆ. ತಿದ್ದುಪಡಿ ಮಾಡುವ ಅವಕಾಶ  ಜನಪ್ರತಿನಿಧಿಗಳಿಗಿದ್ದು,  ತಿಳುವಳಿಕೆಯುಳ್ಳ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವುದು ಯುವ ಪೀಳಿಗೆಯ ಜವಾಬ್ದಾರಿಯಾಗಿದೆ ಎಂದರು.
ತಹಸೀಲ್ದಾರ್ ಕೆ.ಆರ್ ನಾಗರಾಜ್ ಮಾತನಾಡಿ, ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸ್ತುತ ಒಟ್ಟು 2,12,770 ಮತದಾರರಿದ್ದಾರೆ. ಈ ಪೈಕಿ 3,372 ಯುವ ಮತದಾರರಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದೃಢ ಪ್ರಜಾಪ್ರಭುತ್ವ ಕಟ್ಟಲು ಮತದಾರರ ಪಾತ್ರ ಮಹತ್ವದ್ದಾಗಿದ್ದು, ಮತದಾನ ಮಾಡಲು ಪ್ರತಿಯೊಬ್ಬರೂ ಮುಂದಾಗಬೇಕೆAದರು.
ನ್ಯಾಯಾಧೀಶರಾದ ಸಿ.ಎನ್ ಲೋಕೇಶ್ ಪ್ರತಿಜ್ಞಾ ವಿಧಿ ಭೋಧಿಸಿದರು.  ಸಹಾಯಕ ಸರ್ಕಾರಿ ಅಭಿಯೋಜಕ ನಾಗರಾಜ್, ಪಿ. ರತ್ನಮ್ಮ, ವಕೀಲರ ಸಂಘದ ಅಧ್ಯಕ್ಷ ಉಮೇಶ್, ಪೌರಾಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ., ಗ್ರೇಡ್-2 ತಹಸೀಲ್ದಾರ್ ರಂಗಮ್ಮ, ಮಂಜಾನಾಯ್ಕ, ರಾಧಾಕೃಷ್ಣ ಭಟ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಜೀವನದಲ್ಲಿ ವಿದ್ಯೆಗೆ ಹೆಚ್ಚಿನ ಗೌರವ, ಮಹತ್ವ ಅರಿತುಕೊಳ್ಳಿ : ಬಿ.ಕೆ ಮೋಹನ್

ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಗುರುವಾರ ಆಯೋಜಿಸಲಾಗಿದ್ದ ೨೦೨೩-೨೪ನೇ ಸಾಲಿನ ಸಹ ಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಉದ್ಘಾಟಿಸಿದರು.
    ಭದ್ರಾವತಿ: ಜೀವನದಲ್ಲಿ ವಿದ್ಯೆಗೆ ಹೆಚ್ಚಿನ ಗೌರವವಿದ್ದು, ಮಕ್ಕಳು ಶಾಲಾ-ಕಾಲೇಜು ದಿನಗಳಲ್ಲಿಯೇ ವಿದ್ಯೆಯ ಮಹತ್ವ ತಿಳಿಯಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಬಹಳ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು.
    ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಗುರುವಾರ ಆಯೋಜಿಸಲಾಗಿದ್ದ ೨೦೨೩-೨೪ನೇ ಸಾಲಿನ ಸಹ ಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಲು ಬಸವಣ್ಣ ಮತ್ತು ಅಂಬೇಡ್ಕರ್ ಅವರ ಆದರ್ಶಗಳು ಅಗತ್ಯ. ಶಾಲಾ-ಕಾಲೇಜುಗಳಲ್ಲಿ ಸಣ್ಣ ಘಟನೆಗಳಿಗೂ ಅನಗತ್ಯವಾಗಿ ಚಳುವಳಿಗಳನ್ನು ನಡೆಸುವುದು ದುರಂತ ಸಂಗತಿ ಎಂದರು.
ಶಿವಮೊಗ್ಗದ ಡಾ. ಕಟೀಲ್ ಅಶೋಕ್ ಪೈ ಮೆಮೋರಿಯಲ್ ಕಾಲೇಜಿನ ಪ್ರಿನ್ಸಿಪಲ್ ಡಾ. ಸಂಧ್ಯಾ ಕಾವೇರಿ ಮಾತನಾಡಿ, ಶಿಕ್ಷಣ ಎಂದರೆ ಕೇವಲ ಪಠ್ಯವಲ್ಲ. ಜೀವನವನ್ನು ಸುಂದರವನ್ನಾಗಿಸುವ ಸಾಧನ. ಶಿಕ್ಷಣ ಸಂಸ್ಥೆಗಳ ದೊಡ್ಡ ಜವಾಬ್ದಾರಿ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವುದು ಎಂದರು.
    ಸರ್.ಎಂ.ವಿ ಕಾಲೇಜು ಸುಸಜ್ಜಿತವಾಗಿದ್ದು, ವಿದ್ಯಾರ್ಥಿಗಳು ಇದನ್ನು ಉತ್ತಮ ರೀತಿ ಬಳಸಿಕೊಳ್ಳಬೇಕು. ಪ್ರಸ್ತುತ ಇಂದಿನ ದಿನಗಳು ಸಂಶೋಧನೆಯ ಯುಗ, ಆಧುನಿಕತೆಯ ಯುಗವಾಗಿರುವುದರ ಜೊತೆಗೆ ಸಾಧನೆಯ ಯುಗವೂ ಆಗಿದೆ ಎಂಬುದನ್ನು ತಿಳಿಯಬೇಕಿದೆ ಎಂದರು.
    ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್, ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಣಿಶೇಖರ್, ಮುಖಂಡರಾದ ಎಸ್.ಎಸ್ ಭೈರಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮುಕುಂದಪ್ಪ, ಕಿರಣ್ ಬಾರಂದೂರು, ಸೈಯದ್ ಸರ್ಪರಾಜ್ ನವಾಜ್, ಪ್ರಮೋದ್, ಯಲ್ಲೋಜಿರಾವ್(ಬಾಬು), ನಂಜುಂಡಪ್ಪ, ಪಿ.ಕೆ ಹರೀಶ್, ಇಮ್ರಾನ್, ರಿಚರ್ಡ್, ಎಂ.ಎ ವೆಂಕಟೇಶ್, ಟಿ.ಆರ್ ಯೋಗೇಶಪ್ಪ, ಲೀಲಾವತಿ, ಗಂಗಾಧರ್, ಎಂ.ಜಿ ರಾಮಚಂದ್ರನ್, ಇಸ್ರೆಲ್, ವಿವಿಧ ವೇದಿಕೆಗಳ ಸಂಚಾಲಕರಾದ ಎಂ. ವೆಂಕಟೇಶ್, ಎಂ. ಮೊಹಮ್ಮದ್ ನಜೀಬ್, ಅಕ್ರಂಪಾಷ, ಆರ್. ವೆಂಕಟೇಶ್, ಡಾ. ಎಚ್.ಎಸ್ ಶಿವರುದ್ರಪ್ಪ, ಡಾ. ಎಸ್. ವರದರಾಜ, ಬಿ. ಗುರುಪ್ರಸಾದ್, ಡಾ. ಬಿ.ಜಿ ಅಕ್ಷತ, ಡಾ. ಟಿ.ಜಿ ಉಮಾ, ಕಾಲೇಜಿನ ಸಾಂಸ್ಕೃತಿಕ ವೇದಿಕೆ ವಿದ್ಯಾರ್ಥಿ ಪದಾಧಿಕಾರಿಗಳಾದ ವಿ. ಪ್ರೇಮ್ ಕುಮಾರ್, ಅಬ್ದುಲ್ ಹಸೀಬ್ ಖಾನ್, ಟಿ. ಶ್ಯಾಂ ಬಾಬು ಮತ್ತು ಆರ್. ಪುಷ್ಪಲತಾ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಕಾಲೇಜಿನ ಪ್ರಾಂಶುಪಾಲರಾದ ಡಾ.ಶೈಲಜಾ ಎಸ್ ಹೊಸಳ್ಳೇರ ಅಧ್ಯಕ್ಷತೆ ವಹಿಸಿದ್ದರು. ಶಾಯಿದ್ ಮತ್ತು ಸಂಗಡಿಗರು ನಾಡಗೀತೆ ಹಾಗು ವಚನಗಾಯನ ಹಾಡಿದರು. ಪ್ರೊ. ಎನ್. ರವಿ ಸ್ವಾಗತಿಸಿದರು.  ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಿ ಉತ್ತಮ ಸಾಧನೆ ಮಾಡಿರುವ ಕ್ರೀಡಾಪಟುಗಳು, ಸ್ಕೌಟ್ ಸದಸ್ಯರು ಹಾಗು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರೊ. ಶ್ರೀದೇವಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು.

ಯಾವುದೇ ಸರ್ಕಾರವಿದ್ದರೂ ಸೈದ್ದಾಂತಿಕವಾಗಿ ನಾನು ನೌಕರರ ಪರವಾಗಿರುತ್ತೇನೆ : ಪೂರ್ಣ ಪ್ರಮಾಣದ ರಾಜಕಾರಣಿ ಅಲ್ಲ, ಹೋರಾಟಗಾರ

ನೈರುತ್ಯ ಪದವೀಧರರ ಕ್ಷೇತ್ರ  ಕಾಂಗ್ರೆಸ್ ಪಕ್ಷದ ಸಂಭವನೀಯ ಅಭ್ಯರ್ಥಿ, ಮಾಜಿ ಸಂಸದ ಆಯನೂರು ಮಂಜುನಾಥ್

\

ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾಜಿ ಸಂಸದ ಆಯನೂರು ಮಂಜುನಾಥ್ ಮಾತನಾಡಿದರು.
    ಭದ್ರಾವತಿ: ಕಳೆದ 40 ವರ್ಷಗಳಿಂದ ನನ್ನನ್ನು ನಾನೇ ನೌಕರರ ಹಾಗೂ ಕಾರ್ಮಿಕರ ವರ್ಗಕ್ಕೆ ಮೀಸಲಿಟ್ಟುಕೊಂಡಿದ್ದು, ಯಾವುದೇ ಸರ್ಕಾರವಿದ್ದರೂ ಸೈದ್ದಾಂತಿಕವಾಗಿ ನಾನು ನೌಕರರ ಪರವಾಗಿರುತ್ತೇನೆ. ಪೂರ್ಣ ಪ್ರಮಾಣದ ರಾಜಕಾರಣಿ ಅಲ್ಲ, ಹೋರಾಟಗಾರ  ಎಂದು ನೈರುತ್ಯ ಪದವೀಧರರ ಕ್ಷೇತ್ರ  ಕಾಂಗ್ರೆಸ್ ಪಕ್ಷದ ಸಂಭವನೀಯ ಅಭ್ಯರ್ಥಿ, ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದರು.
      ಹಳೇನಗರದ ಪತ್ರಿಕಾಭವನದಲ್ಲಿ  ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿ ದಿನಗಳಿಂದಲೂ ಕಾರ್ಮಿಕ, ಶ್ರಮಿಕ, ನೌಕರರ ಮತ್ತು ಜನಸಾಮಾನ್ಯರ ಪರವಾಗಿ ಹಾಗೂ ಅನ್ಯಾಯಗಳ ವಿರುದ್ಧ ಸದಾ ಕಾಲ ಹಲವಾರು ಹೋರಾಟಗಳನ್ನು ಮಾಡುತ್ತಾ ಬಂದಿದ್ದೇನೆ. ಈ ಹಿಂದೆ ಶಾಸಕನಾಗಿ ಆಯ್ಕೆಯಾದಾಗ ಲಭಿಸಿದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸದನದ ಒಳಗೂ,  ಹೊರಗೂ ಶ್ರಮಿಕ ವರ್ಗದ ಪರವಾಗಿ ಧ್ವನಿಎತ್ತಿದ್ದೇನೆ ಎಂದರು.
       ನೌಕರರ, ಶಿಕ್ಷಕರ , ಅತಿಥಿ ಉಪನ್ಯಾಸಕರ, ಅತಿಥಿ ಶಿಕ್ಷಕರ ಹಾಗೂ ಬಡ್ತಿಯಿಂದ ಶಿಕ್ಷಕರಿಗೆ ಉಂಟಾದ ಸಮಸ್ಯೆ, ಸಿ ಅಂಡ್ ಆರ್ ಇತ್ಯಾದಿ ವಿಷಯಗಳು, ಆರೋಗ್ಯ ಇಲಾಖೆ ಎನ್.ಎಚ್.ಎಂ ನೌಕರರ, ಅರಣ್ಯ ಇಲಾಖೆ, ಪೌರ ಕಾರ್ಮಿಕರ ಸಮಸ್ಯೆ, ಕಾರ್ಖಾನೆಗಳ ಕಾರ್ಮಿಕರ ಬಗ್ಗೆ ಮತ್ತು ಪೊಲೀಸ್ ಇಲಾಖೆಯಲ್ಲಿ ಔರಾದ್ ಕರ್ ವರದಿಯಿಂದ ಉಂಟಾದ ವೇತನ ಹಾಗೂ ಭತ್ಯೆಯ ತಾರತಮ್ಯ, ಸೇವಾ ಜ್ಯೇಷ್ಠತೆ, ಕಡೆಗಣನೆಯ ವಿರುಧ್ದ ಕರ್ನಾಟಕ ರಾಜ್ಯದ ಪೊಲೀಸರ ಪರವಾಗಿ ಧ್ವನಿ ಎತ್ತಿ ಅವರ ಸಮಸ್ಯೆಯ ಬಗ್ಗೆ ಚರ್ಚಿಸಿ, ತಾರ್ಕಿಕ ಅಂತ್ಯ ಕಾಣಿಸುವ ಹೋರಾಟ ಮಾಡಿದ್ದೇನೆ ಎಂದು ವಿವರಿಸಿದರು.
      ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ, ಮಂಗಳೂರು ಜಿಲ್ಲೆ ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಒಟ್ಟು 30 ವಿಧಾನಸಭಾ ಹಾಗೂ 5 ಲೋಕಸಭಾ ಕ್ಷೇತ್ರದ ವ್ಯಾಪ್ತಿಯನ್ನು ಹೊಂದಿರುವ ನೈರುತ್ಯ ಪದವೀಧರ ಕ್ಷೇತ್ರದ ಮತದಾರರಾಗಿ ಹೆಸರನ್ನು ನೊಂದಾಯಿಸಿಕೊAಡಿರುವ ಮತದಾರರು ಮತದಾನದಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿಸಿದರು.      
      ಪದವೀಧರ ನೌಕರರು, ಸ್ವಯಂ ಉದ್ಯೋಗಿ ಮತ್ತು ನಿರುದ್ಯೋಗಿ ಪದವೀಧರರ ಪರವಾಗಿ ಸದನದಲ್ಲಿ ಧ್ವನಿಯಾಗಲು ಮತ್ತೊಮ್ಮೆ ನೈರುತ್ಯ ಪದವೀಧರರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಕ್ಷೇತ್ರ ವ್ಯಾಪ್ತಿಯ ಪದವೀಧರ ಮತದಾರರು ತಪ್ಪದೆ ಮತದಾನ ಮಾಡುವ ಮೂಲಕ ಅವಕಾಶ ನೀಡಿ, ಹರಸಬೇಕೆಂದು ಮನವಿ ಮಾಡಿದರು.
      ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡ ವೈ.ಎಚ್ ನಾಗರಾಜ್, ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್,  ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಮಾಜಿ ಉಪಾಧ್ಯಕ್ಷ ಚನ್ನಪ್ಪ, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಎಸ್. ಕುಮಾರ್,  ಜಿ.ಪಂ. ಸದಸ್ಯ ಎಸ್. ಮಣಿಶೇಖರ್ ಉಪಸ್ಥಿತರಿದ್ದರು.

Wednesday, January 24, 2024

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ವ್ಯಕ್ತಿ ನಾಪತ್ತೆ

ಗಂಗಪ್ಪ ಹತ್ತಿ
    ಭದ್ರಾವತಿ : ನಗರದ ಜನ್ನಾಪುರ ನಿವಾಸಿ ಗಂಗಪ್ಪ ಹತ್ತಿ(60) ಎಂಬುವರು ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಡಿ.9ರಂದು ನಾಪತ್ತೆಯಾಗಿದ್ದು, ಇದುವರೆಗೂ ಪತ್ತೆಯಾಗಿರುವುದಿಲ್ಲ. ಈ ಹಿನ್ನಲೆಯಲ್ಲಿ ಯಾರಿಗಾದರೂ ಇವರ ಸುಳಿವು ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಕೋರಲಾಗಿದೆ.
    4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋದಿ ಬಣ್ಣ, ಕೋಲುಮುಖ, ಬಿಳಿ ಮತ್ತು ಕಪ್ಪು ಬಣದ ಗಡ್ಡ ಹೊಂದಿರುತ್ತಾರೆ. ಕಾಣೆಯಾದಾಗ ತಲೆಯಲ್ಲಿ ಕೆಂಪು ಟೋಪಿ, ಬ್ರೌನ್ ಕಲರ್ ಶರ್ಟ್, ಗ್ರೇ ಕಲರ್ ಪ್ಯಾಂಟ್ ಧರಿಸಿರುತ್ತಾರೆ. ಮಾತನಾಡಲು ಬರುವುದಿಲ್ಲ. ಕೈ ಸನ್ನೆ ಮಾಡುತ್ತಾರೆ.
    ಡಿ.6ರಂದು ಯಾರಿಗೂ ಹೇಳದೆ ಗಂಗಪ್ಪ ಹತ್ತಿ ಅವರು ಮನೆ ಬಿಟ್ಟು ಹಾವೇರಿಗೆ ಸಂಬಂಧಿಕರ ಮನೆಗೆ ಹೋಗಿದ್ದು, ಶಿಕಾರಿಪುರದಲ್ಲಿ ವಾಸವಾಗಿರುವ ಇವರ ಪುತ್ರ ಬಸವರಾಜ ಅವರಿಗೆ ಸಂಬಂಧಿಕರು ಪೋನ್ ಮಾಡಿ ನಿಮ್ಮ ತಂದೆಯವರು ಹಾವೇರಿಯಲ್ಲಿದ್ದು, ಬಂದು ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಅದರಂತೆ ಶಿಕಾರಿಪುರದಿಂದ ಭದ್ರಾವತಿ ಕರೆದುಕೊಂಡು ಬರುವಾಗ ಡಿ.9ರಂದು ರಾತ್ರಿ 8 ಗಂಟೆ ಸಮಯದಲ್ಲಿ ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಕಾಣೆಯಾಗಿದ್ದಾರೆಂದು ಹುಡುಕಿ ಕೊಡುವಂತೆ ಡಿ.21ರಂದು ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಗೆ ಮನವಿ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮಹಿಳೆಯರಿಲ್ಲದ ಕ್ಷೇತ್ರವೇ ಇಲ್ಲವಾಗಿರುವುದು ಮಹಿಳೆಯರ ಸಾಮರ್ಥ್ಯಕ್ಕೆ ನಿದರ್ಶನ : ಕೆ. ನಾಗಮ್ಮ

ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಮಹಿಳಾ ಸೇವಾ ಸಮಾಜದ ಸಭಾಂಗಣದಲ್ಲಿ ಅಪರಂಜಿ ಅಭಿನಯ ಶಾಲೆ ಹಾಗು ಮಹಿಳಾ ಸೇವಾ ಸಮಾಜದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಮಹಿಳಾ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಪೇಪರ್‌ಟೌನ್ ಠಾಣಾ ನಿರೀಕ್ಷಕಿ ಕೆ. ನಾಗಮ್ಮ ಉದ್ಘಾಟಿಸಿದರು.
    ಭದ್ರಾವತಿ: ತೊಟ್ಟಿಲು ತೂಗುವ ಕೈಗಳು ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುತ್ತವೆ. ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವುದೇ ಸಾಕ್ಷಿ. ಮಹಿಳೆಯರಿಲ್ಲದ ಕ್ಷೇತ್ರವೇ ಇಲ್ಲವಾಗಿರುವುದು ಮಹಿಳೆಯರ ಸಾಮರ್ಥ್ಯಕ್ಕೆ ನಿದರ್ಶನವಾಗಿದೆ ಎಂದು ಪೇಪರ್‌ಟೌನ್ ಠಾಣಾ ನಿರೀಕ್ಷಕಿ ಕೆ. ನಾಗಮ್ಮ ತಿಳಿಸಿದರು.
    ಹಳೇನಗರದ ಬಸವೇಶ್ವರ ವೃತ್ತದಲ್ಲಿರುವ ಮಹಿಳಾ ಸೇವಾ ಸಮಾಜದ ಸಭಾಂಗಣದಲ್ಲಿ ಅಪರಂಜಿ ಅಭಿನಯ ಶಾಲೆ ಹಾಗು ಮಹಿಳಾ ಸೇವಾ ಸಮಾಜದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಮಹಿಳಾ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಪುರುಷರು ಮತ್ತು ಮಹಿಳೆಯರು ಪರಸ್ಪರ ಗೌರವದಿಂದ ನಡೆದಾಗ ಮಾತ್ರ ಸಾಮರಸ್ಯ ನೆಲೆಸುತ್ತದೆ. ಮಹಿಳಾ ಸೌಲಭ್ಯಗಳು ಏಳಿಗೆಗೆ ಕಾರಣವಾಗಬೇಕೆ ಹೊರತು ಸ್ವೇಚ್ಛಾಚಾರಕ್ಕೆ ಕಾರಣವಾಗಬಾರದು. ಮಹಿಳೆಯರನ್ನು ಒಗ್ಗೂಡಿಸುವುದು ಕಷ್ಟದ ಕೆಲಸ ಎಂದರು.
    ಮಹಿಳೆಯರಿಗೆ ಕಾನೂನು ತಿಳುವಳಿಕೆ ಮತ್ತು ಸ್ವರಕ್ಷಣೆಯ ವಿದ್ಯೆಗಳ ಕಲಿಕೆ ಮುಖ್ಯ. ಮಹಿಳೆಯರು ಸಂಘಟಿತರಾದರೆ ನಿಯಮಗಳ ಅರಿವು ಮೂಡಿಸಲು ಆರಕ್ಷಕ ಇಲಾಖೆ ನೆರವು ನೀಡುವುದಾಗಿ ತಿಳಿಸಿದರು.
    ಆಶಯ ನುಡಿಗಳನ್ನಾಡಿದ ಅಪರಂಜಿ ಅಭಿನಯ ಶಾಲೆಯ ಅಧ್ಯಕ್ಷ ಅಪರಂಜಿ ಶಿವರಾಜ್, ಹೆಣ್ಣು ಮಕ್ಕಳು ಸುಖ ಸಂತೋಷದಿಂದ ಇದ್ದರೆ ಅಂತಹ ಕುಟುಂಬವೂ ನೆಮ್ಮದಿಯಿಂದ ಇರುತ್ತದೆ. ಹೆಣ್ಣು ಮಕ್ಕಳ ಪ್ರತಿಭಾ ಪ್ರದರ್ಶನಕ್ಕೊಂದು ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಮಹಿಳಾ ಸಾಂಸ್ಕೃತಿಕ ವೈಭವ ಆಯೋಜಿಸಲಾಗಿದೆ ಎಂದರು.
    ಕಾರ್ಯಕ್ರಮದಲ್ಲಿ ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ ರಾವ್, ಪ್ರಧಾನ ಕಾರ್ಯದರ್ಶಿ ಶೋಭಾ ಗಂಗರಾಜ್, ಖಜಾಂಚಿ ಜಯಂತಿ ನಾಗರಾಜ ಶೇಟ್, ಅಪರಂಜಿ ಅಭಿನಯ ಶಾಲೆಯ ಉಪಾಧ್ಯಕ್ಷೆ ಅನುಸೂಯ ಎಂ., ಪ್ರಧಾನ ಕಾರ್ಯದರ್ಶಿ ಪುಷ್ಪಲತಾ ಸಿ.ಎಚ್. ಸೇರಿದಂತೆ ಹಲವರು ಹಾಜರಿದ್ದರು.
    ಕಮಲಕುಮಾರಿ, ಶೋಭಾ ಹಾಗು ಸಂಗಡಿಗರು ಪ್ರಾರ್ಥಿಸಿದರು. ನಂತರ ಹಲವು ಮಹಿಳಾ ತಂಡಗಳಿಂದ ಗಾಯನ ಹಾಗು ನೃತ್ಯ ಪ್ರದರ್ಶನ ನಡೆಯಿತು.

ಜೆಪಿಎಸ್ ಕಾಲೋನಿ ಸರ್ಕಾರಿ ಶಾಲಾ ಕೊಠಡಿ ಉದ್ಘಾಟನೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಜೆಪಿಎಸ್ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಕೊಠಡಿ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ ಉದ್ಘಾಟಿಸಿದರು.
    ಭದ್ರಾವತಿ : ನಗರಸಭೆ ವ್ಯಾಪ್ತಿಯ ಜೆಪಿಎಸ್ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಕೊಠಡಿ ಬುಧವಾರ ಶಾಸಕ ಬಿ.ಕೆ ಸಂಗಮೇಶ್ವರ ಉದ್ಘಾಟಿಸಿದರು.
    ಶಾಲೆಯ ಕೊಠಡಿ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ನೆಲಸಮಗೊಳಿಸಿ ಪಂಚಾಯಿತಿಯ ರಾಜ್ ಇಲಾಖೆಯಿಂದ ಬಿಡುಗಡೆಯಾದ ವಿವೇಕ ಶಾಲೆ ಅನುದಾನ ಸುಮಾರು 13.90 ಲಕ್ಷ ರು. ವೆಚ್ಚದಲ್ಲಿ ನೂತನ ಕೊಠಡಿ ನಿರ್ಮಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.
    ನಗರಸಭೆ ಸದಸ್ಯೆ ವಿಜಯ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಶಿಕ್ಷಣ ಸಂಯೋಜಕ ರವಿಕುಮಾರ್, ಸಿ.ಚನ್ನಪ್ಪ, ಮುಖಂಡರಾದ ಎಸ್. ಕುಮಾರ್,   ಜಯರಾಮ್, ಮಣಿ, ನಾಗರಾಜ್ ಸೇರಿದಂತೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಶಾಲೆಯ ಮುಖ್ಯೋಪಾಧ್ಯಾಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಭದ್ರಾವತಿ ನಗರಸಭೆ : 6199.47 ಲಕ್ಷ ಬಜೆಟ್ ಮಂಡನೆ ನಿರೀಕ್ಷೆ

   ಭದ್ರಾವತಿ: ನಗರಸಭೆ ಸ್ವಂತ ಆದಾಯಗಳಾದ ಸ್ವಯಂ ಘೋಷಿತ ಆಸ್ತಿ ತೆರಿಗೆ, ನೀರಿನ ತೆರಿಗೆ ಮತ್ತು ಇತರೆ
ಆದಾಯ ಹಾಗೂ ಸರ್ಕಾರದ ಅನುದಾನಗಳು ಸೇರಿ ಒಟ್ಟು 6199.47 ಲಕ್ಷಗಳು ನಿರೀಕ್ಷೆ ಇಟ್ಟುಕೊಂಡು  ನಗರದ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ 2024-25 ನೇ ಸಾಲಿನ ಬಜೆಟ್ ತಯಾರಿಸಬಹುದಾಗಿದೆ. ಸೂಕ್ತ ಸಲಹೆ ಸಹಕಾರ ನೀಡುವಂತೆ ನೂತನ ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್ ಕೋರಿದರು.
    ಅವರು ಬುಧವಾರ ನಡೆದ ಆಯ-ವ್ಯಯ(ಬಜೆಟ್) ಪೂರ್ವಭಾವಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು.
 ಇದಕ್ಕೂ ಮೊದಲು ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್ ಮಾಹಿತಿ ನೀಡಿದರು.
     ನಿರೀಕ್ಷಿತ ಆದಾಯದ ವಿವರಗಳು: 
  ಆಸ್ತಿ ತೆರಿಗೆ 725 ಲಕ್ಷ ರು., ನೀರಿನ ಶುಲ್ಕ 350 ಲಕ್ಷ ರು., ಬಾಡಿಗೆಗಳು 22.27 ಲಕ್ಷ ರು., ಉದ್ದಿಮೆ ಪರವಾನಿಗೆ 38.10 ಲಕ್ಷ ರು., ಅಭಿವೃದ್ಧಿ ಶುಲ್ಕ 75 ಲಕ್ಷ ರು., ವಾಹನ ಬಾಡಿಗೆ 15 ಲಕ್ಷ ರು. ಮತ್ತು ಇತರೆ (ಬ್ಯಾಂಕ್ ಬಡ್ಡಿ, ಸುಂಕ, ಸ್ಟಾಂಪ್ ಡ್ಯೂಟಿ ವಸೂಲಾತಿ ಆದಾಯಗಳು) 120.10 ಲಕ್ಷ ರು. ಸೇರಿದಂತೆ ಒಟ್ಟು ಸ್ವಂತ ಆದಾಯ 1345.47 ಲಕ್ಷ ರು. ಮತ್ತು ರಾಜ್ಯ ಸರ್ಕಾರದ ಅನುದಾನಗಳಾದ ಎಸ್.ಎಫ್.ಸಿ ಮುಕ್ತ ನಿಧಿ ಅನುದಾನ, ಎಸ್.ಎಫ್.ಸಿ ವೇತನ ಅನುದಾನ, ಎಸ್.ಎಫ್.ಸಿ ವಿದ್ಯುತ್ ಅನುದಾನ, ಎಸ್.ಎಫ್.ಸಿ ಕುಡಿಯುವ ನೀರು ಅನುದಾನ, ಎಸ್.ಎಫ್.ಸಿ ವಿಶೇಷ ಅನುದಾನ ಹಾಗು ಕೇಂದ್ರ ಸರ್ಕಾರದ ಅನುದಾನಗಳಾದ I5 ನೇ ಹಣಕಾಸು ಯೋಜನೆ ಅನುದಾನ, ಅಮೃತ್ ನಗರ ಯೋಜನೆ 2.0 ಅನುದಾನ, ನಲ್ಮ್ ಯೋಜನೆ ಅನುದಾನ, ಎಸ್.ಬಿ.ಎಂ. 2.0 ಯೋಜನೆ ಮತ್ತು 15 ನೇ ಹಣಕಾಸು ಅನುದಾನ (MPC Grant) ಸೇರಿದಂತೆ ಒಟ್ಟು ಸರ್ಕಾರದ ಅನುದಾನಗಳು 4854 ಲಕ್ಷ ರು. ಒಟ್ಟಾರೆ ಈ ಬಾರಿ 6199.47 ಲಕ್ಷ ರು. ಆದಾಯ ನಿರೀಕ್ಷಿಸಲಾಗಿದೆ ಎಂದರು.
       ನಿರೀಕ್ಷಿತ ಖರ್ಚುಗಳ ವಿವರಗಳು :
   ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆ 416 ಲಕ್ಷ ರು., ಚರಂಡಿಗಳ ಅಭಿವೃದ್ಧಿ ಮತ್ತು ನಿರ್ವಹಣೆ 334 ಲಕ್ಷ ರು., ಒಳಚರಂಡಿ ಕಾಮಗಾರಿ 558.92 ಲಕ್ಷ ರು., ಹೊರಗುತ್ತಿಗೆ ನೀರು ಸರಬರಾಜು ಸಿಬ್ಬಂದಿಗಳ ವೇತನ ಪಾವತಿ 215 ಲಕ್ಷ ರು., ನೈರ್ಮಲೀಕರಣ ಹೊರಗುತ್ತಿಗೆ/ ನೇರ ಪಾವತಿ  ಸಿಬ್ಬಂಧಿಗಳ ವೇತನ ಪಾವತಿ 562.18 ಲಕ್ಷ ರು., ಬೀದಿ ದೀಪಗಳ ನಿರ್ವಹಣೆ 120 ಲಕ್ಷ ರು., ನೀರು ಸರಬರಾಜು ನಿರ್ವಹಣೆ & ಅಭಿವೃದ್ಧಿ 374 ಲಕ್ಷ ರು., ಪ.ಜಾತಿ/ಪ.ಪಂಗಡ/ಇತರೆ 24.10% 7.25% 5% ಸಮುದಾಯದ ಅಭಿವೃದ್ಧಿಗಾಗಿ 108 ಲಕ್ಷ ರು., ನಲ್ಮ್ ಯೋಜನೆ ವೆಚ್ಚಗಳು 5 ಲಕ್ಷ ರು., ಸ್ವಚ್ಛ ಭಾರತ್ ಮಿಷನ್ ಕಾಮಗಾರಿಗಳು 50 ಲಕ್ಷ ರು., ವಿದ್ಯುತ್ ಬಿಲ್ ಪಾವತಿ 1287 ಲಕ್ಷ ರು., ಘನತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದ ಅಭಿವೃದ್ಧಿ ಕಾಮಗಾರಿ 250 ಲಕ್ಷ ರು., ಉದ್ಯಾನವನ ಮತ್ತು ಕೆರೆ ಅಭಿವೃದ್ಧಿ ಅಮೃತ್ ಯೋಜನೆ ಅಡಿಯಲ್ಲಿ 473.47 ಲಕ್ಷ ರು., ಖಾಯಂ ನೌಕರರ ವೇತನ 1086 ಲಕ್ಷ ರು., ವಾಹನಗಳ ದುರಸ್ಥಿ ಮತ್ತು ನಿರ್ವಹಣೆ ಹಾಗೂ ಇಂಧನ ಬಿಲ್ಲು 177 ಲಕ್ಷ ರು., ದಸರಾ ಆಚರಣೆ ಮತ್ತು ರಾಷ್ಟ್ರೀಯ ಹಬ್ಬಗಳು 40 ಲಕ್ಷ ರು. ಹಾಗು ಕಛೇರಿಯ ಇನ್ನಿತರೆ ವೆಚ್ಚಗಳು 142.90 ಲಕ್ಷ ರು. ಸೇರಿದಂತೆ ಒಟ್ಟು 6199.47 ಲಕ್ಷ ರು. ವೆಚ್ಚ ನಿರೀಕ್ಷಿಸಲಾಗಿದೆ ಎಂದರು.
    ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್ ಉಪಸ್ಥಿತರಿದ್ದರು. 
   ಹಳೇನಗರ ಮನೆ ಮಾಲೀಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಎಪಿಎಂಸಿ ಹಮಾಲಿಗರ ಸಂಘದ ಅಧ್ಯಕ್ಷ ಬಿ.ಎಸ್ ನಾರಾಯಣಪ್ಪ, ಅಂತೋಣಿ ವಿಲ್ಸನ್ ಸೇರಿದಂತೆ ಇನ್ನಿತರರು ಸಲಹೆ ಸೂಚನೆಗಳನ್ನು ನೀಡಿದರು.