Thursday, May 22, 2025

ಪೊಲೀಸ್ ವೃತ್ತ ನಿರೀಕ್ಷಕ ಎನ್. ನಂಜಪ್ಪಕ್ಕೆ ಸಂತಾಪ

ಎನ್. ನಂಜಪ್ಪ 
    ಭದ್ರಾವತಿ: ಈ ಹಿಂದೆ ನಗರದ ಪೊಲೀಸ್ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದ ಎನ್. ನಂಜಪ್ಪ(೫೯)ರವರು ನಿಧನ ಹೊಂದಿದ್ದು, ಇವರ ನಿಧನಕ್ಕೆ ನಗರದ ಗಣ್ಯರು, ಸಹದ್ಯೋಗಿಗಳು ಸಂತಾಪ ಸೂಚಿಸಿದ್ದಾರೆ. 
    ಓರ್ವ ಪುತ್ರ,  ಓರ್ವ ಪುತ್ರಿ ಇದ್ದು, ಮೂಲತಃ ಶಿವಮೊಗ್ಗ ಕಾಶಿಪುರ ನಿವಾಸಿಯಾದ ನಂಜಪ್ಪರವರು ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ನೇಮಕಗೊಂಡು ನಂತರ ಉಪ ಠಾಣಾನಿರೀಕ್ಷಕರ ಪರೀಕ್ಷೆ ಉತ್ತೀರ್ಣಗೊಂಡು ಶಿವಮೊಗ್ಗ, ಭದ್ರಾವತಿ ಸೇರಿದಂತೆ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಕುಂದಾಪುರ ಪೊಲೀಸ್ ಠಾಣಾ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. 

೩೨ ಎಕರೆ ಸೂಡಾ ಜಾಗದ ಗಡಿ ಗುರುತಿಸಿ, ಫಲಕ ಅಳವಡಿಕೆ

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿರುವ ಭದ್ರಾವತಿ ತಾಲೂಕಿನ ಕಸಬಾ ೧ನೇ ವೃತ್ತ, ಗ್ರಾಮದ ಸ.ನಂ. ೧೧೮/೧, ೧೧೮/೨ಎ, ೧೧೮/೨ನಿ, ೧೪೭ ಮತ್ತಿತರೆ ಒಟ್ಟು ೩೨ ಎಕರೆ ೨೧ ಪ್ರದೇಶದಲ್ಲಿ ಗುರುವಾರ ಗಡಿ ಗುರುತಿಸಿ ಫಲಕಗಳನ್ನು ಅಳವಡಿಸಲಾಯಿತು. 
    ಭದ್ರಾವತಿ: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿರುವ ತಾಲೂಕಿನ ಕಸಬಾ ೧ನೇ ವೃತ್ತ, ಗ್ರಾಮದ ಸ.ನಂ. ೧೧೮/೧, ೧೧೮/೨ಎ, ೧೧೮/೨ನಿ, ೧೪೭ ಮತ್ತಿತರೆ ಒಟ್ಟು ೩೨ ಎಕರೆ ೨೧ ಪ್ರದೇಶದಲ್ಲಿ ಗುರುವಾರ ಗಡಿ ಗುರುತಿಸಿ ಫಲಕಗಳನ್ನು ಅಳವಡಿಸಲಾಯಿತು. 
    ನಗರಸಭೆ ವ್ಯಾಪ್ತಿಯ ಕೋಡಿಹಳ್ಳಿ ರಸ್ತೆಯ ದೈವಜ್ಞ ಮತ್ತು ಮಾಧವನಗರಕ್ಕೆ ಹೊಂದಿಕೊಂಡಿರುವ ಜಾಗವನ್ನು ಈಗಾಗಲೇ ಆಕ್ರಮಿಸಿಕೊಂಡು ಬಾಳೆ, ತೆಂಗು, ಅಡಕೆ ಮತ್ತು ಭತ್ತದ ಬೆಳೆಗಳನ್ನು ಬೆಳೆಯಲಾಗಿದೆ. ಬೆಳಿಗ್ಗೆ ಪ್ರಾಧಿಕಾರದ ಸದಸ್ಯ ಎಚ್. ರವಿಕುಮಾರ್ ನೇತೃತ್ವದಲ್ಲಿ ಅಧಿಕಾರಿ ಅಭಿಲಾಷ್ ಮತ್ತು ಸಿಬ್ಬಂದಿಗಳಾದ ಹರೀಶ್, ಅಮೃತ್ ಸೇರಿದಂತೆ ಇನ್ನಿರರನ್ನೊಳಗೊಂಡ ತಂಡ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಕೃಷ್ಣಕುಮಾರ್ ಮಾನೆ ನೇತೃತ್ವದ ಪೊಲೀಸ್ ತಂಡದ ಬಿಗಿ ಭದ್ರತೆಯಲ್ಲಿ ಗಡಿ ಗುರುತಿಸುವ ಮೂಲಕ ಫಲಕಗಳನ್ನು ಅಳವಡಿಸಿತು. 


    ಈ ನಡುವೆ ಈ ಜಾಗದಲ್ಲಿ ಬೆಳೆ ಬೆಳೆದಿರುವವರು ಪ್ರಾಧಿಕಾರದ ತಂಡವರೊಂದಿಗೆ ಕೆಲ ಸಮಯ ವಾಗ್ವಾದ ನಡೆಸಿದರು. ಅಲ್ಲದೆ ಸ್ಥಳದಲ್ಲಿಯೇ ಸಂಬಂಧಿಸಿದ ದಾಖಲೆಗಳನ್ನು ತೋರಿಸುವ ಮೂಲಕ ಅಧಿಕಾರಿಗಳು ಸಮರ್ಥನೆ ನೀಡಿದರು. ನಗರಸಭೆ ಸದಸ್ಯ ಚನ್ನಪ್ಪ ಬೆಳೆ ಬೆಳೆದಿರುವವರಿಗೆ ಪ್ರಾಧಿಕಾರದವರು ಪ್ರಸ್ತುತ ಫಲಕಗಳನ್ನು ಅಳವಡಿಸಲಿದ್ದು, ಯಾವುದೇ ರೀತಿ ಆತಂಕಪಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಸಮಸ್ಯೆ ಚರ್ಚಿಸಿ ಬಗೆಹರಿಸಿಕೊಳ್ಳುವಂತೆ ಸಮಾಧಾನಪಡಿಸಿದರು. 
ಸೂಡಾ ಸದಸ್ಯ ಎಚ್. ರವಿಕುಮಾರ್ ಪತ್ರಿಕೆಗೆ ಮಾಹಿತಿ ನೀಡಿ, ಪ್ರಾಧಿಕಾರಕ್ಕೆ ಸೇರಿರುವ ಜಾಗಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಅಧಿಕಾರಿಗಳ ಬಳಿ ಇವೆ. ಈ ಜಾಗದಲ್ಲಿ ಪ್ರಾಧಿಕಾರದಿಂದ ವಸತಿ ಯೋಜನೆಯಡಿ ನಿವೇಶನಗಳನ್ನು ನಿರ್ಮಿಸಿ ವಿತರಿಸಲಾಗುವುದು. ಸುಮಾರು ೧ ಸಾವಿರ ನಿವೇಶನಗಳನ್ನು ಈ ಜಾಗದಲ್ಲಿ ನಿರ್ಮಿಸಬಹುದಾಗಿದ್ದು, ಇದರಿಂದ ನಗರದಲ್ಲಿಯೇ ಅತಿ ದೊಡ್ಡ ಬಡಾವಣೆ ನಿರ್ಮಾಣಗೊಳ್ಳಲಿದೆ. ನಿವೇಶನರಹಿತರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಪ್ರಾಧಿಕಾರ ಹೊಂದಿದೆ ಎಂದರು. 
    ಪ್ರಸ್ತುತ ಬೆಳೆಬೆಳೆದಿರುವವರು ತಮ್ಮ ಬಳಿ ಯಾವುದಾದರೂ ಸೂಕ್ತ ದಾಖಲೆಗಳು ಇದ್ದಲ್ಲಿ ಪ್ರಾಧಿಕಾರದ ಅಧಿಕಾರಿಗಳ ಬಳಿ ಹಾಜರುಪಡಿಸಿ ಗೊಂದಲ ಬಗೆಹರಿಸಿಕೊಳ್ಳಬಹುದು. ಪ್ರಸ್ತುತ ಬೆಳೆದಿರುವ ಬೆಳೆಗಳಿಗೆ ಯಾವುದೇ ರೀತಿ ಹಾನಿ ಮಾಡುವುದಿಲ್ಲ ಎಂದರು. 

Wednesday, May 21, 2025

ಮನೆಯ ಬೀಗ ಮುರಿದು ನಗದು, ಚಿನ್ನಾಭರಣ ಕಳ್ಳತನ

ಭದ್ರಾವತಿ ಹಳೇನಗರದ ಕೆಎಸ್‌ಆರ್‌ಟಿಸಿ ಬಸ್ ಘಟಕದ ಸಮೀಪದ ದೇವರಾಜ್ ಅರಸ್ ಬಡಾವಣೆಯ ಬಿಸಿಎಂ ಬಾಲಕಿಯರ ವಿದ್ಯಾರ್ಥಿನಿಲಯದ ಪಕ್ಕದಲ್ಲಿರುವ ಎಂ.ಜಿ ರಮೇಶ್ ಎಂಬುವರ ಮನೆ ಬೀಗ ಮುರಿದು ನಗದು, ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ನಡೆದಿದೆ.
    ಭದ್ರಾವತಿ : ಹಳೇನಗರದ ಕೆಎಸ್‌ಆರ್‌ಟಿಸಿ ಬಸ್ ಘಟಕದ ಸಮೀಪದ ದೇವರಾಜ್ ಅರಸ್ ಬಡಾವಣೆಯ ಬಿಸಿಎಂ ಬಾಲಕಿಯರ ವಿದ್ಯಾರ್ಥಿನಿಲಯದ ಪಕ್ಕದಲ್ಲಿರುವ ಮನೆಯೊಂದರ ಬೀಗ ಮುರಿದು ನಗದು, ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ನಡೆದಿದೆ.
    ಎಂ.ಜಿ ರಮೇಶ್ ಎಂಬುವರ ಮನೆಯ ಕಾಂಪೌಂಡ್ ಗೇಟ್ ಹಾರಿ ಮನೆಯ ಬಾಗಿಲ ಬೀಗ ಮುರಿದು ಕಳ್ಳತನ ಮಾಡಲಾಗಿದ್ದು, ಮನೆಯವರು ಬೀಗ ಹಾಕಿಕೊಂಡು ಊರಿಗೆ ಹೋಗಿದ್ದಾಗ ಈ ಘಟನೆ ನಡೆದಿದೆ. 
    ಬುಧವಾರ ಬೆಳಗ್ಗೆ ೧೧ ಗಂಟೆ ಸಮಯದಲ್ಲಿ ಮನೆಯವರು ಊರಿಂದ ಬಂದು ನೋಡಿದಾಗ ಮನೆಯ ಬೀಗ ಮುರಿದಿರುವುದು ಕಂಡು ಬಂದಿದ್ದು, ಒಳಹೋಗಿ ನೋಡಿದಾಗ ಸುಮಾರು ೨೫ ಸಾವಿರ ರೂ ನಗದು, ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವುದು ಕಂಡು ಬಂದಿದೆ. 
    ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಹಾಗು ಹಳೇನಗರ ಪೊಲೀಸ್ ಠಾಣೆ ಉಪ ನಿರೀಕ್ಷಕ ಚಂದ್ರಶೇಖರ ನಾಯ್ಕ ಮತ್ತು ಸಿಬ್ಬಂದಿಗಳಾದ ಹಾಲಪ್ಪ ಸೇರಿದಂತೆ ಇನ್ನಿತರರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. 

ಎಎಸ್‌ಐ ಶಿವಸ್ವಾಮಿಗೆ ಕಮಾಂಡೇಷನ್ ಡಿಸ್ಕ್ ಪದಕ

ಎಂ.ಎನ್ ಶಿವಸ್ವಾಮಿ

    ಭದ್ರಾವತಿ : ನಗರದ ನ್ಯೂಟೌನ್ ಠಾಣೆ ಸಹಾಯಕ ಉಪ ನಿರೀಕ್ಷಕ(ಎಎಸ್‌ಐ) ಎಂ.ಎನ್ ಶಿವಸ್ವಾಮಿ ಅವರಿಗೆ ಈ ಬಾರಿ ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಹಾನಿರೀಕ್ಷಕರು ಕರ್ನಾಟಕ ರಾಜ್ಯರವರ ೨೦೨೪-೨೫ನೇ ಸಾಲಿನ ಪ್ರಸಂಶನಾ ಪ್ರಶಸ್ತಿ(ಕಮಾಂಡೇಷನ್ ಡಿಸ್ಕ್) ಪದಕ ಲಭಿಸಿದೆ.
    ಸುಮಾರು ೨೯ ವರ್ಷಗಳಿಂದ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಸ್ವಾಮಿಯವರು ಈ ಹಿಂದೆ ೨೦೧೭ರಲ್ಲಿ ಇಲಾಖೆಯ ಅತ್ಯುನ್ನತ ಮುಖ್ಯಮಂತ್ರಿ ಪದಕ ಪಡೆದುಕೊಂಡಿದ್ದರು. ಇದೀಗ ಇವರ ವೃತ್ತಿ ಸೇವಾವಧಿಯಲ್ಲಿನ ಸಾಧನೆಗಳನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
    ಕಾನ್‌ಸ್ಟೇಬಲ್ ಹುದ್ದೆಗೆ ಸೇರ್ಪಡೆಗೊಂಡ ಶಿವಸ್ವಾಮಿಯವರು ದಬೇದಾರ್ ಹುದ್ದೆ ಮುಂಬಡ್ತಿ ಹೊಂದಿ ಶಿವಮೊಗ್ಗ ಜಯನಗರ, ತುಂಗಾನಗರ, ಜಿಲ್ಲಾ ರಕ್ಷಣಾಧಿಕಾರಿಗಳ ಕಛೇರಿ ಹಾಗು ರಾಜ್ಯ ಗುಪ್ತದಳದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ಮೂರುವರೆ ವರ್ಷಗಳ ಹಿಂದೆ ಸಹಾಯಕ ಉಪ ನಿರೀಕ್ಷಕರಾಗಿ ಮುಂಬಡ್ತಿ ಪಡೆದು ನ್ಯೂಟೌನ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 
    ಕ್ರಿಕೆಟ್ ಆಟಗಾರ, ತೀರ್ಪುಗಾರ: 
    ಶಿವಸ್ವಾಮಿಯವರು ಕ್ರಿಕೆಟ್ ಆಟಗಾರರು ಹಾಗು ತೀರ್ಪುಗಾರರಾಗಿದ್ದಾರೆ. ಕಳೆದ  ಸುಮಾರು ೨೩ ವರ್ಷಗಳಿಂದ ೨೦೦೨ರಿಂದ ಕ್ರಿಕೆಟ್ ಆಟದ ಜೊತೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ತೀರ್ಪುಗಾರರಾಗಿದ್ದಾರೆ. 
    ಶಿವಸ್ವಾಮಿಯವರಿಗೆ ಪೊಲೀಸ್ ಉಪ ಅಧೀಕ್ಷಕರು, ವೃತ್ತ ನಿರೀಕ್ಷಕರು, ಠಾಣಾ ಉಪ ನಿರೀಕ್ಷಕರು, ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Tuesday, May 20, 2025

ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಜರುಗಿದ ಓಕುಳಿ ಉತ್ಸವ

ಭದ್ರಾವತಿ ತಾಲೂಕು ಕಛೇರಿ ರಸ್ತೆಯಲ್ಲಿರುವ ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಸ್ವಾಮಿಯ ೧೦ನೇ ವರ್ಷದ ಮಹಾರಥೋತ್ಸವ ಅಂಗವಾಗಿ ಮಂಗಳವಾರ ಓಕುಳಿ ಉತ್ಸವ ವಿಜೃಂಭಣೆಯಿಂದ ಜರಗಿತು.
    ಭದ್ರಾವತಿ : ತಾಲೂಕು ಕಛೇರಿ ರಸ್ತೆಯಲ್ಲಿರುವ ಕಂಚಿನಬಾಗಿಲು ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಸ್ವಾಮಿಯ ೧೦ನೇ ವರ್ಷದ ಮಹಾರಥೋತ್ಸವ ಅಂಗವಾಗಿ ಮಂಗಳವಾರ ಓಕುಳಿ ಉತ್ಸವ ವಿಜೃಂಭಣೆಯಿಂದ ಜರಗಿತು.
    ಬೆಳಿಗ್ಗೆ ಯಾತ್ರಾ ಹೋಮ, ವಾರುಣ ಹೋಮ, ಅವಭೃತ ಸ್ನಾನ, ಸಂಜೆ ಧ್ವಜಾವರೋಹಣ, ರಂಗಪೂಜೆ, ದೀಪೋತ್ಸವ, ರಾಷ್ಟ್ರಾಶೀರ್ವಾದ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. 
    ಮಧ್ಯಾಹ್ನ ೧೨ ಗಂಟೆಗೆ ದೇವಸ್ಥಾನದಿಂದ ಭಕ್ತರು ಹಾಗು ಭಜನಾ ತಂಡಗಳೊಂದಿಗೆ ಸ್ವಾಮಿಯನ್ನು ಓಕುಳಿ ಉತ್ಸವಕ್ಕೆ ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾ ನದಿಗೆ ಕರೆದೊಯ್ಯಲಾಯಿತು.
    ದೇವಸ್ಥಾನದ ಪ್ರಧಾನ ಅರ್ಚಕರಾದ ಪವನ್ ಕುಮಾರ್ ಉಡುಪ, ಚಂದ್ರಶೇಖರ್ ಉಡುಪ, ರಮಾನಂದ ಭಟ್, ಸೂರಜ್ ಭಟ್, ಸುಬ್ರಮಣ್ಯ ಭಟ್, ಅಜಯ್ ಭಟ್, ಗುರುರಾಜ ಭಟ್ ಸೇರಿದಂತೆ ಇನ್ನಿತರ ಪುರೋಹಿತರು ಧಾರ್ಮಿಕ ಆಚರಣೆಗಳನ್ನು ನೆರವೇರಿಸಿದರು. 
    ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಜಿ. ರಮಾಕಾಂತ್, ವಿಜಯ್, ಚಂದನ್, ಇಶಾನ್, ನಂದನ್,  ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಕೆ. ನರಸಿಂಹಮೂರ್ತಿ ಸೇರಿದಂತೆ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  

ಮೇ.೨೬ರಂದು ನಿವೃತ್ತ ನ್ಯಾಯಮೂರ್ತಿ ಡಾ. ಎಸ್.ಆರ್ ನಾಯಕ್‌ರವರ ಶ್ರದ್ದಾಂಜಲಿ ಸಭೆ

ಭದ್ರಾವತಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿದರು. 
    ಭದ್ರಾವತಿ:  ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ. ಎಸ್.ಆರ್ ನಾಯಕ್ ರವರ ನಿಧನಕ್ಕೆ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಮೇ.೨೬ರಂದು ರಂದು ಸಂಜೆ ೫ ಗಂಟೆಗೆ ಬಿ.ಎಚ್ ರಸ್ತೆ, ತಿಮ್ಮಯ್ಯ ಮಾರ್ಕೆಟ್ ಮುಂಭಾಗದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಏರ್ಪಡಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಬಿ.ಎನ್ ರಾಜು ತಿಳಿಸಿದರು. 
    ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಡ ಜನರು, ರೈತರು ಮತ್ತು ಕಾರ್ಮಿಕರ ಬಗ್ಗೆ ಹೆಚ್ಚು ಕಾಳಜಿ ಹೊಂದಿರುವ ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿಗಳಾಗಿ, ರಾಜ್ಯ ಮಾನವ ಹಕ್ಕುಗಳ ಅಯೋಗ ಮತ್ತು ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿರುವ ಎಸ್.ಆರ್ ನಾಯಕ್‌ರವರು ಮೇ.೧೮ರಂದು ನಿಧನರಾಗಿದ್ದು, ಇವರಿಗೆ ರಾಜ್ಯದ ಜನರ ಪರವಾಗಿ ಮನವಹಕ್ಕುಗಳ ಹೋರಟ ಸಮಿತಿಯಿಂದ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದರು. 
    ಬಡ ಕುಟುಂಬದ ಡಾ.ಎಸ್ ಆರ್. ನಾಯಕ್‌ರವರು ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ನಂತರ ಉನ್ನತ ಪದವಿಯೊಂದಿಗೆ ಜಿಲ್ಲಾ ನ್ಯಾಯಧೀಶರಾಗಿ, ಹೈಕೋರ್ಟ್ ನ್ಯಾಯಾಧೀಶರಾಗಿ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಪ್ರಾಮಾಣಿಕವಾಗಿ ಕರ್ತವ್ಯ ಸಲ್ಲಿಸಿ ಬಡ ಜನರ ಸೇವೆ ಮತ್ತು ಭಾರತ ಸಂವಿಧಾನದ ಆಶಯಗಳಿಗೆ ಬದ್ಧರಾಗಿ ನಡೆದುಕೊಂಡ ಅಪರೂಪದ ವ್ಯಕ್ತಿ ಎಂದರು. 
    ೨೦೦೭ರಲ್ಲಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ನಂ. ೧ ಸ್ಥಾನ ಪಡೆಯಲು ಮುಖ್ಯ ಕಾರಣ ಡಾ.ಎಸ್.ಆರ್ ನಾಯಕ್.  ಅವರು ಬಡವರ ಬಗ್ಗೆ ಹೆಚ್ಚು ಕಾಳಜಿ ಇಟ್ಟು ಅನೇಕ ಪ್ರಕರಣಗಳಲ್ಲಿ ಕೇವಲ ಟಿ.ವಿ ನ್ಯೂಸ್ ಮೂಲಕ ದೂರು ದಾಖಲಿಸಿ ಸಾಮಾನ್ಯ ಜನರಿಗೆ ನ್ಯಾಯ ಒದಗಿಸಿದ್ದು ಮರಿಯುವಂತಿಲ್ಲ. ಮಾನವ ಹಕ್ಕುಗಳು ಎಂಬ ಶಬ್ದವೇ ರಾಜ್ಯದಲ್ಲಿ ಮತ್ತು ದೇಶದಲ್ಲಿ ಪ್ರಖ್ಯಾತಿ ಪಡೆಯಲು ಡಾ. ಎಸ್ ಆರ್ ನಾಯಕ್ ರವರು ರಾಜ್ಯದ ಉದ್ದಗಲಕ್ಕೂ ಪದೇ ಪದೇ ಪ್ರವಾಸ ಮಾಡಿ ಸಾರ್ವಜನಿಕರಿಗೆ ಜಾಗೃತಿ ಮತ್ತು ಅರಿವು ಮೂಡಿಸಿದ್ದು ಕಾರಣವಾಗಿದೆ. ೨೦೧೦ರಲ್ಲಿ ತಿಮ್ಮಯ್ಯ ಮಾರ್ಕೆಟ್ ಅಕ್ರಮ ನೆಲ ಸಮ ಮಾಡಿ ಅಲ್ಲಿನ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಪ್ರಕರಣ ದಾಖಲಿಸಿ ನ್ಯಾಯ ಒದಗಿಸಿದ್ದಾರೆ. ೨೦೧೦ರಲ್ಲಿ ತಿಮ್ಮಯ್ಯ ಮಾರ್ಕೆಟ್ ಮುಂಭಾಗದಲ್ಲಿ ವಿಶ್ವಮಾನವ ಸಮಾವೇಶದಲ್ಲಿ ಭಾಗವಹಿಸಿ ಮಾನವ ಹಕ್ಕುಗಳ ಬಗ್ಗೆ ಹಾಗೂ ವಿಶ್ವಮಾನವ ಅಂಬೇಡ್ಕರ್ ಮತ್ತು ಬಸವಣ್ಣನವರ ಬಗ್ಗೆ ಸುದೀರ್ಘವಾಗಿ ವಿಚಾರವನ್ನು ಮಂಡಿಸಿದ್ದು, ಮರೆಯಲು ಸಾಧ್ಯವಿಲ್ಲ. ಇವರ ನಿಧನದಿಂದ ರಾಜ್ಯದ ಜನರಿಗೆ ತುಂಬಲಾರದ ನಷ್ಟವಾಗಿದೆ ಎಂದರು. 
    ಸಮಿತಿ ವತಿಯಿಂದ ಮೇ.೨೬ರಂದು ಸಂಜೆ ೫ ಗಂಟೆಗೆ ಬಿ ಎಚ್ ರಸ್ತೆ, ತಿಮ್ಮಯ್ಯ ಮಾರ್ಕೆಟ್ ಮುಂಭಾಗದಲ್ಲಿ ಭಾವ ಪೂರ್ಣ ಶ್ರದ್ಧಾಂಜಲಿ ಸಭೆ ಮತ್ತು ಮಾನವಹಕ್ಕುಗಳ, ಸಂವಿಧಾನ ಹಕ್ಕುಗಳ ಜಾಗೃತಿ ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಸಾರ್ವಜನಿಕರು, ಸಂಘ-ಸಂಸ್ಥೆಗಳ ಮುಖಂಡರು, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ರೈತರು, ಕಾರ್ಮಿಕರು ಸೇರಿದಂತೆ ಸಮಸ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕೋರಿದರು. 
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಟಿ.ಜಿ ಬಸವರಾಜಯ್ಯ, ಸಿದ್ದಲಿಂಗಯ್ಯ, ಸೆಲ್ವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Monday, May 19, 2025

ಮೋಹನ್‌ರಾವ್ ಗುಜ್ಜರ್ ನಿಧನ

ಮೋಹನ್‌ರಾವ್ ಗುಜ್ಜರ್ 
    ಭದ್ರಾವತಿ: ನಗರದ ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಸಮೀಪದ ಶ್ರೀರಂಗನಾಥ ಟೆಕ್ಸ್‌ಟೈಲ್ಸ್‌ನ ಮೋಹನ್‌ರಾವ್ ಗುಜ್ಜರ್(೮೦) ನಿಧನ ಹೊಂದಿದ್ದು, ಇವರ ಅಂತ್ಯಕ್ರಿಯೆ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ಸೋಮವಾರ ಸಂಜೆ ನೆರವೇರಿತು. 
    ಪತ್ನಿ, ೩ ಪುತ್ರರು ಮತ್ತು ಓರ್ವ ಪುತ್ರಿ ಇದ್ದಾರೆ. ಮೋಹನ್‌ರಾವ್ ಗುಜ್ಜರ್‌ರವರು ನಗರದಲ್ಲಿ ಶ್ರೀ ರಂಗನಾಥ ಟೆಕ್ಸ್ ಟೈಲ್ಸ್ ಆರಂಭಿಸುವ ಮೂಲಕ ಬಹಳ ವರ್ಷಗಳಿಂದ ಬಟ್ಟೆ ವ್ಯಾಪಾರ ಉದ್ಯಮಿದಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ ಭಾವಸಾರ ಕ್ಷತ್ರಿಯ ಸಮಾಜದಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸಿದ್ದರು. 
    ಇವರ ನಿಧನಕ್ಕೆ ಭಾವಸಾರ ಕ್ಷತ್ರಿಯ ಸಮಾಜ, ಜೇಡಿಕಟ್ಟೆ ಮರುಳಸಿದ್ದೇಶ್ವರ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರ ಪ್ರಮುಖರು ಸಂತಾಪ ಸೂಚಿಸಿದ್ದಾರೆ.