Thursday, February 6, 2025

ಭದ್ರಾವತಿ ಆಕಾಶವಾಣಿ ಕೇಂದ್ರದಲ್ಲಿ ಜ.೭ರಂದು ವಜ್ರ ಮಹೋತ್ಸವ ಸಂಭ್ರಮಾಚರಣೆ

ಭದ್ರಾವತಿ ಆಕಾಶವಾಣಿ ಕೇಂದ್ರಕ್ಕೆ ಇದೀಗ ೬೦ರ ಸಂಭ್ರಮ. ಶುಕ್ರವಾರ ವಜ್ರ ಮಹೋತ್ಸವ ಅದ್ದೂರಿ ಆಚರಣೆಗೆ ಸಿದ್ದತೆಗಳು ನಡೆದಿವೆ.
ಭದ್ರಾವತಿ : ಇಲ್ಲಿನ ಭದ್ರಾವತಿ ಆಕಾಶವಾಣಿ ಕೇಂದ್ರಕ್ಕೆ ಇದೀಗ ೬೦ರ ಸಂಭ್ರಮ. ಶುಕ್ರವಾರ ವಜ್ರ ಮಹೋತ್ಸವ ಅದ್ದೂರಿ ಆಚರಣೆಗೆ ಸಿದ್ದತೆಗಳು ನಡೆದಿವೆ. 
ನಗರದ ಜೆಪಿಎಸ್ ಕಾಲೋನಿಯಲ್ಲಿರುವ ಆಡಳಿತ ಕಛೇರಿಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆಕಾಶವಾಣಿ ಕೇಂದ್ರವನ್ನು ವಿದ್ಯುತ್ ದೀಪಗಳಿಂದ, ಬಣ್ಣ ಬಣ್ಣದ ರಂಗೋಲಿ ಚಿತ್ತಾರಗಳಿಂದ, ತಳಿರುತೋರಣಗಳಿಂದ ಅಲಂಕರಿಸಲಾಗಿದೆ. ಅಧಿಕಾರಿಗಳು, ಸಿಬ್ಬಂದಿ ವರ್ಗದವರಲ್ಲಿ ಸಂತಸ ಮನೆ ಮಾಡಿದೆ. 
ಭದ್ರಾವತಿ ಆಕಾಶವಾಣಿ ಕೇಂದ್ರ : 
೦೭.೦೨.೧೯೬೫ರಲ್ಲಿ ಆರಂಭಗೊಂಡ ಭದ್ರಾವತಿ ಆಕಾಶವಾಣಿ ಕೇಂದ್ರ ಆರಂಭದಲ್ಲಿ ಸುಣ್ಣದಹಳ್ಳಿಯಲ್ಲಿ ೬೭೫ ಕಿಲೋ ಹರ್ಟ್ಜ್ ತರಂಗಾಂತರ ಸಾಮರ್ಥ್ಯದ ಒಂದು ಟ್ರಾನ್ಸ್‌ಮಿಟರ್ ಒಳಗೊಂಡಿದೆ. ಅಲ್ಲದೆ ಜೆಪಿಎಸ್ ಕಾಲೋನಿಯಲ್ಲಿ ಒಂದು ಸ್ಟುಡಿಯೋ ಮತ್ತು ಆಡಳಿತ ಕಛೇರಿಯನ್ನು ಹೊಂದಿದೆ.  ಅತಿ ಎತ್ತರದ ಒಂದು ಟವರ್ ಕೂಡ ಹೊಂದಿದೆ. ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಹಾವೇರಿ, ಹಾಸನ್, ನಾರ್ತ್ ಕೆನರಾ, ಉಡುಪಿ ಮತ್ತು ತುಮಕೂರು ನಗರಗಳಲ್ಲಿ ಕ್ಷೇತ್ರ ವ್ಯಾಪ್ತಿಯನ್ನು ಹೊಂದಿದೆ. ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯ ಕಾರ್ಯಕ್ರಮಗಳು ಪ್ರಸಾರಗೊಳ್ಳುತ್ತಿವೆ. ಸುಮಾರು ೩೦ ರಿಂದ ೪೦ ಲಕ್ಷ ಶ್ರೋತೃಗಳನ್ನು ತಲುಪುತ್ತಿದೆ. 
ಸುಮಾರು ೫ ದಶಕಗಳ ನಂತರ ಎಫ್‌ಎಂ ಕೇಂದ್ರ ಆರಂಭಗೊಂಡಿದೆ. ಪ್ರಸ್ತುತ ಎಂ.ಎಫ್ ೧೦೩.೫ ಎಂಎಚ್‌ಝಡ್ ತರಂಗಾಂತರದಲ್ಲಿ ಪ್ರಸಾರಗೊಳ್ಳುತ್ತಿದೆ. ಅಲ್ಲದೆ ಎಂಡಬ್ಲ್ಯೂ ಸಹ ೬೭೫ ಕೆಎಚ್‌ಝಡ್ ತರಂಗಾಂತರದಲ್ಲಿ ಪ್ರಸಾರಗೊಳ್ಳುತ್ತಿದೆ. 

ರಥಸಪ್ತಮಿ : ಭದ್ರಾ ನದಿಯಲ್ಲಿ ಮಾಘ ಮಾಸದ ಸ್ನಾನ

ಭದ್ರಾವತಿಯಲ್ಲಿ ರಥಸಪ್ತಮಿ ದಿನ ಬೆಳಗಿನಜಾವ ಮಂಜುಮುಸುಕಿದ ವಾತವರಣದಲ್ಲಿ ಭದ್ರಾನದಿಯಲ್ಲಿ ಹಳೇನಗರ ಭಾಗದ ನಿವಾಸಿಗಳು ಸಾಮೂಹಿಕವಾಗಿ ಮಾಘಮಾಸದ ಸ್ನಾನ ಮಾಡಿದರು.
    ಭದ್ರಾವತಿ : ರಥಸಪ್ತಮಿ ದಿನ ಬೆಳಗಿನಜಾವ ಮಂಜುಮುಸುಕಿದ ವಾತವರಣದಲ್ಲಿ ಭದ್ರಾನದಿಯಲ್ಲಿ ಹಳೇನಗರ ಭಾಗದ ನಿವಾಸಿಗಳು ಸಾಮೂಹಿಕವಾಗಿ ಮಾಘಮಾಸದ ಸ್ನಾನ ಮಾಡಿದರು.
    ಬೆಳಿಗ್ಗೆ ಹಳೇನಗರದ ಶ್ರೀವಾದಿರಾಜಸ್ವಾಮಿಗಳ, ಶ್ರೀರಾಘವೇಂದ್ರಸ್ವಾಮಿಗಳ ಶ್ರೀ ಮಠದಿಂದ ರಾಯರ ರಜತ ಪಾದುಕೆ ಹಿಡಿದು ಭದ್ರಾನದಿಯಲ್ಲಿರುವ ಶ್ರೀ ಸಂಗಮೇಶ್ವರ ಸ್ವಾಮಿ ಮಂಟಪದ ಸಮೀಪಕ್ಕೆ ತೆರಳಿದರು. ನಂತರ ನದಿಯಲ್ಲಿ ಪಂಡಿತ ಗೋಪಾಲಾಚಾರ್‌ರವರ ನೇತೃತ್ವದಲ್ಲಿ ಸಮೂಹಿಕ ಸಂಕಲ್ಪದೊಂದಿಗೆ ಗಂಗೆ, ಯಮುನೆ, ಸರಸ್ವತಿ, ಭದ್ರಾ, ತುಂಗಾ ಸೇರಿದಂತೆ ಸಮಸ್ತ ಪುಣ್ಯ ನದಿಗಳ ಸ್ಮರಣೆಮಾಡಿ ಸ್ನಾನ ಮಾಡಿದರು. 
    ಪಂಡಿತ ಗೋಪಾಲಚಾರ್ ಅವರ ಪೌರೋಹಿತ್ಯಾ ಹಾಗೂ ನೇತೃತ್ವದಲ್ಲಿ ಪುರುಷರು ದೇವತಾರ್ಘ್ಯ, ಸೂರ್ಯಾರ್ಘ್ಯ, ದೇವತರ್ಪಣ, ಋಷಿತರ್ಪಣ ಮತ್ತು ಪಿತೃತರ್ಪಣಗಳನ್ನು ಅರ್ಪಿಸಿದರು. ಮಹಿಳೆಯರು ಆರತಿ ಬೆಳಗಿ ಗಂಗಾಪೂಜೆ ನೆರವೇರಿಸಿದರು. ಉಳಿದಂತೆ ಅನೇಕರು  ಶ್ರೀ ಸಂಗಮೇಶ್ವರ ಮಂಟಪದಲ್ಲಿರುವ ಗಣಪತಿ, ಶಿವಲಿಂಗ, ನಾಗದೇವತೆ, ನಂದಿಗೆ ಅಭಿಷೇಕ, ಪೂಜೆ ಸಲ್ಲಿಸಿದರು.
    ಪಂಡಿತ ಶ್ರೀನಿವಾಸಾಚಾರ್, ಸತ್ಯನಾರಾಯಣಚಾರ್, ನಿರಂಜನಾಚಾರ್, ಜಿ. ರಮಾಕಾಂತ, ಜಯತೀರ್ಥ, ರಾಘವೇಂದ್ರಚಾರ್, ವೆಂಕಟೇಶ್, ಶೇಷಗಿರಿ, ಅನಿಲ, ಶ್ರೀಕರ, ಪ್ರಮೋದ, ರಾಘವೇಂದ್ರ ತಂತ್ರಿ, ಉಪಾಧ್ಯಾಯ, ಸುಮಾರಾಘವೇಂದ್ರ, ಶುಭಾಗುರುರಾಜ್, ಸುಜಾತ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು. 

ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಧ್ವ ನವಮಿ

ಭದ್ರಾವತಿ ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವಾರ ಮಧ್ವ ನವಮಿ ಅಂಗವಾಗಿ ವಿವಿಧ ಧಾರ್ಮಿಕ ಆಚರಣೆಗಳು ಜರಗಿದವು. ರಾಜಬೀದಿಯಲ್ಲಿ ಮಧ್ವಾಚಾರ್ಯರ ಕೃತಿಯೊಂದಿಗೆ ರಥದಲ್ಲಿ ಮೆರವಣಿಗೆ ನಡೆಸಲಾಯಿತು. 
    ಭದ್ರಾವತಿ : ಹಳೇನಗರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುವಾರ ಮಧ್ವ ನವಮಿ ಅಂಗವಾಗಿ ವಿವಿಧ ಧಾರ್ಮಿಕ ಆಚರಣೆಗಳು ಜರಗಿದವು.
    ಬೆಳಗ್ಗೆ ೬ ಗಂಟೆಗೆ ನಿರ್ಮಾಲ್ಯ, ೭ ಗಂಟೆಗೆ ಅಭಿಷೇಕ, ನಂತರ ೧೦ ಗಂಟೆಗೆ ರಾಜಬೀದಿಯಲ್ಲಿ ಮಧ್ವಾಚಾರ್ಯರ ಕೃತಿಯೊಂದಿಗೆ ರಥದಲ್ಲಿ ಮೆರವಣಿಗೆ ನಡೆಸಲಾಯಿತು. 
    ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದವರೆಗೆ ರಥೋತ್ಸವ ಜರಗಿತು. ನಂತರ ಮಧ್ವಾಚಾರ್ಯರ ಕುರಿತು ವಿವಿಧ ಭಜನಾಮಂಡಳಿಗಳಿಂದ ಭಜನೆ ನಡೆಯಿತು.  ಮಹಾಮಂಗಳಾರತಿ ಹಾಗೂ ತೀರ್ಥಪ್ರಸಾದ ನೆರವೇರಿತು. 
    ಗುರುರಾಜ ಸೇವಾ ಸಮಿತಿ ಅಧ್ಯಕ್ಷ ಮುರುಳಿಧರ ತಂತ್ರಿ, ಉಪಾಧ್ಯಕ್ಷೆ ಸುಮಾರ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಜಿ. ರಮಾಕಾಂತ್, ಖಜಾಂಚಿ ನಿರಂಜನಾಚಾರ್ಯ ಹಾಗೂ ಶುಭ ಗುರುರಾಜ್, ವಿದ್ಯಾನಂದ ನಾಯಕ್ ಹಾಗೂ ಸತ್ಯನಾರಾಯಣಚಾರ್, ಪ್ರಧಾನ ಅರ್ಚಕ ಮಾಧುರಾವ್, ಜಯತೀರ್ಥ, ಸುಧೀಂದ್ರ, ವೇದಬ್ರಹ್ಮ ಶ್ರೀ ಗೋಪಾಲಕೃಷ್ಣ ಆಚಾರ್ ಹಾಗೂ ಶ್ರೀನಿವಾಸಚಾರ್ ಮತ್ತು ವಿವಿಧ ಭಜನಾ ಮಂಡಳಿಗಳ ಸದಸ್ಯರು ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.  

ಪ್ರಯಾಗ್‌ರಾಜ್ ಮಹಾ ಕುಂಭಮೇಳದಲ್ಲಿ ಮೆಚ್ಚುಗೆಗೆ ಪಾತ್ರವಾದ ಡೊಳ್ಳು ಕುಣಿತ

ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಮಹಾ ಕುಂಭಮೇಳದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಆಯೋಜಿಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭದ್ರಾವತಿ ಸುಲ್ತಾನ್ ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ, ಜಾನಪದ ಕಲಾವಿದ ಎಂ.ಆರ್ ರೇವಣಪ್ಪ ನೇತೃತ್ವದ ಅಂತರಾಷ್ಟ್ರೀಯ ಜಾನಪದ ಕಲಾವಿದ ಗಿರೀಶ್ ಕುಮಾರ್ ಮತ್ತು ಸಂಗಡಿಗರ ಡೊಳ್ಳು ಕುಣಿತ ತಂಡ ರಾಜ್ಯವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.
    ಭದ್ರಾವತಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಮಹಾ ಕುಂಭಮೇಳದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಆಯೋಜಿಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಅಂತರಾಷ್ಟ್ರೀಯ ಜಾನಪದ ಕಲಾವಿದ ಗಿರೀಶ್ ಕುಮಾರ್ ಮತ್ತು ಸಂಗಡಿಗರ ಡೊಳ್ಳು ಕುಣಿತ ತಂಡ ರಾಜ್ಯವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.
    ತಾಲೂಕಿನ ಸುಲ್ತಾನ್‌ಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ, ಜಾನಪದ ಕಲಾವಿದ ಎಂ.ಆರ್ ರೇವಣಪ್ಪ ನೇತೃತ್ವದಲ್ಲಿ ಹೊಸನಗರ ಮಾದಾಪುರ ಗ್ರಾಮದ ಶ್ರೀ ಶನಿಪರಮೇಶ್ವರ ಯುವಕ ಸಂಘದ ಜಾನಪದ ಕಲಾವಿದರಾದ ಗಿರೀಶ್ ಕುಮಾರ್, ಎಂ.ಎಸ್ ಸೋಮಶೇಖರ್, ಎಂ.ಎಸ್ ಮಂಜುನಾಥ್, ಎಂ.ಎಸ್ ದೇವರಾಜ್, ಎಂ.ಎಂ ಹುಚ್ಚರಾಯಪ್ಪ, ಎ.ವಿ ಚಂದ್ರಪ್ಪ, ಎಂ.ಡಿ ಲಕ್ಷ್ಮಣಪ್ಪ, ಎಂ.ಎಲ್ ಸುಧೀರ್ ಕುಮಾರ್, ಹರೀಶ್ ಕುಮಾರ್, ಎಂ.ಪಿ ತ್ಯಾಗರಾಜ್, ಎಂ.ಎಸ್ ಮಂಜುನಾಥ್, ಎಂ.ಬಿ ವಿನಯ್, ಎಂ.ಬಿ ಪ್ರಶಾಂತ್, ಎಂ.ಬಿ ದೇವರಾಜ್, ನಿಸ್ಸಾರ್ ಖಾನ್ ಕೆಂಚಾಯಿಕೊಪ್ಪ ಮತ್ತು ಎಂ.ಆರ್ ರೇವಣಪ್ಪ ಸೇರಿದಂತೆ ಒಟ್ಟು ೧೬ ಜನರ ತಂಡ ರಾಜ್ಯವನ್ನು ಪ್ರತಿನಿಧಿಸಿತ್ತು. ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಶಂಸೆಗೆ ಪಾತ್ರವಾಗಿದೆ. 
    ಈ ತಂಡ ಡೊಳ್ಳು ಕುಣಿತ ಮಾತ್ರವಲ್ಲದೆ ಜಾನಪದ ಕಲಾ ಪ್ರಕಾರಗಳಾದ ಸುಗ್ಗಿ ಕುಣಿತ, ಕೋಲಾಟ, ಗೀಗಿ ಪದ, ಲಾವಣಿ, ಭಜನೆ ಮತ್ತು ಸಣ್ಣಾಟ ನಿರಂತರವಾಗಿ ಮಾಡಿಕೊಂಡು ಬಂದಿದ್ದು, ರಾಜ್ಯದ ಪ್ರಮುಖ ಜಾನಪದ ಕಲಾತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.  
 

Wednesday, February 5, 2025

ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೈಯದ್ ರಿಯಾಜ್

ಭದ್ರಾವತಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ೩೦ನೇ ವಾರ್ಡ್ ಸದಸ್ಯರಾದ ಸೈಯದ್ ರಿಯಾಜ್ ಬುಧವಾರ ಅಧಿಕಾರ ಸ್ವೀಕರಿಸಿದರು. 
    ಭದ್ರಾವತಿ : ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ೩೦ನೇ ವಾರ್ಡ್ ಸದಸ್ಯರಾದ ಸೈಯದ್ ರಿಯಾಜ್ ಬುಧವಾರ ಅಧಿಕಾರ ಸ್ವೀಕರಿಸಿದರು. 
    ನಗರಸಭೆಯಲ್ಲಿ ಅಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್ ಪಕ್ಷ ಅಧಿಕಾರ ಹಂಚಿಕೆ ಮಾಡಿಕೊಂಡಿದ್ದು, ಅದರಂತೆ ೧ ವರ್ಷದ ಅವಧಿಗೆ ವಾರ್ಡ್ ನಂ.೨೮ರ ಸದಸ್ಯರಾದ ಕಾಂತರಾಜ್‌ರವರು ಅಧಿಕಾರ ನಿರ್ವಹಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ತೆರವಾಗಿದ್ದ ಸ್ಥಾನಕ್ಕೆ ಇದೀಗ ಸೈಯದ್ ರಿಯಾಜ್ ಆಯ್ಕೆಯಾಗುವ ಮೂಲಕ ಅಧಿಕಾರ ವಹಿಸಿಕೊಂಡಿದ್ದಾರೆ. 
    ನಗರಸಭೆ ಚುನಾಯಿತ ಹಾಗು ನಾಮನಿರ್ದೇಶಿತ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾದ ಸೈಯದ್ ರಿಯಾಜ್‌ರನ್ನು ಅಭಿನಂದಿಸಿದ್ದಾರೆ. 

ಫೆ.೭ರಂದು `ಬೆಂಗಳೂರು ಚಲೋ ಹೋರಾಟ' ಎನ್‌ಪಿಎಸ್ ನೌಕರರಿಂದ ಪತ್ರ ಚಳುವಳಿ

ಬೆಂಗಳೂರಿನಲ್ಲಿ ಫೆ.೭ರಂದು ನಡೆಯಲಿರುವ `ಬೆಂಗಳೂರು ಚಲೋ ಹೋರಾಟ'ದ ಅಂಗವಾಗಿ ಭದ್ರಾವತಿಯಲ್ಲಿ ಎನ್‌ಪಿಎಸ್ ತೊಲಗಿಸಿ ಓಪಿಎಸ್‌ಗಾಗಿ ಪತ್ರ ಚಳುವಳಿ ನಡೆಸಲಾಯಿತು. 
    ಭದ್ರಾವತಿ: ಬೆಂಗಳೂರಿನಲ್ಲಿ ಫೆ.೭ರಂದು ನಡೆಯಲಿರುವ `ಬೆಂಗಳೂರು ಚಲೋ ಹೋರಾಟ'ದ ಅಂಗವಾಗಿ ಎನ್‌ಪಿಎಸ್ ತೊಲಗಿಸಿ ಓಪಿಎಸ್‌ಗಾಗಿ ಪತ್ರ ಚಳುವಳಿ ನಡೆಸಲಾಯಿತು. 
    ನಗರದ ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನವನದಲ್ಲಿ ಮಂಗಳವಾರ ಸಂಜೆ ಸಭೆ ನಡೆಸಿದ ಎನ್‌ಪಿಎಸ್ ನೌಕರರು ಪತ್ರ ಚಳುವಳಿ ಮೂಲಕ ತಾಲೂಕಿನ ಎಲ್ಲಾ ನೌಕರರು `ಬೆಂಗಳೂರು ಚಲೋ ಹೋರಾಟ'ದಲ್ಲಿ ಪಾಲ್ಗೊಳ್ಳುವಂತೆ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಕೋರಿದರು. 
    ಸಭೆಯಲ್ಲಿ ಪಾಲ್ಗೊಂಡ ನೌಕರರು ನಿವೃತ್ತಿ ನಂತರ ನೆಮ್ಮದಿ ಜೀವನಕ್ಕೆ ಎನ್‌ಪಿಎಸ್ ಯಾವುದೇ ರೀತಿ ನೆರವಾಗುವುದಿಲ್ಲ. ನೆಮ್ಮದಿ ಬದುಕಿಗೆ ಪಿಂಚಣಿ ಬೇಕೇ ಬೇಕು ಇಲ್ಲದಿದ್ದರೆ ನಮ್ಮ ಮುಂದಿನ ಬದುಕು ದುಸ್ತರವಾಗುತ್ತದೆ ಎಂದು ತಮ್ಮ ಅಳಲನ್ನು ತೋರ್ಪಡಿಸಿಕೊಂಡರು. 

ರಥಸಪ್ತಮಿ ಅಂಗವಾಗಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಉತ್ಸವ ಮೆರವಣಿಗೆ

ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಥಸಪ್ತಮಿ ಅಂಗವಾಗಿ ಸ್ವಾಮಿಯ ಉತ್ಸವ ಜರುಗಿತು. 
    ಭದ್ರಾವತಿ : ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ರಥಸಪ್ತಮಿ ಅಂಗವಾಗಿ ಸ್ವಾಮಿಯ ಉತ್ಸವ ಜರುಗಿತು. 
    ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಶ್ರೀ ರಂಗನಾಥ ಶರ್ಮರವರ ನೇತೃತ್ವದಲ್ಲಿ ಬೆಳಿಗ್ಗೆ ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ಸ್ವಾಮಿಯ ಉತ್ಸವ ಮೆರವಣಿಗೆ ನಡೆಯಿತು. ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಕುಂಭಮೇಳದ ಗಂಗಾ ಜಲ ವಿತರಣೆ ನಡೆಯಿತು. ದೇವಸ್ಥಾನದ ಸಹಾಯಕ ಅರ್ಚಕ ಶ್ರೀನಿವಾಸನ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಿ. ರಮಾಕಾಂತ್, ನರಸಿಂಹಚಾರ್, ಕೃಷ್ಣಪ್ಪ, ಶಂಕರಪ್ಪ, ರವಿ ಮಾಸ್ಟರ್, ಶರತ್, ಶ್ರೀಕಾಂತ್, ಪ್ರದೀಪ್, ಶೇಷಗಿರಿ ಮಾಸ್ಟರ್, ಡೆಕೋರೇಟ್ ಸಂಜು, ವಿವಿಧ ಭಜನಾ ತಂಡದ ಮಹಿಳೆಯರು, ವೇದ ಪಾಠ ಶಾಲೆ ವಿದ್ಯಾರ್ಥಿಗಳು ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು. 
    ರಥಬೀದಿ ರಸ್ತೆ ದುರಸ್ತಿಗೊಳಿಸಿ : 
    ದೇವಸ್ಥಾನ ಮುಂಭಾಗದ ರಥಬೀದಿ ರಸ್ತೆ ಹಲವಾರು ವರ್ಷಗಳಿಂದ ಹಾಳಾಗಿದ್ದು, ಇದರಿಂದಾಗಿ ರಥೋತ್ಸವ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ನಗರಸಭೆ ಆಡಳಿತ ಗಮನ ಹರಿಸಿ ಮುಂದಿನ ಮಹಾರಥೋತ್ಸವದೊಳಗಾಗಿ ಹಾಳಾದ ರಸ್ತೆ ದುರಸ್ತಿಗೊಳಿಸಿ ಡಾಬರೀಕರಣ ಕೈಗೊಂಡು ಅನುಕೂಲ ಮಾಡಿಕೊಡುವಂತೆ ಸ್ಥಳೀಯ ಭಕ್ತರು ಕೋರಿದ್ದಾರೆ.