ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಹಲವು ಕಾರ್ಯತಂತ್ರ : ಎ.ಕೆ ನಾಗೇಂದ್ರಪ್ಪ
![](https://blogger.googleusercontent.com/img/a/AVvXsEh2R6Vka6R_fQ1WaVGLz-Ksodbpi4Ptu0B8y2To16N0iTOkuKpyk36qJfYI2dwOqIvX8nwT65qX2tFuN67YaBmYBsnL9N6FNECnSp2QuqqeYLXOKS3KlhgmnOK3tliSgMQT9eD_4N-e3xs2oT1b4Shth-_VlTSMHXsKJwTFJyLEOWnfPg1w3Os67clmLFX2=w400-h268-rw)
ಭದ್ರಾವತಿ ತಹಸೀಲ್ದಾರ್ ಕಛೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮಾತನಾಡಿದರು.
ಭದ್ರಾವತಿ: ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ೨೦೨೫-೨೬ನೇ ಸಾಲಿನ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳ ದಾಖಲಾತಿ ಮತ್ತು ಶುಲ್ಕ ವಸೂಲಾತಿ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಯನ್ನು ಕಡ್ಡಾಯವಾಗಿ ಪ್ರಕಟಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೂಚಿಸಿದ್ದಾರೆ.
ಅವರು ಮಂಗಳವಾರ ಈ ಕುರಿತು ಮಾಹಿತಿ ನೀಡಿ, ಶಿಕ್ಷಣ ಹಕ್ಕು ಕಾಯಿದೆ-೨೦೦೯ರ ಸೆಕ್ಷನ್-೨(ಬಿ)ರಂತೆ ಎಲ್ಲಾ ಖಾಸಗಿ ಶಾಲೆಗಳು ತಮ್ಮ ಅಧಿಸೂಚಿತ ಶುಲ್ಕವನ್ನು ತಮ್ಮ ಶಾಲಾ ಜಾಲತಾಣದಲ್ಲಿ, ಶಾಲಾ ಸೂಚನಾ ಫಲಕದಲ್ಲಿ ಮತ್ತು ಇಲಾಖಾ ಜಾಲತಾಣದಲ್ಲಿ ಸಾರ್ವಜನಿಕರು ಮತ್ತು ಪೋಷಕರಿಗೆ ಲಭ್ಯವಾಗುವಂತೆ ಪ್ರಕಟಿಸುವುದು ಕಡ್ಡಾಯವಾಗಿದೆ. ಇದರ ಜೊತೆಗೆ ಶುಲ್ಕ ವಸೂಲಾತಿ ಮತ್ತು ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸೆಕ್ಷನ್-೧೩ರ ಅಂಶಗಳನ್ನು ಸಹ ಕಡ್ಡಾಯವಾಗಿ ಮಾರ್ಚ್ ೩೧ರೊಳಗಾಗಿ ಪ್ರಕಟಿಸಬೇಕೆಂದರು.
ಶಿಕ್ಷಣ ಹಕ್ಕು ಕಾಯಿದೆ -೨೦೦೯ರ ಪ್ರಕಾರ ಆರ್.ಟಿ.ಇ ಮಕ್ಕಳ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ. ಇದರಿಂದ ಆಡಳಿತ ಮಂಡಳಿಯವರು ಯಾವುದೇ ರೀತಿಯ ದಾಖಲಾತಿ/ಬೋದನಾ ಶುಲ್ಕವನ್ನು ವಿದ್ಯಾರ್ಥಿಯ ಪೋಷಕರುಗಳಿಂದ ಪಡೆಯುವಂತಿಲ್ಲ ಎಂದರು.
೨೦೨೪-೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಕೈಗೊಂಡಿರುವ ಕಾರ್ಯತಂತ್ರಗಳು:
೨೦೨೪-೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಹಲವಾರು ಕಾರ್ಯತಂತ್ರಗಳನ್ನು ಕೈಗೊಳ್ಳಲಾಗಿದ್ದು, ಮಕ್ಕಳು ಪರೀಕ್ಷೆ ಸಮರ್ಥವಾಗಿ ಎದುರಿಸುವ ಮೂಲಕ ಉತ್ತಮ ಫಲಿತಾಂಶ ಕಂಡುಕೊಳ್ಳುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ವಿಶ್ಲೇಷಣೆ ಮತ್ತು ೨೦೨೪-೨೫ನೇ ಸಾಲಿನ ಫಲಿತಾಂಶ ಸುಧಾರಣೆಗೆ ಶೈಕ್ಷಣಿಕ ವರ್ಷದ ಆರಂಭದಲ್ಲಿ ಮುಖ್ಯಶಿಕ್ಷಕರೊಂದಿಗೆ ಚರ್ಚೆ ನಡೆಸಲಾಗಿದೆ. ೮ನೇ ತರಗತಿಯಿಂದಲೇ ಮಕ್ಕಳ ಕಲಿಕೆಗೆ ಒತ್ತು ನೀಡಲು ಮುಖ್ಯ ಶಿಕ್ಷಕರಿಗೆ ಬ್ಲಾಕ್ ಮಟ್ಟದಲ್ಲಿ ಸಭೆ. ಮಕ್ಕಳಿಗೆ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಿ ಕಲಿಕಾ ಸಾಮರ್ಥಗಳಿಗೆ ಅನುಗುಣವಾಗಿ ಗುಂಪುಗಳಾಗಿ ವಿಂಗಡನೆ. ಎಲ್ಲಾ ಶಾಲೆಗಳಲ್ಲಿ ಪೋಷಕರ ಮತ್ತು ತಾಯಂದಿರ ಸಭೆ. ಪ್ರತಿ ತಿಂಗಳು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆ ನಡೆಸಿ ಫಲಿತಾಂಶ ಸುಧಾರಣೆಗೆ ಕೈಗೊಂಡ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದರು.
ಪ್ರತಿ ವಿಷಯದಲ್ಲೂ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣತೆಗೆ ಬೇಕಾದ ಕನಿಷ್ಠ ಅಂಕಗಳನ್ನು ಗಳಿಸುವಂತೆ ಶಿಕ್ಷಕರೊಂದಿಗೆ ವಿಷಯ ವೇದಿಕೆ ಸಭೆಗಳಲ್ಲಿ ಚರ್ಚೆ. ಪ್ರತಿ ವಿಷಯಗಳಲ್ಲಿ ಪ್ರತಿ ಘಟಕಕ್ಕೂ ಘಟಕ ಪರೀಕ್ಷೆ, ವಿಶ್ಲೇಷಣೆ. ನಿರಂತರ ಗೈರಾಗುವ ವಿದ್ಯಾರ್ಥಿಗಳ ಮನೆ ಭೇಟಿ ಮಾಡಿ ಮಕ್ಕಳ ಮನವೊಲಿಸುವಿಕೆ. ಏಕರೂಪದ ವೇಳಾಪಟ್ಟಿ ತಯಾರಿಕೆ. ವಿದ್ಯಾರ್ಥಿಗಳಿಗೆ ವೇಕ್ ಅಪ್ ಕಾಲ್, ಪೀರ್ ಗ್ರೂಪ್ಪಳ ರಚನೆ. ಜಿಲ್ಲಾ ಹಂತದಿಂದ ಕಿರುಪರೀಕ್ಷೆಗಳು, ತಯಾರಿ ಪರೀಕ್ಷೆಗಳ ನಿರ್ವಹಣೆ ಮತ್ತು ತಾಲ್ಲೂಕು/ಜಿಲ್ಲಾ ಹಂತದಲ್ಲಿ ವಿಶ್ಲೇಷಣೆ. ಪ್ರತಿ ತಾಲೂಕಿನ ಜಿಲ್ಲಾ ಕಛೇರಿಯ ವಿಷಯ ಪರಿವೀಕ್ಷಕರುಗಳ ನೇತೃತ್ವದಲ್ಲಿ ವಿಷಯವಾರು ಸಂಪನ್ಮೂಲ ವ್ಯಕ್ತಿಗಳನ್ನೊಳಗೊಂಡ ವಿಷಯಾಧಾರಿತ ವೇದಿಕೆಗಳಲ್ಲಿ ಚರ್ಚೆ. ಶಾಲಾ ಹಂತದಲ್ಲಿ ವರ್ಷದಲ್ಲಿ ಮೂರು ಬಾರಿ ಅಂದರೆ ತ್ರೈಮಾಸಿಕವಾಗಿ ಎಸ್.ಎಸ್.ಎಲ್.ಸಿ ಓದುತ್ತಿರುವ ಪ್ರತಿ ಮಗುವನ್ನು ಕೌನ್ಸಿಲಿಂಗ್‌ಗೆ ಒಳಪಡಿಸುವಿಕೆ ಹಾಗೂ ಆಪ್ತ ಸಮಾಲೋಚನೆಗೆ ಮುಖ್ಯಶಿಕ್ಷಕರಿಗೆ ಸೂಚನೆ. ಪ್ರತಿ ವಿಷಯದಲ್ಲೂ ಪ್ರತಿವಾರ ಒಂದು ವಿಚಾರ ಸಂಕಿರಣ ಮಾಡಿ ವಿಭಿನ್ನ ರೀತಿ ಚಟುವಟಿಕೆಗಳನ್ನು ಮಾಡಿ ಕಲಿಕೆಯಲ್ಲಿ ಆಸಕ್ತಿ ಮೂಡಿಸಲು ಶಾಲಾ ಹಂತದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ಪ್ರತಿದಿನ ಒಂದು ಗಂಟೆ ಹೆಚ್ಚುವರಿಯಾಗಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಉಳಿದು ಹೆಚ್ಚುವರಿ ಅಧ್ಯಯನ ಮಾಡಿಸುವುದು. ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲೂ ತೇರ್ಗಡೆಯಾಗಲು ಕಲಿಯಬೇಕಾದ ಅಂಶಗಳನ್ನು ಮುಖ್ಯಾಂಶಗಳಲ್ಲಿ ಗುರುತಿಸಿ ಅವುಗಳನ್ನು ಪದೇಪದೇ ಅಭ್ಯಾಸ ಮಾಡಿಸಲು ಕ್ರಮ. ಕಲಿಕೆಯಲ್ಲಿ ೫೦ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ಶಾಲೆಗಳಿಗೆ ಪ್ರತ್ಯೇಕ ಕ್ರಿಯಾ ಯೋಜನೆ ತಯಾರಿಸಿ ಅನುಪಾಲನೆ. ಸರಣಿ ಪರೀಕ್ಷೆಗಳನ್ನು ನಡೆಸಿ ಫಲಿತಾಂಶ ವಿಶ್ಲೇಷಿಸಿ ಮಕ್ಕಳು ಮತ್ತು ಪೋಷಕರ ಗಮನಕ್ಕೆ ತರುವಲ್ಲಿ ಕ್ರಮ. ಮಧ್ಯಂತರ ಅವಧಿಯ ಸಮಯ ಸದ್ಬಳಕೆ ಮಾಡಿಕೊಂಡು ನಿರಂತರ ಕಲಿಕೆಗೆ ಮಕ್ಕಳನ್ನು ಸಜ್ಜುಗೊಳಿಸುವುದು. ಪರಿಶಿಷ್ಟ ಜಾತಿ/ಪಂಗಡ/ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಿಂದ ಬರುವ ವಿದ್ಯಾರ್ಥಿಗಳ ವಿದ್ಯಾರ್ಥಿನಿಲಯಗಳಿಗೆ ಭೇಟಿನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ. ಮಕ್ಕಳಿಗೆ ಪರೀಕ್ಷೆಯ ಭಯ ಹೋಗಲಾಡಿಸಲು ಬ್ಲಾಕ್ ಮಟ್ಟದಲ್ಲಿ ತಜ್ಞರಿಂದ ವಿಶೇಷ ಕಾರ್ಯಾಗಾರ. ಶಾಲಾ ಹಂತದಲ್ಲಿ ಕಳೆದ ೩ ವರ್ಷಗಳ ಪ್ರಶ್ನೆಪತ್ರಿಕೆಗಳಿಗೆ ವಿದ್ಯಾರ್ಥಿಗಳಿಂದ ಉತ್ತರ ಬರೆಸುವಲ್ಲಿ ಕ್ರಮ. ತಾಲೂಕು ಮಟ್ಟದ ಅಧಿಕಾರಿಗಳಿಗೆ ತಲಾ ೨ ಶಾಲೆಗಳ ಉಸ್ತುವಾರಿ ನೀಡಿ ಫಲಿತಾಂಶ ಸುಧಾರಣೆಗೆ ಸೂಕ್ತ ಸಲಹೆ-ಮಾರ್ಗದರ್ಶನ. ಶೇಕಡಾ ೧೦೦ಕ್ಕೆ ೧೦೦ ಫಲಿತಾಂಶ ಪಡೆದ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸನ್ಮಾನ ಹಾಗು ಕಳೆದ ಸಾಲಿನಲ್ಲಿ ಆಯಾ ಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಂದ ಪ್ರಸ್ತುತ ಸಾಲಿನ ವಿದ್ಯಾರ್ಥಿಗಳಿಗೆ ಯಶೋಗಾಥೆಗಳ ಹಂಚಿಕೆ ನಡೆಸಲಾಗಿದೆ ಎಂದರು.
ತಹಸೀಲ್ದಾರ್ ಪರುಸಪ್ಪ ಕುರುಬರ, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ವಿ.ಎಚ್ ಪಂಚಾಕ್ಷರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.