Wednesday, January 8, 2025

ಜ.೯ರಂದು ತಾಲೂಕು ೧೧ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಭದ್ರಾವತಿ ತಾಲೂಕು ಘಟಕದ ವತಿಯಿಂದ ಜ.೯ರ ಗುರುವಾರ ನಗರದ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಶಾಲೆ ಆವರಣದಲ್ಲಿ ತಾಲೂಕು ಹನ್ನೊಂದನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. 
    ಭದ್ರಾವತಿ: ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕದ ವತಿಯಿಂದ ಜ.೯ರ ಗುರುವಾರ ನಗರದ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ ಶಾಲೆ ಆವರಣದಲ್ಲಿ ತಾಲೂಕು ಹನ್ನೊಂದನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಹೇಳಿದರು. 
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಳಿಗ್ಗೆ ೯.೩೦ಕ್ಕೆ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಬಿ. ಜಗದೀಶ್ ರಾಷ್ಟ್ರ ಧ್ವಜಾರೋಹಣ ಹಾಗು ಪೇಪರ್‌ಟೌನ್ ಪೊಲೀಸ್ ಠಾಣೆ ಉಪ ನಿರೀಕ್ಷಕಿ ಕವಿತ ನಾಡ ಧ್ವಜಾರೋಹಣ ಮತ್ತು ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು. 
    ವಿದ್ಯಾಸಂಸ್ಥೆಯ ೮ನೇ ತರಗತಿ ವಿದ್ಯಾರ್ಥಿ ಮನೀಷ್ ಪಿ ಯಾದವ್ ೧೦ ಗಂಟೆಗೆ ಸಮ್ಮೇಳನ ಉದ್ಘಾಟಿಸಲಿದ್ದು, ಶ್ರೀ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥಸ್ವಾಮೀಜಿ ದಿವ್ಯ ಸಾನಿಧ್ಯವಹಿಸಲಿದ್ದಾರೆ. ನಗರದ ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ೯ನೇ ತರಗತಿ ವಿದ್ಯಾರ್ಥಿನಿ ಲಿಖಿತ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ವಿದ್ಯಾಸಂಸ್ಥೆ ಪ್ರಾಂಶುಪಾಲರಾದ ಡಾ. ಹರಿಣಾಕ್ಷಿ, ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು. 
    ಬೆಳಿಗ್ಗೆ ೧೧.೩೦ ರಿಂದ ೧೨.೧೫ರವರೆಗೆ ಗೋಷ್ಠಿ-೧, ಕವಿಗೋಷ್ಠಿ, ಮಧ್ಯಾಹ್ನ ೧೨.೧೫ರಿಂದ ೧ ಗಂಟೆವರೆಗೆ ಗೋಷ್ಠಿ-೨, ಕವಿಗೋಷ್ಠಿ ಹಾಗು ಮಧ್ಯಾಹ್ನ ೨ ಗಂಟೆಯಿಂದ ಗೋಷ್ಠಿ-೩, ಪ್ರಚಲಿತ ವಿದ್ಯಾಮಾನಗಳು ನಡೆಯಲಿವೆ. ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಎಂ.ವಿ ಪಂಚಾಕ್ಷರಿ, ಶಿಕ್ಷಣ ಸಂಯೋಜಕ ದಯಾನಂದ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬದರಿನಾರಾಯಣ ಶ್ರೇಷ್ಠಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಸಮ್ಮೇಳನ ಯಶಸ್ವಿಗೊಳಿಸುವಂತೆ ಕೋರಿದರು. 
    ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಪ್ರಧಾನ ಕಾರ್ಯದರ್ಶಿ ಜೆ. ಉಮಾಪತಿ, ಖಜಾಂಚಿ ಗಂಗರಾಜ್, ಸಂಘಟನಾ ಕಾರ್ಯದರ್ಶಿ ಬಿ. ಕಾಂತಪ್ಪ, ಕಮಲಾಕುಮಾರಿ, ಮಲ್ಲಿಕಾಂಬ ವಿರೂಪಾಕ್ಷಪ್ಪ, ಕೋಡ್ಲು ಯಜ್ಞಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Tuesday, January 7, 2025

ಅಧ್ಯಕ್ಷರಾಗಿ ಟಿ.ಎಸ್ ದುಗ್ಗೇಶ್, ಉಪಾಧ್ಯಕ್ಷರಾಗಿ ಎಂ. ಮಂಜುಳ ಅವಿರೋಧ ಆಯ್ಕೆ

ಟಿ.ಎಸ್ ದುಗ್ಗೇಶ್ 
    ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಭಾವಸಾರ ಕ್ಷತ್ರಿಯ ಕೋ-ಆಪರೆಟೀವ್ ಸೊಸೈಟಿ ಅಧ್ಯಕ್ಷರಾಗಿ ಟಿ.ಎಸ್ ದುಗ್ಗೇಶ್ ಹಾಗು ಉಪಾಧ್ಯಕ್ಷರಾಗಿ ಎಂ. ಮಂಜುಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
    ೨೦೨೫-೨೦೩೦ನೇ ಸಾಲಿನ ೫ ವರ್ಷದ ಅವಧಿಗೆ ನಡೆದ ಪದಾಧಿಕಾರಿಗಳ ಚುನಾವಣೆಯಲ್ಲಿ ಟಿ.ಎಸ್ ದುಗ್ಗೇಶ್ ಅಧ್ಯಕ್ಷರಾಗಿ ಸತತ ೫ನೇ ಬಾರಿಗೆ ಪುನರಾಯ್ಕೆಯಾಗಿದ್ದು, ಈ ಬಾರಿ ಉಪಾಧ್ಯಕ್ಷರಾಗಿ ಎಂ. ಮಂಜುಳಾ ಆಯ್ಕೆಯಾಗಿದ್ದಾರೆ. ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲಾ ನಿರ್ದೇಶಕರು ಪಾಲ್ಗೊಂಡಿದ್ದರು. ಮುಖ್ಯ ಶಿಕ್ಷಕ ವಿ. ಮೋತಿನಾಯ್ಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. 


ಎಂ. ಮಂಜುಳ  
  ಕಾರ್ಯದರ್ಶಿ ಎ.ಎಸ್ ಜಗದೀಶ ಕುಮಾರ್, ಭಾವಸರ ಕ್ಷತ್ರಿಯ ಸಮಾಜದ ಅಧ್ಯಕ್ಷ ಡಿ.ಕೆ ರಾಘವೇಂದ್ರರಾವ್, ಹಿರಿಯ ಮುಖಂಡರಾದ ಎಂ. ಸತೀಶ್, ಆರ್. ಜಗನ್ನಾಥ್, ಶ್ರೀಧರ, ಮಂಜುನಾಥ ಸ್ವಾಮಿ,  ಆರ್. ರಮೇಶ್ ಸೇರಿದಂತೆ ಇನ್ನಿತರರು ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದ್ದಾರೆ.

ಎನ್. ಶ್ರೀನಿವಾಸ್ ನಿಧನ


ಎನ್. ಶ್ರೀನಿವಾಸ್ 
    ಭದ್ರಾವತಿ: ನಗರದ ಸಿದ್ದಾಪುರ ನಿವಾಸಿ, ಛಲವಾದಿ ಸಮಾಜದ ಮುಖಂಡ ಎನ್. ಶ್ರೀನಿವಾಸ್(೬೩) ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. 
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಶ್ರೀನಿವಾಸ್ ಮೈನ್ಸ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಇವರ ಅಂತ್ಯಕ್ರಿಯೆ ಬುಧವಾರ ಸಿದ್ದಾಪುರ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ.  
    ಶ್ರೀನಿವಾಸ್‌ರವರು ಪ್ರಸ್ತುತ ಜಿಲ್ಲಾ ಛಲವಾದಿ ಸಮಾಜದ ಗೌರವಾಧ್ಯಕ್ಷರಾಗಿದ್ದರು. ಅಲ್ಲದೆ ಲಯನ್ಸ್ ಕ್ಲಬ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 
    ಈ ಹಿಂದೆ ಬಿ.ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಅಲ್ಲದೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಕಷ್ಟು ಪ್ರಯತ್ನಿಸಿದ್ದರು. ಇವರ ನೇತೃತ್ವದಲ್ಲಿ ನಗರದಲ್ಲಿ ಜಿಲ್ಲಾಮಟ್ಟದ ಹಾಗು ಜಿಲ್ಲೆಯಲ್ಲಿ ರಾಜ್ಯಮಟ್ಟದ ಛಲವಾದಿಗಳ ಸಮ್ಮೇಳನ ನಡೆಸಲಾಗಿತ್ತು. ಇವರ ನಿಧನಕ್ಕೆ ತಾಲೂಕು ಛಲವಾದಿಗಳ ಮಹಾಸಭಾ ಸೇರಿದಂತೆ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ. 

ಕೃಷ್ಣಮೂರ್ತಿ ನಿಧನ

ಕೃಷ್ಣಮೂರ್ತಿ 
    ಭದ್ರಾವತಿ: ತಾಲೂಕು ದೇವಾಂಗ ಸಮಾಜದ ಮಾಜಿ ಅಧ್ಯಕ್ಷರು, ಹಳೇನಗರ ಶ್ರೀ ಹಳದಮ್ಮ ದೇವಿ ದೇವಸ್ಥಾನ ಸಮೀಪದ ನಿವಾಸಿ ಕೃಷ್ಣಮೂರ್ತಿ(೫೭) ಸೋಮವಾರ ನಿಧನ ಹೊಂದಿದರು. 
    ಪತ್ನಿ, ಪುತ್ರ ಹಾಗು ಪುತ್ರಿ ಇದ್ದಾರೆ. ಕೃಷ್ಣಮೂರ್ತಿಯವರು ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಾಯಿ ಗುಂಡಣ್ಣ ಎಂಬ ಹೆಸರಿನಿಂದ ಚಿರಪರಿಚಿತರಾಗಿದ್ದು, ಶ್ರೀ ಹಳದಮ್ಮ ದೇವಿ ದೇವಸ್ಥಾನ ಸಮಿತಿ ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದರು. 
    ಇವರ ನಿಧನಕ್ಕೆ ನಗರದ ದೇವಾಂಗ ಸಮಾಜದ ಪ್ರಮುಖರು, ಶ್ರೀ ಹಳದಮ್ಮ ದೇವಿ ದೇವಸ್ಥಾನ ಸಮಿತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ. 

Monday, January 6, 2025

ಅಧ್ಯಕ್ಷರಾಗಿ ಬಿ.ಎಸ್ ಹನುಮಂತಪ್ಪ, ಉಪಾಧ್ಯಕ್ಷರಾಗಿ ಇಂದ್ರೇಗೌಡ ಅವಿರೋಧ ಆಯ್ಕೆ


ಭದ್ರಾವತಿ ತಾಲೂಕಿನ ಕಡದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹಳೇ ಭಂಡಾರಹಳ್ಳಿ ನಿವಾಸಿ ಬಿ.ಎಸ್ ಹನುಮಂತಪ್ಪ ಮತ್ತು ಉಪಾಧ್ಯಕ್ಷರಾಗಿ ವೀರಾಪುರ ಗ್ರಾಮದ ನಿವಾಸಿ ಇಂದ್ರೇಗೌಡ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
    ಭದ್ರಾವತಿ : ತಾಲೂಕಿನ ಕಡದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹಳೇ ಭಂಡಾರಹಳ್ಳಿ ನಿವಾಸಿ ಬಿ.ಎಸ್ ಹನುಮಂತಪ್ಪ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
    ಉಳಿದಂತೆ ವೀರಾಪುರ ಗ್ರಾಮದ ನಿವಾಸಿ ಇಂದ್ರೇಗೌಡ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ನಿರ್ದೇಶಕರಾದ ಬಿ. ಆನಂದ, ಸುರೇಶ್, ಉಮೇಶ್, ಕೆ.ಜಿ ರವಿಕುಮಾರ್, ಎ. ಭಾಗ್ಯಲಕ್ಷ್ಮೀ, ಪಾರ್ವತಮ್ಮ, ಡಿ. ಶಿವಶಂಕರ್, ನಾಗರಾಜನಾಯ್ಕ, ಹನುಮಂತಪ್ಪ ಮತ್ತು ವೆಂಕಟೇಶ್ ಪಾಲ್ಗೊಂಡಿದ್ದರು. 
    ಪ್ರಸ್ತುತ ನೂತನ ಅಧ್ಯಕ್ಷರಾಗಿರುವ ಬಿ.ಎಸ್ ಹನುಮಂತಪ್ಪ ನಗರಸಭೆ ನಾಮನಿರ್ದೇಶಿತ ಸದಸ್ಯರಾಗಿದ್ದು, ಅವಿರೋಧವಾಗಿ ಆಯ್ಕೆಯಾಗಿರುವ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ನಗರದ ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.  

ಜ.೭ರಂದು ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ

ಭದ್ರಾವತಿ ಕಾಗದನಗರ ೬ನೇ ವಾರ್ಡ್ ಶ್ರೀ ಚೌಡೇಶ್ವರಿ ದೇವಿ. 
    ಭದ್ರಾವತಿ: ಪ್ರತಿವರ್ಷದಂತೆ ಈ ಬಾರಿ ಸಹ ನಗರಸಭೆ ವ್ಯಾಪ್ತಿಯ ಕಾಗದನಗರ ೬ನೇ ವಾರ್ಡ್ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಜ.೭ರ ಮಂಗಳವಾರ ಜರುಗಲಿದೆ. 
    ಬೆಳಿಗ್ಗೆ ೧೨.೩೦ಕ್ಕೆ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದ್ದು, ಸಂಜೆ ೬ ಗಂಟೆಗೆ ಆರತಿ ತರುವುದರ ಮೂಲಕ ದೇವಿಯ ಉತ್ಸವ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ವಿಗೊಳಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ: ೯೯೦೦೮೩೦೨೭೪ ಅಥವಾ ೯೯೪೫೯೯೮೫೭೨ ಸಂಖ್ಯೆಗೆ ಕರೆ ಮಾಡಬಹುದಾಗಿದೆ. 
    ಶಕ್ತಿ ದೇವತೆ ಶ್ರೀ ಚೌಡೇಶ್ವರಿ : 
    ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆ ಆರಂಭದೊಂದಿಗೆ ಕಾಗದ ನಗರ ಸಹ ಜನ್ಮ ತಾಳಿದ್ದು, ಅದರಲ್ಲೂ ಕಾರ್ಮಿಕರು, ಕುಟುಂಬ ವರ್ಗದವರು ಈ ಭಾಗದಲ್ಲಿ ನೆಲೆ ನಿಂತಿರುವ ಶಕ್ತಿ ದೇವತೆ ಶ್ರೀ ಚೌಡೇಶ್ವರಿ ದೇವಿಯನ್ನು ಶ್ರದ್ಧಾ ಭಕ್ತಿಯಿಂದ  ಸುಮಾರು ೭-೮ ದಶಕಗಳಿಂದ ಆರಾಧಿಸಿಕೊಂಡು ಬರುತ್ತಿದ್ದಾರೆ. 
    ಬೃಹತ್ ಮರದ ಪೊಟರೆಯಲ್ಲಿ ನಿಂತಿರುವ ದೇವಿಗೆ ಬಹಳ ವರ್ಷಗಳವರೆಗೆ ದೇವಸ್ಥಾನ ನಿರ್ಮಾಣವಾಗಿರಲಿಲ್ಲ. ಇತ್ತೀಚೆಗೆ ಸುಮಾರು ೨ ದಶಕಗಳ ಹಿಂದೆ ದೇವಸ್ಥಾನ ನಿರ್ಮಾಣಗೊಂಡಿದೆ. ಬೃಹತ್ ಮರದ ಸುತ್ತ ಕಾಂಕ್ರೀಟ್ ಕಟ್ಟಡ ನಿರ್ಮಾಣವಾಗಿದ್ದು, ಪ್ರತಿ ವರ್ಷ ನಿವಾಸಿಗಳು ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ನೆಡೆಸಿಕೊಂಡು ಬರುತ್ತಿದ್ದಾರೆ. 
    ದೇವಸ್ಥಾನ ಮುಂಭಾಗದಲ್ಲಿರುವ ಅರಳಿಕಟ್ಟೆ ಸಹ ಇದೀಗ ಮತ್ತಷ್ಟು ನವೀಕರಣಗೊಳ್ಳುತ್ತಿದ್ದು, ಭಕ್ತರು ಹಾಗು ದಾನಿಗಳು ನವೀಕರಣ ಕಾರ್ಯಗಳಲ್ಲಿ ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ.  ಕಳೆದ ಸುಮಾರು ೯ ವರ್ಷಗಳಿಂದ ಕಾರ್ಖಾನೆ ಸ್ಥಗಿತಗೊಂಡಿದ್ದು, ಬಹುತೇಕ ಕಾರ್ಮಿಕರು ಹಾಗು ಕುಟುಂಬ ವರ್ಗದವರು ಊರು ತೊರೆದಿದ್ದಾರೆ. ಕೆಲವರು ಇಲ್ಲಿಯೇ ನೆಲೆ ನಿಂತಿದ್ದಾರೆ.  ಕಾರ್ಮಿಕರು ಹಾಗು ಕುಟುಂಬ ವರ್ಗದವರಿಗಾಗಿ ನಿರ್ಮಿಸಲಾಗಿದ್ದ ವಸತಿ ಗೃಹಗಳು, ಶಾಲೆಗಳು, ಆಸ್ಪತ್ರೆ, ಕ್ರೀಡಾಂಗಣ, ಕಲ್ಯಾಣಮಂಟಪ, ಧಾರ್ಮಿಕ ಕೇಂದ್ರಗಳು, ಉದ್ಯಾನವನ ಎಲ್ಲವೂ ಪಾಳು ಬಿದ್ದಿದ್ದು, ಇದೀಗ ಕಾಗದನಗರದಲ್ಲಿ ಸ್ಮಶಾನ ಮೌನ ಆವರಿಸಿಕೊಂಡಿದೆ. ಈ ನಡುವೆಯೂ ಅಳಿದಿರುವ ಕಾರ್ಮಿಕರು, ಕುಟುಂಬ ವರ್ಗದವರು ಈ ಭಾಗದಲ್ಲಿ ಜಾತ್ರೆ, ಹರಿದಿನಗಳನ್ನು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕೈಗೊಳ್ಳುತ್ತಿದ್ದಾರೆ.  

Sunday, January 5, 2025

ಜ.೮ ರಂದು ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ಆರ್ಥೋಪೆಡಿಕ್ ಸಮಾಲೋಚನಾ ಶಿಬಿರ

    ಭದ್ರಾವತಿ: ಬೆಂಗಳೂರು ಬನ್ನೇರಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ ಹಾಗೂ ನಗರದ ತರೀಕೆರೆ ರಸ್ತೆಯ ಮೀನಾ ನರ್ಸಿಂಗ್ ಹೋಮ್ ಸಹಯೋಗದಲ್ಲಿ ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ಆರ್ಥೋಪೆಡಿಕ್ ಸಮಾಲೋಚನಾ ಶಿಬಿರ ಜ.೮ ರಂದು ಮಧ್ಯಾಹ್ನ ೩ ಗಂಟೆಯಿಂದ ೪ ಗಂಟೆಯವರೆಗೆ ಮೀನಾ ನರ್ಸಿಂಗ್ ಹೋಮ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. 
    ಸೊಂಟ, ಮೊಣಕಾಲು ಮತ್ತು ಕೀಲು ನೋವುಗಳು, ನಡೆಯಲು ಕಷ್ಟವಾಗುವಿಕೆ ಲಕ್ಷಣ ಉಳ್ಳವರು ಹಾಗೂ ವೃದ್ಧರಿಗಾಗಿ ಕೀಲು ಬದಲಿ ವ್ಯವಸ್ಥೆ ಹಾಗೂ ಕೀಹೋಲ್ ಮೂಳೆ ಚಿಕಿತ್ಸೆಯ ಕಾರ್ಯಾಚರಣೆಗಳು ಹಾಗು ಫೋರ್ಟಿಸ್ ಆಸ್ಪತ್ರೆಯ ರೋಬೋಟಿಕ್ ಕೀಲು ಮತ್ತು ಮಂಡಿ ಮರುಜೋಡಣೆಯ ತಜ್ಞರಾದ ಡಾ. ಮೋಹನ್ ಕೆ. ಪುಟ್ಟಸ್ವಾಮಿ ಅವರಿಂದ ರೋಬೋಟಿಕ್ ಜಾಯಿಂಟ್ ರಿಪ್ಲೇಸ್ಮೆಂಟ್ ನಡೆಯಲಿದೆ. 
    ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಹಾಗೂ ಹೆಚ್ಚಿನ ಮಾಹಿತಿಗೆ ಸಂತೋಷ್ ಚೌಹಾಣ್ : ೯೪೪೯೬೯೬೯೫೪ / ೮೦೮೮೯೭೩೪೯೩ ಸಂಖ್ಯೆಗೆ ಕರೆ ಮಾಡಬಹುದಾಗಿದೆ.