ಪೂರ್ವ ಸಿದ್ದತೆ ಕಾರ್ಯಾಗಾರದಲ್ಲಿ ಶಿಕ್ಷಣ ಇಲಾಖೆ ಮಾಹಿತಿ
ಭದ್ರಾವತಿಯಲ್ಲಿ ತಹಸೀಲ್ದಾರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಸೋಮವಾರ ಎಸ್ಎಸ್ಎಲ್ಸಿ ಪರೀಕ್ಷೆ ಸಂಬಂಧ ಮಾಹಿತಿ ಕಾರ್ಯಾಗಾರ ನಡೆಯಿತು.
ಭದ್ರಾವತಿ, ಜೂ. ೧೫: ತಾಲೂಕಿನಲ್ಲಿ ಈ ಬಾರಿ ಒಟ್ಟು ೧೫ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು ೪೫೫೮ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಸೋಮವಾರ ಪರೀಕ್ಷೆಗೆ ಸಂಬಂಧಿಸಿದಂತೆ ತಹಸೀಲ್ದಾರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮಾಹಿತಿ ಕಾರ್ಯಾಗಾರ ನಡೆಯಿತು.
ಆರಂಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಎಸ್ಎಸ್ಎಲ್ಸಿ ಪರೀಕ್ಷೆ ಸಂಬಂಧ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪರೀಕ್ಷೆಗೆ ಹಾಜರಾಜುವ ವಿದ್ಯಾರ್ಥಿಗಳು ಆರೋಗ್ಯ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆ ಕ್ರಮಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಆನ್ಲೈನ್ ಮೂಲಕ ಮಾಹಿತಿ ನೀಡಿದರು.
![](https://blogger.googleusercontent.com/img/b/R29vZ2xl/AVvXsEgbIrymhwv7AaMTEl_xbBhI9dnHTtJ2Y17MXgT-gC4r0c0j0U7UgkPPUhr5dzG7ZJ_ectqDsZtzfzK1JY4W_QbhejDWFmCE0dDAEbdMgtBwdR5Wc_Jg29xG0Y1ZvAOaaQ4qU5OiWui8s-Ra/s320-rw/D15-BDVT1.jpg)
ನಂತರ ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಎ.ಜಿ ರಾಜಶೇಖರ್, ತಾಲೂಕಿನಲ್ಲಿ ನ್ಯೂಟೌನ್ ಸರ್ಕಾರಿ ರಜತ ಮಹೋತ್ಸವ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಕಾಗದನಗರದ ಪೇಪರ್ಟೌನ್ ಪ್ರೌಢಶಾಲೆ, ತರೀಕೆರೆ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಹೊಳೆಹೊನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜು, ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆ, ಹಳೇನಗರದ ಜವಹರಲಾಲ್ ನೆಹರು ಆಂಗ್ಲ ಮಾದ್ಯಮ ಪ್ರೌಢ ಶಾಲೆ, ಆನವೇರಿ ಸರ್ಕಾರಿ ಪ್ರೌಢಶಾಲೆ, ಕಲ್ಲಿಹಾಳ್ ಸರ್ಕಾರಿ ಪದವಿಪೂರ್ವ ಕಾಲೇಜು, ಬಿ.ಆರ್ ಪ್ರಾಜೆಕ್ಟ್ ನ್ಯಾಷನಲ್ ಕಾಂಪೋಸಿಟ್ ಜ್ಯೂನಿಯರ್ ಕಾಲೇಜು, ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಅಂತರಗಂಗೆ ಕರ್ನಾಟಕ ಪಬ್ಲಿಕ್ ಸ್ಕೂಲ್, ಹೊಳೆಹೊನ್ನೂರು ಸೇಂಟ್ ಮೇರಿಸ್ ಆಂಗ್ಲ ಮಾದ್ಯಮ ಪ್ರೌಢಶಾಲೆ ಮತ್ತು ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ಒಟ್ಟು ೧೫ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಹೆಚ್ಚುವರಿಯಾಗಿ ಹಳೇನಗರ ಹೊಸಸೇತುವೆ ರಸ್ತೆಯ ವಿಶ್ವೇಶ್ವರಾಯ ಶಿಕ್ಷಣ ಸಂಸ್ಥೆ, ನ್ಯೂಟೌನ್ ಪ್ರಶಾಂತಿ ವಿದ್ಯಾ ಸಂಸ್ಥೆ ಮತ್ತು ಬಿ.ಎಚ್ ರಸ್ತೆ ಲೋಯರ್ ಹುತ್ತಾ ಪೂರ್ಣಪ್ರಜ್ಞಾ ವಿದ್ಯಾ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ತಾಲೂಕಿನಲ್ಲಿ ಈ ಬಾರಿ ಒಟ್ಟು ೪೫೫೮ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಈ ಪೈಕಿ ಮೊದಲ ಬಾರಿಗೆ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ೩೭೭೮, ವಲಸೆ ವಿದ್ಯಾರ್ಥಿಗಳು ೭೭ ಹಾಗೂ ಉಳಿದಂತೆ ೭೦೩ ಹಳೇ ವಿದ್ಯಾರ್ಥಿಗಳು ಒಳಗೊಂಡಿದ್ದಾರೆ. ೧೫ ಪರೀಕ್ಷಾ ಕೇಂದ್ರಗಳಲ್ಲಿ ೧೫ ಮಂದಿ ಅಧೀಕ್ಷಕರು, ೪ ಮಂದಿ ಹೆಚ್ಚುವರಿ ಅಧೀಕ್ಷಕರು, ೧೫ ಮಂದಿ ಕಸ್ಟೋಡಿಯನ್ಗಳು, ಹೆಚ್ಚುವರಿ ೪ ಮಂದಿ ಕಸ್ಟೋಡಿಯನ್ಗಳು, ೧೫ ಮಂದಿ ಮೊಬೈಲ್ ಸ್ವಾಧೀನಾಧಿಕಾರಿಗಳು, ೪ ಮಂದಿ ಹೆಚ್ಚುವರಿ ಸ್ವಾಧೀನಾಧಿಕಾರಿಗಳು ಹಾಗೂ ೧೫ ಮಂದಿ ಪರೀಕ್ಷಾ ಕೇಂದ್ರಗಳ ಉಸ್ತುವಾರಿ ಅಧಿಕಾರಿಗಳು ಸೇರಿದಂತೆ ಒಟ್ಟು ೭೨ಯನ್ನು ನಿಯೋಜಿಸಲಾಗಿದೆ ಎಂದರು.
ಉಳಿದಂತೆ ಪರೀಕ್ಷಾ ಸಮಯದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಆರೋಗ್ಯ ರಕ್ಷಣೆಗೆ ಸಂಬಂಧ ಎಚ್ಚರವಹಿಸಬೇಕಾದ ಕ್ರಮಗಳು, ಪೂರ್ವ ಸಿದ್ದತೆಗಳ ಕುರಿತು ವಿವರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಪೊಲೀಸ್ ಉಪಾಧೀಕ್ಷಕ ಸುಧಾಕರನಾಯ್ಕ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ನಗರಸಭೆ ಪರಿಸರ ಅಭಿಯಂತರ ರುದ್ರೇಗೌಡ, ಅಗ್ನಿಶಾಮಕ ಠಾಣಾಧಿಕಾರಿ ವಸಂತಕುಮಾರ್, ಶಿರಸ್ತೆದಾರ್ ಮಂಜಾನಾಯ್ಕ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಚಿದಾನಂದ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಶಿಧರ್, ಶಿಕ್ಷಣ ಸಂಯೋಜಕ ರವಿಕುಮಾರ್ ಸೇರಿದಂತೆ ಇನ್ನಿರರು ಉಪಸ್ಥಿತರಿದ್ದರು.