Monday, September 7, 2020

ಪತ್ರಿಕಾ ವಿತರಕ ಮಹೇಶ್ ನಿಧನ

ಮಹೇಶ್
ಭದ್ರಾವತಿ, ಸೆ. ೭: ಬಹಳ ವರ್ಷಗಳಿಂದ ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸುತ್ತಿದ್ದ ನಗರದ ಉಜ್ಜನಿಪುರ ನಿವಾಸಿ ಮಹೇಶ(೩೫) ಅನಾರೋಗ್ಯದಿಂದ ನಿಧನ ಹೊಂದಿದರು.
     ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಅಪ್ಪ, ಅಮ್ಮ ಹಾಗು ಓರ್ವ ಸಹೋದರಿ ಹೊಂದಿದ್ದರು. ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ತಿಮ್ಲಾಪುರ ರಸ್ತೆಯಲ್ಲಿರುವ ಶ್ರೀ ಸತ್ಯ ಹರಿಶ್ಚಂದ್ರ ಹಿಂದೂ ರುದ್ರಭೂಮಿಯಲ್ಲಿ ಸೋಮವಾರ ಅಂತ್ಯಕ್ರಿಯೆ ನೆರವೇರಿತು.
     ಸುಮಾರು ೧೫ ವರ್ಷಗಳಿಂದ ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸುತ್ತಿದ್ದ ಮಹೇಶ್ ನಿಧನಕ್ಕೆ ನಗರದ ಪತ್ರಿಕಾ ವಿತರಕರು, ಪತ್ರಕರ್ತರು ಸಂತಾಪ ಸೂಚಿಸಿದ್ದಾರೆ.

ಮಾನವೀಯತೆ ಮೆರೆದ ಯುವಕರ ತಂಡ : ರಸ್ತೆ ಪಕ್ಕದಲ್ಲಿ ಅಸ್ವಸ್ಥಗೊಂಡಿದ್ದ ವ್ಯಕ್ತಿಗೆ ಆರೈಕೆ

ಭದ್ರಾವತಿಯಲ್ಲಿ ರಸ್ತೆ ಪಕ್ಷದಲ್ಲಿ ಅಪಘಾತದಿಂದ ಅಸ್ವಸ್ಥಗೊಂಡು ಬಿದ್ದಿದ್ದ ಅಪರಿಚಿತ ವ್ಯಕ್ತಿಯೊಬ್ಬರಿಗೆ ಯುವಕ ತಂಡವೊಂದು ಆರೈಕೆ ಮಾಡಿ ಮಾನವೀಯತೆ ಮೆರದಿದೆ.
ಭದ್ರಾವತಿ, ಸೆ. ೭: ರಸ್ತೆ ಪಕ್ಷದಲ್ಲಿ ಅಪಘಾತದಿಂದ ಅಸ್ವಸ್ಥಗೊಂಡು ಬಿದ್ದಿದ್ದ ಅಪರಿಚಿತ ವ್ಯಕ್ತಿಯೊಬ್ಬರಿಗೆ ನಗರದ ಯುವಕ ತಂಡವೊಂದು ಆರೈಕೆ ಮಾಡಿ ಮಾನವೀಯತೆ ಮೆರದಿದೆ.
    ನಗರದ ವಿಐಎಸ್‌ಎಲ್ ಕಾರ್ಖಾನೆ ಡಬ್ಬಲ್ ರಸ್ತೆಯಲ್ಲಿ ಕೆಲವು ದಿನಗಳ ಹಿಂದೆ ಅಪರಿಚಿತ ವ್ಯಕ್ತಿಯೊಬ್ಬರು ರಸ್ತೆ ಪಕ್ಕದಲ್ಲಿ ಬಿದ್ದುಗೊಂಡಿದ್ದು, ಬಹಳಷ್ಟು ಮಂದಿ ನೋಡಿದರೂ ನೋಡದವರಂತೆ ಸಂಚರಿಸುತ್ತಿದ್ದರು. ಈ ನಡುವೆ ಯುವಕರ ತಂಡವೊಂದು ಆ ವ್ಯಕ್ತಿಯನ್ನು ಗಮನಿಸಿ ಅಸ್ವಸ್ಥಗೊಂಡಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಆ ವ್ಯಕ್ತಿಯ ಮೇಲಿದ್ದ ಕೊಳಕು ಬಟ್ಟೆಯನ್ನು ತೆಗೆದು ಸ್ನಾನ ಮಾಡಿಸಿ ಹೊಸ ಬಟ್ಟೆ, ಕುಡಿಯಲು ನೀರು ಆಹಾರ ನೀಡಿ ನಂತರ ಆತನನ್ನು ನಗರಸಭೆಯ ನಿಗರ್ತಿಕ ಕೇಂದ್ರಕ್ಕೆ ದಾಖಲಿಸಿಕೊಳ್ಳುವಂತೆ ನಗರಸಭೆ ಪೌರಾಯುಕ್ತರಿಗೆ ಮನವಿ ಮಾಡಲಾಯಿತು.
      ಅಪರಿಚಿತ ವ್ಯಕ್ತಿ ಯಾರು ಎಂಬುದು ಇದುವರೆಗೂ ಯಾರಿಗೂ ತಿಳಿದಿಲ್ಲ. ಯುವಕರ ತಂಡವೊಂದು ಮಾನವೀಯತೆ ಮೆರೆದಿರುವುದು ಗಮನ ಸೆಳೆಯುತ್ತಿದೆ.



ಬಯಲು ಸೀಮೆಗೆ ನೀರು ಹರಿಸುವ ಯೋಜನೆಗೆ ರೈತ ಸಂಘದ ವಿರೋಧವಿಲ್ಲ : ಎಚ್. ಆರ್ ಬಸವರಾಜಪ್ಪ

ಈ ಬಾರಿ ಸಹ ಭದ್ರಾ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದ ಹಿನ್ನಲೆಯಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ಜಲಾಶಯಕ್ಕೆ ಬಾಗಿನ ಸಮರ್ಪಿಸಲಾಯಿತು.
ಭದ್ರಾವತಿ, ಸೆ. ೭: ಭದ್ರಾ ಜಲಾಶಯದಿಂದ  ಬಯಲು ಸೀಮೆಗೆ ನೀರು ಹರಿಸಲು ರೈತ ಸಂಘ ಸಹ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದು, ಈ ಯೋಜನೆಗೆ ರೈತ ಸಂಘದ ವಿರೋಧವಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್ ಬಸವರಾಜಪ್ಪ ಸ್ಪಷ್ಟಪಡಿಸಿದರು.
      ಈ ಬಾರಿ ಸಹ ಭದ್ರಾ ಜಲಾಶಯ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದ ಹಿನ್ನಲೆಯಲ್ಲಿ ಅವರು ಸೋಮವಾರ ರೈತ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಲಾಶಯಕ್ಕೆ ಬಾಗಿನ ಸಮರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
     ಭದ್ರಾ ಮೇಲ್ದಂಡೆ ಯೋಜನೆ ಇದೀಗ ಬಹುತೇಕ ಪೂರ್ಣಗೊಂಡಿದ್ದು, ಸೆ.೫ರಿಂದ ಮೇಲ್ದಂಡೆ ಕಾಲುವೆಗಳಿಗೆ ಜಲಾಶಯದಿಂದ ನೀರು ಹರಿಸಲಾಗುತ್ತಿದೆ.  ಒಟ್ಟು ೪ ಪಂಪ್  ಹಾಗು ೧ ಹೆಚ್ಚುವರಿ ಪಂಪ್ ಬಳಸಲಾಗುತ್ತಿದ್ದು, ೪ ಪಂಪ್‌ಗಳಿಂದ ದಿನಕ್ಕೆ ೨೮೦೦ ಕ್ಯೂಸೆಕ್ಸ್ ನೀರು ಹರಿಸಬಹುದಾಗಿದೆ. ಪ್ರಸ್ತುತ ೭೦೦ ಕ್ಯೂಸೆಕ್ಸ್ ನೀರು ಮಾತ್ರ ಹರಿಸಲಾಗುತ್ತಿದೆ. ತುಂಗಾ ಜಲಾಶಯದಿಂದಲೂ ಭದ್ರಾ ಮೇಲ್ದಂಡೆ ಕಾಲುವೆಗಳಿಗೆ ನೀರು ಹರಿಸುವ ಕಾಮಗಾರಿ ಶೀಘ್ರವಾಗಿ ಮುಕ್ತಾಯಗೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕೆಂದರು.
    ಕಳೆದ ಕೆಲವು ವರ್ಷಗಳಿಂದ ಈ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಜಲಾಶಯ ಪೂರ್ಣಪ್ರಮಾಣದಲ್ಲಿ ಭರ್ತಿಯಾಗುತ್ತಿರುವ ಹಿನ್ನಲೆಯಲ್ಲಿ ನೀರಿನ ಅಭಾವ ಕಂಡು ಬರುತ್ತಿಲ್ಲ. ರೈತರು ನೀರನ್ನು ಸದ್ಬಳಕೆ ಮಾಡಿಕೊಂಡು ಬೆಳೆ ಬೆಳೆಯ ಬೇಕು. ವಿನಾಕಾರಣ ನೀರು ಪೋಲಾಗುವುದನ್ನು ತಡೆಬೇಕೆಂದು ಮನವಿ ಮಾಡಿದರು.
     ಸಂಘದ ಜಿಲ್ಲಾಧ್ಯಕ್ಷ ಎಸ್. ಶಿವಮೂರ್ತಿ, ರೈತ ಮುಖಂಡರಾದ ಹಿಟ್ಟೂರು ರಾಜು, ಟಿ.ಎಂ ಚಂದ್ರಪ್ಪ, ಈಶಣ್ಣ ಅರಬಿಳಚಿ, ಡಿ.ಎಚ್ ರಾಮಚಂದ್ರಪ್ಪ, ಜಿ.ಎನ್ ಪಂಚಾಕ್ಷರಿ, ಹಾಲಪ್ಪ, ಶೇಖರಪ್ಪ ಯಡೇಹಳ್ಳಿ, ಪರಮಶಿವಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನಕ್ಕೆ ವಿವಿಧ ಸಂಘಟನೆಗಳಿಂದ ಸಂತಾಪ ಸೂಚಕ ಸಭೆ

ಭದ್ರಾವತಿಯಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನಕ್ಕೆ ನಗರದ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಶ್ರದ್ದಾಂಜಲಿ ಸಭೆ ನಡೆಸಿ ಸಂತಾಪ ಸೂಚಿಸಲಾಯಿತು.
ಭದ್ರಾವತಿ, ಸೆ. ೭: ಇತ್ತೀಚೆಗೆ ನಿಧನ ಹೊಂದಿದ ಕ್ಷೇತ್ರದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನಕ್ಕೆ ವಿವಿಧ ಸಂಘ-ಸಂಸ್ಥೆಗಳು ಶ್ರದ್ದಾಂಜಲಿ ಸಭೆ ನಡೆಸುವ ಮೂಲಕ ಸಂತಾಪದೊಂದಿಗೆ ಗೌರವ ಸೂಚಿಸಿವೆ.
     ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಅಪ್ಪಾಜಿಯವರಿಗೆ ಗೌರವಾಧ್ಯಕ್ಷೆ ಡಾ. ಅನುರಾಧ ಪಟೇಲ್ ನೇತೃತ್ವದಲ್ಲಿ ಸಭೆ ನಡೆಸುವ ಮೂಲಕ ಗೌರವ ಸೂಚಿಸಲಾಯಿತು.
    ಅಪ್ಪಾಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೇಣದ ಬತ್ತಿ ಹಚ್ಚುವ ಮೂಲಕ ಮೌನಾಚರಣೆ  ನಡೆಸಲಾಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ  ಪ್ರಮುಖರು ಅಪ್ಪಾಜಿಯವರ ಆಡಳಿತ ವೈಖರಿ, ಜನರೊಂದಿಗಿನ ಭಾವನಾತ್ಮಕ ಸಂಬಂಧಗಳನ್ನು ಸ್ಮರಿಸಿದರು.
   ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ವೇದಿಕೆ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.


ಭದ್ರಾವತಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನಕ್ಕೆ ಹುತ್ತಾಕಾಲೋನಿ ಆಟೋನಿಲ್ದಾಣದಲ್ಲಿ ಶ್ರದ್ದಾಂಜಲಿ ಸಭೆ ನಡೆಸಿ ಸಂತಾಪ ಸೂಚಿಸಲಾಯಿತು.
         ಹುತ್ತಾ ಕಾಲೋನಿ ಆಟೋ ನಿಲ್ದಾಣದಲ್ಲಿ ಸಂತಾಪ:
    ನಗರದ ಹುತ್ತಾ ಕಾಲೋನಿ ಸಹ್ಯಾದ್ರಿ ಕನ್ನಡ ಮತ್ತು ಆಂಗ್ಲ ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಸಮೀಪದ ಆಟೋ ನಿಲ್ದಾಣದಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರಿಗೆ ಸಂತಾಪ ಸೂಚಿಸಲಾಯಿತು.
     ನಗರಸಭೆ ಮಾಜಿ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪ್ಪಾಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
      ನಗರಸಭೆ ಹಿರಯ ಸದಸ್ಯ ಆರ್. ಕರುಣಾಮೂರ್ತಿ, ಜಿ.ಪಂ. ಸದಸ್ಯ ಎಸ್. ಮಣಿಶೇಖರ್, ಮಾಜಿ ಸದಸ್ಯ ಎಸ್. ಕುಮಾರ್, ಉದ್ಯಮಿ ಕುಮಾರ್, ಆಟೋ ಮಾಲೀಕರು, ಚಾಲಕರು, ಸ್ಥಳೀಯ ಮುಖಂಡರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭದ್ರಾವತಿಯಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನಕ್ಕೆ ನಗರ ಹಾಗು ಗ್ರಾಮೀಣ ಭಾಗದ ಬಜರಂಗದಳ ಕಾರ್ಯಕರ್ತರಿಂದ ಸಂತಾಪ ಸೂಚಿಸಲಾಯಿತು.
        ಬಜರಂಗದಳದಿಂದ ಸಂತಾಪ :
      ತಾಲೂಕಿನ ನಗರ ಹಾಗು ಗ್ರಾಮೀಣ ಭಾಗದ ಬಜರಂಗದಳ ಕಾರ್ಯಕರ್ತರು ಜಿಲ್ಲಾ ಸಂಚಾಲಕ ಸುನಿಲ್‌ಕುಮಾರ್ ನೇತೃತ್ವದಲ್ಲಿ ಅಪ್ಪಾಜಿ ನಿವಾಸಕ್ಕೆ ತೆರಳಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಅಪ್ಪಾಜಿ ಪುತ್ರ ಎಂ.ಎ ಅಜಿತ್ ಹಾಗು ಕುಟುಂಬ ವರ್ಗದವರಿಗೆ ಸಾಂತ್ವಾನ ಹೇಳಿದರು. ತಾಲೂಕು ಸಂಚಾಲಕ ವಡಿವೇಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ನಗರಕ್ಕೆ ಎಸ್.ಸಿ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ

ಭದ್ರಾವತಿ, ಸೆ. ೭: ಭಾರತೀಯ ಜನತಾಪಕ್ಷದ ಎಸ್.ಸಿ ಮೋರ್ಚಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಸೆ.೮ರಂದು ತಾಲೂಕಿಗೆ ಆಗಮಿಸುತ್ತಿದ್ದು, ಸಂಜೆ ೬ ಗಂಟೆಗೆ ದುರ್ಗಾ ಕಾಂಚನ ಹೋಟೆಲ್ ಸಭಾಂಗಣದಲ್ಲಿ ಎಸ್.ಸಿ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ.
     ಇದಕ್ಕೂ ಮೊದಲು ತಾಲೂಕಿನ ಕೂಡ್ಲಿಗೆರೆ ಕಲ್ಪನಹಳ್ಳಿ ಗ್ರಾಮದಲ್ಲಿ ಸಂಜೆ ೪ ಗಂಟೆ ನಡೆಯಲಿರುವ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಎಸ್.ಸಿ ಮುಖಂಡರು ಪಾಲ್ಗೊಳ್ಳುವಂತೆ ತಾಲೂಕು ಎಸ್.ಸಿ ಮೋರ್ಚಾ ಅಧ್ಯಕ್ಷ ಪಿ. ಗಣೇಶ್‌ರಾವ್ ಕೋರಿದ್ದಾರೆ.

Sunday, September 6, 2020

ಭದ್ರಾವತಿಯಲ್ಲಿ ಎಎಪಿ ಕೇರ್ಸ್, ಆಕ್ಸಿ ಮಿತ್ರ ಯೋಜನೆಗೆ ಚಾಲನೆ

ಭದ್ರಾವತಿ ರಂಗಪ್ಪ ವೃತ್ತದಲ್ಲಿ ಭಾನುವಾರ ಎಎಪಿ ವತಿಯಿಂದ ಕೊರೋನಾ ಸೋಂಕು ಹರಡದಂತೆ ಸಾರ್ವಜನಿಕರಿಗೆ ಜಾಗೃತಿ ಹಾಗು ಆರೋಗ್ಯ ತಪಾಸಣೆ ನಡೆಸಲಾಯಿತು.
ಭದ್ರಾವತಿ, ಸೆ. ೬: ದೇಶಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವೆ ಸೋಂಕು ನಿಯಂತ್ರಣಕ್ಕೆ ಮುಂದಾಗಿರುವ ಆಮ್ ಆದ್ಮಿ ಪಾರ್ಟಿ ನೂತನ ಯೋಜನೆಯನ್ನು ಜಾರಿಗೆ ತರುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ.
        ಈಗಾಗಲೇ ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಎಎಪಿ ಕೇರ್ಸ್ ಹಾಗು ಆಕ್ಸಿ ಮಿತ್ರ ಯೋಜನೆ ಜಾರಿಗೆ ತಂದಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಯೋಜನೆ ಕುರಿತು ವ್ಯಾಪಕ ನಡೆಸುತ್ತಿದ್ದು, ಭಾನುವಾರ ನಗರದ ರಂಗಪ್ಪ ವೃತ್ತದಲ್ಲಿ ಚಾಲನೆ ನೀಡಲಾಯಿತು.
     ಸೋಂಕು ಹರಡದಂತೆ ವಹಿಸಬೇಕಾದ ಮುನ್ನಚ್ಚರಿಕೆ ಕ್ರಮಗಳನ್ನು ಕುರಿತು ಜಾಗೃತಿ ಮೂಡಿಸಲಾಯಿತು. ಥರ್ಮಲ್ ಸ್ಕ್ಯಾನರ್ ಮೂಲಕ ಜ್ವರ ತಪಾಸಣೆ ನಡೆಸಲಾಯಿತು. ಕೈ ತೋರು ಬೆರಳಿನ ಮೂಲಕ ಆಕ್ಸಿಜನ್ ಪ್ರಮಾಣ ಪರೀಕ್ಷಿಸಲಾಯಿತು. ಸುಮಾರು ೫೦೦ಕ್ಕೂ ಮಂದಿ ತಪಾಸಣೆಯಲ್ಲಿ ಪಾಲ್ಗೊಂಡಿದ್ದರು.
      ಪಕ್ಷದ  ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ತಾಲೂಕು ಉಪಾಧ್ಯಕ್ಷ ಇಬ್ರಾಹಿಂ ಖಾನ್, ಪ್ರಮುಖರಾದ ಪರಮೇಶ್ವರಚಾರ್, ಜೋಸೆಫ್, ಮುಳ್ಕೆರೆ ಲೋಕೇಶ್, ಪರಮೇಶ್‌ನಾಯ್ಕ, ಪಕ್ಷದ ಮಹಿಳಾ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಪ್ಪಾಜಿ ನಿಧನ ಜೆಡಿಎಸ್ ಸೇರಿದಂತೆ ಸಮಾನ ಮನಸ್ಸುಗಳಿಗೆ ತುಂಬಲಾರದ ನಷ್ಟ : ಟಿ.ಎಚ್ ಹಾಲೇಶಪ್ಪ

ಭದ್ರಾವತಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ತಾಲೂಕು ಶಾಖೆ ವತಿಯಿಂದ ನಗರದ ಸಿ.ಎನ್ ರಸ್ತೆಯಲ್ಲಿರುವ ಸಂಘದ ಕಛೇರಿಯಲ್ಲಿ ಭಾನುವಾರ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಶ್ರದ್ದಾಂಜಲಿ ಏರ್ಪಡಿಸಲಾಗಿತ್ತು.
ಭದ್ರಾವತಿ, ಸೆ. ೬: ಕ್ಷೇತ್ರದ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ನಿಧನ ಪ್ರಜಾಪ್ರಭುತ್ವದ ಆಶಯಗಳನ್ನು ಹೊಂದಿರುವ ಜೆಡಿಎಸ್ ಪಕ್ಷಕ್ಕೆ ಹಾಗು ಸಾಮಾಜಿಕ ಕಳಕಳಿ ಹೊಂದಿರುವ ಸಮಾನ ಮನಸ್ಸುಗಳಿಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಡಿಎಸ್‌ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಎಚ್ ಹಾಲೇಶಪ್ಪ ಹೇಳಿದರು.
        ಅವರು ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ತಾಲೂಕು ಶಾಖೆ ವತಿಯಿಂದ ನಗರದ ಸಿ.ಎನ್ ರಸ್ತೆಯಲ್ಲಿರುವ ಸಂಘದ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ಶ್ರದ್ದಾಂಜಿಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
       ದೇಶದಲ್ಲಿ ಪ್ರಸ್ತುತ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಸಂವಿಧಾನದ ಆಶಯಗಳನ್ನು ಹಂತ ಹಂತವಾಗಿ ನಾಶಪಡಿಸುತ್ತಿದೆ. ಅಲ್ಲದೆ ಸಂವಿಧಾನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುತ್ತಿದೆ. ರಾಜ್ಯದಲ್ಲೂ ಸಹ ಇಂದಿನ ಬಿಜೆಪಿ ಸರ್ಕಾರ ಪ್ರಪಂಚದಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂದಿಗ್ದ ಪರಿಸ್ಥಿತಿಯ ಸಂದರ್ಭದಲ್ಲಿ ವಿಧಾನಸಭೆ, ವಿಧಾನಪರಿಷತ್‌ನಲ್ಲಿ ಯಾವುದೇ ಚರ್ಚೆ ನಡೆಸದೆ ರೈತರಿಗೆ ಮಾರಕವಾಗುವ ಭೂ ಸುಧಾರಣಾ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದೆ. ಇದರಿಂದ ಸಣ್ಣ ರೈತರಿಗೆ ಸಂಕಷ್ಟ ಎದುರಾಗಿದೆ. ತಮ್ಮದೇ ಜಮೀನಿನಲ್ಲಿ ಜೀತದಾಳುಗಳಾಗಿ ದುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಎಲ್ಲಾ ಲಕ್ಷಣಗಳನ್ನು ಕಳೆದುಕೊಂಡಿದೆ. ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವ ಕಂಡುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಹೆಚ್ಚು ಗಮನ ಸೆಳೆಯುತ್ತಿದ್ದು, ಸಂವಿಧಾನ ಆಶಯಗಳನ್ನು ಉಳಿಸುವ ಜವಾಬ್ದಾರಿಯನ್ನು ಹೊಂದಿದೆ. ಇಂತಹ ಪಕ್ಷಕ್ಕೆ ಶಕ್ತಿಯಾಗಿದ್ದ ಅಪ್ಪಾಜಿಯವರ ನಿಧನ ನಿಜಕ್ಕೂ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದರು.
      ಜಿಲ್ಲಾ ಸಂಘಟನಾ ಸಂಚಾಲಕ ಎಂ. ಪಳನಿರಾಜ್ ಮಾತನಾಡಿ, ಅಪ್ಪಾಜಿಯವರು ಬಡವರು, ದಲಿತರು, ರೈತರು, ಕಾರ್ಮಿಕರು, ಶೋಷಿತರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದರು. ಸಂಘಟನೆಯ ಹಲವು ಹೋರಾಟಗಳಿಗೆ ಬೆಂಬಲ ನೀಡುವ ಜೊತೆಗೆ ಸಂಘಟನೆಯ ಎಲ್ಲಾ ಕಾರ್ಯಗಳನ್ನು ಪ್ರೋತ್ಸಾಹಿಸುತ್ತಿದ್ದರು ಇಂತಹ ಜನಪ್ರತಿನಿಧಿ ಕಣ್ಮರೆಯಾಗಿರುವುದು ವಿಷಾದನೀಯ ಎಂದರು.
      ತಾಲೂಕು ಸಂಚಾಲಕ ಎಂ. ಕುಬೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಪದಾಧಿಕಾರಿಗಳು, ಇನ್ನಿತರರು ಉಪಸ್ಥಿತರಿದ್ದರು.