Monday, February 10, 2025

ಎಸ್‌ಎಸ್‌ಎಲ್‌ಸಿ ಮಕ್ಕಳನ್ನು ಪ್ರೋತ್ಸಾಹಿಸಲು ವಿಭಿನ್ನ ಕಾರ್ಯಕ್ರಮ

ನಗದು ಪ್ರೋತ್ಸಾಹ, ಉಚಿತ ಕಾರು ಚಾಲನಾ ತರಬೇತಿ

ಜಾನ್ ಬೆನ್ನಿ
    ಭದ್ರಾವತಿ: ನಗರದ ಉಂಬ್ಳೆಬೈಲು ರಸ್ತೆಯ ವಿಜಯ್ ಡ್ರೈವಿಂಗ್ ಸ್ಕೂಲ್ ವತಿಯಿಂದ ಚಾಲನಾ ತರಬೇತಿ ಜೊತೆಗೆ ಹಲವು ವಿಭಿನ್ನ ರೀತಿಯ ಸಾಮಾಜಿಕ ಕಾರ್ಯಗಳನ್ನು ಸಹ ಕೈಗೊಳ್ಳಲಾಗುತ್ತಿದೆ. ಇದೀಗ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿರುವ ಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 
    ಈ ಬಾರಿ ವಿಧಾನಕ್ಷೇತ್ರದ ವ್ಯಾಪ್ತಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದ ಓರ್ವ ವಿದ್ಯಾರ್ಥಿಗೆ ೧ ಸಾವಿರ ರು.  ನಗದು ಪ್ರೋತ್ಸಾಹ ಧನ ನೀಡಲಾಗುವುದು. ಅಲ್ಲದೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ೬೨೫ಕ್ಕೆ ೬೨೫ ಅಂಕಗಳನ್ನು ಪಡೆದ ಓರ್ವ ವಿದ್ಯಾರ್ಥಿಗೆ ೨೦ ಸಾವಿರ ರು. ಪ್ರೋತ್ಸಾಹ ಧನ ನೀಡಲಾಗುವುದು. ಒಂದು ವೇಳೆ ಒಂದಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ೬೨೫ಕ್ಕೆ ೬೨೫ ಅಂಕಗಳನ್ನು ಪಡೆದುಕೊಂಡಲ್ಲಿ ೨೦ ಸಾವಿರ ರು. ಹಣದಲ್ಲಿ ಹಂಚಿಕೆ ಮಾಡಿ ನೀಡಲಾಗುವುದು. ಅಲ್ಲದೆ ವಿದ್ಯಾರ್ಥಿಗೆ ಅಥವಾ ಆ ವಿದ್ಯಾರ್ಥಿಯ ಕುಟುಂಬದಲ್ಲಿನ ಓರ್ವ ಸದಸ್ಯರಿಗೆ ಮಾತ್ರ ಉಚಿತವಾಗಿ ಕಾರು ಚಾಲನಾ ತರಬೇತಿ ನೀಡಲಾಗುವುದು. ಶಾಲೆಯ ವಾರ್ಷಿಕೋತ್ಸವ ದಿನದಂದು ಪ್ರೋತ್ಸಾಹ ಧನ ನೀಡಲಾಗುವುದು ಎಂದು ವಿಜಯ್ ಡ್ರೈವಿಂಗ್ ಸ್ಕೂಲ್ ಮಾಲೀಕ, ವಿಧಾನಸಭಾ ಕ್ಷೇತ್ರದ ಪರಾಜಿತ ಪಕ್ಷೇತರ ಅಭ್ಯರ್ಥಿ ಜಾನ್ ಬೆನ್ನಿ ತಿಳಿಸಿದ್ದಾರೆ.

ಸಂವಿಧಾನ ಬದಲಾಯಿಸುವ ಹೇಳಿಕೆ ನೀಡುವ ವ್ಯಕ್ತಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ

ಈಗಿರುವ ಭಾರತದ ಸಂವಿಧಾನ ಬದಲಿಗೆ ಸಂಘ ಪರಿವಾರದ ಮನುಧರ್ಮ ಶಾಸ್ತ್ರ ಆಧಾರಿತ ಸಂವಿಧಾನವನ್ನು ಜಾರಿಗೆ ತರುವುದಾಗಿ ಮನುವಾದಿ ಹೇಳಿಕೆಯನ್ನು ಖಂಡಿಸಿ ಭದ್ರಾವತಿಯಲ್ಲಿ ಕರ್ನಾಟಕ ಅಂಬೇಡ್ಕರ್ ವೈಚಾರಿಕ ವೇದಿಕೆ ವತಿಯಿಂದ ನಗರದ ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು. 
    ಭದ್ರಾವತಿ: ಈ ದೇಶದ ಸಂವಿಧಾನ ಬದಲಾಯಿಸುವ ಅಪಪ್ರಚಾರಗಳು ನಡೆದರೂ ರಾಷ್ಟ್ರಪತಿಯವರು ಗಂಭೀರವಾಗಿ ಪರಿಗಣಿಸದೇ ಮೌನವಹಿಸಿರುವುದು ಸರಿಯಲ್ಲ. ಹಿಂದೂ ರಾಷ್ಟ್ರದ ಸಂವಿಧಾನ ಜಾರಿಗೆ ತರಲು ಮುಂದಾಗಿರುವ ಸಂಘ ಪರಿವಾರದ ನೀತಿಯನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸುವುದು ಇಂದು ಅನಿವಾರ್ಯವಾಗಿದೆ. ತಕ್ಷಣ ಸಂವಿಧಾನ ಬದಲಾಯಿಸುವ ಹೇಳಿಕೆ ನೀಡುವ ವ್ಯಕ್ತಿಗಳ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಿ ಶಿಕ್ಷೆ ವಿಧಿಸಬೇಕೆಂದು ಕರ್ನಾಟಕ ಅಂಬೇಡ್ಕರ್ ವೈಚಾರಿಕ ವೇದಿಕೆ ಸಂಚಾಲಕ ಪಿ. ಮೂರ್ತಿ ಆಗ್ರಹಿಸಿದರು. 
    ಈಗಿರುವ ಭಾರತದ ಸಂವಿಧಾನ ಬದಲಿಗೆ ಸಂಘ ಪರಿವಾರದ ಮನುಧರ್ಮ ಶಾಸ್ತ್ರ ಆಧಾರಿತ ಸಂವಿಧಾನವನ್ನು ಜಾರಿಗೆ ತರುವುದಾಗಿ ಮನುವಾದಿ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ಅಂಬೇಡ್ಕರ್ ವೈಚಾರಿಕ ವೇದಿಕೆ ವತಿಯಿಂದ ನಗರದ ಬಿ.ಎಚ್ ರಸ್ತೆ, ಅಂಡರ್‌ಬ್ರಿಡ್ಜ್ ಬಳಿ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಕೇತಿಕ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದರು. 
    ದೇಶದ ಬಹುಸಂಖ್ಯಾತರಾದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ರೈತರು, ಕಾರ್ಮಿಕರು, ಮಹಿಳೆಯರು, ಮಕ್ಕಳು ಮತ್ತು ಆದಿವಾಸಿಗಳ ಧ್ವನಿಯಾಗಿ ಈಗಿರುವ ಸಂವಿಧಾನವಿದ್ದು, ಈ ಸಮುದಾಯಗಳ ಸಾಮಾಜಿಕ ಶೈಕ್ಷಣಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ಸಮಾನತೆಯನ್ನು ಹಾಗೂ ಎಲ್ಲರ ಸ್ವಾವಲಂಬನೆ ಬಯಸುವ ವಿಶ್ವಜ್ಞಾನಿ, ಮಹಾಮಾನವತಾವಾದಿ ಅಂಬೇಡ್ಕರ್‌ರವರು ಈ ದೇಶಕ್ಕೆ ಕೊಡುಗೆಯಾಗಿರುವ ಸಂವಿಧಾನವನ್ನು ಬದಲಾಯಿಸಿ ಅಸಮಾನತೆಯನ್ನು ಮೂಲಮಂತ್ರವನ್ನಾಗಿಸಿ ಕೊಂಡಿರುವ ಮನುಸ್ಮೃತಿ ಆಧಾರಿತ `ಹಿಂದೂ ರಾಷ್ಟ್ರದ ಸಂವಿಧಾನ'  ಜಾರಿಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು. 
    ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದಾಗಿನಿಂದ ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು `ಸಂವಿಧಾನವನ್ನು ಸುಡುತ್ತೇವೆ', ಸಂವಿಧಾನ ಬದಲಾಯಿಸಲೇ ನಾವು ಅಧಿಕಾರಕ್ಕೆ ಬಂದಿರುವುದು. ಇತ್ಯಾದಿ ಸಂವಿಧಾನ ವಿರೋಧಿ ಹೇಳಿಕೆಗಳನ್ನು ಕೊಡುತ್ತಾ ಬಂದರು. ಅಂಬೇಡ್ಕರ್ ಸಂವಿಧಾನ ಬರೆದಿಲ್ಲ ಬಿ .ಎನ್. ರಾಯ್ ಭಾರತ ಸಂವಿಧಾನದ ಕರಡು ರಚಿಸಿದ್ದು ಎಂದು ಅಪಪ್ರಚಾರ ಮಾಡಿದರು. `ಅಂಬೇಡ್ಕರ್ ಅಂಬೇಡ್ಕರ್ ಎಂದೇಳುವುದು ಫ್ಯಾಷನ್, ಆಗಿಹೋಗಿದೆ ಎಂದು ಸಂಸತ್ತಿನಲ್ಲೇ ಗೃಹಮಂತ್ರಿ ಅಮಿತ್ ಶಾ ಅಂಬೇಡ್ಕರ್ ಅವರಿಗೆ ಅವಮಾನಗೊಳಿಸಿ ಹೇಳಿಕೆ ನೀಡಿದರು. ಇತ್ತೀಚಿಗೆ ಪಂಜಾಬ್‌ನಲ್ಲಿ ಅಂಬೇಡ್ಕರ್ ಪ್ರತಿಮೆ ವಿರೂಪಗೊಳಿಸಿದ ಪ್ರಕರಣ ನಡೆದಿದೆ. ಈಗ ಅಂಬೇಡ್ಕರ್ ಬರೆದ ಸಂವಿಧಾನದ ಬದಲಿಗೆ ಬೇರೊಂದು ಸಂವಿಧಾನ ತರುವ ಪ್ರಸ್ತಾಪ ಬಂದಿದೆ. ಇದೆಲ್ಲಾ  ಸಂಘ ಪರಿವಾರದ ಮನುಧರ್ಮ ಶಾಸ್ತ್ರ ಆಧಾರಿತ ಸಂವಿಧಾನವನ್ನು ಜಾರಿಗೆ ತರುವ ಹುನ್ನಾರವಾಗಿದ್ದು, ವಿರೋಧ ಪಕ್ಷಗಳು ಸಹ ಈ ವಿಚಾರದ ಬಗ್ಗೆ ಪ್ರತಿರೋಧ ಒಡ್ಡದೇ ಮೌನ ವಹಿಸಿರುವುದು ಇದಕ್ಕೆ ಮತ್ತಷ್ಟು ಇಂಬು ನೀಡಿದಂತಾಗಿದೆ ಎಂದರು. 
    ಕರ್ನಾಟಕ ಚಾಣಕ್ಯ ಸೇನೆಯ ಐಹೊಳೆ ನಾರಾಯಣ, ಇಂದ್ರೇಶ್, ಮಂಜಪ್ಪ, ಸುಬ್ರಮಣಿ, ಕಲ್ಲೇಶಪ್ಪ, ದಲಿತ ಸಂಘರ್ಷ ಸಮಿತಿ ಸಂಯೋಜಕ ಜಗದೀಶ್ ಸೇರಿದಂತೆ ಇನ್ನಿತರರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. 

Sunday, February 9, 2025

ಪ್ರಜಾಪ್ರಭುತ್ವ ವ್ಯವಸ್ಥೆ ಅವಮಾನಿಸಿದ ವ್ಯಕ್ತಿಯ ಸೋಲು : ಜಿ. ಧರ್ಮಪ್ರಸಾದ್

ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆಲುವು : ವಿಜಯೋತ್ಸವ 

ದೆಹಲಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಭದ್ರಾವತಿಯಲ್ಲಿ ಬಿಜೆಪಿ ಮಂಡಲ ವತಿಯಿಂದ ನಗರದ ಮಾಧವಾಚಾರ್ ವೃತ್ತದಲ್ಲಿ ಸಂಭ್ರಮಾಚರಣೆ ನಡೆಸಲಾಯಿತು. 
    ಭದ್ರಾವತಿ : ಲಿಕ್ಕರ್ ವ್ಯವಹಾರದ ಕೋಟ್ಯಾಂತರ ರು. ವಂಚನೆ ಆರೋಪದಲ್ಲಿ ಜೈಲು ಸೇರಿ ಜೈಲಿನಿಂದಲೇ ಆಡಳಿತ ಮಾಡುವುದಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಅವಮಾನಿಸಿದ ವ್ಯಕ್ತಿಯ ಸೋಲಾಗಿದೆ. ದೆಹಲಿಯಲ್ಲೂ ಮೋದಿಯವರ ಆಡಳಿತಕ್ಕೆ ಜನಮನ್ನಣೆ ಲಭಿಸಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹೇಳಿದರು. 
    ದೆಹಲಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಂಡಲ ವತಿಯಿಂದ ನಗರದ ಮಾಧವಾಚಾರ್ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಭ್ರಮಾಚರಣೆ ನೇತೃತ್ವ ವಹಿಸಿ ಅವರು ಮಾತನಾಡಿದರು.
    ದೇಶದ ಅಭಿವೃದ್ಧಿಯ ದಿಕ್ಕನ್ನು ಬದಲಿಸಲಿರುವ ದೆಹಲಿ ಚುನಾವಣೆ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈ ಬಾರಿ ಪಕ್ಷಕ್ಕೆ  ಜನಮನ್ನಣೆ ಲಭಿಸಿರುವುದು ಸಂತಸದ ಸಂಗತಿಯಾಗಿದೆ. ೪೮ ಸ್ಥಾನಗಳನ್ನು ಗೆದ್ದು ೨೭ ವರ್ಷಗಳ ಬಳಿಕ ದೇಶದ ಕೇಂದ್ರ ಭಾಗದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಕಾರ್ಯಕರ್ತರಲ್ಲಿ ಹೊಸ ಹುರುಪನ್ನು ತಂದಿದೆ. ಸಂಘದ ಶತಮಾನೋತ್ಸವ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿ ಪಕ್ಷದ ವಶವಾಗಿದೆ. ಇದು ಭಾರತ ವಿಶ್ವಗುರುವಾಗುವ ಶುಭ ಸೂಚನೆ. ಇಡೀ ಜಗತ್ತು ನರೇಂದ್ರ ಮೋದಿಜಿ ಅವರ ನಾಯಕತ್ವವನ್ನು ಒಪ್ಪಿಕೊಂಡಿದೆ ಎಂದರು. 
     ಪಕ್ಷದ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಮುಖಂಡರಾದ ಎಚ್. ತೀರ್ಥಯ್ಯ, ಎಂ. ಮಂಜುನಾಥ್, ಜೆಡಿಎಸ್ ಪಕ್ಷದ ನಗರ ಅಧ್ಯಕ್ಷ ಆರ್. ಕರುಣಾಮೂರ್ತಿ,  ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಚೆನ್ನೇಶ್, ಪ್ರಮುಖರಾದ  ರಾಮಲಿಂಗಯ್ಯ, ಎಂ.ಎಸ್ ಸುರೇಶಪ್ಪ,  ಕಾ.ರಾ ನಾಗರಾಜ್, ರಂಗಸ್ವಾಮಿ, ರಾಜಶೇಖರ್ ಉಪ್ಪಾರ್, ಧನುಷ್ ಬೋಸ್ಲೆ, ಸರಸ್ವತಿ, ಸತೀಶ್, ನಿರಂಜನ್ ಗೌಡ, ಪ್ರಸನ್ನ ಕುಮಾರ್, ರಘುರಾವ್, ಅನ್ನಪೂರ್ಣ, ಸಾಗರ್, ಮಂಜುಳಾ, ಉಮಾವತಿ, ಲತಾ ಪ್ರಭಾಕರ್, ಮಂಡಲದ ಪದಾಧಿಕಾರಿಗಳು, ಮಹಾಶಕ್ತಿ ಕೇಂದ್ರ ಹಾಗೂ ವಿವಿಧ ಮೋರ್ಚಾಗಳ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಸಮಾಜದಲ್ಲಿ ವಿದ್ಯೆ ಜೊತೆಗೆ ಸೇವಾ ಮನೋಭಾವ ಸಹ ಬಹಳ ಮುಖ್ಯ : ಡಾ. ಶರತ್ ಅನಂತಮೂರ್ತಿ

ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ನೇಹ ಚಂದ್ರಮ ಪ್ರಾಂತೀಯ ಸಮ್ಮೇಳನ ಪ್ರಾಂತೀಯ ಪ್ರಥಮ ಮಹಿಳೆ ಚಂದು ಮಹೇಶ್ ಉದ್ಘಾಟಿಸಿದರು. 
    ಭದ್ರಾವತಿ: ಸೇವೆಯನ್ನು ಗುರಿಯಾಗಿಸಿಕೊಂಡಿರುವ ಲಯನ್ಸ್ ಕ್ಲಬ್ ಸಮಾಜಮುಖಿ ಕಾರ್ಯಗಳು ಶ್ಲಾಘನೀಯ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಡಾ. ಶರತ್ ಅನಂತಮೂರ್ತಿ ಹೇಳಿದರು. 
    ಅವರು ನಗರದ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ನೇಹ ಚಂದ್ರಮ ಪ್ರಾಂತೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು. 
    ಸಮಾಜದಲ್ಲಿ ವಿದ್ಯೆ ಜೊತೆಗೆ ಸೇವಾ ಮನೋಭಾವ ಸಹ ಬಹಳ ಮುಖ್ಯವಾಗಿದೆ. ಇದನ್ನುನಾವೆಲ್ಲರೂ ಅರ್ಥ ಮಾಡಿಕೊಂಡಾಗ ಮಾತ್ರ ಎಲ್ಲರೂ ನೆಮ್ಮದಿಯಿಂದ ಬದಕಲು ಸಾಧ್ಯ. ಈ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಮಾದರಿಯಾಗಿದೆ ಎಂದರು. 
    ಪ್ರಾಂತೀಯ ಅಧ್ಯಕ್ಷ, ನ್ಯಾಯವಾದಿ ಬಿ.ಎಸ್ ಮಹೇಶ್ ಕುಮಾರ್ ಮಾತನಾಡಿ, ಉಳ್ಳವರು ತಮ್ಮ ಅಲ್ಪ ಪ್ರಮಾಣದ ನೆರವು ಇತರರೊಂದಿಗೆ ಸೇರಿಕೊಂಡು ಹಂಚಿದಾಗ ಅದು ಬೃಹತ್ ಪ್ರಮಾಣದ ಕಾರ್ಯಗಳನ್ನು  ಕೈಗೊಳ್ಳಲು ಸಾಧ್ಯವಾಗಿಸುತ್ತದೆ. ಈ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಪ್ರತಿಯೊಬ್ಬರಿಗೂ ಸಹಕಾರಿಯಾಗಿದೆ. ಸೇವಾ ಮನೋಭಾವನೆ ಜೊತೆಗೆ ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಸಿಕೊಂಡು ಹೋದಾಗ ಮಾತ್ರ ಏನಾದರೂ ಕಾರ್ಯಗಳನ್ನು ಕೈಗೊಳ್ಳಬಹುದು. ಲಯನ್ಸ್ ಕ್ಲಬ್‌ನಲ್ಲಿ ಪ್ರತಿಯೊಬ್ಬರು ಸಹ ಸಹಕಾರ ನೀಡುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಸಹ ಕೈಗೊಳ್ಳಲು ಅಸಾಧ್ಯವಾಗಿರುವ ಕಾರ್ಯಗಳನ್ನು ಯಶಸ್ವಿಯಿಂದ ಕೈಗೊಳ್ಳಲಾಗುತ್ತಿದೆ ಎಂದರು. 
    ಸಮ್ಮೇಳನ ಉದ್ದೇಶ ನಾವು ಕೈಗೊಳ್ಳುವ ಸಮಾಜಮುಖಿ ಕಾರ್ಯಗಳು ಸಮಾಜಕ್ಕೆ ತಿಳಿದಾಗ ಅಸಹಾಯಕರು, ಅಶಕ್ತರು ನಮ್ಮಿಂದ ನೆರವನ್ನು ಬಯಸುತ್ತಾರೆ. ಅಲ್ಲದೆ ಲಯನ್ಸ್ ಕ್ಲಬ್ ಒಂದು ರೀತಿ ಸಂವಿಧಾನಾತ್ಮಕ ವ್ಯವಸ್ಥೆಯಂತೆ ತನ್ನದೇ ಆಡಳಿತ ವ್ಯವಸ್ಥೆಯನ್ನು ರೂಪಿಸಿಕೊಂಡಿದೆ. ಇಲ್ಲೂ ಸಹ ರಾಜ್ಯಪಾಲರು, ನಂತರ ಪ್ರಾಂತೀಯ ಅಧ್ಯಕ್ಷರು, ವಲಯ ಅಧ್ಯಕ್ಷರು, ಈ ರೀತಿಯಲ್ಲಿ ಜವಾಬ್ದಾರಿಗಳನ್ನು ನೀಡಿದೆ. ನಮ್ಮ ನಮ್ಮ ಜವಾಬ್ದಾರಿಗಳನ್ನು ಪರಾಮರ್ಶಿಸಿಕೊಳ್ಳುವ ಜೊತೆಗೆ ಪರಸ್ಪರ ನಡುವೆ ಬಾಂಧವ್ಯ ವೃದ್ಧಿಸಿಕೊಳ್ಳುವ ಉದ್ದೇಶ ಸಮ್ಮೇಳನ ಹೊಂದಿದೆ ಎಂದರು. 
    ಪ್ರಾಂತೀಯ ಪ್ರಥಮ ಮಹಿಳೆ ಚಂದು ಮಹೇಶ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಮಾಜಿ ನಿರ್ದೇಶಕ ಡಾ. ಕೆ.ಪಿ ಪುತ್ತುರಾಯ, ೨ನೇ ವಿಡಿಜಿ ರಾಜೀವ್ ಕೊಟಿಯನ್, ವಲಯ ಸಲಹೆಗಾರ, ಪಿಡಿಜಿ ಬಿ. ದಿವಾಕರಶೆಟ್ಟಿ, ಸಮ್ಮೇಳನ ಸಮಿತಿ ಸಂಯೋಜಕ ಎ.ಎನ್ ಕಾರ್ತಿಕ್, ಕಾರ್ಯದರ್ಶಿ ಹೆಬ್ಬಂಡಿ ನಾಗರಾಜ್, ಖಜಾಂಚಿ ಕೆ.ಎಚ್ ರವಿಕುಮಾರ್, ಪ್ರಾಂತೀಯ ಕಾರ್ಯದರ್ಶಿ ಪರಮೇಶ್ವರಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಮೂರ್ತಿ ನಾಯ್ಡು, ಕಾರ್ಯದರ್ಶಿ ಎನ್. ಶಿವಕುಮಾರ್, ಖಜಾಂಚಿ ಕೆ.ಜಿ ರಾಜ್‌ಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಅಜಯ್ ನಾರಾಯಣ್ ಮತ್ತು ಎಂ. ರಘುನಾಥ್ ಲಯನ್ಸ್ ಪ್ರಾರ್ಥನೆ ನೆರವೇರಿಸಿದರು. ಕ್ಲಬ್ ಮಾಜಿ ಅಧ್ಯಕ್ಷ ಎಲ್. ದೇವರಾಜ್ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್ ಪಾಟೀಲ್ ರಾಷ್ಟ್ರ ಧ್ವಜ ಗೌರವ ವಂದನೆ ನೆರವೇರಿಸಿಕೊಟ್ಟರು. ಸಮ್ಮೇಳನ ಸಮಿತಿ ಅಧ್ಯಕ್ಷ ಜಿ.ಡಿ ಪ್ರಭುದೇವ ಸ್ವಾಗತಿಸಿದರು. ಐರೆನ್ ಡಿಸೋಜ ಮತ್ತು ಡಿ ಶಂಕರ ಮೂರ್ತಿ ಕಾರ್ಯಕ್ರಮ ನಿರೂಪಿಸಿ, ಪರಮೇಶ್ವರಪ್ಪ ವಂದಿಸಿದರು. 
    ಹಿರಿಯ ಮುಖಂಡ ಬಿ.ಕೆ ಜಗನ್ನಾಥ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್, ಉದ್ಯಮಿ ಎನ್‌ಟಿಸಿ ನಾಗೇಶ್, ಪ್ರಮುಖರಾದ ಡಾ. ರವೀಂದ್ರನಾಥ ಕೋಠಿ, ಡಾ. ಜಿ.ಎಂ ನಟರಾಜ್, ಎಚ್.ಬಿ ಸಿದ್ದೇಶ್, ಡಾ. ನವೀನ್ ನಾಗರಾಜ್, ವಿ. ರಾಜು, ಪೂರ್ಣಿಮಾ, ಮಹೇಶ್ ಜಾವಳ್ಳಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಲಯನ್ಸ್ ವಲಯಾಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

Saturday, February 8, 2025

ರೈಲ್ವೆ ಸಲಹಾ ಸಮಿತಿ ವಿಶೇಷ ಸಭೆ : ಅಭಿವೃದ್ಧಿ ಕಾರ್ಯ ಕೈಗೊಳ್ಳಿ

ಭದ್ರಾವತಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಸಲಹಾ ಸಮಿತಿ ಸಭೆ ಶನಿವಾರ ನಡೆಯಿತು.
    ಭದ್ರಾವತಿ : ನಗರದ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಅಹವಾಲುಗಳನ್ನು ನೋಂದಾಯಿಸಲು ನೋಂದಣಿ ಪುಸ್ತಕದ ಕಡ್ಡಾಯ ನಿರ್ವಹಣೆ, ಸಿಸಿ ಕ್ಯಾಮೆರಾಗಳ ಅಳವಡಿಕೆ, ದೂರದರ್ಶನ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳ ಜೊತೆಗೆ ಇನ್ನಿತರ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳುವಂತೆ ಶನಿವಾರ ನಡೆದ ರೈಲ್ವೆ ಸಲಹಾ ಸಮಿತಿ ವಿಶೇಷ ಸಭೆಯಲ್ಲಿ ಮನವಿ ಮಾಡಲಾಯಿತು.
    ನಿಲ್ದಾಣದಲ್ಲಿ ಪ್ರದರ್ಶನ ಫಲಕಗಳು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು, ಶೌಚಾಲಯಗಳ ಸ್ವಚ್ಛತೆ, ಲಿಫ್ಟ್ ಸೌಲಭ್ಯ ಒದಗಿಸುವುದು, ಅಪೂರ್ಣಗೊಂಡ ಶೆಲ್ಟರ್ ಕಾಮಗಾರಿ ಪೂರ್ಣಗೊಳಿಸುವುದು,, ನಿಲ್ದಾಣದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವುದು, ಲೋಯರ್ ಹುತ್ತಾ ರೈಲ್ವೆ ಕೆಳಸೇತುವೆಯಲ್ಲಿ ಒಳಚರಂಡಿ ವ್ಯವಸ್ಥೆ ಕೈಗೊಳ್ಳುವುದು, ಐಟಿಐ ಹಾಗೂ ಭಂಡಾರಹಳ್ಳಿ ಮಧ್ಯೆ ಹಾದು ಹೋಗುವ ರೈಲ್ವೆ ಹಳಿಗಳ ಭದ್ರತೆಗಾಗಿ ಫೆನ್ಸಿಂಗ್ ವ್ಯವಸ್ಥೆ ಕೈಗೊಳ್ಳುವುದು ಮತ್ತು ರೈಲ್ವೆ ನಿಲ್ದಾಣದ ಹೊರಗೆ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸೂಕ್ತ ಕ್ರಮ, ಕೈಗೊಳ್ಳುವಂತೆ ಸಭೆಯಲ್ಲಿ ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದರು.
    ಅಭಿವೃದ್ಧಿ ವಿಚಾರದಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳು ಕೈಗೊಳ್ಳುವಂತೆ ಸಲಹೆ ನೀಡಲಾಯಿತು.
    ರೈಲ್ವೆ ವಾಣಿಜ್ಯ ವಿಭಾಗದ ನಿರೀಕ್ಷಕ ಮಂಜುನಾಥ್, ನಿಲ್ದಾಣದ ಮೇಲ್ವಿಚಾರಕ ಮೋಹನ್ ಮಿಶ್ರ , ವಿಭಾಗೀಯ ಅಭಿಯಂತರ ಅಭಿಲಾಷ್, ಆರ್.ಪಿ.ಎಫ್, ರಘುನಾಥ್, ವಾಣಿಜ್ಯ ವಿಭಾಗದ ಮೇಲ್ವಿಚಾರಕರಾದ ಪ್ರವೀಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ರೈಲ್ವೆ ಸಲಹಾ ಸಮಿತಿ ಸದಸ್ಯರಾದ ಶ್ರೀವತ್ಸ, ರವಿಕುಮಾರ್, ಲತಾ ಪ್ರಭಾಕರ್ , ಕರುಣಾಕರ್ ಹಾಗೂ ಕೃಷ್ಣಚಲವಾದಿ ಇನ್ನಿತರರು ಪಾಲ್ಗೊಂಡಿದ್ದರು.

ಸಿದ್ದಾರ್ಥ ಅಂಧರ ಕೇಂದ್ರದ ಇಬ್ಬರು ವಿಕಲಚೇತನರಿಗೆ ಚಿನ್ನದ ಪದಕ


ಭದ್ರಾವತಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದ ಇಬ್ಬರು ವಿಕಲಚೇತನರು ೩೩ನೇ ರಾಜ್ಯ ಪ್ಯಾರ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಬಹುಮಾನದೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. 
    ಭದ್ರಾವತಿ : ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದ ಇಬ್ಬರು ವಿಕಲಚೇತನರು ೩೩ನೇ ರಾಜ್ಯ ಪ್ಯಾರ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಬಹುಮಾನದೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. 
    ಅಂಧ ವಿಕಲಚೇತನರಾದ ಎಂ.ಜಿ ಅಭಿಜಿತ್ ೧೦೦ ಮೀಟರ್ ಓಟದಲ್ಲಿ ಹಾಗು ಆರ್. ರಂಜನ್ ೨೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದುಕೊಂಡಿದ್ದಾರೆ. 
    ಈ ಇಬ್ಬರು ಸಾಧಕರನ್ನು ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ, ಆಡಳಿತಾಧಿಕಾರಿ ಶಾರದ ಶಿವಬಸಪ್ಪ ಸೇರಿದಂತೆ ಅಂಧರ ಕೇಂದ್ರದ ಆಡಳಿತ ಮಂಡಳಿ ಪ್ರಮುಖರು ಹಾಗು ಕ್ರೀಡಾಭಿಮಾನಿಗಳು ಮತ್ತು ನಗರದ ಗಣ್ಯರು ಅಭಿನಂದಿಸಿದ್ದಾರೆ. 

Friday, February 7, 2025

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ : ಜಾನಪದ ಕಲಾ ತಂಡದಿಂದ ಪ್ರದರ್ಶನ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಜಾನಪದ ಪರಿಷತ್ ಭದ್ರಾವತಿ ತಾಲೂಕು ಶಾಖೆ ವತಿಯಿಂದ ಜಾನಪದ ಕಲಾವಿದರು ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 
    ಭದ್ರಾವತಿ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಜಾನಪದ ಪರಿಷತ್ ತಾಲೂಕು ಶಾಖೆ ವತಿಯಿಂದ ಜಾನಪದ ಕಲಾವಿದರು ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 
    ಪರಿಷತ್ ತಾಲೂಕು ಶಾಖೆ ಅಧ್ಯಕ್ಷ ಎಂ.ಆರ್ ರೇವಣಪ್ಪ ಮತ್ತು ಸಂಗಡಿಗರು  "ಗೀ ಗೀ ಪದ, ಸ್ವಚ್ಛ ಭಾರತ ಅಭಿಯಾನ ಗೀತೆ, ಗುರುವೇ ನಿನ್ನಾಟ ಬಲ್ಲವರ್ಯಾರು ಜಾನಪದ ಗೀತೆ ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.
    ತಂಡದಲ್ಲಿ ಕಲಾವಿದರಾದ ಚಂದ್ರಶೇಖರ ಚಕ್ರಸಾಲಿ, ನಿಸಾರ್‌ಖಾನ್, ದಯಾನಂದ್ ಸಾಗರ್, ಸೋಮಶೇಖರ್, ದೇವರಾಜ್ ಮತ್ತು ದೇವೇಂದ್ರ ಭಾಗವಹಿಸಿದ್ದರು.