Wednesday, December 18, 2024

ಡಿ.೨೧ರಂದು ಮೊದಲ ಬಾರಿಗೆ ವಿಶ್ವಧ್ಯಾನ ದಿನ

    ಭದ್ರಾವತಿ : ಆರ್ಟ್ ಆಫ್ ಲೀವಿಂಗ್ ಫೌಂಡೇಷನ್ ಶಿವಮೊಗ್ಗ ಶಾಖೆ ವತಿಯಿಂದ ಡಿ.೨೧ರಂದು ಮೊದಲ ಬಾರಿಗೆ ವಿಶ್ವಧ್ಯಾನ ದಿನ ಆಚರಣೆ ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಸಂಯೋಜನಾಧಿಕಾರಿ ಬಿ. ಮೂರ್ತಿ ಕೋರಿದ್ದಾರೆ. 
    ವಿಶ್ವಸಂಸ್ಥೆ ಇತ್ತೀಚೆಗೆ ಡಿ.೨೧ ವಿಶ್ವಧ್ಯಾನ ದಿನ ಎಂದು ಘೋಷಿಸಿದ್ದು, ಇದು ಭಾರತಕ್ಕೆ ಹೆಮ್ಮೆಯ ವಿಚಾರವಾಗಿದೆ. ಈ ಆಚರಣೆ ನಿರ್ಧಾರವು ಧ್ಯಾನದ ಶ್ರೀಮಂತ ಪರಂಪರೆಯನ್ನು ಆಚರಿಸುತ್ತದೆ ಮತ್ತು ಆಂತರಿಕ ಶಾಂತಿ ಮತ್ತು ಯೋಗಕ್ಷೇಮ ಉತ್ತೇಜಿಸುವ ಪ್ರಾಚೀನ ಅಭ್ಯಾಸಗಳ ಜಾಗತಿಕ ಮನ್ನಣೆಯೊಂದಿಗೆ ಹೊಂದಿಕೆಯಾಗುತ್ತದೆ. ವಿಶ್ವ ಸಂಸ್ಥೆಯು ಆರ್ಟ್ ಆಫ್ ಲಿವಿಂಗ್ ಫೌಂಡೇಷನ್ ಸಂಸ್ಥಾಪಕರಾದ ಆಧ್ಯಾತ್ಮಿಕ ನಾಯಕ ಮತ್ತು ಮಾನವತವಾದಿ ಶ್ರೀ ರವಿಶಂಕರ್ ಗುರೂಜಿಯವರ ನೇತೃತ್ವದಲ್ಲಿ ಪ್ರಪ್ರಥಮ ವಿಶ್ವಧ್ಯಾನ ದಿನ ಆಚರಿಸಲು ತಿರ್ಮಾನಿಸಿರುವುದು ಭಾರತೀಯರಾದ ನಾವುಗಳು ಹೆಮ್ಮೆಪಡುವ ವಿಚಾರವಾಗಿದೆ. 
    ಶ್ರೀ ರವಿಶಂಕರ್ ಗುರೂಜಿಯವರು ಡಿ.೨೧ರಂದು ಯೂಟ್ಯೂಬ್‌ನಲ್ಲಿ ರಾತ್ರಿ ೮ ಗಂಟೆಯಿಂದ ನೇರ ವಿಶ್ವಧ್ಯಾನದ ಅವಧಿಯನ್ನು ಮುನ್ನಡೆಸಲಿದ್ದಾರೆ. ಆಸಕ್ತರು ನೇರಪ್ರಸಾರದಲ್ಲಿ ಭಾಗವಹಿಸಿ ಧ್ಯಾನ್ಯದ ಪರಿವರ್ತಕ ಶಕ್ತಿಯನ್ನು ಅನುಭವಿಸಬಹುದಾಗಿದೆ. ಡಿ.೨೧ರಂದು ತಾಲೂಕಿನ ಬಿಆರ್‌ಪಿ, ಸುದರ್ಶನ ಕ್ರಿಯೆ ಉಗಮಸ್ಥನದಲ್ಲಿ ಬೆಳಿಗ್ಗೆ ೭ ಗಂಟೆಯಿಂದ ೮ ಗಂಟೆವರೆಗೆ ಹಾಗು ಶಿವಮೊಗ್ಗ ನವುಲೆ, ನವನಗರ, ಆರ್ಟ್ ಆಫ್ ಲಿವಿಂಗ್ ಜ್ಞಾನಕ್ಷೇತ್ರದಲ್ಲಿ ರಾತ್ರಿ ೮ಕ್ಕೆ ವಿಶ್ವಧ್ಯಾನ ದಿನ ಆಯೋಜಿಸಲಾಗಿದೆ. ಆಸಕ್ತರು ಇದರ ಸದುಪಯೋಗಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊ: ೮೪೩೧೩೪೩೭೬೦ ಅಥವಾ ೭೦೧೯೨೦೭೨೧೨ ಸಂಖ್ಯೆ ಸಂಪರ್ಕಿಸಬಹುದಾಗಿದೆ.  

ಸ್ತನ ಕ್ಯಾನ್ಸರ್, ಉಚಿತ ಮ್ಯಾಮೊಗ್ರಾಫಿ ತಪಾಸಣಾ ಶಿಬಿರ

ವಂದೇ ಮಾತರಂ ಟ್ರಸ್ಟ್  ಹಾಗು ರೋಟರಿ ಸಮುದಾಯ ದಳ ವತಿಯಿಂದ ನಾರಾಯಣ ಹೃದಯಾಲಯ ಆಸ್ಪತ್ರೆ ಸಹಯೋಗದೊಂದಿಗೆ ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದ ಆವರಣದಲ್ಲಿ ಸ್ತನ  ಕ್ಯಾನ್ಸರ್(ಬ್ರೆಸ್ಟ್ ಕ್ಯಾನ್ಸರ್) ತಪಾಸಣಾ ಶಿಬಿರ ಹಾಗೂ ಉಚಿತ ಮ್ಯಾಮೊಗ್ರಾಫಿ ತಪಾಸಣಾ ಶಿಬಿರ  ಆಯೋಜಿಸಲಾಗಿತ್ತು. 
    ಭದ್ರಾವತಿ : ವಂದೇ ಮಾತರಂ ಟ್ರಸ್ಟ್  ಹಾಗು ರೋಟರಿ ಸಮುದಾಯ ದಳ ವತಿಯಿಂದ ನಾರಾಯಣ ಹೃದಯಾಲಯ ಆಸ್ಪತ್ರೆ ಸಹಯೋಗದೊಂದಿಗೆ ತಾಲೂಕಿನ ಬಾರಂದೂರು ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದ ಆವರಣದಲ್ಲಿ ಸ್ತನ ಕ್ಯಾನ್ಸರ್(ಬ್ರೆಸ್ಟ್ ಕ್ಯಾನ್ಸರ್) ತಪಾಸಣಾ ಶಿಬಿರ ಹಾಗೂ ಉಚಿತ ಮ್ಯಾಮೊಗ್ರಾಫಿ ತಪಾಸಣಾ ಶಿಬಿರ  ಆಯೋಜಿಸಲಾಗಿತ್ತು. 
    ಬಾರಂದೂರು, ಹಳ್ಳಿಕೆರೆ, ಕಾರೆಹಳ್ಳಿ, ಕೆಂಚೇನಹಳ್ಳಿ, ಕೆಂಪೇಗೌಡ ನಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಸುಮಾರು ೫೫ ಮಹಿಳೆಯರು ಪಾಲ್ಗೊಂಡು ಶಿಬಿರದ ಸದುಪಯೋಗಪಡೆದುಕೊಂಡರು. ತಪಾಸಣೆ ಮಾಡಿಸಿಕೊಂಡ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರಿಗೆ ಆಸ್ಪತ್ರೆಗೆ ಬಂದು ಸಂಬಂಧಿತ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳುವಂತೆ ಸಲಹೆ ನೀಡಲಾಯಿತು. 
ನಾರಾಯಣ ಹೃದಯಾಲಯ ಆಸ್ಪತ್ರೆ ಮಾರ್ಕೆಟಿಂಗ್ ವಿಭಾಗದ ಎಸ್. ಗಣೇಶ್ ಮಾತನಾಡಿ, ಬಿಪಿಎಲ್ ಕಾರ್ಡ್ ಹೊಂದಿರುವವರು ಉಚಿತವಾಗಿ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂಬ ಮಾಹಿತಿ ನೀಡಿದರು.
     ಅವರ ಸಹಯೋಗದೊಂದಿಗೆ  ನೇತೃತ್ವದಲ್ಲಿ   ಲಕ್ಷ್ಮಿ ವೆಂಕಟೇಶ್ವರ ದೇವಾಲಯದ ಆವರಣದಲ್ಲಿ ಬೆಳಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೩ ಗಂಟೆವರೆಗೆ ಉಚಿತ ಆರೋಗ್ಯ ತಪಾಸಣೆ  ಹಮ್ಮಿಕೊಳ್ಳಲಾಯಿತು.
     ರೋಟರಿ ಸಮುದಾಯ ದಳ ಅಧ್ಯಕ್ಷ ಬಿ.ಎ ಪ್ರಸನ್ನ ಕುಮಾರ್ ಬಾರಂದೂರು, ವಂದೇ ಮಾತರಂ ಟ್ರಸ್ಟಸ್ ಕಾರ್ಯದರ್ಶಿ ಆರ್.ಎಸ್ ಕಾರ್ತಿಕ್, ವೈದ್ಯೆ ಡಾ. ಪ್ರೀತಿ, ಟೆಕ್ನಿಷಿಯನ್ ಅರ್ಪಿತ, ರೋಟರಿ ಅಧ್ಯಕ್ಷ ರಾಘವೇಂದ್ರ ಉಪಾಧ್ಯಾಯ, ರಾಧ ಪ್ರಸನ್ನಕುಮಾರ್, ಮಮತಾ, ಕವಿತಾರಾವ್, ಜಯಲಕ್ಷ್ಮಿ, ರಾಣಿ, ಚಂದ್ರಮ್ಮ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸೈಲ್-ವಿಐಎಸ್‌ಎಲ್‌ನಲ್ಲಿ ಪರಿಸರ ಮಾಸಾಚರಣೆ ಸಮಾರೋಪ ಸಮಾರಂಭ

ತ್ಯಾಜ್ಯ ವೈಜ್ಞಾನಿಕವಾಗಿ ಬೇರ್ಪಡಿಸಿ ವಿಲೇವಾರಿ ಮಾಡಿ ಪರಿಸರ ರಕ್ಷಿಸಿ : ವಿ. ರಮೇಶ್ 

ಭದ್ರಾವತಿ ನ್ಯೂಟೌನ್ ಭದ್ರಾ ಅತಿಥಿಗೃಹದಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ  ಹಮ್ಮಿಕೊಳ್ಳಲಾಗಿದ್ದ ಪರಿಸರ ಮಾಸಾಚರಣೆ-೨೦೨೪ರ ಸಮಾರೋಪ ಸಮಾರಂಭ ಶಿವಮೊಗ್ಗ ಕೆ.ಎಸ್.ಪಿ.ಸಿ.ಬಿ ಪ್ರಾದೇಶಿಕ ಕಛೇರಿ ಪರಿಸರ ಅಧಿಕಾರಿ ವಿ. ರಮೇಶ್ ಉದ್ಘಾಟಿಸಿ ಮಾತನಾಡಿದರು. 
    ಭದ್ರಾವತಿ: ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವೈಜ್ಞಾನಿಕವಾಗಿ ಬೇರ್ಪಡಿಸಿ ಮತ್ತು ವಿಲೇವಾರಿ ಮಾಡುವ ಮೂಲಕ ನಮ್ಮ ಪರಿಸರವನ್ನು ರಕ್ಷಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕೆಂದು ಶಿವಮೊಗ್ಗ ಕೆ.ಎಸ್.ಪಿ.ಸಿ.ಬಿ ಪ್ರಾದೇಶಿಕ ಕಛೇರಿ ಪರಿಸರ ಅಧಿಕಾರಿ ವಿ. ರಮೇಶ್ ಮನವಿ ಮಾಡಿದರು.
    ಅವರು ನಗರದ ನ್ಯೂಟೌನ್ ಭದ್ರಾ ಅತಿಥಿಗೃಹದಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ  ಹಮ್ಮಿಕೊಳ್ಳಲಾಗಿದ್ದ ಪರಿಸರ ಮಾಸಾಚರಣೆ-೨೦೨೪ರ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 
    ಪ್ರಸ್ತುತ ಸಂದರ್ಭದಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದು ದೊಡ್ಡ ಸವಾಲಾಗಿದ್ದು, ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿಯಾಗದ ಹಿನ್ನಲೆಯಲ್ಲಿ ಸಾಕಷ್ಟು ಸಮಸ್ಯೆಗಳು ಉಲ್ಬಣವಾಗುತ್ತಿವೆ. ಈ ಹಿನ್ನಲೆಯಲ್ಲಿ ನಾವೆಲ್ಲರೂ ಜಾಗೃತಗೊಂಡು ಮೂಲ ಹಂತದಲ್ಲಿಯೇ ತ್ಯಾಜ್ಯ ವೈಜ್ಞಾನಿಕವಾಗಿ ಬೇರ್ಪಡಿಸಿ ವಿಲೇವಾರಿ ಮಾಡಬೇಕೆಂದರು. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹೆಚ್ಚಾಗಿ ಸಸಿಗಳನ್ನು ನೆಡುವ ಮೂಲಕ ಅವುಗಳನ್ನು ಪೋಷಿಸಿ ಸಂರಕ್ಷಣೆ ಮಾಡುವ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಕೋರಿದರು. 
    ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಪ್ರತಿಯೊಬ್ಬ ವ್ಯಕ್ತಿ ಒಂದು ಗಿಡವನ್ನು ನೆಟ್ಟು ರಕ್ಷಿಸುವ ಪ್ರತಿಜ್ಞೆ ಮಾಡಿದರೆ ೧೪೦ ಕೋಟಿ ಗಿಡಗಳನ್ನು ನೆಡಬಹುದು. ಇದು ಭವಿಷ್ಯದಲ್ಲಿ ಮಾಲಿನ್ಯ ತೊಡೆದುಹಾಕಲು ಮತ್ತು ಪರಿಸರ ಸಮಸ್ಯೆಗಳನ್ನು ತಗ್ಗಿಸಲು ನೆರವಾಗುತ್ತದೆ ಎಂದರು.
ಮುಖ್ಯ ಮಹಾಪ್ರಬಂಧಕ (ಸ್ಥಾವರ) ಕೆ.ಎಸ್. ಸುರೇಶ್, ಮಹಾಪ್ರಬಂಧಕ (ಪರಿಸರ ನಿರ್ವಹಣೆ ವಿಭಾಗ ಮತ್ತು ಸಿವಿಲ್ ಇಂಜಿನಿಯರಿಂಗ್) ಮುತ್ತಣ್ಣ ಸುಬ್ಬರಾವ್, ಕಾರ್ಖಾನೆ ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರಾ, ಉಪ ಪರಿಸರ ಅಧಿಕಾರಿ ಕೆ. ಶಿಲ್ಪಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಬಂಧ ಬರೆಯುವುದು, ಪರಿಸರ ರಸಪ್ರಶ್ನೆ ಮತ್ತು ಘೋಷವಾಕ್ಯ ಬರೆಯುವ ಸ್ಪರ್ಧೆಗಳನ್ನು ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಮತ್ತು ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
    ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಎಲ್ಲರಿಗೂ ಸಸಿಗಳನ್ನು ವಿತರಿಸಲಾಯಿತು. ಅಲ್ಲದೆ ಪರಿಸರ ಮತ್ತು ಪ್ರಕೃತಿ ಕುರಿತಾದ ಮೊದಲ ದಿನದ ಕವರ್‌ಗಳು ಮತ್ತು ಮಿನಿಯೇಚರ್ ಸ್ಟ್ಯಾಂಪ್‌ಗಳ ಪ್ರದರ್ಶನ ಆಯೋಜಿಸಲಾಗಿತ್ತು. 
    ಪ್ರಕೃತಿ ಕುರಿತಾದ ಹಾಡು ಮತ್ತು ಪ್ರಾರ್ಥನೆ ಗೀತೆ ತ್ರಿವೇಣಿ ಮತ್ತು ಮಂಜುಶ್ರೀ ಸುಶ್ರಾವ್ಯವಾಗಿ ಹಾಡಿದರು.  ಸಹಾಯಕ ಮಹಾಪ್ರಬಂಧಕರು (ಪರಿಸರ ಇಲಾಖೆ) ವಿಕಾಸ್ ಬಸೇರ್,ಕಾರ್ಯಕ್ರಮ ನಿರೂಪಿಸಿದರು. ಕಿರಿಯ ಪ್ರಬಂಧಕ (ನಗರಾಡಳಿತ) ಜಿ.ಎಚ್. ನಂದನ ವಂದಿಸಿದರು.

Tuesday, December 17, 2024

ಗುತ್ತಿಗೆದಾರ ಆರ್. ಶ್ರೀನಿಧಿ ನಿಧನ


ಆರ್. ಶ್ರೀನಿಧಿ 
    ಭದ್ರಾವತಿ: ನಗರಸಭೆ ವ್ಯಾಪ್ತಿಯ ಸಿದ್ಧಾರೂಢ ನಗರದ ನಿವಾಸಿ, ಗುತ್ತಿಗೆದಾರ ಆರ್. ಶ್ರೀನಿಧಿ(೩೪) ಮಂಗಳವಾರ ರಾತ್ರಿ ಅನಾರೋಗ್ಯದಿಂದ ನಿಧನ ಹೊಂದಿದರು. 
    ತಂದೆ, ತಾಯಿ, ಪತ್ನಿ, ಪುತ್ರಿ ಹಾಗು ಸಹೋದರ ನಗರಸಭೆ ಸದಸ್ಯ ಆರ್. ಶ್ರೇಯಸ್(ಚಿಟ್ಟೆ) ಇದ್ದಾರೆ. ಇವರ ಅಂತ್ಯಕ್ರಿಯೆ ಬುಧವಾರ ತಾಲೂಕಿನ ಬಾಬಳ್ಳಿಯಲ್ಲಿರುವ ಇವರ ತೋಟದಲ್ಲಿ ನೆರವೇರಿತು. 
    ಶ್ರೀನಿಧಿಯವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಕುಟುಂಬ ವರ್ಗದವರು, ತಾಲೂಕು ಕುರುಬ ಸಮಾಜದ ಪ್ರಮುಖರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಹಾಗು ಗಣ್ಯರು ಸಂತಾಪ ಸೂಚಿಸಿದ್ದಾರೆ.  

ಎಸ್. ವಂದನಾಗೆ ಅತ್ಯುತ್ತಮ ಕ್ರೀಡಾ ಪಟು ಪ್ರಶಸ್ತಿ

ಭದ್ರಾವತಿ ನಗರದ ಹೊಸಮನೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿ.ಎ ವಿದ್ಯಾರ್ಥಿನಿ ಎಸ್. ವಂದನಾ ಶಿವಮೊಗ್ಗದಲ್ಲಿ ಜರುಗಿದ ೩೭ನೇ ಕುವೆಂಪು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಕ್ರೀಡಾ ಕೂಟದಲ್ಲಿ ಭಾಗವಹಿಸಿ ಕ್ರೀಡಾಕೂಟದ ಅತ್ಯುತ್ತಮ ಕ್ರೀಡಾ ಪಟು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. 
    ಭದ್ರಾವತಿ: ನಗರದ ಹೊಸಮನೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿ.ಎ ವಿದ್ಯಾರ್ಥಿನಿ ಎಸ್. ವಂದನಾ ಶಿವಮೊಗ್ಗದಲ್ಲಿ ಜರುಗಿದ ೩೭ನೇ ಕುವೆಂಪು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಕ್ರೀಡಾ ಕೂಟದಲ್ಲಿ ಭಾಗವಹಿಸಿ ಕ್ರೀಡಾಕೂಟದ ಅತ್ಯುತ್ತಮ ಕ್ರೀಡಾ ಪಟು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. 
    ವಂದನಾ ೧೦೦ ಮೀ. ಮತ್ತು ೨೦೦ ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದು, ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಸಕಲೇಶ್,  ಐಕ್ಯೂಎಸಿ ಸಂಚಾಲಕ ಡಾ. ಪ್ರಸನ್ನ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಎ. ಪ್ರವೀಣ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗದವರು, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ವಿದ್ಯಾರ್ಥಿನಿ ಎಸ್. ವಂದನಾರನ್ನು ಅಭಿನಂದಿಸಿದ್ದಾರೆ.  

ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳೇ ದಲಿತರ ಉದ್ಧಾರಕ್ಕೆ ಮಾರ್ಗ ಸೂಚಿಗಳು : ಶಿವಬಸಪ್ಪ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ದಲಿತ ನೌಕರರ ಒಕ್ಕೂಟ ತಾಲೂಕು ಶಾಖೆ ವತಿಯಿಂದ ಭದ್ರಾವತಿ ನಗರದ ಮಿಲ್ಟಿಕ್ಯಾಂಪ್ ಪ್ರೊ. ಬಿ. ಕೃಷ್ಣಪ್ಪ ವೃತ್ತದ ಸಮೀಪದಲ್ಲಿರುವ ಲೋಕೋಪಯೋಗಿ ಇಲಾಖೆ ಅತಿಥಿಗೃಹದಲ್ಲಿ  ಡಾ. ಬಿ.ಆರ್ ಅಂಬೇಡ್ಕರ್ ಅವರ ೬೮ನೇ ಮಹಾ ಪರಿನಿರ್ವಾಣ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ: `ವೇದ, ಉಪನಿಷತ್ತು, ಶಾಸ್ತ್ರ, ಪುರಾಣಗಳಿಂದ ದಲಿತರು ಕಲಿಯಬೇಕಾಗಿದ್ದು ಏನು ಇಲ್ಲ. ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳೇ ದಲಿತರ ಉದ್ಧಾರಕ್ಕೆ ಮಾರ್ಗ ಸೂಚಿಗಳು' ಎಂದು ನಿವೃತ್ತ ಪ್ರಾಂಶುಪಾಲ ಶಿವಬಸಪ್ಪ ಹೇಳಿದರು. 
    ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಕರ್ನಾಟಕ ದಲಿತ ನೌಕರರ ಒಕ್ಕೂಟ ತಾಲೂಕು ಶಾಖೆ ವತಿಯಿಂದ ನಗರದ ಮಿಲ್ಟಿಕ್ಯಾಂಪ್ ಪ್ರೊ. ಬಿ. ಕೃಷ್ಣಪ್ಪ ವೃತ್ತದ ಸಮೀಪದಲ್ಲಿರುವ ಲೋಕೋಪಯೋಗಿ ಇಲಾಖೆ ಅತಿಥಿಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್ ಅಂಬೇಡ್ಕರ್ ಅವರ ೬೮ನೇ ಮಹಾ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
    ಹಿಂದೂ ಧರ್ಮದ ಒಡಲಾಳದಲ್ಲಿ ಸಾವಿರಾರು ವರ್ಷಗಳಿಂದ ಹುದುಗಿದ್ದ ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ಹಾಗೂ ವರ್ಣವ್ಯವಸ್ಥೆಯಿಂದಾಗಿ ಭಾರತ ವಿಶ್ವದ ಮುಂದೆ ತಲೆತಗ್ಗಿಸುವಂತಾಗಿತ್ತು. ಆದರೆ ಅಂಬೇಡ್ಕರ್ ಅವರ ಸಂವಿಧಾನದ ಜಾರಿಯಿಂದಾಗಿ ಸ್ವಾತಂತ್ರ್ಯ, ಸಮಾನತೆಗಳಿಂದ ಕೂಡಿದ ಜಾತ್ಯಾತೀತ ರಾಷ್ಟ್ರವಾಗಿ ಭಾರತ ಹೊರಹೊಮ್ಮಲು ಕಾರಣವಾಯಿತು ಎಂದರು.
    ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ಮೇಲು ಕೀಳುಗಳಿಂದಾಗಿ ಹಿಂದೂ ಧರ್ಮ ತೊರೆದ ಅಂಬೇಡ್ಕರ್ ಅವರು ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತೆಗಳಿಂದ ಕೂಡಿದ ಬೌದ್ಧ ಧರ್ಮವನ್ನು ಸ್ವೀಕರಿಸಿದರು ಎಂದರು.  
    ಜಿಲ್ಲಾ ಸಂಚಾಲಕ ಎಂ.ಏಳುಕೋಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಕರ್ನಾಟಕದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಆರ್. ತಮ್ಮಯ್ಯ, ಗ್ರಾಮಾಂತರ ಜಿಲ್ಲಾ ಸಂಘಟನಾ ಸಂಚಾಲಕ ಬಿ. ಕೃಷ್ಣಪ್ಪ, ತಾಲೂಕು ಸಂಚಾಲಕ ಕಾಚಗೊಂಡನಹಳ್ಳಿ ನಾಗರಾಜ್, ತಾಲೂಕು ದಲಿತ ನೌಕರರ ಒಕ್ಕೂಟದ ತಾಲೂಕು ಸಂಚಾಲಕ ಲಿಂಗರಾಜು, ಕಾರ್ಯದರ್ಶಿ ಚನ್ನಪ್ಪ, ದಸಂಸ ಹಿರಿಯ ಮುಖಂಡ ಮುತ್ತು, ಸಿರಿಯೂರು ಜಯಣ್ಣ, ಪ್ರೌಢಶಾಲಾ ನಿವೃತ್ತ ಶಿಕ್ಷಕ ಬೊಮ್ಮೇನಹಳ್ಳಿ ಶ್ರೀನಿವಾಸ್, ಎಸ್.ಜೆ.ಎಂ ಕಾಲೇಜಿನ ಕಡದಕಟ್ಟೆ ರಾಜಶೇಖರ್, ಶಿಕ್ಷಕ  ನರಸಿಂಹಮೂರ್ತಿ, ಮಾಚೇನಹಳ್ಳಿ ಮಲ್ನಾಡ್ ಕಂಪನಿಯ ಉದ್ಯೋಗಿ ಶಿವಣ್ಣ ಮತ್ತು ತಾಲೂಕು ದಸಂಸ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ತಾಲೂಕು ಸಂಚಾಲಕ ಕಾಂಚಗೊಂಡನಹಳ್ಳಿ ನಾಗರಾಜ್ ಸ್ವಾಗತಿಸಿದರು. ಎಸ್ ಮುತ್ತು  ವಂದಿಸಿದರು. 

ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಮಕ್ಕಳಿಂದ ಸಂಭ್ರಮಾಚರಣೆ

ಭದ್ರಾವತಿ ಹಳೇನಗರ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದ ವತಿಯಿಂದ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಭ್ರಮಾರಣೆ ನಡೆಸಲಾಯಿತು. 
    ಭದ್ರಾವತಿ :  ಹಳೇನಗರ ಗಾಂಧಿನಗರದ ವೇಳಾಂಗಣಿ ಆರೋಗ್ಯ ಮಾತೆ ದೇವಾಲಯದ ವತಿಯಿಂದ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಭ್ರಮಾರಣೆ ನಡೆಸಲಾಯಿತು. 
    ಸಂತ ಕ್ಲಾತ್ ವೇಷ ಧರಿಸಿದ ಮಕ್ಕಳು, ಮಹಿಳೆಯರು ಕೈಯಲ್ಲಿ ಬಾಲ ಯೇಸುವಿನ ಪ್ರತಿಮೆಯನ್ನು ಎತ್ತಿಕೊಂಡು ಕ್ಯಾರೋಲ್ಸ್ ಗೀತೆಗಳನ್ನು ಹಾಡುತ್ತಾ, ಸಿಹಿ ಹಂಚುತ್ತಾ, ಹಬ್ಬದ ಶುಭಾಶಯಗಳನ್ನು ಕೋರುತ್ತಾ ನಗರದ ಮುಖ್ಯ ಬೀದಿಗಳಲ್ಲಿ ಸಂಭ್ರಮಿಸಿದರು.
    ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ನಗರದೆಲ್ಲೆಡೆ ಕ್ರೈಸ್ತ ಸಮುದಾಯದವರು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು, ಹಬ್ಬದ ದಿನದಂದು ಸಂಭ್ರಮ ಮತ್ತಷ್ಟು ಹೆಚ್ಚಾಗಲಿದೆ.