Saturday, February 22, 2025

ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಪ್ರಯಾಣ ಬೆಳೆಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು

ಉತ್ತರ ಪ್ರದೇಶದ ಪ್ರಯಾಗ್ ರಾಜ್ ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳಲು ಭದ್ರಾವತಿ ನಗರದ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಶನಿವಾರ ವಿಶೇಷ ರೈಲಿನಲ್ಲಿ ಪ್ರಯಾಣ ಬೆಳೆಸಿದರು. 
    ಭದ್ರಾವತಿ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳಲು ನಗರದ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಶನಿವಾರ ವಿಶೇಷ ರೈಲಿನಲ್ಲಿ ಪ್ರಯಾಣ ಬೆಳೆಸಿದರು. 
    ನಗರದ ರೈಲ್ವೆ ನಿಲ್ದಾಣಕ್ಕೆ ಶಿವಮೊಗ್ಗದಿಂದ ಸಂಜೆ ೫.೨೦ಕ್ಕೆ ಆಗಮಿಸಿದ ರೈಲಿನಲ್ಲಿ ಮಂಗೋಟೆ ರುದ್ರೇಶ್, ಕವಿತಾ ರಾವ್, ಬಾರಂದೂರು ಪ್ರಸನ್ನ, ರವಿಕುಮಾರ್, ಸುಲೋಚನಾ, ದೇವರಾಜ್ ಸೇರಿದಂತೆ ಬಿಜೆಪಿ ಪಕ್ಷದ ಹಾಗು ಹಿಂದೂಪರ ಸಂಘಟನೆಗಳ  ಮುಖಂಡರು, ಕಾರ್ಯಕರ್ತರು ಸೇರಿದಂತೆ ನೂರಾರು ಮಂದಿ ಪ್ರಯಾಣ ಬೆಳೆಸಿದರು. ಇದಕ್ಕೂ ಮೊದಲು ರೈಲ್ವೆ ನಿಲ್ದಾಣದಲ್ಲಿ ಮುಖಂಡರು, ಕಾರ್ಯಕರ್ತರು ಸಂಭ್ರಮ ಹಂಚಿಕೊಂಡರು. 
    ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಪ್ರಧಾನ ಕಾರ್ಯದರ್ಶಿ ಚನ್ನೇಶ್, ಹಿಂದುಳಿದ ಮೋರ್ಚಾದ ರಾಜಶೇಖರ್ ಉಪ್ಪಾರ ಸೇರಿದಂತೆ ಇನ್ನಿತರರು ಶುಭಕೋರಿದರು. 

Friday, February 21, 2025

ಕೆ. ಸತ್ಯನಾರಾಯಣ ನಿಧನ : ದೇಹ ದಾನ

ಕೆ. ಸತ್ಯನಾರಾಯಣ 
    ಭದ್ರಾವತಿ: ನಗರದ ಹೊಸಮನೆ ನೃಪತುಂಗ ನಗರದ ೨ನೇ ಕ್ರಾಸ್ ನಿವಾಸಿ ಕೆ.ಸತ್ಯನಾರಾಯಣ(೯೫) ಶುಕ್ರವಾರ ಸಂಜೆ ನಿಧನ ಹೊಂದಿದರು. ಇವರ ಮೃತದೇಹ ಶಿವಮೊಗ್ಗ ಸಿಮ್ಸ್ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿದೆ.
    ಮೃತರಿಗೆ ೫ ಜನ ಮಕ್ಕಳಿದ್ದು, ಇವರ ಕೊನೆಯ ಆಸೆಯಂತೆ ಇವರ ಕಣ್ಣುಗಳನ್ನು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಗೆ ಹಾಗು ದೇಹವನ್ನು ಶಿವಮೊಗ್ಗ ಸಿಮ್ಸ್ ಮೆಡಿಕಲ್ ಕಾಲೇಜಿಗೆ ಕುಟುಂಬಸ್ಥರು ದಾನ ಮಾಡಿದ್ದಾರೆ. ಸತ್ಯನಾರಾಯಣರವರು ಬಲಿಜ ಸಮಾಜದ ಮುಖಂಡರಾಗಿದ್ದು, ಇವರ ನಿಧನಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ. 

ರೈತರ ಧ್ವನಿಯಾಗಿ ಅರಣ್ಯ ಇಲಾಖೆ ವಿರುದ್ಧ ರಾಜಕೀಯ ಪಕ್ಷಗಳಿಂದ ಪಕ್ಷಾತೀತ ಹೋರಾಟ

ರೈತರಿಗೆ ನೀಡಿರುವ ನೋಟಿಸ್ ತಕ್ಷಣ ಹಿಂಪಡೆಯಿರಿ, ರೈತರ ಹಿತಕಾಪಾಡಿ 


ಭದ್ರಾವತಿ ತಾಲೂಕು ವ್ಯಾಪ್ತಿಯಲ್ಲಿ ಬರುವ ಅನೇಕ ಗ್ರಾಮಗಳಲ್ಲಿ ಅರಣ್ಯ ಇಲಾಖೆ ವತಿಯಿಂದ ನೋಟೀಸ್ ನೀಡಿ ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸಿ ಶುಕ್ರವಾರ ರೈತರೊಂದಿಗೆ ವಿವಿಧ ರಾಜಕೀಯ ಪಕ್ಷಗಳು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಪಕ್ಷಾತೀತವಾಗಿ ಹೋರಾಟ ನಡೆಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದವು. ಪ್ರತಿಭಟನೆ ಅಂಗವಾಗಿ  ರಂಗಪ್ಪ ವೃತ್ತದಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿವರೆಗೂ ರೈತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. 
    ಭದ್ರಾವತಿ : ತಾಲೂಕಿನ ರೈತರು ಕಳೆದ ಸುಮಾರು ೫೦-೬೦ ವರ್ಷಗಳಿಂದ ಸರ್ಕಾರದಿಂದ ಸಾಗುವಳಿ ಪತ್ರ ಪಡೆದು ಖಾತೆ, ಪಹಣಿ, ಮ್ಯುಟೇಷನ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ಹೊಂದಿದ್ದು, ಬ್ಯಾಂಕ್‌ಗಳಿಂದ ಸಾಲ ಸಹ ಪಡೆದಿದ್ದು, ಸಾಕಷ್ಟು ಹಣ ಖರ್ಚು ಮಾಡಿ ಅಡಕೆ-ತೆಂಗು ಸೇರಿದಂತೆ ಪ್ರಮುಖ ವಾಣಿಜ್ಯ ಬೆಲೆಗಳ ತೋಟ ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿದ್ದು, ಇದೀಗ ಅರಣ್ಯ ಭೂಮಿ ಹೆಸರಿನಲ್ಲಿ  ತಾಲೂಕು ವ್ಯಾಪ್ತಿಯಲ್ಲಿ ಬರುವ ಅನೇಕ ಗ್ರಾಮಗಳಲ್ಲಿ ಅರಣ್ಯ ಇಲಾಖೆ ವತಿಯಿಂದ ನೋಟೀಸ್ ನೀಡಿ ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸಿ ಶುಕ್ರವಾರ ರೈತರೊಂದಿಗೆ ವಿವಿಧ ರಾಜಕೀಯ ಪಕ್ಷಗಳು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಪಕ್ಷಾತೀತವಾಗಿ ಹೋರಾಟ ನಡೆಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದವು. 
            ಜಾತ್ಯತೀತ ಜನತಾದಳ ಹಾಗೂ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಗರ್‌ಹುಕುಂ ಸಾಗುವಳಿ ಮತ್ತು ಶರಾವತಿ ಮುಳುಗಡೆ ರೈತರ ಹಿತರಕ್ಷಣಾ ಸಮಿತಿ ಹಾಗು ಶಿವಮೊಗ್ಗ ಗ್ರಾಮಾಂತರ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ನಾವೆಲ್ಲರೂ ರೈತರ ಧ್ವನಿಯಾಗಿದ್ದು, ಪಕ್ಷಕ್ಕಿಂತ ರೈತರ ಹಿತ ಬಹಳ ಮುಖ್ಯವಾಗಿದೆ. ತಕ್ಷಣ ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯಬೇಕು. ರೈತರನ್ನು ಒಕ್ಕಲೆಬ್ಬಿಸುವುದನ್ನು ಬಿಡಬೇಕು. ರೈತರಿಗೆ ನ್ಯಾಯ ಒದಗಿಸಿಕೊಡುವ ಮೂಲಕ ಅವರ ಹಿತಕಾಪಾಡಬೇಕೆಂದು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸರ್ಕಾರವನ್ನು ಆಗ್ರಹಿಸಿದರು.  
ಇದಕ್ಕೂ ನಗರದ ರಂಗಪ್ಪ ವೃತ್ತದಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿವರೆಗೂ ರೈತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು. 
    ಪ್ರತಿಭಟನೆಯಲ್ಲಿ ಶಾಸಕರಾದ ಶಾರದಾ ಪೂರ್‍ಯಾನಾಯ್ಕ,  ಡಾ. ಧನಂಜಯ ಸರ್ಜಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ, ಪಕ್ಷದ ಪ್ರಮುಖರಾದ ಆರ್ ಕರುಣಾಮೂರ್ತಿ, ಟಿ. ಚಂದ್ರೇಗೌಡ, ಗೀತಾ ಸತೀಶ್, ಡಿ. ಆನಂದ್, ಎಂ.ಎ ಅಜಿತ್, ಧರ್ಮೆಗೌಡ, ಮಧುಸೂಧನ್, ಕುಮರಿ ಚಂದ್ರಣ್ಣ, ಗೊಂದಿ ಜಯರಾಮ್, ಗುಣಶೇಖರ್, ಪಾರ್ಥಿಬನ್, ಜಯರಾಮ್, ರಾಮಕೃಷ್ಣ, ಮಾಜಿ ಶಾಸಕರಾದ ಬಿಜೆಪಿ ಪಕ್ಷದ ಎಸ್. ರುದ್ರೇಗೌಡ, ಕೆ.ಬಿ ಅಶೋಕ್‌ನಾಯ್ಕ, ಮಂಗೋಟೆ ರುದ್ರೇಶ್, ತೀರ್ಥಯ್ಯ, ಸುಬ್ರಮಣಿ, ಕನಸಿನಕಟ್ಟೆ ಶ್ರೀನಿವಾಸ್, ಪಾಲಾಕ್ಷಪ್ಪ, ಮಾಜಿ ಶಾಸಕ ಕಾಂಗ್ರೆಸ್ ಪಕ್ಷದ ಆರ್. ಪ್ರಸನ್ನಕುಮಾರ್, ಶ್ರೀನಿವಾಸ್ ಕರಿಯಣ್ಣ, ಹನುಮಂತು, ಮಲ್ಲಯ್ಯ, ಕಟ್ಟಾ ಉಮೇಶ್, ರೈತ ವರಿಷ್ಠ ಎಚ್. ಆರ್ ಬಸವರಾಜಪ್ಪ, ಹೋರಾಟಗಾರ ತೀ.ನಾ. ಶ್ರೀನಿವಾಸ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಬಿ.ಕೆ. ಶಿವಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಮಲ್ಲೇಶ್‌ರಾವ್ ಸೇರಿದಂತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

ಫೆ.೨೭ರಂದು ಸಂವಿಧಾನ ಹಕ್ಕುಗಳ ಮಾನವ ಹಕ್ಕುಗಳ ಜಾಗೃತಿ ಕಾರ್ಯಕ್ರಮ

ಭದ್ರಾವತಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿದರು. 
    ಭದ್ರಾವತಿ: ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಫೆ.೨೭ರಂದು ಸಂಜೆ ೪ ಗಂಟೆಗೆ ನ್ಯೂಟೌನ್ ರೋಟರಿ ಸಮುದಾಯ ಭವನದಲ್ಲಿ ಸಂವಿಧಾನ ಹಕ್ಕುಗಳ ಮಾನವ ಹಕ್ಕುಗಳ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಹೇಳಿದರು. 
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿ.ಪಿ.ಐ ರಾಜ್ಯ ಮಂಡಳಿ ಸದಸ್ಯರು, ಹಿರಿಯ ಕಾರ್ಮಿಕ ಮುಖಂಡರಾದ ಡಿ.ಸಿ ಮಾಯಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ. ಚಂದ್ರಶೇಖರಯ್ಯ ಉಪನ್ಯಾಸ ನೀಡಲಿದ್ದು, ಮಲೆನಾಡು ರೈತರ ಹೋರಾಟ ಸಮಿತಿ ಸಂಚಾಲಕ ತಿ.ನಾ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ವ್ಯವಸ್ಥಾಪಕ ಎನ್. ಕೃಷ್ಣಪ್ಪ, ಡಿಎಸ್‌ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಎಚ್ ಹಾಲೇಶಪ್ಪ, ನ್ಯಾಯವಾದಿ ಟಿ. ಚಂದ್ರೇಗೌಡ, ಎಂಪಿಎಂ ನೊಂದ ಕಾರ್ಮಿಕರ ಹೋರಾಟ ಸಮಿತಿ ಅಧ್ಯಕ್ಷ ಟಿ.ಜಿ ಬಸವರಾಜಯ್ಯ, ಮಾನವ ಹಕ್ಕುಗಳ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಐ.ಎಲ್ ಅರುಣ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. 
    ಉಳಿದಂತೆ ಡಿಎಸ್‌ಎಸ್ ರಾಜ್ಯ ಮುಖಂಡರಾದ ಸತ್ಯ ಭದ್ರಾವತಿ ಮತ್ತು ಜ್ಯೂನಿಯರ್ ವಿಷ್ಣುವರ್ಧನ್ ಎಂದೇ ಗುರುತಿಸಿಕೊಂಡಿರುವ ಕಲಾವಿದ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಅಪೇಕ್ಷ ಮಂಜುನಾಥ್ ಅವರ ೬೦ನೇ ವರ್ಷದ ಜನ್ಮ ದಿನಾಚರಣೆ ಅಂಗವಾಗಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಅಲ್ಲದೆ ನಗರದ ಸುಮಾರು ೩೦ಕ್ಕೂ ಹೆಚ್ಚು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು. 
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಐ.ಎಲ್ ಅರುಣ್ ಕುಮಾರ್, ಬ್ರಹ್ಮಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಡಿಎಫ್‌ಓ ಕಛೇರಿ ಮುಂಭಾಗ ಜೆಡಿಎಸ್ ಪ್ರತಿಭಟನೆ

ಅರಣ್ಯ ಇಲಾಖೆ ವತಿಯಿಂದ ರೈತರನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ಭದ್ರಾವತಿಯಲ್ಲಿ ಜಾತ್ಯತೀತ ಜನತಾದಳ ತಾಲೂಕು ಶಾಖೆ ವತಿಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. 
    ಭದ್ರಾವತಿ : ಅರಣ್ಯ ಇಲಾಖೆ ವತಿಯಿಂದ ರೈತರನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ಜಾತ್ಯತೀತ ಜನತಾದಳ ತಾಲೂಕು ಶಾಖೆ ವತಿಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.  
    ತಾಲೂಕಿನ ರೈತರು ಕಳೆದ ಸುಮಾರು ೫೦-೬೦ ವರ್ಷಗಳಿಂದ ಎಲ್ಲಾ ದಾಖಲೆಗಳನ್ನು ಹೊಂದಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದು, ಇದೀಗ ಅರಣ್ಯ ಇಲಾಖೆಯವರು ನೋಟಿಸ್ ನೀಡುವ ಮೂಲಕ ವಿನಾಕಾರಣ ಉಪವಿಭಾಗೀಯ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಿದ್ದು, ಇದರಿಂದ ರೈತರು ಆತಂಕಗೊಂಡಿದ್ದಾರೆ. ತಕ್ಷಣ ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯಬೇಕೆಂದು ಆಗ್ರಹಿಸಲಾಯಿತು. 
    ಸರ್ವೋಚ್ಛ ನ್ಯಾಯಾಲಯವೇ ರೈತರಿಗೆ ಯಾವುದೇ ತೊಂದರೆ ಕೊಡಬಾರದು ಎಂದು ಹೇಳಿದೆ. ಹೀಗಿರುವಾಗ ೫೦ ವರ್ಷಗಳಿಂದ ಸುಮ್ಮನೆ ಇದ್ದು, ಇದೀಗ ಏಕಾಏಕಿ ನೋಟಿಸ್ ನೀಡುವ ಮೂಲಕ ಒಕ್ಕಲೆಬ್ಬಿಸಲು ಯತ್ನಿಸುತ್ತಿರುವುದು ಸರಿಯಲ್ಲ. ಅರಣ್ಯ ಮತ್ತು ಕಂದಾಯ ಇಲಾಖೆಗಳ ಜಾಣ ಕುರುಡುತನಕ್ಕೆ ರೈತರೇ ತಕ್ಕ ಪಾಠ ಕಲಿಸಲಿದ್ದಾರೆ. ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯುವ ಮೂಲಕ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಲಾಯಿತು. 
    ಪ್ರಮುಖರಾದ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದ ಪೂರ್‍ಯಾನಾಯ್ಕ, ಪಕ್ಷದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ನಗರ ಅಧ್ಯಕ್ಷ ಆರ್. ಕರುಣಾಮೂರ್ತಿ, ಗ್ರಾಮಾಂತರ ಅಧ್ಯಕ್ಷ ಧರ್ಮಕುಮಾರ್, ಮುಖಂಡರಾದ ಟಿ. ಚಂದ್ರೇಗೌಡ, ಸುರೇಶ್, ಜಯರಾಮ್, ಡಿ. ಆನಂದ್, ಎಂ.ಎ ಅಜಿತ್, ಗೊಂದಿ ಜಯರಾಮ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ರೈತರು, ಕೃಷಿ ಕೂಲಿ ಕಾರ್ಮಿಕರು, ಸ್ಥಳೀಯ ಸಂಸ್ಥೆಗಳ ಹಾಲಿ ಮತ್ತು ಮಾಜಿ ಚುನಾಯಿತ ಪ್ರತಿನಿಧಿಗಳು, ಮಹಿಳೆಯರು, ಮುಖಂಡರು, ಅಭಿಮಾನಿಗಳು ಪಾಲ್ಗೊಂಡಿದ್ದರು. 

ಅಧಿಕೃತ, ಅನಧಿಕೃತ ಆಸ್ತಿಗಳಿಗೆ ಇ-ಖಾತಾ ಅಭಿಯಾನ

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ಧಿಕೃತ, ಅನಧಿಕೃತ ಆಸ್ತಿಗಳಿಗೆ ಇ-ಖಾತಾ ಅಭಿಯಾನ ಕುರಿತು ಸಭೆ ನಡೆಯಿತು. 
    ಭದ್ರಾವತಿ : ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನಧಿಕೃತ ಆಸ್ತಿಗಳಿಗೆ ಖಾತಾ ನೀಡಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾಯ್ದೆಗಳಿಗೆ ತಿದ್ದುಪಡಿ ಮಾಡಿದ್ದು, ಈ ಹಿನ್ನಲೆಯಲ್ಲಿ ಇ-ಖಾತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ನಗರಸಭೆ ವ್ಯಾಪ್ತಿಯಲ್ಲಿ ಅಧಿಕೃತ ಮತ್ತು ಅನಧಿಕೃತ ಆಸ್ತಿಗಳಿಗೆ ತಂತ್ರಾಂಶದಲ್ಲಿ ಇ-ಖಾತಾ ನೀಡಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳುವಂತೆ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜ್‌ಕುಮಾರ್ ಮನವಿ ಮಾಡಿದರು. 
    ಈ ಕುರಿತು ಗುರುವಾರ ನಗರಸಭೆ ಅಧ್ಯಕ್ಷರ ಕಛೇರಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಪೌರಾಯುಕ್ತ ಪ್ರಕಾಶ್ ಎಂ. ಚನ್ನಪ್ಪನವರ್, ನಗರಸಭೆ ವ್ಯಾಪ್ತಿಯಲ್ಲಿ ೧೦ ಸೆಪ್ಟಂಬರ್ ೨೦೨೪ರ ಪೂರ್ವದಲ್ಲಿ ನೋಂದಣಿಯಾದ ಅನಧಿಕೃತ ಆಸ್ತಿಗಳಿಗೆ ಇ-ಖಾತಾ ನೀಡಲು ಅವಕಾಶ ನೀಡಲಾಗಿದೆ. ಅಧಿಕೃತ ಆಸ್ತಿಗಳಿಗೆ ಎ-ರಿಜಸ್ಟರ್ ಮತ್ತು ಅನಧಿಕೃತ ಆಸ್ತಿಗಳಿಗೆ ಬಿ-ರಿಜಿಸ್ಟರ್ ನಿರ್ವಹಿಸಲಾಗುವುದು. ೧೦ ಸೆಪ್ಟಂಬರ್ ೨೦೨೪ರ ಪೂರ್ವದಲ್ಲಿ ವಹಿವಾಟು ಮಾಡಲಾದ ಅನಧಿಕೃತ ಆಸ್ತಿಗಳಿಗೆ (ಖಾಲಿ ನಿವೇಶನಗಳು ಸೇರಿ) ನಮೂನೆ ೨ಎ/೩ಎ ನೀಡಲಾಗುವುದು. ಅನಧಿಕೃತ ಆಸ್ತಿಗಳಿಗೆ ಮೊದಲನೇ ಬಾರಿಗೆ ತೆರಿಗೆಯ ಎರಡು ಪಟ್ಟು ಶುಲ್ಕ ವಿಧಿಸಲಾಗುವುದು ಎಂದರು. 
    ಇ-ಖಾತಾ ಪಡೆಯಲು ಸ್ವೀಕೃತವಾದ ಅರ್ಜಿಯನ್ನು ಇ-ಆಸ್ತಿ ತಂತ್ರಾಂಶದಲ್ಲಿ ಸಂಗ್ರಹಣೆ ಮಾಡಿಕೊಂಡು ೭ ದಿನಗಳೊಳಗಾಗಿ ತಂತ್ರಾಂಶದಲ್ಲಿ ನಿಗದಿಪಡಿಸಲಾಗಿರುವ ಕಾರ್ಯ ಹರಿವಿನಲ್ಲಿ ನಿರ್ವಹಿಸಿ ಇ-ಖಾತಾ ನೀಡಲಾಗುವುದು. ಇ-ಖಾತಾ ನಮೂನೆ ೨/೩ ಹಾಗು ೨ಎ/೩ಎ ನೀಡಲು ನಿಗದಿಪಡಿಸಲಾಗಿರುವ ಶುಲ್ಕ ಮಾತ್ರ ಪಾವತಿಸಬೇಕಾಗಿದೆ. ಈ ಪ್ರಕಟಣೆ ದಿನಾಂಕದಿಂದ ಮೂರು ತಿಂಗಳೊಳಗೆ ದಾಖಲೆಗಳನ್ನು ಸಲ್ಲಿಸಿ ಇ-ಖಾತಾ ಪಡೆಯಬಹುದಾಗಿದೆ ಎಂದರು. 
    ಅಧಿಕೃತ ಆಸ್ತಿಗೆ ಇ-ಖಾತಾ ಪಡೆಯಲು ಆಸ್ತಿಗೆ ಸಂಬಂಧಿಸಿದ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರಗಳು/ದಾನ ಪತ್ರ/ವಿಭಾಗ ಪತ್ರಗಳು/ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕುಪತ್ರಗಳು/ ಮಂಜೂರಾತಿ ಪತ್ರಗಳು/ ಕಂದಾಯ ಇಲಾಖೆಯಿಂದ ೯೪ ಸಿ.ಸಿ. ಅಡಿ ನೀಡಲಾದ ಹಕ್ಕುಪತ್ರ. ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ದೃಢೀಕೃತ ಪ್ರತಿ ಮತ್ತು ನಿವೇಶನ ಬಿಡುಗಡೆ ಪತ್ರ. ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ. ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ. ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ ಹಾಗು ಮಾಲೀಕರ ಗುರುತಿನ ದಾಖಲೆ ಪ್ರತಿ ಸಲ್ಲಿಸಬೇಕು ಎಂದರು. 
    ಅನಧಿಕೃತ ಆಸ್ತಿಗೆ ಇ-ಖಾತಾ ಪಡೆಯಲು ಆಸ್ತಿಗೆ ಸಂಬಂಧಿಸಿದ ಸ್ವತ್ತಿನ ಮಾಲೀಕತ್ವ ಸಾಬೀತು ಪಡಿಸುವ ೧೦ ಸೆಪ್ಟಂಬರ್ ೨೦೨೪ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳು/ ದಾನ ಪತ್ರ/ವಿಭಾಗ ಪತ್ರಗಳು/ಹಕ್ಕು ಖುಲಾಸೆ ಪತ್ರಗಳು. ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ. ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ. ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ. ಮಾಲೀಕರ ಗುರುತಿನ ದಾಖಲೆ ಪ್ರತಿಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ನಗರಸಭೆ ಕಛೇರಿಯ ಕೆಲಸದ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದರು. 
    ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಕಂದಾಯಾಧಿಕಾರಿ ರಮೇಶ್ ಉಪಸ್ಥಿತರಿದ್ದರು.

ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನ : ಆರೋಪಿ ಕಾಲಿಗೆ ಗುಂಡು

ಆರೋಪಿ, ರೌಡಿ ಶೀಟರ್ ಗುಂಡಾ ಅಲಿಯಾಸ್ ರವಿ 
    ಭದ್ರಾವತಿ :  ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯೋರ್ವನ ಕಾಲಿಗೆ ಗುಂಡು ಹಾರಿಸಿರುವ ಘಟನೆ ಶುಕ್ರವಾರ ನಡೆದಿದೆ. 
    ನಗರದ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸರು ಆರೋಪಿ, ರೌಡಿ ಶೀಟರ್ ಗುಂಡಾ ಅಲಿಯಾಸ್ ರವಿ ಬಂಧಿಸಲು ತೆರಳಿದ್ದಾಗ ಈತ ಪೊಲೀಸ್ ಸಿಬ್ಬಂದಿ(ಕಾನ್ಸ್‌ಸ್ಟೇಬಲ್) ಆದರ್ಶ್ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಠಾಣೆ ಉಪ ನಿರೀಕ್ಷಕ ಕೃಷ್ಣ ಕುಮಾರ್ ಮಾನೆ  ಕಾಲಿಗೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. 
    ಗಾಯಗೊಂಡಿರುವ ಆರೋಪಿ ಗುಂಡಾ ಮತ್ತು ಹಲ್ಲೆಗೊಳಗಾಗಿರುವ ಪೊಲೀಸ್ ಸಿಬ್ಬಂದಿ ಆದರ್ಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗುಂಡಾ ವಿರುದ್ಧ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ೩೦೭ ಸೆಕ್ಷನ್ ಅಡಿ ೪ ಪ್ರಕರಣಗಳು ದಾಖಲಾಗಿವೆ.