Friday, December 20, 2024

ಬಾಯ್ಲರ್ ಸ್ಪೋಟ ಪ್ರಕರಣ : ಅಪರೇಟರ್ ಸಾವು

ಭದ್ರಾವತಿ ನಗರಸಭೆ ವಾರ್ಡ್ ನಂ.೧೨ರ ಎನ್.ಎಂ.ಸಿ ಎಡಭಾಗ ೭ನೇ ಕ್ರಾಸ್ ಮುತ್ತು ಮಾರಿಯಮ್ಮ ದೇವಸ್ಥಾನ ರಸ್ತೆಯಲ್ಲಿರುವ ಗಣೇಶ್ ರೈಸ್ ಮಿಲ್‌ನಲ್ಲಿ ಗುರುವಾರ ಸಂಜೆ ನಡೆದ ಬಾಯ್ಲರ್ ಸ್ಪೋಟ ಪ್ರಕರಣದಲ್ಲಿ ರೈಸ್ ಮಿಲ್ ಬಾಯ್ಲರ್ ಆಪರೇಟರ್, ಹೊಸಮನೆ ನಿವಾಸಿ ರಘುನಾಥ್ ರಾವ್ ಸಾಳಂಕೆ(೪೮) ಮೃತಪಟ್ಟಿದ್ದಾರೆ. 
    ಭದ್ರಾವತಿ: ನಗರಸಭೆ ವಾರ್ಡ್ ನಂ.೧೨ರ ಎನ್.ಎಂ.ಸಿ ಎಡಭಾಗ ೭ನೇ ಕ್ರಾಸ್ ಮುತ್ತು ಮಾರಿಯಮ್ಮ ದೇವಸ್ಥಾನ ರಸ್ತೆಯಲ್ಲಿರುವ ಗಣೇಶ್ ರೈಸ್ ಮಿಲ್‌ನಲ್ಲಿ ಗುರುವಾರ ಸಂಜೆ ನಡೆದ ಬಾಯ್ಲರ್ ಸ್ಪೋಟ ಪ್ರಕರಣದಲ್ಲಿ ರೈಸ್ ಮಿಲ್ ಬಾಯ್ಲರ್ ಆಪರೇಟರ್, ಹೊಸಮನೆ ನಿವಾಸಿ ರಘುನಾಥ್ ರಾವ್ ಸಾಳಂಕೆ(೪೮) ಮೃತಪಟ್ಟಿದ್ದಾರೆ. 
    ಪತ್ನಿ, ಓರ್ವ ಪುತ್ರ ಹಾಗು ಓರ್ವ ಪುತ್ರಿ ಇದ್ದಾರೆ. ಬಾಯ್ಲರ್ ಸ್ಪೋಟಗೊಂಡ ಸಂದರ್ಭದಲ್ಲಿ ರಘುನಾಥ್ ರಾವ್ ಸಾಳಂಕೆ ಕಣ್ಮರೆಯಾಗಿದ್ದರು. ಇವರ ಪತ್ತೆಗಾಗಿ ತೀವ್ರ ಶೋಧ ಕಾರ್ಯ ಕೈಗೊಂಡಿದ್ದು, ಮಧ್ಯ ರಾತ್ರಿ ಸುಮಾರು ೧.೩೦ರ ಸಮಯದಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ದೇಹ ಗುರುತಿಸಲಾಗದಷ್ಟು ಸ್ಥಿತಿಯಲ್ಲಿ ಸಿಕ್ಕಿದ್ದು, ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಶವಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. 
    ಕ್ಷತ್ರಿಯ ಮರಾಠ ಸೇವಾ ಸಂಘ ಸಂತಾಪ : 
    ರಘುನಾಥ್ ರಾವ್ ಸಾಳಂಕೆ ನಿಧನಕ್ಕೆ ಕ್ಷತ್ರಿಯ ಮರಾಠ ಸೇವಾ ಸಂಘ ಸಂತಾಪ ಸೂಚಿಸಿದ್ದು, ಸಿ.ಎನ್ ರಸ್ತೆಯಲ್ಲಿರುವ ಸಂಘದ ಕಛೇರಿಯಲ್ಲಿ ಬೆಳಿಗ್ಗೆ ಸಂಘದ ಅಧ್ಯಕ್ಷ ಎಚ್.ಆರ್ ಲೋಕೇಶ್ವರ್ ರಾವ್ ಅಧ್ಯಕ್ಷತೆಯಲ್ಲಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು ಹಾಗು ಮರಾಠ ಸಮಾಜದ ಮುಖಂಡರು, ಸಮಾಜ ಬಾಂಧವರು ಸೇರಿ ಸಂತಾಪ ಸೂಚಿಸಿದರು. 
    ೩೦ ಲಕ್ಷ ರು. ಪರಿಹಾರ : 
    ಕ್ಷತ್ರಿಯ ಮರಾಠ ಸೇವಾ ಸಂಘದ ಅಧ್ಯಕ್ಷ ಎಚ್.ಆರ್ ಲೋಕೇಶ್ವರ್ ರಾವ್ ಅಧ್ಯಕ್ಷತೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರರಾದ ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ಉದ್ಯಮಿ ಬಿ.ಕೆ ಶಿವಕುಮಾರ್ ಹಾಗು ವರ್ತಕರ ಸಂಘದ ಪ್ರಮುಖರ ನೇತೃತ್ವದಲ್ಲಿ ಸಭೆ ನಡೆದು ಸಮಾಜ ಭಾಂಧವರ ಸಮ್ಮುಖದಲ್ಲಿ ಮೃತ ರಘುನಾಥ್ ರಾವ್ ಸಾಳಂಕೆಯವರ ಕುಟುಂಬಕ್ಕೆ ೩೦ ಲಕ್ಷ ರು. ಪರಿಹಾರ ಹಣ ವಿತರಿಸಲಾಯಿತು. 
    ರಘುನಾಥ್ ರಾವ್ ಸಾಳಂಕೆ : 
    ಹೊಸಮನೆ ವಾರ್ಡ್ ನಂ.೧೨ರ ಎನ್.ಎಂ.ಸಿ ೫ನೇ ಕ್ರಾಸ್ ನಿವಾಸಿ ರಘುನಾಥ್ ರಾವ್ ಸಾಳಂಕೆ ಹಲವಾರು ವರ್ಷಗಳಿಂದ ಗಣೇರ್ಶ ರೈಸ್ ಮಿಲ್‌ನಲ್ಲಿ ಬಾಯ್ಲರ್ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರಾಗಿದ್ದು, ಇದೀಗ ಇವರ ನಿಧನದಿಂದ ಪತ್ನಿ, ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.  
    ಗುರುವಾರ ರೈಸ್‌ಮಿಲ್‌ನಲ್ಲಿ ಇವರು ಸೇರಿದಂತೆ ಒಟ್ಟು ೬ ಜನ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಪೈಕಿ ೫ ಜನರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲದೆ ಘಟನೆಯಲ್ಲಿ ಪಾದಚಾರಿಯೊಬ್ಬರು ಗಾಯಗೊಂಡಿದ್ದು, ಅವರು ಸಹ ಚಿಕಿತ್ಸೆ ಪಡೆಯುತ್ತಿದ್ದಾರೆ. 

Thursday, December 19, 2024

ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿ

ತಾಲೂಕು ಕಚೇರಿ ಮುಂಭಾಗ ಬ್ಲಾಕ್ ಕಾಂಗ್ರಸ್ ಪ್ರತಿಭಟನೆ 


ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಲೋಕಸಭೆ ಅಧಿವೇಶನದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಬಗ್ಗೆ ಹಗುರವಾಗಿ ಹಾಗೂ ಬೇಜವಾಬ್ದಾರಿತನದಿಂದ ಮಾತನಾಡಿದ್ದಾರೆಂದು ಆರೋಪಿಸಿ ಗುರುವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಭದ್ರಾವತಿ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ: ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಲೋಕಸಭೆ ಅಧಿವೇಶನದಲ್ಲಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಬಗ್ಗೆ ಹಗುರವಾಗಿ ಹಾಗೂ ಬೇಜವಾಬ್ದಾರಿತನದಿಂದ ಮಾತನಾಡಿದ್ದಾರೆಂದು ಆರೋಪಿಸಿ ಗುರುವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಸೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
    ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಬಗ್ಗೆ ಮಾಡಿರುವ ಅಪಮಾನದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ ಮುಖಂಡರು ಕೇಂದ್ರ ಗೃಹ ಸಚಿವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಬೇಕೆಂದು ಆಗ್ರಹಿಸಿದರು. 
    ತಕ್ಷಣ ಅಮಿತ್ ಶಾರವರು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ ಪ್ರತಿಭಟನಾಕಾರರು ತಹಶೀಲ್ದಾರ್ ಮೂಲಕ  ಮನವಿ ಸಲ್ಲಿಸಿದರು.
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಕುಮಾರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು. ನಗರಸಭೆ ಅಧ್ಯಕ್ಷ ಮಣೆ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಹಿರಿಯ ಸದಸ್ಯ ಬಿ.ಕೆ.ಮೋಹನ್ ಕುವೆಂಪು ವಿವಿ ಸಿಂಡಿಕೇಟ್ ಸದಸ್ಯರಾದ ಎಂ. ಶಿವಕುಮಾರ್, ಮುಸ್ವೀರ್ ಬಾಷಾ, ಮುಖಂಡರಾದ ಮಂಜುನಾಥ್, ಸಿ.ಜಯಪ್ಪ, ಈಶ್ವರಪ್ಪ, ಜುಂಜಾನಾಯ್ಕ, ಮಹಮ್ಮದ್ ರಫಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. 

ರೈಸ್‌ಮಿಲ್‌ನಲ್ಲಿ ಬಾಯ್ಲರ್ ಸ್ಪೋಟ : ೭ ಮಂದಿಗೆ ಗಾಯ

ಭದ್ರಾವತಿ ನಗರದ ಚನ್ನಗಿರಿ ರಸ್ತೆಯಲ್ಲಿರುವ ಗಣೇಶ್ ರೈಸ್ ಮಿಲ್‌ನಲ್ಲಿ ಗುರುವಾರ ಸಂಜೆ ಬಾಯ್ಲರ್ ಸ್ಪೋಟವಾಗಿರುವ ಘಟನೆ ನಡೆದಿದೆ. ಸ್ಪೋಟದಿಂದ ರೈಸ್ ಮಿಲ್ ಬಹುತೇಕ ಜಖಂಗೊಂಡಿದೆ. 
    ಭದ್ರಾವತಿ: ನಗರದ ಚನ್ನಗಿರಿ ರಸ್ತೆಯಲ್ಲಿರುವ ಗಣೇಶ್ ರೈಸ್ ಮಿಲ್‌ನಲ್ಲಿ ಗುರುವಾರ ಸಂಜೆ ಬಾಯ್ಲರ್ ಸ್ಪೋಟವಾಗಿದ್ದು, ಸುಮಾರು ೭ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. 
    ರೈಸ್ ಮಿಲ್‌ನಲ್ಲಿ ಸಂಜೆ ಏಕಾಏಕಿ ಬಾಯ್ಲರ್ ಸ್ಪೋಟಗೊಂಡಿದೆ. ಇದರಿಂದಾಗಿ ರೈಸ್‌ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ೭ ಮಂದಿ ತೀವ್ರ ಗಾಯಗೊಂಡಿದ್ದು, ಗಾಯಾಳುಗಳಿಗೆ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ರೈಸ್ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ರಘು ಎಂಬಾತ ನಾಪತ್ತೆಯಾಗಿದ್ದು, ತೀವ್ರ ಶೋಧ ಕಾರ್ಯ ಕೈಗೊಳ್ಳಲಾಗಿದೆ. 
    ಬಾಯ್ಲರ್ ಸ್ಪೋಟದಿಂದ ರೈಸ್ ಮಿಲ್ ಕಟ್ಟಡ ಹಾಗು ಮೇಲ್ಛಾವಣೆ ಬಹುತೇಕ ಜಖಂಗೊಂಡಿದ್ದು, ಅಲ್ಲದೆ ರೈಸ್ ಮಿಲ್ ಸಮೀಪದ ಅಣ್ಣಾನಗರ ಹಾಗು ಹೊಸಮನೆ ಭಾಗದ ಕೆಲವು ಮನೆಗಳಿಗೂ ಹಾನಿ ಉಂಟಾಗಿದೆ. ಸ್ಪೋಟದ ತೀವ್ರತೆ ಹೆಚ್ಚಾಗಿದ್ದು, ಹೆಚ್ಚಿನ ಹಾನಿ ಸಂಭವಿಸಿದೆ. 

ಘಟನೆಯಲ್ಲಿ ಒಟ್ಟು ೭ ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಘು ಎಂಬಾತ ಕಾಣೆಯಾಗಿದ್ದು, ಈತನಿಗಾಗಿ ಶೋಧ ಕಾರ್ಯ ನಡೆದಿದೆ. ಪೊಲೀಸ್, ಅಗ್ನಿಶಾಮಕ ದಳ, ಅಂಬ್ಯುಲೆನ್ಸ್, ಮೆಸ್ಕಾಂ, ನಗರಸಭೆ ಹಾಗು ಇನ್ನಿತರ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳದಲ್ಲಿದ್ದಾರೆ. ಆಸ್ತಿ ಹಾನಿ ಸಂಭವಿಸಿದೆ. ಆದರೆ ಯಾವುದೇ ಗಂಭೀರ ಪ್ರಾಣಹಾನಿ ಸಂಭವಿಸಿಲ್ಲ.  
                                                                    - ಜಿ.ಕೆ ಮಿಥುನ್ ಕುಮಾರ್, ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ, ಶಿವಮೊಗ್ಗ 
    


    ಸ್ಥಳಕ್ಕೆ ತಕ್ಷಣ ಅಗ್ನಿಶಾಮಕ, ಮೆಸ್ಕಾಂ ಮತ್ತು ನಗರಸಭೆ ಸಿಬ್ಬಂದಿಗಳು ಹಾಗು ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಆಗಮಿಸಿ ತುರ್ತು ಕಾರ್ಯಾಚರಣೆ ನಡೆಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದುವರೆಗೂ ಯಾವುದೇ ಪ್ರಾಣಹಾನಿಯಾಗಿರುವ ಕುರಿತು ಮಾಹಿತಿ ತಿಳಿದು ಬಂದಿಲ್ಲ.  
    ಈ ಭಾಗದ ವಿದ್ಯುತ್ ಕಡಿತಗೊಳಿಸಲಾಗಿದ್ದು, ಅಲ್ಲದೆ ಘಟನಾ ಸ್ಥಳಕ್ಕೆ ಸುತ್ತಮುತ್ತಲಿನಿಂದ ಜನರು ಜಮಾಯಿಸುತ್ತಿದ್ದು, ಕಾರ್ಯಾಚರಣೆ ತೊಂದರೆಯಾಗುವ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಯಾಗಿ ಈ ಭಾಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.    

Wednesday, December 18, 2024

ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಉಚಿತ ಕಾನೂನು ಅರಿವು ನೆರವು

ಭದ್ರಾವತಿ ತಾಲೂಕು ಕಾನೂನು ಸೇವಾ ಸಮಿತಿ ಹಾಗು ವಕೀಲರ ಸಂಘದ ವತಿಯಿಂದ ಬುಧವಾರ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಹಾಗು ಪ್ರಶಾಂತಿ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮ ಆಯೋಜಿಸಲಾಗಿತ್ತು. 
    ಭದ್ರಾವತಿ: ತಾಲೂಕು ಕಾನೂನು ಸೇವಾ ಸಮಿತಿ ಹಾಗು ವಕೀಲರ ಸಂಘದ ವತಿಯಿಂದ ಬುಧವಾರ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಹಾಗು ಪ್ರಶಾಂತಿ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮ ಆಯೋಜಿಸಲಾಗಿತ್ತು. 
    ನಾಲ್ಕನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎನ್. ಗಿರಿಜಾ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ಡಿ. ಪ್ರಭಾಕರ ಬೀರಯ್ಯ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ನ್ಯಾಯವಾದಿ ಎಂ. ಶಿವಕುಮಾರ್ ವಿಶ್ವ ಮಾನವ ಹಕ್ಕು ಮಹತ್ವ ಕುರಿತು ಉಪನ್ಯಾಸ ನೀಡಿದರು. 
  ಸರ್ಕಾರಿ ಅಭಿಯೋಜಕ ಪ್ರಸನ್ನ, ಟ್ರಸ್ಟ್ ಕಾರ್ಯದರ್ಶಿ ಸೌಮ್ಯ ರೂಪ ಕೆ., ಪಾಂಶುಪಾಲರಾದ ಶ್ಯಾಮರಾಯ ಆಚಾರ್, ಮೃತ್ಯುಂಜಯ ಕಾನಿಟ್ಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.   

ಡಿ.೨೧ರಂದು ಮೊದಲ ಬಾರಿಗೆ ವಿಶ್ವಧ್ಯಾನ ದಿನ

    ಭದ್ರಾವತಿ : ಆರ್ಟ್ ಆಫ್ ಲೀವಿಂಗ್ ಫೌಂಡೇಷನ್ ಶಿವಮೊಗ್ಗ ಶಾಖೆ ವತಿಯಿಂದ ಡಿ.೨೧ರಂದು ಮೊದಲ ಬಾರಿಗೆ ವಿಶ್ವಧ್ಯಾನ ದಿನ ಆಚರಣೆ ಹಮ್ಮಿಕೊಳ್ಳಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಸಂಯೋಜನಾಧಿಕಾರಿ ಬಿ. ಮೂರ್ತಿ ಕೋರಿದ್ದಾರೆ. 
    ವಿಶ್ವಸಂಸ್ಥೆ ಇತ್ತೀಚೆಗೆ ಡಿ.೨೧ ವಿಶ್ವಧ್ಯಾನ ದಿನ ಎಂದು ಘೋಷಿಸಿದ್ದು, ಇದು ಭಾರತಕ್ಕೆ ಹೆಮ್ಮೆಯ ವಿಚಾರವಾಗಿದೆ. ಈ ಆಚರಣೆ ನಿರ್ಧಾರವು ಧ್ಯಾನದ ಶ್ರೀಮಂತ ಪರಂಪರೆಯನ್ನು ಆಚರಿಸುತ್ತದೆ ಮತ್ತು ಆಂತರಿಕ ಶಾಂತಿ ಮತ್ತು ಯೋಗಕ್ಷೇಮ ಉತ್ತೇಜಿಸುವ ಪ್ರಾಚೀನ ಅಭ್ಯಾಸಗಳ ಜಾಗತಿಕ ಮನ್ನಣೆಯೊಂದಿಗೆ ಹೊಂದಿಕೆಯಾಗುತ್ತದೆ. ವಿಶ್ವ ಸಂಸ್ಥೆಯು ಆರ್ಟ್ ಆಫ್ ಲಿವಿಂಗ್ ಫೌಂಡೇಷನ್ ಸಂಸ್ಥಾಪಕರಾದ ಆಧ್ಯಾತ್ಮಿಕ ನಾಯಕ ಮತ್ತು ಮಾನವತವಾದಿ ಶ್ರೀ ರವಿಶಂಕರ್ ಗುರೂಜಿಯವರ ನೇತೃತ್ವದಲ್ಲಿ ಪ್ರಪ್ರಥಮ ವಿಶ್ವಧ್ಯಾನ ದಿನ ಆಚರಿಸಲು ತಿರ್ಮಾನಿಸಿರುವುದು ಭಾರತೀಯರಾದ ನಾವುಗಳು ಹೆಮ್ಮೆಪಡುವ ವಿಚಾರವಾಗಿದೆ. 
    ಶ್ರೀ ರವಿಶಂಕರ್ ಗುರೂಜಿಯವರು ಡಿ.೨೧ರಂದು ಯೂಟ್ಯೂಬ್‌ನಲ್ಲಿ ರಾತ್ರಿ ೮ ಗಂಟೆಯಿಂದ ನೇರ ವಿಶ್ವಧ್ಯಾನದ ಅವಧಿಯನ್ನು ಮುನ್ನಡೆಸಲಿದ್ದಾರೆ. ಆಸಕ್ತರು ನೇರಪ್ರಸಾರದಲ್ಲಿ ಭಾಗವಹಿಸಿ ಧ್ಯಾನ್ಯದ ಪರಿವರ್ತಕ ಶಕ್ತಿಯನ್ನು ಅನುಭವಿಸಬಹುದಾಗಿದೆ. ಡಿ.೨೧ರಂದು ತಾಲೂಕಿನ ಬಿಆರ್‌ಪಿ, ಸುದರ್ಶನ ಕ್ರಿಯೆ ಉಗಮಸ್ಥನದಲ್ಲಿ ಬೆಳಿಗ್ಗೆ ೭ ಗಂಟೆಯಿಂದ ೮ ಗಂಟೆವರೆಗೆ ಹಾಗು ಶಿವಮೊಗ್ಗ ನವುಲೆ, ನವನಗರ, ಆರ್ಟ್ ಆಫ್ ಲಿವಿಂಗ್ ಜ್ಞಾನಕ್ಷೇತ್ರದಲ್ಲಿ ರಾತ್ರಿ ೮ಕ್ಕೆ ವಿಶ್ವಧ್ಯಾನ ದಿನ ಆಯೋಜಿಸಲಾಗಿದೆ. ಆಸಕ್ತರು ಇದರ ಸದುಪಯೋಗಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊ: ೮೪೩೧೩೪೩೭೬೦ ಅಥವಾ ೭೦೧೯೨೦೭೨೧೨ ಸಂಖ್ಯೆ ಸಂಪರ್ಕಿಸಬಹುದಾಗಿದೆ.  

ಸ್ತನ ಕ್ಯಾನ್ಸರ್, ಉಚಿತ ಮ್ಯಾಮೊಗ್ರಾಫಿ ತಪಾಸಣಾ ಶಿಬಿರ

ವಂದೇ ಮಾತರಂ ಟ್ರಸ್ಟ್  ಹಾಗು ರೋಟರಿ ಸಮುದಾಯ ದಳ ವತಿಯಿಂದ ನಾರಾಯಣ ಹೃದಯಾಲಯ ಆಸ್ಪತ್ರೆ ಸಹಯೋಗದೊಂದಿಗೆ ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದ ಆವರಣದಲ್ಲಿ ಸ್ತನ  ಕ್ಯಾನ್ಸರ್(ಬ್ರೆಸ್ಟ್ ಕ್ಯಾನ್ಸರ್) ತಪಾಸಣಾ ಶಿಬಿರ ಹಾಗೂ ಉಚಿತ ಮ್ಯಾಮೊಗ್ರಾಫಿ ತಪಾಸಣಾ ಶಿಬಿರ  ಆಯೋಜಿಸಲಾಗಿತ್ತು. 
    ಭದ್ರಾವತಿ : ವಂದೇ ಮಾತರಂ ಟ್ರಸ್ಟ್  ಹಾಗು ರೋಟರಿ ಸಮುದಾಯ ದಳ ವತಿಯಿಂದ ನಾರಾಯಣ ಹೃದಯಾಲಯ ಆಸ್ಪತ್ರೆ ಸಹಯೋಗದೊಂದಿಗೆ ತಾಲೂಕಿನ ಬಾರಂದೂರು ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯದ ಆವರಣದಲ್ಲಿ ಸ್ತನ ಕ್ಯಾನ್ಸರ್(ಬ್ರೆಸ್ಟ್ ಕ್ಯಾನ್ಸರ್) ತಪಾಸಣಾ ಶಿಬಿರ ಹಾಗೂ ಉಚಿತ ಮ್ಯಾಮೊಗ್ರಾಫಿ ತಪಾಸಣಾ ಶಿಬಿರ  ಆಯೋಜಿಸಲಾಗಿತ್ತು. 
    ಬಾರಂದೂರು, ಹಳ್ಳಿಕೆರೆ, ಕಾರೆಹಳ್ಳಿ, ಕೆಂಚೇನಹಳ್ಳಿ, ಕೆಂಪೇಗೌಡ ನಗರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಂದ ಸುಮಾರು ೫೫ ಮಹಿಳೆಯರು ಪಾಲ್ಗೊಂಡು ಶಿಬಿರದ ಸದುಪಯೋಗಪಡೆದುಕೊಂಡರು. ತಪಾಸಣೆ ಮಾಡಿಸಿಕೊಂಡ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರಿಗೆ ಆಸ್ಪತ್ರೆಗೆ ಬಂದು ಸಂಬಂಧಿತ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳುವಂತೆ ಸಲಹೆ ನೀಡಲಾಯಿತು. 
ನಾರಾಯಣ ಹೃದಯಾಲಯ ಆಸ್ಪತ್ರೆ ಮಾರ್ಕೆಟಿಂಗ್ ವಿಭಾಗದ ಎಸ್. ಗಣೇಶ್ ಮಾತನಾಡಿ, ಬಿಪಿಎಲ್ ಕಾರ್ಡ್ ಹೊಂದಿರುವವರು ಉಚಿತವಾಗಿ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂಬ ಮಾಹಿತಿ ನೀಡಿದರು.
     ಅವರ ಸಹಯೋಗದೊಂದಿಗೆ  ನೇತೃತ್ವದಲ್ಲಿ   ಲಕ್ಷ್ಮಿ ವೆಂಕಟೇಶ್ವರ ದೇವಾಲಯದ ಆವರಣದಲ್ಲಿ ಬೆಳಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೩ ಗಂಟೆವರೆಗೆ ಉಚಿತ ಆರೋಗ್ಯ ತಪಾಸಣೆ  ಹಮ್ಮಿಕೊಳ್ಳಲಾಯಿತು.
     ರೋಟರಿ ಸಮುದಾಯ ದಳ ಅಧ್ಯಕ್ಷ ಬಿ.ಎ ಪ್ರಸನ್ನ ಕುಮಾರ್ ಬಾರಂದೂರು, ವಂದೇ ಮಾತರಂ ಟ್ರಸ್ಟಸ್ ಕಾರ್ಯದರ್ಶಿ ಆರ್.ಎಸ್ ಕಾರ್ತಿಕ್, ವೈದ್ಯೆ ಡಾ. ಪ್ರೀತಿ, ಟೆಕ್ನಿಷಿಯನ್ ಅರ್ಪಿತ, ರೋಟರಿ ಅಧ್ಯಕ್ಷ ರಾಘವೇಂದ್ರ ಉಪಾಧ್ಯಾಯ, ರಾಧ ಪ್ರಸನ್ನಕುಮಾರ್, ಮಮತಾ, ಕವಿತಾರಾವ್, ಜಯಲಕ್ಷ್ಮಿ, ರಾಣಿ, ಚಂದ್ರಮ್ಮ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸೈಲ್-ವಿಐಎಸ್‌ಎಲ್‌ನಲ್ಲಿ ಪರಿಸರ ಮಾಸಾಚರಣೆ ಸಮಾರೋಪ ಸಮಾರಂಭ

ತ್ಯಾಜ್ಯ ವೈಜ್ಞಾನಿಕವಾಗಿ ಬೇರ್ಪಡಿಸಿ ವಿಲೇವಾರಿ ಮಾಡಿ ಪರಿಸರ ರಕ್ಷಿಸಿ : ವಿ. ರಮೇಶ್ 

ಭದ್ರಾವತಿ ನ್ಯೂಟೌನ್ ಭದ್ರಾ ಅತಿಥಿಗೃಹದಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ  ಹಮ್ಮಿಕೊಳ್ಳಲಾಗಿದ್ದ ಪರಿಸರ ಮಾಸಾಚರಣೆ-೨೦೨೪ರ ಸಮಾರೋಪ ಸಮಾರಂಭ ಶಿವಮೊಗ್ಗ ಕೆ.ಎಸ್.ಪಿ.ಸಿ.ಬಿ ಪ್ರಾದೇಶಿಕ ಕಛೇರಿ ಪರಿಸರ ಅಧಿಕಾರಿ ವಿ. ರಮೇಶ್ ಉದ್ಘಾಟಿಸಿ ಮಾತನಾಡಿದರು. 
    ಭದ್ರಾವತಿ: ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವೈಜ್ಞಾನಿಕವಾಗಿ ಬೇರ್ಪಡಿಸಿ ಮತ್ತು ವಿಲೇವಾರಿ ಮಾಡುವ ಮೂಲಕ ನಮ್ಮ ಪರಿಸರವನ್ನು ರಕ್ಷಿಸಲು ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕೆಂದು ಶಿವಮೊಗ್ಗ ಕೆ.ಎಸ್.ಪಿ.ಸಿ.ಬಿ ಪ್ರಾದೇಶಿಕ ಕಛೇರಿ ಪರಿಸರ ಅಧಿಕಾರಿ ವಿ. ರಮೇಶ್ ಮನವಿ ಮಾಡಿದರು.
    ಅವರು ನಗರದ ನ್ಯೂಟೌನ್ ಭದ್ರಾ ಅತಿಥಿಗೃಹದಲ್ಲಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ  ಹಮ್ಮಿಕೊಳ್ಳಲಾಗಿದ್ದ ಪರಿಸರ ಮಾಸಾಚರಣೆ-೨೦೨೪ರ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 
    ಪ್ರಸ್ತುತ ಸಂದರ್ಭದಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದು ದೊಡ್ಡ ಸವಾಲಾಗಿದ್ದು, ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿಯಾಗದ ಹಿನ್ನಲೆಯಲ್ಲಿ ಸಾಕಷ್ಟು ಸಮಸ್ಯೆಗಳು ಉಲ್ಬಣವಾಗುತ್ತಿವೆ. ಈ ಹಿನ್ನಲೆಯಲ್ಲಿ ನಾವೆಲ್ಲರೂ ಜಾಗೃತಗೊಂಡು ಮೂಲ ಹಂತದಲ್ಲಿಯೇ ತ್ಯಾಜ್ಯ ವೈಜ್ಞಾನಿಕವಾಗಿ ಬೇರ್ಪಡಿಸಿ ವಿಲೇವಾರಿ ಮಾಡಬೇಕೆಂದರು. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹೆಚ್ಚಾಗಿ ಸಸಿಗಳನ್ನು ನೆಡುವ ಮೂಲಕ ಅವುಗಳನ್ನು ಪೋಷಿಸಿ ಸಂರಕ್ಷಣೆ ಮಾಡುವ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಕೋರಿದರು. 
    ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ಪ್ರತಿಯೊಬ್ಬ ವ್ಯಕ್ತಿ ಒಂದು ಗಿಡವನ್ನು ನೆಟ್ಟು ರಕ್ಷಿಸುವ ಪ್ರತಿಜ್ಞೆ ಮಾಡಿದರೆ ೧೪೦ ಕೋಟಿ ಗಿಡಗಳನ್ನು ನೆಡಬಹುದು. ಇದು ಭವಿಷ್ಯದಲ್ಲಿ ಮಾಲಿನ್ಯ ತೊಡೆದುಹಾಕಲು ಮತ್ತು ಪರಿಸರ ಸಮಸ್ಯೆಗಳನ್ನು ತಗ್ಗಿಸಲು ನೆರವಾಗುತ್ತದೆ ಎಂದರು.
ಮುಖ್ಯ ಮಹಾಪ್ರಬಂಧಕ (ಸ್ಥಾವರ) ಕೆ.ಎಸ್. ಸುರೇಶ್, ಮಹಾಪ್ರಬಂಧಕ (ಪರಿಸರ ನಿರ್ವಹಣೆ ವಿಭಾಗ ಮತ್ತು ಸಿವಿಲ್ ಇಂಜಿನಿಯರಿಂಗ್) ಮುತ್ತಣ್ಣ ಸುಬ್ಬರಾವ್, ಕಾರ್ಖಾನೆ ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರಾ, ಉಪ ಪರಿಸರ ಅಧಿಕಾರಿ ಕೆ. ಶಿಲ್ಪಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಬಂಧ ಬರೆಯುವುದು, ಪರಿಸರ ರಸಪ್ರಶ್ನೆ ಮತ್ತು ಘೋಷವಾಕ್ಯ ಬರೆಯುವ ಸ್ಪರ್ಧೆಗಳನ್ನು ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಮತ್ತು ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
    ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಎಲ್ಲರಿಗೂ ಸಸಿಗಳನ್ನು ವಿತರಿಸಲಾಯಿತು. ಅಲ್ಲದೆ ಪರಿಸರ ಮತ್ತು ಪ್ರಕೃತಿ ಕುರಿತಾದ ಮೊದಲ ದಿನದ ಕವರ್‌ಗಳು ಮತ್ತು ಮಿನಿಯೇಚರ್ ಸ್ಟ್ಯಾಂಪ್‌ಗಳ ಪ್ರದರ್ಶನ ಆಯೋಜಿಸಲಾಗಿತ್ತು. 
    ಪ್ರಕೃತಿ ಕುರಿತಾದ ಹಾಡು ಮತ್ತು ಪ್ರಾರ್ಥನೆ ಗೀತೆ ತ್ರಿವೇಣಿ ಮತ್ತು ಮಂಜುಶ್ರೀ ಸುಶ್ರಾವ್ಯವಾಗಿ ಹಾಡಿದರು.  ಸಹಾಯಕ ಮಹಾಪ್ರಬಂಧಕರು (ಪರಿಸರ ಇಲಾಖೆ) ವಿಕಾಸ್ ಬಸೇರ್,ಕಾರ್ಯಕ್ರಮ ನಿರೂಪಿಸಿದರು. ಕಿರಿಯ ಪ್ರಬಂಧಕ (ನಗರಾಡಳಿತ) ಜಿ.ಎಚ್. ನಂದನ ವಂದಿಸಿದರು.