ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್‌ರವರ ‘ರಾಜ ಗೃಹ’ದ ಧ್ವಂಸ ಪ್ರಕರಣ ಖಂಡಿಸಿ ಹಾಗೂ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಪರಿಶಿಷ್ಟ ಜಾತಿ ಪಟ್ಟಿಯಿಂದ ಸ್ಪೃಶ್ಯ ಸಮುದಾಯಗಳನ್ನು ಕೈಬಿಡುವಂತೆ ಆಗ್ರಹಿಸಿ ಭದ್ರಾವತಿಯಲ್ಲಿ ಹೊಲೆಯ ಮತ್ತು ಮಾದಿಗ ಸಮನ್ವಯ ಸಮಿತಿ ವತಿಯಿಂದ ಗುರುವಾರ ತಹಸೀಲ್ದಾರ್ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಜು. ೨೩: ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್‌ರವರ ‘ರಾಜ ಗೃಹ’ದ ಧ್ವಂಸ ಪ್ರಕರಣ ಖಂಡಿಸಿ ಹಾಗೂ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಪರಿಶಿಷ್ಟ ಜಾತಿ ಪಟ್ಟಿಯಿಂದ ಸ್ಪೃಶ್ಯ ಸಮುದಾಯಗಳನ್ನು ಕೈಬಿಡುವಂತೆ ಆಗ್ರಹಿಸಿ ಹೊಲೆಯ ಮತ್ತು ಮಾದಿಗ ಸಮನ್ವಯ ಸಮಿತಿ ವತಿಯಿಂದ ಗುರುವಾರ ತಹಸೀಲ್ದಾರ್ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಮಿತಿಯ ಪ್ರಮುಖರು ಮಾತನಾಡಿ, ‘ರಾಜ ಗೃಹ’ದ ಧ್ವಂಸ ಪ್ರಕರಣ ಅಂಬೇಡ್ಕರ್‌ರವರ ಆದರ್ಶ, ತತ್ವ, ಸಿದ್ದಾಂತ ಹಾಗೂ ಆಶಯಗಳಿಗೆ ವಿರುದ್ಧವಾಗಿದ್ದು, ಇದೊಂದು ದೇಶ ದ್ರೋಹ ಪ್ರಕರಣವಾಗಿದೆ. ಈ ಹಿನ್ನಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸ್ಪೃಶ್ಯ ಸಮುದಾಯಗಳಾದ ಭೋವಿ, ಕೊರಮ, ಕೊರಚ, ಲಂಬಾಣಿ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವಂತೆ ಸರ್ವೋಚ್ಛ ನ್ಯಾಯಾಲಯ ಈಗಾಗಲೇ ಆದೇಶಿಸಿದೆ. ಆದರೂ ಸಹ ಈ ಜಾತಿಗಳನ್ನು ಕೈಬಿಡುವಲ್ಲಿ ಮೀನಾಮೇಷ ಮಾಡಲಾಗುತ್ತಿದೆ. ಇಂದಿನ ಸರ್ಕಾರಗಳು ಸ್ಪೃಶ್ಯ ಸಮುದಾಯಗಳನ್ನು ಓಲೈಕೆ ಮಾಡುವ ನಿಟ್ಟಿನಲ್ಲಿ ಮುಂದಾಗಿವೆ ಎಂದು ಆರೋಪಿಸಿದರು.
ಪ್ರಮುಖರಾದ ಶಿವಮೊಗ್ಗ ಜಿಲ್ಲಾ ಪರಿಶಿಷ್ಟ ಜಾತಿ ಆದಿದ್ರಾವಿಡ ತಮಿಳು ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ. ಶ್ರೀನಿವಾಸನ್, ದಲಿತ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಶಿವಬಸಪ್ಪ, ಛಲವಾದಿ ಮಹಾಸಭಾ ಅಧ್ಯಕ್ಷ ಸುರೇಶ್, ಬಾಪೂಜಿ ಹರಿಜನ ಸೇವಾ ಸಂಘದ ಅಧ್ಯಕ್ಷ ಚಂದ್ರಪ್ಪ, ಮುಖಂಡರಾದ ಎಚ್. ಜಯರಾಜ್, ಶಿಕ್ಷಕರಾದ ಎ. ತಿಪ್ಪೇಸ್ವಾಮಿ, ಯು. ಮಹದೇವಪ್ಪ, ಆನಂದಮೂರ್ತಿ, ತಾಲೂಕು ಕಸಾಪ ಕಾರ್ಯದರ್ಶಿ ಸಿ. ಚನ್ನಪ್ಪ, ಆದಿತ್ಯಶ್ಯಾಮ, ಜಗದೀಶ್, ಎಚ್.ಎಂ ಮಹಾದೇವಯ್ಯ, ರಾಜೇಂದ್ರ, ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.