Wednesday, July 8, 2020

ಜು.೯ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ, ಜು. ೮: ನಗರದ ಜೆಪಿಎಸ್ ಕಾಲೋನಿ ಮೆಸ್ಕಾಂ ೧೧೦/೩೩/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಜು.೯ರಂದು ಮಧ್ಯಾಹ್ನ ೧೨ ಗಂಟೆಯಿಂದ ಸಂಜೆ ೪ ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
ನ್ಯೂಟೌನ್, ನ್ಯೂಕಾಲೋನಿ, ಬಿ.ಎಚ್ ರಸ್ತೆ, ಐಟಿಐ, ಆಕಾಶವಾಣಿ, ಕಾಗದನಗರ, ಸುರಗಿತೋಪು, ಆನೆಕೊಪ್ಪ, ಉಜ್ಜನಿಪುರ, ಬುಳ್ಳಾಪುರ, ಹುಡ್ಕೋ ಕಾಲೋನಿ, ಬೊಮ್ಮನಕಟ್ಟೆ, ಹೊಸಸಿದ್ದಾಪುರ, ಹಳೇ ಸಿದ್ದಾಪುರ, ಹೊಸೂರು ತಾಂಡ, ಹುಡ್ಕೋ ಕಾಲೋನಿ, ಜನ್ನಾಪುರ, ಅಪ್ಪರ್‌ಹುತ್ತಾ, ಲೋಯರ್ ಹುತ್ತಾ, ಜಿಂಕ್‌ಲೈನ್, ಸಿರಿಯೂರು, ತರೀಕೆರೆ ರಸ್ತೆ, ಸಾದತ್ ಕಾಲೋನಿ, ನೆಹರು ನಗರ, ಸುಣ್ಣದಹಳ್ಳಿ, ಬಸವನಗುಡಿ, ಶಿವನಿ ವೃತ್ತ, ಹಿರಿಯೂರು, ಹೊಳೆ ಗಂಗೂರು, ಕಾರೇಹಳ್ಳಿ, ಕಂಬದಾಳ್ ಹೊಸೂರು, ಹೊನ್ನಹಟ್ಟಿ ಹೊಸೂರು, ಹುಣಸೇಕಟ್ಟೆ, ಕಾಳನಕಟ್ಟೆ, ಹೊಳೆ ನೇರಳೆಕೆರೆ, ಅಂತರಗಂಗೆ, ದೊಣಬಘಟ್ಟ, ಬಾರಂದೂರು, ಕಲ್ಲಹಳ್ಳಿ, ಯರೇಹಳ್ಳಿ, ಮಾವಿನಕೆರೆ, ದೊಡ್ಡೇರಿ, ತಡಸ, ಬಿಳಿಕಿ, ಕೆಂಪೇಗೌಡನಗರ, ಬೊಮ್ಮನಹಳ್ಳಿ, ಕುಂಬಾರ್ ಗುಂಡಿ, ಹಳೇ ಬಾರಂದೂರು, ಹಳ್ಳಿಕೆರೆ, ಅಪ್ಪಾಜಿ ಬಡಾವಣೆ, ಉಕ್ಕುಂದ, ರತ್ನಾಪುರ, ಕೆಂಚೇನಹಳ್ಳಿ, ಗಂಗೂರು, ಬಿಸಿಲುಮನೆ, ದೇವನರಸೀಪುರ, ಶಿವಪುರ, ಅಡ್ಲಘಟ್ಟ, ಅಂಬುದಹಳ್ಳಿ, ಅರಳಿಕೊಪ್ಪ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸುವಂತೆ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ. 

ಭದ್ರಾವತಿ : ೩ ಮಂದಿಗೆ ಕೊರೋನಾ ಸೋಂಕು

ಭದ್ರಾವತಿ, ಜು. ೮: ನಗರದಲ್ಲಿ ಪುನಃ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಬೆಂಗಳೂರಿನಿಂದ ಬಂದಿರುವ ಸುಮಾರು ೪೧ ವರ್ಷದ ವ್ಯಕ್ತಿ ಹಾಗೂ ಪ್ರಾಥಮಿಕ ನಿಗಾದಲ್ಲಿರಿಸಲಾಗಿದ್ದ ಇಬ್ಬರು ಮಹಿಳೆಯರಲ್ಲಿ ಬುಧವಾರ ಕೊರೋನಾ ಸೋಂಕು ಕಾಣಿಸಿಕೊಂಡಿದೆ. 
ವಿದ್ಯಾಮಂದಿರದ ೨ನೇ ತಿರುವಿನಲ್ಲಿ ವಾಸವಿರುವ ವ್ಯಕ್ತಿಯೊಬ್ಬರು ಬೆಂಗಳೂರಿನಿಂದ ಬಂದಿದ್ದು, ಸೋಂಕು ಕಾಣಿಸಿಕೊಂಡಿದೆ. ಇದು ಹೊಸ ಪ್ರಕರಣವಾಗಿದ್ದು, ಉಳಿದಂತೆ ಹಳೇನಗರದ ಗಾಂಧಿನಗರದ ಮೊದಲಿಯಾರ್ ಸಮುದಾಯ ಭವನ ಸಮೀಪ ಒಂದು ಕುಟುಂಬದ ೫ ಮಂದಿಯಲ್ಲಿ ಈ ಹಿಂದೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಕುಟುಂಬದ ೩ ಮಂದಿಯನ್ನು ಪ್ರಾಥಮಿಕ ನಿಗಾದಲ್ಲಿರಿಸಲಾಗಿತ್ತು. ಈ ಪೈಕಿ ೪೧ ವರ್ಷದ ತಾಯಿ ಹಾಗೂ ೧೮ ಮಗಳು ಸೋಂಕಿಗೆ ಒಳಗಾಗಿದ್ದಾರೆ. 
ವಿದ್ಯಾಮಂದಿರದಲ್ಲಿ ವ್ಯಕ್ತಿ ವಾಸವಿದ್ದ ಸ್ಥಳದ ೧೦೦ ಮೀ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ನಗರಸಭೆ ಆಡಳಿತ ಕಂಟೈನ್ಮೆಂಟ್ ವಲಯವನ್ನಾಗಿಸಿದ್ದು, ಸೀಲ್‌ಡೌನ್‌ಗೊಳಿಸಲು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ. 
ಉಳಿದಂತೆ ನಗರಸಭೆ ವ್ಯಾಪ್ತಿಯಲ್ಲಿ ಪ್ರಸ್ತುತ ಒಟ್ಟು ೭ ಸೀಲ್‌ಡೌನ್ ಪ್ರದೇಶಗಳು ಜಾಲ್ತಿಯಲ್ಲಿದ್ದು, ಈಗಾಗಲೇ ಚನ್ನಗಿರಿ ರಸ್ತೆ, ಉಪ್ಪಾರ ಬೀದಿ ಹಾಗೂ ಗಾಂಧಿನಗರ ವ್ಯಾಪ್ತಿಯಲ್ಲಿ ಸೀಲ್‌ಡೌನ್ ತೆರವುಗೊಳಿಸಲಾಗಿದೆ. ಸೀಲ್‌ಡೌನ್ ಹೆಚ್ಚಾದಂತೆ ಸ್ಥಳೀಯರಲ್ಲಿ ಆತಂಕ ಸಹ ಹೆಚ್ಚಾಗುತ್ತಿದೆ.

ಕುಡಿಯಲು ಹಣ ನೀಡದ ವೃದ್ಧೆಯ ಕೊಲೆ

ಕುಡಿಯಲು ಹಣ ನೀಡದ ವೃದ್ಧೆಯೊಬ್ಬರನ್ನು ಕುಡುಗೋಲಿನಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬುಧವಾರ ಬೆಳಿಗ್ಗೆ ಭದ್ರಾವತಿ ತಾಲೂಕಿನ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯ ತಾಷ್ಕೆಂಟ್ ನಗರದಲ್ಲಿ ನಡೆದಿರುವುದು. 
ಭದ್ರಾವತಿ, ಜು. ೮: ಕುಡಿಯಲು ಹಣ ನೀಡದ ವೃದ್ಧೆಯೊಬ್ಬರನ್ನು ಕುಡುಗೋಲಿನಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬುಧವಾರ ಬೆಳಿಗ್ಗೆ ತಾಲೂಕಿನ ಹೊಸಮನೆ ಪೊಲೀಸ್ ಠಾಣೆ ವ್ಯಾಪ್ತಿಯ ತಾಷ್ಕೆಂಟ್ ನಗರದಲ್ಲಿ ನಡೆದಿದೆ. 
ಕಿಟ್ಟಮ್ಮ(೭೫) ಕೊಲೆಯಾದ ದುರ್ದೈವಿಯಾಗಿದ್ದು, ಇನ್ನೊಬ್ಬ ವೃದ್ಧೆ ಪಾಪಮ್ಮ(೭೨) ತೀವ್ರವಾಗಿ ಗಾಯಗೊಂಡು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. 
ವೃದ್ಧೆಯನ್ನು ಕುಡುಗೋಲಿನಿಂದ ಕೊಲೆ ಮಾಡಿದ ಅರುಣ್‌ಕುಮಾರ್‌ನನ್ನು ಗ್ರಾಮಸ್ಥರು ಹಿಡಿದು ಕೈಕಾಲು ಕಟ್ಟಿ ಪೊಲೀಸರಿಗೆ ಒಪ್ಪಿಸಿದರು. 
           ಮೃತ ವೃದ್ಧೆಯ ಮೊಮ್ಮಗ ಅರುಣ್‌ಕುಮಾರ್(೨೮) ಮದ್ಯವ್ಯಸನಿಯಾಗಿದ್ದು, ಅಲ್ಲದೆ ಗಾಂಜಾ ಸೇವನೆ ಸಹ ಮಾಡುತ್ತಿದ್ದನು. ಈತ ಬೆಳಿಗ್ಗೆ ೧೧ ಗಂಟೆ ಸಮಯದಲ್ಲಿ ಕುಡಿಯಲು ಅಜ್ಜಿ ಕಿಟ್ಟಮ್ಮ ಬಳಿ ಹಣ ನೀಡಲು ಪೀಡಿಸಿದ್ದು, ಹಣ ಕೊಡಲು ನಿರಾಕರಿಸಿದ ಕಾರಣ ಅಜ್ಜಿಯನ್ನು ಕುಡುಕೋಲಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಅಜ್ಜಿಯನ್ನು ಬಿಡಿಸಲು ಬಂದ ಸಂಬಂಧಿಕರಾದ ವೃದ್ಧೆ ಪಾಪಮ್ಮ ಮೇಲೂ ಹಲ್ಲೆ ನಡೆಸಿದ್ದಾನೆ. 
ಗ್ರಾಮಸ್ಥರು ಈತನನ್ನು ಹಿಡಿದು ಕೈಕಾಲು ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಹೊಸಮನೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಭದ್ರಾವತಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಿ, ಉಪಾಧ್ಯಕ್ಷೆ ನೇತ್ರಾಬಾಯಿ

ಭದ್ರಾವತಿ ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ ಅಂತರಗಂಗೆ ಕ್ಷೇತ್ರದ ಲಕ್ಷ್ಮೀದೇವಿ ಹಾಗೂ ಉಪಾಧ್ಯಕ್ಷರಾಗಿ ಕಲ್ಲಹಳ್ಳಿ ಕ್ಷೇತ್ರದ ನೇತ್ರಾಬಾಯಿ ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. 
ಭದ್ರಾವತಿ, ಜು. ೮: ಉಳಿದ ೧೦ ತಿಂಗಳ ಅವಧಿಗೆ ತಾಲೂಕು ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಎರಡು ಸ್ಥಾನಗಳು ಜೆಡಿಎಸ್ ಪಾಲಾಗಿದ್ದು, ಅಧ್ಯಕ್ಷರಾಗಿ ಅಂತರಗಂಗೆ ಕ್ಷೇತ್ರದ ಲಕ್ಷ್ಮೀದೇವಿ ಹಾಗೂ ಉಪಾಧ್ಯಕ್ಷರಾಗಿ ಕಲ್ಲಹಳ್ಳಿ ಕ್ಷೇತ್ರದ ನೇತ್ರಾಬಾಯಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 
ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀದೇವಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನೇತ್ರಾಬಾಯಿ ಈ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದು, ಉಪವಿಭಾಗಧಿಕಾರಿ ಟಿ.ವಿ ಪ್ರಕಾಶ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ನಾಮಪತ್ರಗಳ ಪರಿಶೀಲನೆ ನಡೆದ ನಂತರ ಮಧ್ಯಾಹ್ನ ಸುಮಾರು ೧ ಗಂಟೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಘೋಷಿಸಿದರು. 
ತಾಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಪ್ಪಂದದ ಪ್ರಕಾರ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಎರಡು ಪಕ್ಷಗಳು ಅಧಿಕಾರವನ್ನು ಹಂಚಿಕೆ ಮಾಡಿಕೊಂಡು ಮುನ್ನಡೆಯುತ್ತಿವೆ. 
ಒಪ್ಪಂದದ ಪ್ರಕಾರ ಕಾಂಗ್ರೆಸ್ ಪಕ್ಷದ  ಆಶಾ ಶ್ರೀಧರ್ ಅಧ್ಯಕ್ಷರಾಗಿ, ಜೆಡಿಎಸ್ ಪಕ್ಷದ ಸರೋಜಮ್ಮ ಹಾಜ್ಯನಾಯ್ಕ ಉಪಾಧ್ಯಕ್ಷರಾಗಿ ಅಧಿಕಾರ ನಡೆಸಿ ಇಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ತೆರೆವಾದ ಸ್ಥಾನಕ್ಕೆ ಚುನಾವಣೆ ನಡೆದು ನೂತನ ಅಧ್ಯಕ್ಷೆ, ಉಪಾಧ್ಯಕ್ಷೆ ಆಯ್ಕೆಯಾಗಿದ್ದಾರೆ. 
ಒಟ್ಟು ೧೯ ಸದಸ್ಯ ಬಲ ಹೊಂದಿರುವ ತಾಲೂಕು ಪಂಚಾಯಿತಿಯಲ್ಲಿ ೯ ಜೆಡಿಎಸ್, ೬ ಕಾಂಗ್ರೆಸ್ ಮತ್ತು ೪ ಬಿಜೆಪಿ ಸದಸ್ಯರಿದ್ದಾರೆ. 
ಚುನಾವಣೆ ಕರ್ತವ್ಯದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ಕೊಟ್ರೇಶಪ್ಪ ಪಾಲ್ಗೊಂಡಿದ್ದರು. ತಾಲೂಕು ಪಂಚಾಯಿತಿ ಎಲ್ಲಾ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿದ್ದರು. 
ನೂತನ ಅಧ್ಯಕ್ಷರು-ಉಪಾಧ್ಯಕ್ಷರಿಗೆ ಅಭಿನಂದನೆ:
ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಲಕ್ಷ್ಮೀದೇವಿ ಹಾಗೂ ಉಪಾಧ್ಯಕ್ಷೆ ನೇತ್ರಾಬಾಯಿ ಅವರಿಗೆ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ತಾಲೂಕು ಪಂಚಾಯಿತಿ ಎಲ್ಲಾ ಸದಸ್ಯರು, ಜಿ.ಪಂ. ಸದಸ್ಯರಾದ ಎಸ್. ಮಣಿಶೇಖರ್, ಜೆ.ಪಿ ಯೋಗೇಶ್, ಎಪಿಎಂಸಿ ಅಧ್ಯಕ್ಷ ಲವೇಶ್‌ಗೌಡ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಸೇರಿದಂತೆ ಇನ್ನಿತರರು ಅಭಿನಂದಿಸಿದರು. 

Tuesday, July 7, 2020

ಹೊಸಮನೆ ವ್ಯಾಪ್ತಿಯಲ್ಲಿ ಓರ್ವ ವ್ಯಕ್ತಿಗೆ ಕೊರೋನಾ ಸೋಂಕು

ಭದ್ರಾವತಿ, ಜು. ೭: ನಗರದ ಹೊಸಮನೆ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ವ್ಯಕ್ತಿಯೊಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಹಿನ್ನಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಕಂಟೈನ್ಮೆಂಟ್ ವಲಯವೆಂದು ಘೋಷಿಸಲಾಗಿದೆ. 
ಕಳೆದ ಒಂದು ವಾರದ ಹಿಂದೆ ಹಳೇನಗರ ಗಾಂಧಿನಗರದ ಮೊದಲಿಯಾರ್ ಸಮುದಾಯ ಭವನದ ಬಳಿ ಒಂದೇ ಮನೆಯ ೫ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ ಸೋಂಕಿಗೆ ಒಳಗಾಗಿದ್ದ ಮಹಿಳೆಯೊಬ್ಬರ ೪೮ ವರ್ಷದ ಪತಿಗೆ ಇದೀಗ ಸೋಂಕು ತಗುಲಿರುವುದು ದೃಢಪಟ್ಟಿದೆ. 
ಈ ಹಿನ್ನಲೆಯಲ್ಲಿ ವ್ಯಕ್ತಿ ವಾಸವಿದ್ದ ಮನೆಯ ೧೦೦ ಹಾಗೂ ೨೦೦ ಮೀ. ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿಸಲಾಗಿದೆ.  ತಾಲೂಕಿನಲ್ಲಿ ಒಟ್ಟು ಸುಮಾರು ೨೫ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ದಿನದಿಂದ ದಿನಕ್ಕೆ ಸೀಲ್‌ಡೌನ್ ಪ್ರದೇಶಗಳು ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. 
ವ್ಯಾಪಾರ-ವಹಿವಾಟು ಸಂಜೆ ೬ಕ್ಕೆ ಬಂದ್: 
ರಾಜ್ಯದೆಲ್ಲೆಡೆ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ನಗರದಲ್ಲಿ ಕಳೆದ ೫-೬ ದಿನಗಳಿಂದ ವಿವಿಧ ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರು, ಬೀದಿಬದಿ ವ್ಯಾಪಾರಿಗಳು ಸ್ವಯಂ ಪ್ರೇರಣೆಯಿಂದ ಸಂಜೆ ೬ ಗಂಟೆಗೆ ವ್ಯಾಪಾರ, ವಹಿವಾಟು ಸ್ಥಗಿತಗೊಳಿಸಿ ಅಂಗಡಿ ಮುಂಗಟ್ಟು ಬಂದ್ ಮಾಡುತ್ತಿದ್ದು, ಇದರಿಂದಾಗಿ ಸಂಜೆ ವೇಳೆ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಬರುತ್ತಿದೆ. ಸೋಂಕು ಹೆಚ್ಚಿನ ರೀತಿಯಲ್ಲಿ ಹರಡದಂತೆ ಎಚ್ಚರ ವಹಿಸಲಾಗುತ್ತಿದೆ. 

ಜು.೧೧ರಂದು ಪದಗ್ರಹಣ ಸಮಾರಂಭ

ಭದ್ರಾವತಿ, ಜು. ೭ : ಲಯನ್ಸ್ ಕ್ಲಬ್ ಶುಗರ್ ಟೌನ್  ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನ್ಯೂಟೌನ್ ಕಣ್ಣಿನ ಆಸ್ಪತ್ರೆ ಸಭಾಂಗಣದಲ್ಲಿ  ಜು.೧೧ರಂದು ಸಂಜೆ ೪ ಗಂಟೆಗೆ  ನಡೆಯಲಿದೆ.
    ನಿತ್ಯಾನಂದ ಪೈ ಅಧ್ಯಕ್ಷರಾಗಿ,   ತಮ್ಮೇಗೌಡ ಕಾರ್ಯದರ್ಶಿಯಾಗಿ, ಎಂ.ಸಿ ಯೋಗೇಶ್ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ವಿಡಿಜಿ ೨ರ ಗವರ್ನರ್  ಕೆ.ಸಿ ವೀರಭದ್ರಪ್ಪ ಪದಗ್ರಹಣ ನೆರವೇರಿಸಿ ಕೊಡಲಿದ್ದಾರೆ.  ಎಚ್.ಜಿ ನಾರಾಯಣ ಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.
 

ಜು.೧೦ರಿಂದ ಅನಿರ್ದಿಷ್ಟಾವಧಿ ಹೋರಾಟ

ಭದ್ರಾವತಿ, ಜು. ೭: ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಜು.೧೦ರಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದೆ. 
ಆಶಾ ಕಾರ್ಯಕರ್ತೆಯರಿಗೆ ಮಾಸಿಕ ೧೨ ಸಾವಿರ ರು. ಗೌರವ ಧನ, ಕೋವಿಡ್-೧೯ರ ವಿರುದ್ಧ ಹೋರಾಟ ನಡೆಸಲು ಅಗತ್ಯವಿರುವಷ್ಟು ಸುರಕ್ಷತಾ ಸಾಮಗ್ರಿಗಳು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ ೧ ವಾರದಿಂದ ನಿರಂತರವಾಗಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಸಹ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಅರೋಗ್ಯ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುತ್ತಿದೆ. ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳು, ಮಹಿಳಾ ಸಂಘಟನೆಗಳು ಹೆಚ್ಚಿನ ಸಹಕಾರ ನೀಡುವಂತೆ ಕೋರಲಾಗಿದೆ.